ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀ ತಾತನ ಒಂದು ನೆನಪು

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಂದು ‘ಗಾಂಧಿ’ ಎಂದರೆ ನಾವು ಆಯ್ದುಕೊಳ್ಳಬೇಕಾದ ಮಾರ್ಗದ ಮಾದರಿಯಷ್ಟೇ ಅಲ್ಲ. ನಾವು ಮನಸ್ಸಲ್ಲಿ ಬಯಸಿದರೂ ಬದುಕಲ್ಲಿ ತುಳಿಯಲಾರದ ಹಾದಿಯ ರೂಪಕವೂ ಹೌದು. ಸತ್ಯ, ಅಹಿಂಸೆ, ಜಿದ್ದು, ಸಮಗ್ರತೆ, ಸಮಾನತೆ, ಆತ್ಮಶೋಧನ ಹೀಗೆ ಏನೆಲ್ಲಕ್ಕೂ ತಕ್ಷಣಕ್ಕೆ ಒದಗಿಬರುವ ಉದಾಹರಣೆ ಗಾಂಧಿ. ‘ಇಂದಿನವರಿಗೆ ಗಾಂಧಿ ಬೇಕಿಲ್ಲ’ ಎಂಬ ಸುಲಭದ ನಿರ್ಣಯಗಳಿಗೂ ಮೀರಿ ನಮ್ಮ ಅರಿವಿನ ಫಲಕುಗಳಲ್ಲಿ ಗಾಂಧಿ ಮತ್ತೆ ಮತ್ತೆ ಪ್ರಸ್ತುತಗೊಳ್ಳುತ್ತಲೇ ಇದ್ದಾರೆ. ಹೀಗೆ ತನ್ನನ್ನು ಕಣ್ಣಾರೆ ಕಾಣದ ಪೀಳಿಗೆಗೆ ಗಾಂಧಿ ಹೇಗೆಲ್ಲ ದಕ್ಕಿರಬಹುದು? ಮಹಾತ್ಮನ ಹಲವು ಅವತಾರಗಳು ಇಲ್ಲಿ ಅನಾವರಣಗೊಂಡಿವೆ.

‘ಗೆದ್ದ ನಮ್ಮ ಗಾಂಧೀಜಿ, ಗೆದ್ದ ಸ್ವರಾಜ್ಯವ ನಮಗಾಗಿ ಗೆದ್ದನು ಭಾರತ ಮಾತೆಯ ಪುತ್ರನು’ ಅರವತ್ತೈದು ವರ್ಷಗಳ ಹಿಂದೆ ನಮ್ಮ  ಅಪ್ಪ ಖಾದಿ ಬಟ್ಟೆಯಿಂದ ಮಾಡಿದ ಚಿಕ್ಕ ಬಾವುಟವನ್ನು ಬಿದಿರಿನ ಕೋಲಿಗೆ ಸಿಕ್ಕಿಸಿ ಈ ಹಾಡನ್ನು ಹೇಳುತ್ತಾ ನಡೆಸುತ್ತಿದ್ದರು. ಅಮ್ಮ ಬಾಯಿಗೆ ತುತ್ತು ನೀಡುವಾಗ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವಾಗ ಆಕೆಯ ಬಾಯಿಂದ ಮೇಲಿನ ಪದ, ಗೆದ್ದ ನಮ್ಮ ಗಾಂಧೀಜಿಯೇ ಬರುತ್ತಿತ್ತು. ಗಾಂಧೀ ಜಯಂತಿಯಂದು ಸಿಹಿ ಅಡುಗೆ ಮಾಡಿ ಎಲ್ಲರನ್ನು ಒಟ್ಟಿಗೆ ಕುಳ್ಳಿರಿಸಿ ಬಡಿಸುತ್ತಿದ್ದಳು. ಮನೆಯ ಅಕ್ಕಪಕ್ಕದವರಿಗೂ ಗಾಂಧೀಜಿಯ ಹುಟ್ಟುಹಬ್ಬ ಎಂದು ಹೇಳುತ್ತಾ ಸಿಹಿ ಹಂಚುತ್ತಿದ್ದಳು. ಆ ಕಾಲದ ಸಂಭ್ರಮ ಇಂದು ಕಾಣುವುದೇ ಇಲ್ಲ.

ವಿದ್ಯಾವಂತರಾದ ಅನೇಕ ಪುರುಷರು, ಮಹಿಳೆಯರು ಗಾಂಧೀಜಿ ಯಾರು ಎಂಬುದನ್ನೇ ಮರೆತು ಬಿಟ್ಟಿರುತ್ತಾರೆ. ಇನ್ನು ಮಕ್ಕಳಿಗೆ ಎಲ್ಲಿಂದ ಗಾಂಧಿ ತಾತನ ನೆನಪು ಬರಲು ಸಾಧ್ಯ. ಗಾಂಧೀಜಿಯವರು ನಮ್ಮ ಊರಿಗೆ 1934 ರಲ್ಲಿ ಬಂದಾಗ ಅಪ್ಪ ತನ್ನ ಮಕ್ಕಳ ಕೈಯಲ್ಲಿ ಬಾವುಟವನ್ನು ಕೊಟ್ಟು ಬಿಳಿ ಗಾಂಧಿ ಟೊಪ್ಪಿಯನ್ನು ಹಾಕಿಕೊಟ್ಟು ತನ್ನ ಪತ್ನಿಗೆ ದಪ್ಪವಾದ ಖಾದಿ ಸೀರೆಯನ್ನು ಉಟ್ಟುಕೊಳ್ಳಲು ತಿಳಿಸಿ ಜೊತೆಗೆ ತಾನು ಖಾದಿ ಪಂಚೆ, ಖಾದಿ ಟೊಪ್ಪಿ, ಜುಬ್ಬ ತೊಟ್ಟು ಗಾಂಧೀಜಿಯವರನ್ನು ಪತ್ನಿ ಮಕ್ಕಳಿಗೆ ತೋರಿಸಿ ಸಂತೋಷಪಟ್ಟಿದ್ದರು.

ಗಾಂಧೀಜಿ ಭಾಷಣ ಮಾಡಿದ ಸ್ಥಳವನ್ನು ಇಲ್ಲಿಯ ಜನರು ಗಾಂಧಿಗದ್ದೆ ಎಂದು ಕರೆಯುವ ರೂಢಿ ಇದೆ. ಅಪ್ಪ ­ಸ್ವತಂತ್ರ್ಯದ ಚಳವಳಿಯಲ್ಲಿ ಭಾಗವಹಿಸಿ ಕೇರಳ ರಾಜ್ಯದ ಕಣ್ಣನೂರಿನಲ್ಲಿ ಎಂಟು ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಅಲ್ಲಿಂದ ಬರುವಾಗ ತಮ್ಮ ಪತ್ನಿಗೆ ಗಾಂಧೀಜಿಯ ಚಿತ್ರವಿರುವ ಒಂದು ಚಿಕ್ಕ ತಾಲಿ ಹಾಗೂ ಸೀರೆಗೆ ಸಿಕ್ಕಿಸುವ ಗಾಂಧೀಜಿ ಚಿತ್ರ ಇರುವ ಪಿನ್ನನ್ನು ತಂದುಕೊಟ್ಟಿದ್ದರು. ಅಮ್ಮ ಅದನ್ನು ಯಾವುದೇ ಸಮಾರಂಭಕ್ಕೆ ಹೋಗಬೇಕಾದರೂ ಚೈನಿಗೆ ಆ ತಾಲಿಯನ್ನು ಸಿಕ್ಕಿಸಿ ಹೃದಯದ ಮಧ್ಯ ಭಾಗದಲ್ಲಿ ಗಾಂಧೀಜಿ ಬರುವಂತೆ ಹಾಕಿಕೊಂಡು ಹೆಮ್ಮೆಯಿಂದ ಹೋಗುತ್ತಿದ್ದಳು.

ಅಪ್ಪ ಮನೆಯ ಗೋಡೆಗಳ ಮೇಲೆ ಗಾಂಧೀಜಿಯ ಪಟವನ್ನು ತೂಗು ಹಾಕಿ ಪ್ರತಿದಿನ ದೇವರ ಪಟಕ್ಕೆ ಹೂ ಇಡುವಾಗ ಗಾಂಧೀಜಿಯ ಪಟಕ್ಕೂ ಹೂ ಇಡುತ್ತಿದ್ದರು. ಗಾಂಧೀಜಿ ದೇವರಲ್ಲ ಎಂದು ಹೇಳಿದರೆ ನಮಗೆ ಸ್ವತಂತ್ರ್ಯ ತಂದುಕೊಟ್ಟ ದೇವರೆಂದು ಹೇಳುತ್ತಿದ್ದರು. ಅಂತಹ ಭಯಭಕ್ತಿಯನ್ನು ಹಿಂದಿನ ಜನರು ಇಟ್ಟಿದ್ದರು. ಇಂದು ಗಾಂಧೀ ಕೇವಲ ಗೋಡೆಯಲ್ಲಿರುವ ಫೋಟೊ ಅಷ್ಟೆ.

*ನಾನೂ ಗಾಂಧಿಯಾಗಿದ್ದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT