ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’

ಅಕ್ಷರ ಗಾತ್ರ

ಖಗೋಳ ವಿಜ್ಞಾನವು (astronomy) ಅತ್ಯಂತ ಕುತೂಹಲಕರ ಹಾಗೂ  ಕೌತುಕಮಯ ವಿಷಯ. ಅನಾದಿಕಾಲದಿಂದಲೂ  ಮಾನವ ಆಕಾಶಕಾಯಗಳ ಬಗ್ಗೆ ಸಂಶೋಧನೆ  ಮಾಡುತ್ತಲೇ ಬಂದಿದ್ದಾನೆ. ಇವನ ತಾಳ್ಮೆ, ಸಹನೆ ಹಾಗೂ ಪ್ರಯತ್ನಕ್ಕೆ ಒಳ್ಳೆಯ ಫಲವೂ ಸಿಕ್ಕಿದೆ. ಖಗೋಳ ವಿಜ್ಞಾನಿಗಳಾದ ಮವರಾಹಾ ಮಿಹಿರ, ಆರ್ಯಭಟ,  ಬ್ರಹ್ಮಗುಪ್ತ, ನಿಕೊಲಾಸ್‌ ಕೋಪರ್‌ನಿಕಸ್‌, ಯೊಹಾನೆಸ್‌ ಕೆಪ್ಲರ್‌ ಗೆಲಿಲಿಯೊ  ಗೆಲಿಲಿ, ಸರ್‌ ಐಸಾಕ್‌ ನ್ಯೂಟನ್‌, ಎಡ್ಮಂಡ್‌ ಹ್ಯಾಲಿ, ಟೈಕೋ ಬ್ರಾಹೆ  ಮತ್ತಿತರರು ಮಾಡಿರುವ ಸಾಧನೆಗಳು ನಿಜಕ್ಕೂ ಶ್ಲಾಘನೀಯ.

ಇವರೆಲ್ಲರ ಪರಿಶ್ರಮದಿಂದಾಗಿ ಪ್ರತಿಯೊಂದು ಆಕಾಶಕಾಯಗಳ ಬಗ್ಗೆ ಅನೇಕ ಮಾಹಿತಿಗಳು ಬಹಳ ಸುಲಭವಾಗಿ ದೊರಕುತ್ತದೆ. ಬಹುತೇಕರಿಗೆ ಆಕಾಶಕಾಯಗಳಾದ ನಕ್ಷತ್ರ, ಗ್ರಹ, ಉಲ್ಕೆ, ಧೂಮಕೇತು, ಕ್ಷುದ್ರಗ್ರಹಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಬಹಳ ಆಸೆ ಇರುತ್ತದೆ. ಇದಲ್ಲದೆ, ಪ್ರಮುಖ ಖಗೋಳ ಘಟನೆಗಳಾದ ಗ್ರಹಣ, ಸಂಕ್ರಮಣ ಹಾಗೂ ಗ್ರಹಗಳ ಸಂಯೋಜನೆ ಅತ್ಯಂತ  ವಿಸ್ಮಯಕಾರಿಯಾದ ವಿದ್ಯಮಾನ.

ಈ ರೀತಿಯ  ಅದ್ಭುತಗಳಲ್ಲಿ, ಮೇ 9ರಂದು  ವಿಶಿಷ್ಟ ಖಗೋಳ ಘಟನೆಯೊಂದು ಸಂಭವಿಸಲಿದೆ. ಸಂಜೆಯ ವೇಳೆಯಲ್ಲಿ  ‘ಬುಧ’  ಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಈ ಒಂದು ಅಪೂರ್ವ ಘಟನೆಯ ಹೆಸರು ‘ಬುಧ ಸಂಕ್ರಮಣ’ (transit of Mercury). ಇದು ಈ ವರ್ಷದ ಅತ್ಯಂತ, ರೋಮಾಂಚಕಾರಿ  ಘಟನೆಯೆಂದರೆ ತಪ್ಪಾಗಲಾರದು. ಬುಧ ಗ್ರಹವು ಸೂರ್ಯನ ಮುಂದೆ ಹಾದು ಹೋಗುವ ದೃಶ್ಯ ನಿಜಕ್ಕೂ ಕುತೂಹಲಕಾರಿ!

2004 ಹಾಗೂ 2012 ರಲ್ಲಿ ಸಂಭವಿಸಿದ ‘ಶಕ್ರ ಸಂಕ್ರಮಣ’ (transit of  Venus) ಎಲ್ಲರಿಗೂ ಜ್ಞಾಪಕವಿರಲೇಬೇಕು. ಶುಕ್ರ ಗ್ರಹವು ಸೂರ್ಯನ ಮುಂದೆ ಹಾದು ಹೋಗಿ, ಒಂದು ಕಪ್ಪು ಚುಕ್ಕೆಯಂತೆ ಕಂಡದ್ದು ಅವಿಸ್ಮರಣೀಯ. ಇದೇ ರೀತಿ ಮೇ 9 ರಂದು ಬುಧ ಗ್ರಹವು ಕಪ್ಪು ಚುಕ್ಕಿಯಂತೆ ಕಾಣಲಿದೆ.

ಸೌರಮಂಡಲದಲನ ಗ್ರಹಗಳ ಹೆಸರುಗಳು ಗೊತ್ತಿದ್ದರೂ, ಲಕ್ಷಾಂತರ ಗ್ರಹ ಹಾಗೂ ಉಪಗ್ರಹಗಳಿರುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಸೂರ್ಯನಿಗೆ ಬಹಳ ಸಮೀಪದಲ್ಲಿರುವ ಗ್ರಹವೆಂದರೆ ‘ಬುಧ’. ಸೂರ್ಯನ ಆಪ್ತಮಿತ್ರನೆಂದರೂ ತಪ್ಪಾಗಲಾರದು. ಇದರ  ರಚನೆ ವಿಶಿಷ್ಟ ಮತ್ತು  ನಿಗೂಢವಾಗಿಯೂ ಇದೆ. ಇದರ ಚಲನ–ವಲನ ಸ್ಪಷ್ಟವಾಗಿದ್ದರೂ, ಇದು ಬರಿ  ಕಣ್ಣಿಗೆ ಕಾಣುವುದು ಬಹಳ ಕಷ್ಟ.

ಕಂದು ಬಣ್ಣಹೊಂದಿದ್ದು, ಭೂಮಿಗೆ ಹೋಲಿಸಿದರೆ ಇದರ ಗಾತ್ರ ಚಿಕ್ಕದು. ‘ಮೆಸೆಂಜರ್‌’ ಉಪಗ್ರಹವು ಇದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಇದರ ರಚನೆ, ಚಲನವಲನ, ಆವರ್ತನಾ ಹಾಗೂ ಪರಿಭ್ರಮಣೆಯ ಅವಧಿ, ಕಕ್ಷಾವೇಗ, ಉಷ್ಣಾಂಶ, ಬಣ್ಣ, ಕೋನ ಹಾಗೂ ಗಾತ್ರಗಳ ಬಗ್ಗೆ ಖಚಿತ ಮಾಹಿತಿ ದೊರಕಿದೆ. 

ವಿಶ್ವದ ಹುಟ್ಟು ನಿಗೂಢವಾಗಿರುವಾಗ, ಇನ್ನು  ಗ್ರಹಗಳು, ಧೂಮಕೇತುಗಳ ಉಗಮ ಊಹಿಸಲೂ ಸಾಧ್ಯವಿಲ್ಲ. ಗ್ರಹಗಳ ಬಗ್ಗೆ ತೀವ್ರವಾದ ಸಂಶೋಧನೆ ಹಾಗೂ ಅನ್ವೇಷಣೆ ಪ್ರಾರಂಭವಾಗಿ  ಸಾವಿರಾರು ವರ್ಷಗಳೇ ಕಳೆದಿವೆ. ಆದರೆ ನಿರ್ದಿಷ್ಟವಾದ ಮಾಹಿತಿಗಳು ದೊರಕಲು ಪ್ರಾರಂಭವಾಗಿದ್ದು ವರಾಹಾ ಮಿಹಿರ ಹಾಗೂ ಆರ್ಯಭಟರ ಕಾಲದಲ್ಲಿ.

ಗಣಿತ ಲೆಕ್ಕಾಚಾರದ ಪ್ರಕಾರ ಗ್ರಹಗಳ ಪಥ, ಚಲನ–ವಲನ, ಕಕ್ಷೆ ಹಾಗೂ ಇನ್ನಿತರ ವಿವರಗಳನ್ನು   ಇವರು ನೀಡಿದ್ದಾರೆ.     ಸರ್‌ ಐಸ್ಯಾಕ್‌ ನ್ಯೂಟನ್‌, ಗೆಲಿಲಿಯೊ ಗೆಲಿಲಿ, ಯೊಹಾನೆಸ್‌ ಕೆಪ್ಲರ್‌, ಟೈಕೊ ಬ್ರಾಹೆ ಇವರುಗಳು ಸಹ  ಅನೇಕ ಗಣನೀಯ ಸಾಧನೆಗಳನ್ನು ಮಾಡಿದ್ದಾರೆ. ಇವರುಗಳಲ್ಲದೇ, ಹಲವಾರು ಖಗೋಳ ವಿಜ್ಞಾನಿಗಳು ಗ್ರಹಗಳ ಬಗ್ಗೆ, ಧೂಮಕೇತು, ಗ್ರಹಣ, ಸಂಕ್ರಮಣಗಳ ವಿಚಾರವಾಗಿ ಸಂಶೋಧನೆ ನಡೆಸಿದ್ದಾರೆ.

ಸಂಕ್ರಮಣ:ಇತಿಹಾಸ
‘ಸಂಕ್ರಮಣ’ ಎಂದರೆ ಅನೇಕರಿಗೆ  ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಪ್ರಮುಖ ಗ್ರಹಗಳಾದ ಬುಧ ಹಾಗೂ ಶುಕ್ರ, ಸೂರ್ಯನ ಮುಂದೆ ಹಾದು ಹೋಗುವುದು ವಾಡಿಕೆ.   ಸಂಕ್ರಮಣ ಹಾಗೂ ಗ್ರಹಣಗಳಲ್ಲಿ ವ್ಯತ್ಯಾಸ ಇದೆ.  ಸಂಕ್ರಮಣವು ಗ್ರಹಣಕ್ಕಿಂತಲೂ ಕುತೂಹಲಕಾರಿ. ಸೂರ್ಯನ ಮುಂದೆ ಗ್ರಹಗಳಾದ ‘ಬುಧ’ ಹಾಗೂ‘ಶುಕ್ರ’ ಹಾದು ಹೋದರೆ, ಈ ಪ್ರಕ್ರಿಯೆಯೇ ‘ಸಂಕ್ರಮಣ.’ 

ಖಗೋಳ ವಿಜ್ಞಾನಿಗಳು ಸಂಕ್ರಮಣಗಳ ಬಗ್ಗೆ ಸುಧೀರ್ಘ ಆಲೋಚನೆ ಮಾಡಲು ಪ್ರಾರಂಭಿಸಿದ್ದು 1631 ರಲ್ಲಿ. ನವೆಂಬರ್ 7, 1631 ರಂದು ಖಗೋಳ ತಜ್ಞ ಪಿಯರಿ ಗೆಸೆಂಡಿ (1592–1655) ಮೊಟ್ಟಮೊದಲ ಬಾರಿಗೆ ಬುಧ ಸಂಕ್ರಮಣದ ಬಗ್ಗೆ ಅನ್ವೇಷಣೆ ಮಾಡಿದ. 1639 ರಲ್ಲಿ ಜೆರಿಮಿಯಾ ಹೊರೊಕ್‌್ಸ ಶುಕ್ರ ಸಂಕ್ರಮಣವನ್ನು ಮೊಟ್ಟಮೊದಲಿಗೆ ವೀಕ್ಷಿಸಿದ. ಇವರುಗಳ ಜೊತೆಗೆ ಎಡ್ಮಂಡ್‌ ಹ್ಯಾಲಿ ಹಾಗೂ ಯೊಹಾನೆಸ್‌ ಕೆಪ್ಲರ್‌ ಕೈ ಜೋಡಿಸಿದರು. ಅಂದಿನಿಂದ ಇಂದಿನವರೆಗೂ, ಬುಧ ಮತ್ತು ಶುಕ್ರ ಸಂಕ್ರಮಣಗಳ ಬಗ್ಗೆ ವೀಕ್ಷಣೆ ನಡೆಯುತ್ತಲೇ ಬಂದಿದೆ. 

ಖಗೋಳ ಶಾಸ್ತ್ರಜ್ಞರ ಪ್ರಕಾರ ‘ಬುಧ ಸಂಕ್ರಮಣ’ವು 7, 13 ಹಾಗೂ 33 ವರ್ಷಗಳಿಗೊಮ್ಮೆ ಮತ್ತು ಶುಕ್ರ ಸಂಕ್ರಮಣವು 8 ಹಾಗೂ 121 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

ಒಂದು ಶತಮಾನದಲ್ಲಿ ಬುಧ ಸಂಕ್ರಮಣವು 13 ರಿಂದ 14 ಸಲ ಸಂಭವಿಸುತ್ತದೆ. ಬುಧ ಸಂಕ್ರಮಣವು ಕಳೆದ ಬಾರಿ 2006 ರಲ್ಲಿ ಸಂಭವಿಸಿತ್ತು. 

ಬುಧ ಸಂಕ್ರಮಣ
ಬುಧ ಗ್ರಹವು ಸೂರ್ಯನಿಗಿರುವ ಅತ್ಯಂತ ಸಮೀಪ ಗ್ರಹ. ಇದರ ವ್ಯಾಸ 4,848 ಕಿ.ಮೀ. ಹಾಗೂ ಸೂರ್ಯನಿಂದ ಇದರ ಅಂತರ  80 ದಶಲಕ್ಷ ಕಿ.ಮೀ. ಮೇ 9 ರಂದು ಹಲವಾರು ದೇಶಗಳಲ್ಲಿ ಈ ಅದ್ಭುತ ಖಗೋಳ ಘಟನೆ ಸಂಭವಿಸಲಿದೆ. ಸಂಪೂರ್ಣ ಸಂಕ್ರಮಣವು ಅಮೆರಿಕ, ಆಫ್ರಿಕಾ, ಗ್ರೀನ್‌ ಲ್ಯಾಂಡ್‌, ಫೆಸಿಪಿಕ್‌ ಮತ್ತು ಅಟ್ಲಾಂಟಿಕ್‌ ಮಹಾಸಾಗರಗಳ ಸಮೀಪ ಗೋಚರಿಸಲಿದೆ.

ಆದರೆ ಭಾರತದ ಎಲ್ಲಾ ಭಾಗಗಳಲ್ಲಿ ಸಂಕ್ರಮಣದ ಪ್ರಾರಂಭಿಕ ಹಂತವು ಮಾತ್ರ ಗೋಚರಿಸುತ್ತದೆ. ಅಂತ್ಯದ ಭಾಗ ಗೋಚರಿಸಲು ಅಸಾಧ್ಯ ಏಕೆಂದರೆ, ಬೇರೆ ದೇಶಗಳಲ್ಲಿ ಘಟನೆ ಸಂಭವಿಸುತ್ತಿರುವಾಗಲೇ ಭಾರತದಲ್ಲಿ ಸೂರ್ಯಾಸ್ತವಾಗಿರುತ್ತದೆ.

ಮೇ 9 ರಂದು ಭಾರತದ ಎಲ್ಲಾ ಭಾಗಗಳಲ್ಲಿ ಬುಧ ಸಂಕ್ರಮಣದ ಪ್ರಾರಂಭಿಕ ಘಟ್ಟವನ್ನು ಮಾತ್ರ ವೀಕ್ಷಿಸಬಹುದು.  ಬುಧ ಸಂಕ್ರಮಣವು ಅಂದು ಸಂಜೆ 4 ಗಂಟೆ 42 ನಿಮಿಷಕ್ಕೆ ಸೂರ್ಯನ ಮುಂದೆ ಕಪ್ಪು ಚುಕ್ಕೆಯಂತೆ ಗೋಚರಿಸುತ್ತದೆ. ಆದರೆ, ಮಧ್ಯದ ಹಾಗೂ ಕೊನೆಯ ಭಾಗಗಳು ವೀಕ್ಷಿಸಲು ಅಸಾಧ್ಯ.   ಸಂಜೆ  ಸುಮಾರು ಒಂದು ಮುಕ್ಕಾಲು ಗಂಟೆ ವೀಕ್ಷಿಸಬಹುದು. ಸಂಜೆ  6:40 ಸಂಜೆ ಹೊತ್ತಿಗೆ ಸೂರ್ಯಾಸ್ತವಾಗುತ್ತದೆ.  ಸಂಕ್ರಮಣವು ಸಂಭ್ರಮಿಸುತ್ತಿದ್ದಾಗ ಸೂರ್ಯನ ಪ್ರಖರತೆ ಮತ್ತು ತೀರ್ವತೆ ಸಹಜವಾಗಿರುತ್ತದೆ.

ವೀಕ್ಷಿಸುವ ಪರಿ
ಬುಧ ಸಂಕ್ರಮಣವನ್ನು ವೀಕ್ಷಿಸುವ ಪರಿ ಹೇಗೆ? ವೀಕ್ಷಿಸಿದರೆ ಗಂಡಾಂತರ ಕಾದಿದೆಯೆ  ಎಂದೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಕ್ರಮಣವನ್ನು ನೇರವಾಗಿ ವೀಕ್ಷಿಸಿದರೆ ಬುಧ ಗ್ರಹವು ಗೋಚರಿಸುವುದಿಲ್ಲ ಹಾಗೂ ಅಕ್ಷಿಪಲ್ಲಟಕ್ಕೆ ಸ್ವಲ್ಪ ಊನ ಉಂಟಾಗಬಹುದು. 

ಸೌರ ಕನ್ನಡಕ ಇಲ್ಲವೆ ಸೋಲಾರ್‌ ಫಿಲ್ಟರ್ (solar  filter)  ಬಳಸಿ ದೂರದರ್ಶಕದ ಮೂಲಕ ವೀಕ್ಷಿಸುವುದೇ ಲೇಸು. ಸೂರ್ಯ ಮತ್ತು ಬುಧ ಗ್ರಹವು ಅಂಟಿಕೊಂಡಿವೆ ಏನೊ ಎಂಬಂತೆ ಭಾಸವಾಗುತ್ತದೆ. ಸೌರ ಕನ್ನಡಕಗಳೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಈ ಘಟನೆ ವೀಕ್ಷಿಸಿದರೆ ಯಾವ ಗಂಡಾಂತರವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT