ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗಳ ಗೋಳು

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ಮೇಷ್ಟ್ರು ತೊಟ್ಟಿಲು ಕಟ್ಟಿದ್ದು
ಮಲೆನಾಡಿನ ದಟ್ಟ ಕಾಡಿನ ಅಂಚಿನಲ್ಲಿದ್ದ ಪುಟ್ಟ ಪ್ರ್ಯೆಮರಿ ಸ್ಕೂಲು. ಒಂದರಿಂದ ನಾಲ್ಕನೇ ತರಗತಿವರೆಗೆ ಇದ್ದದ್ದೇ ಒಟ್ಟು ಹದಿನೆಂಟು ಇಪ್ಪತ್ತು ಮಕ್ಕಳು. ಏಕೋಪಾಧ್ಯಾಯ ಮುಖ್ಯೋಪಾಧ್ಯಾಯರ ಈ ಶಾಲೆಯಲ್ಲಿ ಎಪ್ಪತ್ತರ ದಶಕದಲ್ಲಿ ನಾನೂ ಒಬ್ಬ ವಿದ್ಯಾರ್ಥಿ. ಬಯಲು ಸೀಮೆಯಿಂದ ಬಂದಿದ್ದ ನಮ್ಮ ಮೇಷ್ಟ್ರಿಗೆ ಹಳ್ಳಿಯಲ್ಲಿ ಮನೆ ಸಿಗದಿದ್ದರಿಂದ ಅವರ ಸಂಸಾರ ಸ್ಕೂಲಲ್ಲೇ ಠಿಕಾಣಿ ಹೂಡಿತ್ತು. ಶಾಲೆಯೆಂದರೆ ಒಂದೇ ಒಂದು ದೊಡ್ಡ ಕೊಠಡಿಯಷ್ಟೆ.

ರೂಮಿನ ಅರ್ಧ ಭಾಗದಲ್ಲಿ ಹಾಸಿದ ಹಲಗೆಗಳ ಮೇಲೆ ವಿದ್ಯಾರ್ಥಿಗಳು ಕುಳಿತರೆ ಉಳಿದರ್ಧ ಜಾಗದಲ್ಲಿ ಹೆಂಡತಿಯ ಸೀರೆಯನ್ನು ಅಡ್ಡಲಾಗಿ ಇಳಿಬಿಟ್ಟು ಪಾರ್ಟಿಶನ್ ಮಾಡಿಕೊಂಡಿದ್ದರು ಮೇಷ್ಟ್ರು. ಇದೇ ಅವರ ಫ್ಯಾಮಿಲಿಯ ಸ್ಟೋರ್ ರೂಮ್ ಕಮ್ ಬೆಡ್ ರೂಮ್. ಶಾಲೆಯ ಹೊರ ಭಾಗದಲ್ಲಿ ಕಡಿಮಾಡನ್ನೇ ಸ್ವಲ್ಪ ಇಳಿಸಿ ಕಟ್ಟಿದ್ದ ಪುಟ್ಟ ಗೂಡೇ ಅಡಿಗೆ ಮನೆ, ಸ್ನಾನದ ಮನೆ ಎಲ್ಲಾ. ಅದರೆ ಗುರುಗಳ ಈ ಪುಟ್ಟ ರೆಸಿಡೆನ್ಷಿಯಲ್ ಸ್ಕೂಲಿಗೆ ಅಪವಾದವೆಂಬಂತೆ ಅವರದ್ದು ದೊಡ್ಡ ಸಂಸಾರ. ಎರಡು ಗಂಡು ಎರಡು ಹೆಣ್ಣು ಮಕ್ಕಳು! ಸಣ್ಣದು ಗಂಡು ಮಗು. ಅದು ಹುಟ್ಟಿದಾಗ ನಡೆದ  ಆ ಘಟನೆ ಇಷ್ಟು ವರ್ಷ ಕಳೆದರೂ ನನ್ನ ಕಣ್ಣಿಗೆ ಕಟ್ಟಿದಂತಿದೆ!

ತಮ್ಮ ಹಸಿಗೂಸಿಗೆ ಮೇಷ್ಟ್ರು ತೊಟ್ಟಿಲು ಕಟ್ಟಬೇಕಿತ್ತು. ಶಾಲೆಯ ಮಾಡು ಎತ್ತರದಲ್ಲಿದ್ದರಿಂದ ಹಗ್ಗ ಕಟ್ಟುವುದು ಸುಲಭವಾಗಿರಲಿಲ್ಲ. ಮಧ್ಯ ಭಾಗದ ಮರದ ತೊಲೆಗೆ ಹಗ್ಗ ಬಿಗಿಯಲು ಮೇಷ್ಟ್ರು ಮಾಸ್ಟರ್ ಪ್ಲಾನೇ ಮಾಡಿದರು. ಮರದ ಟೇಬಲ್ ಮೇಲೆ ತಾವು ಕೂರುವ ಕುರ್ಚಿಯಿಟ್ಟರು. ಎತ್ತರ ಸಾಕಾಗದಾಗ ಹಿಟ್ಟಿನ ಡಬ್ಬ, ಬೇಳೆ ಡಬ್ಬ, ಬೆಲ್ಲದ ಡಬ್ಬಗಳನ್ನು ಒಂದರ ಮೇಲೊಂದು ಜೋಡಿಸಿ ನಿಧಾನವಾಗಿ ಮೇಲೆ ಹತ್ತಿ ನಿಂತರು. ತೊಲೆ ಕ್ಯೆಗೆ ನಿಲುಕಿದಾಗ ಅವರ ಮುಖ ಖುಷಿಯಿಂದ ಊರಗಲವಾಗಿತ್ತು.

ತೊಟ್ಟಿಲು ಕಟ್ಟುವ ಹಗ್ಗವನ್ನು ನಮ್ಮಿಂದ ತೆಗೆದುಕೊಂಡವರೆ ತೊಲೆಗೆ ಸಿಕ್ಕಿಸುತ್ತಿದ್ದಂತೆ ಮೈ ಸ್ವಲ್ಪ ನಡುಗಿ ಮೂರೂ ಡಬ್ಬಗಳು ಢಣ್... ಢಣ್... ಎಂದು ಉರುಳಿಯೇ ಬಿಟ್ಟವು! ಒಂದೆಡೆ ಹಿಟ್ಟು, ಬೇಳೆ, ಬೆಲ್ಲ ಅಂತೆಲ್ಲ ಡಬ್ಬಿಯೊಳಗಿದ್ದುದ್ದೆಲ್ಲಾ ಹೊರಚೆಲ್ಲಿ ಚೆಲ್ಲಾಪಿಲ್ಲಿಯಾದ ದೃಶ್ಯ, ಮತ್ತೊಂದೆಡೆ ಕಾಲಿನ ಆಧಾರ ತಪ್ಪಿ ಹಗ್ಗವನ್ನೇ ಗಟ್ಟಿಯಾಗಿ ಹಿಡಿದುಕೊಂಡು ಜೋಕರ್‌ನಂತೆ ತೊಲೆಯಿಂದ ನೇತಾಡುತ್ತಾ ಜೀವ ಭಯದಿಂದ ಬೊಬ್ಬೆ ಹಾಕುತ್ತಿರುವ ನಮ್ ಮೇಷ್ಟ್ರು!

ಹುಡುಗು ಬುದ್ಧಿಯ ನಾವು ಈ ಅಪರೂಪದ ಸೀನ್ ನೋಡಿ ಖುಷಿಯಿಂದ ಚಪ್ಪಾಳೆ ಹೊಡೆದು ಕೇಕೆ ಹಾಕಿ ಕುಣಿಯತೊಡಗಿದ್ದೆವು! ಅದರಲ್ಲೂ ಮೇಷ್ಟ್ರು ಬನಿಯನ್-ಡ್ರಾಯರ್‌ನಲ್ಲಿ ಇರುತಿದ್ದುದ್ದೇ ಜಾಸ್ತಿ. ಸ್ಕೂಲಿಗೆ ಇನ್ಸ್‌ಪೆಕ್ಟರ್ ಅಥವಾ ಹೊರಗಿನಿಂದ ಯಾರಾದ್ರು ಬರ್ತಾರೆ ಅಂತ ಸುದ್ದಿಯಿದ್ದಾಗ ಮಾತ್ರ ಬಿಳಿ ಶರ್ಟ್, ಪಂಚೇಲಿ ಶಿಸ್ತಾಗಿರೋರು. ಪಾಪ ಅವತ್ತೂ ಗುರುಗಳ ಮೈಮೇಲಿದ್ದಿದ್ದು ಬನಿಯನ್ನು, ಪಟಾಪಟ್ಟಿ ಚೆಡ್ಡಿ ಮಾತ್ರ! ನನ್ನ ಕ್ಲಾಸ್‌ಮೇಟ್ ತರಲೆ ಮೂರ್ತಿ ಮೇಷ್ಟ್ರ ಡ್ರಾಯರೊಳಗಿಣುಕುತ್ತಾ ಎಲ್ಲರನ್ನೂ ಕೂಗಿ ಕೂಗಿ ವಿಶೇಷ ತೋರಿಸತೊಡಗಿದ್ದ!

‘ಕುರ್ಚಿ ಮೇಲೆ ಡಬ್ಬ ಜೋಡಿಸ್ರೋ..’ ಎಂದು ಅವರು ಬೊಬ್ಬೆ ಹಾಕುತ್ತಿದ್ದರೂ ನಾವೆಲ್ಲಾ ಮಜ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದೆವು. ಬರೇ ಕಣ್ಣಿಗಷ್ಟೇ ಹಬ್ಬ ಅಲ್ಲ ಉರುಳಿದ ಬೆಲ್ಲದ ಡಬ್ಬದಿಂದ ಎಲ್ಲರೂ ಬೆಲ್ಲದುಂಡೆ ಬಾಯಿಗೆ ತುಂಬಿಕೊಂಡು ಚಪ್ಪರಿಸಿತ್ತಾ ‘ಜೋಕಾಲಿ ಆಡಿರಿ ಮೇಷ್ಟ್ರೇ...’ ಎನ್ನುತ್ತಾ ರಾಗವಾಗಿ ಹಾಡತೊಡಗಿದ್ದೆವು. ಡಬ್ಬಿ ಜೋಡಿಸಿ ಗುರುಗಳನ್ನು ಕೆಳಗೆ ಇಳಿಸಬೇಕು ಎಂದು ಒಂಚೂರು ಅನಿಸಿರದ ಮರ್ಕಟ ಬುದ್ಧಿಯ ವಯಸ್ಸದು.

ಮಕ್ಕಳ ಕೇಕೆ, ಗಂಡನ ಕಿರುಚಾಟ ಕೇಳಿ ಅಡುಗೆ ಮನೆಯಿಂದ ಓಡಿ ಬಂದ ಅವರ ಹೆಂಡತಿ  ತೊಲೆಯಿಂದ ನೇತಾಡುತ್ತಿದ್ದ ಗಂಡನನ್ನು ಕಂಡು ಕಂಗಾಲಾಗಿ ಡಬ್ಬಿಗಳನ್ನು ಮತ್ತೆ ಜೋಡಿಸಿ ತರ ತರ ನಡುಗುತ್ತಿದ್ದ ಪತಿದೇವರನ್ನು ಕೆಳಗಿಳಿಸಿದವರೆ ಹಿಟ್ಟು, ಬೇಳೆ ಚೆಲ್ಲಿ ರಂಪ ಮಾಡಿದ ಮೇಷ್ಟ್ರಿಗೆ ಹಿಗ್ಗಾಮುಗ್ಗಾ ಬೈಯತೊಡಗಿದರು! ನೇತಾಡೋ ಸೀನು ಮುಗಿದು ಜಗಳದ ಸೀನು ಪ್ರಾರಂಭವಾಗಿ ನಮ್ಮ ಮನರಂಜನಾ ಕಾರ್ಯಕ್ರಮ ಸುಮಾರು ಹೊತ್ತು ಮುಂದುವರೆದಿತ್ತು! ಆಮೇಲೆ ಬೆಲ್ಲ ಚಪ್ಪರಿಸಿದ ನಮಗೂ ಬೆತ್ತದ ರುಚಿ ಸಿಕ್ಕಿತ್ತು!

ಈಗ ಊರಿಗೆ ಹೋಗುವಾಗಲೆಲ್ಲಾ ಈ ಶಾಲಾ ಕಟ್ಟಡ ಕಂಡೊಡನೆ ತೊಟ್ಟಿಲು ಕಟ್ಟುವ ಆ ಪ್ರಸಂಗ ನೆನಪಿಗೆ ಬಂದು ಗುರುಗಳು ಅಪಾಯದಲ್ಲಿದ್ದರೂ ಸಹಾಯ ಮಾಡದೆ ಮಜ ತೆಗೆದುಕೊಂಡ ಬಾಲ್ಯದ ಆ ನಡವಳಿಕೆ ಬಗ್ಗೆ ಪಶ್ಚಾತ್ತಾಪವಾಗುತ್ತದೆ! ಅ ಆ ಇ ಈ ಕಲಿಸಿದ ಆ ಮೇಷ್ಟ್ರು ಈಗ ಜೀವಂತ ಇದ್ದಾರೋ ಗೊತ್ತಿಲ್ಲ. ಆದರೆ ನಾ ಕಲಿತ  ಶಾಲೆ ಮಾತ್ರ ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿ  ಆಗಲೇ ಐದಾರು ವರ್ಷಗಳಾಗಿವೆ. ಕಾರಿನ ವೇಗ ಕಮ್ಮಿ ಮಾಡುತ್ತಾ, ಮಗ-ಮಡದಿಗೆ ನಾ ಓದಿದ ಶಾಲೆ ಇದೇ ಎಂದು ಹೆಮ್ಮೆಯಿಂದ ತೋರಿಸುವಾಗ ಬಾಗಿಲಲ್ಲಿ ಜೋತಾಡುತ್ತಿರುವ ದೊಡ್ಡ ಬೀಗ ಅಣಕಿಸಿದಂತಾಗಿ ಎದೆ ಭಾರವಾಗುತ್ತದೆ!
- ಡಾ. ಮುರಳೀಧರ ಕಿರಣಕೆರೆ, ಶಿವಮೊಗ್ಗ

‘ಹ’ ಕಾರ, ‘ಶ’ ಕಾರ ಪ್ರಿಯರು
ಹೈಸ್ಕೂಲ್‌ನಲ್ಲಿ ನಮಗೊಬ್ಬರು ವಿಜ್ಞಾನ ಮೇಷ್ಟ್ರಿದ್ದರು. ಅವರಿಗೆ ‘ಹ’ ಕಾರ, ‘ಅ’ ಕಾರಗಳನ್ನು ಅದಲು ಬದಲು ಹೇಳುವ ಅಭ್ಯಾಸ! ಒಮ್ಮೆ ಅವರು ‘ಆಕಾಶದಲ್ಲಿ ಹಕ್ಕಿಯು ಹಾರುತಿದೆ’ ಎನ್ನಲು  ‘ಹಾಕಾಶದಲ್ಲಿ ಅಕ್ಕಿಯು ಆರುತಿದೆ’ ಎಂದೆಳೆದೆಳೆದು ಹೇಳಿದಾಗ ಇಡೀ ತರಗತಿ ನಗೆಗಡಲಲ್ಲಿ ತೇಲಿತು. ನಮಗೆ ಹೇಗೋ ಅವರ ಊರು ಹಾಸನ ಎಂದು ಗೊತ್ತಾಯ್ತು. ಅವಕಾಶ ಸಿಕ್ಕಾಗ ಬೇಕೆಂದೇ ‘ನಿಮ್ಮ ಊರು ಯಾವುದು ಸಾರ್‌’ ಎಂದು ಅಮಾಯಕರಾಗಿ ಕೇಳಿದಾಗ ‘ಆಸನಾ’ ಎಂದು ಬಿಡಿಯಾಗಿ ಅವರು ಹೇಳಿದಾಗ ಬಿದ್ದೂ ಬಿದ್ದು ನಕ್ಕೆವು. ಪಾಪದ ಮೇಷ್ಟ್ರವರು.

ನಮ್ಮ ಜೊತೆಗೇ ಅವರೂ ಸದ್ದಿಲ್ಲದೇ ಬಾಯಗಲಿಸಿ ಸ್ಟ್ಯಾಚ್ಯೂ ಥರ ನಗು ಮುಖದಲ್ಲಿ ಮುಗ್ಧ ಭಾವದಿಂದ ನಿಲ್ಲುತ್ತಿದ್ದುದು ಇಂದಿಗೂ ಕಾಡುತ್ತದೆ. ಒಮ್ಮೆ ಮಧ್ಯಾಹ್ನದ ಬಿಡುವಿನಲ್ಲಿ ಹುಡುಗಿಯರು ಕಾಡು ಹಣ್ಣು ಕೀಳಲು ಮರ ಹತ್ತಿದ್ದನ್ನು ನೋಡಿದ ಅವರು ‘ಎಣ್ಣು ಮಕ್ಕಳು ಮರವನ್ನು ಅತ್ತ ಬಾರದು’ ಎಂದು ಎಳೆದೆಳೆದು ಹೇಳಿದಾಗ ನನಗರಿವಿಲ್ಲದಂತೆ ನನ್ನ ಬಾಯಿಂದ ‘ಎಣ್ಣು ಮಕ್ಕಳಿಗೂ ಒಟ್ಟೆ ಅಸಿಯುತ್ತದೆ’ ಎಂದು ಅವರ ಸ್ಟೈಲ್‌ನಲ್ಲೇ ಉತ್ತರ ಹೊರಟಾಗ ಸುಮ್ಮನೆ ನಗುತ್ತಾ ಹೋದರು. ಇನ್ನೊಬ್ಬರು ‘ಶ’ ಕಾರ ಪ್ರಿಯ ಪಿ.ಟಿ. ಮೇಷ್ಟ್ರು. ಅವರು ಭಾರೀ ಸ್ಟೈಲು.

ನನ್ನ ಹೆಸರನ್ನು ಯಾವಾಗಲೂ ‘ಶರಸ್ವತಿ’ ಎನ್ನುತ್ತಿದ್ದರು. ನನ್ನಜ್ಜ ಇಟ್ಟ ವಿದ್ಯಾದೇವತೆ ಹೆಸರನ್ನ ಹೀಗೆ ಕೆಡಿಸ್ತಾರಲ್ಲ ಅಂತ ನನಗೆ ಸಿಟ್ಟು. ಒಮ್ಮೆ ಸ್ಪೋರ್ಟ್ಸ್‌ಗೆಂದು ಚಿಕ್ಕಮಗಳೂರಿಗೆ ಹೋದಾಗ  ‘ರೋಡ್‌ ಹಂಪ್ಸ್’ ಥರ ತಲೆ ಬಾಚುವ ಇವರು ಹುಡುಗಿಯರ ಬಳಿ ಬಂದು ‘ಹೇರ್‌ ಪಿನ್’ ಇದೆಯಾ ಎಂದು ಕೇಳಿದರು. ಇದೇ ಸಮಯಕ್ಕೆ ಕಾದಿದ್ದಂತೆ ‘ಶೆಂಟ್‌ (ಸೆಂಟ್‌) ಶ್ನೋ (ಸ್ನೋ) ಎಲ್ಲ ಇದೆ ಬೇಕಾ ಸಾರ್‌’ ಎಂದೆ. ನನ್ನನ್ನೇ ದುರುಗುಟ್ಟಿ ನೋಡಿದಾಗ ನನ್ನ ಕೈಕಾಲು ‘ಗಡ ಗಡ’. ಇನ್ನು ಗಣಿತ ಮೇಷ್ಟ್ರಿಗೋ ಟೇಬಲ್‌ ಮೇಲೆ ಕುಳಿತು ಪಾಠ ಮಾಡುವ ಅಭ್ಯಾಸ. ಅವರ ಪೀರಿಯಡ್‌ ಬಂದ ಕೂಡಲೇ ಟೇಬಲ್‌ ಮೇಲೆಲ್ಲಾ ಚಾಕ್‌ಪೀಸ್‌ ಪೌಡರ್‌ ಹಾಕುತ್ತಿದ್ದೆವು. ಆದ್ದರಿಂದ ಯಾವಾಗಲೂ ಅವರ ಪ್ಯಾಂಟ್‌ನ ಸೀಟ್‌ನಲ್ಲಿ ಚಾಕ್‌ಪೀಸ್‌ ಪೌಡರ್‌ ಮೆತ್ತಿಕೊಂಡಿರುತ್ತಿತ್ತು. ನಮ್ಮ ಕೀಟಲೆಗಳಿಗೆಲ್ಲಾ ಕೊನೆಯೇ ಇರಲಿಲ್ಲ.
- ಹಾದಿಗಲ್ಲು ಸರಸ್ವತಿ ರಾಘವೇಂದ್ರ, ತೀರ್ಥಹಳ್ಳಿ

ಸರದಿಯಂತೆ  ಸಾಗುತ್ತಿತ್ತು ಕೀಟಲೆ
‘ಟೀಚರ್ ಟೀಚರ್ ನನಗೆ ಇವತ್ತೂ ಜ್ವರ’ ಅಂತ ಹೇಳಿದ್ರೇ ಸಾಕಿತ್ತು, ‘ಹೌದಾ ಪುಟ್ಟಾ ಮನೆಗೆ ಹೋಗು’ ಅನ್ನುವಷ್ಟರಲ್ಲಿ ಕ್ಲಾಸಿಂದ ಎದ್ದು ಓಡಿದಂಥ ನೆನಪುಗಳು ಇನ್ನೂ ಮನಸ್ಸಿನಲ್ಲಿ ಅಚ್ಚಳಿಯದಂತಿವೆ. ಬೆಳಿಗ್ಗೆ ಬೇಗನೆ ಎದ್ದು ನಾ ಮುಂದು ನೀ ಮುಂದು ಎಂದು ಗೆಳೆಯರ ಜೊತೆ ಶಾಲೆಗೆ ಓಡುವ ಸ್ಪರ್ಧೆ ನೆನಪಿದೆ. ದಿನವೂ ಹೇಗಾದರು ಟೀಚರ್‌ಗೆ ಕೋಪ ಬರುವಂತೆ ಮಾಡಿ ಕೀಟಲೆ ಕೊಟ್ಟು ಕೈಯಲ್ಲಿ ಕೋಲು ಹಿಡಿದು ಟೀಚರ್ ಇನ್ನೇನು ಹೊಡೆಯುವಷ್ಟರಲ್ಲಿ ಅವರ ಲಾಟಿಯನ್ನು ನಾವೇ ಹಿಡಿದರೆ ಸಾಕಿತ್ತು, ‘ನಾನಿನ್ನು ನಿಮ್ಮ ಕ್ಲಾಸಿಗೆ ಬರಲ್ಲ’ ಅಂತ ಹೇಳಿ ಹೊರಡುತ್ತಿದ್ದರು. ಅಷ್ಟೇ ಸಾಕಿತ್ತು ಇಡೀ ದಿನದ ಹುಚ್ಚಾಟದ ನಲಿವಿನ ಮೋಜಿನಾಟಕ್ಕೆ. ಹೀಗೆ ದಿನವೂ ಸರದಿಯಂತೆ ಕೋಲು ಹಿಡಿಯುವ ಕೆಲಸವಾಗಿತ್ತು ನಮ್ಮದು.

ಗುರುಗಳ ಕುರ್ಚಿಯ ಕಾಲನ್ನೇ ಮುರಿದು ಅದರ ಮೇಲೆ ಅವರನ್ನು ಕೂರಿಸಿ, ಬೀಳಿಸಿ ನಕ್ಕ ಆ ಕ್ಷಣ ಇನ್ನೂ ನೆನಪಿದೆ. ಅದರ ಪರಿಣಾಮ, ನನ್ನ ತಂದೆಯನ್ನು ಕರೆಸಿ ಬೈಯ್ಗುಳದ ಪೂಜೆ ಸಿಕ್ಕಿತ್ತು. ಟೀಚರ್ ಪಾಠ ಮಾಡೋ ಡಯಾಸನ್ನೂ ಮುರಿದಿದ್ವಿ. ನಮ್ಮ ತರಗತಿ ಹಾಜರಾತಿ ಪುಸ್ತಕವನ್ನೇ ಮುಚ್ಚಿಟ್ಟು ಎಲ್ಲಾ ಮೇಷ್ಟ್ರುಗಳು ಸೇರಿ ಹುಡುಕುವಂತೆ ಮಾಡಿದ್ದೆವು. ಮರಕೋತಿ ಆಟವಾಡುವಾಗ ಮಂಗನ ಹಾಗೆ ಆಡಲು ಹೋಗಿ ಟೀಚರ್ ಮರ ಹತ್ತಿದ್ದನ್ನು ನೋಡಿದರೆಂದು ತಪ್ಪಿಸಿಕೊಳ್ಳಲು ಹೋಗಿ ಅವರ ಮೇಲೇ ಜಿಗಿದು ಮೈಯಲ್ಲಾ ರಾಡಿ ಮಾಡಿ ತಪ್ಪಿಸಿಕೊಂಡ ಆ ದಿನ ಮರೆಯಲಾರದ ದಿನ.

ಹರೆಯಕ್ಕೆ ಬಂದಾಗ ಟೀಚರ್‌ಗೆ ಕ್ಲಾಸ್‌ಗಳಲ್ಲಿ ಕೊಟ್ಟ ಕೀಟಲೆಗಳು ಸಾಕಷ್ಟಿವೆ. ಹತ್ತನೇ ಕ್ಲಾಸಿನಲ್ಲಿರುವಾಗ ಪ್ರಾರ್ಥನೆ ಹೇಳುವಾಗ ಹಿಂದೆ ನಿಂತು ಸಿನಿಮಾ ಗೀತೆ ಹಾಡಿ ಮೇಷ್ಟ್ರ ಹಾಡಿನ ಧಾಟಿಯನ್ನೇ ಬದಲು ಮಾಡಿ ಕೀಟಲೆ ಕೊಟ್ಟಿದ್ದು. ಪಾಠ ಕೇಳುವಾಗ ಹಿಂದಿನ ಬೆಂಚಿನಲ್ಲಿ ಕೂತು ವಿಚಿತ್ರ ಶಬ್ದ ಮಾಡಿ ನಮಗೇನೂ ಗೊತ್ತೇ ಇಲ್ಲ ಎಂಬಂತೆ ಕುಳಿತಿದ್ದು. ಟೀಚರ್ ಸ್ಕೂಟಿ ದೂಡುತ್ತೇವೆ ಎಂದು ಹೇಳಿ ಸ್ಕೂಟರ್ ಚಲಾಯಿಸುವ ಪ್ರಯತ್ನ ಮಾಡಲು ಹೋಗಿ ಆಕ್ಸಿಡೆಂಟ್ ಮಾಡಿ ಇಡೀ ಗಾಡಿಯನ್ನು ಜಖಂಗೊಳಿಸಿದ್ದು. ಮೇಷ್ಟ್ರು ಕುಳಿತುಕೊಳ್ಳೊ ಕುರ್ಚಿಗೆ ತುರಿಕೆ ಬರೊ ಪುಡಿ ಹಚ್ಚಿ ಇಡೀ ದಿನ ಪೇಚಾಡುವಂತೆ ಮಾಡಿದ್ದು. ಟೀಚರ್ ಪಾಠ ಮಾಡುವಾಗ ‘ಭತ್ತದ ಸಂರಕ್ಷಣೆಗೆ ಯಾವ ಪೌಡರ್ ಬಳಸುತ್ತಾರೆ ಮಕ್ಕಳೇ?’ ಎಂದು ಕೇಳಿದ ಪ್ರಶ್ನೆಗೆ ಪಾಂಡ್ಸ್ ಪೌಡರ್ ಎಂದು ಉತ್ತರಿಸಿ ದಿನವಿಡೀ ಬಿಸಿಲಿನಲ್ಲಿ ತಲೆ ಕಾಯಿಸಿದ್ದು. ಶಾಲಾ ಕಾರ್ಯಕ್ರಮ ನಡೆಯುವಾಗ ಮಂಜುಳಾ ಮೇಡಂ ಸೀರೆ ಸೆರಗನ್ನು ಆಶಾ ಮೇಡಂ ಸೀರೆ ಸೆರಗಿಗೆ ಕಟ್ಟಿ ಅವರನ್ನು ಬೀಳಿಸಿದ್ದು ಹೀಗೆ

ಹತ್ತಾರು ನೆನಪುಗಳಿವೆ. ಆ ವಯಸ್ಸಿನ ಹುಚ್ಚು ಮನಸ್ಸೇ ಹಾಗಿತ್ತೋ ಏನೋ ಗೊತ್ತಿಲ್ಲ. ಬೇರೆಯವರು ನಮ್ಮೆದುರಿಗೆ ಏನಾದರೂ ಮಾಡುತ್ತಿದ್ದರೆ ನಾವೂ ಹಾಗೇ ಮಾಡಬೇಕು ಎಂಬ ಸಾಹಸಕ್ಕೆ ಕೈ ಹಾಕುತ್ತಿದ್ದೆವು. ಹೀಗೆ ಒಂದು ದಿವಸ ಪಾನ್‌ಪರಾಗ್‌ ತಿನ್ನಬೇಕೆಂದು ನಿರ್ಧರಿಸಿ ತಿಂದು ಶಾಲೆಗೆ ಹೋದೆ. ನಾನು ಮಾಡಿದ ಚಟದ ವಾಸನೆ ಯಾವುದೇ ಕಾರಣಕ್ಕೂ ಟೀಚರ್‌ಗೆ ತಿಳಿಯಬಾರದೆಂದು ಬಾಯಲ್ಲಿ ಬೆಲ್ಲದ ಚಾಕೊಲೇಟ್‌ ಹಾಕಿಕೊಂಡು ಶಾಲೆಗೆ ಹೋದ ನನಗೆ ಆಶ್ಚರ್ಯವೆಂಬಂತೆ ಗುಪ್ತವಾಗಿ ಇಟ್ಟ ವಿಷಯ ಹೇಗೋ ಟೀಚರ್‌ಗೆ ಗೊತ್ತಾಗಿ ನಮ್ಮ ಅಮ್ಮನಿಗೆ ಹೇಳಿ ಬಾಯಿ ಮೇಲೆ ಬರೆ ಬರೋ ಹಾಗೆ ಹೊಡೆಸಿದರು. ಅದೇ ಕೋಪಕ್ಕೆ ಟೀಚರ್ ದಿನಾಲೂ ಸ್ಕೂಟರ್ ಮೇಲೆ ಬರೋ ದಾರೀಲಿ ಉದ್ದನೆಯ ಮೊಳೆ ಇಟ್ಟು ಪಂಚರ್ ಮಾಡಿ ನಮ್ಮ ಊರಿನ ಕಾಡು ದಾರಿ ನಡುವೆ ದಿನವಿಡೀ ನಿಲ್ಲುವಂತೆ ಮಾಡಿ ಅವರಿಗೆ ಗೋಳು ಕೊಟ್ಟದ್ದನ್ನು ನೆನಪಿಸಿಕೊಂಡರೆ ಈಗ ನೋವಾಗುತ್ತದೆ. ಹಿಂದಿನ ಸಾವಿರಾರು ಸವಿ ಸವಿ ನೆನಪುಗಳು ಇಂದಿಗೂ ಮರೆತಿಲ್ಲ, ಮರೆಯೋದೂ ಇಲ್ಲ. ಆವತ್ತು ಮಾಡಿದ ಆ ಕೀಟಲೆ ಅವುಗಳಿಗೆ ತತ್ಸಮಾನ ಶಿಕ್ಷೆ ಎಲ್ಲವೂ ಸಹ ಜೀವನಕ್ಕೆ ಪಾಠವಿದ್ದಂತೆ.
- ರಾಜೇಶ ನಾಯ್ಕ ಶಿರಸಿ. ಉಜಿರೆ

ಕಲ್ಪನಾ ಬಂತೂ...
ಆಗ ನಾನು ವಿಜಯಪುರದ ಪಿ.ಡಿ.ಜೆ. ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ನಮಗೆ ವಿಜ್ಞಾನ ವಿಷಯವನ್ನು ರಾಯಭಾಗಿ ಮಾಸ್ತರು ಹೇಳುತ್ತಿದ್ದರು. ಪಾಠವಂತೂ ಎಲ್ಲರಿಗೂ ಮನದಟ್ಟಾಗುವಂತೆ ತುಂಬಾ ರಸವತ್ತಾಗಿ ಬೋಧಿಸುತ್ತಿದ್ದರು. ಆದ್ರೆ ಪಾಠದ ಮಧ್ಯೆ ‘ಕಲ್ಪನಾ ಬಂತೇನು?’ ಎಂದು ಕೇಳುತ್ತಿದ್ದರು. ನಾನು, ನನ್ನ ಸ್ನೇಹಿತ ಪ್ರಕಾಶ ಸೇರಿ ಅವರು ತಮ್ಮ ಪೀರಿಯಡ್‌ನಲ್ಲಿ ಎಷ್ಟು ಸಲ ‘ಕಲ್ಪನಾ ಬಂತು’ ಅನ್ನುತ್ತಿದ್ದರು ಎಂಬುದನ್ನು ದಿನವೂ ನೋಟ್‌ಬುಕ್ಕಿನಲ್ಲಿ ಗುರುತು ಮಾಡುತ್ತಿದ್ದೆವು. ಅದಕ್ಕೊಂದು ಬೇರೆ ನೋಟ್‌ಬುಕ್ ಮಾಡಿದ್ವಿ ಅನ್ನಿ. ಹೀಗೊಂದು ದಿನ ಅವರು ಪಾಠ ಮಾಡುತ್ತಿರುವಾಗ, ಎಂದಿನಂತೆ ನಾವಿಬ್ಬರೂ ಗುರುತು ಹಾಕುತ್ತಿದ್ದೆವು. ಆಗ ನಮ್ಮಿಬ್ಬರಲ್ಲಿ ಒಂದು ಪುಟ್ಟ ಕಲಹ ಪ್ರಾರಂಭವಾಯಿತು. ಪ್ರಕಾಶ, ‘ಕಲ್ಪನಾ ಬಂತೇನು?’

ಎಂದದ್ದನ್ನು ಇಪ್ಪತ್ನಾಲ್ಕು ಸಲ ಗುರುತು ಮಾಡಿದ್ದನು. ನಾನು ಇಪ್ಪತ್ತೈದು ಸಲ ಗುರುತು ಮಾಡಿದ್ದೆ. ನಮ್ಮ ಗುಸು ಗುಸು ಮಾತು ಮಾಸ್ತರಿಗೆ ಕೋಪ ಬಂದಿತು. ‘ಏನ್ರೋ ಅದು ಗಲಾಟೆ?’ ಎಂದು ಜೋರಾಗಿ ಕೂಗಿದಾಗ ನಾನು ‘ಏನಿಲ್ಲ ಸಾರ್‌’ ಎಂದೆ ಭಯದಿಂದ. ‘ಇಬ್ಬರೂ ಎದ್ದು ನಿಲ್ಲಿ’ ಎಂದರು. ಅವರು ನಮ್ಮ ಹತ್ರ ಬರುವುದನ್ನು ಕಂಡು ನಾವು ನೋಟ್‌ಬುಕ್ಕನ್ನು ಬಚ್ಚಿಡಲು ಪ್ರಯತ್ನಪಟ್ಟೆವು. ಅದು ಸಾಧ್ಯವಾಗಲಿಲ್ಲ. ಅದನ್ನು ನೋಡಿಯೇಬಿಟ್ಟರು. ‘ಏನದು...?’ ಅವರ ಕಣ್ಣುಗಳು ಕೆಂಪಾದವು. ‘ಏನಿಲ್ಲ ಸಾರ್‌...’ ಎಂದರೂ ನನ್ನ ಮಾತನ್ನು ಕೇಳದೆ ನನ್ನ ಕೈಯಿಂದ ನೋಟ್‌ಬುಕ್ಕು ತೆಗೆದುಕೊಂಡು ಅದರ ಮೇಲೆ ಕಣ್ಣಾಡಿಸಿದರು. ಅವರಿಗೆ ಅದೇನಂತ ಗೊತ್ತಾಗಲಿಲ್ಲ. ‘ಏನ್ರೋ ಇದು?’ ಎಂದು ಜಬರಿಸಿದಾಗ ನಾನು ನಡುಗುತ್ತಾ ‘ಸಾರ್‌ ಅದು... ಅದು...’

ಮಾತುಗಳು ಗಂಟಲಿನಿಂದ ಹೊರಬರಲಿಲ್ಲ. ‘ಹೂಂ! ಏನದು ಬೇಗ ಬೊಗಳು’ ಎಂದರು ಏರಿದ ದನಿಯಲ್ಲಿ. ‘ಮತ್ತೇ ನೀವು ಪೀರಿಯಡ್‌ನಲ್ಲಿ ‘ಕಲ್ಪನಾ ಬಂತು’ ಅಂತಾ ಎಷ್ಟುಸಲ ಅನ್ತೀರಿ ಅಂತ ಗುರುತು ಹಾಕ್ತಿದ್ದೀವಿ’ ಎಂದು ಹೆದರಿಕೆಯಿಂದ ಹೇಳಿದೆ. ನನ್ನ ಮಾತಿನಿಂದ ಅವರ ಕೋಪ ನೆತ್ತಿಗೇರಿತು. ‘ಏನ್ರೋ... ಶಾಲೆಗೆ ಇದಕ್ಕೆ ಬರ್‍ತೀರೇನು?’ ಎಂದು ಬೆತ್ತದಿಂದ ಚೆನ್ನಾಗಿ ಬಾರಿಸಿದರು. ಅಳು ಬಂದರೂ ತುಟಿಕಚ್ಚಿ ತಡೆದೆವು. ಆದರೆ ಅವರು ಅಷ್ಟಕ್ಕೇ ಬಿಡದೆ ‘ನಾಳಿಗೆ ನಿಮ್ಮ ಪಾಲಕರನ್ನು ಕರಕ್ಕೊಂಡು ಬನ್ನಿ. ಕಲ್ಪನಾ ಬಂತಿಲ್ಲ’ ಎಂದು ಅಂದಾಗ, ನಾನು ಅಭ್ಯಾಸಬಲದಿಂದ ಇಪ್ಪತ್ತಾರನೇಸಲ ಎನ್ನಬೇಕೇ?. ಹುಡುಗರೆಲ್ಲರೂ ಜೋರಾಗಿ ನಗತೊಡಗಿದರು. ಕೋಪಗೊಂಡ ರಾಯಭಾಗಿ ಮಾಸ್ತರೂ ನಕ್ಕಿಬಿಟ್ಟರು.
- ಚಂದ್ರಕಾಂತ. ಮ. ತಾಳಿಕೋಟೆ, ಬಾದಾಮಿ


ಮೇಷ್ಟ್ರ ಮಜ್ಜಿಗೆ ಪುರಾಣ
ಬಾಲ್ಯವೆಂದರೆ ಹಾಗೆಯೇ, ಯಾರೊಬ್ಬರ ಮೇಲಾದರೂ ಉಂಟಾಗುವ ಸಿಟ್ಟು ವಯಸ್ಸಿನ ಉತ್ಸುಕತೆಯಲ್ಲಿ ಸೇಡು ತೀರಿಸಿಕೊಳ್ಳುವವರೆಗೂ ಶಮನವಾಗುವುದಿಲ್ಲ. ಆ ಸೇಡಿನ ಪರಿಣಾಮಗಳ ಕುರಿತೂ ಚಿಂತಿಸುವುದಿಲ್ಲ.

ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿ 7ನೇ ಇಯತ್ತೆ ಕಲಿಯುತ್ತಿದ್ದ ಕಾಲವದು. ‘ಏದೀ ಸೀಳಿದ್ರ ಎರಡ ಅಕ್ಷರ ಇಲ್ಲ’ ಅಂತ ಸಾಲಿಯೊಳಗಿನ ಮಾಸ್ತರ್‌ಗಳು ನನಗೆ ಕೊಟ್ಟ ಬಿರುದು. ಇದಕ್ಕೆ ಊರ ಜನರೂ ದನಿಗೂಡಿಸಿದ್ದರು. ನನ್ನ ಉಡಾಳತನ ನೋಡಿ ಬೈಯುತ್ತಿದ್ದ ಮಾತವು.

ಅದಾಗ ತಾನೇ ಹೊಸದಾಗಿ ನಮ್‌ ಶಾಲೆಗೆ ವರ್ಗವಾಗಿ ಬಂದ ಯಲ್ಲಪ್ಪ ಮಾಸ್ತರ ತುಂಬಾ ಸ್ಟ್ರಿಕ್ಟು, ‘ಏಟು ಛಂ ಛಂ ವಿದ್ಯೆ ಘಂ ಘಂ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು. ಅಷ್ಟೇ ರಾಗವಾಗಿ ಕೋಗಿಲೆಯನ್ನು ಕರೆಯುವ ಅವರ ಹಾಡು ಇನ್ನೂ ನೆನಪಿನಿಂದ ಮಾಸಿಲ್ಲ. ಪ್ರತಿದಿನ ಸಂಜೆ ಶಾಲೆಯಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ಕೂಡಿಸಿ ಮಗ್ಗಿ ಹೇಳಿಸುತ್ತಿದ್ದರು. ಹೇಳಲು ಬಾರದವನಿಗೆ ಹುಡುಗಿಯರಿಂದ ಕಪಾಳಮೋಕ್ಷ ಹಾಗೂ ಬಗ್ಗಿ ಕಿವಿ ಹಿಡಿದು ನಿಲ್ಲುವ ಶಿಕ್ಷೆ. ಪ್ರತಿದಿನ ತಪ್ಪದೇ ಈ ಶಿಕ್ಷೆಯನ್ನು ಅನುಭವಿಸಿ ಹುಡುಗಿಯರ ಮುಂದೆ ಅವಮಾನಿತನಂತಾಗುವ ನನಗೆ ಅವರ ವಿರುದ್ಧ ಆಕ್ರೋಶ ಅರಿಯದ ಮನದಲ್ಲಿ ಹೊಕ್ಕಿಬಿಟ್ಟಿತ್ತು.

ಅವರಿಗೊಂದು ನಿತ್ಯದ ರೂಢಿಯಿತ್ತು. ಮಧ್ಯಾಹ್ನ ಬಿಸಿಯೂಟದ ನಂತರ ಮಜ್ಜಿಗೆ ಕುಡಿಯುವುದು. ಹೈನು ಇರುವ ಹುಡುಗರು ಪಾಳಿ ಪ್ರಕಾರ ತಂದು ಕೊಡಬೇಕು. ಅದೊಂದು ದಿನ ನನ್ನ ಸರದಿ. ಮೇಷ್ಟ್ರು ಕೊಟ್ಟ ಚರಿಗೆಯನ್ನು ಹಿಡಿದುಕೊಂಡು ಮನೆಗೆ ಓಡಿ ತುಂಬಿಸಿಕೊಂಡು ನಂತರ ಅದಕ್ಕೆ ನನ್ನ ಸಿಟ್ಟಿನ ಪ್ರತೀಕವಾಗಿ ಚಡ್ಡಿದೋಸ್ತನೊಬ್ಬ ಅವರಪ್ಪನ ಅಂಗಡಿಯಿಂದ ಕದ್ದುಕೊಟ್ಟ ಭೇದಿಮಾತ್ರೆ ಬೆರೆಸಿ ತಂದು ಕೊಟ್ಟು ಶಹಬ್ಬಾಸ್‌ಗಿರಿ ಪಡೆದುಕೊಂಡೆ. ಅದನ್ನು ಕುಡಿದ ನಮ್ ಮೇಷ್ಟ್ರಿಗೆ ಹೊಟ್ಟೆಯಲ್ಲಿ ತಕಧಿಮಿತಾ. ಆ ಹಳ್ಳಿ ಶಾಲೇಲಿ ಶೌಚಾಲಯ ಎಲ್ಲಿ ಬರಬೇಕು? ಬಯಲಿಗೂ ಶಾಲೆಗೂ ನಾಲ್ಕೈದು ಬಾರಿ ನಡೆದ ಅವರ ಪಾದಯಾತ್ರೆಯುದ್ದಕ್ಕು ಜನ- ‘ಏನ್ರಿ ಮಾಸ್ತರ್ರ ಹುಡ್ರಿಗೆ ಸಾಲಿ ಕಲಿಸೋದ್ ಬಿಟ್ ಬರೀ ಹೇಲಿಕೇರಿಗೆ ಅಡ್ಡಾಡ್ತಿರೇನ್..? ಗೌರ್ನಮೆಂಟ್ ಕೊಡೋ ಊಟನ ಹುಡುಗರಿಗಿಂತ ನೀವಾ ಜಾಸ್ತಿ ತಿಂದ್ರ ಮತ್ತಿನ್ನೇನ ಆಕೈತಿ..?’ ಎಂದು ಛೇಡಿಸುವವರೇ.

ಇದು ನನ್ನ ಮಜ್ಜಿಗೆಯ ಪ್ರಭಾವವೆಂದು ಅರಿತ ಮೇಷ್ಟ್ರು ಅವತ್ತಿಂದ ಮಗ್ಗಿ ಹೇಳಲಿಕ್ಕಾಗಲಿ, ಮಜ್ಜಿಗೆ ತರಲಾಗಲೀ ಕರಿಯಲೇ ಇಲ್ಲ.
ಸುಮಾರು ಆರು ವರ್ಷಗಳ ನಂತರ, ಈಗ ಆ ವಯಸ್ಸಾದ ಜೀವಕ್ಕೆ ನನ್ನ ಹುಚ್ಚಾಟದಿಂದ ಕೊಟ್ಟ ತೊಂದರೆ ಕುರಿತು ಖೇಧವೆನಿಸುತ್ತಿದೆ. ತಮಗಾಗಿ ಯಾವುದೇ ಆಸ್ತಿ ಮಾಡಿಕೊಳ್ಳದೆ ವಿದ್ಯಾರ್ಥಿಗಳನ್ನೇ ದೇಶದ ಆಸ್ತಿಯನ್ನಾಗಿ ಬೆಳೆಸಿದವರು ನೀವು. ಈ ಆಸ್ತಿ ಎಂದೂ ಕರಗುವುದಿಲ್ಲ. ಸ್ವರ್ಗದಿಂದಲೇ ನನ್ನನ್ನು ಕ್ಷಮಿಸಿಬಿಡಿ ಸರ್...!
- ಅಂದಯ್ಯ ಅರವಟಗಿಮಠ, ಧಾರವಾಡ

ನಮಸ್ಕಾರ ಸಾರ್, ನಮಸ್ಕಾರ...
ಸರ್ಕಾರಿ ಪ್ರೌಢ ಶಾಲೆಗೆ ಶಿಕ್ಷಕನಾಗಿ ಮೊದಲನೆಯ ದಿನ ಹೋದ ನಾನು ಹತ್ತನೆಯ ತರಗತಿವರೆಗೆ ಪಾಠ ಮಾಡಿದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಮಾಡಿದ್ದ ನನಗೆ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಶಿಕ್ಷಕರಿಗೆ ಗೌರವ ಕಡಿಮೆ ಕೊಡುತ್ತಿದ್ದಾರೆ ಎಂಬ ಅನುಭವವಾದ್ದರಿಂದ ಆವತ್ತು ಆ ಶಾಲೆಯಲ್ಲಿ ಮೊದಲಿಗೆ, ಅವರಿಗೆ ಶಿಕ್ಷಕರಿಗೆ ಗೌರವ ಹೇಗೆ ಮತ್ತು ಯಾಕೆ ಕೊಡಬೇಕು ಎಂಬುದನ್ನು ಕಥೆಯ ಮೂಲಕ ವಿವರಿಸಿದ್ದೆ. ಹೊಸ ಶಿಕ್ಷಕನಾದ್ದರಿಂದ ಅವರೂ ಕುತೂಹಲದಿಂದ ಕೇಳಿದರು.

ಮರುದಿನ ಉತ್ಸಾಹದಿಂದ ಶಾಲೆಗೋದ ನನಗೆ ಒಬ್ಬ ಬಾಲಕ ಎದುರಾಗಿ ‘ನಮಸ್ಕಾರ ಸರ್’ ಅಂತ ಗೌರವದಿಂದ ಹೇಳಿದ. ನಾನು ಅವನ ಗೌರವಕ್ಕೆ ಪ್ರತ್ಯುತ್ತರ ನೀಡಿದೆ. ಆ ಶಾನೂರ ಎಂಬ ಬಾಲಕ ಮತ್ತೆ ಎದುರಾದಾಗ ಗೌರವದಿಂದ ‘ನಮಸ್ಕಾರ ಸಾರ್’ಎಂದ. ನಾನು ಅವನ ಪುನರ್ಗೌರವಕ್ಕೆ ಪುನಃ ಪ್ರತ್ಯುತ್ತರ ನೀಡಿದೆ. ಹೀಗೆ ಶಾನೂರನು ಅವತ್ತು ಸುಮಾರು ಹತ್ತು ಬಾರಿ ಗೌರವ ಸೂಚಿಸಿದ್ದ. ಹೆದರಿಕೆ ಅಥವಾ ಹಿಂಜರಿಕೆಯಿಂದ, ಶಿಕ್ಷಕರು ಎದುರಾದಾಗ ತಲೆ ಕೆಳಗಾಗಿ ಹೋಗುತ್ತಿರುವವರ ನಡುವೆ ಶಾನೂರ ನೀಡಿದ ಗೌರವದಿಂದ ಸಂತೋಷವೂ ಆಗಿತ್ತು ಮತ್ತು ಅವನ ಬಗ್ಗೆ ಹೆಮ್ಮೆಯೂ ಮೂಡಿತ್ತು.

ಶಾನೂರನ ಗೌರವ ಸಾಂಕ್ರಾಮಿಕವಾಗಿ ಹರಡಿ ಮರುದಿನ ಹತ್ತನೆಯ ತರಗತಿಯ ಬಾಲಕರೆಲ್ಲ ಭೆಟ್ಟಿಯಾದಾಗಲೊಮ್ಮೆ ‘ನಮಸ್ಕಾರ ಸಾರ್’ ಅಂತ ಹೇಳಿದ್ದರಿಂದ ನನಗೆ ಮತ್ತಷ್ಟು ಸಂತೋಷವಾಯಿತು. ಆದರೆ ಮರುದಿನ ಈ ಗೌರವದಿಂದ ಒಳಗೊಳಗೆ ಇರುಸು ಮುರುಸುವಾಗಲು ಶುರುವಾಯಿತು. ಕಾರಣ ಈ ಗೌರವವೆಂಬ ಸಾಂಕ್ರಾಮಿಕ ರೋಗ ಇಡೀ ಶಾಲೆಯ ವಿದ್ಯಾರ್ಥಿಗಳಿಗೆ ಹಬ್ಬಿತ್ತು. ‘ನಮಸ್ಕಾರ ಸಾರ್’ ಎಂಬ ಪದ ಸಾವಿರಾರು ಬಾರಿ ಕೇಳಿದ್ದರಿಂದ ತಲೆಯಲ್ಲಿ ಅದೇ ಓಡಾಡುತ್ತಿತ್ತು.

ಬೆಳಿಗ್ಗೆ, ಅಲ್ಪ ವಿರಾಮದ ಸಮಯ, ಊಟದ ವಿರಾಮದ ಸಮಯ, ಸಾಯಂಕಾಲ, ಶಾಲೆ ಬಿಟ್ಟ ಸಮಯ ನನಗೆ ಕೇಳುತ್ತಿದ್ದ ಶಬ್ದ ಒಂದೇ ‘ನಮಸ್ಕಾರ ಸಾರ್’. ಈ ವಿಪರೀತ ಗೌರವ ನನಗೆ ನುಂಗಲಾರದ ತುತ್ತಾಯಿತು. ಇವರೆಲ್ಲಾ ಒಟ್ಟಾಗಿ ಚೇಷ್ಠೆಯಿಂದ ನನ್ನನ್ನು ಗೋಳು ಹೋಯ್ದುಕೊಳ್ಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಲು ಬಹಳ ಸಮಯ ತೆಗೆದುಕೊಳ್ಳಲಿಲ್ಲ. ನನ್ನ ಮೊದಲ ಪಾಠ ಇಷ್ಟೊಂದು ವಿಪರೀತವಾಗಿ ಅವರನ್ನು ಆಕ್ರಮಿಸಿದ್ದನ್ನು ಕಡಿಮೆಗೊಳಿಸುವ ಯೋಚನೆ ತಲೆಯಲ್ಲಿ ಹುಳುವಿನಂತೆ ಕೊರೆದವು.‌

ನನಗೆ ಗೌರವ ನೀಡಿದವರಿಗೆಲ್ಲಾ ಹೊಡೆಯಲೆ? ನಾನು ಸೋತೆನೆಂದು ಬಿಳಿ ಧ್ವಜ ತೋರಿಸಿ ಅವರ ಜೊತೆ ಒಪ್ಪಂದ ಮಾಡಿಕೊಳ್ಳಲೆ? ಶಾನೂರನನ್ನು ಪ್ರಾರ್ಥನಾ ಸಮಯದಲ್ಲಿ ಮೇಲೆ ಕರೆದು ಎಲ್ಲರಿಗೂ ಕಾಣುವಂತೆ ಶಿಕ್ಷೆ ನೀಡಲೇ? ಹೀಗೆ ಹಲವಾರು ಯೋಚನೆಗಳು ಹೊಳೆಯುತ್ತಿದ್ದವು. ಇವರಿಗೆ ಶಿಕ್ಷೆ ನೀಡುವುದು ಸರಿಯಲ್ಲವೆಂದು ತೀರ್ಮಾನಿಸಿ ಪ್ರತಿ ದಿನ ಗೌರವ ಸೂಚಿಸಿದ ವಿದ್ಯಾರ್ಥಿಗಳಿಗೆ ತಾಳ್ಮೆಯಿಂದ ನಗುಮುಖದಿಂದ ಪ್ರತ್ಯುತ್ತರ ನೀಡಲು ಆರಂಭಿಸಿದೆ. ದಿನ ಕಳೆದಂತೆ ವಿದ್ಯಾರ್ಥಿಗಳಿಗೆ ನನ್ನ ವ್ಯಕ್ತಿತ್ವದ ಪರಿಚಯವಾಗಿ ವಿಪರೀತ ಗೌರವ ಸೀಮಿತ ಗೌರವಕ್ಕೆ ಬದಲಾಯಿತು.
- ಮಾರುತಿ ಬಸಪ್ಪನದಾಡಿ, ಬೆಳಗಾವಿ

ಬಂಧಿಸಿ ಬಡಿಸಿದ ಅಕ್ಷರ ಭಂಡಾರ
ನನ್ನ ಅಪ್ಪ ಅಮ್ಮ ಕೂಲಿಗೆ ಹೋದರೆ, ನಾನು ಶಾಲೆಗೆ ಹೋದವ. ಮಣ್ಣುಸ್ಲೇಟು, ಸೋಪು ಬಳಪ, ಹರಿದಕಾಕಿ ಬ್ಯಾಗು ನನ್ನ ಬೆಂಬಿಡದೇ ಕಾಡಿತ್ತು. ಜೊತೆಗೆ ಮೇಷ್ಟ್ರ ನೆನಪು ಕೂಡ. ಮೇಷ್ಟ್ರು ಬೋರ್ಡ್ ಮೇಲೆ ಬರೆಯುತ್ತಿರುವಾಗ ಟೇಬಲ್ ಮೇಲಿದ್ದ ಹೊಂಗೆ ಕೋಲನ್ನು ಕಿಟಕಿಯಿಂದ ಹೊರಗೆ ಎಸೆದೆ. ಮಕ್ಕಳು ‘ಕಿಸಿಕ್ ಅಂತ ತುಟಿ ಮುಚ್ಚಿ ನಕ್ಕರು. ಮೇಷ್ಟ್ರು ಹಿಂದೆ ತಿರುಗಿ ಗಮನಿಸಿ ಮೌನವಾಗಿ ಹೊರಗೆ ತೆರಳಿ ಕೋಲು ತಂದು ಟೇಬಲ್ ಮೇಲಿಟ್ಟು, ‘ಲೇ ಯಾರ್ರೋ.. ತರ್ಲೆ ಮಾಡಿದ್ದು’ ಅಂತ ಗದರಿಸಿದರು. ನಾನು ಪಕ್ಕದ ಹುಡುಗನ ಕಡೆ ಬೆರಳು ತೋರಿದೆ. ಅವನಿಗೆ ಏಟು ಬೀಳುವ ಸಮಯಕ್ಕೆ ಎಲ್ಲರೂ ‘ಅವನಲ್ಲ ಸಾರ್.. ಇವನು ಎಂದು ನನ್ನನ್ನು ತೋರಿಸಿದರು. ಮೇಷ್ಟ್ರು ಹೊಂಗೆ ಕೋಲಿನಿಂದ ಬಾರಿಸಿದರು. ‘ನಾನು ಎಲ್ಲರಂತಲ್ಲ, ಬಹಳ ಶಿಸ್ತು. ನೀವೂ ಶಿಸ್ತಾಗಿದ್ರೆ ಒಳ್ಳೆದು.

ಇಲ್ಲ ಅಂದ್ರೇ.. ಚರ್ಮ ಸುಲಿತೀನಿ ಅಂತ ಹೇಳಿ ಕುರ್ಚಿಯಲ್ಲಿ ಕುಳಿತವರು ಎರಡೇ ನಿಮಿಷಕ್ಕೆ ತೂಕಡಿಸಿ, ಹಾಗೇ ನಿದ್ದೆಗೆ ಜಾರಿ ಗೊರಕೆ ಹೊಡೆದರು. ನಾನು ಪೊರಕೆ ಕಡ್ಡಿ ಹಿಡಿದು ಟೇಬಲ್ ಕೆಳಗೆ ಕುಳಿತು ಪಂಚೆ ಪಕ್ಕಕ್ಕೆ ಸರಿದಿದ್ದ ಅವರ ಕಾಲುಗಳ ಮೇಲೆ ಇರುವೆ ಓಡಾಡಿದಂತೆ ಸವರಿದೆ. ಆಗ ‘ಫಟ್ ಅಂತ  ಹೊಡೆದು ಮತ್ತೆ ನಿದ್ದೆಗೆ ಮರಳುತ್ತಿದ್ದರು. ಹೀಗೆ ಅನೇಕ ಬಾರಿ ಮಾಡಿದ್ದನ್ನು ಕಂಡು ಮಕ್ಕಳು ಬಿದ್ದೂ ಬಿದ್ದು ನಕ್ಕರು. ಕಾಡು ಹೂಗಳ ಹಾರ ಮಾಡಿ ಕೊರಳಿಗೆ ಹಾಕಿದೆವು. ಉಳಿದ ಹೂವುಗಳನ್ನು ಕಿವಿಗಳಲ್ಲಿಟ್ಟು ಹಣೆಗೆ ಕುಂಕುಮ ನಾಮ ತೀಡಿದೆವು. ಆಗ ನಮಗೆ ಮೇಷ್ಟ್ರು ನಿದ್ರಾ ದೇವರಂತೆ ಕಾಣಿಸಿದ್ದರು. ಎಚ್ಚರವಾಗಿ ಸಿಟ್ಟಿನಿಂದ ಮನಬಂದಂತೆ ಹಿಗ್ಗಾ ಮುಗ್ಗಾ ಥಳಿಸಿ, ಅವರ ಇನ್ನೊಂದು ಅವತಾರ ತೋರಿದರು.               

ಮರುದಿನ ಕಾಗುಣಿತ ಬರೆಯಲು ಹೇಳಿ ಕುರ್ಚಿಯಲ್ಲಿ ಕುಳಿತು ಗೊರಕೆ ಹೊಡೆದರು. ಮಕ್ಕಳಲ್ಲಾ ಶಾಲೆಯಿಂದ ಹೊರ ನಡೆದರು. ನಾವೊಂದು ನಾಲ್ಕಾಳು ಕಲ್ಲು ಬಂಡೆಗಳ ಮೇಲೆ ಓತಿಕೇತಗಳ ಬೇಟೆಗೆ ಹೊರಟೆವು. ಓತಿಕೇತ ಸಾಯಿಸಿ ಮಣ್ಣಲ್ಲಿ ಹೂಳಿದರೆ ಮರು ದಿನ ಅದು ಚಿನ್ನ ಆಗುವುದೆಂಬ ನಂಬಿಕೆ ನಮ್ಮದು. ಮೇಷ್ಟ್ರೇ ಬಂದು ಬೇಟೆಯಲ್ಲಿ ತೊಡಗಿದ್ದ ತರಲೆ ತಂಡವ ಶಾಲೆಗೆ ಕರೆದೊಯ್ದು ಒಂಟಿ ಕಾಲಲ್ಲಿ ನಿಲ್ಲಿಸಿ ಶಿಕ್ಷಿಸಿದರು. ಅದೊಂದಿನ ಟಾನಿಕ್ ಬಾಟಲ್ ನನ್ನ ಕೈಯಲ್ಲಿ ಕೊಟ್ಟರು. ನನಗೆ ನೀಡಿದ್ದ ಶಿಕ್ಷೆಗಳು ನೆನಪಾಗಿ ನೆಲಕ್ಕೆ ಬೀಳಿಸಿ ಮಣ್ಣು ಪಾಲು ಮಾಡಿದೆ. ಕೇಳಿದಾಗ ‘ಕೈ ಜಾರಿ ಬಿತ್ತು ಸಾರ್ ಎಂದೆ.

ಅವರು ನಂಬಿ ಬಿಟ್ಟರು. ತುಪ್ಪ ಕೊಡಲು ಮೇಷ್ಟ್ರು ಮನೆಗೆ ಹೋದೆ. ಅವರು ಜಳಕ ಮಾಡುತ್ತಿದ್ದರು. ಸ್ಟೌವ್ ಮೇಲೆ ಕಾಯುತ್ತಿದ್ದ ಸಾಂಬಾರಿಗೆ ಒಂದು ಹಿಡಿ ಉಪ್ಪು ಹಾಕಿದೆ. ಸಾಂಬಾರಿಗೆ ಉಪ್ಪು ಹೆಚ್ಚಾಗಿ ಸಿಟ್ಟು ಬಂದು ನನ್ನನ್ನು ಪ್ರಶ್ನಿಸಿದರು. ನಾನು ಒಪ್ಪಿಕೊಳ್ಳಲಿಲ್ಲ. ನನಗೂ ಮೊದಲು ಮನೆಗೆ ಮನೆ ಮಾಲೀಕನ ಮಡದಿ ಬಂದು ಹೋಗಿದ್ದಳು. ಹಾಗಾಗಿ ಮೇಷ್ಟ್ರು ಮನೆ ಮಾಲೀಕನ ಮಡದಿಯನ್ನು ಅನುಮಾನಿಸಿ ದೂರಿದರು. ಅದು ಮಾಲೀಕನ ಕಿವಿಗೆ ಬಿದ್ದು ರಾದ್ಧಾಂತ ಆಗಿ ಮನೆ ಖಾಲಿ ಮಾಡಿಸಿದರು. ಇಷ್ಟಕ್ಕೂ ನಾನೇ ಕಾರಣ ಎಂದು ನನ್ನ ಗೆಳೆಯರಿಂದ ತಿಳಿದು, ನನ್ನ ಅಜ್ಜಿಗೆ ದೂರು ಹೇಳಿದರು. ನನ್ನಪ್ಪನಿಗೆ ತಿಳಿದು ಮನೆಯಲ್ಲಿ ಮೆಣಸಿನ ಕಾಯಿ ಹೊಗೆ ಹಾಕಿದರು. ಆ ಶಿಕ್ಷೆ ನಮ್ಮ ಶತ್ರುಗಳಿಗೂ ಬೇಡ.

ಕೊನೆಗೊಂದು ದಿನ ಮೇಷ್ಟ್ರು ಶಾಲೆಗೆ ಬರುವಾಗ ನಾಲ್ಕಾರು ನೂಲು ದಾರಗಳನ್ನೂ ತಂದರು. ನಾನು ಭಾವುಟ ಕಟ್ಟಲು ಎಂದು ನಂಬಿದ್ದೆ. ಆದರೆ ಮೇಷ್ಟ್ರು ದಾರಗಳಿಂದ ತರಲೆಗಳಾದ ನಮ್ಮ ಕೈಗಳನ್ನು ಕಟ್ಟಿದರು. ಇನ್ನೊಂದು ದಾರ ಕಾಲಿಗೆ ಬಿಗಿದು ಟೇಬಲ್ ಕಾಲಿಗೆ ಕಟ್ಟಿದರು. ಹಾಗೂ ಯಾರೂ ಬಿಡಿಸದಂತೆ ತಾಕೀತು ಹಾಕಿದರು. ಅಂದು ನನ್ನ ಬಂಧಿಸಿ ಕಲಿಸಿದ ಅಕ್ಷರಗಳೇ ಇವೆಲ್ಲಾ.. ಅವರ ಚರಣಗಳಿಗೆ ನನ್ನ ನೂರು ಶರಣು...
- ಎನ್. ವೆಂಕಟರಮಣ,ದೊಡ್ಡಿಗಾನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT