ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣಗಳ ಮೇಲೂ ಉಗ್ರರ ಕೆಂಗಣ್ಣು

Last Updated 22 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಶೇರಾನ್ ಮಗ್ವಿಯರ್ ನಿರ್ದೇಶನದ ‘ಇನ್‌ಸೇನ್‌ ಡೈರಿ’ ಚಲನಚಿತ್ರ 2008ರಲ್ಲಿ ತೆರೆಕಂಡಾಗ ಜಗತ್ತಿನ ಚಲನಚಿತ್ರರಂಗ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿತ್ತು. ಕಾದಂಬರಿ ಆಧಾರಿತ  ಚಿತ್ರವದು.  ಅದರಲ್ಲಿ ಫುಟ್‌ಬಾಲ್‌ ಪಂದ್ಯದ ಮೇಲೆ ಉಗ್ರರ ದಾಳಿ ಸನ್ನಿವೇಶವಿದೆ.  ನೀವು ಆ ಚಿತ್ರವನ್ನು ನೋಡಿದ್ದರೆ, ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಫುಟ್‌ಬಾಲ್‌ ಕ್ರೀಡಾಂಗಣದ ಹೊರಗೆ ನಡೆದ ಸ್ಫೋಟದ ಸುದ್ದಿ ಬಂದಾಗ, ಆ ಚಿತ್ರದ ದೃಶ್ಯಗಳು ಸ್ಮೃತಿಪಠಲದಲ್ಲಿ ಮೂಡುತಿತ್ತು.

ಫ್ರಾನ್ಸ್‌ ಹಾಗೂ ಜರ್ಮನಿ ನಡುವಣ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯ ಹಾಗೂ ಆ ಬಳಿಕ ನಡೆದ ಸ್ಫೋಟಗಳಲ್ಲಿ ಪ್ಯಾರಿಸ್‌ನಲ್ಲಿ ಅನೇಕ ಮಂದಿ ಸತ್ತುಹೋದರು. ಇದರೊಟ್ಟಿಗೆ ಕ್ರೀಡಾಪ್ರೇಮಿಗಳ ಮನದಲ್ಲೂ ಸಂಶಯದ ಭೂತ ಎದ್ದು ಕುಳಿತಿದೆ. ದಿನಗಳು ಉರುಳಿದಂತೆ ಉಗ್ರರು ಕ್ರೀಡಾಂಗಣಗಳತ್ತಲೂ ಕೆಂಗಣ್ಣು ಬೀರುತ್ತಿರುವುದೇಕೆ ?

ಒಲಿಂಪಿಕ್ಸ್‌ನಲ್ಲೇ ಆರಂಭ...
ಇತಿಹಾಸದ ಪುಟಗಳನ್ನು ತಿರುವುತ್ತ ಹೋದರೆ, ‘ಕ್ರೀಡಾಂಗಣ ಭಯೋತ್ಪಾದನೆ’ ಎಂಬುದು ದಶಕಗಳಷ್ಟು ಹಿಂದೆಯೇ ಕಾಣಿಸಿಕೊಂಡಿತ್ತು. 1972ರಲ್ಲಿ  ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದ ಮೇಲೆ  ಪ್ಯಾಲೆಸ್ಟೇನ್  ತೀವ್ರವಾದಿಗಳು ದಾಳಿ ನಡೆಸಿದ್ದರು. ಇಸ್ರೇಲ್ ಒಲಿಂಪಿಕ್ ತಂಡದ 11 ಮಂದಿಯನ್ನು ಹತ್ಯೆಗೈದಿದ್ದರು. 1996ರಲ್ಲಿ ಅಮೆರಿಕದಲ್ಲಿ ನಡೆದ ಒಲಿಂಪಿಕ್ಸ್‌ ಕೂಟಕ್ಕೂ ಭಯೋತ್ಪಾದನಾ ದಾಳಿಯ ಕಪ್ಪುಚುಕ್ಕೆ ಅಂಟಿತ್ತು.

ಕ್ರೀಡಾಪ್ರೇಮಿಗಳು ಕೆರಳಿ ಮೈದಾನಕ್ಕಿಳಿದು ಗಲಭೆ ನಡೆಸಿದ ದುರಂತಗಳು ಫುಟ್‌ಬಾಲ್‌ನಲ್ಲಿ  ವಿಪುಲ. ಆದರೆ ಭಯೋತ್ಪಾದಕರ ದಾಳಿಯ ಆಯಾಮವೇ ಬೇರೆ. 2000ರ ನಂತರದಲ್ಲಿ ಕಾಣಿಸಿಕೊಂಡ ಇಂಥ ಕೃತ್ಯಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ನಡೆದಿವೆ. ಇತ್ತೀಚಿಗೆ ಫ್ರಾನ್ಸ್‌ನಲ್ಲಿ ನಡೆದ ದಾಳಿಯನ್ನೇ ಹೋಲುವ ಘಟನೆಗಳು ನೈಜಿರಿಯಾ, ಇರಾಕ್, ಉಕ್ರೇನ್, ಪಾಕಿಸ್ತಾನ... ಹೀಗೆ ಹಲವು ಕಡೆ ನಡೆದಿವೆ.

ಅದು 2014ರ ಜೂನ್‌ 1.  ನೈಜಿರಿಯಾದಲ್ಲಿ ರಾಷ್ಟ್ರೀಯ ತಂಡ ಹಾಗೂ ಅರ್ಜೆಂಟಿನಾ ಪೈಪೋಟಿ ನಡೆಸುತ್ತಿದ್ದವು. ಪಂದ್ಯ ನಡೆಯುತ್ತಿದ್ದಾಗಲೇ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 40 ಜನರು ಮೃತಪಟ್ಟಿದ್ದರು. 2002ರ ಮೇ ತಿಂಗಳ 1ರಂದು  ಸ್ಪೇನ್‌ನಲ್ಲಿ ಇಂಥದ್ದೆ ಮತ್ತೊಂದು ಘಟನೆ ನಡೆದಿತ್ತು. ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್‌ ತಂಡಗಳ ನಡುವಣ ಪಂದ್ಯಕ್ಕೂ ಮೊದಲು, ಸಾಂಟಿಯಾಗೊ ಬೆರ್ನಾಬ್ಯು ಫುಟ್‌ಬಾಲ್‌ ಕ್ರೀಡಾಂಗಣದ ಹೊರಗೆ ಕಾರು ಬಾಂಬ್‌ ಸ್ಫೋಟಿಸಿತ್ತು.

ಪಾಕಿಸ್ತಾನದಲ್ಲಿ 2013ರ ಆಗಸ್ಟ್‌ 07ರಂದು ಕರಾಚಿಯ ಲಯಾರಿಯಲ್ಲಿ ರಮ್ಜಾನ್‌ ಅಂಗವಾಗಿ ಫುಟ್‌ಬಾಲ್‌ ಟೂರ್ನಿ ಆಯೋಜಿಸಲಾಗಿತ್ತು. ಪಂದ್ಯದ ಬಳಿಕ  ಸ್ಫೋಟ ನಡೆದಿತ್ತು.  11 ಜನರು ಸತ್ತಿದ್ದರು. ಉಕ್ರೇನಿನ  ಡಾನ್‌ಬಾಸ್‌ ಕ್ರೀಡಾಂಗಣದಲ್ಲಿ 2014ರ ಆಗಸ್ಟ್‌ನಲ್ಲಿ ಎರಡು ಪ್ರಬಲ ಬಾಂಬ್‌ಗಳು ಸ್ಫೋಟಿಸಿದ್ದವು. ಅದು 2015ರ ಜುಲೈ 27. ಇರಾಕ್‌ನ ಪ್ರಕ್ಷುಬ್ಧ ಪೀಡಿತ ದಿಯಾಲಾ ಪ್ರಾಂತ್ಯದಲ್ಲಿರುವ ಅಬುಸೈದಾ  ಎಂಬಲ್ಲಿ   ಸ್ಥಳೀಯ ಅಮೆಚೂರ್‌ ಕಪ್‌ ಫೈನಲ್‌  ಫುಟ್‌ಬಾಲ್‌ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮೂರು ಸುಧಾರಿತ ಸ್ಫೋಟಕ ಸಾಧನಗಳು ಸ್ಫೋಟಗೊಂಡಿದ್ದವು. ನಾಲ್ವರು ಮೃತಪಟ್ಟಿದ್ದರು.

ಮೊನಾಕೊದಲ್ಲಿಯೂ ಇದೇ ಬಗೆಯ ಘಟನೆ ನಡೆದಿತ್ತು. 2004ರ ಮೇ 30ರಂದು  ಲೂಯಿಸ್‌ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬಾಂಬ್‌ ಸ್ಫೋಟಿಸಿತ್ತು. ಕ್ರೀಡಾಂಗಣ ಖಾಲಿ ಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು. 2005ರ ಅಕ್ಟೋಬರ್ 1ರಂದು ಅಮೆರಿಕದ ಒಕ್ಲಾಹಾಮ್‌ ಸ್ಮಾರಕ ಕ್ರೀಡಾಂಗಣದಲ್ಲಿ ಒಕ್ಲಾಹಾಮ್‌ ಸೂನರ್ಸ್‌ ಹಾಗೂ ಕನ್ಸಾಸ್ ಸ್ಟೇಟ್‌ ನಡುವಣ ಪಂದ್ಯ ನಡೆಯುತ್ತಿತ್ತು. ರೋಚಕ ಪಂದ್ಯದ ವೀಕ್ಷಣೆಗೆ ಸುಮಾರು  84 ಸಾವಿರ ಜನ ಸೇರಿದ್ದರು. ಈ ವೇಳೆ  ಕ್ರೀಡಾಂಗಣದಿಂದ 300 ಅಡಿಗಳಷ್ಟು ದೂರದಲ್ಲಿ ಸ್ಫೋಟ ನಡೆದಿತ್ತು.

ಫುಟ್‌ಬಾಲ್‌ಗೆ ಸೀಮಿತವಲ್ಲ...
ಇವೆಲ್ಲ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಹಾಗೂ ಅದರ ಸುತ್ತಲೂ ನಡೆದ ದಾಳಿ ಕುರಿತ ಒಂದಿಷ್ಟು ಉದಾಹರಣೆಗಳಷ್ಟೇ. ಆದರೆ, ಇಂಥ ಘಟನೆಗಳು ಕೇವಲ ಫುಟ್‌ಬಾಲ್‌ಗೆ ಸೀಮಿತವಲ್ಲ. 2009ರಲ್ಲಿ ಪಾಕ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ  ಗುಂಡಿನ ದಾಳಿ, 2015ರ ಸೆಪ್ಟೆಂಬರ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ವಾಲಿಬಾಲ್‌ ಪಂದ್ಯದ ವೇಳೆ ನಡೆದ ಸ್ಫೋಟ, ಇದಕ್ಕೂ ಮುನ್ನ, 2015ರ ಮೇ 29ರಂದು ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವಣ ಕ್ರಿಕೆಟ್  ಪಂದ್ಯದ ವೇಳೆ ಲಾಹೋರಿನ ಗಡಾಫಿ ಕ್ರೀಡಾಂಗಣದ ಬಳಿಯ  ಆತ್ಮಹತ್ಯಾ ಬಾಂಬ್‌  ದಾಳಿ... ಇವೆಲ್ಲ ಘಟನೆಗಳು  ಭಯೋತ್ಪಾದನೆಯ ದಾಳಿಯೇ ಹೌದು.

ಕ್ರೀಡಾಂಗಣದಲ್ಲಿ ಇಣುಕುತ್ತಿದೆ ಭೂತ...
ಇತ್ತೀಚಿಗೆ ಭದ್ರತೆಗೆ ಹಿಂದೆಂದೆಗಿಂತಲೂ ಹೆಚ್ಚಿನ ಒತ್ತು ಸಿಕ್ಕಿದೆ ಎಂಬುದು ದಿಟ. ಆದರೂ ಅದು ಇನ್ನಷ್ಟು ಹೆಚ್ಚಬೇಕು ಎನಿಸುತ್ತಿದೆ; ಅದಕ್ಕೆ ಕಾರಣವೂ ಇದೆ. ಪ್ಯಾರಿಸ್‌ ದಾಳಿ ನಡೆದ ನಾಲ್ಕು ದಿನಗಳ ಬಳಿಕ ಹ್ಯಾನೊವರ್‌ನಲ್ಲಿ  ಜರ್ಮನಿ ಹಾಗೂ ಹಾಲೆಂಡ್‌ ನಡುವಣ ಫುಟ್‌ಬಾಲ್‌ ಪಂದ್ಯವನ್ನು ‘ಕ್ರೀಡಾಂಗಣದ ಮೇಲೆ ಉಗ್ರರ ದಾಳಿ ಬೆದರಿಕೆ’ಯ ಕಾರಣಕ್ಕೆ ರದ್ದುಗೊಳಿಸಲಾಯಿತು.

ಇದು ಒಂದರ್ಥದಲ್ಲಿ ಸುರಕ್ಷತಾ ಕ್ರಮ, ರಕ್ಷಣಾತ್ಮಕ ನಡೆ  ಎನಿಸಿದರೂ, ಸುರಕ್ಷತೆಯ ಬುಡದಡಿಯ ಕಂಪನದ ಎಳೆಯಾಗಿಯೂ ಗೋಚರಿಸುತ್ತದೆ. ಹೊಸ ಮಗ್ಗಲುಗಳಲ್ಲಿ ತೆರೆದು ವಿಸ್ತರಿಸಿಕೊಳ್ಳುತ್ತಿರುವ ಭಯೋತ್ಪಾದನೆ ಎಂಬ ‘ಭೂತ’, ಸಂತೆ–ಮಾರುಕಟ್ಟೆ–ಶಾಪಿಂಗ್ ಮಾಲ್‌ಗಳಿಂದ ಇದೀಗ ಕ್ರೀಡಾಂಗಣದತ್ತ ಇಣುಕುತ್ತಿರುವಂತೆ ಭಾಸವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT