ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳಿಗೆ ಕ್ರೀಡಾಂಗಣವೇ ದೂರ

ಬೆಳಗಾವಿ ಕ್ರೀಡಾ ಹಾಸ್ಟೆಲ್‌ ಕಥೆ–ವ್ಯಥೆ
Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ಕುಸ್ತಿ, ಜೂಡೊ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳು, ವಾಲಿಬಾಲ್‌ ಮತ್ತು ಅಥ್ಲೆಟಿಕ್ಸ್‌ ವಿಭಾಗದಲ್ಲಿ ಜಿಲ್ಲೆಯ ಕಿರಿಯ ವಿದ್ಯಾರ್ಥಿಗಳು ಪ್ರವೇಶ ಪಡೆದು ತರಬೇತಿ ಹೊಂದುತ್ತಿರುವ ಬೆಳಗಾವಿಯ ಕ್ರೀಡಾ ಹಾಸ್ಟೆಲ್‌ ರಾಜ್ಯದಲ್ಲೇ ಅತಿ ಹೆಚ್ಚು ಸಂಖ್ಯೆಯ ಕ್ರೀಡಾ ವಿದ್ಯಾರ್ಥಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆದರೆ, ಮುಕ್ಕಾಲು ಕಿಲೋ ಮೀಟರ್‌ ದೂರದಲ್ಲಿ ಜಿಲ್ಲಾ ಕ್ರೀಡಾಂಗಣ ಇರುವುದರಿಂದ ಅಷ್ಟು ದೂರ ನಡೆದುಕೊಂಡೇ ಹೋಗುವುದು ಇಲ್ಲಿರುವ ಅಂದಾಜು 145 ಯುವ ಕ್ರೀಡಾಪಟುಗಳ ಸಮಸ್ಯೆಗಳಲ್ಲಿ ಒಂದಾಗಿದೆ. ನಿತ್ಯ ಬೆಳಿಗ್ಗೆ 5 ಗಂಟೆಗೇ ತರಬೇತಿ ಆರಂಭ ಆಗುವುದರಿಂದ ಸೂರ್ಯ ಮೂಡುವ ಮೊದಲೇ ಕ್ರೀಡಾಂಗಣ ತಲುಪಬೇಕಿರುವ ವಿದ್ಯಾರ್ಥಿಗಳು ಅಲ್ಲಿಗೆ ತೆರಳಲು ವಾಹನ ವ್ಯವಸ್ಥೆಯೂ ಇಲ್ಲದ್ದರಿಂದ ಕತ್ತಲಲ್ಲಿ ಹೆಜ್ಜೆ ಹಾಕುತ್ತ ಭದ್ರತೆಯ ಕೊರತೆ ಎದುರಿಸುತ್ತಿದ್ದಾರೆ.

ದಶಕಗಳ ಹಿಂದೆ ನಗರದ ಹೃದಯ ಭಾಗದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಕೆಎಲ್‌ಇ ಸಂಸ್ಥೆಯಿಂದ ಸರ್ಕಾರ 50 ವರ್ಷಗಳ ಅವಧಿಯ ಗುತ್ತಿಗೆ ಆಧಾರದಲ್ಲಿ ಜಾಗ ಪಡೆದಿದ್ದು, 2026ಕ್ಕೆ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಬೆಳಗಾವಿಯಿಂದ 12 ಕಿ.ಮೀ ದೂರ ದಲ್ಲಿರುವ ಕಡೋಲಿ ಗ್ರಾಮದ ಬಳಿ 12.50 ಎಕರೆ ಜಾಗೆಯನ್ನು ಹೊಸ ಕ್ರೀಡಾಂಗಣಕ್ಕೆ ಮೀಸಲಿರಿಸಲಾಗಿದ್ದು, ಒಂದೊಮ್ಮೆ ಜಿಲ್ಲಾ ಕ್ರೀಡಾಂಗಣ ಅಲ್ಲೇ ನಿರ್ಮಾಣ ವಾದರೆ ಕ್ರೀಡಾ ಹಾಸ್ಟೆಲ್‌ನ ಆಟಗಾರರಿಗೆ ಆಟದ ಮೈದಾನ ಮತ್ತಷ್ಟು ದೂರವಾಗಲಿದೆ.

ಹಾಸ್ಟೆಲ್‌ ಪಕ್ಕದಲ್ಲೇ ಕುಸ್ತಿ ಅಭ್ಯಾಸ ಮತ್ತು ತರಬೇತಿಗಾಗಿ ಗೋದಾಮಿನಂತಹ ದೊಡ್ಡ ದೊಂದು ಹಾಲ್‌ ನಿರ್ಮಿಸಲಾಗಿದ್ದು, ಅಲ್ಲಿಗೆ ಹೋಗಲು 100 ಹೆಜ್ಜೆ ಕ್ರಮಿಸಬೇಕು. ಆದರೆ, ಅದಕ್ಕೂ ಸೂಕ್ತ ದಾರಿ ಯನ್ನೂ ನಿರ್ಮಿಸಲಾಗಿಲ್ಲ. ಅದರ ಪ್ರವೇಶ ದ್ವಾರದ ಎದುರು ದೊಡ್ಡದಾದ ಕಂದಕ ಇದ್ದು ಸುರಕ್ಷತೆಯೇ ಇಲ್ಲ.

ಭದ್ರತೆಯ ದೃಷ್ಟಿಯಿಂದ ಊಟದ ಕೊಠಡಿ, ಪ್ರವೇಶ ದ್ವಾರ, ಹಜಾರಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಊಟ, ತಿಂಡಿ, ಸಮರ್ಪಕ ಕೊಠಡಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

****
ಒಂದೆಡೆಯೇ ಅಭ್ಯಾಸ

ಬೆಳಗಾವಿಯ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಕ್ರೀಡಾ ಹಾಸ್ಟೆಲ್‌ನ ಸುಸಜ್ಜಿತ ಸ್ವಂತ ಕಟ್ಟಡವಿದೆ. ಆದರೆ, ನೆಲ

ಮಹಡಿಯಲ್ಲಿ ಬಾಲಕರು, ಮೊದಲ ಮಹಡಿಯಲ್ಲಿ ಬಾಲಕಿಯರಿಗೆ ಅವಕಾಶ ಕಲ್ಪಿಸಿರುವುದು, ಅನೇಕ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಈ ಹಾಸ್ಟೆಲ್‌ಗೆ ಸೇರಿಸಲು ಮುಜುಗರ ಪಡುವಂತಾಗಿದೆ.

ಬೇರೆ ಕಡೆಗಳಲ್ಲಿ ಬಾಲಕರಿಗೂ, ಬಾಲಕಿಯರಿಗೂ ಪ್ರತ್ಯೇಕ ಹಾಸ್ಟೆಲ್‌ಗಳಿವೆ. ಇಲ್ಲಿ ಮಾತ್ರ ಒಂದೇ ಕಟ್ಟಡದಲ್ಲಿ ನಡೆಯುತ್ತಿದೆ. ಅನೇಕ ಪಾಲಕರು ಈ ವ್ಯವಸ್ಥೆ ಕಂಡು ತಮ್ಮ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಪ್ರವೇಶ ದೊರೆತರೂ ಅಲ್ಲಿಗೆ ಕಳುಹಿಸಲು ನಿರಾಸಕ್ತಿ ತಾಳುತ್ತಿದ್ದಾರೆ.

ಐದರಿಂದ ಏಳನೇ ತರಗತಿ ಓದುವ ಸಬ್‌ ಜೂನಿಯರ್‌ ವಿಭಾಗದ ಹುಡುಗ, ಹುಡುಗಿಯರು ಜಿಲ್ಲೆಯವರೇ ಆಗಿದ್ದಾರೆ.  ಆಗಿಂದಾಗ್ಗೆ ಅವರ ಪೋಷಕರೂ ಬಂದು ಆ ಪುಟ್ಟ ಮಕ್ಕಳನ್ನು ಮಾತನಾಡಿಸಿಕೊಂಡು ಹೋಗು ತ್ತಿರುತ್ತಾರೆ. ಆದರೆ, ಜೂನಿಯರ್‌ ಹಾಗೂ ಸೀನಿಯರ್‌ ವಿಭಾಗದಲ್ಲಿ ಹದಿ ಹರೆಯದ ವಿದ್ಯಾರ್ಥಿಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಪಿಯುಸಿ ಮತ್ತು ಪದವಿ ಹಂತದ ಯುವತಿಯರು, ಯುವಕರು ಇಲ್ಲಿ ತರಬೇತಿ ನಿರತರಾಗಿದ್ದಾರೆ.

ಇದುವರೆಗೆ ಯಾವುದೇ ರೀತಿಯ ದುರ್ಘಟನೆಗಳು, ಪ್ರಕರಣಗಳು  ನಡೆದಿಲ್ಲವಾದರೂ ಹದಿ ಹರೆಯದ ಯುವಕ, ಯುವತಿಯರಿಗೆ ಒಂದೇ ಕಡೆ ವಸತಿ ವ್ಯವಸ್ಥೆ ಕಲ್ಪಿಸುವುದರಿಂದ ಸಿಬ್ಬಂದಿ ವಿಶೇಷ ಗಮನ ಹರಿಸಬೇಕಾಗಿದೆ. ಅಲ್ಲದೆ, ಈ ರೀತಿಯ ವ್ಯವಸ್ಥೆ ಕ್ರೀಡಾಪಟುಗಳ ಸಾಧನೆಗೆ ಸ್ವಲ್ಪ ಮಟ್ಟಿಗೆ ಅಡ್ಡಿಯಂತೂ ಆಗುತ್ತದೆ ಎಂದು ವಸತಿ ನಿಲಯದ ಸಿಬ್ಬಂದಿ ಹಾಗೂ ತರಬೇತುದಾರರೇ ಹೇಳುತ್ತಾರೆ.

ಕೇಂದ್ರ ಸರ್ಕಾರದ ₨ 9.90 ಕೋಟಿ ಅನುದಾನದ ನೆರವಿನಿನೊಂದಿಗೆ ವಸತಿ ಶಾಲೆಯ ಹಿಂಭಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಕಳೆದ ವರ್ಷ ಅಡಿಗಲ್ಲು ಹಾಕಲಾಗಿದ್ದು, ಅಲ್ಲೇ ಬಾಲಕಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲು ಕಟ್ಟಡ ನಿರ್ಮಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ಹೇಳುತ್ತಾರಾದರೂ ಒಳಾಂಗಣ ಕ್ರೀಡಾಂಗಣದದಲ್ಲೇ ವಸತಿ ಸೌಲಭ್ಯಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡುವ  ಕುರಿತು ನೀಲನಕ್ಷೆ ಸಿದ್ಧಪಡಿಸಲಾಗಿಲ್ಲ!

–ಸಿದ್ದಯ್ಯ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT