ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿನ ಸಾಂಕೇತಿಕತೆ ಮತ್ತು ದನದ ವಾಸ್ತವ

‘ಶ್ರಮದ ಸಂಗಾತಿ’ಯ ಆರ್ಥಿಕತೆಯ ರಕ್ಷಣೆಗೆ ನಿಜಕ್ಕೂ ನಾವು ಸಿದ್ಧರಿದ್ದೇವೆಯೇ?
Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಎರಡು ಭಾಷೆಗಳಲ್ಲಿ ಬಳಕೆಯಲ್ಲಿರುವ ಒಂದೇ ಪ್ರಾಣಿಯ ಹೆಸರು, ಗೋವು ಮತ್ತು ದನ. ಕನ್ನಡ ಭಾಷೆಯಲ್ಲಿ ಇವೆರಡೂ ಹೆಸರುಗಳು ಚಾಲ್ತಿಯಲ್ಲಿವೆ. ಮಾತ್ರವಲ್ಲ, ಒಂದೇ ಅರ್ಥ ಬರುವ ಎರಡು ಪದಗಳು ಒಂದು ಭಾಷೆಯೊಳಗೆ ನುಸುಳಿದಾಗ ಸಾಮಾನ್ಯವಾಗಿ ಆಗುವಂತೆ, ಭಿನ್ನ ರೀತಿಯಲ್ಲಿ ಚಾಲ್ತಿಯಲ್ಲಿವೆ. ಸಂಸ್ಕೃತ ಮೂಲದ ಗೋವು ಸಾಂಕೇತಿಕ ಅರ್ಥ ಪಡೆದುಕೊಂಡಿದ್ದರೆ, ಕನ್ನಡ ಮೂಲದ ದನವು ವಾಸ್ತವಿಕ ಅರ್ಥದಲ್ಲಿ ಬಳಕೆಯಾಗುತ್ತಿದೆ.

ಗೋವಿನ ಸಾಂಕೇತಿಕತೆ ಶ್ರೀಮಂತವಾದದ್ದು, ದನದ ವಾಸ್ತವತೆ ಶೋಚನೀಯವಾದದ್ದು. ಉದಾಹರಣೆಗೆ ಗೋಪಾಲ ಹಾಗೂ ದನ ಕಾಯುವವ ಎಂಬ ಸಂಯುಕ್ತ ಪದಗಳನ್ನು ಗಮನಿಸಿ. ಎರಡೂ ಒಂದೇ ಅರ್ಥದ ಪದಗಳು. ಆದರೂ ಸಂಪೂರ್ಣವಾಗಿ ಭಿನ್ನ ಅರ್ಥಗಳನ್ನು ಹೊರಡಿಸುತ್ತವೆ. ಸಂಸ್ಕೃತ ಮೂಲದ ಗೋಪಾಲನು ಪರಮ ಪೂಜ್ಯ ದೇವರಾದರೆ, ಕನ್ನಡ ಮೂಲದ ದನ ಕಾಯುವವನು, ‘ದನ ಕಾಯೋವ್ನೆ!’ ಎಂಬ ಬೈಗುಳಕ್ಕೆ ಪಕ್ಕಾಗಬಲ್ಲ ನಿಕೃಷ್ಟ ವ್ಯಕ್ತಿ. ಗೋವು ಮತ್ತು ದನದ ನಡುವಿನ ವ್ಯತ್ಯಾಸ ಇಷ್ಟು ವಿಪರೀತವಾದದ್ದು.

ಇತ್ತೀಚಿನ ದಿನಗಳಲ್ಲಿ ತೀವ್ರತರವಾದ ಮತೀಯ ಸಂಘರ್ಷಕ್ಕೆ ಕಾರಣವಾಗಿರುವ ಗೋರಕ್ಷಣೆಯ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ವಿಮರ್ಶೆಗೆ ಒಡ್ಡಬೇಕಾಗಿದೆ. ಗೋರಕ್ಷಣಾ ಚಳವಳಿಯ ಉದ್ದೇಶ ಗೋವೆಂಬ ಸಾಂಕೇತಿಕತೆಯ ರಕ್ಷಣೆಯೇ ಅಥವಾ ದನಗಳನ್ನು ಮೂಲವಾಗಿರಿಸಿಕೊಂಡ ಗ್ರಾಮೀಣ ಆರ್ಥಿಕತೆಯ ರಕ್ಷಣೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

ಸಂಸ್ಕೃತದ ಗೋವು ಪೂಜ್ಯವಾದದ್ದು, ಪಾರಂಪರಿಕವಾದದ್ದು, ದೈವಾಂಶಸಂಭೂತವಾದದ್ದು. ಈಕೆ ಕಾಮಧೇನು, ಬೇಡಿದ್ದನ್ನೆಲ್ಲ ಕೊಡಬಲ್ಲವಳು, ಪುರಾಣಗಳಿಗೆ ಸಲ್ಲುವವಳು. ರಾಕ್ಷಸರು ಹಾಗೂ ಗರ್ವಿಷ್ಟ ರಾಜರು ದುರಾಸೆಯಿಂದ ಪ್ರೇರಿತರಾಗಿ ಹಲವು ಬಾರಿ ಈಕೆಯನ್ನು ಕದ್ದೊಯ್ದದ್ದಿದೆ. ಆಗೆಲ್ಲ ದೇವತೆಗಳು ರಾಕ್ಷಸರನ್ನು ಕೊಂದು ಅಥವಾ ಗರ್ವಿಷ್ಟ ರಾಜರ ಗರ್ವ ಇಳಿಸಿ ಈಕೆಯನ್ನು ಹಿಂದಕ್ಕೆ ಕರೆತಂದದ್ದಿದೆ. ಈಕೆಯ ದೇಹದಲ್ಲಿ ಎಲ್ಲ ಅರವತ್ತನಾಲ್ಕು ಕೋಟಿ ದೇವತೆಗಳು ವಾಸವಾಗಿದ್ದಾರೆ. ಅಷ್ಟು ಪವಿತ್ರಳಾದವಳು ಈಕೆ.

ಇತ್ತ, ಕನ್ನಡ ಮೂಲದ ದನವಾದರೋ ಒಂದು ದುರಂತಮಯ ವಾಸ್ತವ. ಒಂದು ಕಾಲದಲ್ಲಿ ಭಾರತದ ಸಮಗ್ರ ಕೃಷಿ ಪದ್ಧತಿಯ ಬೆನ್ನೆಲುಬಾಗಿದ್ದ ಈಕೆ (ಅಥವಾ ಈತ) ಟ್ರ್ಯಾಕ್ಟರುಗಳು ಹಾಗೂ ಟಿಲ್ಲರುಗಳು ಬಂದ ನಂತರ ಸೋತು ಮೂಲೆಗುಂಪಾಗಿದ್ದಾಳೆ. ಹಾಲಿಗಾಗಿ ಸಹಿತ ಭಾರತೀಯರಿಗೆ ಈಕೆಯ ಅಗತ್ಯವಿಲ್ಲವಾಗಿದೆ. ಅಮೆರಿಕೆಯಿಂದ ಆಮದಾದ ಜರ್ಸಿ ತಳಿಯ ಹಸುಗಳು, ಕಾರ್ಖಾನೆಗಳಂತಹ ಬೃಹತ್ ಕೊಟ್ಟಿಗೆಗಳಲ್ಲುಳಿದು, ಯಂತ್ರಗಳೋಪಾದಿಯಲ್ಲಿ ಹಾಲಿನ ಉತ್ಪಾದನೆ ನಡೆಸಿವೆ.

ಅವುಗಳ ಕೆಚ್ಚಲಿಗೇ ಯಂತ್ರ ಜೋಡಿಸಲಾಗಿರುತ್ತದೆ. ಕರೆದ ಹಾಲು ಕರೆದಂತೆಯೇ ಸಂಸ್ಕರಣಗೊಳ್ಳುತ್ತದೆ, ವಾಹನಗಳ ಮೂಲಕ ನಾಲ್ಕು ದಿಕ್ಕಿಗೆ ಸಾಗಣೆಗೊಂಡು, ಪ್ಲಾಸ್ಟಿಕ್ಕಿನ ಪೌಚುಗಳಲ್ಲಿ ಮನೆ ಮನೆಗಳನ್ನು ತಲುಪುತ್ತದೆ. ಪೌಚಿನ ಮೇಲೆ ಮುದ್ರಿತವಾದ ಹಸುವಿನ ಚಿತ್ರ ಕೂಡ ಗೋಮಾತೆಯದ್ದಲ್ಲ, ಜರ್ಸಿ ತಳಿಯದ್ದೇ ಹೌದು. ಗೋಮಾತೆ ಹಾಲಿನ ಪೌಚಿನ ಚಿತ್ರದಿಂದ ಸಹ ನಿರ್ಗಮಿಸಿಯಾಗಿದೆ.

ಹಿಂದೆಲ್ಲ ಪ್ರತಿ ಮನೆಯಲ್ಲಿ ಈಕೆಗೆಂದು ಕೊಟ್ಟಿಗೆಯಿರುತ್ತಿತ್ತು. ಭಾರತೀಯರು ಪ್ರತಿ ದಿನ ಈಕೆಯ ಸೇವೆ ಮಾಡಿ ಮಿಕ್ಕ ಕೆಲಸಗಳಿಗಿಳಿಯುತ್ತಿದ್ದರು. ಕೊಟ್ಟಿಗೆಯ ಸಗಣಿ ಬಳಿದು ಗಂಜಲ ತೊಳೆದು ಈಕೆಯನ್ನು ಶುಭ್ರಗೊಳಿಸುವುದು ಭಾರತೀಯರಿಗೆ ಪವಿತ್ರ ಕೆಲಸವಾಗಿತ್ತು. ಮೇವಿಗೆಂದು ಪ್ರತಿಯೊಂದು ಹಳ್ಳಿಯಲ್ಲಿ ಗೋಮಾಳಗಳನ್ನು ಕಾಯ್ದಿರಿಸಲಾಗುತ್ತಿತ್ತು. ಈಕೆಯ ದಾಹ ಇಂಗಿಸಲೆಂದೇ ಕೆರೆಕುಂಟೆಗಳನ್ನು ತೋಡಿಸಲಾಗುತ್ತಿತ್ತು. ಈಕೆಯ ಮುದಿತನದ ಬೇಗೆ ನೀಗಿಸಲೆಂದು ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿತ್ತು. ಈಗ ಎಲ್ಲವೂ ಮರೆಯಾಗಿ ಹೋಗಿವೆ.

ನಾನಿರುವ ಮಲೆನಾಡಿನಲ್ಲಿ ಈಕೆ ಮಲೆನಾಡು ಗಿಡ್ಡ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಾಳೆ. ಈಗ ಇವಳು ಮತ್ತಷ್ಟು ಗಿಡ್ಡಳೂ ಮತ್ತಷ್ಟು ದುರ್ಬಲಳೂ ಆಗಿದ್ದಾಳೆ. ತಿನ್ನಬಾರದ ಕಳೆಗಿಡಗಳನ್ನೆಲ್ಲಾ ತಿಂದು ಜೀವ ಹಿಡಿದುಕೊಂಡಿದ್ದಾಳೆ. ಇವಳಿಂದ ಹೆಚ್ಚೆಂದರೆ ಸಗಣಿ ಹಾಗೂ ಗಂಜಲಗಳು ಸಿಕ್ಕುತ್ತಿವೆ. ಹಾಗಾಗಿ ರಾತ್ರಿಯ ಹೊತ್ತು ಕೊಟ್ಟಿಗೆಯಲ್ಲಿ ಕಟ್ಟಿ ಬೆಳಗಿನ ಸಗಣಿ ಗಂಜಲಗಳ ಫಲ ಸಿಕ್ಕೊಡನೆ ಈಕೆಯನ್ನು ಹೊರಗಟ್ಟಿ ಬಿಡುತ್ತೇವೆ.

ಹೊರಗೆ, ಈಕೆ ಮೇಯಬಹುದಾದ ಜಾಗಗಳೆಲ್ಲ ಪರಿವರ್ತಿತವಾಗಿವೆ. ಕಾರ್ಖಾನೆಗಳು, ಎಸ್‌ಇಜಡ್‌ಗಳು, ಶ್ರೀಮಂತರ ಐಶಾರಾಮಿ ತೋಟಗಳು ಆಕ್ರಮಿಸಿಕೊಂಡಿವೆ. ಈಕೆಗುಳಿದಿರುವುದು ಬರಡು ರಸ್ತೆಗಳು ಹಾಗೂ ಕಾಂಕ್ರೀಟಿನ ಜಂಗಲ್ಲುಗಳು ಮಾತ್ರ. ಪ್ಲಾಸ್ಟಿಕ್ಕಿನ ಕಸ ತಿಂದು ಬದುಕುತ್ತಿದ್ದಾಳೆ ಇವಳು.

ನಾವು ಭಾರತೀಯರು ಈಕೆಯನ್ನು ತಿರಸ್ಕರಿಸಿದ್ದೇವೆ. ಭಾರತೀಯ ಮುಸಲ್ಮಾನರು ಅಥವಾ ಭಾರತೀಯ ಕ್ರೈಸ್ತರು ಮಾತ್ರವೇ ಅಲ್ಲ, ಭಾರತೀಯ ಹಿಂದೂಗಳು ಈಕೆಯನ್ನು ತಿರಸ್ಕರಿಸಿದ್ದಾರೆ. ವಾಸ್ತವದಲ್ಲಿ ತಿರಸ್ಕರಿಸಿ ಈಕೆಯ ಪಾವಿತ್ರ್ಯವನ್ನು ಕತ್ತಿಯಾಗಿಸಿಕೊಂಡು ಇತರರ ವಿರುದ್ಧ ಝಳಪಿ
ಸತೊಡಗಿದ್ದೇವೆ. ಮುಸಲ್ಮಾನರು ಹಾಗೂ ಕ್ರೈಸರು ಗೋಮಾಂಸ ತಿನ್ನುತ್ತಾರಾದ್ದರಿಂದ ಅವರನ್ನು ನಿಗ್ರಹಿಸಬೇಕೆಂದು ಹಟ ಹಿಡಿದಿದ್ದೇವೆ.

ವಿಚಿತ್ರ ವಾದವಿದು! ಗೋವನ್ನು ಕಟುಕರಿಗೆ ಮಾರುವವರು ನಾವು, ಗೋಮಾಂಸ ತಯಾರಿಕೆಯ ಕಾರ್ಖಾನೆಗಳ ಒಡೆಯರು ನಾವು. ಮಾತ್ರವಲ್ಲ, ಒಂದೊಮ್ಮೆ ಮುಸಲ್ಮಾನರು ಹಾಗೂ ಕ್ರೈಸ್ತರು ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿದ್ದೇ ಆದರೂ ಗೋಮಾತೆಯ ಪರಿಸ್ಥಿತಿಯಲ್ಲಿ ಸುಧಾರಣೆ ಆಗದು. ಆಕೆಯ ಅಸಹನೀಯ ವೃದ್ಧಾಪ್ಯವು ಮತ್ತಷ್ಟು ಲಂಬಿಸೀತು ಅಷ್ಟೆ.

ನಾನೂ ಗೋರಕ್ಷಣೆಯಲ್ಲಿ ನಂಬಿಕೆಯಿಟ್ಟವನು. ಸುಸ್ಥಿರ ಕೃಷಿ ಪದ್ಧತಿ ಹಾಗೂ ಸುಸ್ಥಿರ ಹೈನುಗಾರಿಕೆಯನ್ನು ಪುನರ್‌ಸ್ಥಾಪಿಸಬೇಕು, ಆ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಗಟ್ಟಿಗೊಳಿಸಬೇಕು, ಆಗ ಮಾತ್ರವೇ ಗೋರಕ್ಷಣೆ ಆದೀತು ಎಂದು ಬಲವಾಗಿ ನಂಬಿರುವವನು. ಹೇಗೆ, ನೇಕಾರಿಕೆಯ ರಕ್ಷಣೆಯೆಂದರೆ ಕೈಮಗ್ಗ ಆರ್ಥಿಕತೆಯ ರಕ್ಷಣೆಯೋ, ಕುರಿಗಳ ರಕ್ಷಣೆಯೆಂದರೆ ವೃತ್ತಿಪರ ಕುರಿ ಸಾಕಾಣಿಕೆ ಹಾಗೂ ಕಂಬಳಿ ಉದ್ದಿಮೆಯ ರಕ್ಷಣೆಯೋ ಹಾಗೆಯೇ ಗೋರಕ್ಷಣೆ ಕೂಡ.

ಗೋವಿನ ಸಮಗ್ರ ಆರ್ಥಿಕತೆಯ ರಕ್ಷಣೆಯನ್ನು ಯಾರೇ ಮಾಡಲಿ, ಅವರಿಗೆ ನಾವು ಬೆಂಬಲ ನೀಡಬೇಕು. ಹಾಗಲ್ಲದೆ ಗೋವೆಂಬ ಸಂಕೇತವನ್ನು ಮುಂದೆ ಮಾಡಿಕೊಂಡು ದೇಶದ ವಿಭಜನೆಗೆ ಮುಂದಾಗುವವರನ್ನು ವಿರೋಧಿಸಬೇಕು. ಗೋವಿನ ಆರ್ಥಿಕತೆಯ ರಕ್ಷಣೆಗೆ ನಾವು ಸಿದ್ಧರಿದ್ದೇವೆಯೇ? ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟರು, ಸ್ಥಳೀಯ ಪಕ್ಷಗಳು... ಯಾರಾದರೂ ಸಿದ್ಧರಿದ್ದಾರೆಯೇ? ನನಗೆ ಹಾಗನ್ನಿಸುತ್ತಿಲ್ಲ.

ನಾವೆಲ್ಲರೂ ಸೇರಿ ಸ್ಮಾರ್ಟ್‌ ಸಿಟಿಗಳನ್ನು ನಿರ್ಮಿಸ ಹೊರಟಿದ್ದೇವೆ. ಕೈಗಾರಿಕಾ ಮೂಲಸೌಕರ್ಯ ಕಾರಿಡಾರುಗಳು ಎಂಬ ಯೋಜನೆಯಡಿಯಲ್ಲಿ ಲಕ್ಷಾಂತರ ಮೈಲಿಗಳಷ್ಟು ಕೃಷಿ ಭೂಮಿಯನ್ನು ಪರಿವರ್ತಿಸಿ ಇಡೀ ಜನಸಂಖ್ಯೆಯನ್ನೇ ಕಾಂಕ್ರೀಟು ಕಾಡುಗಳೊಳಗೆ ತರುಬಲು ಹೊರಟಿದ್ದೇವೆ. ಈ ಕಾರಿಡಾರುಗಳು ಹಾಗೂ ಸ್ಮಾರ್ಟ್‌ ಸಿಟಿಗಳೊಳಗೆ ದನಗಳು ಪ್ರವೇಶಿಸುವುದಿರಲಿ ಬಡವರು ಸಹ ಒಳಹಾಯುವುದು ಕಷ್ಟವಾಗಲಿದೆ. ಮಾರುಕಟ್ಟೆ ಬೇಕಿದೆ ನಮಗೆ, ಲಾಭ ಬೇಕಿದೆ. ರಾಶಿ ರಾಶಿ ಲಾಭ! ಮಾರುಕಟ್ಟೆಯೇ ಮಾನವೀಯತೆಯನ್ನು ಉಳಿಸುತ್ತದೆ ಎಂದು ನಂಬಿದ್ದೇವೆ ನಾವು. ಮಾರುಕಟ್ಟೆಯೆಂಬ ವ್ಯಾಘ್ರಕ್ಕೆ ತೊಡಿಸಿದ ಭಾರತೀಯ ಮುಖವಾಡ ಗೋರಕ್ಷಣೆ.

ದನಗಳನ್ನು ಗಾಢವಾಗಿ ಪ್ರೀತಿಸುವ ಮುಸಲ್ಮಾನ ರೈತರನ್ನು ನಾನು ನೋಡಿದ್ದೇನೆ. ಇದೇ ಉತ್ತರ ಕರ್ನಾಟಕದ ಹಳ್ಳಿಗಾಡುಗಳಲ್ಲಿ ಈಗಲೂ ಅವರು ಕಮತ ಮಾಡುತ್ತಿದ್ದಾರೆ. ಅವರ ಮನೆಗಳ ತಲೆಬಾಗಿಲಿಗೆ ತಗುಲಿಸಿದ ಈದ್ ಕಾ ಚಾಂದ್‌ಗಳು ಮಾತ್ರವೇ ಅವರ ಮುಸಲ್ಮಾನತನವನ್ನು ಸೂಚಿಸುತ್ತವೆ. ಮಿಕ್ಕಂತೆ, ನಡೆ ನುಡಿ ಆಚಾರ ವಿಚಾರ ಉಡುಗೆ ತೊಡುಗೆ ಎಲ್ಲದರಲ್ಲಿಯೂ ಅವರು ಭಾರತೀಯರೇ, ರೈತಾಪಿಗಳೇ. ಕೇರಳದಲ್ಲಿ ಕ್ರೈಸ್ತ ರೈತರು ಹೀಗೆಯೇ ಇದ್ದಾರಂತೆ. ಅತ್ತ ಮುಲ್ಲಾಗಳು ಹಾಗೂ ಪಾದ್ರಿಗಳು, ಭಾರತೀಯರ ರೂಪ (ಹಾಗೂ ವಿಚಾರ) ಬದಲಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಹಿಂದುತ್ವವಾದಿಗಳು ಕೂಡ ಭಾರತೀಯರ ರೂಪ ಕೆಡಿಸಲು ಹರಸಾಹಸ ಪಡುತ್ತಿದ್ದಾರೆ.

ಗೋವಿನ ಪ್ರಶ್ನೆ ಒಂದು ಸಾಕುಪ್ರಾಣಿಯ ಪ್ರಶ್ನೆ ಹಾಗೂ ಸಮಕಾಲೀನ ಪ್ರಶ್ನೆ. ಶ್ರಮದ ದುಡಿಮೆಯಲ್ಲಿ ಸಾಕು ಪ್ರಾಣಿಗಳಿಗಿದ್ದ, ಈಗಲೂ ಇರಬೇಕಾದ ಪಾಲುದಾರಿಕೆಯ ಪ್ರಶ್ನೆಯದು. ದುಡಿಯುವ ಪ್ರಾಣಿಗಳ ಜೊತೆ ಪ್ರೀತಿಯಿಂದ ನಡೆದುಕೊಳ್ಳುವುದು ಹಿಂದೂಗಳಿಗೆ ಸೀಮಿತವಾದ
ಸಂಗತಿಯಲ್ಲ ಅಥವಾ ಸಸ್ಯಾಹಾರಿಗಳ ಹಿರಿಮೆ ಕೂಡ ಅಲ್ಲ ಅದು. ಮಾಂಸಾಹಾರಿಗಳು ಸಾಕುಪ್ರಾಣಿಗಳ ಜೊತೆಗೆ, ಆಹಾರಕ್ಕೆಂದೇ ಬೆಳೆಸಿದ ಸಾಕುಪ್ರಾಣಿಗಳ ಜೊತೆ, ಮಮತೆಯಿಂದ ನಡೆದುಕೊಳ್ಳುವುದನ್ನು ನಾನು ನೋಡಿದ್ದೇನೆ.

ಕೋಳಿ ಸಾಕಿರುವ ಮುದುಕಿಯರು ಕೋಳಿಗಳೊಟ್ಟಿಗೆ ಹರಟುವುದು, ಕಾಣೆಯಾದಾಗ ಕೋಳಿಗಳನ್ನು ಹುಡುಕಿಕೊಂಡು ಅಲೆಯುವುದು, ಕಣ್ಣೀರು ಮಿಡಿಯುವುದು, ಸಂಜೆಯಾದೊಡನೆ ಕರೆದು ಬುಟ್ಟಿಯಲ್ಲಿ ಬಚ್ಚಿಡುವುದು ನಾನೇ ನೋಡಿದ್ದೇನೆ. ಕೋಳಿ ತಿನ್ನುವ ಮುದುಕಿಯರಿವರು. ಕುರಿಮಾಂಸ ತಿನ್ನುತ್ತಿದ್ದ ಏಸುಕ್ರಿಸ್ತ, ಕುರಿಮರಿಯನ್ನು ಪುಟ್ಟ ಮಗುವಿನಂತೆ ತೆಕ್ಕೆಯಲ್ಲಿ ತಂದುಕೊಂಡು ಮುದ್ದು ಮಾಡುತ್ತಿರುವ ಚಿತ್ರ ನನ್ನ ಕಣ್ಣ ಮುಂದಿದೆ.

ನಮ್ಮಲ್ಲಿ ಗೋವಿಗಿರುವ ಪ್ರಾಮುಖ್ಯತೆ ಇತರ ದೇಶಗಳಲ್ಲಿ ಇತರ ಸಾಕುಪ್ರಾಣಿಗಳಿಗಿದೆ. ಇಂಗ್ಲೆಂಡಿನಲ್ಲಿ ನೇಗಿಲಿಗೆ ಹಿಂದೆಲ್ಲ ಕುದುರೆಗಳನ್ನು ಹೂಡುತ್ತಿದ್ದರಂತೆ. ಇಂಗ್ಲಿಷ್‌  ಪುರಾಣಗಳಲ್ಲಿ ಕುದುರೆಗಳಿಗೆ ಇನ್ನಿಲ್ಲದ ಮಹತ್ವವಿದೆ. ಪೌರಾತ್ಯ ದೇಶಗಳಲ್ಲಿ ಎಮ್ಮೆಕೋಣಗಳಿಗೆ ಇದೇ ರೀತಿಯ ಮಹತ್ವವಿದೆ. ಚೀನಾ, ಜಪಾನ್‌, ಕೊರಿಯಾ,  ವಿಯೆಟ್ನಾಂ ಇತ್ಯಾದಿ ದೇಶಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕೋಣದ ಬಳಕೆ ಹೆಚ್ಚು. ಮಧ್ಯಪ್ರಾಚ್ಯದಲ್ಲಿ ಒಂಟೆಗಳ ಬಳಕೆ ಹೆಚ್ಚು. ಕ್ರಿಸ್ತ ಹುಟ್ಟಿದ ಪುರಾತನ ಇಸ್ರೇಲಿನಲ್ಲಿ ಕುರಿಗಳಿಗೆ ಹೆಚ್ಚು ಮಹತ್ವ.

ಕಲ್ಪನೆ ಹಾಗೂ ವಾಸ್ತವಗಳ ನಡುವಿನ ಸಂಬಂಧ ನೇರವಾದುದಲ್ಲ ತಲೆಕೆಳಗಾದದ್ದು. ಇರುವುದನ್ನು ಕಲ್ಪಿಸಿಕೊಳ್ಳುವುದಿಲ್ಲ ನಾವು. ಇಲ್ಲದಿರುವುದನ್ನು ಕಲ್ಪಿಸಿಕೊಳ್ಳುತ್ತೇವೆ. ಇಲ್ಲದ ಹುಲಿಗಳು ನಮ್ಮ ಕಲ್ಪನೆಯಲ್ಲಿ ಹಿರಿದಾಗುವುದಿಲ್ಲವೇ ಹಾಗೆ ದನವೆಂಬ ಪ್ರಾಣಿಯ ಹೀನಸ್ಥಿತಿಗೆ ಹೊರಗಿನ ಕಾರಣ ಹುಡುಕಬೇಕಾಗಿಲ್ಲ ನಾವು. ಹಿಂದೂಗಳಿಗೆ ಗೋಮಾಂಸ ವರ್ಜ್ಯವಾದರೆ ಮುಸಲ್ಮಾನರಿಗೆ ಹಂದಿ ಮಾಂಸ ವರ್ಜ್ಯ. ಹಿಂದೂ–  ಮುಸ್ಲಿಂ ಗಲಭೆಗಳಲ್ಲಿ ಕಿಡಿಗೇಡಿಗಳು ಬಳಸುತ್ತಿರುವ ಕಿಡಿಗಳು ಹಂದಿ ಮಾಂಸ ಹಾಗೂ ಗೋವಿನ ಮಾಂಸ. ಇವೆಲ್ಲ ಇದ್ದದ್ದೆ. ಕಿಡಿಗೇಡಿಗಳು ಮುಂದೆಯೂ ಇರುತ್ತಾರೆ. ಆದರೆ ಕಾನೂನು ಪಾಲಕರು ಹಾಗೂ ಧಾರ್ಮಿಕ ಮುಖಂಡರು ಕಿಡಿಗೇಡಿಗಳನ್ನು ಅಡಗಿಸಬೇಕು, ಕಿಡಿಗಳು ಹರಡಲಿಕ್ಕೆ ಬಿಡಬಾರದು.

ಗೋವು ಎಲ್ಲರಿಗೂ ಪ್ರಿಯವಾದದ್ದು. ಬ್ರಾಹ್ಮಣನಿಗೆ ಪ್ರಿಯವಾದದ್ದು. ಶೂದ್ರನಿಗೂ ಪ್ರಿಯವಾದದ್ದು. ಇಬ್ಬರೂ, ಅವರವರ ರೀತಿಯಲ್ಲಿ ಪ್ರೀತಿಯಿಂದಲೇ ಸಾಕುತ್ತಿದ್ದರು ಈ ಪ್ರಾಣಿಯನ್ನು. ಬ್ರಾಹ್ಮಣನಿಗೆ ಗೋವು ದಾನವಾಗಿ ಬರುತ್ತಿತ್ತು. ಪೂಜ್ಯತೆಯಿಂದ ಪೂಜಾರಿಗೆ ಸಲ್ಲುತ್ತಿದ್ದ ವಂತಿಗೆಯಾಗಿತ್ತು ಅದು. ಶೂದ್ರನಿಗೆ ಶ್ರಮದ ಸಂಗಾತಿಯಾಗಿತ್ತು, ಶೂದ್ರನ ‘ಕಾಮ್ರೇಡ್’! ಈಗ ಕಾಲ ಬದಲಾಗಿದೆ. ಬ್ರಾಹ್ಮಣರು ಬ್ರಾಹ್ಮಣವೃತ್ತಿ ತೊರೆದಿದ್ದಾರೆ. ಶೂದ್ರರು ಶ್ರಮದ ವೃತ್ತಿ ತೊರೆದಿದ್ದಾರೆ. ಹಾಗಾಗಿ ದನವು ತಿರಸ್ಕೃತವಾಗಿದೆ. ಗೋವಿನ ನೆನಪು ಮಾತ್ರ, ಆಳದ ಗಾಯದಂತೆ ನಮ್ಮೊಳಗೆ ಉಳಿದುಕೊಂಡಿದೆ. ಮುಸಲ್ಮಾನರು, ಕ್ರೈಸ್ತರು ಅಥವಾ ಬೌದ್ಧರು ಮಾಡಿದ ಗಾಯವಲ್ಲ ಅದು. ನಾವೇ ನಮ್ಮ ಜೀವನಶೈಲಿಯ ಫಲವಾಗಿ ಮಾಡಿಕೊಂಡ
ಗಾಯವದು. ನಾವೇ ಮಾಗಿಸಬೇಕು ಗಾಯವನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT