ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಡ್ಡಿ, ಚೆನ್ನವೀರ ಕಣವಿ ಸ್ಪಷ್ಟೀಕರಣ

ಕಲಬುರ್ಗಿ ಹತ್ಯೆ ಪ್ರಕರಣ: ನೋಟಿಸ್‌ ನೀಡದಿರಲು ಶ್ರೀರಾಮ ಸೇನೆ ನಿರ್ಧಾರ
Last Updated 20 ಸೆಪ್ಟೆಂಬರ್ 2015, 19:50 IST
ಅಕ್ಷರ ಗಾತ್ರ

ಧಾರವಾಡ: ‘ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಖಂಡಿಸಿ ಧಾರವಾಡದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಲ್ಲಿಸಿದ ಮನವಿಯಲ್ಲಿ ಶ್ರೀರಾಮ ಸೇನೆಯ ಹೆಸರು ಉಲ್ಲೇಖವಾಗಿದ್ದರೆ ಅದು ಸರಿಯಲ್ಲ’ ಎಂದು ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಮತ್ತು ಡಾ.ಗಿರಡ್ಡಿ ಗೋವಿಂದರಾಜ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಡಾ. ಕಲಬುರ್ಗಿ ಅವರ ಹತ್ಯೆ ಖಂಡಿಸಿ ಧಾರವಾಡದಲ್ಲಿ ಸೆ.14 ರಂದು ಸಾಹಿತಿಗಳು, ಕಲಾವಿದರು, ಸಾಹಿತ್ಯಾಭಿ ಮಾನಿಗಳು ಪ್ರತಿಭಟನೆ ನಡೆಸಿದ್ದರು. ಅಂದು  ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಮೊದಲೇ ಓದಿ ನೋಡುವ ಅವಕಾಶವನ್ನು ಸಂಘಟಕರು ನಮಗೆ ನೀಡಿರಲಿಲ್ಲ. ಮನವಿ ಪತ್ರವನ್ನು ಓದಲು ಅವಕಾಶ ನೀಡದೆ, ಸಂಘಟಕ ರೊಬ್ಬರು ನಮ್ಮ ಸಹಿ ಪಡೆದರು’ ಎಂದು ಹೇಳಿದ್ದಾರೆ.

‘ಅಂದು ಸಲ್ಲಿಸಿದ ಮನವಿ ಪತ್ರದಲ್ಲಿ  ಶ್ರೀರಾಮ ಸೇನೆಯ ಹೆಸರು ಉಲ್ಲೇಖಿಸಿದ್ದರೆ ಅದು ತಪ್ಪು’ ಎಂದು ಹೇಳಿರುವ ಡಾ.ಕಣವಿ ಮತ್ತು ಗಿರಡ್ಡಿ , ‘ ಎಂ. ಎಂ. ಕಲಬುರ್ಗಿ ಹತ್ಯೆಯ ತನಿಖೆ ಯನ್ನು ಸಾಧ್ಯವಾದಷ್ಟು ತೀವ್ರ ಗೊಳಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆ ನಡೆಸಿ, ತಮ್ಮ ವಿರುದ್ಧ ಮಾನಹಾನಿಕರ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದ  ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾ ಲಿಕ್‌, ಅಂದು ಪ್ರತಿಭಟನೆ ನಡೆಸಿದ ಸಾಹಿತಿಗಳು, ಗಣ್ಯರ ವಿರುದ್ಧ ನೋಟಿಸ್‌ ನೀಡುವುದಾಗಿ ಹೇಳಿದ್ದರು. ಈಗ, ಡಾ. ಗಿರಡ್ಡಿ ಗೋವಿಂದರಾಜ ಹಾಗೂ ಚೆನ್ನವೀರ ಕಣವಿ ಸ್ಪಷ್ಟನೆ ನೀಡಿರುವುದರಿಂದ ಅವರ ವಿರುದ್ಧ ನೋಟಿಸ್‌ ನೀಡದಿರಲು ನಿರ್ಧರಿಸಿದ್ದಾರೆ. 

ಮಹಾರಾಷ್ಟ್ರಕ್ಕೆ ಸಿಐಡಿ (ಹುಬ್ಬಳ್ಳಿ ವರದಿ): ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯ ತನಿಖೆ ನಡೆಸುತ್ತಿರುವ ಸಿಐಡಿ ತಂಡವು, ಮಹತ್ವದ ಸುಳಿವು ಹುಡುಕಿಕೊಂಡು ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿಗೆ ತೆರಳಿದೆ. ಮಹಾರಾಷ್ಟ್ರದ ಸಿಪಿಐ ಮುಖಂಡ, ವಿಚಾರವಾದಿ ಗೋವಿಂದರಾವ್‌ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಸಾಂಗ್ಲಿಯ ಸನಾತನ ಸಂಸ್ಥೆಯ ಸಮೀರ್‌ ಗಾಯಕ್‌ವಾಡ್‌ನನ್ನು ಸಿಬಿಐ ಇತ್ತೀಚೆಗೆ ಬಂಧಿಸಿದೆ.  

2009ರಲ್ಲಿ ಗೋವಾದ ಮಡಗಾಂವ್‌ನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ರುದ್ರ ಪಾಟೀಲ ನೊಂದಿಗೆ ಸಮೀರ್‌ ಸಂಪರ್ಕದಲ್ಲಿರುವುದು ಸಿಬಿಐ ವಿಚಾರಣೆ ವೇಳೆ ಬಯಲಾದ ಕಾರಣ, ಭಾನುವಾರ ಎನ್‌ಐಎ ಅಧಿಕಾರಿಗಳು ಸಮೀರ್‌ ಗಾಯಕವಾಡ್‌ನನ್ನು  ಮತ್ತೊಮ್ಮೆ ವಿಚಾರಣೆಗೊಳಪಡಿಸಿದ್ದಾರೆ.

ರುದ್ರ ಪಾಟೀಲ ಹಾಗೂ ಸಮೀರ್‌ ಇಬ್ಬರೂ ಸಾಂಗ್ಲಿಯ ನಿವಾಸಿಗಳಾಗಿದ್ದಾರೆ. ಮಡಗಾಂವ್‌ ಸ್ಫೋಟ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ರುದ್ರ ಪಾಟೀಲನನ್ನು ಎನ್‌ಐಎ ಹುಡು ಕುತ್ತಿದ್ದು, ಆತನ ಪತ್ತೆಗೆ ಇಂಟರ್‌ ಪೋಲ್‌ನಿಂದ ರೆಡ್‌ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ತಿಳಿದುಬಂದಿದೆ. ಕಲಬುರ್ಗಿ ಅವರ ಹತ್ಯೆ ನಡೆದ ಆಗಸ್ಟ್‌ 30ರಂದು ರುದ್ರ ಪಾಟೀಲ ಬೆಳಗಾವಿಯಲ್ಲಿ ಇದ್ದ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಸುಳಿವು ದೊರೆತಿದ್ದು, ಸಮೀರ್‌ ಗಾಯಕವಾಡ್‌ನ ವಿಚಾರಣೆಯಿಂದ ಇನ್ನಷ್ಟು ಸುಳಿವು ಸಿಗಬಹು.
*
‘ಜೀವಕ್ಕೆ ಎರವಾದ ಹಿಂದೂ ಲೇವಡಿ’
ಮೈಸೂರು:
‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮವನ್ನು ಲೇವಡಿ ಮಾಡಿದ್ದೇ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಜೀವಕ್ಕೆ ಎರವಾಯಿತು’ ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತ ಹೇಳಿದರು.

ಮೈಸೂರು ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿಯ ನೇತೃತ್ವದಲ್ಲಿ ಗಣಪತಿ ವಿಸರ್ಜನೆಯ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಭಾನುವಾರ ಏರ್ಪಡಿಸಿದ್ದ ಬಹಿರಂಗ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯನ್ನು ಪ್ರಬಲವಾಗಿ ಖಂಡಿಸುತ್ತೇನೆ. ಈ ಹತ್ಯೆ ಸಂಭವಿಸಬಾರದಿತ್ತು. ಆದರೆ, ಮೂರ್ತಿ ಪೂಜೆಯ ಕುರಿತು ಕಲಬುರ್ಗಿ ನೀಡಿದ ಹೇಳಿಕೆಯೇ ಅವರ ಹತ್ಯೆಗೆ ಪ್ರಚೋದನೆ ನೀಡಿತು. ಬಿಸಿರಕ್ತದ ಯುವಕರು ಅವರನ್ನು ಹತ್ಯೆ ಮಾಡಿರಬಹುದು. ಕಲಬುರ್ಗಿ, ಭಗವಾನ್‌ ಅವರಂತಹ ಬಾಡಿಗೆ ಬುದ್ಧಿಜೀವಿಗಳಿಗೆ ಗುಂಡು ಹೊಡೆಯಬೇಡಿ. ಹೀಗೆ ಮಾಡಿದರೆ ಅವರು ಹುತಾತ್ಮರಾಗುತ್ತಾರೆ. ಚಪ್ಪಲಿಯಿಂದ ಹೊಡೆದರೆ ಚಪ್ಪಲಿಗೆ ಅವಮಾನವಾಗುತ್ತದೆ ಎಂದರು.

ಕಲಬುರ್ಗಿ ಹತ್ಯೆಯ ಬಳಿಕ ಮೌಢ್ಯ ಪ್ರತಿಬಂಧಕ ಮಸೂದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಈ ಮೂಲಕ ಹಿಂದೂ ಧರ್ಮದ ಸರ್ವನಾಶಕ್ಕೆ ಮುಂದಾಗಿದೆ. ಇದು ಅನುಷ್ಠಾನಕ್ಕೆ ಬರುವುದಕ್ಕೂ ಮುನ್ನ ನಂಬಿಕೆ ಮತ್ತು ಮೂಢನಂಬಿಕೆಗಳೆಂದು ವಿಂಗಡಿಸಲು ಅನುಸರಿಸಿದ ಮಾನದಂಡಗಳನ್ನು ಬಹಿರಂಗಪಡಿಸಬೇಕು. ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಅಲ್ಪಸಂಖ್ಯಾತರನ್ನು ಇದರ ವ್ಯಾಪ್ತಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT