ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಕಣದಿ ಕಾಂಚಾಣ

ಭೂ ರಮೆ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕೃಷಿಯಲ್ಲೀಗ ಯಂತ್ರಗಳದ್ದೇ ಕಾರುಬಾರು. ಕೂಲಿಕಾರ್ಮಿಕರ ಸಮಸ್ಯೆಯಿಂದ ಯಂತ್ರಗಳು  ಹೊಲಗದ್ದೆಗಳಲ್ಲಿ ದಾಪುಗಾಲು ಇಟ್ಟಿದ್ದರೆ, ರೈತರ ಬೆನ್ನೆಲಬು ಎಂದೇ ಹೇಳಲಾಗುವ ಜಾನುವಾರುಗಳ ಜಾಗವನ್ನೂ ಯಂತ್ರಗಳು ಆಕ್ರಮಿಸಿಕೊಂಡಿವೆ.

ಇದರಿಂದಾಗಿ ಮೇವು ಸಂಗ್ರಹಿಸಲು ನಿರ್ಮಿಸಿಕೊಂಡಿರುವ ಕಣಗಳೆಲ್ಲ ಹಲವು ಕಡೆಗಳಲ್ಲಿ ಬಿಕೋ ಎನ್ನುತ್ತಿವೆ. ಹಿಂದೆಲ್ಲ ಉಪಯೋಗಿಸುತ್ತಿದ್ದ ಕೃಷಿ ಉಪಕರಣಗಳನ್ನು ಕೂಡ ಇದೇ ಕಣಗಳಲ್ಲಿ ಸಂರಕ್ಷಿಸಿ ಇಡಲಾಗುತ್ತಿತ್ತು. ಆದರೆ ಆ ಉಪಕರಣಗಳ ಬದಲಾಗಿ ಈಗ ಅತ್ಯಾಧುನಿಕ ಯಂತ್ರಗಳು ಬಂದಿರುವ ಕಾರಣ, ಅವು ಕೂಡ ಹೇಳಹೆಸರು ಇಲ್ಲದಂತೆ ಮಾಯವಾಗಿವೆ. ಅದಕ್ಕಾಗಿ ಕಣಗಳಿಗೀಗ ಕೆಲಸವಿಲ್ಲ.

ಇನ್ನು, ಮೇವಿನ ಬೆಳೆ ಸಂಗ್ರಹಿಸಿ ಇಡುವವರು ಕೂಡ ವರ್ಷಪೂರ್ತಿ ಅದನ್ನು ಸಂಗ್ರಹಿಸಿ ಇಡುವಷ್ಟು ಮೇವು ಸಿಗುವುದಿಲ್ಲ. ಏಕೆಂದರೆ ಮೇವು ಸಿಗುವುದು ಪೈರು ಬಂದ ಮೇಲೆಯೇ. ಮಳೆಗಾಲ ಬರುವಷ್ಟರಲ್ಲಿ ಇದ್ದ ಮೇವು ಖರ್ಚಾಗುವುದರಿಂದಲೂ ಹೆಚ್ಚಿನ ಕಡೆಗಳಲ್ಲಿ ಕಣಗಳು ಖಾಲಿ-ಖಾಲಿ.

ಹೀಗೆ ಖಾಲಿ ಬಿದ್ದ ಕಣದಿಂದಲೂ ಲಾಭ ಮಾಡಿಕೊಳ್ಳಬಹುದು ಎಂಬ ವಿಚಾರವೇ ಅಚ್ಚರಿ ತರುವಂಥದ್ದು. ಅಂತಹ ಪ್ರಯತ್ನಕ್ಕೆ ಕೈಹಾಕಿ ಲಾಭದ ಹಾದಿ ಹಿಡಿದಿದ್ದಾರೆ ಚಿತ್ರದುರ್ಗ ಜಿಲ್ಲೆಯ ಹಿರೇಗುಂಟನೂರು ಹೋಬಳಿಯ ಬೊಮ್ಮೆನಹಳ್ಳಿ ಗ್ರಾಮದ ಲಕ್ಷ್ಮಿದೇವಿ. ಈ ಲಾಭಕ್ಕಾಗಿ ಅವರು ಕಂಡುಕೊಂಡ ದಾರಿ ಮಳೆಗಾಲದಲ್ಲಿ ಕಣದಲ್ಲಿ ಕೈ ತೋಟ ಮಾಡುವುದು. ಮಳೆಗಾಲ ಮುಗಿಯುತ್ತಿದ್ದಂತೆ ಕಣವನ್ನು ಪುನಃ ಒಕ್ಕಣೆ, ಮೇವು ದಾಸ್ತಾನು ಮಾಡಲಿಕ್ಕೆ ಉಪಯೋಗಿಸುವುದು.

ಇವರದ್ದು ಚಿತ್ರದುರ್ಗ- ಭೀಮಸಮುದ್ರ ರಸ್ತೆಗೆ ಹೊಂದಿಕೊಂಡಂತೆ ಬೊಮ್ಮೆನಹಳ್ಳಿಯಲ್ಲಿ ಆರು ಗುಂಟೆ ವಿಸ್ತೀರ್ಣದ ಜಮೀನು ಇದೆ. ಇದನ್ನು ಕೃಷಿ ಚಟುವಟಿಕೆಗಳಿಗಾಗಿ ಕಣವಾಗಿ ಮಾಡಿದ್ದಾರೆ. ಒಮ್ಮೆ ಮಳೆಗಾಲ ಬರುವಷ್ಟರಲ್ಲಿ ಸಂಗ್ರಹಿಸಿದ್ದ ಮೇವು ಕರಗುತ್ತಾ ಬಂದಿದ್ದರಿಂದ ಕಣದ ಬಯಲು ಜಾಗ ಎದ್ದು ಕಾಣುತ್ತಿತ್ತು. ಇದರಿಂದ ಮೊದಲಿಗೆ ಅಲ್ಲಲ್ಲಿ ಸೊಪ್ಪು, ತರಕಾರಿಗಳನ್ನು ಹಾಕಿದರು. ಮಳೆಗೆ ಸೊಪ್ಪು ತರಕಾರಿ ಸೊಂಪಾಗಿ ಬೆಳೆಯಿತು.

ಮನೆಗೆ ಬಳಸಿ ಮಿಕ್ಕಿದ್ದನ್ನು ನೆರೆಹೊರೆಯವರೆಗೆ ಕೊಟ್ಟರು. ಆದರೆ ಇದನ್ನೇ ದೊಡ್ಡ ಪ್ರಮಾಣ ಹಾಗೂ ಯೋಜನಾ ಬದ್ಧವಾಗಿ ಮಾಡಿದ್ದೇ ಆದರೆ ಖಾಲಿ ಬಿದ್ದ ಕಣದಿಂದಲೂ ಹಣ ಗಳಿಸಬಹುದಲ್ಲಾ?! ಎಂಬ ಯೋಚನೆ ಬಂತು. ಅಂದು ಬಂದ ಆ ಯೋಚನೆ ಮುಂದಿನ ಮಳೆಗಾಲದಲ್ಲಿ ಸಾಕಾರಗೊಂಡು, ಇಂದು ಪ್ರತಿ ಮಳೆಗಾಲದಲ್ಲಿ ಅಚ್ಚುಕಟ್ಟಾದ ಕೈ ತೋಟ ಮಾಡಲು ಪ್ರೇರಣೆಯಾಗಿದೆ. ಈಗ ಇವರು ತಮ್ಮ ಪತಿ ಕೃಷ್ಣಪ್ಪ ಅವರ ಜೊತೆಗೂಡಿ ಮಳೆಗಾಲಕ್ಕೆ ಸರಿಯಾಗಿ ಕಣವನ್ನು ಹದ ಮಾಡುತ್ತಾರೆ. ಮಳೆ ಬಿದ್ದ ತಕ್ಷಣ ಹೊಲದ ಜತೆಗೆ ಕಣದಲ್ಲಿಯೂ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಕಣದ ಸುತ್ತಲೂ ಇರುವ ಮುಳ್ಳುತಂತಿ ಬೇಲಿಗೆ ಪಡುವಲ, ಹಾಗಲಕಾಯಿ, ಹಿರೇಕಾಯಿ, ಕುಂಬಳ... ಇತ್ಯಾದಿ ತರಕಾರಿ ಬಳ್ಳಿಗಳನ್ನು ಬೆಳೆಸಿದ್ದು, ಕಣದಲ್ಲಿ ಕೊತ್ತಂಬರಿ, ಮೆಂತೆ, ಸೀಪಾಲಕ ಸೊಪ್ಪು, ಬೆಂಡೆ, ಬದನೆ, ಮೆಣಸಿನ ಕಾಯಿ, ಟೊಮೆಟೊ... ಇತ್ಯಾದಿ ತರಕಾರಿಗಳನ್ನು, ಹೂವಿನ ಗಿಡಗಳನ್ನು ಯೋಜನಾಬದ್ಧವಾಗಿ ತುಂಬಿಸುತ್ತಾರೆ. ಇಲ್ಲಿ ಬಹುತೇಕ ಮಟ್ಟಿಗೆ ಮಳೆ ಸಕಾಲದಲ್ಲಿ ಬೀಳುತ್ತದೆ. ಇದು ಇವರಿಗೆ ವರದಾನ. 

ಇದರೊಂದಿಗೆ ಆಗಾಗ್ಗೆ ಗೊಬ್ಬರ ಇಡುವುದು, ಕಳೆ ತೆಗೆಯುವುದರಿಂದ ಕೈ ತೋಟದಲ್ಲಿ ಸೊಪ್ಪು, ತರಕಾರಿಗಳಲ್ಲಿ ಹೆಚ್ಚು ಇಳುವರಿ ಸಿಗುತ್ತದೆ. ಇನ್ನು ಕಳೆದ ಐದಾರು ವರ್ಷಗಳ ಕಣದ ಒಂದೆಡೆ ಮನೆ ಕಟ್ಟಲು 26/23 ಅಡಿ ಅಳತೆಯಲ್ಲಿ ಪಾಯ ಹಾಕಿದ್ದಾರೆ. ಹಣದ ಅಡಚಣೆಯಿಂದ ಅಲ್ಲಿ ಇದುವರೆಗೆ ಕಟ್ಟಡ ಕಟ್ಟಿಲ್ಲ. ಹಾಗಂತ ಆ ಜಾಗವನ್ನೂ ಖಾಲಿ ಬಿಟ್ಟಿಲ್ಲ. ಕಟ್ಟಡ ಕಟ್ಟುವಲ್ಲಿ ತಾತ್ಕಾಲಿಕವಾಗಿ ಸೋತರೂ ಅಲ್ಲಿಯೂ ಕೈ ತೋಟ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಅಷ್ಟೇ ಏಕೆ ಬುನಾದಿ ತೋಡಿದಾಗ ಬಂದ ಮಣ್ಣನ್ನು ಒಂದೆಡೆ ಗುಡ್ಡೆ ಹಾಕಿದ್ದರೂ ಅದರ ಮೇಲೆಯೂ ತರಕಾರಿ ಬೆಳೆಯುತ್ತಾರೆ. ಹೀಗೆ ಕಣದ ಜಾಗವನ್ನು ಇಂಚು- ಇಂಚು ಸದ್ಬಳಕೆ ಮಾಡಿಕೊಂಡಿರುವ ಫಲವಾಗಿ ಇವರ ಈ ಕಣ ಇಂದು ಮಿನಿ ಹೊಲವಾಗಿ ಕಂಗೊಳಿಸುತ್ತಿದೆ.

ಅಂದಹಾಗೆ ಈ ದಂಪತಿ, ಈ ಕೈ ತೋಟದಲ್ಲಿ ಕಳೆಯುವ ಕಾಲ ಮಾತ್ರ ಅತ್ಯಲ್ಪ. ಮುಂಜಾನೆ ಗಿಡಗಳ ಕುಶಲೋಪರಿ ನೋಡಿಕೊಂಡು ಹೊಲದೆಡೆಗೆ ನಡೆದರೆ ಮತ್ತೆ ಇತ್ತ ಮುಖ ಮಾಡುವುದು ಸಂಜೆಗೆ. ಆಗ ಕೈಗೆ ಬಂದ ಫಸಲನ್ನು ಶೇಖರಿಸಿ ಮುಂಜಾನೆ ಮಾರಾಟ ಮಾಡುವುದಕ್ಕೆ ಅಣಿ ಮಾಡುತ್ತಾರೆ.

ಗ್ರಾಮದ ಬುಡದಲ್ಲಿಯೇ ಇವರ ಕೈ ತೋಟವಿರುವ ಕಾರಣ ತಾಜಾ ಸೊಪ್ಪು ತರಕಾರಿಗಳಿಗೆ ಸಹಜವಾಗಿ ಬೇಡಿಕೆ ಇದೆ. ಇದರೊಂದಿಗೆ ಪ್ರತಿ ದಿನ ಬೆಳಿಗ್ಗೆ ಲಕ್ಷ್ಮೀದೇವಿ ಕೈತೋಟದ ಉತ್ಪನ್ನಗಳನ್ನು ಗ್ರಾಮದಲ್ಲಿ ಮಾರಾಟ ಮಾಡಿ ಬರುತ್ತಾರೆ. ಇದರಿಂದ ಒಳ್ಳೆಯ ಆದಾಯ ಗಳಿಸುತ್ತಿರುವ ಇವರು ಮಳೆಗಾಲ ಮಗಿಯುವಷ್ಟರಲ್ಲಿ ಗರಿಷ್ಠ ಹಣ ಸಂಪಾದನೆ ಮಾಡುತ್ತಾರೆ. ಮಳೆಗಾಲದಲ್ಲಿ ಕೇವಲ ನಾಲ್ಕು ತಿಂಗಳು ಕಣದಲ್ಲಿ ಶ್ರದ್ಧೆವಹಿಸಿ ದುಡಿಯುತ್ತಿರುವ ಫಲವಾಗಿ ಇವರು ಆರ್ಥಿಕವಾಗಿ ಸದೃಢರಾಗಲು ಪರೋಕ್ಷವಾಗಿ ನೆರವಾಗಿದೆ. ವರ್ಷದ ಉದ್ದಕ್ಕೂ ಅಗತ್ಯವಿರುವ ವಿದ್ಯುತ್, ನಲ್ಲಿ ಬಿಲ್ಲು, ಮನೆ ತೆರಿಗೆ... ಇತ್ಯಾದಿ ಸಣ್ಣ-ಪುಟ್ಟ ಖರ್ಚು ವೆಚ್ಚಗಳಿಗೆ ಇವರ ಈ ಮಳೆಗಾಲದ ಕೈತೋಟ ಕೈ ಹಿಡಿಯುತ್ತಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಮತ್ತೆ ಕಣದಲ್ಲಿ ಮೇವು, ಕೃಷಿ ಸಲಕರಣೆಗಳ ದಾಸ್ತಾನು ಮಾಡುತ್ತಾರೆ. ಹೀಗಾಗಿ ಇವರ ಕಣ ಕೇವಲ ದಾಸ್ತಾನು ಕೇಂದ್ರವಾಗದೇ ಆದಾಯದ ಮೂಲವೂ ಆಗಿದೆ.

ಅಂದಹಾಗೆ ಇವರು ಕಳೆದ ಹದಿನೈದು ವರ್ಷಗಳಿಂದ ಕಣದಲ್ಲಿ ಕೈ ತೋಟ ಮಾಡುತ್ತಾ ಬಂದಿರುವುದು ವಿಶೇಷ. ಇವರ ಸಂಪರ್ಕಕ್ಕೆ 8861968986.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT