ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಕ್ವಾರ್ಟರ್‌ ಬಾಟಲಿ ಕೊಡಿಸಿತು ಶಿಕ್ಷೆ!

Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

2006ರ ಫೆಬ್ರುವರಿ ತಿಂಗಳದು. ಅಂದು ವಿಜಯಪುರದ ಸೌಮ್ಯಾ ಹಾಗೂ ಬೆಳಗಾವಿಯ ವೈದ್ಯ ಡಾ. ರಾಜುವಿನ ಮದುವೆ. ತಮ್ಮ ಮಗಳಿಗೆ ವೈದ್ಯ ಗಂಡ ಸಿಕ್ಕಿದ ಖುಷಿಯಲ್ಲಿ ಸೌಮ್ಯಾ ಮನೆಯವರು ರಾಜುವಿನ ಪೋಷಕರು ಕೇಳಿದಂತೆ ಭರ್ಜರಿಯಾಗಿ ವರದಕ್ಷಿಣೆ ನೀಡಿದ್ದರು. 25 ತೊಲ ಬಂಗಾರ, ಎರಡೂವರೆ ಕೆ.ಜಿ ಬೆಳ್ಳಿಯನ್ನು ರಾಜುವಿಗೆ ನೀಡಿದ್ದ ಅವರು, ರಾಜುವಿನ ಪೋಷಕರ ಆಸೆಯಂತೆ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ ವಿವಾಹ ಕಾರ್ಯವನ್ನೂ ನೆರವೇರಿಸಿದ್ದರು.

ಗಂಡಿನ ಮನೆಯವರ ಮನತಣಿಸುವಷ್ಟು ವರದಕ್ಷಿಣೆ, ಉಪಚಾರ ಎಲ್ಲವನ್ನೂ ಮಾಡಿದ್ದಕ್ಕೆ ಅವರು ಖುಷಿಯಾಗಿರಬಹುದು ಎಂದುಕೊಂಡಿದ್ದ ಸೌಮ್ಯಾ ಅವರ ಪೋಷಕರಿಗೆ ದಿಗಿಲಾಗಿತ್ತು. ಏಕೆಂದರೆ ಅವರ ಅಳಿಯ ರಾಜು ಹೊಸದಾಗಿ ಕ್ಲಿನಿಕ್‌ ತೆರೆಯಲು ತನಗೆ 10 ಲಕ್ಷ ರೂಪಾಯಿ ಬೇಕು ಹಾಗೂ ಐಷಾರಾಮಿ ಕಾರು ಬೇಕು ಎಂಬ ಬೇಡಿಕೆ ಇಟ್ಟಿದ್ದ. ಅಷ್ಟೊಂದು ಹಣ ಹೊಂದಿಸುವುದು ಆ ಕ್ಷಣದಲ್ಲಿ ಸೌಮ್ಯಾ ಅವರ ಪೋಷಕರಿಗೆ ಕಷ್ಟವಾದ ಕಾರಣ ಎರಡೂವರೆ ಲಕ್ಷ ರೂಪಾಯಿಗಳನ್ನು ಆನ್‌ಲೈನ್‌ ಮೂಲಕ ಅಳಿಯನ ಖಾತೆಗೆ ಹಾಕಿ ಉಳಿದ ಹಣವನ್ನು ಹೊಂದಿಸಿ ಕೊಡುವುದಾಗಿ ಹೇಳಿದರು.

ಮದುವೆಯಾಗಿ ಒಂದು ವರ್ಷದಲ್ಲಿ ಈ ದಂಪತಿಗೆ ಮಗು ಹುಟ್ಟಿತು. ಅದೊಂದು ದಿನ ಅಂದರೆ 2008ರ ಸೆಪ್ಟೆಂಬರ್‌ ತಿಂಗಳಿನಲ್ಲಿ ತಮ್ಮ ಮಗಳು ಹಾಗೂ ಮೊಮ್ಮಗುವನ್ನು ನೋಡಲು ಸೌಮ್ಯಾ ಅವರ ಪೋಷಕರು ವಿಜಯಪುರದಿಂದ ಬೆಳಗಾವಿಗೆ ಹೋದರು. ಆದರೆ ರಾಜು ಮತ್ತೆ ಕ್ಯಾತೆ ತೆಗೆದ. ತನಗೆ ಬಾಕಿ ಬರಬೇಕಿರುವ ಹಣವನ್ನು ನೀಡುವಂತೆ ಕೇಳಿದ. ಒಂದು ವೇಳೆ ಹಣ ಮತ್ತು ಕಾರು ನೀಡದಿದ್ದರೆ ಹೆಂಡತಿಗೆ ವಿಚ್ಛೇದನ ಕೊಡುವುದಾಗಿ ಬೆದರಿಸಿದ. ವಿಚ್ಛೇದನದ ಭಯದಿಂದ ಸೌಮ್ಯಾ ಅವರ ಪೋಷಕರು ಶೀಘ್ರದಲ್ಲಿಯೇ ಹಣ ನೀಡುವುದಾಗಿ ಹೇಳಿ ಊರಿಗೆ ವಾಪಸಾದರು.

ಹಣ ಹೇಗೆ ಹೊಂದಿಸಬೇಕು ಎನ್ನುವ ಚಿಂತೆಯಲ್ಲಿಯೇ ರಾತ್ರಿ ಕಳೆದಾಗ ಮರುದಿನ ಬೆಳಿಗ್ಗೆ ಸುಮಾರು 9 ಗಂಟೆಗೆ ಸೌಮ್ಯಾ, ಪೋಷಕರಿಗೆ ಕರೆ ಮಾಡಿದರು. ಮಾತಾಡುವಷ್ಟರಲ್ಲಿ ಕರೆ ಕಟ್‌ ಆಯಿತು. ಅಷ್ಟೆ... ಅದಾದ ಸ್ವಲ್ಪ ಸಮಯದಲ್ಲಿಯೇ ಅವರು ದಿಗ್ಭ್ರಮೆಗೊಳ್ಳುವಂಥ ಸುದ್ದಿ ಬಂತು. ಅದೇನೆಂದರೆ ಸೌಮ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು!

ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಅವರು ರಾಜು ಹಾಗೂ ಆತನ ತಾಯಿಯ ವಿರುದ್ಧ ದೂರು ದಾಖಲು ಮಾಡಿದರು. ಅಳಿಯ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದು, ತಾವು ಹಣ ಹೊಂದಿಸಲು ಸಮಯ ಕೋರಿದ್ದು ಎಲ್ಲವನ್ನೂ ಅವರು ದೂರಿನಲ್ಲಿ ಉಲ್ಲೇಖಿಸಿದರು.

ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಿದರು. ಸೌಮ್ಯಾಳ ಗಂಡ ರಾಜು ಹಾಗೂ ಆತನ ತಾಯಿಯ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ವಿವಿಧ ಕಲಮುಗಳ ಅಡಿ ದೂರು ದಾಖಲಿಸಿಕೊಂಡ ಪೊಲೀಸರು ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಸೆಷನ್ಸ್‌ ಕೋರ್ಟ್‌ ರಾಜುವಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಆತನ ತಾಯಿ, ಸೊಸೆಯ ಜೊತೆಯಲ್ಲಿ ನಾಲ್ಕೈದು ತಿಂಗಳು ಮಾತ್ರ ಇದ್ದುದನ್ನು ಗಮನಿಸಿ ಅವರನ್ನು ಬಿಡುಗಡೆಗೊಳಿಸಿತು.

ಶಿಕ್ಷೆಯ ಆದೇಶ ಪ್ರಶ್ನಿಸಿ ರಾಜು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ. ಆಗ ನಾನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದೆ. ಪ್ರಸಿದ್ಧ ಹಿರಿಯ ವಕೀಲರೊಬ್ಬರನ್ನು ರಾಜು ನೇಮಕ ಮಾಡಿಕೊಂಡಿದ್ದ. ಸುಮಾರು ಎಂಟು ದಿನ ಆ ವಕೀಲರು ರಾಜು ಪರವಾಗಿ ವಾದ ಮಂಡಿಸಿದರು. ‘ಆತ್ಮಹತ್ಯೆಗೆ ಪ್ರಚೋದನೆ ನೀಡುವಂಥ ಕೆಲಸ ರಾಜು ಏನೂ ಮಾಡಿಲ್ಲ, ಸೌಮ್ಯಾ ಅವರನ್ನು ಪೋಷಕರು ತುಂಬಾ ನಾಜೂಕಿನಿಂದ ಬೆಳೆಸಿದ್ದರು. ಆದ್ದರಿಂದ ಸೌಮ್ಯಾ ಅವರು ಚಿಕ್ಕ ವಿಚಾರವನ್ನೂ ತಲೆಗೆ ಹಚ್ಚಿಕೊಳ್ಳುತ್ತಿದ್ದರು, ತುಂಬಾ ಭಾವುಕ ಸ್ವಭಾವದವರಾಗಿದ್ದರು. ಎಲ್ಲ ದಂಪತಿ ನಡುವೆ ಆಗುವ ಚಿಕ್ಕಪುಟ್ಟ ಜಗಳದಂತೆ ಆ ದಿನ ಏನೋ ಒಂದು ಮಾತು ರಾಜು ಆಡಿದ್ದಾರೆ ಅಷ್ಟೆ. ಅದನ್ನೇ ದೊಡ್ಡದು ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ರಾಜುವಿನ ತಪ್ಪು ಏನೂ ಇಲ್ಲ.

ಇಂಥದ್ದಕ್ಕೆಲ್ಲಾ ಜೀವಾವಧಿಯಂಥ ಶಿಕ್ಷೆ ನೀಡುವುದು ಸರಿಯಲ್ಲ. ಆದ್ದರಿಂದ ರಾಜುವನ್ನು ಬಿಡುಗಡೆಗೊಳಿಸಬೇಕು’ ಎಂದು ವಾದಿಸಿದರು. ವೈದ್ಯರಂಥ ಪ್ರತಿಷ್ಠಿತ ಹುದ್ದೆಯಲ್ಲಿ ಇರುವ ರಾಜು, ವರದಕ್ಷಿಣೆಗೆ ಪೀಡಿಸುವಂಥ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎನ್ನುವುದೂ ಅವರ ವಾದದ ಸಾರವಾಗಿತ್ತು. ತಮ್ಮ ವಾದ ಸಮರ್ಥಿಸಿಕೊಳ್ಳುವುದಕ್ಕೆ ವಿವಿಧ ಕೋರ್ಟ್‌ಗಳ ತೀರ್ಪುಗಳನ್ನೂ ಅವರು ಉಲ್ಲೇಖಿಸಿದರು.

ಅವರ ಈ ವಾದಕ್ಕೆ ಪುಷ್ಟಿ ನೀಡಿದ್ದು ಸೌಮ್ಯಾ ಅವರ ಮರಣೋತ್ತರ ಪರೀಕ್ಷೆಯ ವರದಿ. ನೇಣು ಹಾಕಿಕೊಂಡ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಕುತ್ತಿಗೆಯ ಸುತ್ತಲೂ ಆಗುವ ಗಾಯದ ಗುರುತಷ್ಟೇ ಸೌಮ್ಯಾ ಅವರ ಕುತ್ತಿಗೆಯ ಸುತ್ತಲೂ ಇದ್ದ ಬಗ್ಗೆ ವರದಿಯಲ್ಲಿ ತಿಳಿಸಲಾಗಿತ್ತು. ಅಂದರೆ ಯಾರು ಕೂಡ ಸೌಮ್ಯಾ ಅವರಿಗೆ ದೈಹಿಕವಾಗಿ ದೌರ್ಜನ್ಯ ನಡೆಸಿಲ್ಲ ಎನ್ನುವುದು ಅಲ್ಲಿ ಸಾಬೀತಾಗಿತ್ತು. ಹೀಗಿರುವಾಗ ರಾಜುವಿನ ತಪ್ಪಿಲ್ಲ ಎಂಬುದನ್ನು ವಕೀಲರು ಕೋರ್ಟ್‌ಗೆ ಒತ್ತಿ ಒತ್ತಿ ಹೇಳಿದರು.

ಹೌದಲ್ಲವೇ...? ಅವರು ವಾದಿಸುತ್ತಿರುವುದರಲ್ಲಿಯೂ ಹುರುಳಿದೆ ಎಂದು ಆ ಕ್ಷಣದಲ್ಲಿ ಎಂಥವರಿಗೂ ಅನ್ನಿಸುವಂತಿತ್ತು. ಎಂಟೂ ದಿನಗಳು ಅವರು ವಾದ ಮಂಡಿಸಿದ್ದನ್ನು ಯಾರೇ ಗಮನಿಸಿದರೂ ರಾಜುವಿನ ಬಿಡುಗಡೆ ಬಹುತೇಕ ಖಚಿತ ಎನ್ನಿಸುವಂತಿತ್ತು.

ರಾತ್ರಿ ಹಾಗೂ ಬೆಳಗಿನ ಅವಧಿಯ ನಡುವೆ ಆಗಿರುವ ಏನೋ ಒಂದು ರಹಸ್ಯ ಘಟನೆಯೇ ಇಡೀ ಪ್ರಕರಣದ ಕೇಂದ್ರಬಿಂದುವಾಗಿತ್ತು. ಆದರೆ ಎಲ್ಲವೂ ಒಗಟಾಗಿತ್ತು. ಅದನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದೂ ಸಾವು ಸಂಭವಿಸಿ ವರ್ಷಗಳ ನಂತರ...!

ವರದಕ್ಷಿಣೆ ಸಾವು ಎನ್ನುವ ಪ್ರಕರಣಗಳೇ ಹಾಗೆ. ಘಟನೆ ನಡೆಯುವುದು ನಾಲ್ಕು ಗೋಡೆಗಳ ಮಧ್ಯೆ. ಇಲ್ಲಿ ಪ್ರತ್ಯಕ್ಷದರ್ಶಿಗಳು ಇರುವುದಿಲ್ಲ. ಇರುವುದು ಗಂಡಿನ ಮನೆಯವರು ಮಾತ್ರ. ಅವರಂತೂ ಸಾಕ್ಷಿ ನುಡಿಯುವುದಿಲ್ಲ. ಸಾಕ್ಷಿ ಹೇಳಬೇಕಿರುವವರು ಸತ್ತು ಹೋಗಿರುತ್ತಾರೆ. ಸಿಕ್ಕ ಸಾಂದರ್ಭಿಕ ಸಾಕ್ಷ್ಯಾಧಾರಗಳು ಆರೋಪಿಗಳನ್ನು ಅಪರಾಧಿ ಎಂದು ಮಾಡಬಹುದಷ್ಟೆ. ಆದರೆ ಹಲವು ಪ್ರಕರಣಗಳಲ್ಲಿ ಇದಕ್ಕೂ ಅವಕಾಶ ಇರುವುದಿಲ್ಲ. ಮಾನಸಿಕ ಹಿಂಸೆ ನೀಡಿದರೆ ಅದನ್ನು ಸಾಬೀತು ಮಾಡಲು ಆಗುವುದಿಲ್ಲ.

ಆದರೆ ನನಗೆ ಇದು ವರದಕ್ಷಿಣೆ ಕಿರುಕುಳದ ಸಾವೇ ಎಂದು ಖಚಿತವಾಗಿತ್ತು. ಪ್ರತಿಷ್ಠಿತ ಹುದ್ದೆಯಲ್ಲಿರುವ ಗಂಡೇ ತಮ್ಮ ಮಕ್ಕಳಿಗೆ ಬೇಕೆಂದು ಆತನ ಹಾಗೂ ಮನೆಯವರ ಪೂರ್ವಾಪರಗಳನ್ನು ಗಮನಿಸದೆ ಮೋಸ ಹೋಗುವ ಎಷ್ಟೋ ಹೆಣ್ಣು ಮಕ್ಕಳ ಮನೆಯವರ ನೋವಿನ ಇಂಥ ಘಟನೆಗಳನ್ನು ನಾನು ಗಮನಿಸಿದ್ದರಿಂದ ಇದರಲ್ಲೂ ಅದೇ ರೀತಿ ಆಗಿರುವ ಸಾಧ್ಯತೆ ಇದೆ ಎಂದು ನನಗೆ ಅನ್ನಿಸಿತು. ಆದರೆ ಆ ಕ್ಷಣದಲ್ಲಿ ಅಸಹಾಯಕನಾದೆ. ಏಕೆಂದರೆ ಸಾಕ್ಷ್ಯಾಧಾರಗಳು ಯಾವುವೂ ನನ್ನ ಪರವಾಗಿ ಇರಲಿಲ್ಲ. ಸರ್ಕಾರದ ಪರ ವಕೀಲನಾಗಿ ಅಪರಾಧಿಗೆ ಶಿಕ್ಷೆ ಆಗುವಂತೆ ಮಾಡುವುದು ನನ್ನ ಕರ್ತವ್ಯ ಒಂದೆಡೆಯಾದರೆ, ಅಮಾಯಕ ಹೆಣ್ಣು ಮಗಳ ಜೀವ ತೆಗೆದ ಒಬ್ಬ ಹಂತಕನನ್ನು ಬಿಡುಗಡೆಗೊಳಿಸುವುದು ನನಗೆ ಸಹ್ಯವಾಗಿರಲಿಲ್ಲ.

ಪೊಲೀಸ್‌ ದಾಖಲೆಗಳನ್ನು ಬಿಟ್ಟರೆ ಬೇರೇನೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಆದ್ದರಿಂದ ಈ ಘಟನೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ತಿರುವಿ ತಿರುವಿ ಹಾಕಿದೆ. ಯಾವುದೋ ಒಂದು ಪುಟದಲ್ಲಿ ಅಂತೂ ನನಗೆ ಬೇಕಾದ ಅಂಶ ಸಿಕ್ಕೇ ಬಿಟ್ಟಿತು. ನನಗೆ ಜೀವ ಬಂದಂತಾಯಿತು. ಇದು ಅಪರಾಧಿಯನ್ನು ಶಿಕ್ಷೆಯವರೆಗೆ ಕೊಂಡೊಯ್ಯಬಹುದು ಎಂದು ನನಗೆ ಅನ್ನಿಸಿತು.

ಅದೇನೆಂದರೆ ಸಾವು ಸಂಭವಿಸಿದ ಸ್ಥಳದಲ್ಲಿ (ದಂಪತಿಯ ಮಲಗುವ ಕೋಣೆಯಲ್ಲಿ) ಘಟನೆ ನಡೆದ ದಿನ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಉಲ್ಲೇಖ ದಾಖಲೆಯಲ್ಲಿತ್ತು. ಅದರಲ್ಲಿ ನನ್ನ ಕಣ್ಣಿಗೆ ಬಿದ್ದುದು ಎರಡು ಹೆಂಡದ ಖಾಲಿ ಬಾಟಲಿಗಳು ಹಾಗೂ ಒಂದು ಕೋಲು. ಇಷ್ಟೇ ಸಾಕಾಯಿತು ನನಗೆ. ಅಂದು ಏನು ನಡೆದಿದೆ ಎಂಬುದನ್ನು  ಈ ವಸ್ತುಗಳಿಂದ ಖಚಿತವಾಗಿ ಹೇಳುವುದು ಸುಲಭವಿಲ್ಲವಾದರೂ ರಾಜು ಅಂದು ಕುಡಿದಿದ್ದಂತೂ ನಿಜ ಎಂಬುದನ್ನು ಸಾಬೀತು ಮಾಡಬಹುದಿತ್ತು. ಸೌಮ್ಯಾ ಅವರ ಶರೀರದ ಮೇಲೆ ಯಾವುದೇ ಗಾಯದ ಗುರುತು ಇರದಿದ್ದ ಕಾರಣ ಕುಡಿದು ದೈಹಿಕ ದೌರ್ಜನ್ಯ ಎಸಗಿದ್ದ ಎನ್ನುವಂತೆ ಇರಲಿಲ್ಲ.

ಆಗ ನನ್ನ ನೆರವಿಗೆ ಬಂದದ್ದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗೆ 1986ರಲ್ಲಿ ಆದ ತಿದ್ದುಪಡಿಗಳು. ನಾಲ್ಕು ಗೋಡೆಗಳ ನಡುವೆ ನಡೆಯುವ ಇಂಥ ಪ್ರಕರಣಗಳಲ್ಲಿ ಸಾಕ್ಷಿ ನುಡಿಯುವ ಪ್ರತ್ಯಕ್ಷದರ್ಶಿಗಳು ಇರದ ಕಾರಣ, ಸಂಭಾವ್ಯ ಸಾಕ್ಷ್ಯಗಳು ಇದ್ದರೆ ಅಷ್ಟೇ ಸಾಕು. ಅದರಿಂದ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಈ ತಿದ್ದುಪಡಿ ಹೇಳಿದೆ. ಅಂದರೆ ಆರೋಪಿಯನ್ನು ಬೊಟ್ಟು ಮಾಡಿ ತೋರಿಸುವ ಸಂಭವನೀಯ ಸಾಕ್ಷ್ಯಾಧಾರಗಳು ಸಿಕ್ಕರೆ ಕೋರ್ಟ್‌ ಅದನ್ನು ಮಾನ್ಯ ಮಾಡಬೇಕು ಎನ್ನುವುದು. ಇದರ ಜೊತೆಗೆ, ಸಾವು ಸಂಭವಿಸಿದರೆ ಆರೋಪಿಯೇ ಈ ಸಾವಿನ ಪ್ರಮುಖ ಸಾಕ್ಷಿ ಎನ್ನುತ್ತದೆ ತಿದ್ದುಪಡಿ. ಇದರರ್ಥ, ಆರೋಪಿಯೇ ಈ ಸಾವು ಹೇಗೆ ಸಂಭವಿಸಿತು ಎಂಬುದನ್ನು ಸರಿಯಾಗಿ ಕೋರ್ಟ್‌ಗೆ ಹೇಳಬೇಕು. ಅವರು ನೀಡುವ ಹೇಳಿಕೆಗಳನ್ನು ಬೇರೆ ಬೇರೆ ಸಂದರ್ಭಕ್ಕೆ ತಾಳೆ ಹಾಕಿ ಆರೋಪಿ ಹೇಳುತ್ತಿರುವುದು ಸುಳ್ಳು ಎಂದು ತಿಳಿದರೆ ಆತನಿಗೆ ಶಿಕ್ಷೆ ವಿಧಿಸುವ ಅಧಿಕಾರ ಕೋರ್ಟ್‌ಗೆ ಇದೆ.

ತಿದ್ದುಪಡಿ ಆಗುವುದಕ್ಕಿಂತ ಮುಂಚೆ ಆರೋಪಿಯನ್ನು ಅಪರಾಧಿಯನ್ನಾಗಿ ಮಾಡಲು ನೇರ ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ನೀಡಬೇಕಿತ್ತು. ಆದ್ದರಿಂದ ಪ್ರಾಸಿಕ್ಯೂಟರ್‌ ಆಗಲಿ, ಪೊಲೀಸರಾಗಲಿ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಆದ್ದರಿಂದ ಆರೋಪಿಗಳಿಗೇ ಜಯವಾಗುತ್ತಿತ್ತು. ತಿದ್ದುಪಡಿ ಅನ್ವಯ ಈ ಪ್ರಕರಣದಲ್ಲಿ ನನಗೆ ಸಿಕ್ಕ ಸಂಭವನೀಯ ಸಾಕ್ಷ್ಯ ಎಂದರೆ ಹೆಂಡದ ಬಾಟಲಿಗಳು ಮತ್ತು ಕೋಲು. ರಾಜು ಘಟನೆ ನಡೆದ ರಾತ್ರಿ ಸೌಮ್ಯಾ ಅವರನ್ನು ವರದಕ್ಷಿಣೆಗಾಗಿ ಪೀಡಿಸಿ ಕೋಲಿನಿಂದ ಗದರಿಸಿರಬಹುದು, ಕುಡಿದ ಅಮಲಿನಲ್ಲಿ ಅವರಿಗೆ ಹೀನಾಯವಾಗಿ ಬೈದಿರಬಹುದು, ವರದಕ್ಷಿಣೆ ತರದಿದ್ದರೆ ಹಿಂಸೆ, ವಿಚ್ಛೇದನ ಕೊಡುವುದಾಗಿ ಹೆದರಿಸಿರಬಹುದು... ಹೀಗೆ ಏನೇನೋ ಸಾಧ್ಯತೆಗಳು ಇದ್ದಿರಬಹುದು ಎಂಬ ಬಗ್ಗೆ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿದೆ.

ನನ್ನ ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು. ಸೌಮ್ಯಾ ಸಾವಿಗೆ ರಾಜುವೇ ಕಾರಣ ಎಂದು ಅಭಿಪ್ರಾಯಪಟ್ಟರು. ಆದರೆ ಅವನಿಗೆ ಇನ್ನೂ 32 ವರ್ಷ ಆಗಿದ್ದರಿಂದ ಹಾಗೂ ಒಂದು ವರ್ಷದ ಚಿಕ್ಕ ಮಗು ಇದ್ದುದರಿಂದ ಜೀವಾವಧಿ ಶಿಕ್ಷೆ ಉಚಿತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು ಅವನಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದರು. ಅಂತೂ, ಬಿಡುಗಡೆಯ ಹಾದಿಯಲ್ಲಿದ್ದ ಅಪರಾಧಿಗೆ ಕಾನೂನಿನ ತಿದ್ದುಪಡಿಯಿಂದಾಗಿ ಕಠಿಣ ಶಿಕ್ಷೆಯಾಯಿತು.

ಅಂದೇನಾದರೂ ಪೊಲೀಸರು ಅಲ್ಲಿ ಸಿಕ್ಕ ಹೆಂಡದ ಬಾಟಲಿ ಹಾಗೂ ಕೋಲಿನ ಬಗ್ಗೆ ದಾಖಲೆಯಲ್ಲಿ ಉಲ್ಲೇಖ ಮಾಡದೇ ಹೋಗಿದ್ದರೆ ಬಹುಶಃ ರಾಜು ಬಿಡುಗಡೆ ಹೊಂದುತ್ತಿದ್ದ. ಆದ್ದರಿಂದ ಇಂಥ ಪ್ರಕರಣಗಳ ತನಿಖೆ ಕೈಗೊಳ್ಳುವಾಗ ತನಿಖಾಧಿಕಾರಿಗಳು ಎಷ್ಟು ಜಾಗರೂಕರಾಗಿ ಇರಬೇಕು ಎನ್ನುವುದನ್ನೂ ಈ ಘಟನೆ ತೋರಿಸಿಕೊಡುತ್ತದೆ. 
(ಎಲ್ಲರ ಹೆಸರು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT