ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ದಿನ ಚಿನ್ನ ಗೆದ್ದ ಅಲ್ಮಾಜ‌ಅಯಾನ

ವಿಶ್ವ ಅಥ್ಲೆಟಿಕ್ಸ್‌: ಬರಿಗೈಲಿ ಮರಳಿದ ಭಾರತ
Last Updated 30 ಆಗಸ್ಟ್ 2015, 19:43 IST
ಅಕ್ಷರ ಗಾತ್ರ

ಬೀಜಿಂಗ್: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಕೊನೆಯ ದಿನ ಇಥಿಯೋಪಿಯಾದ ಅಲ್ಮಾಜ್ ಅಯಾನ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.  ಒಟ್ಟು 16 ಪದಕಗಳನ್ನು ಜಯಿಸಿದ ಕೆನ್ಯಾ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.

ಮಹಿಳೆಯರ 5000 ಮೀಟರ್ಸ್ ಓಟದ ಸ್ಪರ್ಧೆಯನ್ನು ಅಯಾನ 14 ನಿಮಿಷ 26.86 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.
ಈ  ಮೂಲಕ ಅವರು ತಮ್ಮದೇ ದೇಶದ ತಿರುನಿಶ್ ದಿಬಾಬ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ದಿಬಾಬ 14 ನಿಮಿಷ 38.59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ಈ ಸ್ಪರ್ಧೆಯಲ್ಲಿ ಇಥಿಯೋಪಿಯಾ ಪ್ರಾಬಲ್ಯ ಮೆರೆಯಿತು. ಮೊದಲ ಮೂರೂ ಸ್ಥಾನಗಳು ಇದೇ ರಾಷ್ಟ್ರದ ಪಾಲಾದವು. ಸೆಂಬಾರೆ ತೆಫಾರಿ  (ಕಾಲ: 14:44.07ಸೆ.) ಬೆಳ್ಳಿ ಜಯಿಸಿದರೆ, ಗಾಂಜಿಬೆ ದಿಬಾಬ (ಕಾಲ: 14:44.14ಸೆ.) ಕಂಚು ಜಯಿಸಿದರು.
ದಾಖಲೆ:  ಮಹಿಳೆಯರ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಒ.ಪಿ. ಜೈಶಾ 18ನೇ ಸ್ಥಾನ ಪಡೆದರಾದರೂ ರಾಷ್ಟ್ರೀಯ ದಾಖಲೆ ನಿರ್ಮಿಸಿ ಗಮನ ಸೆಳೆದರು.

ಕೇರಳದ ಜೈಶಾ ಹೋದ ವರ್ಷ ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ 1500 ಮೀಟರ್ಸ್‌ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ಇದೇ ವರ್ಷ ಮುಂಬೈನಲ್ಲಿ ನಡೆದಿದ್ದ ಮ್ಯಾರಥಾನ್‌ನಲ್ಲಿ ಎರಡು ಗಂಟೆ 37.29 ಸೆಕೆಂಡುಗಳಲ್ಲಿ ಗುರಿ ತಲುಪಿ ಎಂಟನೇ ಸ್ಥಾನ ಗಳಿಸಿದ್ದರು. ಇಲ್ಲಿ ಹಿಂದಿಗಿಂತಲೂ ಕಡಿಮೆ ಸಮಯದಲ್ಲಿ ಗುರಿ ಮುಟ್ಟಿ ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

32 ವರ್ಷದ ಜೈಶಾ  ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಶನಿವಾರ ಎರಡು ಗಂಟೆ 34 ನಿಮಿಷ 43 ಗುರಿ ಮುಟ್ಟಿದರು. ಕಣದಲ್ಲಿದ್ದ ಇನ್ನೊಬ್ಬ ಸ್ಪರ್ಧಿ ಸುಧಾ ಸಿಂಗ್ ಎರಡು ಗಂಟೆ 35.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 19ನೇ ಸ್ಥಾನ ಪಡೆದರು. ಇನ್ನೊಬ್ಬ ಸ್ಪರ್ಧಿ ಲಲಿತಾ ಬಾಬರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಲ್ಲ.

ಈ ಬಾರಿಯೂ ಭಾರತದ ಅಥ್ಲೀಟ್‌ಗಳು ಒಂದೂ ಪದಕ ಗೆಲ್ಲದೇ ಬರಿಗೈಲಿ ಮರಳಿದರು. ಆದರೆ, ಇಲ್ಲಿ ಕೆಲ ಅಥ್ಲೀಟ್‌ಗಳು ತಮ್ಮ ಹಿಂದಿನ ಸಾಧನೆ ಉತ್ತಮಪಡಿಸಿಕೊಂಡಿದ್ದು 2016ರ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ನಿಟ್ಟಿನಲ್ಲಿ ಸ್ಫೂರ್ತಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT