ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತ್ರಿ ಕಾಮಗಾರಿ ಕೃಷಿ, ತೋಟಗಾರಿಕೆಗೆ ಮೀಸಲಿಡಿ

ಸಮಾಲೋಚನ ಸಭೆಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ
Last Updated 29 ಜೂನ್ 2016, 7:45 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರೈತರಿಗಾಗಿ ನೀಡುವ ಸಬ್ಸಿಡಿ ಬೇರೆ ದಾರಿಯಲ್ಲಿ ಸಾಗುತ್ತಿದ್ದು, ಇಂಥ ಸಬ್ಸಿಡಿ ಹಣವನ್ನು ಸರ್ಕಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದರೆ ಮಾರುಕಟ್ಟೆಯಲ್ಲೇ ತಮಗೆ ಬೇಕಾದ ಕೃಷಿ ಪರಕರಗಳನ್ನು ಕೊಂಡುಕೊಳ್ಳುತ್ತಾರೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ ಆಗ್ರಹಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ) ಆಯೋಜಿಸಿದ್ದ ‘ಸರ್ಕಾರದ ಯೋಜನೆಗಳ ಸದ್ಬಳಕೆಗಾಗಿ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳು ತಳಮಟ್ಟದ ಫಲಾನುಭವಿಗಳಿಗೆ ತಲುಪುವ ಹೊತ್ತಿಗೆ ‘ಮಣ್ಣು ಜರಡಿ ಹಿಡಿದ’ ಪರಿಸ್ಥಿತಿ ಇರುತ್ತದೆ. ಇನ್ನು ಸಬ್ಸಿಡಿಗಳು ದಾರಿ ಬದಲಿಸಿರುತ್ತವೆ.ಉಪಕರಣವೊಂದಕ್ಕೆ ಸರ್ಕಾರ ಸಬ್ಸಿಡಿ ನೀಡಿದಾಗ ಸಿಗುವ ಬೆಲೆಯಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಉಪಕರಣವನ್ನು ಖರೀದಿಸಬಹುದು. ಸಬ್ಸಿಡಿಯನ್ನು ರೈತರ ಖಾತೆಗೆ ಜಮಾ ಮಾಡಿದರೆ, ಮಾರುಕಟ್ಟೆಯಲ್ಲಿ ರೈತರು ತಮಗೆ ಬೇಕಾದ ಉಪಕರಣ ಖರೀದಿಸಬಹುದು’ ಎಂದು ಹೇಳಿದರು.

‘ನರೇಗಾದಂತಹ ಯೋಜನೆ ರೂಪಿಸಿರುವುದೇ  ಸಮುದಾಯದ ಅಭಿವೃದ್ಧಿಗಾಗಿ. ಈ ಯೋಜನೆಯಡಿ ಶೇ 50ರಷ್ಟು ಕಾಮಗಾರಿಯನ್ನು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಮೀಸಲಿಟ್ಟರೆ ಇವತ್ತಿನ ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ’ ಎಂದರು.

‘ಕಳೆದ ಸಾಲಿನಲ್ಲಿ ಅಡಿಕೆ, ತೆಂಗಿ(ಕೊಬ್ಬರಿ)ಗೆ ಉತ್ತಮ ಬೆಲೆ ಸಿಕ್ಕಿತು. ಕಾರ್ಮಿಕರ ಕೂಲಿ ಹೆಚ್ಚಿಸಿದರೂ ಕೆಲಸಗಾರರ ಕೊರತೆಯೂ ಹೆಚ್ಚಾಯಿತು. ಈಗ ಅಡಿಕೆ, ತೆಂಗು ಬೆಲೆ ಕುಸಿದಿದೆ. ಆದರೆ, ಕಾರ್ಮಿಕರ ಕೂಲಿ ತಗ್ಗಿಲ್ಲ. ಇವತ್ತು ಕೃಷಿಕರಿಗಿಂತ ಕಾರ್ಮಿಕರಿಗೆ ತಮ್ಮ ಆದಾಯದ ಖಾತ್ರಿ ಇದೆ. ಈ ವರ್ಷ ಬಿತ್ತಿದರೆ, ಬೆಳೆ ಬಂದು ಮಾರುಕಟ್ಟೆಗೆ ಹೋಗಿ, ಬೆಳೆ ಮಾರಾಟವಾದರೆ ಕೃಷಿಕರಿಗೆ ಲಾಭ’ ಎಂದು ವಿಶ್ಲೇಷಿಸಿದರು.

‘ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಹಳ್ಳಿಗಳನ್ನು ತಲುಪಿದ್ದರೆ, ರೈತರು ತಮ್ಮ ಮಕ್ಕಳನ್ನು ಹಳ್ಳಿ ಬಿಟ್ಟು ಹೋಗಿ ಎಂದು ಹೇಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈ ಸ್ವಯಂ ಸೇವಾ ಸಂಸ್ಥೆಯವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ‘ಕಟ್ಟಕಡೆಯ ಮನುಷ್ಯನಿಗೂ ಸೌಲಭ್ಯಗಳು ತಲುಪಿ, ಅವನ ಬದುಕು ಸುಸ್ಥಿರವಾಗಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತದೆ. ಆ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳನ್ನು ತಲುಪದಿದ್ದರೆ, ಸರ್ಕಾರದ ಉದ್ದೇಶ ಈಡೇರುವುದಿಲ್ಲ’ ಎಂದು ತಿಳಿಸಿದರು.

‘ದನಿ ವಂಚಿತರಿಗೆ, ಅನಕ್ಷರಸ್ಥ ಸಮುದಾಯಕ್ಕೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಇಂಥ ಕಾರ್ಯಕ್ರಮ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ, ‘ಡಿ.ನಂಜುಂಡಪ್ಪ ವರದಿ ಅನ್ವಯ ಗುರುತಿಸಿರುವ ಬೀದರ್, ಕಲಬುರ್ಗಿ, ರಾಯಚೂರು, ದಾವಣಗೆರೆ, ಚಿತ್ರದುರ್ಗದಂತಹ ಹಿಂದುಳಿದ ಜಿಲ್ಲೆಗಳಲ್ಲಿ 100 ಗ್ರಾಮಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

ಆರೋಗ್ಯ, ಶಿಕ್ಷಣ, ಉದ್ಯೋಗ ಖಾತ್ರಿ, ಕುಡಿಯುವ ನೀರು, ಸ್ವಚ್ಛತೆ ಮತ್ತು ಶೌಚಾಲಯದ ಮಹತ್ವ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ  ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ತೇಕಲವಟ್ಟಿ ಗ್ರಾ.ಪಂ. ಅಧ್ಯಕ್ಷೆ , ಉಪಾಧ್ಯಕ್ಷೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಸುಧಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್‌ವೈಸರ್ ರುಕ್ಕಿಬಾಯಿ, ಸಹಾಯಕ ಯೋಜನಾ ಅಧಿಕಾರಿ ಪ್ರಭುಸ್ವಾಮಿ  ಮತ್ತಿತರರು ಹಾಜರಿದ್ದರು. ಸಂಪನ್ಮೂಲ ವ್ಯಕ್ತಿ ಕಾಚಾಪುರ ರಂಗಪ್ಪ ಜಿಲ್ಲಾ ನರೇಗಾ ಯೋಜನೆ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT