ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್‌ನಲ್ಲೇ ಸ್ಟಾರ್ಟ್‌ಅಪ್ಸ್‌!

Last Updated 20 ಜನವರಿ 2015, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್‌ ವ್ಯಾಸಂಗ ಮಾಡಲು ಬಂದ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿಯೇ ಸಣ್ಣ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು (ಸ್ಟಾರ್ಟ್‌ಅಪ್‌) ಆರಂಭಿಸಲು ಅವಕಾಶ ಸಿಗುತ್ತದೆ ಎಂದರೆ ಅದೊಂದು ವಿಶೇಷವೇ ಸರಿ. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಕ್ಯಾಂಪಸ್‌ನಲ್ಲಿಯೇ 26 ಕಂಪೆನಿಗಳು ಜನ್ಮತಳೆದಿದ್ದು, 300 ಮಂದಿಗೆ ಉದ್ಯೋಗವನ್ನೂ ಕಲ್ಪಿಸಿಕೊಟ್ಟಿವೆ. 2017ರೊಳಗೆ ಕ್ಯಾಂಪಸ್‌ನಲ್ಲಿ 50 ಸ್ಟಾರ್ಟ್‌ಅಪ್‌ಗಳ ಆರಂಭ, 2000 ಉದ್ಯೋಗ ಸೃಷ್ಟಿ ಗುರಿಯೂ ಇದೆ.

ಎಂಜಿನಿಯರಿಂಗ್‌ ವ್ಯಾಸಂಗ ಮಾಡಲು ಬಂದ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿಯೇ ಸಣ್ಣ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು (ಸ್ಟಾರ್ಟ್‌ಅಪ್‌) ಆರಂಭಿ ಸಲು ಅವಕಾಶ ಆಗುತ್ತದೆ ಎಂದರೆ ಅದೊಂದು ವಿಶೇಷವೇ ಸರಿ ಅಲ್ಲವೇ?

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ, ಉದ್ಯಮ ಆರಂಭಿಸಲು ಉಚಿತವಾಗಿ ಸೌಲಭ್ಯ ಕಲ್ಪಿಸುವ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ವಿಶಿಷ್ಟ ರೀತಿಯಲ್ಲಿ ನೆರವಾಗುತ್ತಿದೆ. ವಿದ್ಯಾರ್ಥಿಯ ತಲೆಯಲ್ಲಿ ಮೊಳಕೆಯೊಡೆಯುವ ಆಲೋಚನೆಯೊಂದನ್ನು ಪೋಷಿಸಿ ಅದಕ್ಕೊಂದು ಮೂರ್ತರೂಪ ನೀಡುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಹಾಗೂ ಹೊರಗಿನ ಉದ್ಯಮಿಗಳು ಆರಂಭಿಸಿರುವ ಒಟ್ಟು 26 ಸ್ಟಾರ್ಟ್‌ಅಪ್‌ಗಳು ಬಿವಿಬಿ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಜತೆಗೆ, 300 ಮಂದಿಗೆ ಉದ್ಯೋಗವನ್ನೂ ಕಲ್ಪಿಸಿಕೊಟ್ಟಿವೆ!

ಸ್ಟಾರ್ಟ್‌ಅಪ್‌ಗೆ ಚಿಮ್ಮುಹಲಗೆ
ಪಿಯುಸಿ ವಿಜ್ಞಾನದ ಪ್ರಯೋಗಗಳನ್ನು 3ಡಿ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವ ಅತ್ಯಂತ ಪರಿಣಾಮಕಾರಿ ತಂತ್ರಾಂಶ ಸೃಷ್ಟಿಸಿರುವ ಇಂಟಿಟ್ಯುವ್‌ ಲ್ಯಾಬ್‌,  ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವ ಸಾಧ್ಯತೆ ಸೃಷ್ಟಿಸಿರುವ ಈ–ನೆಟ್‌ ವರ್ಕ್‌, ಬೃಹತ್‌ ಕಂಪೆನಿಗಳು ಅತ್ಯಂತ ಸರಳ ವಿಧಾನದ ಮೂಲಕ ವಹಿವಾಟು ನಡೆಸುವ ತಂತ್ರಾಂಶ ರೂಪಿಸಿರುವ ಕ್ರೋಮೊಸಿಸ್‌...
ಇಂತಹ ಹತ್ತಾರು ಆಕರ್ಷಕ ಮತ್ತು ಅತ್ಯದ್ಭುತ ಕಲ್ಪನೆಗ ಳನ್ನೇ ಇಟ್ಟುಕೊಂಡ 26 ಕಂಪೆನಿಗಳು ಹುಬ್ಬಳ್ಳಿಯಲ್ಲಿರುವ ಬಿ.ವಿ.ಬಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜು ಕ್ಯಾಂಪಸ್‌ನಲ್ಲಿ ಮೊಳಕೆಯೊಡೆದಿವೆ.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹಲವು ಹಂತಗಳಲ್ಲಿ ಗುರುತಿಸಿ ಅವರನ್ನು ಉದ್ಯಮಿಯಾಗಿಸುವ ಚಟುವಟಿಕೆ ಇಲ್ಲಿ ನಿರಂತರ ನಡೆಯುತ್ತಿದೆ. ಮೂರು ಹೊಸ ಕಂಪೆನಿಗಳು ಕ್ಯಾಂಪಸ್‌ನಲ್ಲಿ ಶಾಖೆ ತೆರೆಯುವ ಆಸಕ್ತಿ ವ್ಯಕ್ತಪಡಿಸಿವೆ. ಕೇಂದ್ರದ ಸಣ್ಣ ಮತ್ತು ಮಧ್ಯಮ  ಪ್ರಮಾಣದ ಉದ್ಯಮಗಳ ಸಚಿವಾಲಯ ನಮ್ಮ ಸಿಟಿಐಇಯನ್ನು ‘ಬಿಜಿನೆಸ್‌ ಇನ್‌ಕ್ಯುಬೇಷನ್‌ ಸೆಂಟರ್‌’ ಎಂದು ಪರಿಗಣಿಸಿದೆ. ಇದರಿಂದ ಪ್ರತಿವರ್ಷ 10 ಅತ್ಯುತ್ತಮ ಐಡಿಯಾಗಳಿಗೆ ತಲಾ ರೂ6 ಲಕ್ಷ ಬಹುಮಾನ ಸಿಗಲಿದೆ.

ನಿತಿನ್‌ ಕುಲಕರ್ಣಿ
ಸಿಟಿಐಇ ನಿರ್ದೇಶಕ
(ಮೊ: 98802 26822)

ಕ್ಯಾಂಪಸ್‌ ಸ್ಟಾರ್ಟ್‌ಅಪ್‌
ಇಲ್ಲಿಯೇ ಕಲಿತು ಕೆಲವು ವರ್ಷಗಳ ಕಾಲ ಬೇರೆಡೆ ದುಡಿದು ಅನುಭವ ಗಿಟ್ಟಿಸಿಕೊಂಡು ವಾಪಸಾದ ಹಲವರು ಇಲ್ಲಿ ಕಂಪೆನಿ ಆರಂಭಿಸಿದ್ದಾರೆ. ಕೆಲವರು ಪದವಿ ಪೂರ್ಣಗೊಂಡ ಬಳಿಕ ಸಂಸ್ಥೆ ಕಟ್ಟಿದ್ದಾರೆ. ಕೆಲವು ಉದ್ಯಮಗಳೂ ಕ್ಯಾಂಪಸ್‌ನಲ್ಲಿ ಶಾಖೆ ತೆರೆದಿವೆ. ಸದ್ಯ ಸಂಕಲ್ಪ್‌ ಸೆಮಿಕಂಡಕ್ಟರ್‌, ನವ್ಯಾ ಬಯೋಲಾಜಿಕಲ್ಸ್‌, ನಬ್ರೋಸ್‌, ಕ್ರಿಶಂಗಿ ಸಲ್ಯೂಷನ್ಸ್, ಸಿ–ಲಾಜಿಕ್‌, ಇಂಟಿಟ್ಯೂ ಟೆಕ್ನಾಲಜೀಸ್‌, ಬಯೊಸಿಲ್‌ ಟೆಕ್ನಾಲಜೀಸ್‌, ಸನ್‌ ಫೋರ್ಸ್‌ ಸಿಸ್ಟಮ್ಸ್‌, ಅಥೆನಾ ಎಂಜಿನಿಯರ್ಸ್‌, ಪ್ರಜ್ಞಾ ಬಯೊಸೈನ್ಸ್‌, ಅಸರ್ವಾ ಚಿಪ್ಸ್‌ ಅಂಡ್‌ ಟೆಕ್ನಾಲಜೀಸ್‌, ರಮ್ಯಂ ಇಂಟೆಲ್‌ ಲ್ಯಾಬ್‌, ಕ್ರೋಮೊಸಿಸ್‌ ಟೆಕ್ನಾಲಜಿಸ್‌, ಐನೊಡಿಯಾ, ಹೈವೈ ಕಮ್ಯುನಿಕೇಷನ್ಸ್‌, ಬೋರ್ಡ್‌ಬೀಸ್‌ ಟೆಕ್‌ ಸಲ್ಯೂಷನ್ಸ್, ಈಸ್ಕೂಲ್‌ ನೆಟ್‌ವರ್ಕ್, ನಾನೊಪಿಕ್ಸ್‌, ಆಲ್‌.ಇನ್‌. ಬಾಕ್ಸ್‌, ಕನ್‌ಹರ್‌ಎಜು, ನೆಕ್ಸ್ಟ್‌ಡ್ರಾಪ್‌, ಪಿಡಿಎಂ ಟೆಕ್ನಾಲಜೀಸ್‌, ನಾವೆಲ್‌ ಸ್ಟೋರ್‌, ಕ್ಯಾಂಪಸ್‌ ಕ್ಲೌಡ್‌, ವೆಂಟಾಲಿಸ್ಟ್‌, ವೇಲ್ವ್‌ಫೇಸ್‌ ಬಿವಿಬಿ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಉತ್ಪಾದನಾ ಕ್ಷೇತ್ರಕ್ಕೆ ‘ಕ್ರೋಮೊಸಿಸ್‌’
ಉತ್ಪಾದನಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಮೊಳಕೆ ಯೊಡೆದ ಕಂಪೆನಿ ಕ್ರೋಮೊಸಿಸ್‌ ಟೆಕ್ನಾಲಜೀಸ್‌. ಹುಬ್ಬಳ್ಳಿಯಲ್ಲಿರುವ ಬಿ.ವಿ.ಬಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಸಂಜೀವ್‌ ಕುಲಕರ್ಣಿ, ರಮೇಶ್‌ ನಿಟ್ಟಾಲಿ, ಸೂರಜ್‌ ಪವಾರ್ ಈ ಸಂಸ್ಥೆಯನ್ನು 2012ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ್ದಾರೆ.

ಕಂಪೆನಿಯೊಂದರಲ್ಲಿನ ಎಲ್ಲಾ ಕೆಲಸಗಳು, ಚಟುವಟಿಕೆಗ ಳನ್ನು, ಹಣಕಾಸು ವಹಿವಾಟುಗಳನ್ನು, ಉತ್ಪನ್ನಗಳ ವಿವರ ಗಳನ್ನು ಒಂದೇ ತಂತ್ರಾಂಶದಲ್ಲಿ ದಾಖಲಿಸುವ ಮೂಲಕ ಮಾನವ ಶ್ರಮ ಮತ್ತು ಅಪಾರ ಪ್ರಮಾಣದಲ್ಲಿ ಕಾಗದವನ್ನು ಉಳಿಸುವ ಹಾಗೂ ಕಂಪೆನಿಯನ್ನು ಆರ್ಥಿಕವಾಗಿ ಸದೃಢ ಗೊಳಿಸುವ ಕೆಲಸಗಳಿಗೆ ಕ್ರೋಮೋಸಿಸ್‌ ನೆರವಾಗಲಿದೆ.

ಕಂಪೆನಿಯು ಸ್ಡ್ಯಾಂಡರ್ಡ್‌ ತಂತ್ರಾಂಶವೊಂದನ್ನು ಅಭಿ ವೃದ್ಧಿಪಡಿಸಿದೆ. ಅಲ್ಲದೇ, ಗ್ರಾಹಕರ ಕೋರಿಕೆ ಮೇರೆಗೂ (ಕಸ್ಟೊಮೈಜ್ಡ್‌ ಸಾಫ್ಟ್‌ವೇರ್‌) ವಿಶೇಷ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಕೊಡಲಾಗುತ್ತಿದೆ. ಆದರೆ, ಈ ತಂತ್ರಾಂಶ ವನ್ನು ಬಳಸಲು ಇಂಟರ್‌ನೆಟ್‌  (ಅಂತರ್ಜಾಲ) ಸಂಪರ್ಕ ಕಡ್ಡಾಯವಾಗಿ ಇರಬೇಕಾದ್ದು ಅವಶ್ಯ. ಆಗ ವಿಶ್ವದ ಯಾವುದೇ ಸ್ಥಳದಲ್ಲಾದರೂ ಕುಳಿತು ಕಂಪೆನಿಯ ಆಗುಹೋಗುಗಳನ್ನು ಗಮನಿಸಬಹುದಾಗಿದೆ.

‘ಗೆಳೆಯರು, ಸಂಬಂಧಿಕರಲ್ಲಿ ಬಹಳಷ್ಟು ಮಂದಿ ಕೈಗಾರಿ ಕೋದ್ಯಮಿಗಳಾಗಿದ್ದಾರೆ. ಅವರೆಲ್ಲರೂ ತಮ್ಮ ಸಂಸ್ಥೆಗಳ ಆಡ ಳಿತ ವ್ಯವಸ್ಥೆ, ಹಣಕಾಸು ವಹಿವಾಟು, ಮಾರುಕಟ್ಟೆ ಚಟು ವಟಿಕೆಗಳನ್ನು ನಿರ್ವಹಿಸಲು ಬಹಳ ಶ್ರಮಪಡುತ್ತಿದ್ದರು. ಇಂತಹ ಸಂಸ್ಥೆಗಳನ್ನು ಸುಲಭದ ರೀತಿಯಲ್ಲಿ ಮುನ್ನಡೆಸಲು ಅತ್ಯಗತ್ಯವಾದ ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದು. ಅದ ಕ್ಕಾಗಿ ಒಂದು ಕಂಪೆನಿಯನ್ನೇ ಆರಂಭಿಸಬೇಕೆಂಬ ಯೋಚನೆ ಎಂಜಿನಿಯರಿಂಗ್ ಓದುವಾಗಲೇ ಇತ್ತು. ವ್ಯಾಸಂಗ ಮುಗಿದ ನಂತರ ಎರಡು ಮೂರು ವರ್ಷಗಳ ಕಾಲ ಬೇರೆ ಸಂಸ್ಥೆಗಳಲ್ಲಿ ದುಡಿಯುವಾಗ ಮಾರುಕಟ್ಟೆಯ ಸ್ಥಿತಿಗತಿಯೂ ಅರ್ಥವಾ ಯಿತು. ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ಅಧ್ಯಯನ ನಡೆಸಿ ಕ್ರೋಮೊಸಿಸ್‌ ಕಂಪೆನಿಯನ್ನು ಆರಂಭಿಸಿದವು’ ಎಂದು ಆರಂಭದ ದಿನಗಳನ್ನು ನೆನಪಿಸಿ ಕೊಳ್ಳುತ್ತಾರೆ ಕ್ರೋಮೊಸಿಸ್‌ ನಿರ್ದೇಶಕರಲ್ಲೊಬ್ಬರಾದ ಸಂಜೀವ್‌ ಕುಲಕರ್ಣಿ.

ಕೇವಲ ರೂ3 ಲಕ್ಷ ಮೂಲ ಬಂಡವಾಳದೊಂದಿಗೆ ಆರಂಭ ವಾದ ಕ್ರೋಮೊಸಿಸ್‌ಗೆ ನಂತರದ ದಿನಗಳಲ್ಲಿ ಹಂತ ಹಂತ ವಾಗಿ ಒಟ್ಟು ರೂ16 ಲಕ್ಷದವರೆಗೂ ಬಂಡವಾಳ ಹೂಡಲಾಗಿದೆ. ಸದ್ಯ ಕಂಪೆನಿಯ ವಹಿವಾಟು ವಾರ್ಷಿಕ ಶೇ 60ರ ಪ್ರಮಾಣ ದಲ್ಲಿ ಬೆಳವಣಿಗೆ ಕಾಣುತ್ತಿದೆ. ಈಗ ಐದು ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ. ಭಾರತವಲ್ಲದೇ ಅಮೆರಿಕ, ಬ್ರೆಜಿಲ್‌ ಮತ್ತು ಕೆನಡಾದಲ್ಲೂ ಕ್ರೋಮೊಸಿಸ್‌ಗೆ ಗ್ರಾಹಕರಿದ್ದಾರೆ. ಸದ್ಯದಲ್ಲಿಯೇ ಅಮೆರಿಕದಲ್ಲಿ ಫ್ರಾಂಚೈಸಿ ತೆರೆಯುವ ಆಲೋಚನೆಯೂ ಇದೆ ಎಂದು ಉತ್ಸಾಹದಲ್ಲಿ ಹೇಳಿಕೊಳ್ಳುತ್ತಾರೆ ಈ ಯುವ ಉದ್ಯಮಿಗಳಿದ್ದಾರೆ.

ಈ ಭಾಗದ ಪದವೀಧರರೂ ಬೆಂಗಳೂರಿನಂತಹ ನಗರ ಗಳಲ್ಲೇ ದುಡಿಯಬೇಕು ಎಂಬ ವ್ಯಾಮೋಹ ಹೊಂದಿರು ತ್ತಾರೆ. ಆ ಮಹಾ ನಗರದ ಪರಿಸ್ಥಿತಿ ಅನುಭವವಾದ ನಂತರ ಮರಳಿ ಬರುತ್ತಾರೆ ಎನ್ನುತ್ತಾರೆ ಸಂಜೀವ್‌.

ಕಂಪೆನಿಯನ್ನೇನೋ ಇಲ್ಲಿ ಆರಂಭಿಸಬಹುದು. ಆದರೆ, ಅವಳಿ ನಗರದಲ್ಲಿ ಮೂಲ ಸೌಕರ್ಯಗಳದ್ದೇ ದೊಡ್ಡ ಸಮಸ್ಯೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಯುವ ಉದ್ಯಮಿಗಳಿಗೆ ಅನುಕೂಲಕಾರಿಯಾದ ಮೂಲ ಸೌಲಭ್ಯಗ ಳನ್ನು ಒದಗಿಸಿಕೊಡುುವ ಮೂಲಕ ಉದ್ಯಮ ಸ್ನೇಹಿ ವಾತಾ ವರಣ ಸೃಷ್ಟಿಸಬೇಕು ಎನ್ನುವುದು ಅವರ ಒತ್ತಾಯ.

ಬಯೋಬ್ಯಾಂಕ್‌ಗಳ ಕೀಲಿಕೈ ‘ಕ್ರಿಶಾಗ್ನಿ’

ಕ್ಯಾನ್ಸರ್‌, ಏಡ್ಸ್‌, ಎಬೋಲಾ ಮುಂತಾದ ಮಾರಕ ರೋಗಗಳ ಸಂಶೋಧನಾ ಕೇಂದ್ರಗಳಲ್ಲಿ ಜೀವಕೋಶಗಳನ್ನು ಇಡುವ ಫ್ರೀಜರ್‌ ಹಾಗೂ ಆ ಜೀವಕೋಶಗಳ ಮೇಲೆ ನಡೆದ ಸಂಶೋಧನೆಯ ದಾಖಲೆಯನ್ನು ಜೋಪಾನವಾಗಿಡುವುದು ಅತ್ಯಂತ ಅವಶ್ಯ. ಇದನ್ನು ಗುರಿಯಾಗಿಸಿಕೊಂಡು ತಂತ್ರಾಂಶ ಅಭಿವೃದ್ಧಿಪಡಿಸಿ ಸೇವೆ ನೀಡುತ್ತಿರುವ ಸಂಸ್ಥೆ ಕ್ರಿಶಾಗ್ನಿ ಸಲ್ಯೂಷನ್ಸ್‌. ಓಪನ್‌ ಸ್ಪೆಸಿಮನ್‌ ಎಂಬ ಹೆಸರಿನ ಈ ತಂತ್ರಾಂಶಕ್ಕೆ ಬಯೋ ಬ್ಯಾಂಕ್‌ ಇರುವ ಎಲ್ಲೆಡೆ ಸಾಕಷ್ಟು ಬೇಡಿಕೆಯಿದೆ.

ಧಾರವಾಡದ ಶ್ರೀ ಮಂಜುನಾಥೇಶ್ವರ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಶ್ರೀಕಾಂತ ಅಡಿಗ 2009ರಲ್ಲಿ ಕ್ರಿಶಾಗ್ನಿ ಸಲ್ಯೂಷನ್ಸ್ ಆರಂಭಿಸಿದ್ದಾರೆ.

ಆರಂಭದಲ್ಲಿ ಸೇವೆಯನ್ನಷ್ಟೇ ನೀಡುವ ಮೂಲಕ 2011ರಲ್ಲಿ ಅಧಿಕೃತವಾಗಿ ಕೆಲಸ ಆರಂಭಿಸಲಾಗಿದೆ. ಕ್ರಿಶಾಗ್ನಿ ಆರಂಭದಲ್ಲಿ ಯಾವುದೇ ಬಂಡವಾಳ ಹೂಡಿಲ್ಲ. ಪಾಕಿಸ್ತಾನ, ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ, ಯೂರೋಪ್‌, ಅರಬ್‌ ರಾಷ್ಟ್ರಗಳ ಒಟ್ಟು 25ಕ್ಕೂ ಹೆಚ್ಚು ಕಡೆ ಈ ತಂತ್ರಾಂಶದ ಬಳಕೆ ನಡೆಯುತ್ತಿದೆ. ಕಂಪೆನಿ ಒಟ್ಟು 15 ರಾಷ್ಟ್ರಗಳ ಗ್ರಾಹಕರನ್ನು ಹೊಂದಿದೆ. ಮೂರು ಮಂದಿಯೊಂದಿಗೆ ಆರಂಭವಾದ ಕಂಪೆನಿಯಲ್ಲಿ ಇಂದು 30 ಮಂದಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ರೂ5 ಕೋಟಿಗೂ ಹೆಚ್ಚು ವ್ಯವಹಾರ ನಡೆಯುತ್ತಿದೆ ಎಂದು ವಿವರಿಸುತ್ತಾರೆ ಕ್ರಿಶಾಗ್ನಿಯ ತಾಂತ್ರಿಕ ಮುಖ್ಯಸ್ಥ ವಿನಾಯಕ ಪವಾರ್‌
‘ಭಾರತದಲ್ಲಿ ಸದ್ಯಕ್ಕೆ ನಮಗೆ ಸ್ಪರ್ಧೆ ನೀಡುವವರಿಲ್ಲ. ಆದರೆ ಅಮೆರಿಕದ ಕೆಲವು ಕಂಪೆನಿಗಳಿಂದ ಸಾಕಷ್ಟು ಪೈಪೋಟಿ ಎದುರಾಗಿದೆ’ ಎನ್ನುವ ಪವಾರ್‌, ಇದೊಂದು ಅಗಾಧ ಅವಕಾಶಗಳಿರುವ ಕ್ಷೇತ್ರ ಎನ್ನುತ್ತಾರೆ.

ಅಮೆರಿಕದಲ್ಲಿ ಕೆಲಸ ಮಾಡಿ ಅನುಭವ ಪಡೆದ ಕ್ರಿಶಾಗ್ನಿ ಸಂಸ್ಥಾಪಕ, ಸಾಫ್ಟ್‌ವೇರ್‌ ಎಂಜಿನಿಯರ್‌ ಶ್ರೀಕಾಂತ ಅಡಿಗ, ಅಲ್ಲಿನ ವೈದ್ಯರು, ಸಂಶೋಧಕರೊಂದಿಗಿನ ಸುದೀರ್ಘ ಚರ್ಚೆ, ಸಮಾಲೋಚನೆಯ ನಂತರವೇ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಕಂಪೆನಿಯಲ್ಲಿ ಸದ್ಯ 10 ಮಂದಿ ಸಿಬ್ಬಂದಿ ಇದ್ದಾರೆ. ಅವಳಿ ನಗರದ ಐವರು ಹಾಗೂ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್‌ನ ಐವರು ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ 20 ಮುಂದೆ ಪುಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೈದರಾಬಾದ್‌ನ ಸೆಪಿಯನ್‌ ಬಯೋಟೆಕ್ನಾಲಜೀಸ್‌ ಮತ್ತು ಬೆಂಗಳೂರಿನ ಷಾ ಮುಜುಂದಾರ್ ಕ್ಯಾನ್ಸರ್‌ ಸೆಂಟರ್‌ಗಳಲ್ಲಿ ಮಾತ್ರ ನಮ್ಮ ತಂತ್ರಾಂಶ ಬಳಕೆಯಲ್ಲಿದೆ. ಮುಂಬೈನ ಡಾಗ್‌ ಕ್ಯಾನ್ಸರ್‌ ಸೆಂಟರ್‌ ಜೊತೆ ಮಾತುಕತೆ ನಡೆಯುತ್ತಿದೆ. ಉಳಿದವರೆಲ್ಲಾ ವಿದೇಶಿ ಗ್ರಾಹಕರೇ ಎನ್ನುತ್ತಾರೆ ವಿನಾಯಕ್‌.

ಅಂದ ಹಾಗೆ ಈ ತಂತ್ರಾಂಶವನ್ನು ಐಪಾಡ್‌ ಮತ್ತು ಎಲ್ಲಾ ಟ್ಯಾಬ್ಲೆಟ್‌ಗಳಲ್ಲಿ ಬಳಸಬಹುದಾಗಿದೆ. ಗೂಗಲ್‌ನಲ್ಲಿ ಈ ತಂತ್ರಾಂಶ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆದರೆ ಸೇವೆ ಪಡೆಯಲು ಹಣ ನೀಡಬೇಕು. ಮೂರು ರೀತಿಯ ಬಿಜಿನೆಸ್‌ ಪ್ಲಾನ್‌ಗಳಿದ್ದು, ರೂ6 ಲಕ್ಷದಿಂದ ರೂ20 ಲಕ್ಷದವರೆಗೂ ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ. ರಿಮೋಟ್‌ ವ್ಯವಸ್ಥೆ ಮೂಲಕ ಸೇವೆ ವಾರಕ್ಕೊಮ್ಮೆ ಗ್ರಾಹಕರ ಜೊತೆ ಸಂಪರ್ಕ ಸಾಧಿಸಲಾಗುತ್ತದೆ. ಆ ಮೂಲಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.

ಬೆರಳ ತುದಿಯಲ್ಲಿ ವಿಜ್ಞಾನ ಪ್ರಯೋಗಾಲಯ
ಪಿಯುಸಿ ಕಲಿಯುವಾಗ ವಿಜ್ಞಾನ ಪ್ರಯೋಗಾಲಯದಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಗುರಿಯಾಗಿಸಿಕೊಂಡ ನಾಲ್ವರು ಯುವಕರು 2012ರ ಜೂನ್‌ನಲ್ಲಿ ‘ಇಂಟಿಟ್ಯೂವ್‌ ಲ್ಯಾಬ್ಸ್‌’ ಎಂಬ ಕಂಪೆನಿಯನ್ನು ಸ್ಥಾಪಿಸಿದ್ದಾರೆ.

ಸದ್ಯ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಭೌತ ಮತ್ತು ಜೀವ ವಿಜ್ಞಾನದ ಪ್ರಯೋಗಗಳನ್ನೊಳಗೊಂಡ 3ಡಿ ತಂತ್ರಾಶ ರೂಪಿಸಲಾಗಿದೆ. ‘ಮೌಸ್‌ ಬಳಸಲು ಬಂದರೆ ಸಾಕು, ಪಿಯುಸಿ ಪ್ರಯೋಗಾಲಯವೇ ನಿಮ್ಮ ಕೈ ಬೆರಳ ತುದಿಯಲ್ಲಿ ಅನಾವರಣಗೊಳ್ಳುತ್ತದೆ’ ಎನ್ನುವ ಮೂಲಕ ಒಂದೇ ಸಾಲಿನಲ್ಲಿ ತಮ್ಮ ಉತ್ಪನ್ನದ ಪರಿಚಯ ಮಾಡಿಕೊಡುತ್ತಾರೆ ಈ ಯುವಕರು. ಇದಕ್ಕೆ ಸುಸಜ್ಜಿತ ಪ್ರಯೋಗಾಲಯ ಬೇಕಿಲ್ಲ. ಬದಲಾಗಿ ಒಂದು ಕಂಪ್ಯೂಟರ್‌ ಹಾಗೂ ಪ್ರೊಜೆಕ್ಟರ್‌ ಇದ್ದರೆ ಸಾಕು. ಮೌಸ್‌ ಅತ್ತಿತ್ತ ಹೊರಳಾಡಿಸುತ್ತ ಎಲ್ಲಾ ಪ್ರಯೋಗಗಳನ್ನೂ ವೀಕ್ಷಿಸಬಹುದು, ಆಲಿಸಬಹುದು ಮತ್ತು ಚರ್ಚಿಸಬಹುದು.

ಬಿವಿಬಿ ಕಾಲೇಜಿನ 2012ರ ಬ್ಯಾಚ್‌ನ  ವಿದ್ಯಾರ್ಥಿಗಳಾದ ಉತ್ತರ ಕನ್ನಡ ಜಿಲ್ಲೆಯ ವಿನಾಯಕ್‌ ಪಿ.ಎಚ್‌. (ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್ಸ್‌), ಬೆಳಗಾವಿ ಜಿಲ್ಲೆ ರಾಮದುರ್ಗದ ಪ್ರಮೋದ್‌ ಆರ್‌. (ಕಂಪ್ಯೂಟರ್‌ ಸೈನ್ಸ್‌), ಧಾರವಾಡದ ಗಿರೀಶ್‌ ಬಿ.ಎಸ್‌. (ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್ಸ್‌) ಮತ್ತು ಪವನ್‌ ಎಸ್‌. (ಕಂಪ್ಯೂಟರ್‌ ಸೈನ್ಸ್‌) ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ.

ರೂ2.5 ಲಕ್ಷ ಬಂಡವಾಳ
ಸಾಮಾನ್ಯ ಕುಟುಂಬದಲ್ಲಿ ಬೆಳೆದ ಈ ಯುವಕರು ಐ ಲ್ಯಾಬ್‌ ಕಟ್ಟಲು ಮನೆಯಿಂದ ಅಥವಾ ಯಾರಿಂದಲೂ ಸಾಲ ಮಾಡಿಲ್ಲ. ಬೇರೆ ಬೇರೆ ಕಂಪೆನಿಗಳಿಗೆ ಪ್ರಾಜೆಕ್ಟ್‌ ಮಾಡಿಕೊಡುವ ಮೂಲಕ ಹಣ ಸಂಗ್ರಹಿಸಿದ್ದಾರೆ. ಇದರಲ್ಲಿ ರೂ1.5 ಲಕ್ಷದಷ್ಟು ಹಣದಿಂದ ಕೆಲಸ ನಿರ್ವಹಿಸಲು ಬೇಕಾದ ಕಂಪ್ಯೂಟರ್‌ ಖರೀದಿಸಿದ್ದಾರೆ. ಉಳಿದಂತೆ ರೂ1 ಲಕ್ಷ ಖರ್ಚು ಮಾಡಿ ಸಾಫ್ಟ್‌ವೇರ್‌ ಖರೀದಿಸಿದ್ದಾರೆ.

ಎಂಜಿನಿಯರಿಂಗ್‌ನ ಅಂತಿಮ ಸೆಮಿಸ್ಟರ್‌ನಲ್ಲಿ ಕಲಿಯುತ್ತಿರಬೇಕಾದರೆ ಈ ತಂತ್ರಾಂಶ ಅಭಿವೃದ್ಧಿಪಡಿಸುವ ಆಲೋಚನೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿವಿಬಿ ಕಾಲೇಜಿನ ಸಿಟಿಇಐ ವಿಭಾಗವನ್ನು ಸಂಪರ್ಕಿಸಿ ಪ್ರಾಜೆಕ್ಟ್‌ ಕುರಿತು ವಿವರಿಸಿದ್ದಾರೆ. ಕಾಲೇಜಿನವರಿಗೆ ಈ ಯುವ ತಂತ್ರಜ್ಞರ ಯೋಜನೆ ಇಷ್ಟವಾಗಿದೆ. ಕಂಪೆನಿ ಆರಂಭಿಸಲು ಜಾಗವೂ ದೊರಕಿದೆ. ಈ ತಂತ್ರಾಂಶ ರೂಪಿಸಲು ಒಂದೂವರೆ ವರ್ಷ ಸಾಕಷ್ಟು ಶ್ರಮಿಸಿರುವ ಈ ಯುವಕರ ಮೊದಲ ತಿಂಗಳ ಗಳಿಕೆ ರೂ60 ಸಾವಿರ!

ಇಂದು ಈ ಗಳಿಕೆ ಹಲವು ಪಟ್ಟು ಹೆಚ್ಚಿದೆ. ಇದರಲ್ಲಿ ತಮ್ಮ ಖರ್ಚನ್ನಷ್ಟೇ ತೆಗೆದುಕೊಂಡು ಉಳಿದದ್ದನ್ನು ಕಂಪೆನಿಯ ಬೆಳವಣಿಗೆಗೇ ವಿನಿಯೋಗಿಸುತ್ತಿದ್ದಾರೆ.

2013ರ ಮೇ ತಿಂಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಯಲ ಪ್ರಯೋಗಗಳನ್ನೊಳಗೊಂಡ ತಂತ್ರಾಂಶವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ನಂತರ ಆಗಸ್ಟ್‌ನಲ್ಲಿ ಜೀವ ವಿಜ್ಞಾನದ ಪ್ರಯೋಗಗಳನ್ನು ಒಳಗೊಂಡ ತಂತ್ರಾಂಶವನ್ನು ವಿಜ್ಞಾನ ಬೋಧಿಸುವ ಕಾಲೇಜುಗಳಿಗೆ ಪರಿಚಯಿಸುವ ಕೆಲಸವನ್ನೂ ಆರಂಭಿಸಿದ್ದಾರೆ. ರಾಸಾಯನ ವಿಜ್ಞಾನದ ಪ್ರಯೋಗಗಳನ್ನೊಳಗೊಂಡ ತಂತ್ರಾಂಶ ಅಭಿವೃದ್ಧಿ ಕಾರ್ಯವೂ ಈಗ ಪ್ರಗತಿಯಲ್ಲಿದೆ.

ಸದ್ಯ ಅಭಿವೃದ್ಧಿ ಪಡಿಸಲಾಗಿರುವ ಭೌತ ಮತ್ತು ಜೀವ ವಿಜ್ಞಾನ ತಂತ್ರಾಂಶಗಳನ್ನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳ ವಿಜ್ಞಾನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಳಸುತ್ತಿದ್ದಾರೆ. ಈ ಎರಡೂ ವಿಷಯಗಳ ಪ್ರಯೋಗಗಳನ್ನು ಮೊಬೈಲ್‌ ಆ್ಯಪ್ ಮೂಲಕ ಸುಲಭವಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಕೆಲಸ ಆರಂಭವಾಗಿದೆ.

ಕ್ಯಾಂಪಸ್‌ ಸಂದರ್ಶನದಲ್ಲಿ ಪ್ರತಿಷ್ಠಿತ ಕಂಪೆನಿಗಳಿಗೆ ದುಡಿಯುವ ಅವಕಾಶ ಪಡೆದಿದ್ದ ಅವರು, ಎಂದಿಗೂ ಆ ತೀರ್ಮಾನ ಕೈಗೊಳ್ಳಲಿಲ್ಲ. ಓದುವಾಗಲೇ ಕಂಪೆನಿ ಆರಂಭಿಸುವ ತೀರ್ಮಾನ ಕೈಗೊಂಡಿದ್ದು, ಅಂತಿಮ ವರ್ಷ ಪರೀಕ್ಷೆ ಬರೆದು ತಮ್ಮ ಕನಸಿನ ಉದ್ಯಮಕ್ಕೆ ಕೈಹಾಕಿದ್ದಾರೆ. ‘ಅನಿಮೇಷನ್‌ ಒಳಗೊಂಡ ಪ್ರಯೋಗ ತಂತ್ರಾಂಶವನ್ನು ವಿವಿಧ ಕಂಪೆನಿಗಳು ಮಾರುಕಟ್ಟೆಗೆ ತಂದಿವೆ. ಆದರೆ 3ಡಿ ತಂತ್ರಜ್ಞಾನದಿಂದ ರೂಪಿಸಲ್ಪಟ್ಟ ಪ್ರಯೋಗ ತಂತ್ರಾಂಶ ಪ್ರಪಂಚದಲ್ಲೇ ಇಲ್ಲ. ನಮ್ಮ ತಂತ್ರಾಂಶಕ್ಕೆ ಸಿಂಗಾಪುರದಿಂದ ಬೇಡಿಕೆ ಬಂದಿದೆ. ವಿವಿಧ ರಾಜ್ಯಗಳಿಂದ ಈ ತಂತ್ರಾಂಶದ ಕುರಿತು ವ್ಯವಹಾರಿಕ ಮಾತುಕತೆ ನಡೆಯುತ್ತಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಗಿರೀಶ್‌.

ರೆವಲ್ಯೂಷನ್‌ ಇಂಡಿಯಾದಿಂದ ರೂ20 ಲಕ್ಷ ಬಂಡವಾಳ
ದೆಹಲಿ ಮೂಲದ ರೆವಲ್ಯೂಷನ್‌ ಇಂಡಿಯಾ ಸಂಸ್ಥೆ, ಐ ಲ್ಯಾಬ್‌ನಲ್ಲಿ ರೂ20 ಲಕ್ಷ ಬಂಡವಾಳ ಹೂಡಿದೆ. ಈ ಲಾಭ ಪಡೆದ ಭಾರತದ ಪ್ರಮುಖ ಐದು ಕಂಪೆನಿಗಳಲ್ಲಿ ಐ ಲ್ಯಾಬ್‌ ಸಹ ಒಂದು. ಅಲ್ಲದೇ, ಹೀಗೆ ಬಂಡವಾಳದ ನೆರವು ಪಡೆದ ದಕ್ಷಿಣ ಭಾರತದ ಏಕೈಕ ಕಂಪೆನಿ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ. ಅಲ್ಲದೇ ಕಂಪೆನಿಯ ಮಾರುಕಟ್ಟೆ ವಿಸ್ತರಿಸಲು ರೆವಲ್ಯೂಷನ್‌ ಇಂಡಿಯಾ ನೆರವಾಗಲಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮೈಕ್ರೊಸಾಫ್ಟ್‌ ಬಿಜ್‌ಸ್ಪಾರ್ಕ್‌ನಲ್ಲಿ, ಐ ಲ್ಯಾಬ್‌ನ ಬಿಜಿನೆಸ್‌ ಪ್ಲಾನ್‌ ಇಷ್ಟವಾದ್ದರಿಂದ ಮೈಕ್ರೊಸಾಫ್ಟ್‌, ತನ್ನೆಲ್ಲಾ ಉತ್ಪನ್ನಗಳನ್ನೂ ಮೂರು ವರ್ಷಗಳ ಕಾಲ ಉಚಿತವಾಗಿ ಬಳಸಲು ಐ ಲ್ಯಾಬ್‌ಗೆ ಅವಕಾಶ ನೀಡಿದೆ.

ಸಿಇಟಿ, ಐಐಟಿ ಪರೀಕ್ಷೆಗೂ ಸೂಕ್ತ
ಪ್ರಥಮ ಮತ್ತು ದ್ವಿತೀಯ ಪಿಯು ಭೌತ ವಿಜ್ಞಾನದಲ್ಲಿ ತಲಾ 18 ಪ್ರಯೋಗಗಳು ಮತ್ತು ಕ್ರಮವಾಗಿ 12 ಹಾಗೂ 10 ಹೆಚ್ಚುವರಿ ಚಟುವಟಿಕೆಗಳನ್ನು ಈ ತಂತ್ರಾಂಶ ಒಳಗೊಂಡಿದೆ. ಜೀವ ವಿಜ್ಞಾನದಲ್ಲಿ ಪ್ರಥಮ ವರ್ಷದ 35 ಹಾಗೂ ದ್ವಿತೀಯ ವರ್ಷದ 24 ಪ್ರಯೋಗಗಳು ಈ ತಂತ್ರಾಂಶದಲ್ಲಿ ಅಡಕವಾಗಿವೆ.

ಪ್ರಯೋಗಗಳನ್ನು ಕುರಿತ ಪ್ರಶ್ನೆಗಳಿಗೆ ಉತ್ತರವೂ ಇದರಲ್ಲಿದ್ದು, ವಿದ್ಯಾರ್ಥಿಗಳು ವೈವಾದಲ್ಲಿ ಸುಲಭವಾಗಿ ಅಂಕ ಗಳಿಸಬಹುದಾಗಿದೆ. ಅಲ್ಲದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ಅಖಿಲ ಭಾರತ ಎಂಜಿನಿಯರಿಂಗ್‌/ ವಾಸ್ತುಶಿಲ್ಪ ಪ್ರವೇಶ ಪರೀಕ್ಷೆ (ಎಐಇಇಇ), ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪ್ರವೇಶ ಪರೀಕ್ಷೆ ಬರೆಯುವವರಿಗೂ ಈ ತಂತ್ರಾಂಶ ಅನುಕೂಲಕಾರಿ. ಇನ್ನು ಐಸಿಎಸ್‌ಸಿ (ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಶನ್‌) ಪಠ್ಯಕ್ರಮದಲ್ಲಿ ಕಲಿಯುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು, ಡಿಪ್ಲೊಮಾ, ಐಟಿಐ ಹಾಗೂ ಆರಂಭಿಕ ಸೆಮಿಸ್ಟರ್‌ಗಳಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೂ ಈ ಪ್ರಯೋಗ ತಂತ್ರಾಂಶ ಸಾಕಷ್ಟು ಸಹಕಾರಿಯಾಗಲಿವೆ.

‘ಪ್ರಯೋಗದ ತಂತ್ರಾಂಶವನ್ನು ರಾಜ್ಯದ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಮುಟ್ಟಿಸಲು ಅಗತ್ಯ ಸೌಲಭ್ಯ ಕಲ್ಪಿಸಿದರೆ ಅವರಿಗೆ ತಂತ್ರಾಂಶವನ್ನು ಉಚಿತವಾಗಿ ನೀಡುತ್ತೇವೆ. ನಾವು ಪ್ರಗತಿ ಹೊಂದುವುದರ ಜೊತೆಗೇ ಅವಕಾಶ ವಂಚಿತರಿಗೂ ನಮ್ಮ ಉತ್ಪನ್ನದಿಂದ ಲಾಭವಾಗಬೇಕು. ನಮ್ಮ ಉದ್ದೇಶ ಹಣ ಮಾಡುವುದಷ್ಟೇ ಅಲ್ಲ’ ಎನ್ನುತ್ತಾರೆ ಐ ಲ್ಯಾಬ್‌ ಪಾಲುದಾರರು. ಸಂಪರ್ಕಕ್ಕೆ ಮೊ: 85539 12905.

ಸಿಟಿಐಇ
ಬಿವಿಬಿ ಕ್ಯಾಂಪಸ್‌ನಲ್ಲಿ ತಾಂತ್ರಿಕ ಸಂಶೋಧನೆ ಮತ್ತು ಉದ್ಯಮಶೀಲ ಕೇಂದ್ರ  (ಸೆಂಟರ್‌ ಫಾರ್‌ ಟೆಕ್ನಾಲಜಿ ಇನ್ನೋವೇಶನ್‌ ಅಂಡ್‌ ಎಂಟರ್‌ಪ್ರೀನರ್‌ಷಿಪ್‌-ಸಿಟಿಐಇ) 2012ರ ಫೆಬ್ರುವರಿಯಲ್ಲಿ ಆರಂಭಗೊಂಡಿದೆ. ಉತ್ತರ ಕರ್ನಾಟಕದಲ್ಲಿನ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಮಟ್ಟಿಗೆ ಇದು ಹೊಸತೇ ಆದ ಪರಿಕಲ್ಪನೆ.

ಮೊದಲಿಗೆ ಸಿಟಿಐಇಯಲ್ಲಿ ನಾಲ್ಕು ಕಂಪೆನಿಗಳಿದ್ದು, ಈಗ ಕೃಷಿ, ಶಿಕ್ಷಣ, ತಂತ್ರಜ್ಞಾನ, ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಒಟ್ಟು 26 ತಂತ್ರಜ್ಞಾನ ಕಂಪೆನಿಗಳು ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಯುವ ಉದ್ಯಮಿಗಳು, ವಿದೇಶಗಳಲ್ಲಿಯೂ ಕಚೇರಿ ತೆರೆಯುವ ಉತ್ಸಾಹದಲ್ಲಿದ್ದಾರೆ.

ಕಾಲೇಜು ಕ್ಯಾಂಪಸ್‌ನಲ್ಲಿಯೇ ಸಣ್ಣ ಪುಟ್ಟ ಉದ್ಯಮಗಳು ಕಾರ್ಯಾರಂಭ ಮಾಡುವುದರಿಂದ ಸಾಕಷ್ಟು ಅನುಕೂಲಗಳೂ ಇವೆ. ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಒಟ್ಟಿಗೆ ಸೇರುವ ಅವಕಾಶ ಸಿಗುತ್ತದೆ. ಇದು ಎಂಜಿನಿಯರಿಂಗ್‌ನ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೂ ಒಳ್ಳೆಯ ಅವಕಾಶ. ಇದರಿಂದ ಬಹು ಶಿಸ್ತೀಯ ಮತ್ತು ಅಂತರ ವಿಭಾಗಗಳ ಯೋಜನೆಗಳು ರೂಪುಗೊಳ್ಳುವುದರಿಂದ ಪ್ರಾಧ್ಯಾಪಕರಿಗೂ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಉದ್ಯಮ ಆರಂಭಿಸಲು ಪ್ರೇರಣೆಯೂ ದೊರೆಯುತ್ತದೆ. ಹೆಚ್ಚು ಕಂಪೆನಿಗಳು ಆರಂಭವಾದಂತೆ ಸಾಕಷ್ಟು ಮಂದಿಗೆ ಉದ್ಯೋಗವೂ ಲಭ್ಯವಾಗುತ್ತವೆ. ಸ್ಟಾರ್ಟ್‌ಅಪ್‌ಗಳಿಗೆ ಸಾಕಷ್ಟು ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ ಸಿಟಿಐಇ ಎರಡು ದಾರಿ ಕಂಡುಕೊಂಡಿದೆ.

ಮೊದಲಿಗೆ ಏಳು ಹಂತದ ಯೋಜನೆಯನ್ನು ರೂಪಿಸಿದ್ದು, ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ‘ಸ್ವಂತ ಕಂಪೆನಿ’ ಆರಂಭದ ಕನಸನ್ನು ನನಸಾಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಎರಡನೆಯದಾಗಿ, ಹೊರಗಿನವರಿಗೆ ಕ್ಯಾಂಪಸ್‌ನಲ್ಲಿ ಕಂಪೆನಿ ತೆರೆಯಲು ಅವಕಾಶ ಕಲ್ಪಿಸಿಕೊಡುವುದು. ಸ್ಟಾರ್ಟ್‌ಅಪ್‌ಗಳಿಗಾಗಿಯೇ ಮೊದಲು 15,000 ಚದರಡಿ ಜಾಗ ನೀಡಲಾಗಿತ್ತು. ಈಗ ಮತ್ತೆ 20 ಸಾವಿರ ಚದರಡಿ ಜಾಗದಲ್ಲಿ ಉತ್ತಮ ಸೌಕರ್ಯ ಕಲ್ಪಿಸಿಕೊಡಲಾಗಿದೆ.

ಶೀಘ್ರವೇ ‘ಲರ್ನಿಂಗ್‌ ಫ್ಯಾಕ್ಟರಿ’

ಕಾಲೇಜಿನ ಪ್ರತಿಭೆಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವುದು. ಆಸಕ್ತ ವಿದ್ಯಾರ್ಥಿಗಳಿಂದ ಸಂಸ್ಥೆ ಆರಂಭಿಸಿ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡುವುದು ನಮ್ಮ ಉದ್ದೇಶ. ರೂ1.5 ಕೋಟಿ ವೆಚ್ಚದಲ್ಲಿ ‘ಲರ್ನಿಂಗ್‌ ಫ್ಯಾಕ್ಟರಿ’ ನಿರ್ಮಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಹಳೆಯ ವಿದ್ಯಾರ್ಥಿಗಳು ನೀಡಿದ ರೂ1 ಕೋಟಿ ಹಣ ಬಳಸಿಕೊಂಡು 20 ಸಾವಿರ ಚದರಡಿ ಜಾಗದಲ್ಲಿ ಕಟ್ಟಡ ಕಟ್ಟಲಾಗಿದೆ. ಇಲ್ಲಿ ಯಾವುದೇ ಕಂಪೆನಿ ತಮ್ಮ ಶಾಖೆ ತೆರೆಯಲು ಬಂದರೆ ಅವರಿಗೆ ಅವಕಾಶ ನೀಡುತ್ತೇವೆ.
–  ಅಶೋಕ ಶೆಟ್ಟರ, ಪ್ರಾಂಶುಪಾಲರು
ಬಿವಿಬಿ ಎಂಜಿನಿಯರಿಂಗ್‌ ಕಾಲೇಜು

2017ಕ್ಕೆ 2 ಸಾವಿರ ಉದ್ಯೋಗ
ಸಿಟಿಐಇ ಪಾರ್ಕ್‌ನಲ್ಲಿ 26 ಕಂಪೆನಿಗಳಿಂದ 300 ಮಂದಿಗೆ ಉದ್ಯೋಗ ದೊರೆತಿದೆ. 2017ರ ವೇಳೆಗೆ 50 ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶವೂ ಇದ್ದು, ಇವುಗಳಿಂದ ಒಟ್ಟು 2000 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ.

ಮೇಕ್‌ ಇನ್‌ ಬಿವಿಬಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮೇಕ್‌ ಇನ್‌ ಇಂಡಿಯಾ’ ರೀತಿಯಲ್ಲಿಯೇ ‘ಮೇಕ್‌ ಇನ್‌ ಬಿವಿಬಿ’ ಯೋಜನೆಯನ್ನೂ ರೂಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಿಯಾಗುವ ಆಕಾಂಕ್ಷೆಯ ಬೀಜವನ್ನು ಬಿತ್ತುವ ಸಲುವಾಗಿಯೇ ಇ–ಸೆಲ್‌ ಆರಂಭಿಸಲಾಗಿದೆ. ಇಲ್ಲಿ ವರ್ಷದ ಎಲ್ಲಾ ದಿನವೂ ಉದ್ಯಮಿಗಳು, ಪರಿಣತರು, ತಂತ್ರಜ್ಞರನ್ನು ಕರೆಯಿಸಿ ಉದ್ಯಮ ಆರಂಭಿಸುವ ವರ್ಕ್‌ಶಾಪ್‌ಗಳನ್ನು ನಡೆಸಲಾಗುತ್ತದೆ.

ವಿದ್ಯಾರ್ಥಿಗಳಲ್ಲಿರುವ ವಿಭಿನ್ನ ಆಲೋಚನೆಗಳನ್ನು ಉದ್ಯಮಶೀಲ ದೃಷ್ಟಿಯಿಂದ ಪ್ರಸ್ತುತಪಡಿಸುವ ಸ್ಪರ್ಧೆ ಏರ್ಪಡಿಸಿ ನಗದು ಬಹುಮಾನ ನೀಡಲಾಗುತ್ತಿದೆ. ಹೊಸ ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತಂದು ಉತ್ಪನ್ನ ಸಿದ್ಧಪಡಿಸಿ ಗ್ರಾಹಕರಿಗೆ ತಲುಪಿಸುವ ಪ್ರಕ್ರಿಯೆಯೂ ನಡೆಯುತ್ತಿದ್ದ, ಇದನ್ನು  ಪ್ಯೂಪಾ ಎಂದು ಕರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT