ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲಾಮರಸ್ ಹುಡುಗಿಯ ಪಕ್ಕದ್ಮನೆ ಹುಡುಗಿ ಬಯಕೆ

Last Updated 16 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಅವಕಾಶಗಳೇನೋ ಹುಡುಕಿಕೊಂಡು ಬರುತ್ತಿವೆ. ಆದರೆ ನಾನೇ ಒಂದೊಂದು ಚಿತ್ರವನ್ನೂ, ಅದರಲ್ಲಿ ನನ್ನ ಪಾತ್ರವನ್ನೂ ಹುಷಾರಾಗಿ ನೋಡಿಕೊಂಡು ಹೆಜ್ಜೆ ಇಡುತ್ತಿದ್ದೇನೆ. ಯಾಕೆಂದರೆ, ಸಂಖ್ಯೆಗಿಂತ ಗುಣಮಟ್ಟದಲ್ಲಿ ನನಗೆ ಹೆಚ್ಚು ನಂಬಿಕೆ’ ಎನ್ನುವ ಮಿಲನ ನಾಗರಾಜ್, ತಮ್ಮ ಸಿನಿಮಾಗಳ ಸಂಖ್ಯೆ ಹೆಚ್ಚಿಲ್ಲ ಎಂಬುದಕ್ಕೆ ಇದೇ ಕಾರಣ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ದರ್ಶನ್ ಜತೆ ‘ಬೃಂದಾವನ’ದಲ್ಲಿ ಕಾಣಿಸಿಕೊಂಡು, ಗಮನ ಸೆಳೆದಿರುವ ಈ ಕನ್ನಡತಿಯ ಮೊದಲ ಚಿತ್ರ ಪ್ರೀತಮ್ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’. ಇದಾದ ಬಳಿಕ ‘ಚಾರ್ಲಿ’ಯಲ್ಲೂ ಅಭಿನಯಿಸಿದ್ದಾರೆ. ಈಗ ಅದರ ಡಬ್ಬಿಂಗ್ ಕಾರ್ಯ ಮುಗಿದಿದೆ. ಯಾವುದೇ ಅವಸರವಿಲ್ಲದೇ ಚಿತ್ರರಂಗದಲ್ಲಿ ಒಂದೊಂದೇ ಹೆಜ್ಜೆ ಇಡುತ್ತ ಬರುತ್ತಿರುವ ಮಿಲನ, ಈಗ ಆಗಸದಲ್ಲಿ ಹಾರಾಟ ಶುರು ಮಾಡುವ ತವಕದಲ್ಲಿದ್ದಾರಂತೆ! ‘‘ಮತ್ತೇನಿಲ್ಲ... ಭರತ್‌ ನಿರ್ದೇಶನದ ‘ಫ್ಲೈ’ ಸಿನಿಮಾದಲ್ಲಿ ಸಂಪೂರ್ಣ ಸಾಹಸಮಯ ಪಾತ್ರ ನನ್ನದು’’ ಎಂದು ನಗುತ್ತ ಹೇಳುತ್ತಾರೆ!

ಕಥೆ ಹಾಗೂ ಚಿತ್ರತಂಡದ ಬಗ್ಗೆ ತಾವು ಹೆಚ್ಚು ‘ಚ್ಯೂಸಿ’ ಎನ್ನುವ ಅವರು, ಪಾತ್ರ ಪೋಷಣೆ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರಂತೆ. ‘ಯಾವತ್ತೂ ನಂಬರ್ ಗೇಮ್ ಮೇಲೆ ನಂಬಿಕೆ ಇಟ್ಟವಳಲ್ಲ ನಾನು. ಅದು ನನಗೆ ಇಷ್ಟ ಇಲ್ಲ. ಸಂಖ್ಯೆಗಿಂತ ಪ್ರೇಕ್ಷಕರ ಮನಸ್ಸಿನಲ್ಲಿ ಛಾಪು ಮೂಡಿಸುವ ಆಸೆ ನನ್ನದು’ ಎನ್ನುವ ಮಿಲನ ಅವರಿಗೆ, ಅಭಿನಯಿಸಿದ ಮೂರು ಚಿತ್ರಗಳಲ್ಲೂ ಬಹುತೇಕ ಒಂದೇ ತರಹದ – ಅದೂ ಗ್ಲಾಮರಸ್‌– ಪಾತ್ರ ಸಿಕ್ಕಿದೆ. ಅವುಗಳಿಗೆ ಹೋಲಿಸಿದರೆ ‘ಫ್ಲೈ’ ಸಿನಿಮಾದಲ್ಲಿನ ಪಾತ್ರ ಸಂಪೂರ್ಣ ವಿಭಿನ್ನ ಎಂಬ ಖುಷಿ ಅವರದು.

‘‘ನನ್ನನ್ನು ನೋಡುವ ಎಲ್ಲರೂ ‘ನೀನು ಮಾಡರ್ನ್‌ ಅಥವಾ ಗ್ಲಾಮರ್‌ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತೀಯಾ’’ ಎಂದು ಹೇಳುತ್ತಾರೆ. ಆದರೆ ನನಗೆ ಸಹಜವಾಗಿ ‘ಪಕ್ಕದ ಮನೆ ಹುಡುಗಿ’ಯಂಥ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ಅಂಥದೇ ವಾತಾವರಣದಲ್ಲಿ ಬೆಳೆದುಬಂದವಳು ನಾನು. ಈವರೆಗೆ ಅಂಥ ಅವಕಾಶ ಸಿಕ್ಕಿಲ್ಲ. ನೋಡೋಣ... ಮುಂದಿನ ದಿನಗಳಲ್ಲಿ ಆ ಅವಕಾಶ ಸಿಗುತ್ತದೋ ಅಂತ’ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹಾಸನದಲ್ಲಿ ಹುಟ್ಟಿ, ಬೆಳೆದ ಮಿಲನ ಶಿಕ್ಷಣವನ್ನು ಅಲ್ಲೇ ಪೂರೈಸಿದ್ದಾರೆ. ಎಂಜಿನಿಯರಿಂಗ್‌ ಪದವೀಧರೆಯಾದ ಇವರು ಭರತನಾಟ್ಯ ಪ್ರವೀಣೆ ಹಾಗೂ ಉತ್ತಮ ಈಜುಪಟು. ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಪದಕಗಳನ್ನು ಗಳಿಸಿದ್ದಾರೆ. ಎಂಜಿನಿಯರಿಂಗ್‌ ಓದುತ್ತಿದ್ದ ಸಮಯದಲ್ಲಿ ‘ಮಿಸ್‌ ಕರ್ನಾಟಕ ಬ್ಯೂಟಿ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ ಒಂದಷ್ಟು ಸಿನಿಮಾಗಳಿಗೆ ಆಹ್ವಾನ ಬಂದವು. ಆದರೆ ತಮಗೆ ತಾವೇ ಮಿತಿ ಹಾಕಿಕೊಂಡರು. ‘ನಮ್ ದುನಿಯಾ...’ದಿಂದ ಆರಂಭವಾದ ಸಿನಿಪಯಣ, ಈಗ ‘ಫ್ಲೈ’ವರೆಗೆ ಬಂದಿದೆ. ಈ ಚಿತ್ರದ ಮೇಲೆ ಮಿಲನ ಅವರಿಗೆ ಅಪಾರ ಭರವಸೆಯಿದೆ.

ಒಂದಷ್ಟು ಹಾಡು, ಕುಣಿತ ಎಂಬುದಕ್ಕಷ್ಟೇ ಈ ಸಿನಿಮಾದ ನಾಯಕಿ ಸೀಮಿತವಾಗಿಲ್ಲ. ನಾಯಕನಷ್ಟೇ ಸರಿಸಮಾನವಾದ ಸಾಹಸಮಯ ದೃಶ್ಯಗಳನ್ನು ನಾಯಕಿಗೂ ಕೊಡಲಾಗಿದೆ ಎಂಬ ಪುಳಕ ಅವರದು. ‘ನನ್ನ ಮಟ್ಟಿಗೆ ಹೇಳುವುದಾದರೆ ನನ್ನಲ್ಲಿನ ಅಭಿನಯ ಸಾಮರ್ಥ್ಯಕ್ಕೆ ಅವಕಾಶ ಕೊಡುವ ಸಿನಿಮಾ ಇದು. ಇದಕ್ಕಾಗಿ ಪ್ರತಿದಿನ ತರಬೇತಿ ಪಡೆಯುತ್ತಿದ್ದೇನೆ. ಸಾಮಾನ್ಯವಾಗಿ ಚಿತ್ರವೊಂದರಲ್ಲಿ ಅಭಿನಯಿಸುವುದು ಅಂದರೆ ಸೆಟ್‌ಗೆ ಹೋದ ಕೂಡಲೇ ಕೊಡುವ ಸಂಭಾಷಣೆಯನ್ನು ಕಂಠಪಾಠ ಮಾಡಿಕೊಂಡು ಕ್ಯಾಮೆರಾ ಎದುರು ಒಪ್ಪಿಸುವುದು. ಆದರೆ ಇಲ್ಲಿ ಹಾಗಿಲ್ಲ. ನಿತ್ಯ ಹೋಮ್‌ವರ್ಕ್ ಮಾಡುತ್ತಿದ್ದೇವೆ’ ಎಂಬ ಮಾಹಿತಿ ಕೊಡುತ್ತಾರೆ.

ಕಮರ್ಷಿಯಲ್‌ ಸಿನಿಮಾಗಳ ಜತೆಗೇ ಒಂದು ಕಲಾತ್ಮಕ ಸಿನಿಮಾದಲ್ಲಿ ಅಭಿನಯಿಸುವ ಅದಮ್ಯ ಆಸೆ ಅವರಲ್ಲಿದೆ. ‘ಈಗಂತೂ ಕಮರ್ಷಿಯಲ್‌ ಚಿತ್ರಗಳ ಪಾತ್ರಕ್ಕೆ ಅವಕಾಶಗಳು ಬರುತ್ತಿವೆ. ಹೀಗೆಯೇ ಒಂದು ದಿನ ಕಲಾತ್ಮಕ ಸಿನಿಮಾಕ್ಕೂ ಅವಕಾಶ ಬರಬಹುದು ಎಂಬ ಸಕಾರಾತ್ಮಕ ಯೋಚನೆಯಲ್ಲಿ ನಾನಿದ್ದೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT