ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗಳ ನಗರ ದೊಡ್ಡಬಳ್ಳಾಪುರ

ಪ್ರಾಣಕ್ಕೆ ಕಂಟಕವಾದ ರಸ್ತೆಗಳು: ದುರಸ್ತಿಗೆ ಲೋಕೋಪಯೋಗಿ ಇಲಾಖೆ, ನಗರಸಭೆ ನಡುವೆ ಗೊಂದಲ
Last Updated 3 ಜುಲೈ 2015, 7:43 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಪ್ರಾಣಕಂಟಕವಾಗಿವೆ.

ಗುಂಡಿಗಳಿಂದ ಪ್ರತಿ ದಿನ ಹತ್ತಾರು ಜನ ಬೈಕ್‌ ಸವಾರರು ಕೈ, ಕಾಲುಗಳನ್ನು ಮುರಿದುಕೊಂಡು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಆದರೆ,   ಯಾರೊಬ್ಬರು ಸಹ ಗುಂಡಿಗಳನ್ನು ಮುಚ್ಚಿಸುವ ಕಡೆಗೆ ಗಮನ ನೀಡದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಶ್ರೀನಗರ ಮನು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಗರಸಭೆ ವ್ಯಾಪ್ತಿಯ ಡಿಕ್ರಾಸ್‌ ರಸ್ತೆ, ರಂಗಪ್ಪ ವೃತ್ತದಿಂದ ಖಾಸ್‌ಬಾಗ್‌ ರಸ್ತೆ, ಮುತ್ತೂರು ಬೆಂಗಳೂರು ರಸ್ತೆ, ತಾಲ್ಲೂಕು ಕಚೇರಿ ವೃತ್ತ ಸೇರಿದಂತೆ ಪ್ರತಿದಿನ ಸಾವಿರಾರು ವಾಹನಗಳು  ಸಂಚರಿಸುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಬೈಕ್‌ ಸವಾರರು ಬೀಳುತ್ತಲೇ ಇದ್ದರೂ ಸಹ ಅಧಿಕಾರಿಗಳು, ಜನ ಪ್ರತಿನಿಧಿಗಳು ಕಂಡೂ ಕಾಣದಂತೆ ತಿರುಗುತ್ತಿದ್ದಾರೆ ಎನ್ನುವ ದೂರು ಸಾಮಾನ್ಯವಾಗಿದೆ.

ಪ್ರಾಣಕಂಟಕ ಗುಂಡಿಗಳಿಗೆ ಸಾರ್ವಜನಿಕರಷ್ಟೇ ಅಲ್ಲದೆ ಸರ್ಕಾರಿ ವಾಹನಗಳು ಸಹ ಬಿದ್ದು ಜಖಂಗೊಳ್ಳುತ್ತಿವೆ.  ಇಷ್ಟಾದರೂ ಸಹ ಗುಂಡಿಗಳನ್ನು ಮುಚ್ಚಿಸುವ ಕಡೆಗೆ ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ.ನಗರದಲ್ಲಿನ ಪ್ರಮುಖ ರಸ್ತೆಗಳು ನಗರಸಭೆಗೆ ಸೇರಿದ್ದೋ ಅಥವಾ ಲೋಕೋಪಯೋಗಿ ಇಲಾಖೆಗೆ ಸೇರಿದ್ದೋ ಎನ್ನುವ ಗೊಂದಲದಿಂದಾಗಿ ಯಾರೊಬ್ಬರು ಗುಂಡಿಗಳನ್ನು ಮುಚ್ಚಿಸಲು ಮುಂದಾಗುತ್ತಿಲ್ಲ.

ಈ ಮಧ್ಯೆ ನಗರದಲ್ಲಿ ಒಳಚರಂಡಿ ಕಾಮಗಾರಿ ನಂತರ ಬೆಳಿಗ್ಗೆ ಸರಿ ಇದ್ದ ರಸ್ತೆ, ಸಂಜೆ ವೇಳೆಗೆ ಗುಂಡಿ ಬಿದ್ದಿರುತ್ತದೆ. ಇನ್ನು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಬಗ್ಗೆ ನಗರಸಭೆ ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದರೆ ನಮ್ಮಲ್ಲಿ ಗುಂಡಿಗಳನ್ನು ಮುಚ್ಚಿಸಲು ಹಣ ಇಲ್ಲ, ಅಧಿಕಾರವು ಇಲ್ಲ ಎನ್ನುತ್ತ ಪೌರಕಾರ್ಮಿಕರಿಂದ ಮಣ್ಣು, ಕಸದಿಂದ ಗುಂಡಿಗಳನ್ನು ಮುಚ್ಚಿಸಿ ವಾಹನ ಸವಾರರು, ಪಾದಚಾರಿಗಳಿಗೆ ದೂಳು ಮೆತ್ತಿಕೊಳ್ಳುವಂತೆ ಮಾಡುತ್ತಿದ್ದಾರೆ.

ಕೋಟಿಗಳದ್ದೇ ಮಾತು:  ನಗರಸಭೆ ವ್ಯಾಪ್ತಿಯಲ್ಲಿನ ಕಾಮಗಾರಿಗಳ ಬಗ್ಗೆ ಶಾಸಕರಿಂದ ಮೊದಲುಗೊಂಡು ನಗರಸಭೆ ಅಧ್ಯಕ್ಷರವರೆಗೂ ಯಾವುದೇ ಸಭೆಗಳಲ್ಲಿ ಭಾಷಣ ಮಾಡಲು ನಿಂತರೆ ಕೋಟಿಗಳ ಲೆಕ್ಕದಲ್ಲೇ ಕಾಮಗಾರಿಗಳ ವಿವರ ನೀಡುತ್ತಾರೆ. ಆದರೆ, ಅಭಿವೃದ್ಧಿ ಮಾತ್ರ ಕಾಣಿಸುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಸಾರ್ವಜನಿಕರು ವಿವಿಧ ರೀತಿಯ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಯಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಗೆ ಪ್ರತಿ ದಿನ ಬಂದು ಹೋಗುತ್ತಾರೆ. ಹಾಗೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳೂ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ  ಜಲ್ಲಿ ರಸ್ತೆಯಲ್ಲಿಯೇ ದೂಳಿನಲ್ಲಿ ಸಾವಿರಾರು ಜನ ಒಡಾಡುವಂತಾಗಿದೆ. ನಗರದಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿದರೆ ಕೋಟಿಗಟ್ಟಲೆ ಕಾಮಗಾರಿ ಅದೆಲ್ಲಿ ನಡೆಯುತ್ತಿವೆ ಎನ್ನುವುದೇ ಕಾಣುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕ ಚಿಕ್ಕಣ್ಣ.

ಸರ್ಕಾರಿ ಕಚೇರಿಗಳಿಗೆ ನೂರಾರು ಜನ ಬರುತ್ತಾರೆ. ಆದರೆ ಜಲ್ಲಿ ರಸ್ತೆಯ ದೂಳಿನಲ್ಲಿ  ಸಂಚರಿಸುವಂತಾಗಿದೆ.  ಕೋಟ್ಯಂತರ ರೂಪಾಯಿ ಕಾಮಗಾರಿ ಎಲ್ಲಿ ನಡೆಯುತ್ತಿವೆ ಎನ್ನುವುದೇ ಕಾಣುತ್ತಿಲ್ಲ.
-ಚಿಕ್ಕಣ್ಣ,
ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT