ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ ಎಂಬ ಭೂತ!

ಅಕ್ಷರ ಗಾತ್ರ

ಪ್ರಕರಣ 1
`ವಿದ್ಯಾ (30) ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ. ಈಕೆಯ ಪತಿ ವಿನಯ್ ಶರ್ಮಾ (39) ದೊಡ್ಡ ಕಂಪೆನಿಯೊಂದರಲ್ಲಿ ಹಿರಿಯ ಅಧಿಕಾರಿ. ಇಬ್ಬರಿಗೂ ಒಳ್ಳೆಯ ವೇತನ. ವಿವಾಹವಾಗಿ ಒಂದು ವರ್ಷವಾಗಿದೆ. ಮಗು ಪಡೆಯುವ ಆತುರ ಇಬ್ಬರಿಗೂ ಇಲ್ಲ. ಆದರೂ ಅವರು ಮುಂಜಾಗ್ರತೆ ವಹಿಸದೆ ಲೈಂಗಿಕ ಸಂಪರ್ಕ ನಡೆಸುತ್ತಾರೆ. ವಿದ್ಯಾ ಗರ್ಭ ಧರಿಸುತ್ತಾಳೆ.

ಆದರೆ, ದಂಪತಿಗೆ ಇಷ್ಟು ಬೇಗ ಮಗು ಬೇಕಿರಲಿಲ್ಲ. ಈ ಬಗ್ಗೆ ತಜ್ಞ ವ್ಯೆದ್ಯರ ಬಳಿಯೂ ಹೇಳಿಕೊಳ್ಳುವ ಮನಸ್ಸಿಲ್ಲ. ಏಕೆಂದರೆ ಇವರದು ತುಂಬಾ ಸಂಪ್ರದಾಯಸ್ಥ ಕುಟುಂಬ! ವಿದ್ಯಾ ಗರ್ಭಪಾತಕ್ಕಾಗಿ ವ್ಯೆದ್ಯರನ್ನು ಸಂಪರ್ಕಿಸದೆ ತಾನೇ ಔಷಧಿ ಅಂಗಡಿಯಲ್ಲಿ ಮಾತ್ರೆ ಖರೀದಿಸಿ ಸೇವಿಸುತ್ತಾಳೆ. ಇದರಿಂದ ಆಕೆಗೆ ನಿರಂತರವಾಗಿ ಅತಿಯಾದ ರಕ್ತಸ್ರಾವ, ಕೆಳಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ನಂತರ ವ್ಯೆದ್ಯರ ಬಳಿ ಬಂದ ದಂಪತಿಗೆ, ಅಪೂರ್ಣ ಗರ್ಭಪಾತವಾಗಿರುವ ಮತ್ತು ಗರ್ಭನಾಳಕ್ಕೆ ಸೋಂಕು ತಗುಲಿರುವ ವಿಷಯ ತಿಳಿಯುತ್ತದೆ.

ಪ್ರಕರಣ 2
`ರೇಖಾಗೆ ಮದುವೆಯಾಗಿ 7 ವರ್ಷವಾಗಿದೆ. ಆಕೆಗೆ ಐದು ವರ್ಷದ ಹೆಣ್ಣು ಮಗು ಇದೆ. ಎರಡನೇ ಮಗು ಪಡೆಯಲು ದಂಪತಿಗೆ ಆಸಕ್ತಿ ಇಲ್ಲ. ಮತ್ತೆ ಹೆಣ್ಣು ಮಗು ಜನಿಸಿಬಿಟ್ಟರೆ ಎಂಬ ಚಿಂತೆ. ಆದರೂ ದಂಪತಿ ಗರ್ಭ ನಿರೋಧಕ ಕ್ರಮಗಳನ್ನು ಅನುಸರಿಸದೆ ನಡೆಸಿದ ಸಂಭೋಗದಿಂದ ರೇಖಾ ಗರ್ಭ ಧರಿಸುತ್ತಾಳೆ. ಬಳಿಕ ತಜ್ಞ ವೈದ್ಯರ ಮೂಲಕ ಗರ್ಭಪಾತ ಮಾಡಿಸಿಕೊಳ್ಳುತ್ತಾಳೆ.

ನಂತರವೂ ಮತ್ತೆ ದಂಪತಿಯಿಂದ ಅದೇ ತಪ್ಪು. ಪುನಃ ವ್ಯೆದ್ಯರ ನೆರವಿನಿಂದ ಗರ್ಭಪಾತ. ಮೂರನೇ ಬಾರಿಯೂ ಗರ್ಭ ಧರಿಸುತ್ತಾಳೆ. ಆದರೆ, ಈ ಬಾರಿ ವೈದ್ಯರ ಬಳಿ ಹೋಗದೆ `ಸರಿಯಾಗಿ ಋತುಚಕ್ರ ಆಗುತ್ತಿಲ್ಲ' ಎಂದು ಸುಳ್ಳು ಹೇಳಿ, ತಾನೇ ಔಷಧಿ ಅಂಗಡಿಯಿಂದ ಮಾತ್ರೆ ತಂದು ಸೇವಿಸುತ್ತಾಳೆ. ಇದರಿಂದ ಅಡ್ಡ ಪರಿಣಾಮವಾಗಿ ಹೆಚ್ಚು ರಕ್ತಸ್ರಾವ ಸಂಭವಿಸಿ, ಆಸ್ಪತ್ರೆಗೆ ದಾಖಲಾಗುತ್ತಾಳೆ.

ಪ್ರಕರಣ 3
ಪ್ರೇಮಿಗಳ ನಡುವೆ ವಿವಾಹಪೂರ್ವ ಲೈಂಗಿಕ ಸಂಪರ್ಕ ಉಂಟಾಗಿ, ಯುವತಿ ಗರ್ಭವತಿಯಾಗುತ್ತಾಳೆ. ಈ ಬಗ್ಗೆ ಅಸಲಿ ವೈದ್ಯರ ಬಳಿ ಹೇಳಿಕೊಳ್ಳಲು ಭಯ! ನಕಲಿ ವೈದ್ಯರ ನೆರವಿನಿಂದ, ಕಾನೂನು ಬಾಹಿರವಾಗಿ ಆಕೆಗೆ ಗರ್ಭಪಾತ. ಪದೇ ಪದೇ ಇದು ಪುನರಾವರ್ತನೆ. ಅಂತಿಮವಾಗಿ ಗರ್ಭಚೀಲವನ್ನೇ ತೆಗೆಯಬೇಕು ಎಂಬ ವೈದ್ಯರ ಹೇಳಿಕೆ. ಇದನ್ನು ಕೇಳಿದ ಯುವತಿ ಆತ್ಮಹತ್ಯೆಗೆ ಯತ್ನಿಸುತ್ತಾಳೆ!

ಹೀಗೆ ಕೆಲ ದಂಪತಿ ಮತ್ತು ಪ್ರೇಮಿಗಳ ನಡುವೆ ನಡೆದ ಅಸುರಕ್ಷಿತ ಲೈಂಗಿಕತೆ, ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದು, ಅಜ್ಞಾನದಿಂದ ಆದ ಕೆಲವು ಪ್ರಕರಣಗಳನ್ನು ಬಿಚ್ಚಿಟ್ಟರು ಸರ್ಕಾರಿ ಹೆರಿಗೆ ಆಸ್ಪತ್ರೆಯೊಂದರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರೊಬ್ಬರು.
ಇಂತಹ ಹಲವು ಪ್ರಕರಣಗಳು ಇಂದು ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲೂ ನಡೆಯುವುದು ಸಾಮಾನ್ಯವಾಗಿದೆ. ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರಿದರೂ, ಈ ಬಗ್ಗೆ ಜನರಿಗೆ ತಿಳಿವಳಿಕೆ ಇದ್ದರೂ ಈ ಬಗೆಯ ಘಟನೆಗಳು ನಡೆಯುತ್ತಲೇ ಇರುತ್ತವೆ.

ವೈದ್ಯರು ಮುಂಜಾಗ್ರತಾ ಲೈಂಗಿಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾಗ್ಯೂ ಕೆಲ ದಂಪತಿ `ಆತುರ' ಮತ್ತು `ತಕ್ಷಣದ ಹಸಿವು' ನೀಗಿಸಿಕೊಳ್ಳಲು ಇಷ್ಟವಿಲ್ಲದ ಅಥವಾ ಬೇಡವಾದ ಗರ್ಭಧಾರಣೆಗೆ ಕಾರಣರಾಗುತ್ತಾರೆ. ಇದನ್ನು ಸರಿಪಡಿಸಿಕೊಳ್ಳಲು ಸೂಕ್ತ ಮಾರ್ಗ ಅನುಸರಿಸದೆ, ತಜ್ಞ ವೈದ್ಯರನ್ನು ಸಂಪರ್ಕಿಸದೆ ನಕಲಿ ವೈದ್ಯರ ನೆರವು ಪಡೆದು ಗರ್ಭಪಾತಕ್ಕೆ ಯತ್ನಿಸುತ್ತಾರೆ. ಅದು ಯಶಸ್ವಿಯಾಗದೇ ಗರ್ಭಿಣಿಯರು ಮೃತಪಟ್ಟ ಅಥವಾ ಸೋಂಕಿಗೆ ಒಳಗಾದ ಬಹಳಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.

ದೇಶದಲ್ಲಿ ಪ್ರತಿ ವರ್ಷ ಶೇ 9ರಿಂದ 10ರಷ್ಟು ಗರ್ಭಿಣಿಯರು ಅನಿಯೋಜಿತ ಗರ್ಭಪಾತದಿಂದ ಮೃತರಾಗುತ್ತಿದ್ದಾರೆ. ಇನ್ನು ಶೇ 30ರಿಂದ 40ರಷ್ಟು ಮಹಿಳೆಯರು ಗರ್ಭಪಾತದ ಅಡ್ಡಪರಿಣಾಮಗಳಿಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ವ್ಯೆದ್ಯಕೀಯ ವರದಿಗಳು ತಿಳಿಸುತ್ತವೆ.

`ವ್ಯೆದ್ಯರನ್ನು ಸಂಪರ್ಕಿಸದೆ ಸ್ವ ಇಚ್ಛೆಯಿಂದಲೇ ಮಾತ್ರೆಗಳನ್ನು ಪಡೆದು ಸೇವಿಸುವುದು, ಪೋಷಕರು ಹತ್ತಿರ ಇಲ್ಲದೇ ಇರುವುದು, ಆರ್ಥಿಕತೆ... ಹೀಗೆ ಹತ್ತಾರು ಕಾರಣಗಳಿಂದಾಗಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಬಗೆಯ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ವಿರಳ' ಎನ್ನುತ್ತಾರೆ ಪ್ರಸೂತಿ ತಜ್ಞರೊಬ್ಬರು.

`ಗರ್ಭಧಾರಣೆ ಹೆಣ್ಣಿನ ಸಹಜ ಮತ್ತು ನೈಸರ್ಗಿಕ ಕ್ರಿಯೆ. ವೈದ್ಯಕೀಯವಾಗಿ ಯಾವುದೇ ತೊಂದರೆ ಇಲ್ಲದಿದ್ದಾಗ ದಂಪತಿ ಲೈಂಗಿಕ ಸಂಪರ್ಕದಿಂದ ವಂಚಿತರಾಗಬೇಕಿಲ್ಲ. ಬೇಗ ಮಕ್ಕಳನ್ನು ಬಯಸದೇ ಇರುವವರು ಕೆಲ ಮುಂಜಾಗ್ರತಾ ಕ್ರಮಗಳನ್ನು ವ್ಯೆದ್ಯರ ಸಲಹೆ ಮೇರೆಗೆ ಎಚ್ಚರಿಕೆಯಿಂದ ಅನುಸರಿಸಿದರೆ ಯಾವುದೇ ಸಮಸ್ಯೆ ಎದುರಾಗದು. ಮಗು ಸದ್ಯಕ್ಕೆ ಬೇಡ ಎಂದು ಬಯಸುವ ದಂಪತಿ, ಅಂಡಾಣು ಮತ್ತು ವೀರ್ಯಾಣುಗಳ ಸಂಯೋಗವನ್ನು ತಡೆಗಟ್ಟಲು ಕಾಂಡೋಮ್ ಬಳಕೆ, ಸರ್ವಿಕಲ್ ಕ್ಯಾಪ್, ವಜೈನಲ್ ಕ್ರೀಂ , ಕೆಲ ಗರ್ಭನಿರೋಧಕ ಮಾತ್ರೆ, ಚುಚ್ಚುಮದ್ದುಗಳನ್ನು ಬಳಸಿ ಗರ್ಭಧಾರಣೆಯನ್ನು ತಾತ್ಕಾಲಿಕವಾಗಿ ತಡೆಗಟ್ಟಬಹುದು' ಎನ್ನುತ್ತಾರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್.

`ಮಕ್ಕಳು ಬೇಡ ಅಥವಾ ಇನ್ನು ಸಾಕು ಎಂದುಕೊಳ್ಳುವ ದಂಪತಿ ಸಂತಾನಹರಣ, ಟ್ಯುಬೆಕ್ಟಮಿ (ಮಹಿಳೆಯರಿಗೆ), ವ್ಯಾಸೆಕ್ಟಮಿ (ಪುರುಷರಿಗೆ) ಶಸ್ತ್ರಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ಮಗುವಿನ ಬಯಕೆ ಇಲ್ಲದ ದಂಪತಿ ಸಂಭೋಗ ನಡೆದ 72 ಗಂಟೆಯೊಳಗೆ ವೈದ್ಯರು ಸೂಚಿಸಿದ ಗರ್ಭ ನಿರೋಧಕ ಮಾತ್ರೆಗಳನ್ನೇ ಸೇವಿಸಬೇಕು. ಒಂದು ವೇಳೆ ಸಮಯಕ್ಕೆ ಸರಿಯಾಗಿ ಗರ್ಭಪಾತ ಆಗದಿದ್ದಲ್ಲಿ ಅಥವಾ ಋತುಚಕ್ರ ನಿಯಮಿತವಾಗಿ ಆಗದಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು' ಎಂದು ಅವರು ಎಚ್ಚರಿಸುತ್ತಾರೆ.

`ಗರ್ಭಕೋಶದಲ್ಲಿ ವೀರ್ಯಾಣುಗಳ ಪ್ರವೇಶ ತಡೆಯಲು ಮಹಿಳೆಯರು ಉಪಯೋಗಿಸಬಹುದಾದ ರಬ್ಬರ್ ಡಯಾಫ್ರಮ್, ಕ್ಯಾಪ್‌ಗಳು ಹಾಗೂ ಮಹಿಳೆಯರ ಕಾಂಡೋಮ್‌ಗಳೂ ಲಭ್ಯ. ಆದರೆ ಇವುಗಳ ಬಳಕೆ ತುಂಬಾ ಕಡಿಮೆ. ಇದರ ಜೊತೆಗೆ ಕಂಬೈನ್ಡ್ ಪಿಲ್, ಮಾಲಾ  ಡಿ  ಮತ್ತು ಮಾಲಾ  ಎನ್ ಎಂಬ ಮಾತ್ರೆಗಳ ಬಳಕೆ ಕೂಡ ಸಾಮಾನ್ಯವಾಗಿದೆ. ಇನ್ನು ಕಾಪರ್ ಟಿ ಎಂಬ ಸಾಧನವಂತೂ ಎಲ್ಲರಿಗೂ ತಿಳಿದೇ ಇದೆ. ಇದು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಲಭ್ಯವಾಗುತ್ತದೆ. ಮೊದಲನೇ ಮಗುವಿನ ಜನನಕ್ಕೆ ಮುಂಚೆ ಇದನ್ನು ಅಳವಡಿಸಿಕೊಳ್ಳದೇ ಇರುವುದು ಒಳ್ಳೆಯದು.

ಏಕೆಂದರೆ, ಅಕಸ್ಮಾತ್ ಗರ್ಭಕೋಶ ಅಥವಾ ಗರ್ಭನಾಳದಲ್ಲಿ ನಂಜಾದರೆ, ಗರ್ಭನಾಳ ಮುಚ್ಚಿಹೋಗಿ ಮಕ್ಕಳಾಗಲು ತೊಂದರೆ ಆಗಬಹುದು. ಹಾಗಾಗಿ ಅದನ್ನು ವೈದ್ಯರ ಸಲಹೆ ಮೇರೆಗೆ ಸರಿಯಾದ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಬಳಕೆ ಮಾಡಬೇಕಾಗುತ್ತದೆ' ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಮತ್ತೊಬ್ಬ ಹಿರಿಯ ಸ್ತ್ರೀರೋಗ ತಜ್ಞರು.

ಇತ್ತೀಚಿನ ದಿನಗಳಲ್ಲಿ ಯುವ ದಂಪತಿ ದುಡಿಮೆಗೆ ಹೆಚ್ಚು ಆದ್ಯತೆ ನೀಡುವುದರಿಂದ ಮನೆ, ಮಗು ಎಂಬ ಯೋಚನೆಯನ್ನೇ ಮಾಡುವುದಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಹುತೇಕರಿಗೆ ಮಗು ಮಾಡಿಕೊಳ್ಳುವ ಯೋಚನೆ ಇರುವುದಿಲ್ಲ. ಆದರೆ, ಸರಿಯಾದ ಮುನ್ನೆಚ್ಚರಿಕೆ ಕ್ರಮವನ್ನೂ ಅನುಸರಿಸುವುದಿಲ್ಲ. ವ್ಯೆದ್ಯರ ಸಲಹೆ ಇಲ್ಲದೆ ಆತುರದಿಂದ ಗರ್ಭ ನಿರೋಧಕ ಮಾತ್ರೆ ಸೇವಿಸಿ ಗರ್ಭಪಾತ ಮಾಡಿಕೊಳ್ಳುತ್ತಾರೆ. ಇದರಿಂದ ಕೆಲವರಿಗೆ  ಅತಿಯಾದ ರಕ್ತಸ್ರಾವ ಮತ್ತು ಕಿಬ್ಬೊಟ್ಟೆ ನೋವಿನಂತಹ ಅಡ್ಡಪರಿಣಾಮ ಆಗುವ ಸಾಧ್ಯತೆಗಳಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತರಾಗಿ, ಕೊನೆಯಲ್ಲಿ ನಮ್ಮ ಬಳಿಗೆ ಬರುತ್ತಾರೆ. ಈ ರೀತಿ ಮಾಡಬಾರದು' ಎನ್ನುತ್ತಾರೆ ಅವರು.

`ಕುಟುಂಬ ಯೋಜನೆ (ಫ್ಯಾಮಿಲಿ ಪ್ಲ್ಯಾನಿಂಗ್) ಎನ್ನುವುದು ಪ್ರತಿ ಕುಟುಂಬದ ಬಹು ಮುಖ್ಯ ಅಂಶ. ಮಕ್ಕಳು ಬೇಕೇ ಬೇಡವೇ... ಎಷ್ಟು ಮತ್ತು ಯಾವಾಗ ಎಂದು ನಿರ್ಧರಿಸುವುದು ಅವರವರ ಖಾಸಗಿ ವಿಚಾರ. ಇದನ್ನು ಸೂಕ್ತ ಮಾರ್ಗದರ್ಶನದ ಮೂಲಕ ಜಾಗರೂಕತೆಯಿಂದ ಅನುಸರಿಸಿದರೆ ಒಳಿತು. ಇನ್ನು ಈಗಿನ ಡೇಟಿಂಗ್ ಸಂಸ್ಕತಿಯಲ್ಲಿರುವ ಹದಿಹರೆಯದವರೂ ಇದನ್ನು ಅರಿತರೆ, ಸಾಕಷ್ಟು ಪ್ರಮಾಣದಲ್ಲಿ ಗರ್ಭಪಾತದ ಸಂಖ್ಯೆಯನ್ನು ಇಳಿಸಬಹುದು ಎನ್ನುತ್ತದೆ  ವ್ಯೆದ್ಯಲೋಕ.

...ಆದರೆ ಮಗು ಬೇಡ

ನಗರ ಜೀವನಶೈಲಿಯ ಬಹುತೇಕ ದಂಪತಿಗೆ ಸಂಭೋಗ ಮಾತ್ರ ಬೇಕು. ಆದರೆ ಮಗು ಬೇಡವಾಗಿರುತ್ತದೆ. ಮೊದಲು ಪೋಷಕರು/ ಅತ್ತೆಯಂದಿರು `ಮದುವೆಯಾದ ವರ್ಷದೊಳಗೆ ನಮಗೆ ಮೊಮ್ಮಗು ಬೇಕು' ಎಂದು ದಂಪತಿಯ ಮೇಲೆ ಒತ್ತಡ ಏರುತ್ತಿದ್ದರು. ಈಗ ಮಗು ಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ದಂಪತಿಯೇ ಸ್ವತಂತ್ರವಾಗಿ ತೆಗೆದುಕೊಳ್ಳುತ್ತಾರೆ. ಮುಂಜಾಗ್ರತಾ ಕ್ರಮಗಳ ಮೂಲಕ ಸಂಭೋಗ ನಡೆಸುತ್ತಾರೆ. ಆದರೂ ಕೆಲವೊಮ್ಮೆ ಅಲ್ಲಿಯೂ ವಿಫಲರಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣ- ಒತ್ತಡ, ಆತಂಕ ಮತ್ತು ಅವಸರ, `ಏನೂ ಆಗಲ್ಲ ಬಿಡು' ಎನ್ನುವ ದುಡುಕಿನ ಮಾತು.

ಆದರೆ `ಆ ರೀತಿ' ಆದ ಮೇಲೆ ವೈದ್ಯರ ಬಳಿ ಹೋಗಿ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಇದು ತಪ್ಪು. ಯಾವುದೇ ಕಾರಣಕ್ಕೂ ಸ್ವ ಇಚ್ಛೆಯಿಂದಲೇ ಗರ್ಭಪಾತ ಮಾತ್ರೆಗಳನ್ನು ಸೇವಿಸುವುದು ಒಳಿತಲ್ಲ. ಕೆಲ ಮಾತ್ರೆಗಳು ಕೆಲವರ ದೇಹಕ್ಕೆ ಹೊಂದಿಕೊಳ್ಳದೇ ಇರುವ ಸಾಧ್ಯತೆ ಕೂಡ ಇರುತ್ತದೆ. ಸದ್ಯಕ್ಕೆ ಮಗು ಬೇಡ ಎನ್ನುವ ದಂಪತಿ ಮನೆಯಲ್ಲೇ ವ್ಯೆದ್ಯರು ಕೊಟ್ಟ ಗರ್ಭ ನಿರೋಧಕ ಮಾತ್ರೆ, ಕಾಂಡೋಮ್‌ಗಳನ್ನು ಇಟ್ಟುಕೊಂಡು ಜವಾಬ್ದಾರಿಯಿಂದ ಸರಿಯಾಗಿ ಬಳಸಿದಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ.
-ಡಾ. ವಿನೋದ್ ಛೆಬ್ಬಿ, ಲೈಂಗಿಕ, ದಾಂಪತ್ಯ ಮತ್ತು ಮನೋಚಿಕಿತ್ಸಕ.

ವಿದ್ಯಾರ್ಥಿನಿಯರೇ ಹೆಚ್ಚು!

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತಹ ಮಹಾನಗರ ಮಾತ್ರವಲ್ಲದೆ ಇತರ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಗರ್ಭಪಾತ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ವಿವಾಹಪೂರ್ವ ಯುವತಿಯರು/ ಮಹಿಳೆಯರಲ್ಲೂ ಇದು ನಡೆಯುತ್ತಿರುವುದು ಬೇಸರದ ಸಂಗತಿ. ಇನ್ನು ವಿದ್ಯಾರ್ಥಿನಿಯರು ಕೂಡ ಇದಕ್ಕೆ ಹೊರತಾಗಿಲ್ಲ. `ಮೇಡಂ ಯಾವುದಾದರೂ ಮಾತ್ರೆ ಇದ್ರೆ ಹೇಳಿ. ನನಗಲ್ಲ ನನ್ನ ಸ್ನೇಹಿತೆಗೆ...' ಅಂತ ಕೇಳುತ್ತಾರೆ. ಕೆಲ ವಿದ್ಯಾರ್ಥಿನಿಯರಿಗೆ ಆಗಲೇ ನಾಲ್ಕೈದು ತಿಂಗಳಾಗಿರುತ್ತದೆ. ಆಗ ಮಗುವನ್ನು ತೆಗೆಯುವಂತೆ ಬಹಳಷ್ಟು ಒತ್ತಾಯ ಮಾಡಿ ಬೇಡಿಕೊಳ್ಳುತ್ತಾರೆ. ಇದು ತುಂಬಾ ಅಪಾಯ. ಕೆಲ ವಿದ್ಯಾರ್ಥಿನಿಯರು ನಾಲ್ಕು ಬಾರಿ ಗರ್ಭಪಾತಕ್ಕೆ ಒಳಗಾಗಿರುವ ಉದಾಹರಣೆ ಕೂಡ ಇದೆ. ನುರಿತ ವೈದ್ಯರ ಸಲಹೆ ಇಲ್ಲದೆ ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುವುದರಿಂದ ಸಾಕಷ್ಟು ಅಡ್ಡ ಪರಿಣಾಮಗಳು ಉಂಟಾಗುತ್ತವೆ.

ಬಂಜೆತನ ಸಾಧ್ಯತೆ, ಗರ್ಭಚೀಲಕ್ಕೆ ಹಾನಿ, ಗರ್ಭನಾಳಕ್ಕೆ ಸೋಂಕು, ಪಿತ್ತಕೋಶದ ತೊಂದರೆ, ಅತಿಯಾದ ನಿರಂತರ ರಕ್ತಸ್ರಾವ, ಮಾನಸಿಕ ಮತ್ತು ದೈಹಿಕ ತೊಂದರೆ, ರಕ್ತಹೀನತೆ, ವಾಂತಿ, ತಲೆಭಾರ, ದೇಹ ಕೃಶಗೊಳ್ಳುವುದು, ನಿಶ್ಶಕ್ತಿ, ಸಮಯಕ್ಕೆ ಸರಿಯಾಗಿ ಋತುಚಕ್ರ ಆಗದೇ ಇರುವುದು... ಹೀಗೆ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಇವುಗಳ ಅರಿವಿದ್ದರೂ ಇಂದು ಗರ್ಭಪಾತಗಳು ನಡೆಯುತ್ತಲೇ ಇರುವುದು ಬೇಸರದ ಸಂಗತಿ. ಅದರಲ್ಲೂ ವಿದ್ಯಾವಂತರೇ ಇದಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ.
-ಡಾ. ಪಿ.ಶಶಿಕಲಾ ಕೃಷ್ಣಮೂರ್ತಿ, ಮುಖ್ಯಸ್ಥರು, ಪೆಥಾಲಜಿ ವಿಭಾಗ,
ಎಸ್.ಎಸ್.ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದಾವಣಗೆರೆ

ಮಾತ್ರೆಗಳ ಬಳಕೆ ಹೆಚ್ಚಿದೆ
ಆ ವಿಷಯ ಏನು ಕೇಳ್ತೀರಾ ಬಿಡಿ. ಇತ್ತೀಚಿನ ದಿನಗಳಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಖರೀದಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ವಿದ್ಯಾವಂತ ಹುಡುಗಿಯರು ವಿವಾಹಪೂರ್ವದಲ್ಲೇ  ಈ ದಾರಿ ಹಿಡಿದಿರುವುದು ಆಶ್ಚರ್ಯವಾಗುತ್ತಿದೆ. ಜ್ವರದ ಮಾತ್ರೆಗಳನ್ನು ಕೇಳುವ ರೀತಿಯಲ್ಲಿ ಸರಳವಾಗಿ ಯಾವುದೇ ಮುಜುಗರವೂ ಇಲ್ಲದೆ `.... ಮಾತ್ರೆ' ಕೊಡಿ ಅಂತ ನೇರವಾಗಿ ಕೇಳುತ್ತಾರೆ. ಇವರ‌್ಯಾರೂ ವ್ಯೆದ್ಯರನ್ನು ಭೇಟಿಯಾಗಿ ಸಲಹೆ ಪಡೆದಿರುವುದಿಲ್ಲ. ಅವರ ಬಳಿ ವ್ಯೆದ್ಯರು ಕೊಟ್ಟ ಚೀಟಿ ಕೂಡ ಇರುವುದಿಲ್ಲ. ಜಾಹೀರಾತು ನೋಡಿ, ಮಾತ್ರೆ ಖರೀದಿಗೆ ಬರುತ್ತಾರೆ. ಇದು ಸಾಮಾನ್ಯವಾಗಿದೆ. ಒಂದು ಸಮಸ್ಯೆಗೆ ಸರಳ ಪರಿಹಾರ ಕಂಡುಕೊಳ್ಳಲು ಹೋಗಿ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇದರಿಂದ ಅವರಿಗೇ ತೊಂದರೆ.
- ರಮೇಶ್ ಕೃಷ್ಣ, ಔಷಧಿ ಅಂಗಡಿಯೊಂದರ ಮಾಲೀಕ.

`ಫ್ಯಾಮಿಲಿ ಪ್ಲ್ಯಾನಿಂಗ್' ಅವಾಂತರ
ನನಗೆ ಗೊತ್ತಿರುವ ಕುಟುಂಬವೊಂದು `ಫ್ಯಾಮಿಲಿ ಪ್ಲ್ಯಾನಿಂಗ್' ಅಂತ ಹೇಳಿಕೊಂಡು, ಮದುವೆಯಾದ ಹೊಸದರಲ್ಲೇ ಪದೇ ಪದೇ ಗರ್ಭಪಾತ ಮಾತ್ರೆಗಳನ್ನು ನುಂಗಿದ ಪರಿಣಾಮ, ಈಗ ಮಗು ಬೇಕು ಎಂದು ಬಯಸುತ್ತಿದ್ದರೂ ಆಗುತ್ತಿಲ್ಲ. ಡಾಕ್ಟರ ಬಳಿ ತಪಾಸಣೆ ಮಾಡಿಸಿದಾಗ `ನೀವು ಗರ್ಭಪಾತ ಮಾತ್ರೆಗಳನ್ನು ಹೆಚ್ಚು ಸೇವಿಸಿರುವುದರಿಂದ ಗರ್ಭಕೋಶಕ್ಕೆ ತೊಂದರೆಯಾಗಿದೆ' ಎಂದು ಹೇಳಿದ್ದಾರೆ.

ಈ ಸಮಸ್ಯೆ ಸರಿಪಡಿಸಿಕೊಳ್ಳಲು ಆಕೆ ವ್ಯೆದ್ಯಕೀಯ ಚಿಕಿತ್ಸೆಗಾಗಿ ಇದುವರೆಗೂ 2 ಲಕ್ಷ ರೂಪಾಯಿವರೆಗೂ ಖರ್ಚು ಮಾಡಿರಬಹುದು. ಇನ್ನೂ ಸರಿಹೋಗಿಲ್ಲ. ಆರಂಭದಲ್ಲೇ ಒಂದು ಅಥವಾ ಎರಡು ಮಕ್ಕಳನ್ನು ಪಡೆದು, ನಂತರ ಮಕ್ಕಳು ಸಾಕು ಎಂದು ಬಯಸುವವರು ಶಾಶ್ವತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದು.
-ರೂಪಾ ಹಡಗಲಿ, ಸಬ್ ಇನ್ಸ್‌ಪೆಕ್ಟರ್, ಉಪ್ಪಾರಪೇಟೆ ಪೊಲೀಸ್ ಠಾಣೆ, ಬೆಂಗಳೂರು.

ಬೇಡದಿದ್ದರೆ ಹೀಗೆ ಮಾಡಿ
ಬೇಡವಾದ ಗರ್ಭಧಾರಣೆ ತಡೆಗಟ್ಟಲು ತಾತ್ಕಾಲಿಕ ಕ್ರಮ
ಪುರುಷರು: ಕಾಂಡೋಮ್ ಬಳಕೆ, ಯೋನಿ ಒಳಗೆ ವೀರ್ಯ ಸ್ಖಲನವಾಗದಂತೆ ತಡೆಯುವುದು.
ಸ್ತ್ರೀಯರು: ಕಾಪರ್ ಟಿ ಅಳವಡಿಕೆ, ಗರ್ಭ ನಿರೋಧಕ ಮಾತ್ರೆ/ ಕ್ರೀಂಗಳ ಬಳಕೆ, ಇಂಜೆಕ್ಷನ್‌ನ ಸೂಕ್ತ ವಿಧಾನ ಅರಿತು ಸೂಕ್ತ ಸಮಯದೊಳಗೆ ಬಳಸಬೇಕು. ಮಾಲಾ ಡಿ ಮತ್ತು ಮಾಲಾ ಎನ್ ಮಾತ್ರೆಗಳು ಉಚಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯ. ಇವುಗಳ ಬಳಕೆಗೆ ಸೂಕ್ತ ವೈದ್ಯರ ಸಲಹೆ, ಮಾರ್ಗದರ್ಶನ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT