ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಾಲ ಪಡೆಯುವುದು ಹೇಗೆ?

ಅಕ್ಷರ ಗಾತ್ರ

ನಿವೇಶನ ಖರೀದಿ, ಮನೆ ನಿರ್ಮಾಣ, ಕಟ್ಟಿಸಿದ ಮನೆ ಅಥವಾ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್‌ ಖರೀದಿಗೆ ಬ್ಯಾಂಕ್‌ನಲ್ಲಿ ಗೃಹಸಾಲ ಪಡೆಯಬೇಕೆ? ಹಾಗಿದ್ದರೆ, ನೀವು  ಕೆಲವು ನಿಯಮ, ಷರತ್ತು ಪಾಲಿಸಬೇಕಿದೆ.

ತಿಂಗಳ ದುಡಿಮೆಯಲ್ಲಿ ಆದಷ್ಟೂ ಹಣವನ್ನು ಉಳಿಸುತ್ತಾ ಹೋಗಿ ಸಾಕಷ್ಟು ದೊಡ್ಡ ಮೊತ್ತವನ್ನೇ ಸಂಗ್ರಹಿಸಿಟ್ಟುಕೊಂಡಿದ್ದೀರಿ. ‘ಸ್ವಂತ ಮನೆ’ ಮಾಡಿಕೊಳ್ಳ ಬೇಕು ಎಂಬ ಅದೆಷ್ಟೋ ವರ್ಷಗಳ ಕನಸು ನನಸಾಗುವ ಸಂದರ್ಭವೂ ಹತ್ತಿರ ಬಂದಿದೆ. ಆದರೆ, ಈಗಿನ ತುಟ್ಟಿ ಕಾಲದಲ್ಲಿ ಉಳಿತಾಯದ ಹಣದಿಂದಲೇ ಮನೆ ನಿರ್ಮಾಣ ಸಾಧ್ಯ ವಾಗುತ್ತದೆಯೇ?

ಮರ, ಮರಳಿನ ಬೆಲೆ, ಉಕ್ಕು ತುಟ್ಟಿಯಾಗಿರುವುದು, ಸಿಮೆಂಟ್‌, ಜಲ್ಲಿ, ಸೈಜುಗಲ್ಲು ಎಲ್ಲವೂ ಸುಲಭಕ್ಕೆ ಕೈಗೆಟುಕದಷ್ಟು ಮೇಲೇರಿರುವುದರಿಂದ ವರ್ಷಗಳ ಉಳಿತಾಯದ ಹಣದಿಂದಲೇ ಕನಸಿನ ಮನೆಯನ್ನು ನನಸು ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಹಾಗಾದರೆ ಬೇರೆ ದಾರಿ ಏನಿದೆ?
ಅರೆ, ಇದೆಯಲ್ಲ ಗೃಹಸಾಲ ಎಂಬ ಬ್ಯಾಂಕ್‌ಗಳ ಸಹಕಾರದ ಹಸ್ತ. ಸರಿ ಇನ್ನೇಕೆ ತಡ, ಸಮೀಪದ ಬ್ಯಾಂಕ್‌ನಿಂದ ಗೃಹಸಾಲ ಪಡೆದು ಮನೆ ನಿರ್ಮಾಣ ಕಾಮಗಾರಿ ಆರಂಭಿಸಬಹುದಲ್ಲಾ? ಅದೆಲ್ಲಾ ಅಂದುಕೊಂಡಷ್ಟು ಬೇಗ ಆಗುವ ಕೆಲಸವೆ? ಅದಕ್ಕೂ ಸಾಕಷ್ಟು ಸಿದ್ಧತೆ ಮಾಡಿ ಕೊಳ್ಳಬೇಕಲ್ಲವೆ? ಅಗತ್ಯವಾದ ದಾಖಲೆ ಪತ್ರಗಳನ್ನು ಹೊಂದಿಸಿ ಕೊಳ್ಳಬೇಕಲ್ಲವೇ? ಮೊದಲಿಗೆ ನೀವು ಏನು ಮಾಡಲಿದ್ದೀರಿ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಂದರೆ, ಸಿದ್ಧವಾಗಿರುವ ಮನೆ ಅಥವಾ ಫ್ಲ್ಯಾಟ್‌ ಖರೀದಿಸುತ್ತೀರಾ? ಇಲ್ಲವೇ ನಿವೇಶನ ಖರೀದಿಸಿ ಮನೆಯನ್ನು ನೀವೇ ಮುಂದೆ ನಿಂತು ನಿರ್ಮಿಸಿ ಕೊಳ್ಳುತ್ತೀರಾ ನಿರ್ಧರಿಸಿರಿ.

ಈಗಾಗಲೇ ಮನೆ ಇರುವವರಾದರೆ ಆ ಮನೆಯನ್ನು ನವೀಕರಿಸಬೇಕಿ ದೆಯೇ? ಅಥವಾ ಮೇಲೊಂದು ಮಹಡಿ ನಿರ್ಮಿಸಬೇಕಿದೆಯೇ?
ಈ ವಿಚಾರ ನಿರ್ಧರಿಸಿಯಾಯಿತು. ಇನ್ನೇನಿದ್ದರೂ ಗೃಹಸಾಲ ಪಡೆಯಬೇಕು ಅಷ್ಟೆ. ಹಾಗಿದ್ದರೆ, ನೀವು  ಕೆಲವು ನಿಯಮ, ಷರತ್ತುಗಳನ್ನು ಪಾಲಿಸಬೇಕಿರುತ್ತದೆ. ನಿಮ್ಮಲ್ಲಿ ಕೆಲವು ಅರ್ಹತೆಗಳೂ ಇರಬೇಕಾಗಿರುತ್ತದೆ. ಗೃಹ ಸಾಲ ಪಡೆಯಲು ಬಯಸುವವರ 21 ವರ್ಷದಿಂದ 65 ವರ್ಷದೊಳಗಿನ ವಯೋಮಿತಿಯವರಾಗಿರಬೇಕು.  ಅವರಿಗೆ ಗರಿಷ್ಠ 75 ವರ್ಷ ತುಂಬುವ ವೇಳೆಗೆ ಗೃಹಸಾಲದ ಮರುಪಾವತಿ ಪೂರ್ಣಗೊಳ್ಳುವಂತಿರಬೇಕು.

ಗೃಹಸಾಲ ಮರುಪಾವತಿ
ಬ್ಯಾಂಕ್‌ಗಳಿಂದ ಗರಿಷ್ಠ 30 ವರ್ಷಗಳ ಅವಧಿಯವರೆಗೂ ಗೃಹಸಾಲ ಪಡೆಯ ಬಹುದು. ಆದರೆ, ಅರ್ಜಿದಾರರಿಗೆ 75 ವರ್ಷದೊಳಗೆ ಸಾಲದ ಕೊನೆಯ ಕಂತು ಪಾವತಿಯಾಗುವಂತೆ ಸಾಲದ ಅವಧಿಯನ್ನು ಮಿತಿಗೊಳಿಸಲಾಗುತ್ತದೆ.

ಮನೆ ಕಟ್ಟಲು ಗೃಹಸಾಲ ಪಡೆದಾಗ ಮುಂದಿನ ತಿಂಗಳಿನಿಂದಲೇ ಸಾಲದ ಕಂತನ್ನು ಬ್ಯಾಂಕ್‌ಗೆ ಪಾವತಿಸಲು ಆರಂಭಿಸಬೇಕಿಲ್ಲ. ಗೃಹಸಾಲ ಕಂತು ಪಾವತಿಗೆ ಗರಿಷ್ಠ 18 ತಿಂಗಳುಗಳವರೆಗೂ ರಜೆಯ ಅವಧಿಯ ಪ್ರಯೋಜನೆ ಪಡೆಯಬಹುದು. ಗೃಹಸಾಲ ಮಂಜೂರಾದ 19 ತಿಂಗಳಿನಿಂದ ಮೊದಲ ಇಎಂಐ ಕಂತು ಪಾವತಿ ಆರಂಭಿಸ ಬಹುದಾಗಿದೆ. ನಿಗದಿತ ಅವಧಿಗೂ ಮುನ್ನವೇ ಸಾಲ ತೀರಿಸಲು ಅವಕಾಶವಿದ್ದು, ಅದಕ್ಕಾಗಿ ಯಾವುದೇ ದಂಡ ವಿಧಿಸಲಾಗುವುದಿಲ್ಲ.
ಸಾಲದ ಅರ್ಜಿ ಪರಿಶೀಲನೆ ಮತ್ತು ಸಾಲ ಮಂಜೂರು ಪ್ರಕ್ರಿಯೆಗೆ ಸಾಲದ ಮೊತ್ತದ ಶೇ 0.25ರಷ್ಟು ಶುಲ್ಕವನ್ನು (ಗರಿಷ್ಠ ₨10 ಸಾವಿರ) ಬ್ಯಾಂಕ್‌ ಅರ್ಜಿದಾರರಿಂದ ಕಟ್ಟಿಸಿಕೊಳ್ಳುತ್ತದೆ. 

ಸಾಲಕ್ಕೆ ಭದ್ರತೆ: ಯಾವುದಕ್ಕಾಗಿ ಸಾಲ ಪಡೆಯಲಾಗಿದೆಯೋ ಆ ಮನೆ/ನಿವೇಶನ/ ಫ್ಲ್ಯಾಟನ್ನು ಬ್ಯಾಂಕ್‌ಗೆ ಅಡಮಾನ ಮಾಡಬೇಕಿದೆ.

ಎಷ್ಟು ಗೃಹಸಾಲ ಸಿಗಬಹುದು?
ಗೃಹಸಾಲ ಬಯಸುವವರು ವೇತನದಾರರಾಗಿದ್ದರೆ ಅವರು ಒಟ್ಟು ಕನಿಷ್ಠ 48 ತಿಂಗಳಿಂದ ಗರಿಷ್ಠ 75 ತಿಂಗಳವರೆಗೆ ಪಡೆಯುವ ಒಟ್ಟು ವೇತನದಷ್ಟನ್ನು ಗೃಹಸಾಲವಾಗಿ ಪಡೆಯಲು ಅರ್ಹರಿರುತ್ತಾರೆ. ಇನ್ನೂ ಹೆಚ್ಚಿನ ಮೊತ್ತದ ಗೃಹಸಾಲ ಬೇಕಿದ್ದರೆ ಅದಕ್ಕೂ ದಾರಿ ಇದೆ. ಅರ್ಜಿದಾರರು ತಮ್ಮ ಪತ್ನಿ/ಪತಿ, ಮಕ್ಕಳು ಗಳಿಸುವ  ಆದಾಯವನ್ನು ಆಧರಿಸಿಯೂ ಹೆಚ್ಚಿನ ಗೃಹಸಾಲ ಪಡೆಯಬಹುದು. ಸದ್ಯ ಇರುವ ಮನೆಯ ಬಾಡಿಗೆ ಮೊತ್ತ ಅಥವಾ ನಿರ್ಮಿಸಲಿರುವ ಮನೆಯನ್ನು ಬಾಡಿಗೆ ನೀಡಿದರೆ ಅದರಿಂದ ಬರುವ ಆದಾಯವನ್ನೂ ಉಲ್ಲೇಖಿಸಿ ಗೃಹಸಾಲದ ಪ್ರಮಾಣವನ್ನು ಹೆಚ್ಚಿಸುವಂತೆ ಬ್ಯಾಂಕ್‌ಗೆ ಮನವಿ ಮಾಡಬಹುದು.

ನಿವೇಶನ/ಮನೆಯನ್ನು ಖರೀದಿಸುವುದಾದರೆ ನೋಂದಣಿ ಶುಲ್ಕ, ಛಾಪಾಕಾಗದ ಶುಲ್ಕ, ತೆರಿಗೆ ಮೊದಲಾದ ಆಡಳಿತಾತ್ಮಕ ವೆಚ್ಚಗಳನ್ನು ಅರ್ಜಿದಾರರೇ ಭರಿಸಬೇಕು. ಅಲ್ಲದೇ, ಖರೀದಿಸಲಿರುವ ಸ್ಥಿರಾಸ್ತಿಯ ಒಟ್ಟು ಮೌಲ್ಯದ ಅಥವಾ ನಿರ್ಮಿಸಲಿರುವ ಮನೆಯ ಅಂದಾಜು ವೆಚ್ಚದ ಶೇ 20ರಷ್ಟು ಮೊತ್ತವನ್ನು ಅರ್ಜಿದಾರರು ಹೊಂದಿಸಬೇಕು.

ಸಲ್ಲಿಸಬೇಕಾದ ದಾಖಲೆ ಪತ್ರಗಳು
ಅರ್ಜಿದಾರರ ಪಾಸ್‌ಪೋರ್ಟ್‌ ಅಳತೆಯ ಎರಡು ಭಾವಚಿತ್ರ, ವ್ಯಕ್ತಿಯ ಗುರುತು ದೃಢೀಕರಣ ದಾಖಲೆ (ಸರ್ಕಾರಿ ಸಂಸ್ಥೆಗಳಿಂದ ಪಡೆದ ಗುರುತಿನ ಚೀಟಿ/ಪಾಸ್‌ಪೋರ್ಟ್‌/ಮತದಾರರ ಗುರುತಿನ ಚೀಟಿ/ವಾಹನ ಚಾಲನಾ ಪರವಾನಗಿ ಪತ್ರ/ಆಧಾರ್‌), ನಿವಾಸ ದೃಢೀಕರಣ ಪತ್ರ (ಕಂದಾಯದ ರಶೀತಿ/ದೂರವಾಣಿ ಅಥವಾ ವಿದ್ಯುತ್‌ ಬಿಲ್‌), ಅರ್ಜಿದಾರರು ಮತ್ತು ಜಾಮೀನುದಾರರು ಬ್ಯಾಂಕ್‌ನಲ್ಲಿ ಖಾತೆ ಹೊಂದಿ ಸೂಕ್ತ ರೀತಿಯಲ್ಲಿ ವಹಿವಾಟು ನಡೆಸುತ್ತಿರುವುದಕ್ಕೆ ದಾಖಲೆಯಾಗಿ ಕಳೆದ ಒಂದು ವರ್ಷ ಅವಧಿಯ ಬ್ಯಾಂಕ್‌ ವಹಿವಾಟು ದಾಖಲೆಯ ಪ್ರತಿ, ಅರ್ಜಿದಾರ ಮತ್ತು ಜಾಮೀನುದಾರರು ಇತ್ತೀಚಿನ ಎರಡು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಐ.ಟಿ ರಿಟರ್ನ್‌ (ವಾರ್ಷಿಕ ಲೆಕ್ಕಪತ್ರ) ಪ್ರತಿ ಹಾಗೂ ಇತ್ತೀಚಿನ ಮೂರು ತಿಂಗಳ ವೇತನದ ಚೀಟಿ (ವೇತನದಾರರಾಗಿದ್ದರೆ), ವೃತ್ತಿನಿರತರು, ಸ್ವಉದ್ಯೋಗಿಗಳು ಅಥವಾ ವಾಣಿಜ್ಯ ಚಟುವಟಿಕೆಯಲ್ಲಿರುವವ ರಾದರೆ ಕಳೆದ ಎರಡು ವರ್ಷಗಳ ಆದಾಯವನ್ನು ದೃಢೀಕರಿಸುವ ಲಾಭ, ನಷ್ಟದ ವಿವರ ವರದಿ ಅಥವಾ ಬ್ಯಾಲೆನ್ಸ್‌ ಷೀಟ್‌ (ಚಾರ್ಟರ್ಡ್‌ ಅಕೌಂಟೆಂಟ್‌ ಅವರಿಂದ  ದೃಢೀಕೃತವಾಗಿರಬೇಕು).

ವಾರ್ಷಿಕ ಆದಾಯ ಲೆಕ್ಕಹಾಕಿ ತೆರಿಗೆ ಸಲ್ಲಿಸಿದ ವಿವರ/ ಆದಾಯ ತೆರಿಗೆ ಲೆಕ್ಕಪತ್ರ ವಾದರೆ ಕಳೆದ ಮೂರು ವರ್ಷಗಳದ್ದು ಸಲ್ಲಿಸಬೇಕು. ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವವರು ಕೃಷಿಕರಾಗಿದ್ದರೆ ಕಂದಾಯ ಇಲಾಖೆ ಯಿಂದ ಆದಾಯ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು.

ಉಳಿದಂತೆ ಸ್ಥಿರಾಸ್ಥಿಗೆ ಸಂಬಂಧಿಸಿದಂತೆ ಕೆಲವು ದಾಖಲೆ ಪತ್ರಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕು. ನಿವೇಶನ/ಮನೆ ಖರೀದಿಗೆ ಸಂಬಂಧಿಸಿದಂತೆ ಖರೀದಿಯ ಮೂಲ ದಾಖಲೆಪತ್ರ. ಪಿತ್ರಾರ್ಜಿತ ವಾಗಿ ಬಂದ ನಿವೇಶನ/ಮನೆ ಆಗಿದ್ದರೆ ಆಸ್ತಿ ವಿಭಜನೆ ದಾಖಲೆ, ಗಿಫ್ಟ್‌ ಡೀಡ್‌ ಮೊದಲಾದ ದಾಖಲೆ ಪತ್ರಗಳ ಮೂಲ ಹಾಗೂ ನಕಲು ಪತ್ರಿಗಳನ್ನು ಸಲ್ಲಿಸಬೇಕು.

ಭೂಪರಿವರ್ತನೆ ಪ್ರದೇಶದಲ್ಲಿನ ನಿವೇಶನವಾಗಿದ್ದರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲು ಪಡೆದಿರುವ ಅನುಮತಿ ಪತ್ರ ಆಸ್ತಿಯ ಮೇಲಿನ ಋಣಭಾರ ಪತ್ರವನ್ನು ಕಳೆದ 13 ವರ್ಷಗಳ ಅವಧಿಗೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಪಡೆದು ಸಲ್ಲಿಸಬೇಕು.

ನಿವೇಶನ/ಮನೆ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿ ಮಾರಾಟ ಒಪ್ಪಂದ ಕರಾರು ಪತ್ರದ ನಕಲು ಪ್ರತಿ ಇತ್ತೀಚೆಗೆ ಕಂದಾಯ ಪಾವತಿಸಿದ ರಶೀದಿಯ ನಕಲು ಪ್ರತಿ (ಮುಂಗಡ ತೆರಿಗೆ, ಸ್ಥಿರಾಸ್ತಿ ತೆರಿಗೆ, ಮುನ್ಸಿಪಲ್‌ ಟ್ಯಾಕ್ಸ್‌ ಇತ್ಯಾದಿ) ಖಾಸಗಿ ಬಡಾವಣೆ/ ವಸತಿ ಸಂಕೀರ್ಣವಾಗಿದ್ದರೆ ನಿರ್ಮಾಣ ಸಂಸ್ಥೆ ಅಥವಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಡೆದ ನಿರಕ್ಷೇಪಣಾ ಪತ್ರ ಅಥವಾ ಷೇರುಪತ್ರದ ನಕಲು ಪ್ರತಿ ಮನೆ ನಿರ್ಮಾಣ ಮಾಡುವುದಿದ್ದರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯಿಂದ ಪಡೆದಿರುವ ಅನುಮತಿ ಪತ್ರ ಕಟ್ಟಡದ ನೀಲನಕ್ಷೆ/ ಅನುಮೋದನೆಗೊಂಡಿರುವ ಕಟ್ಟಡದ ಯೋಜನೆ/ವಸತಿ ಸಂಕೀರ್ಣವಾಗಿದ್ದರೆ ಅದರ ಕಟ್ಟಡದ ನೀಲನಕ್ಷೆಯ ನಕಲು ಪ್ರತಿ. ಕಟ್ಟಡ ನಿರ್ಮಾಣದ ಅಂದಾಜು ವೆಚ್ಚದ ವಿವರ ವರದಿಯ ನಕಲು ಪ್ರತಿ.

ಕನಸು ನನಸಾಗಿಸಲು ಹಲವು ದಾರಿ
ಸ್ವಂತ ಮನೆಯನ್ನು ಹೊಂದಬೇಕೆಂದು ಆಲೋಚಿಸುತ್ತಿರುವ ನೀವು ನಿಮ್ಮ ಕನಸನ್ನು ಎರಡು ಮೂರು ರೀತಿಯಲ್ಲಿ ನನಸು ಮಾಡಿಕೊಳ್ಳಬಹುದು. ನಿಮ್ಮಲ್ಲಿ ನಿವೇಶನ ಇದ್ದರೆ, ನೇರವಾಗಿ ಮನೆ ನಿರ್ಮಾಣ ಆರಂಭಿಸಬಹುದು.

ನಿವೇಶನ ಇಲ್ಲದೇ ಇದ್ದರೆ ಏನು ಮಾಡುವುದು? ನಿವೇಶನವನ್ನೂ ಖರೀದಿಸಿ ಮನೆ ಕಟ್ಟಿಕೊಳ್ಳಬಹುದು. ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳುವುದಕ್ಕೂ ಸೇರಿದಂತೆ ಎರಡಕ್ಕೂ ಒಂದೇ ಗೃಹಸಾಲ ಸಿಗುತ್ತದೆ.

ನಿವೇಶನ ಖರೀದಿಸುವುದು, ಮೇಸ್ತ್ರಿಗಳ ಜತೆ ಹೋರಾಡುತ್ತಾ ಮನೆ ನಿರ್ಮಿಸಿ ಕೊಳ್ಳುವುದು ಮೊದಲಾದ ಶ್ರಮವೇ ಬೇಡ ಎನ್ನುವುದಾದರೆ ಈಗಾಗಲೇ ಕಟ್ಟಿ ಪೂರ್ಣಗೊಂಡಿರುವ ಮನೆಯನ್ನೇ ಖರೀದಿಸಬಹುದು. ನಗರಗಳಲ್ಲಿ ನಿರ್ಮಾಣ ಗೊಂಡಿರುವ ಅಥವಾ ನಿರ್ಮಾಣಗೊಳ್ಳುತ್ತಿರುವ ವಸತಿ ಸಂಕೀರ್ಣಗಳಲ್ಲಿ (ಅಪಾರ್ಟ್‌ ಮೆಂಟ್‌ನಲ್ಲಿ) ನಿಮಗೆ ಅಗತ್ಯವಾದ ರೀತಿಯ ಫ್ಲ್ಯಾಟ್‌ (ಮನೆ) ಖರೀದಿಸಬಹುದು.

ಅಗತ್ಯವಾದ ರೀತಿಯ ಮನೆ ಎಂದರೆ, 1 ಕೊಠಡಿ, ಹಜಾರ, ಅಡುಗೆ ಕೋಣೆ (1ಬಿಎಚ್‌ಕೆ), 2 ಬಿಎಚ್‌ಕೆ ಅಥವಾ 3 ಬಿಎಚ್‌ಕೆ ಫ್ಲ್ಯಾಟ್‌ ಖರೀದಿಸಬಹುದು. ಬೆಂಗಳೂರಿನ ಹೊರವಲಯಗಳಲ್ಲಿ ₨17 ಲಕ್ಷದಿಂದ ಕೋಟಿ ಬೆಲೆಯವರೆಗೂ ಫ್ಲ್ಯಾಟ್‌ಗಳು ದೊರೆಯುತ್ತವೆ. ಕೊಡುವ ಹಣಕ್ಕೆ ತಕ್ಕಂತಹ ಮನೆ ನಿಮ್ಮದಾಗುತ್ತದೆ. ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ ಬೇಡ. ಗುಂಪು ಮನೆಗಳಲ್ಲಿ ಖಾಸಗಿತನಕ್ಕೆ ಅವಕಾಶವಿರುವುದಿಲ್ಲ. ಪ್ರತ್ಯೇಕ ಮನೆಯೇ ಬೇಕು ಎನ್ನುವವರಿಗಾಗಿ ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ ವಿಲ್ಲಾಗಳೂ ಲಭ್ಯವಿರುತ್ತವೆ. ಮೈಸೂರಿ ನಲ್ಲಿಯಂತೂ 20/30 ಅಳತೆ ನಿವೇಶನದಲ್ಲಿ ಪ್ರತ್ಯೇಕವಾಗಿ ನಿರ್ಮಿಸಿದ ನಾಲ್ಕು ಅಥವಾ ನಾಲ್ಕೂವರೆ ಚದರ ಅಡಿ ವಿಸ್ತಾರದ ಮನೆ ₨23 ಲಕ್ಷದಿಂದ ₨30 ಲಕ್ಷದವರೆಗೂ ಲಭ್ಯವಿದೆ.

ಬ್ಯಾಂಕ್‌ನಿಂದ ಗೃಹಸಾಲ ಪಡೆದು ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳಿ, ಇಲ್ಲವೇ ಕಟ್ಟಿದ ಮನೆಯನ್ನೋ, ಫ್ಲ್ಯಾಟನ್ನೋ ಖರೀದಿಸಿ. ಸ್ವಂತಕ್ಕೊಂದು ಮನೆ ಮಾಡಿಕೊಳ್ಳಿ. ಜತೆಗೆ, ಆದಾಯ ತೆರಿಗೆ ಹೊರೆಯಿಂದಲೂ ವಿನಾಯ್ತಿ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT