ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲೋಬ್‌ ಟು ಗ್ಲೋಬ್‌ ‘ಹ್ಯಾಮ್ಲೆಟ್‌’

Last Updated 16 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಶ್ರೇಷ್ಠ ಬರಹಗಾರರು ಕಾಲದೇಶಗಳ ಗಡಿಯನ್ನೆಲ್ಲ ಮೀರಿ ಶಾಶ್ವತರಾಗುತ್ತಾರೆ. ಪ್ರಾದೇಶಿಕ ಮಿತಿಗಳನ್ನು ದಾಟಿ ಜಾಗತಿಕಗೊಳ್ಳುತ್ತಾರೆ ಎನ್ನುವುದಕ್ಕೆ  ‘ಶೇಕ್ಸ್‌ ಪಿಯರ್‌’ ಅತ್ಯುತ್ತಮ ಉದಾಹರಣೆ. 450 ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ಬದುಕಿದ್ದ ಒಬ್ಬ ನಾಟಕಕಾರ, ತನ್ನ ದುರಂತ ನಾಟಕಗಳಿಂದ ಜಗದ್ವಿಖ್ಯಾತಗೊಂಡಿದ್ದು, ಇಂದಿಗೂ ಸಾಹಿತ್ಯ ಜಗತ್ತಿನ ಧ್ರುವತಾರೆಯಾಗಿ ಜ್ವಲಿಸುತ್ತಿರುವುದು ಎಲ್ಲರಿಗೂ ತಿಳಿದಿದೆ.

ನಮಗಿಂತ ಪ್ರಾದೇಶಿಕವಾಗಿ–ಕಾಲಾನುಕ್ರಮಣೆಯಲ್ಲಿ ತುಂಬ ಅಂತರದಲ್ಲಿರುವ ಶೇಕ್ಸ್‌ಪಿಯರ್‌, ಮಾನಸಿಕವಾಗಿ ನಮಗ್ಯಾರಿಗೂ ‘ಅನ್ಯ’ ಅನ್ನಿಸದಷ್ಟು ಆಪ್ತನಾಗಿರುವುದು ಸಾಹಿತ್ಯದ ಸಾರ್ವತ್ರಿಕ ಗುಣವನ್ನೂ ಉವಾಚಿಸುವಂತಿದೆ.

ಜಗತ್ತಿನ ಇನ್ನೊಂದು ಭಾಗದ ಶೇಕ್ಸ್‌ಪಿಯರ್‌ ರಚಿಸಿದ ನಾಟಕಗಳು ನಮಗೇ ಇಷ್ಟು ಆಪ್ತವೆನಿಸಬೇಕಾದರೆ, ಅವನು ಹುಟ್ಟಿ ಬೆಳೆದ, ಕೃತಿಗಳನ್ನು ರಚಿಸಿದ ನೆಲದಲ್ಲಿ ಅವನ ಪ್ರಭಾವ ಅದೆಷ್ಟು ಗಾಢವಾಗಿರಬಹುದು? ಅವನ ಜನ್ಮ ನೆಲವಾದ ಇಂಗ್ಲೆಂಡ್‌ನಲ್ಲಿ ಶೇಕ್ಸ್‌ಪಿಯರ್‌ನ ನಾಟಕಗಳನ್ನು ಹೇಗೆ ಆಡಿಸಬಹುದು ಎಂಬೆಲ್ಲ ಕುತೂಹಲ ಒಂದಲ್ಲ ಒಂದು ಹಂತದಲ್ಲಿ ರಂಗಾಸಕ್ತರಿಗೆ, ಶೇಕ್ಸ್‌ಪಿಯರ್‌ ಪ್ರಿಯರಿಗೆ ಕಾಡಿಯೇ ಕಾಡಿರುತ್ತದೆ. ಹಾಗೆಂದು ತಕ್ಷಣವೇ ಇಂಗ್ಲೆಂಡಿಗೆ ತೆರಳಿ ತಮ್ಮ ಕುತೂಹಲ ತಣಿಸಿಕೊಂಡು ಬರುವ ಅವಕಾಶ– ಸವಲತ್ತು ಎಷ್ಟು ಜನಕ್ಕೆ ಸಿಕ್ಕೀತು?

ನಗರದ ರಂಗಪ್ರಿಯರ ಇಂತಹ ಕುತೂಹಲ ತಣಿಯುವ ಅವಕಾಶ ಬಂದಿದೆ. ಇಂಗ್ಲೆಂಡಿನ ಗ್ಲೋಬ್‌ ಥಿಯೇಟರ್‌ ತಂಡ ಶೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್‌’ ನಾಟಕವನ್ನು ಪ್ರದರ್ಶಿಸಲು ನಗರಕ್ಕೆ ಬರುತ್ತಿದೆ. ರಂಗಶಂಕರ ಹ್ಯಾಮ್ಲೆಟ್‌ನ ಪ್ರದರ್ಶನಕ್ಕೆ ಅಣಿಯಾಗಿದೆ.

ಹ್ಯಾಮ್ಲೆಟ್‌ ಪ್ರಪಂಚ ಪರ್ಯಟನೆ
2014 ಶೇಕ್ಸ್‌ಪಿಯರ್‌ ಜನಿಸಿ 450 ವರ್ಷ ಪೂರೈಸಿದ ವರ್ಷ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಇಂಗ್ಲೆಂಡ್‌ನ ಗ್ಲೋಬ್‌ ಥಿಯೇಟರ್‌, ಶೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್‌’ ನಾಟಕವನ್ನು ತೆಗೆದುಕೊಂಡು ಪ್ರಪಂಚದಾದ್ಯಂತ ಪರ್ಯಟನೆ ನಡೆಸಿ ಕನಿಷ್ಠ 200 ದೇಶಗಳಲ್ಲಿ ಪ್ರದರ್ಶನ ನೀಡಬೇಕು ಎಂದು ಯೋಜನೆ ಹಾಕಿಕೊಂಡಿತು.

2014 ಏಪ್ರಿಲ್ 23ರಲ್ಲಿ ಆರಂಭಗೊಂಡ ಈ ರಂಗಪರ್ಯಟನೆಯ 149ನೇ ಪ್ರಯೋಗ ನಗರದ ರಂಗಶಂಕರದಲ್ಲಿ ನಡೆಯಲಿದೆ. ಗ್ಲೋಬ್‌ ಥಿಯೇಟರ್‌ನ ಕಲಾ ನಿರ್ದೇಶಕ ಡಾಮಿನಿಕ್ ಡ್ರೋಮ್‌ಗೂಲ್ ಈ ನಾಟವನ್ನು ನಿರ್ದೇಶಿಸಿದ್ದಾರೆ.

ಎರಡು ವರ್ಷಗಳ ವಿಶ್ವಪ್ರವಾಸ ಕೈಗೊಂಡು ಜಗತ್ತಿನಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ಹ್ಯಾಮ್ಲೆಟ್‌ ನಾಟಕಕ್ಕೆ ಪ್ರೇಕ್ಷಕರು ಪ್ರತಿಸ್ಪಂದಿಸುತ್ತಾರೆ ಎಂದು ಅರಿಯುವ ಉದ್ದೇಶ ಈ ಯೋಜನೆಗಿದೆ. ಅಲ್ಲದೇ ಶೇಕ್ಸ್‌ಪಿಯರ್‌ನ ನಾಟಕವನ್ನು ವಿಶ್ವಾತ್ಮಕಗೊಳಿಸುವ ಪ್ರಯತ್ನವೂ ಇದಾಗಿದೆ. ಈ ತಂಡದಲ್ಲಿ 16 ಜನ ನಟನಟಿಯರಿದ್ದಾರೆ.

ಭಾನುವಾರ ನಗರದಲ್ಲಿ...
ಹೀಗೆ ಪ್ರಪಂಚದ ವಿವಿಧ ದೇಶಗಳಲ್ಲಿ ‘ಹ್ಯಾಮ್ಲೆಟ್‌’ ನನ್ನು ದರ್ಶಿಸಿರುವ ಗ್ಲೋಬ್‌ ಥಿಯೇಟರ್‌ ಭೂತಾನ್‌ನಲ್ಲಿ ಪ್ರದರ್ಶನ ಮುಗಿಸಿ ಇದೇ ಭಾನುವಾರ ನಗರಕ್ಕೆ ಆಗಮಿಸಲಿದೆ. ಭಾನುವಾರ ಮತ್ತು ಸೋಮವಾರ ರಂಗಶಂಕರದಲ್ಲಿ ‘ಹ್ಯಾಮ್ಲೆಟ್‌’ ಲೋಕ ತೆರೆದುಕೊಳ್ಳಲಿದೆ. ಭಾರತದಲ್ಲಿ ರಂಗಶಂಕರದಲ್ಲಿ ಮಾತ್ರ ಈ ನಾಟಕ ಪ್ರದರ್ಶನಗೊಳ್ಳಲಿದೆ ಎನ್ನುವುದು ವಿಶೇಷ.

‘ಈಗ ನಾಲ್ಕು ವರ್ಷದಿಂದಲೂ ಇಂಗ್ಲೆಂಡಿನ ಗ್ಲೋಬ್‌ ಥಿಯೇಟರ್‌ನೊಂದಿಗೆ ರಂಗಶಂಕರ ಸಂಪರ್ಕವಿರಿಸಿಕೊಂಡಿತ್ತು. ಈ ಯೋಜನೆಯ ಅಂಗವಾಗಿ ಭಾರತದಲ್ಲಿ ಪ್ರದರ್ಶನ ನೀಡುವ ಸಲುವಾಗಿ ತಂಡ ಎರಡು ಮೂರು ನಗರಗಳಲ್ಲಿ ಅವಕಾಶಕ್ಕಾಗಿ ಕೋರಿತ್ತು. ನಮ್ಮನ್ನು ಸಂಪರ್ಕಿಸಿದ ಕೂಡಲೇ ನಾವು ಒಪ್ಪಿಕೊಂಡು ಅವರನ್ನು ಆಹ್ವಾನಿಸಿದೆವು. ಇಡೀ ದೇಶದಲ್ಲಿ ನಮ್ಮಲ್ಲಿ ಮಾತ್ರ ಈ ನಾಟಕ ಪ್ರದರ್ಶನಗೊಳ್ಳಲಿರುವ ಹೆಮ್ಮೆ ನಮ್ಮದು’ ಎನ್ನುತ್ತಾರೆ ರಂಗಶಂಕರದ ನಿರ್ದೇಶಕ ಎಸ್‌. ಸುರೇಂದ್ರನಾಥ್‌.

ರಂಗಶಂಕರದಲ್ಲಿ ಇದೇ ಭಾನುವಾರ ಮತ್ತು ಸೋಮವಾರ (ಅಕ್ಟೋಬರ್‌ 18–19) ‘ಹ್ಯಾಮ್ಲೆಟ್‌’ ನಾಟಕದ ಮೂರು ಪ್ರದರ್ಶನ ನಡೆಯಲಿದೆ. ಭಾನುವಾರ ಮಧ್ಯಾಹ್ನ 2ಕ್ಕೆ ಮತ್ತು ಸಂಜೆ 7.30ಕ್ಕೆ ನಡೆದರೆ, ಸೋಮವಾರ ಸಂಜೆ 7.30ಕ್ಕೆ ಒಂದು ಪ್ರದರ್ಶನವಿರುತ್ತದೆ. ಇಂಗ್ಲಿಷ್‌ ಭಾಷೆಯಲ್ಲಿ ನಡೆಯುವ ಈ ನಾಟಕದ ಅವಧಿ 150 ನಿಮಿಷಗಳು. ಇಲ್ಲಿ ಪ್ರದರ್ಶನ ಮುಗಿಸಿ ನಂತರ ಮಸ್ಕತ್‌ಗೆ ತೆರಳಲಿದೆ.

‘ಗ್ಲೋಬ್‌ ಟು ಗ್ಲೋಬ್‌ ಹ್ಯಾಮ್ಲೆಟ್‌’ನ ಪ್ರತಿದಿನದ ವಿವರಗಳಿಗೆ ಭೇಟಿ ನೀಡಿ: globetoglobe.shakespearesglobe.com

ಅಪೂರ್ವ ಅವಕಾಶ
‘ಶೇಕ್ಸ್‌ಪಿಯರ್‌ ಗ್ಲೋಬ್‌ ಟು ಗ್ಲೋಬ್‌’ ಬೆಂಗಳೂರಿಗೆ ಬರುತ್ತಿರುವುದೇ ಒಂದು ಹೆಮ್ಮೆ. ಅದರಲ್ಲಿಯೂ ನಮ್ಮ ರಂಗಶಂಕರದಲ್ಲಿ ‘ಹ್ಯಾಮ್ಲೆಟ್‌’ ನಾಟಕ ಆಡುತ್ತಿರುವುದು ನಮಗೆ ಕಿರೀಟ ಇಟ್ಟಂತಾಗಿದೆ. ಗ್ಲೋಬ್‌ ಟು ಗ್ಲೋಬ್ ಹ್ಯಾಮ್ಲೆಟ್‌ ಹೆಸರಿನಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಿರುವ ಈ ತಂಡ ಇಲ್ಲಿಗೆ ಬಂದಿರುವುದರಿಂದ ಅನೇಕ ಉಪಯೋಗಗಳಿವೆ. ಮೊದಲನೇಯದು ಶೇಕ್ಸ್‌ಪಿಯರ್‌ನ ನಾಟಕಗಳನ್ನು ಅವನ ನಾಡಿನಲ್ಲಿ ಹೇಗೆ ಮಾಡುತ್ತಾರೆ ಎಂಬುದರ ಪರಿಕಲ್ಪನೆ ಸಿಗುತ್ತದೆ. 

ವೇದಿಕೆ ಬದಲಾದರೂ ದೇಶ ಬದಲಾದರೂ ನಾಟಕದ ತಂತ್ರಗಳು ಹಾಗೇ ಇರುತ್ತವೆ. ಅಲ್ಲದೇ ಗ್ಲೋಬ್‌ ತಂಡದ ಇನ್ನೊಂದು ನಾಟಕವನ್ನು ನೋಡಬೇಕು ಎಂದರೆ ನಾವು ಇಂಗ್ಲೆಂಡಿಗೇ ಹೋಗಬೇಕು. ಆದ್ದರಿಂದ ಇದು ರಂಗಭೂಮಿ ವಿದ್ಯಾರ್ಥಿಗಳು, ರಂಗಾಸಕ್ತ ಪ್ರೇಕ್ಷಕರು ಎಲ್ಲರಿಗೂ ಒಂದು ಅಪೂರ್ವ ಅವಕಾಶವಾಗಿದೆ.
-ಎಸ್‌. ಸುರೇಂದ್ರನಾಥ್‌, ರಂಗಶಂಕರ ನಿರ್ದೇಶಕ

‘ಶೇಕ್ಸ್‌ಪಿಯರ್‌ ಸಾರ್ವತ್ರಿಕ’
ಎಷ್ಟು ಸಾಧ್ಯವೋ ಅಷ್ಟೂ ಜನರೆದುರು ಹ್ಯಾಮ್ಲೆಟ್‌ ನಾಟಕವನ್ನು ಪ್ರದರ್ಶಿಸಬೇಕು. ಅಷ್ಟೇ ಭಿನ್ನ ಪ್ರದೇಶಗಳಲ್ಲಿಯೂ ಈ ನಾಟಕ ಪ್ರದರ್ಶಿಸಬೇಕು ಎಂಬುದು ನಮ್ಮ ಈ ಯೋಜನೆಯ ಉದ್ದೇಶ.  ಪ್ರತಿ ಮನುಷ್ಯ­ನೊಂದಿಗೂ ಮಾತನಾಡಬಲ್ಲ ಮತ್ತು ರಂಜಿಸಬಲ್ಲ ಸಾಮರ್ಥ್ಯ ಶೇಕ್ಸ್‌ಪಿಯರ್‌ಗಿದೆ. ಈ ಶಕ್ತಿಗೆ ಜಗತ್ತಿನ ಯಾವ ದೇಶ, ಭಾಷೆ, ಪ್ರದೇಶಗಳೂ ಅಡ್ಡಿಯಾಗಲಾರವು.
-ಡಾಮಿನಿಕ್ ಡ್ರೋಮ್‌ಗೂಲ್, ಹ್ಯಾಮ್ಲೆಟ್‌ ನಾಟಕದ ನಿರ್ದೇಶಕ

ನೇರಪ್ರಸಾರ
ಈ ನಾಟಕದ ಒಂದು ಪ್ರದರ್ಶನವನ್ನು ಬ್ರಿಟಿಶ್‌ ಕೌನ್ಸಿಲ್ ತನ್ನ ಜಾಲತಾಣದಲ್ಲಿ ನೇರಪ್ರಸಾರ ಮಾಡಲಿದೆ. ಸೋಮವಾರ ಸಂಜೆ 7.30ರ ಪ್ರದರ್ಶನ ಜಾಲತಾಣದಲ್ಲಿ ಪ್ರಸಾರವಾಗಲಿದೆ. ಟಿಕೆಟ್‌ ಸಿಗದವರು, ಅನಿವಾರ್ಯ ಕಾರಣಗಳಿಂದ ಪ್ರದರ್ಶನ ವೀಕ್ಷಣೆಗೆ ರಂಗಮಂದಿರಕ್ಕೆ ಬರಲಾಗದವರು ಬ್ರಿಟಿಶ್‌ ಕೌನ್ಸಿಲ್‌ ಜಾಲತಾಣ blog.britishcouncil.org.in/hamlet-world-tour ಗೆ ನಿಗದಿತ ಸಮಯದಲ್ಲಿ ಭೇಟಿನೀಡುವುದರ ಮೂಲಕ ಮನೆಯಲ್ಲಿಯೇ ಕುಳಿತು ಗ್ಲೋಬ್‌ ಥಿಯೇಟರ್‌ನ ‘ಹ್ಯಾಮ್ಲೆಟ್‌’ನನ್ನು ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT