ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದರಾಯರಿಗೆ ‘ಕಲಾ ತಪಸ್ವಿ’ ಪ್ರಶಸ್ತಿ

ಯಕ್ಷಗಾನ ಜ್ಞಾನ ಯಜ್ಞ ತಾಳಮದ್ದಲೆ ಸಪ್ತಾಹ ಸಮಾರೋಪ
Last Updated 1 ಡಿಸೆಂಬರ್ 2015, 6:08 IST
ಅಕ್ಷರ ಗಾತ್ರ

ಕುಂದಾಪುರ (ಬೈಂದೂರು): ಆಧುನಿಕತೆಯ ಪರ್ವದಲ್ಲಿ ಉಂಟಾಗಿರುವ ಪ್ರವಾಹದ ನಡುವೆ ಪಾರಂಪರಿಕ ಕಲಾ ಸಾಹಿತ್ಯ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಜ್ಞಾನಕ್ಕೆ ಮೂಲವಾದ ಯಕ್ಷಗಾನ ತಾಳಮದ್ದಲೆ ಆಯೋಜಿಸುವ ಮೂಲಕ ಕಲಾ ವ್ಯವಸಾಯ ಮಾಡುತ್ತಿರುವ ಜ್ಞಾನ ಯಜ್ಞದ ಸಪ್ತಾಹ ಸ್ಮರಣೀಯವಾದುದು ಎಂದು ಆನಗಳ್ಳಿ ಚನ್ನಕೇಶವ ಭಟ್ ಹೇಳಿದರು.

ಬೈಂದೂರು ಸಮೀಪದ ನಾಗೂರು ಒಡೆಯರ ಮಠ ಶ್ರೀಗೋಪಾಲಕೃಷ್ಣ ಕಲಾ ಮಂದಿರದ ಮದ್ದಲೆಗಾರ ದಿ.ದುಗ್ಗಪ್ಪ ಗುಡಿಗಾರ ಸ್ಮರಣಾ ವೇದಿಕೆಯಲ್ಲಿ ಭಾನುವಾರ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಕಿರಿಮಂಜೇಶ್ವರ ಇವರು ಪ್ರಸ್ತುತ ಪಡಿಸಿದ ಯಕ್ಷಗಾನ ಜ್ಞಾನ ಯಜ್ಞ ತಾಳ ಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅರ್ಥಧಾರಿ ಡಾ. ಎಂ ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನದ ತಾಳಮದ್ದಲೆಗೆ ಮೊದಲಿನಿಂದಲೂ ಅದರದ್ದೇ ಆದ ಪ್ರೇಕ್ಷಕರ ಸಮುದಾಯ ವಿದೆ. ಇತ್ತೀಚಿನ ತಂತ್ರಜ್ಞಾನ ಯುಗದ ಬದಲಾವಣೆಗಳು ಕೆಲವು ರಂಗ ಕಲೆಯ ಮೇಲೆ ವ್ಯತಿರಿಕ್ತ ಪ್ರಭಾವನ್ನು ಬೀರಿದ್ದರೂ, ಇದರ ಬಾಧೆ ಈ ಕಲೆಯ ಮೇಲೆ ಬಿದ್ದಿಲ್ಲ ಎನ್ನುವುದು ಸಂತಸದ ವಿಚಾರ. ಯುವಜನರು ಕೂಡಾ ತಾಳಮದ್ದಲೆ ರಸದೌತಣವನ್ನು ಸವಿಯಲು ಆಸಕ್ತಿಯನ್ನು ತೋರುತ್ತಿರುವ ಬೆಳೆವಣಿಗೆಗಳು ಇರುವುದು ಕಲೆ ಹಾಗೂ ಕಲಾವಿದರು ಜನಮನ್ನಣೆಗಳಿಸಲು ಸಹಕಾರಿಯಾಗುತ್ತದೆ ಎಂದರು.

ಅರ್ಥಧಾರಿ ಉಜಿರೆ ಅಶೋಕ ಭಟ್ ಮಾತನಾಡಿ, ತಮ್ಮ ಜೀವಿತದ ಬಹುಪಾಲನ್ನು ಯಕ್ಷ ಕಲಾ ಸೇವೆಗೆ ಮುಡಿಪಾಗಿಟ್ಟ ಯಕ್ಷರಂಗದ ಯುಗ ಪುರುಷ ತೆಕ್ಕೆಟ್ಟೆ ಆನಂದ ಮಾಸ್ತರ್ ಅವರ ವ್ಯಕ್ತಿತ್ವವನ್ನು ಸ್ಮರಣೀಯವಾಗಿ ಡಲು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡು ತ್ತಿರುವುದು ಅರ್ಥಪೂರ್ಣ ಎಂದರು.

ದಿ. ಆರ್ಗೋಡು ಗೋವಿಂದರಾಯ ಶೆಣೈ ಅವರಿಗೆ ಮರಣೋತ್ತರವಾಗಿ ನೀಡಿದ ತೆಕ್ಕೆಟ್ಟೆ ಆನಂದ ಮಾಸ್ತರ್ ಸ್ಮರಣೆಯ ‘ಕಲಾ ತಪಸ್ವಿ–2015’ ಪ್ರಶಸ್ತಿಯನ್ನು ಪುತ್ರ ಆರ್ಗೋಡು ಮೋಹನದಾಸ್ ಶೆಣೈ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮದ್ದಲೆಗಾರ ದಿ. ದುಗ್ಗಪ್ಪ ಗುಡಿಗಾರ ಅವರ ಪತ್ನಿ ಶಾರದಾ ಗುಡಿಗಾರ್ ಹಾಗೂ ಪುತ್ರಿ ಉಮಾ ಚಂದ್ರಕಾಂತ್ ಕಿಣಿ ಅವರನ್ನು ಗೌರವಿಸಲಾಯಿತು.

ಖಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ಸಂಸ್ಥಾಪಕ ಕೆ. ಎಸ್. ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ ಪ್ರಭಾಕರ ಜೋಶಿ, ಭಾಗವತ ಶಂಕರ್ ಪೈ ನೇರಳಕಟ್ಟೆ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ, ಸುನಂದಾ ಆನಂದ ಮಾಸ್ತರ್‌ ಇದ್ದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ್ ಸ್ವಾಗತಿಸಿದರು. ಗೋವಿಂದ ಎಂ. ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸುಮೋ, ಆರ್ಗೋಡು ಮೋಹನದಾಸ್ ಶೆಣೈ ಇವರ ಅರ್ಥ ಗಾರಿಕೆಯಲ್ಲಿ ‘ಅತಿಕಾಯ’ ತಾಳಮದ್ದಲೆ ಪ್ರದರ್ಶನಗೊಂಡಿತು. ರಾಘವೇಂದ್ರ ಮಯ್ಯ, ಗಜಾನನ ಭಂಡಾರಿ, ಕಾರ್ತಿಕೇಯ ಧಾರೇಶ್ವರ್ ಹಿಮ್ಮೇಳದಲ್ಲಿ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT