ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲಾಮರ್‌ + ಹಾರರ್ = ಗಾಯತ್ರಿ

Last Updated 28 ಮೇ 2015, 19:30 IST
ಅಕ್ಷರ ಗಾತ್ರ

ಗ್ಲಾಮರ್ ಪಾತ್ರಗಳಲ್ಲೇ ಹೆಚ್ಚಾಗಿ ಮಿಂಚಿರುವ ಬೆಡಗಿ ಕೇರಳದ ಗಾಯತ್ರಿ ಅಯ್ಯರ್. ಇವರ ಮಾತೃಭಾಷೆ ಮಲಯಾಳಂ ಆದರೂ ಸಿನಿಮಾಕ್ಕೆ ಪದಾರ್ಪಣೆ ಮಾಡಿದ್ದು ಕನ್ನಡದ ಮೂಲಕ. ವಿಜಯ್ ರಾಘವೇಂದ್ರ ನಾಯಕರಾಗಿದ್ದ, 2011ರಲ್ಲಿ ತೆರೆಕಂಡ ‘ಶ್ರಾವಣ’ ಗಾಯತ್ರಿ ಅವರ ಮೊದಲ ಚಿತ್ರ. ಅದಾದ ನಂತರ ತೆಲುಗಿನತ್ತ ಹಾರಿದ ಈ ಚೆಲುವೆ ನಿಧಾನಕ್ಕೆ ಬೆಂಗಾಲಿಗೂ ತಮ್ಮ ಚಟುವಟಿಕೆಯನ್ನು ವಿಸ್ತರಿಸಿಕೊಂಡರು. ಇದೀಗ ಮತ್ತೆ ಕನ್ನಡದತ್ತ ಹೆಜ್ಜೆ ಹಾಕಿರುವ ಗಾಯತ್ರಿ, ವಿನೋದ್ ಪ್ರಭಾಕರ್ ಅಭಿನಯದ ‘ಟೈಸನ್’ ಚಿತ್ರಕ್ಕೆ ನಾಯಕಿ.

ಗಾಯತ್ರಿ ಹುಟ್ಟಿದ್ದು ಕೊಚ್ಚಿನ್‌ನಲ್ಲಿ. ಅವರ ಕುಟುಂಬ ನೆಲೆಗೊಂಡಿದ್ದು ಮುಂಬೈನಲ್ಲಿ. ಹೀಗಾಗಿ ಗಾಯತ್ರಿ ನಗರ ಜೀವನವನ್ನು ಹತ್ತಿರದಿಂದ ಕಂಡವರು. ಮೊದಲ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಕಾಲೇಜಿನಲ್ಲಿ ನಡೆದ ಫ್ಯಾಷನ್ ಶೊೋನಲ್ಲಿ ಹೆಜ್ಜೆ ಹಾಕುವ ಮೂಲಕ ಬಣ್ಣದ ಬೆಡಗನ್ನು ಆವಾಹಿಸಿಕೊಂಡರು. ನಂತರದ ದಿನಗಳಲ್ಲಿ ರ್‍ಯಾಂಪ್ ಮೇಲೆ ಮಾರ್ಜಾಲ ನಡಿಗೆ ಜೊತೆಗೇ ಜಾಹೀರಾತು ಜಗತ್ತಿನಲ್ಲೂ ಇಣುಕಿದವರು ಗಾಯತ್ರಿ. ಜಾಹೀರಾತು ಜಗತ್ತು ಅವರಿಗೆ ಕೆಂಪುಹಾಸಿನ ಸ್ವಾಗತವನ್ನೇ ಕೊಟ್ಟಿತೆನ್ನಬಹುದು. ಅದಕ್ಕೆ ಸಾಕ್ಷಿಯೆಂಬಂತೆ ಮುದ್ರಣ ಹಾಗೂ ಟೀವಿ ಜಾಹೀರಾತುಗಳು ಸಾಲು ಸಾಲಾಗಿ ಅವರಿಗೆ ದೊರೆತವು.

ಜಾಹೀರಾತು ಜಗತ್ತಿನ ಕಣ್ಮಣಿ
ಮಸಾಲೆ ಪುಡಿ ಜಾಹೀರಾತಿನಿಂದ ಹಿಡಿದು, ಮಾರ್ಜಕ, ಸೌಂದರ್ಯವರ್ಧಕ, ಉಡುಪು, ಆಭರಣ, ವಾಹನಗಳವರೆಗೆ ಹಲವು ಬಗೆಯ ಉತ್ಪನ್ನಗಳಿಗೆ ರಾಯಭಾರಿಯಾದ ಗಾಯತ್ರಿ ಜಾಹೀರಾತು ಜಗತ್ತಿನ ಕಣ್ಮಣಿಯೇ ಆದರು ಎಂದರೆ ಅತಿಶಯವಲ್ಲ. ಫ್ಯಾಷನ್ ಮತ್ತು ಜಾಹೀರಾತು ಕ್ಷೇತ್ರದಲ್ಲಿದ್ದ ಅವರು ಸಿನಿಮಾ ಎಂಬ ಮಾಯಾಂಗನೆಯ ತೆಕ್ಕೆಗೆ ಬೀಳಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ. ಮೊದಲು ಗಾಯತ್ರಿ ಅವರನ್ನು ಕರೆದಿದ್ದು ಮಲಯಾಳಂ ಮತ್ತು ತಮಿಳು ಚಿತ್ರರಂಗ. ಆದರೆ ಅದನ್ನೇಕೋ ಪುರಸ್ಕರಿಸದ ಗಾಯತ್ರಿ ಬಣ್ಣದ ಲೋಕದ ಮತ್ತೊಂದು ಇನಿಂಗ್ಸ್ ಆರಂಭಿಸಲು ಆಯ್ದುಕೊಂಡಿದ್ದು ಸ್ಯಾಂಡಲ್‌ವುಡ್.

‘ಶ್ರಾವಣ’ದ ನಂತರ ತೆಲುಗಿನಲ್ಲಿ ನಟಿಸುತ್ತಿದ್ದ ಗಾಯತ್ರಿಯನ್ನು ಮತ್ತೆ ಕನ್ನಡಕ್ಕೆ ಕರೆತಂದವರು ನಿರ್ದೇಶಕ ಮುರಳಿ. ಕೋಮಲ್ ಅಭಿನಯದ ‘ನಮೋ ಭೂತಾತ್ಮ’ ಚಿತ್ರದ ಮೂಲಕ ಮೂರು ವರ್ಷಗಳ ಬಿಡುವಿನ ನಂತರ ಗಾಯತ್ರಿ ಕನ್ನಡಕ್ಕೆ ಬಂದರು. ಸದ್ಯ ‘ಟೈಸನ್’ನಲ್ಲಿ ನಟಿಸುತ್ತಿರುವ ಅವರು ‘ಓಜಾ’ ಎಂಬ ಮತ್ತೊಂದು ಚಿತ್ರಕ್ಕೂ ಸಹಿ ಮಾಡಿದ್ದಾರೆ. ಅದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಕನ್ನಡ ಮತ್ತು ತೆಲುಗಿನಲ್ಲಿ ತಲಾ ನಾಲ್ಕು ಚಿತ್ರಗಳಿಗೆ ಬಣ್ಣಹಚ್ಚಿರುವ ಗಾಯತ್ರಿಗೆ ಮಲಯಾಳಂ ಇಷ್ಟದ ಭಾಷೆ. ನಂತರದ ಆಯ್ಕೆ ತಮಿಳು ಮತ್ತು ಕನ್ನಡ. ತೊದಲು ಕನ್ನಡವನ್ನೂ ಆಡುತ್ತಾರವರು. ಆದರೆ ಮಾತೃಭಾಷೆ ಯಾದ ಮಲಯಾಳಂನಲ್ಲಿ ನಟಿಸುವ ಕಾಲ ಮಾತ್ರ ಈವರೆಗೂ ಕೈಗೂಡಿಲ್ಲ.

ಗಾಯತ್ರಿ ಅಭಿನಯಿಸಿದ ಕಳೆದ ನಾಲ್ಕೂ ಚಿತ್ರಗಳು ಹಾರರ್ ಕಥೆಗಳು. ಇದ್ಯಾಕೆ ಹೀಗೆ ಎಂದರೆ ಅವರ ಉತ್ತರ ತೀರಾ ಸರಳ. ‘ಇತ್ತೀಚಿನ ವರ್ಷಗಳಲ್ಲಿ ಜನ ಹೆಚ್ಚಾಗಿ ಹಾರರ್ ಚಿತ್ರಗಳನ್ನು ನೋಡುತ್ತಿದ್ದಾರೆ. ಬೇರೆ ಭಾಷೆಗಳಲ್ಲೂ ಜನಪ್ರಿಯ ಕಲಾವಿದರು ಹಾರರ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಮುಂದಿನ ಎರಡು ವರ್ಷಗಳ ಕಾಲವೂ ಮುಂದುವರಿಯಲಿದೆ’ ಎಂದು ಭವಿಷ್ಯ ನುಡಿಯು ತ್ತಾರೆ. ಅವರ ಅಭಿನಯದ ‘ನಮೋ ಭೂತಾತ್ಮ’ ಜನಪ್ರಿಯವಾದ ಕಾರಣ ಅವರಿಗೆ ಮತ್ತೆ ಮತ್ತೆ ಅಂಥದ್ದೇ ಅವಕಾಶಗಳು ದೊರೆಯುತ್ತಿವೆ. ‘ಓಜಾ’ ಮತ್ತು ತೆಲುಗಿನ ‘ದೊರಕಡು’ ಕೂಡ ಹಾರರ್ ಚಿತ್ರಗಳೇ.

‘ಟೈಸನ್’ನ ರಾಣಿಯಾಗಿ
‘ಟೈಸನ್’ನಲ್ಲಿ ಗಾಯತ್ರಿ ಈಗಿನ ಕಾಲದ ಮಾಡರ್ನ್ ಹುಡುಗಿ. ಬೋಲ್ಡ್, ಫ್ಯಾಷನ್ ಇವೆಲ್ಲ ಅವರ ಪಾತ್ರದಲ್ಲಿದ್ದರೂ ಕುಟುಂಬದ ಬಾಂಧವ್ಯ, ಪ್ರಬುದ್ಧತೆಯನ್ನೂ ಪ್ರತಿನಿಧಿಸುವ ಅವರು ನಾಯಕನ ಸಾಧನೆಗೆ ಒತ್ತಾಸೆಯಾಗಿ ನಿಲ್ಲುತ್ತಾರಂತೆ. ನಿರ್ದೇಶಕ ರಾಂನಾರಾಯಣ್ ಅವರು ಕಥೆ ಹೇಳಿದ ಪರಿ ಮತ್ತು ಅವರು ಸಿದ್ಧಮಾಡಿಕೊಂಡಿದ್ದ ಚಿತ್ರಕಥೆಯ ಕಾರಣಕ್ಕಾಗಿ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳುವ ಗಾಯತ್ರಿ, ಶೀಘ್ರದಲ್ಲೇ ‘ಟೈಸನ್’ ತೆರೆಗೆ ಬರುವ ನಿರೀಕ್ಷೆಯಲ್ಲಿದ್ದಾರೆ.

ಸದ್ಯಕ್ಕೆ ಮುಂಬೈನಲ್ಲಿ ವಾಸವಾಗಿರುವ ಗಾಯತ್ರಿ ಬಾಲಿವುಡ್ನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಎಂತೆಂಥದ್ದೋ ಅವಕಾಶಗಳನ್ನೆಲ್ಲ ಒಪ್ಪುವ ಆತುರ ಅವರದಲ್ಲ. ಹಿಂದಿಯಲ್ಲಿ ಒಳ್ಳೆಯ ಚಿತ್ರದ ಮೂಲಕವೇ ಶುಭಾರಂಭವಾಗಬೇಕು ಎನ್ನುವ ಅವರಿಗೆ, ಅದಕ್ಕಾಗಿ ಕೊಂಚ ಕಾದರೂ ಪರವಾಗಿಲ್ಲ ಎಂಬ ತಾಳ್ಮೆಯಿದೆ.

‘ಜೋಧಾ ಅಕ್ಬರ್’, ‘ದೇವದಾಸ್’ಗಳಂತಹ ಐತಿಹಾಸಿಕ ಚಿತ್ರಗಳಲ್ಲಿ ನಟಿಸುವುದು ಅವರ ಆಸೆ. ಒಂದೇ ಚಿತ್ರದಲ್ಲಿ ಹಳ್ಳಿ ಹುಡುಗಿ ಮತ್ತು ಆಧುನಿಕ ನಾರಿ; ಎರಡು ವಿರುದ್ಧ ಗುಣಗಳಿರುವ ದ್ವಿಪಾತ್ರದ ಕಥೆಯನ್ನೂ ಅವರು ನಿರೀಕ್ಷಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ತಮಿಳು ಚಿತ್ರವೊಂದರಲ್ಲಿ ತೊಡಗಿಕೊಳ್ಳಲಿದ್ದಾರಂತೆ. ನಾಯಕನೇ ಇಲ್ಲದ ಆ ಚಿತ್ರದಲ್ಲಿ ಗಾಯತ್ರಿ ಅವರದೇ ಮುಖ್ಯ ಪಾತ್ರ. ಅವರ ಕನ್ನಡ ಅಚ್ಚ ಕನ್ನಡವಲ್ಲದಿದ್ದರೂ ತಮ್ಮ ಚಿತ್ರಗಳಿಗೆ ತಾವೇ ದನಿ ನೀಡಬೇಕೆಂದುಕೊಂಡಿರುವ ಗಾಯತ್ರಿ, ‘ಟೈಸನ್’ ನಿರ್ದೇಶಕ ರಾಂನಾರಾಯಣ್ ಅವರನ್ನು ಮನವೊಲಿಸುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT