ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿಯಲ್ಲಿ ಬುಧವಾರದಿಂದ ರಾಷ್ಟ್ರೀಯ ರಂಗೋತ್ಸವ

Last Updated 17 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಜಂಟಿಯಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಏಪ್ರಿಲ್‌ 20ರಿಂದ 24ರವರೆಗೆ ‘ರಾಷ್ಟ್ರೀಯ ರಂಗೋತ್ಸವ’ ಆಯೋಜಿಸಿವೆ.

ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆಯಲಿರುವ ಐದು ದಿನಗಳ ಈ ಉತ್ಸವದಲ್ಲಿ ಐದು ನಾಟಕಗಳು ಪ್ರದರ್ಶನ ಕಾಣಲಿವೆ. ಪ್ರತಿ ನಾಟಕ ವೀಕ್ಷಣೆ ದರ ₹ 20. ನಾಟಕಗಳು ಪ್ರತಿ ದಿನ ಸಂಜೆ ಏಳು ಗಂಟೆಗೆ ಆರಂಭವಾಗಲಿವೆ.

‘ರಂಗೋತ್ಸವದಲ್ಲಿ ಪ್ರದರ್ಶನ ಕಾಣಲಿರುವ ನಾಟಕಗಳು ಬೇರೆ ಬೇರೆ ಭಾಷೆಯಲ್ಲಿದ್ದರೂ ಕತೆಯನ್ನು ಗ್ರಹಿಸಲು ಯಾವ ಸಮಸ್ಯೆಯೂ ಇಲ್ಲ. ಅಭಿನಯಕ್ಕೆ ಭಾಷೆ ಇಲ್ಲ’ ಎಂದು ರಂಗೋತ್ಸವದ ಆಯೋಜಕಿ, ಹಿರಿಯ ರಂಗಕರ್ಮಿ ಬಿ. ಜಯಶ್ರೀ ‘ಪ್ರಜಾವಾಣಿ’ ಬಳಿ ಅಭಿಪ್ರಾಯ ಹಂಚಿಕೊಂಡರು.

‘ಮಕ್ಕಳು ರಂಗಭೂಮಿಯತ್ತ ದೃಷ್ಟಿ ಹಾಯಿಸುವಂತೆ ಪಾಲಕರು ಮಾಡಬೇಕು. ಅಲ್ಲದೆ, ಹಿರಿಯರು ಕೂಡ ನಮ್ಮ ರಂಗ ಸಂಸ್ಕೃತಿಯನ್ನು ಕಂಡು, ಆಸ್ವಾದಿಸುವಂತೆ ಆಗಬೇಕು ಎಂಬುದು ಇದನ್ನು ಆಯೋಜಿಸಿರುವ ಉದ್ದೇಶ’ ಎಂದು ಅವರು ಹೇಳಿದರು.

ಏಪ್ರಿಲ್‌ 20: ರಂಗೋತ್ಸವದ ಮೊದಲ ದಿನ ಸಂಜೆ 7 ಗಂಟೆಗೆ ‘ಚಾಮಚಲುವೆ’ ನಾಟಕ ಪ್ರದರ್ಶನ ಇದೆ. ಡಾ. ಸುಜಾತ ಅಕ್ಕಿ ರಚಿಸಿರುವ ಈ ನಾಟಕದ ನಿರ್ದೇಶನ ಮಂಡ್ಯ ರಮೇಶ್ ಅವರದ್ದು.

‘ಚಾಮಚಲುವೆ’ ನಾಟಕವು ಚಾಮುಂಡೇಶ್ವರಿ ದೇವಿ ಹಾಗೂ ಮೈಸೂರು ಪ್ರಾಂತ್ಯದಲ್ಲಿ ಪ್ರಚಲಿತವಿರುವ ಜಾನಪದ ಕಾವ್ಯಗಳನ್ನು ಆಧರಿಸಿದೆ. ಇಬ್ಬರ ಪತ್ನಿಯರಿರುವ ನಂಜುಂಡ, ಚಾಮುಂಡಿಯಲ್ಲಿ ಅನುರಕ್ತನಾಗುವುದು ಈ ನಾಟಕದಲ್ಲಿದೆ. ದೇವಿ ಚಾಮುಂಡಿ ಸಾಮಾನ್ಯ ಮನುಜರಂತೆ ವಾಗ್ಯುದ್ಧಕ್ಕೆ ಇಳಿಯುವುದು ನಾಟಕದ ವೈಶಿಷ್ಟ್ಯ ಎಂದು ಇದನ್ನು ಅಭಿನಯಿಸುತ್ತಿರುವ ‘ನಟನ’ ಬಳಗ ಹೇಳಿಕೊಂಡಿದೆ.

ಏಪ್ರಿಲ್‌ 21: ಉತ್ಸವದ ಎರಡನೆಯ ದಿನ ಪ್ರದರ್ಶನ ಕಾಣಲಿರುವುದು ‘ಮೋಹೆ ಪಿಯಾ’ (ಮರಾಠಿ) ನಾಟಕ. ಇದು ಮಹಾಕವಿ ಭಾಸನ ‘ಮಧ್ಯಮ ವ್ಯಾಯೋಗ’ದ ರಂಗರೂಪ. ಇದನ್ನು ರಂಗಕ್ಕೆ ತಂದವರು ಪ್ರೊ. ವಾಮನ ಕೇಂದ್ರೆ. ಮುಂಬೈನ ‘ರಂಗ ಪೀಠ’ ಇದನ್ನು ಆಡಿ ತೋರಿಸಲಿದೆ. ಭೀಮ ಮತ್ತು ಘಟೋತ್ಕಚರು ಕಾಡಿನಲ್ಲಿ ಮುಖಾಮುಖಿ ಆಗುವುದು. ನಂತರ ಅವರಿಬ್ಬರ ನಡುವೆ ಕಾಳಗ ನಡೆಯುವುದು. ಅದರಲ್ಲಿ ಭೀಮ ಸೋಲುವುದು, ಘಟೋತ್ಕಚನ ತಾಯಿ ಹಿಡಿಂಬೆಯು ‘ಭೀಮ ನಿನ್ನ ತಂದೆ’ ಎಂದು ಮಗನನ್ನು ಒಪ್ಪಿಸುವುದು, ಕುರುಕ್ಷೇತ್ರ ಯುದ್ಧದಲ್ಲಿ ಘಟೋತ್ಕಚ ಸಾಯುವುದು ಇದರಲ್ಲಿದೆ.

ಏಪ್ರಿಲ್‌ 22: ‘ತಾವೂಸ್‌ ಚಮನ್‌ ಕಿ ಮೈನಾ’ (ಉರ್ದು) ನಾಟಕವು ಮೂರನೆಯ ದಿನ ಪ್ರದರ್ಶನ ಕಾಣಲಿದೆ. ವಸಾಹತು ಕಾಲದಲ್ಲಿ ಭಾರತೀಯರು ಎದುರಿಸಿದ ಸಂಕಷ್ಟಗಳು, ಮಗಳ ಕುರಿತು ತಂದೆಯೊಬ್ಬನಿಗೆ ಇರುವ ಪ್ರೀತಿ ಈ ನಾಟಕದ ಹಂದರದಲ್ಲಿದೆ. ನಾಯರ್ ಮಸೂದ್‌ ಅವರು ರಚಿಸಿದ ಈ ಕತೆಯನ್ನು ರಂಗ ರೂಪಕ್ಕೆ ತಂದವರು ಅತುಲ್ ತಿವಾರಿ. ಮುಂಬೈನ ಗಿಲ್ಲೊ ಥಿಯೇಟರ್ ರೆಪರ್ಟರಿ ಇದನ್ನು ಆಡಿ ತೋರಿಸಲಿದೆ.

ಏಪ್ರಿಲ್‌ 23: ಆ ದಿನ ಸಂಜೆ ‘ತುಕ್ಕೇ ಪೆ ತುಕ್ಕ’ (ಹಿಂದಿ) ನಾಟಕ ಪ್ರದರ್ಶನ ಇರಲಿದೆ. ಈ ನಾಟಕ ರಚಿಸಿದವರು ರಾಜೇಶ್ ಜೋಶಿ ಮತ್ತು ಬನ್ಸಿ ಕೌಲ್. ‘ರಂಗ ವಿದೂಷಕ’ ತಂಡ ಇದನ್ನು ಅಭಿನಯಿಸಲಿದ್ದು, ಬನ್ಸಿ ಅವರೇ ಇದನ್ನು ನಿರ್ದೇಶಿಸಿದ್ದಾರೆ. ಶ್ರೀಮಂತನ ನಿರಕ್ಷರಿ ಮಗ ತುಕ್ಕು ಎಂಬುವವನು ನವಾಬನ ಆಸ್ಥಾನ ಸೇರಿ, ನಂತರ ಅಲ್ಲಿ ತಾನೇ ನವಾಬನಾಗುವ ಕತೆ ಒಂದೂವರೆ ತಾಸಿನ ಈ ನಾಟದಲ್ಲಿ ಇದೆ.

ಏಪ್ರಿಲ್‌ 24: ಕೊನೆಯ ದಿನ ಪ್ರದರ್ಶನ ಕಾಣಲಿರುವ ನಾಟಕ ‘ಇಸ್ಮತ್‌ ಆಪಾ ಕೆ ನಾಮ್‌’ (ಉರ್ದು). ಇಸ್ಮತ್‌ ಚುಗುತೈ ರಚಿಸಿದ ನಾಟಕವನ್ನು ನಾಸೀರುದ್ದೀನ್‌ ಷಾ ನಿರ್ದೇಶಿಸಿದ್ದಾರೆ. ಮೋಟ್ಲೆ ರಂಗ ತಂಡ ಇದನ್ನು ಅಭಿನಯಿಸಲಿದೆ. ಇದರಲ್ಲಿ ಮೂರು ಪಾತ್ರಗಳು ಪ್ರತ್ಯೇಕವಾಗಿ ಅಭಿನಯಿಸಲಿವೆ. ಮೂರೂ ಪಾತ್ರಗಳ ಕತೆ ಬೇರೆಯೇ ಆಗಿದ್ದರೂ, ಪುರುಷ ಪ್ರಾಧಾನ್ಯ ವ್ಯವಸ್ಥೆಯಲ್ಲಿ ಮಹಿಳೆ ಅಸ್ತಿತ್ವ ಕಂಡುಕೊಳ್ಳುವುದು ಆ ಪಾತ್ರಗಳ ಕತೆಯ ಸಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT