ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡಿನೊಳಗೆ ಒಂದು ಹಕ್ಕಿ ಬಿಕ್ಕಿ ಬಿಕ್ಕಿ!

ಧಾರವಾಡ ಸಾಹಿತ್ಯ ಸಂಭ್ರಮ
Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ
ADVERTISEMENT

ಧಾರವಾಡ: ಸಾಹಿತ್ಯ ಸಂಭ್ರಮದ ಎರಡನೇ ದಿನ ವೈದೇಹಿ ಅವರ ‘ಗೂಡಿನೊಳಗೆ ಒಂದು ಹಕ್ಕಿ’ ಕಥೆಯನ್ನು ವಿದ್ಯಾ ಹೆಗಡೆ ಅವರು ವಿಭಿನ್ನವಾಗಿ ವಾಚನ ಮಾಡಿದ್ದು ಸಭಿಕರನ್ನು ಆಕರ್ಷಿಸಿತು. ಇದೊಂದು ಹೊಸ ಪ್ರಯೋಗ. ಅತ್ತ ನಾಟಕವೂ ಅಲ್ಲ. ಇತ್ತ ಕಥೆಯ ಓದೂ ಅಲ್ಲ. ಹೀಗೆ ಇನ್ನೂ ಅನೇಕರ ಕಥೆಗಳು ಈ ರೀತಿ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬಂತು.

ವೈದೇಹಿ ಅವರ ಈ ಕಥೆಯನ್ನು ವಿದ್ಯಾ ಅವರು ನಾಟಕ, ಸ್ವಗತ ರೂಪದ ಹೊರತಾಗಿ ಆಧುನಿಕ ಕಾಲದ ವಾಚಕದ ಪ್ರಯೋಗವಾಗಿ ಹೇಳಿದರು. ಕಥೆ ಹೆಚ್ಚು ಪರಿಣಾಮಕಾರಿಯಾಗಿ ಸಭಿಕರನ್ನು ತಲುಪಬೇಕು ಎಂಬ ಉದ್ದೇಶದಿಂದ ಆಲಾ.ಪವನ್ನು ಬಳಸಿದ್ದರು. ಕಥೆಗೆ ಯಾವುದೇ ವ್ಯಾಖ್ಯಾನ ಇಲ್ಲದೆ ಅದು ಇರುವ ರೀತಿಯಲ್ಲಿಯೇ ಹೇಳಿದ್ದು ಆಸಕ್ತಿಕರವಾಗಿತ್ತು.

ಕಥೆಯ ಪಾತ್ರಧಾರಿ ಮಾಲತಿ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುವಂತೆ ತಿಳಿಸುವಾಗ ಇಬ್ಬರ ನಡುವೆ ಸಂಭಾಷಣೆಯಲ್ಲಿ ಪತಿ ‘ನಿನ್ನೊಡನೆ ನಾನಾದ್ದಕ್ಕೆ ಬಾಳುತ್ತಿದ್ದೇನೆ’ ಎಂದಾಗ ಪತ್ನಿ ‘ಬಾಳಿ ಎಲ್ಲಾ ಆದ ಮೇಲೆ ಚಿನ್ನದ ಪದಕ ಕೊಡುತ್ತೇನೆ’ ಎನ್ನುತ್ತಾಳೆ.

‘ಚಿನ್ನದ ಪದಕ ಕೊಡುವ ಮುಂಚೆಯೇ ನೀನು ಹೋಗಿ ಬಿಟ್ಟರೆ?’ ಎಂದು ಪ್ರಶ್ನಿಸುತ್ತಾನೆ ಪತಿ. ಆಗ ಆಕೆ ‘ಕೊಡುವ ಮುಂಚೆಯೇ ಒಂದು ವೇಳೆ ನೀವೇ ಪೆಟ್ಟಿಗೆ ಕಟ್ಟಿದರೆ’ ಎನ್ನುವ ಸನ್ನಿವೇಶವನ್ನು ವಿದ್ಯಾ ಸ್ವಾರಸ್ಯಕರವಾಗಿ ವಿವರಿಸುವಾಗ ಸಭೆಯಲ್ಲಿ ನಗೆ ಹೊಮ್ಮಿತು.
* * *
ನನ್ನ ಕಥೆಯನ್ನು ಈ ರೀತಿಯಾಗಿ ವಾಚನ ಮಾಡಿದ್ದು ತುಂಬಾ ಹೆಮ್ಮೆ ಎನ್ನಿಸಿತು.  ನಾಲ್ಕನೇ ಬಾರಿಗೆ ಕಥೆಯ ವಾಚನವನ್ನು ಆಲಿಸುತ್ತಿದ್ದೇನೆ. ಹಿಂದಿನಕ್ಕಿಂತ ಈ ಬಾರಿ ಅದ್ಭುತವಾಗಿ ಕಥೆ ಹೇಳಿದ್ದಾಳೆ. ತನ್ನೊಳಕ್ಕೆ ಪಾತ್ರಧಾರಿಯನ್ನು ಆಹ್ವಾನಿಸಿಕೊಂಡು ಕಥೆ ಹೇಳುವ ಈಕೆಯ ವಿಧಾನ ನನಗೆ ಮೆಚ್ಚುಗೆ ಆಗಿದೆ. ಜೀವನದಲ್ಲಿ ಈ ರೀತಿಯ ಅವಕಾಶ ಸಿಗುವುದು ಅಪರೂಪ. ನನಗೆ ಲಭಿಸಿರುವುದು ಅದೃಷ್ಟ.
– ವೈದೇಹಿ, ಲೇಖಕಿ
* * * 


ವೈಯುಕ್ತಿಕ ಬದುಕಿಗೆ ತೀರಾ ಹತ್ತಿರ!
ಈ ರೀತಿ ಪ್ರಯೋಗಕ್ಕೆ ಅನುವಾಗುವ ಯೋಚನೆ ಹೊಳೆದಾಗ ನನ್ನ ಪತಿ ಕೆ.ವಿ.ಅಕ್ಷರ ಅವರೇ ಈ ಕಥೆ ಆರಿಸಿಕೊಳ್ಳುವಂತೆ ಸಲಹೆ ನೀಡಿದರು. ಫೆಮಿನಿಸ್ಟ್‌ ದಿಕ್ಕಿನಲ್ಲಿ ನೋಡುವವರಿಗೆ ಈ ಕಥೆ ವ್ಯಂಗ್ಯ ಮಾಡುವ ತರಹ ಇದೆ. ಹೆಣ್ಣಿಗೆ ಸ್ವಾತಂತ್ರ್ಯ ಬೇಕು ಎನ್ನುತ್ತಾರೆ. ಅದರ ವಿರುದ್ಧವಾಗಿ ಇನ್ನೊಂದು ಬಗೆಯ ಸ್ವಾತಂತ್ರ್ಯವನ್ನು ಇದು ತಿಳಿಸುತ್ತದೆ. ಈ ಕಾರಣಕ್ಕೆ ಈ ಕಥೆ ಇಷ್ಟವಾಗಿ ಆರಿಸಿಕೊಂಡೆ. ಕಥೆಯನ್ನು ಓದುತ್ತಾ ಹೋದಂತೆ ನನ್ನ ವೈಯು­­ಕ್ತಿಕ ಬದುಕಿಗೆ ತೀರಾ ಹತ್ತಿರವಿದೆ ಎನ್ನಿಸತೊಡಗಿತು. ನಾನು ಫೆಮಿ­ನಿಸಂ ಅರ್ಥಮಾಡಿಕೊಂಡಿರುವ ರೀತಿಗೂ ವಿಭಿನ್ನವಾದ­ದ್ದೇನೊ ಇದು ತಿಳಿ­ಸುತ್ತದೆ ಅನಿಸಲು ಪ್ರಾರಂಭವಾಯಿತು. ನಾನು ಚಿಕ್ಕ­ವ­­ಳಿ­­ದ್ದಾಗ ಮನೆ­ಯಲ್ಲಿ ಜೀನ್ಸ್‌ ತೊಡಲು ಬಿಡುತ್ತಿರಲಿಲ್ಲ. ಆ ಸಮಯಕ್ಕೆ ಜೀನ್ಸ್‌ ತೋಡು­ವುದೇ ಮಹಿಳಾ ಸ್ವಾತಂತ್ರ್ಯ ಎಂಬ ಪರಿಕಲ್ಪನೆ ನನ್ನ­ಲ್ಲಿತ್ತು. ಆದರೆ ಮಹಿಳಾ ಸ್ವಾತಂತ್ರ್ಯ ಎನ್ನುವುದು ಬಟ್ಟೆ ತೊಡುವುದರಲ್ಲಿ ಇಲ್ಲ. ಮಹಿಳೆ ತನ್ನ ಸ್ವಂತಿಕೆ ಕಂಡು­ಕೊಳ್ಳುವುದು ಸಾಧ್ಯವಾದರೆ ಆಕೆಗೆ ಸ್ವಾತಂತ್ರ್ಯ ಲಭಿಸಿದಂತೆ.
–ವಿದ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT