ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ದಿ ಗಮತ್ತ

ದೀಪಾವಳಿ ವಿಶೇಷಾಂಕ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 23 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೂರಿಪ್ಪತ್ತರ ಹದಿನೈದು ಯುಗಾದಿಗಳನ್ನು ನೋಡಿದ್ದ ಮುತ್ತವ್ವಳಿಗೆ ಹೊತ್ತ ಹೊಂಡಗುಡದ, ನಸಿಕಿನ್ಯಾಗ ಮೊಮ್ಮಗನ ಕಿರಿಕಿರಿ ಬೆಳಗಿನಿಂದ ತಲಿಬ್ಯಾನಿ ತರಿಸಿಬಿಟ್ಟಿತ್ತು, ಈಗ ಸುಮ್ಮಾದಾನ, ಇನ್ನಟಕ ಸುಮ್ಮಾದಾನ ಅಂತ ನೋಡಿ ನೋಡಿ ಸಿಟ್ಟಿಗೆದ್ದಳು.

‘ಹುಚ್ಚನನ್ನ ಹಾಂಟ್ಯಾ... ಹರ್‍ಯಾಗ ಎದ್ದ ಕ್ಯಾಂವ ಮಾರಿ ಮಾಡಿಕೊಂಡು ವೊಂಯ್‌ ಅಂತ ಸುತಿ ಹಿಡದದಿ, ಎದಕ ಬರೋದ ಹೋಗ ನಿನ್ನ ಅಕಲಗೇಡಿ ಬ್ಯಾಡಾ, ನಿನ್ನ ಬಾಯಿ ಎಂತಾದಿದ್ದಿತ ವದ್ರಿ ವದ್ರಿ ಗಂಟಲಾ ನರಾ ಹರಕೊಂಡ ಹ್ವಾದು ನೋಡು ಯಾಕ ಹಿಂಗ ಗುಂಗಿ ಹುಳದಂಗ ಗುಂಯ್‌ ಅಂತದಿ...? ಒಂದ ಸಾಲಿ ಅನ್ನಾವಲ್ಲ ಸಮುದರ ಅನ್ನಾವಲ್ಲ ಬರೀ ಪಂಗಾ ಪಂಗಾ ತಿರ್‍ಕೊತ ತಿರ್‍ಗಕೋತ ಹ್ವಾದೆನಂತಿ, ಸಿಂವಿಯುಂಡಿದಿ, ಸಾಲಿ ಹೆಂಗ ನ್ಯುವಳ ಅನಿಸಿತ ನಿನಗಾ.....?’

ಅಂತ ಮೊಮ್ಮಗನಿಗೆ ಹಿಡಿಶಾಪ ಹಾಕುತ ಮೂಲೇಲಿರುವ ಕಸಬರಿಗೆಯಿಂದ ಅಂಗಳ ಉಡುಗಲು ಸಜ್ಜಾದಳು ಕಿಟ್ಟಿಯ ಅಜ್ಜಿ ಮುತ್ತವ್ವ. ಸಾಲಿಯೊಳಗ ಗರ್ದಿಗಮ್ಮತ್ತ ಬಂದೈತಿ ದುಡ್ಡಕೊಡು, ನಾನು ನಾನು ನೋಡಬೇಕು ಅಂತ ಹಟ ಹಿಡಿದಿದ್ದ.

‘ಈ ಶೆಡಗರಕ ಮದಿವಿ ಸಂಸಾರ ನನಗ ಬೇಕಾಗಿತ್ತಾ...? ಅಂತ ಚಿಂತಿಸಿದ ಮುತ್ತವ್ವ– ‘ಆ ಜೊಗ್ತಿ ಜೊಗ್ಯಾ ಊರಬಿಟ್ಟು ಹೋಗುವಾಗ ನಿನ್ನ ನನ್ನ ಹಂತ್ಯಾಕ ಬಿಟ್ಟ ಹ್ವಾದು ಹಿಂಬಾಲಕ ತಮ್ಮ ಮಕ್ಕಳಾ ಬ್ಯಾಸರಾಗುವಕ್ಕೆಲ್ಲಾ ದೇವರ ಮಕ್ಕಳಾದ್ರು ಯಾಕ ಕೊಡತಾನೋ ಏನೋ’ ಅಂತ ಊರಿಂದ ಊರಿಗೆ ದುಡಿಯಲು ಹೋದ ಮಗ ಸೊಸೆಯನ್ನು ಬಿಡದೆ ದೂಳಿಪಟ ಮಾಡಿದಳು, ಕಿಟ್ಟಿ ಇವತ್ತ ಯಾವದ ಪರಿಸ್ಥಿತಿಯೊಳಗ ಸಾಲಿಗಿ ಹೋಗಬೇಕಾಗಿತ್ತು. ಖರ್ರೇಂದ್ರ ಇಂದ ಗರ್ದಿಗಮ್ಮತ್ತ ತೋರಿಸಾಂವ ಬಂದಿದ್ದ. ಹಿಂಗಾಗಿ ಸರ್‍ಗೋಳ ನಿನ್ನಿ ಸಾಲಿ ಬಿಟ್ಟ ಬರುವಾಗ ಹುಡುಗೋರಿಗೆಲ್ಲ ಜನಗಣಮಣ ಹಾಡೊದಕ್ಕೆ ಗ್ರೌಂಡಿನಾಗ ಸೇರಿದಾಗ ಹುಲಿಗೆಪ್ಪ ಮಾಸ್ತರ ಹೇಳಿದ್ದರು– ‘ನೊಡ್ರಲೆ, ನಾಳಿ ನಮ್ಮ ಸಾಲಿಗಿ ಗರ್ದಿಗಮ್ಮತ್ತ ತೋರಿಸಲಾಕ ಇಜ್ಯಾಪೂರ ಜಿಲ್ಲಾದವರು ಬರಾತಾರ, ಅದಕ್ಕ ಬೆಳಿಗ್ಗಿ ಬರುವಾಗ ಎಲ್ಲಾರು ಐದೈದ ರೂಪಾಯಿ ತಗೊಂದ ಬರ್ರಿ. ಹಾಂಗ ಕೈ ಬೀಸಿಗೊಂತ ಬಂದ್ರ ಯಾರು ತೊರಿಸಾಂಗಿಲ್ಲ, ಇದೇನು ಕೌಜಲಗಿ ನಿಂಗವ್ವನ ಪಾರಿಜಾತ ನಾಟಕಾನು ಅಲ್ಲ ತಿಳಿತಿಲ್ಲೊ’ ಅಂತ ಗದರಿಸುವ ದನಿಯೊಳಗ ಹೇಳಿದ್ದರು. ಇವತ ನೋಡದಿದ್ದರ ಮುಂದ ಯಾವಾಗು ಸಿಗಾಂಗಿಲ್ಲ ಅಂತ ಆಸೆ ಬ್ಯಾರೆ ತೋರಿಸಿಬಿಟ್ಟ ಕೂಡ್ಲೆ ಹುಡುಗರಿಗೆ ಮಂಗ್ಯಾಗ ಸೆರೆ ಕುಡಿಸಿದಂಗಾಯತು. ಕಿಟ್ಟಿಗಂತು ಅದರೊಳಗೆ ಏನ ಐತಿ ಅನ್ನುವ ಕುತೂಹಲ ಹೆಚ್ಚಾಗಿ ಅದ ವಿಚಾರದೊಳಗೆ ಮನಿಗಿ ಬಂದಿದ್ದ. ಸಾಲಿಯೊಳಗ ಎಲ್ಲಾರು ನೋಡುವಾಗ ತಾನೊಬ್ಬ ನೋಡದಿದ್ದರ ಹುಡುಗರೆಲ್ಲ ಹಂಗಿಸಾಕ ಶುರುಮಾಡತಾರ, ಬೆಳಮಗಿ ನಾರಾಣ ಸಿಂಧೆ ಮಾಸ್ತರ ‘ಹುಚ್ಚ ಹಡ್ಸಿ ಮಗನ ಚುನುಮರಿ ಬಟಕಾಡ್ಲಿ ತಿನ್ನಾಕ ರೊಕ್ಕ ಇರತಾವ ಇಂತಾದಕ್ಕೆಲ್ಲ ರೊಕ್ಕಿಲ್ಲಾ ಅಂತ ನ್ಯಾಯ ಮಾಡಕೊಂತ ನಿಂತಿ, ನಿಮ್ಮ ಆಯಿ ಕಡಿಗಿ ಐದೈದ ರೂಪಾಯಿ ಇಸಗೊಂಡ ಬಾ.... ಮತ್ತ..’ ಬೆದರಿಸಿದ್ದರು. ಮನೀಯ ಆಜೂಬಾಜೂ ಹುಡುಗರೆಲ್ಲ ಅದಾ ರಸ್ತಾ ಹಿಡಕೊಂಡ ಹೊಂಟಿದ್ದರು. ಓಣ್ಯಾಗಿನ ಕೆಲವ ಹುಡುಗರು ಕಿಟ್ಟಿಯನ್ನೊಮ್ಮಿ ನೋಡಿ ಸುಮ್ಮನೆ ಹೋದರೆ, ಇನ್ನು ಕೆಲವು ಹುಡುಗರು ‘ಕಿಟ್ಯ್ಟಾ ಗರ್ದಿಗಮ್ಮತ ನೋಡಾಕ ನೀ ಬರಾಂಗಿಲ್ಲೇನು’ ಅಂತ ಕೇಳಿ ಹೋದರು.

ಕಿಟ್ಟಿ ಅವರೆಲ್ಲರ ಮಾತಿಗಿ ಉತ್ತರ ಕೊಡಲು ತಿಳಿಯದೆ ಅವರನ್ನು ಅವರು ಹಾಕಿಕೊಂಡ ಬಟ್ಟೆಗಳನ್ನು ಅವರು ದಾಟಿಹೋದ ರಸ್ತೆಯನ್ನೇ ಗಮನಿಸುತ್ತ ನಿಂತಿದ್ದ. ಇನ್ನು ಕೆಲವು ಹುಡುಗರು ‘ಗರ್ದಿಗಮ್ಮತ್ತ ಶುರುಮಾಡತಾರ, ಲಗ್ಗ ಹೋಗಬೇಕು ನಂಬರ ಹಚ್ಚಬೇಕು’ ಅಂತಂದು ಯಾವ ಕಡೆಗೂ ಗಮನಿಸದೆ ಬಿರಬಿರನೇ ಶಾಲೆಯತ್ತ ಹೆಜ್ಜೆ ಹಾಕಿದರು. ಶಾಲೆಗೆ ಹೋಗುವ ಹುಡುಗರನ್ನು ನೋಡುತ ಅಳುವುದನ್ನು ಮರೆತಿದ್ದ ಕಿಟ್ಟಿಗೆ ಶಾಲೆಗೆ ಹೋಗುವವರು ಯಾರು ಕಾಣದಾದ ಮೇಲೆ ಸಿಟ್ಟು ತಿರುಗಿ ಬಂತು. ಮತ್ತೊಮ್ಮೆ ದುಕ್ಕ ಉಕ್ಕಳಿಸುತ ಕೈಯೊಳಗೆ ಹಿಡಿ ಮಣ್ಣು ಹಿಡಿದುಕೊಂಡು ಮಣಿಯ ಬಾಗಿಲಿಗೆ ಒಗೆಯಲು ಸಜ್ಜಾಗಿನಿಂತು– ‘ಆಯೀ ರೊಕ್ಕಾ ಕೊಡ್ತಿಯೋ ಇಲ್ಲೋ...’ ಎಂದು ಏರುದನಿಯಲ್ಲಿ ಗದರಿದ. ಮನೇ ಅಂಗಳ ಉಡುಗಿ ಪಾತ್ರೇ ತೊಳೆಯಲು ಸಜ್ಜಾಗುತ್ತಿದ್ದ ಮುತ್ತವಜ್ಜಿ ಮುಸುರೆ ನೀರನ್ನು ಹೊರಕ್ಕೆ ಚಲ್ಲಿ ‘ನೀ ಎಷ್ಟೋತ ಅಳತಿ ಅಳ... ನನ್ನ ಹಂತ್ಯಾಕ ಒಂದ ದುಡ್ಡ ಇಲ್ಲ, ತಿಳ್ಕೋ... ಇಲ್ಲೇನ ರೊಕ್ಕದ ಗಿಡಾ ಐತಿ? ಬೆನ್ನ ಹತ್ತದಿ ನನ್ನ ಮನ್ಯಾಗಿನ ಗರ್ದಿಗಮ್ಮತ್ತ ತುಂಬಿ ಉಳ್ಳ್ಯಾಡಾತೈತಿ ಯಾಂವ ನೊಡತಾನ ಎನ ನೋಡು... ಎನರ ತಿಂದರ ತಿನ್ನು ಇಲ್ಲದಿರ ನೀ ಸಾಲಿಗಿ ಹೊಗದಿರ ಬಿಡವಲ್ಲ್ಯಾಕ, ಹೋಗು ಎಲ್ಲಿ ಹಾಳಾಗಿ ಹೋಗತಿ ನೋಡ’ ಅಂತ ಶಪಿಸಿದಳು. ಕಿಟ್ಟಿಗೆ ಬೇರೆ ದಾರಿಯಿರಲಿಲ್ಲ. ಪಕ್ಕದ ಮನಿ ರಾಮು ಕಾಕಾನೂ ಬೆಳಿಗ್ಗೆ ಬೆಳಿಗ್ಗೆನೆ ಪಕ್ಕದ ಊರಿಗೆ ಹೋದಾಂವ ಹೊಡಮಳ್ಳಿ ಬಂದಿರಲಿಲ್ಲ. ಹಿಂದಿನ ಮನಿ ನೀಲವ್ವ ಕಾಕಿನೂ ಸಂತಿಗಿ ಅಂತ ಹೋಗಿದಾಳ. ಹೀಂಗಾಗಿ ಕರುಣೆ ತೋರಿಸಿ ದುಡ್ಡು ಕೊಡಲು ಮುಂದಾಗುವ ಯಾವ ಕೈಗಳು ಅಲ್ಲಿ ಇರದ ಕಾರಣ ತನ್ನಜ್ಜಿಯನ್ನು ಹೊರತುಪಡಿಸಿ ಬೇರೆ ಗತಿಯಿಲ್ಲವೆಂದು ಅರಿತ ಕಿಟ್ಟಿ ತನ್ನ ಬೇಡಿಕೆಯನ್ನು ಮತ್ತಷ್ಟು ಜೋರುಮಾಡಿದ.

ಮುತ್ತವ್ವ ಮುಸುರೆ ಪಾತ್ರೆಗಳನ್ನು ಅಂಗಳಕ್ಕೆ ತಂದಿಟ್ಟುಕೊಂಡು ಅವನ್ನು ತಿಕ್ಕಿ ಬೆಳಗಲು ಕುಳಿತಳು ತನ್ನ ಕೋಪವನ್ನು ಪಾತ್ರೆಯೊಂದರ ಮೇಲೆ ತೋರಿಸುತ ‘ಅಳಾಕಂತ್ಲೇ ಹುಟ್ಟಿ ಬಂದದಿ ಬಾ ನೀ.... ಸನ್ನಾಂವ ಸನ್ನಾಂವ ಅಂತ ಮಯಾ ಮಾಡಿದರ ನನ್ನ ಮಚ್ಚಿಲೆ ಬಡ್ಯಾಕ ನಿಂತದಿ’ ಅಂತ ಬಯ್ದಳು. ಕಿಟ್ಟಿ ಮಾತ್ರ ಅವಳ ಯಾವ ಮಾತನ್ನು ಕೇಳಿಸಿಕೊಳ್ಳದೆ ದುಡ್ಡು ಕೊಡುವವರೆಗೂ ನಾ ಬಿಡಲ್ಲ ಅಂತಾ ಹಟಾ ಹಿಡಿದವನ ಹಾಗೆ ಅಳುತ ರಂಪ ಮಾಡಲು ಶುರು ಮಾಡಿದ. ದಾರಿ ಹಿಡಿದು ಹೋಗುವ ಜನರು ‘ಯಾಕೋ ಕಿಟ್ಟಿ ಅಳಾಕತ್ತದಿ ಸಾಲಿಗಿ ಹೋಗಾಂಗಿಲ್ಲೇನೋ... ಬರಿ ಜಗಳಾ ಮಾಡಕೊಂತ ಮುದಕಿ ಜೀಂವಾ ತಿನಕೊಂತ ಇರತಾನ ಹುಚ್ಚ ಹಡಿಸಿಮಗಾ... ಎದ್ದ ಸಾಲಿಗಿ ಹೋಗ ರಗಡ ಶ್ಯಾನ್ಯಾ ಅದಿ... ಮಣ್ಣಾಗ ಕುಂತದಿ ನಿನ್ನ ಕೈ ಕಾಲ ನೊಡಕೊ ನೀ ಯೇನು ಸಣ್ಣಾಂವಾ...’ಅಂತ ಒಬ್ಬರು ಅಂದರ, ಮಗದೊಬ್ಬರು ಬಂದು, ‘ಯಾಕ ಚಿಗವ್ವ ಹುಡುಗ ಹಿಂಗ ನ್ಯಾಯ ಮಾಡಾತಾನ. ಏನರ ಕೊಟ್ಟ ಸಾಲಿಗಿ ತಿರುವ ಬಾರದೇನ... ಅತ್ತ ಸುಳ್ಳ ಓನ್ಯಾಗ ದುಂಬಡಿ ಮಾಡಕೊಂತ ತಿರಗತಾವ’ ಅಂತ ಮತ್ತೊಬ್ಬರು. ಮುತ್ತವ್ವಜ್ಜಿಗೆ ಎಲ್ಲಾರಿಗೂ ಇವನ ಕತಿ ಹೇಳಿ ಹೇಳಿ ಸಾಕಾಗಿತ್ತು.

ಹಿಂದಿನ ಮನಿ ರಮಜಾನ ಸಾಹೇಬ್ರು ಬಂದು ‘ಯಾಕ ಅಳತಿದಿಯೋ ಕಿಟ್ಟಿ, ಸಾಲಿಗಿ ಹೋಗಂಗಿಲ್ಲೇನು...? ಬಾಡಕಾವ.... ವಪ್ಪತ್ತ ಸಾಲಿ ಐತಿ ಇಂದ ಇವತ್ತು ಇದ ಹಾಡಾ ನಿಂದ...? ಯಾವಾಗ ಇದ ರಾಡಿ ಮುತ್ತವ್ವ ಚಿಗವ್ವ ಹುಡುಗ ವಾಂಡ ಬಾಳ ಆಗೇತಿ ನಾಕ ಲತ್ತಿ ಕೊಡು ಅಂವಗ’ ಅಂದ. ಮುತ್ತವ್ವ ಕೈಯಾಗಿನ ಬಾಂಡೆ ತೊಳೆಯೊದ ಬಿಟ್ಟು ‘ಬೈಯಾ ಅವನ ಮುಕಳಿ ಕಡಿಯಾಕತೈತಿ ಅದಕ ಮಾಡಾತಾನ. ರೊಕ್ಕಾ ಕೊಡ ಅನತೈತಿ ಬರೀ, ಇಲ್ಲಂದ್ರ ಕೇಳವಲ್ಲ. ಇಟಗೊಂಡ ನಾಯೇನ ಇಲ್ಲ ಅಂತಿನೇನ ಹೇಳಾ... ಮೊನ್ನಿ ಬಸನಾರ ಹೊಲಕ ಕೆಲಸಕ ಹೊಗಿದನಿ ಅವರು ಇನ್ನು ಪಗಾರ ಕೊಟ್ಟಿಲ್ಲ, ಇನ್ನ ಇವರನ್ನ ಅಪ್ಪ ರೊಕ್ಕಾ ಕಳಿಸೊದಂತು ಬಿಟ್ಟ ಬಿಟ್ಟಿದಾರ. ನನಗರ ಯಾರ ಅದಾರ ಹೇಳು....? ಗಂಡ ಮಗಾ ಅಂತ ಇದ್ದಾಂವ ಹ್ಯಾಣ್ತಿನ ಬೆನ್ನಹಚಗೊಂಡ ಊರಬಿಟ್ಟ. ಹ್ವಾದ ಊರಾಗ ಅವ್ವ ಅದಾಳ ಇಲ್ಲಾ ಸತ್ತಾಳ ಅಂತ ಇಚಾರ ಮಾಡಾಕು ಒಂದ ಕಾಗದಾ ಬರ್‍ಯಾಕು ಸುಟಗಾ ಇಲ್ಲ ಅವಗ. ಮಕ್ಕಳಿಗಿ ಇಟ್ಟ ಬ್ಯಾಸರಾಗಿ ಯಾಕ ಬದಿಕಿರಬೇಖ ಹೇಳಪಾ....? ನಾನ ಯಾಡ ಮನಿ ಬಿಕ್ಷಾ ಬೇಡೆರ ತಿಂದೇನ. ಈ ಹುಡುಗ ಬೆಳಿವ ವಯಸ್ಸಿನದು, ಮೂರೇಳೆ ಹೊಟ್ಟಿಗಿ ಬೇಕೊ ಬ್ಯಾಡೊ ನೀನ ಹೇಳ ಇದರ ಕರ್ಮಾ ನೊಡಾಕ ಆಗಲಾಕ ಇನ್ನೊಬ್ಬರಲ್ಲಿ ದುಡಿಲಾಕ ಹೊಂಟೇನಿ. ಇದಕರ ಬೇಕು ಬ್ಯಾಡಾ ಅಂತ ತಿಳದರ ನಾಕ ದುಡ್ಡ ಕಳಿಸಬೇಕನ್ನುವ ಇಚಾರಿಲ್ಲ ಮಗಾ ಸೊಸಿಗಿ... ಮಗಲಾಗ ಹೆಂಡರ ಬರಾನ ಹಿಂದಿನವ್ರ ಹೆಂಗ ಕಾಣತಾರ ಹೇಳ ಯಣ್ಣಾ...’ ಅಂತ ಕಣ್ಣಿರ ಸೀಟಿಕೊಂಡು ಮಗ ಸೊಸೆ ಮೇಲಿನ ಸಿಟ್ಟನ್ನು ಹೊರಹಾಕಿದಳು. ‘ಅಲ್ಲಾ ರೊಕ್ಕ ಯಾಕ ಬೇಕಂತ ಇವನ....?

ಉಂಡಾನಿಲ್ಲೋ....?’. ‘ಯಣ್ಣಾ ತಿನ್ನುವಂಗ ತಿಂದು ಉಂಡ ಮತ್ತ ರೊಕ್ಕ ಅಂತ ಅಂತೈತಿ.... ಹೊಲಸ ಹುಡುಗ ಅದೇನೊ ಸಾಲ್ಯಾಗ ಎನೋ ಬಂದೈತಿ ಅಂದ್ನವಾ... ಈ ಮಾಸ್ತರಗೋಳ ಎಲ್ಲಿ ಸುಮ್ಮಿರತಾವ.... ಹೂಂ.... ಅದ ಹೆಂತಾದೋ ಗರ್ದಿಗಮ್ಮತ್ತ ತರಿಸಿದಾರಂತ ಅಲ್ಲಿ. ಕುತಗೊಂಡ ರೊಕ್ಕಾ ತಗೋಂಬರ್‍್ರ್ಯೋ ಅಂತ ಹೇಳಿ ಕಳಿಸ್ತಾವ, ಹಂಗ ನಿನ್ನಿ ಚೆಂಜಿಮಾಡಿ ಹೇಳಿತ್ತ. ಈಗ ಬೆಳಿಗ್ಗಿನಿಂದ ಸುತಿ ಹಿಡದಾನ ನೋಡು ಎಲ್ಲಾರ ರೊಕ್ಕಾ ತಗೊಂಬರ್ರಿ ನೋಡ್ರಿ ಅಂತ ಹೇಳಿದಾರಂತ, ಅದಕ ಬೆಳಿಗ್ಗಿ ಎದ್ದಾಗಿನಿಂದ ಒದರಾಕ ಚಾಲು ಮಾಡಿದಾನ....’ ಅಂದಳು.

‘ಅದನ್ನೆಲ್ಲಾ ಎನ ನೋಡತಿ ಹೋಗ... ಹೋಗ... ಮುತ್ತವ್ವ ಕೊಡಬ್ಯಾಡ ಇವಗ. ಹುಡುಗೊರಿಗು ಬುದ್ದಿಯಿಲ್ಲಾ ಮಾಸ್ತರಿಗೋಳಿಗು ಬ್ಯಾಡಾ....?’ ಎನುತ ಲುಂಗಿ ಮೇಲೆರಿಸಿಕೊಳ್ಳುತ ಗಡ್ಡ ನೀವಿಕೊಳ್ಳುತ ಬಗಲಕಿಸೆಯೊಳಗೆ ಕೈಯಾಡಿಸಿಕೊಂಡು ನೋಡಿದ, ಎಂಟಾನೆ ಸಿಕ್ತು.

‘ತಗೋ... ಎಂಟಾನೆ ಐತಿ... ಹಿಡಿ, ತಗೊಂದ ಸಾಲಿಗಿ ಹೋಗು’ ಎನುತ ಅವನ ಕೈಗಿತ್ತ. ಕಿಟ್ಟಿ ಅದನ್ನು ತಿರಿಗಿಸಿ ನೋಡಿದ. ಮುತ್ತವಜ್ಜಿಯು ನಡುವ ಬಾಯಿ ಹಾಕಿ, ‘ಇರ್‍ಲಿ ತಗೋ.... ಮತ್ತ ಸಾಲಿಗಿ ಹೋಗ ಬಾ ಇನ್ನರ.... ಏಳು...’ ಅಂತ ಕರೆದಳು, ಆದರು ಕಿಟ್ಟಿಗೆ ಸಮಾದಾನವಾಗಲಿಲ್ಲ.

‘ಇದ ಬರೀ ಎಂಟಾನೆ ಐತಿ.... ನಂಗೇನ ಬ್ಯಾಡಾ... ಹೋಗ...’ ಅಂದ.
‘ಅಯ್‌...! ಇನ್ನೇಷ್ಟ ಬೇಕು ಮತ್ತ....?’ ಗದರಿಕೆಯಿಂದ ಕೇಳಿದಳು ಮುತ್ತವ್ವ....
‘ಐದ್ರೂಪಾಯಿ ಬೇಕು...’

‘ನನ್ನ ಹಂತ್ಯಾಕ ಇಷ್ಟ ಅದಾವ... ಬೇಕಾದ್ರ ತಗೋ ಬ್ಯಾಡಾದ್ರ ಬಿಡು’ ಅಂತಂದು ರಮಜಾನ ಸಾಹೇಬ ಗಡ್ಡ ನೀವಿಕೊಳ್ಳತೊಡಗಿದ.
‘ಈಗ ಇದನ ತಗೋಂದ ಹೋಗ ಬಾ. ನಾಳಿ ಉಳಕಿದ್ದು ನಮ್ಮ ಆಯಿ ತಂದ ಕೊಡತಾಳ ಅಂತ ಹೇಳು. ಹೋಗ ನಮ್ಮ ಅಪ್ಪ ಶಾಣ್ಯಾ ತಗೊಪಾ...’ ಅಂತ ರಮಿಸುತ ತಾನು ಎದ್ದು ಬಂದು ಸಮಾಧಾನಪಡಿಸಲು ಯತ್ನಿಸಿದಳು. ಕಿಟ್ಟಿಗೆ ಅಪಮಾನವಾದಂತಾಯಿತು. ರೋಷದ ಜೊತೆಗೆ ಹತಾಶೆ, ಸಂಕಟ, ಉಲ್ಬಣಗೊಂಡು ತಲೆ ಗಿರ್‌ ಅಂತು. ಅಂಗಳದಲ್ಲಿ ಕಾಲು ತಿಕ್ಕುತ ಧೂಳು ಎಬ್ಬಿಸುತ ಇದಕ್ಕಿನ್ನಾ ರಂಪ ಮಾಡಿ ಜೋರುದನಿಯಲ್ಲಿ ಅಳಲು ಶುರುಮಾಡಿದ. ರಾಕ್ಷಸದಂತಾ ದೊಡ್ಡ ಬಾಯಿತೆರೆದು ಹಾಂ.... ಅಂತ ಅಳತೊಡಗಿದ. ರಮಿಸಿ ಸಮಾಧಾನ ಮಾಡಲು ಬಂದ ಮುತ್ತವಳನ್ನು ಜೋರಾಗಿ ತಳ್ಳಿದ, ಕೈ ಕೊಸರಿದ ಕಿಟ್ಟಿಯ ಕೋಪದ ಮುಂದೆ ಮುತ್ತವ್ವ ಮೆತ್ತಗಾದಳು. ಅವಳಿಗೆ ಕೋಪ ದುಕ್ಕ ಎರಡು ಉಕ್ಕಿ ಬಂದವು.

‘ನೀ ಹಿಂಗ ಮಾಡೊದಾದ್ರ ನಿಮ್ಮವ್ವ ನಿಮ್ಮಪ್ಪ ಇದ್ದಲ್ಲಿಗಿ ಹೋಗಬಿಡು. ನನ್ನ ಹಂತ್ಯಾಕ ಇರಬೇಡ ನೀ....’ ಅಂತ ರೋಪ ಹಾಕಿ ಬೆದರಿಸಿದಳು. ಕಿಟ್ಟಿ ಇದಕ್ಕೆಲ್ಲ ಕ್ಯಾರೇ ಅನಲಿಲ್ಲ. ಮುತ್ತವ್ವ ಮತ್ತೇ ಮನಸ್ಸು ಕರಗಿಸಿಕೊಂಡು ಮೆತ್ತಗಾಗುತ....

‘ಎಲ್ಲಿಂದ ತರ್‍ಲಿ ಹೇಳು.... ಯಾರದಾರ ಮನ್ಯಾಗ ನನ್ನ ಚಾಕ್ರಿ ಇಟಗೊತಾರೇ ಕೇಳಿ ಇಡ ನಡಿ. ನಿನಗ ಎಸ್ಟ ರೊಕ್ಕಬೇಕ್ಲೊ ಅಸ್ಟ ಇಸಗೊಂಡ ಗರ್ದಿಗಮ್ಮತ್ತ, ಮಂಗ್ಯಾನಾಟ ನೊಡಕೊಂತ ಹೋದಿಯಂತ ನಾ ಅಲ್ಲೇ ದುಡುದ ದುಡುದ.... ಸಾಯತಿನಿ.... ನೀ ಚೈನಿ ಮಾಡಕೊಂತ ಹೋಗು’ ಅಂತಂದು ಕಣ್ಣೀರ ತಂದಳು. ದನಿ ಗದ್ದಿತವಾಗಿ ಮಾರಿಗಿ ಶೆರಗ ಹಿಡಿದು ಬಿಕ್ಕಿದಳು... ಕಿಟ್ಟಿಗೆ ಅವಳ ಕಣ್ಣೀರ ಚುರುಕ್‌ ಅನಿಸಿತು. ಅಳು ಸ್ವಲ್ಪ ತಡೆದು ಕಣ್ಣೀರು ಒರೆಸಿಕೊಂಡ... ಆದರೆ.... ಹಾಂ ಅನ್ನುವ ರಾಗ ಮಾತ್ರ ಬಂದಾಗಿರಲಿಲ್ಲ. ರಮಜಾನ ಸಾಹೇಬ್ರು ಇದೆನ್ನೆಲ್ಲವ ನೋಡಿ ಅಲ್ಲಿಂದ ನಡೆದು ಬಿಟ್ಟರು. ಕೊನಿಗಿ ಮುತ್ತವ್ವ ಕಣ್ಣೀರ ಒರೆಸಿಕೊಂಡ ಕಿಟ್ಟಿಯ ಧೂಳವಾದ ಕೈ ಕಾಳುಗಳನ್ನು ತನ್ನ ಸೀರೆ ಶರಗಿನಿಂದ ಒರೆಸುತ ‘ಶಾಣ್ಯಾ ಎಳಪಾ... ಸಾಲಿಗ ಹೋಗೇಳ... ಹೆಡಮಾಸ್ತರಿಗಿ ಹೇಳು ನಮ್ಮ ಪಗಾರ ಬಂದಿಲ್ಲಂತ. ಸ್ವಾಮಾರ ದಿನ ಅಕೀನ ಬಂದ ಕೊಡತಾಳ ಅಂತ. ಅನಕಾತನಕಾ ಈ ಎಂಟಾನೆ ತಗೋರಿ, ಉಳಕಿದ ಸ್ವಾಮಾರ ಬಂದ ಕೊಡತಿನಂದಾಳ ಅಂತ ಹೇಳ ಹೊಗ’ ಎಂದು ರಮಿಸಿ ಮೇಲೆಬ್ಬಿಸಲು ಪ್ರಯತ್ನಿಸಿದಳು. ಕಿಟ್ಟಿಗೆ ತನ್ನ ಸಿಟ್ಟು ಮತ್ತೇ ಜಾಗ್ರತವಾಯ್‍ತು. ‘ಇಲ್ಲ ಹೊಗ ನನಗ ಐದ್ರುಪಾಯಿ... ಬೇಕು...’ ಅಂದ.

‘ಅವ್ವಾ....ಇಲ್ಲಂದ್ರ ಯಾಕ ಕೇಳವಲ್ಲಿ ನೀ...’ ಅಂತ ರೇಗಾಡಿದಳು ಮುತ್ತವ್ವ. ಕೊನಿಗಿ ಇವ ಐದ್ರೂಪಾಯಿ ಕೊಡುವರಿಗಿ ಹೊಗೊದಿಲ್ಲಂತ ಗೊತ್ತಾದ ಮ್ಯಾಲ ತನ್ನ ಮಲಪಕ್ಕದಾಗ ಚಾಪುಡಿ ತರಬೇಕರಂದು ಇಟ್ಟಗೊಂಡಿದ್ದ ನಾಕಾಣಿ ಹೊರತೆಗೆದಳು. ಅನ್ಯಾಯವಾಗಿ ನಾಳಿಯಿಂದ ಚಹಾ ಕುಡಿಯೊದು ತಪ್ಪಿತಲಾ ಅಂತ ಬೇಗುದಿ ತಾಪ ಕೋಪವನ್ನು ಶಮನ ಮಾಡಿಕೊಳ್ಳುತ ರಮಜಾನ ಸಾಹೇಬ್ರು ಕೊಟ್ಟ ಎಂಟಾನೆ, ತನ್ನ ಬಳಿ ಇದ್ದ ನಾಕಾಣಿ ಎರಡೂ ಸೇರಿಸಿ– ‘ತಗೋ ಎಲ್ಲಾ ನಿನ್ನ ಹೆಣಕ ಬಡದ್ನಿ..... ಇನ್ನೇನ ಐತಿ ಹಾಳಾಗಿ ಹೊ ಬಾ.... ಅತ್ತ....’ ಅಂತ ಗದರಿದಳು. ಕಿಟ್ಟಿ ಮೊದಲಿನ ಎಂಟಾನೆ ಈಗಿನ ನಾಕಾಣಿ ಎರಡನ್ನು ಒಟ್ಟಿಗೆ ಹಿಡಿದು ನೋಡಿದ. ಇನ್ನು ಕಡಿಮಿ ಬಿತ್ತು. ಮುಖಾ ಉದಿಸಕೊಂಡು ‘ಇನ್ನು ಬೇಕಲಾ....?’ ಅಂದ.

‘ಇನ್ನೇಲ್ಲಿದ, ನಿಮ್ಮವ್ವನ ಗೆಣ್ಯಾ ಅದಾನು ಇಲ್ಲಿ ಕೊಡಾಕ....? ನಾಳಿ ಚಾ ಪುಡಿಗಿ ಅಂತ ಇಟಗೊಂಡಿದ್ದು ನಿನ್ನ ಹೆಣಕ ಬಡಿಲಿಲ್ಲಾ ಈಗ? ಇನ್ನೇಲಿಂದ ತರ್‍ಲಿ...’ ಅಂತ ಗುಡುಗಿದಳು. ಕಿಟ್ಟಿಗೆ ಮತ್ತೆ ಅಪಮಾನವಾದಂತಾಯಿತು. ಸಿಟ್ಟು ನೆತ್ತಿಗೆ ಬಡಿದು ‘ರೊಕ್ಕ ಕಡಿಮಿ ಇದ್ರ ಅವರು ಕರ್‍ಕೊಳ್ಳಾಂಗಿಲ್ಲ. ನಾಯೇನು ಹೊಗಾಂಗಿಲ್ಲ ಹೋಗ ಅಂತ...’ ಕಾಲು ಕೊಸರಾಡುತ ರಂಪ ಶುರುಮಾಡಿದ. ಮುತ್ತವ್ವಳಿಗೆ ಮೊಮ್ಮಗನ ನಡವಳಿಕಿ ಮತ್ತಷ್ಟು ಕೋಪ ತರಿಸಿತು. ಕುಳಿತಲ್ಲಿಂದ್ಲೇ ನೆಲಕ್ಕ ಕೈಯೂರಿ ಮೇಲೆದ್ದು, ‘ನೀ ಹೋಗಬ್ಯಾಡ ಇಲ್ಲೇ ಕುಂದರ... ಎಟೋತ ಕುಂದ್ರತಿ ಕುಂದ್ರ’ ಅಂತಂದು ಪಾತ್ರೀ ತೊಳೆಯಲು ನಡೆದಳು. ಕಿಟ್ಟಿಗೆ ಮತ್ತೇ ದುಕ್ಕ ಉಕ್ಕಿಬಂತು. ಆಯಿ ತನ್ನನ್ನು ದಾದ ಮಾಡದೇ ಹೊರಟಿದಾಳಲ್ಲ ಅಂತ ರೋಷದಿಂದ ಕೈಗೆ ಸಿಕ್ಕ ಕಲ್ಲು ಮಣ್ಣು ಒಟ್ಟುಗೂಡಿಸಿ ಅವಳಿಗೆ ಎಸೆದ. ಅವಳು ತಿರಿಗಿ ನಿಂತು ‘ನಿನಗ ತಿಂದ ಮೈ ಸೊಕ್ಕ ಹೆಚ್ಚಾಗೇತಿ. ಆ ರೊಕ್ಕಾ ತತಾ.... ಇಲ್ಲಿ. ಆಮ್ಯಾಲ ನೀ ಎಲ್ಲಿ ಕುಂತ ಅಳತಿ ಅಳೊಗ. ನಿನ್ನ ಯಾವ ನಾಯಿ ಮೂಸಾಗಿಲ್ಲ’ ಅಂತಂದು ಕೊಟ್ಟಾ ರೊಕ್ಕಾ ಇಸಿದುಕೊಳ್ಳಲು ಬಂದಾಗ ಕಿಟ್ಟಿ  ವ್ಯಗ್ರನಾದ. ಎದ್ದುನಿಂತು ‘ನಡ್ಯಾ ನಡಿ... ಎಲ್ಲಿ ರೊಕ್ಕಾ.... ಹೋಗ’ ಅಂತಂದು ಹಿಂದಿನ ಮನಿ ಮಾಳಿಗಿಮ್ಯಾಲ ಅವು ಎರಡು ರೊಕ್ಕಾ ಬೀಸಿ ಒಗೆದ ಬಿಟ್ಟ. ಆ ಎರಡು ನಾಣ್ಯಗಳು ಮಾಳಿಗಿಮ್ಯಾಲ ಫಳ್‌ ಅಂತ ಸಪ್ಪಾಳ ಮಾಡಿ ಸುಮ್ಮಣಾದವು.... ಮುತ್ತವಳಿಗಿ ಮ್ಯಯ್ಯಾಯ ದೆವ್ವ ಬಡಕೊಂತ. ಬೆಳಗಿನಿಂದ ಇವನ ಆಟಾ ನೋಡಿ ಬ್ಯಾಸತ್ತು ಹೊಗಿದ್ದು ಹತಾಶೆ, ಸಂಕಟ, ಸಿಟ್ಟುಗಳಿಂದ ಕಂಗೆಟ್ಟಿದ್ದ ಆಕೆಗೆ ತನ್ನ ಬಳಿ ಇರುವ ನಾಕಾಣಿ ದಿಕ್ಕಿಲ್ಲದ ಹಾರಿಸಿದ ಮೊಮ್ಮಗನ ಮೊಂಡ ಸ್ವಭಾವಕ ಕುದಿದು ಓಡಿಬಂದು ಧಮ್‌ ಧಮ್‌ ಅಂತ ದನಕ್ಕ ಬಡಿದಂತೆ ಬೆನ್ನ ಮ್ಯಾಲ ಬಡಿದಳು.

‘ಊರ ಬಾಡ್ಯಾ ರೊಕ್ಕಾ ನಿನ್ನ ಕೈಗಿ ಗಿರಣಿ ಹತ್ತಲಿ, ನಿನ್ನ ಕೊಂದ ಒಗಿತೇನ ತಡೀ’ ಎಂದು ಹಲ್ಲು ಅವುಡಗಚ್ಚಿ ಎಳಿ ಬೆನ್ನಿನಮ್ಯಾಲ ಶಕ್ತಿಮೀರಿ ಗುದ್ದಿದಳು. ‘ವದರತಿ... ಬಾಡ್ಯಾ..... ಮುಚ್ಚ ಬಾಯಿ’ ಎಂದು ರೋಷದಿಂದ ಮೈಮ್ಯಾಲ ಪ್ರಜ್ಞಾ ಇಲ್ಲದ ಕುತಗಿ ಹಿಚುಕತೊಡಗಿದಳು. ಕಿಟ್ಟಿ ಉಸುರುಗಟ್ಟಿ.... ಕ್ವಾ.... ಕ್ವಾ.... ಅಂತ ಕೆಮ್ಮಿ ಹಾಂ ಅಂತ ಒದರಿದ... ಕಣ್ಣು ಕೆಂಪಡರಿದವು. ಮೂಗಿನಿಂದ ಸಿಂಬಳದ ಜೊತಿಗಿ ದುಪ್ಪಟ್ಟು ಹೊರಬಂದವು. ಆ ಕಡೇಯಿಂದ ಎತ್ತಿನ ಬಂಡಿ ಹೂಡಿಕೊಂಡು ಹೊಲಕ್ಕೆ ಹೊರಟಿದ್ದ ಗುಡಸಿಕರ ಮುತ್ತವಳ ರಂಪಾಟ ನೋಡಿ ಗಾಡಿ ನಿಲ್ಲಿಸಿ, ಒಂದೇ ಹಾರಿಕೆಗೆ ಗಾಡಿಯಿಂದಿಳಿದು ಓಡ್ಹೋಡಿ ಬಂದು ಮುತ್ತವಳ ಅವತಾರ ಕಂಡು ‘ಮುತ್ತವ್ವ ಚಿಗವ್ವ ಎನ ಮಾಡಾತಿ, ಕೊಂದಿ ಬಿಡವಾ ಕೂಸ್ನಾ.... ಅಂಗೈಯಾಗಿನ ಲಿಂಗದಂಗ ಸಾಕಿಕೊಂಡ ಬಂದದಿ. ಈಗ ಕುತಗಿ ಹಿಚುಕಾತಿ... ಏಯ್ ಬಿಡವ್ವಾ ಬಿಡ ನಿನ್ನ... ತಿಳಿಲಾರದ ಕೂಸ ಒಂದ ಅಡಿದ್ದೊತು ಅಂದಿದ್ದೊತು. ಅದಕ್ಕ ಹಿಂಗ ಸಿಟ್ಟಿನ ಕೈಯಾಗ ಬುದ್ದಿ ಕೊಡತಾರು. ಮುದುಕಿ ಆಗಿ ಬುದ್ದಿ ಎಲ್ಲಿ ಇಟ್ಟಿದಿ....? ಹಾಂ..... ಥೂ ಏನು ನಿನ್ನ ಬಂಡ ಬಾಳೆ ಅಂತಿನಿ’ ಎಂದು ಕಿಟ್ಟಿಯನ್ನು ಮುತ್ತವಳಿಂದ ಬಿಡಿಸಿಗೊಂಡು ಅವನ ತಲಿ ಸವರಿ ಬೆನ್ನ ಸವರಿ ಮಾರಿ ಕಣ್ಣೀರ ಒರೆಸುತ.

‘ನೀನರೇ ಏನೋ ಹುಚ್ಚ ಹಡ್ಸಿ ಮಗನಾ.... ಇದ್ದದ ತಿಂದು ಸಾಲಿಗಿ ಹೋಗಾಕ ಏನು ದಾಡಿ ನಿನಗ ಅಂತಿನಿ...?’ ಅಂತ ಕಿಟ್ಟಿಯನ್ನು ಗದರಿಸುತ ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದ. ಸಿಟ್ಟಿನಿಂದ ಕುದಿದು ಹೊಗಿದ್ದ ಮುತ್ತವ್ವ ಆವೇಶದಿಂದ ಅವಳ ಉಸಿರಾಟ ಕ್ರಿಯೆ ಏರುಪೇರು ಆಗಿತ್ತು ಉಸಿರನ್ನು ತಹಬದಿಗೆ ತರುತ್ತ...

‘ಮನಿಶಾ ಅಂದಮ್ಯಾಲ ಎಟ್ಟರ ಸಹನ ತಿನ್ನೋದ ಹೇಳಪಾ? ಹರ್ಯಾಗ ಎದ್ದ ಬರಾ ಬರ ಚಾಲೂ ಮಾಡಿದಾನ ಅಣ್ಣಾ ಅಪ್ಪಾ ಅಂದರ ಕೇಳುತ್ತಿಲ್ಲ. ರಮಜಾನ ಸಾಹೇಬ ಎಂಟಾನಿ ಕೊಟ್ಟ ಹೋದ. ನಾನ ನಾಲಕಾಣೆ ಕೊಟ್ನಿ, ಒಂದ ರೂಪಾಯಿ ಕೊಡುತನಕ ಬಿಡಾಂಗಿಲ್ಲ ಅಂದ್ರ ಎಂತಾ ಮಾತಪಾ....? ಹಟ ಮಾಡಿ ಆಳತಾನ. ಇಲ್ಲದಿರ ಎಲ್ಲಿಂದ ತರೋದ ಹೇಳಪಾ? ಬಡುರ ಮಕ್ಕಳಾಗಿ ಹೆಂಗಿರಬೇಕಿಂವಾ  ತಿಳ್ಯಾಂಗಿಲ್ಲ ಇವಗ...’ ಅಂತ ಗುಡುಗಿದಳು.

‘ಸನ್ನ ಹುಡುಗರಿಗೆಲ್ಲ ಅದೆಲ್ಲಿ ತಿಳಿತೈತಿ... ಚಿಗವ್ವ ಕಂಡದ್ದ ಬೇಡುವ ಅವ... ಹುಡುಗೊರ ಹುಡುಗರನ್ನ ನೋಡಿ ಕಾಡತಾವ ಬೇಡತಾವ, ಅದಕ್ಕಾಗಿ ಹಿಂಗ ಬುದ್ದಿಗೆಡಬಾರದ ನಾವ’.

‘ಎಲ್ಲಿ ಇವರಪ್ಪ ಗಳಿಸಿ ತಂದ ಕೊಟ್ಟಿದಾನ ಇಟಿಗೊಂದ ಇಲ್ಲ ಅನ್ನಾತಿನಿ ಹೇಳ...’.

‘ಅದೆಲ್ಲಾ ಬರೊಬರಿ ನಮಗ ತಿಳಿತೈತಿ, ಹುಡುಗೊರಿಗೆ ತಿಳಿಬೇಕಲ್ಲಾ... ಅವಕೆನು ಬುದ್ದಿ ಇರತೈತಿ...? ದೌಳಕ್ಕಿನ ಹುಚ್ಚರಂಗ ಮಾಡಿದರ ಎದಕ ಬಂತು. ಹೆಚ್ಚು ಕಡಿಮಿ ಅದರ ಏನು ಮಾಡ್ತಿ...? ಆಗ ಬಿದ್ದಾಡಿ ಅತ್ತರ ಬರತೈತಿ...?’ ಈ ಮಾತಿಗೆ ಮುತ್ತಪ್ಪ ಸುಮ್ಮನೆ ಬಿಕ್ಕಿದಳು. ಕಿಟ್ಟಿ ಮಾತ್ರ ಇನ್ನು ರಾಗವಾಗಿ ಅಳುತ್ತಲೆ ಇದ್ದ. ಮುತ್ತವ್ವಳಿಗೆ ತನ್ನ ತಪ್ಪಿನ ಅರಿವಾಗಿ ಕಣ್ಣಲ್ಲಿ ನೀರು ಸುರಿಯುತ್ತಿದ್ದವು.

‘ಅವನ ಪಾಟೀ ಚೀಲಾ ಕೊಡು. ನಾ ಹೊಲಕ ಹೊಂಟೇನಿ. ನನ್ನ ಮಗಳ ಜೊಡಿ ಅವನ್ನು ಸಾಲಿಗಿ ಬಿಡತಿನಿ. ಐದ್ರೂಪಾಯಿ ಹೌಂದಿಲ್ಲ, ನಾ ಕೊಡತಿನಿ ಬಿಡು. ಇಬ್ಬರನ್ನು ಸಾಲಿಗಿ ಬಿಟ್ಟ ನಾ ಹೊಲಕ ಹೋಗತಿನಂತ. ಹೋಗ ಗಡಾನ ಪಾಟಿ ಚೀಲಾ ತರೋಗ’ ಅಂದಾಗ ಮುತ್ತವ್ವ ಮೆಲ್ಲಗೊಳಗ ಹೋಗಿ ಪಾಟಿ ಚೀಲಾ ತಂದು ಹೆಗಲಿಗೆ ಹಾಕಿದಳು. ಸಿರಿ ಸೇರಗಿನಿಂದ ಮುಖ ಒರಿಸಿ ಅಂಗಿ ಗುಂಡಿ ಹಾಕಿದಳು. ಗುಡಸಿಕರ ಕಿಟ್ಟಿಗೆ ಒಂದ್ರುಪಾಯಿ ಕೊಟ್ಟು ಅವನನ್ನು ಎತ್ತಿಕೊಂಡು ಗಾಡಿಲಿ ಕೂಡರಿಸಿಕೊಂಡು ಬಂಡಿ ಹೊಡೆದುಕೊಂಡು ನಡೆದ. ಮುತ್ತವ್ವ ಮೊಮ್ಮಗ ಹೋದ ದಾರಿಯನ್ನೆ ನೋಡುತ ನಿಂತಳು.

ಗುಡಸಿಕರನ ಮಗಳು ಶಾಂತವ್ವ, ಕಿಟ್ಟಿ ಇಬ್ಬರು ಗಾಡಿಲಿ ಒಬ್ಬರ ಮುಖ ಒಬ್ಬರು ನೋಡುತ್ತಾ ಮೌನವಾಗಿ ಕುಳಿತಿದ್ದರು. ಕಿಟ್ಟಿ ಒಂದ್ರೂಪಾಯಿ ಕೈಯಲ್ಲಿ ಹಿಡಿದು ಸನ್ನದಾಗಿ ಇನ್ನು ಬಿಕ್ಕುತ್ತಿದ್ದ. ಅವನಿಗೆ ಬಹಳ ಕೋಪ ಬಂದಿತ್ತು. ಇಷ್ಟೋತ್ತಿಗಾಗಲೆ ಗೆಳೆಯರ ಜೊತೆಲಿ ಶಾಲೇಲಿ ಗರ್ದಿಗಮ್ಮತ್ತ ನೋಡಲು ಎಲ್ಲರ ಜೊತೆ ಓಡಾಡಬೇಕಿದ್ದವ ಇನ್ನು ದಾರಿಲಿ ಇದ್ದು ಅಸಂತುಷ್ಟನಾಗಿದ್ದ, ಸಮಾಧಾನದ ಸಂಗತಿಯೆಂದರೆ ಹ್ಯಾಂಗೊ ಒಂದ್ರೂಪಾಯ್ನಿ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದದ್ದು ಸಂತೋಷ ತರಿಸಿತ್ತು. ಅಂಗಳದಲ್ಲಿ ಬಹಳೊತ್ತಿನಿಂದ ಉರುಳಾಡಿದ್ರಿಂದ ಕೈ ಕಾಲುಗಳೆಲ್ಲ ಮಣ್ಣಾಗಿದ್ದವು. ಅಂಗೈಗೆ ಧೂಳ ಮೆತ್ತಿಕೊಂಡಿತ್ತು. ಅಂಗೈ ಮೇಲೆ ಥೂ ಅಂತ ಉಗುಳಿಕೊಂಡು ಅದರಿಂದ ಕಾಲು ಕೈ ಒರೆಸಿಕೊಂಡ. ಅಂಗಿ ಜಾಡಿಸಿಕೊಂಡು ಸ್ವಚ್ಛಗೊಳಿಸಲು ಮುಂದಾದ. ಅಂಗಿ ಚಡ್ಡಿ ಜಾಡಿಸಿಕೊಂಡ.

ಗುಡಸಿಕರನ ಹೊಲಾ ಇದ್ದದ್ದು ಊರಿನ ಪೂರ್ವ ಭಾಗಕ್ಕೆ, ಅಂದರೆ ಕನ್ನಡ ಪ್ರಾಥಮಿಕ ಶಾಲೆಯ ಹಿಂದಿನ ದಾರಿಲಿ. ಎರಡು ಹರದಾರಿ ಹೋದರೆ ಗುಡಸಿಕರನ ಹೊಲ ಬರುತ್ತದೆ. ಹಾಗಾಗಿ ಕಿಟ್ಟಿನ ಗಾಡ್ಯಾಗ ಕೂಡ್ರಿಸಿಕೊಂಡು ನಡೆದಿದ್ದ ಗುಡಸಿಕರನ ಸಾಕು ನಾಯಿ ಎತ್ತಿನ ಬಂಡಿ ಕೆಳಗಡೆ ನಡೆದು ಬರುತ್ತಿತ್ತು. ಹೇಳಕೇಳಿ ಅದು ಅವನ ಸಾಕು ನಾಯಿ, ಸದಾ ಗುಡಸಿಕರನ ಹಿಂದಿಂದೆ ಅವ ಹೋದಲ್ಲಿ, ಬಂದಲ್ಲಿ, ಹೊಲಕ್ಕ ಹೋಗಲಿ, ಊರಿಗೆ ಹೋಗಲಿ ಅವನ ಬೆನ್ನ ಹಿಂದೆನೆ ಬರುತ್ತಿತ್ತು. ಗುಡಸಿಕರ ಬಂಡಿಯೊಳಗೆ ಇದ್ದರೆ ಅದು ಬಂಡಿ ಕೆಳಗಡೆ ನಡೆದುಕೊಂಡು ಬರುವುದು ವಾಡಿಕೆ. ಕಿಟ್ಟಿ ಅದನ್ನೆ ಬಗ್ಗಿ ನೋಡುತ ಕುಳಿತಿದ್ದ. ಗಾಡಿಯ ವೇಗಕೆ ಅನುಗುಣವಾಗಿ ಅದು ನಾಲಿಗೆ ಹೊರ ಚಾಚಿಕೊಂಡು ಬೆನ್ನು ಹತ್ತಿತ್ತು. ಗಾಡಿ ಪಕ್ಕದ ರಸ್ತೇಗೆ ತಿರುಗಿ ಕಾಲುವೆ ಮೇಲಿರುವ ರಸ್ತೇ ಹಿಡಿದು ಹೊರಟಿತು... ನಾಯಿ ಒಂದ ವೇಗದಲ್ಲಿ ಗಾಡಿಯ ಬೆನ್ನು ಹತ್ತಿ ಓಡುತ್ತಿತ್ತು. ಅದೆಲ್ಲಿದ್ದವೊ ಕುರುಬರ ನಾಯಿಗಳು, ಗುಡಸಿಕರನ  ನಾಯಿಯನ್ನು ನೋಡಿದ ಕೂಡಲೇ ರಭಸದಿಂದ ಓಡ್ಹೋಡಿ ಗಾಡಿಯತ್ತ ಬಂದವು. ಅವಕ್ಕು ಗುಡಸಿಕರನ ನಾಯಿಗೆ ನೋಟದಿಂದಲೆ  ಶುರುವಾದ ಜಗಳ ಒಂದನ್ನು ನೋಡಿ ಇನ್ನೊಂದು ಕೆಕ್ಕರಿಸಿ ಬೊಗಳತೊಡಗಿದವು. ಗುಡಸಿಕರ ತನ್ನ  ಬಂಡಿ ಹಿಂದೆ ಬಂದ ಕುರುಬರ ನಾಯಿಗಳನ್ನು ನೋಡಿ ತನ್ನ ನಾಯಿ ಜೊತೆಗೆ ವಿನಾಕಾರಣ ಜಗಳವಾಡುತ್ತಿರುವ ಸಂಗತಿ ತಿಳಿದು ಕುಪಿತಗೊಂಡ. ಕೈಯಲ್ಲಿರುವ ಬಾರುಕೋಲಿನಿಂದ ಹಿಂದಕ್ಕೆ ಜಾಡಿಸಿ ‘ಹಚ್ಚಾ ..... ಹಚ್ಚ.... ಹೋಗಾಕ್ರೋ ... ನಿಮ್ಮವ್ವಗೋಳ....’ ಅಂತ ಗದರಿದ. ಕಿಟ್ಟಿ ಮತ್ತು ಶಾಂತವ್ವ ಇಬ್ಬರು ಕೂಡಾ ಅವುಗಳ ಹಾರಾಟ ನೋಡಿ ಹೆದರಿದ್ದರು. ಬಾರುಕೋಲಿನ ಎಟಿನಿಂದ ತಪ್ಪಿಸಿಕೊಂಡವರಂತೆ ಮಾಡಿ ಸ್ವಲ್ಪ ಹಿಂದೆ ಉಳಿದಂತೆ ಮಾಡಿ ನಾಯಿಗಳು ಕೆಣಕಿ ನ್ಯಾಯ ತೆಗೆಯಲು ಮತ್ತೇ ಓಡ್ಹೋಡಿ ಬಂದು ಗುಡಸಿಕರನ ನಾಯಿ ಮೇಲೆ ಎರಗಿದವು. ಗುಡಸಿಕರನ ನಾಯಿ ಒಂದೇ ಆಗಿದ್ದರಿಂದ ಅದಕ್ಕೆ ಯಾವ ಕಡೇ ಹೋಗಲು ತಿಳಿಯದೆ ಹೆದರಿ ಕುಂಯ್‌ ಕುಂಯ್‌ ಅಂತ ತನ್ನ ಮಾಲಕನ ಆಶ್ರಯ ತೊರೆದು ಹೋಗಲು ಹೆದರಿ ಅಲ್ಲೇ ಓಡಾಡಿತು.

ಗುಡಸಿಕರ ಎತ್ತುಗಳ ಹಗ್ಗವ ಜಗ್ಗಿ ಹಿಡಿದು ನಿಲ್ಲಿಸಿ ಗಾಡಿ ಕೆಳಗಿನ ಕುರುಬರ ನಾಯಿಗಳಿಗೆ ಬಾರುಕೋಲಿನಿಂದ ಬೀಸಿ ಹೊಡೆದ. ಅವು ಅದಕ್ಕೆ ಪ್ರತಿಯಾಗಿ ಅವನ ಮೇಲಿನ ಕೋಪವನ್ನು ಅವನ ನಾಯಿಮೇಲೆ ತೋರಿಸುತ್ತ ಅದನ್ನು ಹಿಗ್ಗಾ ಮುಗ್ಗಾ ಕಚ್ಚತೊಡಗಿದವು. ಆ ನಾಯಿ ಪ್ರಾಣ ಭೀತಿಯಿಂದ ಅತ್ತಿತ್ತ ಓಡಾಡುತ ಎತ್ತುಗಳ ಕಾಲಲಿ ಬಿದ್ದು ಉರುಳಾಡಿತು. ಕುರುಬರ ನಾಯಿಗಳು ಆವೇಶದಲ್ಲಿ ಗುಡಸಿಕರನ ನಾಯಿ ಜೊತೆಗೆ ಏಟಿಗೆ ಸಿಕ್ಕ ಎತ್ತಿನ ಕಾಲನ್ನು ಕಚ್ಚಿಬಿಟ್ಟಿತು. ಹೆದರಿದ ಎತ್ತುಗಳು ಯಾವ ಕಡೆ ಹೋಗಬೇಕೆಂದು ತಿಳಿಯದೆ ನಾಯಿಗಳ ಕಾಟಕ್ಕೆ ಹೆದರಿ ಅತ್ತಿತ್ತ ಕುಣಿದಾಡಿದವು. ಕಣ್ಣ ಮುಚ್ಚಿ ತೆರೆಯುವಷ್ಟರಲ್ಲಿ ಎತ್ತಿನ ಗಾಡಿ ತುಂಬಿದ ಕಾಲುವೆಗೆ ಉರುಳಿ ಬಿತ್ತು.
ಚಕ್ಕಡಿ ಕಾಲವಿಯೊಳಗೆ ಬೀಳೊದನ್ನು ಅವರಿವರು ನೋಡಿದರು. ಹೌಹಾರಿ ಹೆದರಿ ಲಗುಬಗೆಯಿಂದ ಧಾವಿಸಿ ಅಲ್ಲಿಗೆ ಓಡಿ ಬಂದರು.

ಯಾರೋ ಹೆಂಗಸರು ಅರಿವಿ ಒಗಿತಿದ್ದವರು, ನೀರ ತರಲು ಬಂದವರು, ನೋಡಿ ಲಬೊೋ ಲಬೊೋ .... ಅಂತ ಹೊಯಕೊಂಡಾಗ ಆಜುಬಾಜೂಕಿನ ಮಂದೆಲ್ಲ ಕೂಡಿತು. ಕಾಲವಿಯೊಳಗೆ ನೀರಿನ ಸೆಳೆತ ಬಾಳ ಇದ್ದದರಿಂದ ಸೆಳವು ಎತ್ತುಗಳನ್ನು ಹಾಂಗ ಹಾಂಗ ಎಳಕೊಂಡ ನಡೆದಿತ್ತು. ಎತ್ತು ಗಾಡಿ ಸೆಳುವಿನ ಭರಾಟಿಗಿ ಜೊರಾಗಿಯೆ ಓಡುತ್ತಿತ್ತು. ಯಾರೊ ಒಬ್ಬರು ಹಗ್ಗಾ ಹಿಡಕೊಂಡ ಎತ್ತಿನ ಬೆನ್ನಿನ ಮ್ಯಾಲ ಜಿಗಿದು ಬಂಡಿಗಿ ಹಗ್ಗಾ ಒಗೆದು ಕಟ್ಟಿ, ದಂಡಿಮ್ಯಾಲ ನಿಂತವರ ಕೈಯಾಗ ಬೀಸಿ ಒಗೆದ. ಅದನ್ನು ನಾಲ್ಕ ಜನ ಹಿಡಕೊಂಡರು. ಏಳೆಂಟ ಮಂದಿ ಗಟ್ಟಿಯಾಗಿ ಹಗ್ಗಾ ಜಗ್ಗಿ ಎಳೆದರು. ಇನ್ನೊಬ್ಬ ಜಿಗಿದು ಎತ್ತಿನ ಕೊಳ್ಳ ಪಟ್ಟಿ ಹಾಕಿದ. ಹಗ್ಗಾ ಕುಡಗೋಲಿನಿಂದ ಕೊಯ್ದು ಎತ್ತುಗಳನ್ನು ಮೇಲಕ್ಕೆ ಜಗ್ಗಿದರು. ಗಾಡಿ ಜಗ್ಗಿದರು.... ಖಾಲಿ ಗಾಡಿ ಮ್ಯಾಲಕ ಬಂತು... ಅದರಲ್ಲಿದ್ದವರು ಬಹಳಷ್ಟು ದೂರ ಹೋಗಿದ್ದರು...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT