ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಮುನ್ನುಡಿ

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್ ಏನೋ ವಿಶ್ವವ್ಯಾಪಿ. ಆದರೆ ಈ ಜಾಲದ ನಿರ್ವಹಣೆಯ ನೀತಿ ನಿರೂಪಣೆಗೆ ಬಂದರೆ ಅದು ಹೆಚ್ಚು ಕಡಿಮೆ ಅಮೆರಿಕದ ನಿಯಂತ್ರಣದಲ್ಲಿದೆ. ಅಮೆರಿದ ಎನ್‌ಎಸ್‌ಎ ವಿವಿಧ ದೇಶಗಳ ಅಂತರ್ಜಾಲ ಸಂವಹನದ ಮೇಲೆ ಗೂಢಚರ್ಯೆ ನಡೆಸಿದ್ದು ಬಯಲಾದಾಗ ರೊಚ್ಚಿಗೆದ್ದು ಅದನ್ನು ಪ್ರತಿಭಟಿಸಿದ ದೇಶ ಬ್ರೆಜಿಲ್.

ಇಂಟರ್‌ನೆಟ್‌ನ ಮೇಲಿನ ಏಕಪಕ್ಷೀಯ ನಿಯಂತ್ರಣದ ವಿರುದ್ಧ ಬ್ರೆಜಿಲ್‌ನಂಥ ದೊಡ್ಡ ರಾಷ್ಟ್ರ ಸಿಡಿದೆದ್ದು ನಿಂತಿತು. ಅದರ ಫಲವಾಗಿಯೇ ಇಂಟರ್‌ನೆಟ್‌ನ ನಿರ್ವಹಣೆ ಮತ್ತು ಬಳಕೆಯ ಎಲ್ಲಾ ಪಾಲುದಾರರ ಒಂದು ಸಮ್ಮೇಳವನ್ನು ಬ್ರೆಜಿಲ್ ಆಯೋಜಿಸಿತು. ಬಹು­ಕಾಲದಿಂದ ಅಲಿಪ್ತ ಇಂಟರ್‌ನೆಟ್‌ ಬೇಕು ಎಂದು ಪ್ರತಿಪಾದಿಸುತ್ತಿದ್ದವರೆಲ್ಲಾ ಈ ಸಮ್ಮೇಳನದ ಯಶಸ್ಸನ್ನು ಬಯಸಿದ್ದರು.

ಏಪ್ರಿಲ್ 24ರಂದು ಬ್ರೆಜಿಲ್ ಸೊ ಪೌಲೊದಲ್ಲಿ ಕೊನೆಗೊಂಡ ಎರಡು ದಿನಗಳ ಈ ಸಮ್ಮೇಳನದ ಅತಿದೊಡ್ಡ ಯಶಸ್ಸೆಂದರೆ ಇಂಟರ್‌ನೆಟ್‌ನ ನೀತಿ ನಿರೂಪಣಾತ್ಮಕ ಆಡಳಿತಕ್ಕೆ ಬಹುಪಕ್ಷೀಯ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕೆ ತಾತ್ವಿಕ ಒಮ್ಮತ­ವೊಂದನ್ನು ರೂಪಿಸಿದ್ದು. ಆದರೆ ಈ ಸಮ್ಮೇಳನಕ್ಕೆ ಹೇತುವಾದ ಅಮೆರಿಕದ ಬೇಹುಗಾರಿಕೆ, ಕಾಪಿರೈಟ್ ಕಾನೂನುಗಳ ಏಕಪಕ್ಷೀಯ ಹೇರಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಿತಿಗೊಳಿಸುವ ಬಲಾಢ್ಯರ ನಿಲುವುಗಳಿಗೆ ಸಂಬಂಧಿಸಿದ ಯಾವ ನಿರ್ಧಾರವನ್ನೂ ಕೈಗೊಳ್ಳಲು ಈ ಸಮ್ಮೇಳನಕ್ಕೆ ಸಾಧ್ಯವಾಗಲಿಲ್ಲ ಎಂಬುದು ಇದರ ದೊಡ್ಡ ಸೋಲು.

ಇಂಟರ್‌ನೆಟ್ ವಿಶ್ವವ್ಯಾಪಿಯಾದ ನಂತರದ ಎರಡೂವರೆ ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಬಹುಪಕ್ಷೀಯ ಸಭೆ ನಡೆದಿದೆ. ಎಲ್ಲವನ್ನೂ ಒಮ್ಮೆಗೇ ಸಾಧಿಸಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇಂಟರ್‌ನೆಟ್‌ನ ಮೇಲಿನ ಅಮೆರಿಕದ ನಿಯಂತ್ರಣವನ್ನು ಒಂದೇ ಪಟ್ಟಿಗೆ ಬಿಡಿಸಿಕೊಳ್ಳುವುದಕ್ಕೆ ಇಂಥ ಒಂದು ಸಮ್ಮೇಳನಕ್ಕೆ ಸಾಧ್ಯವಾಗುವುದಿಲ್ಲ. ಇದ­ಕ್ಕೊಂದು ನಿರಂತರ ಹೋರಾಟದ ಅಗತ್ಯವಿದೆ. ಈಗ ಎಲ್ಲಾ ಪಾಲುದಾರರು ಮಾನವ ಹಕ್ಕುಗಳ ಪರಿಭಾಷೆಯಲ್ಲಿ ಇಂಟರ್‌ನೆಟ್ ಸ್ವಾತಂತ್ರ್ಯವನ್ನೂ ಒಪ್ಪಿಕೊಂಡಿದ್ದಾರೆ ಎಂಬುದು ಧನಾತ್ಮಕ ಅಂಶ.

ಬ್ರೆಜಿಲ್ ತನ್ನ ದೇಶದ ಪ್ರಜೆಗಳ ಖಾಸಗಿ ಮಾಹಿತಿಯನ್ನು ರಕ್ಷಿಸುವುದಕ್ಕಾಗಿ ಈಗಾಗಲೇ ಒಂದು ಕಾನೂನು ರೂಪಿಸಿ ಅದರ ಮೂಲಕ ಎಲ್ಲಾ ಜಾಗತಿಕ ಇಂಟರ್‌ನೆಟ್ ಆಧಾರಿತ ಸೇವಾ ಕಂಪೆನಿಗಳಿಗೂ ತನ್ನ ನಿಯಂತ್ರಣದ ತೆಕ್ಕೆಗೆ ತೆಗೆದು­ಕೊಂಡಿದೆ. ಈ ಬಗೆಯ ಕಾನೂನುಗಳು ಇಂಟರ್‌ನೆಟ್‌ನ ವಿಶ್ವವ್ಯಾಪಕತೆಗೆ ಸಮಸ್ಯೆಯನ್ನು ಸೃಷ್ಟಿಸಬಹುದೆಂಬ ವಾದವಿದೆಯಾದರೂ ಇಂಟರ್‌ನೆಟ್‌ನ ನಿರ್ವಹಣೆಗೆ ಸಂಬಂಧಿಸಿದ ಚರ್ಚೆಗಳನ್ನು ಹುಟ್ಟು ಹಾಕಿದ್ದೂ ಬ್ರೆಜಿಲ್‌ನ ಈ ನಿಲುವೇ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಈ ಸಮ್ಮೇಳನ ಅಲಿಪ್ತ ಇಂಟರ್‌ನೆಟ್‌ಗಾಗಿ ಹೋರಾಡುತ್ತಿರುವವರಿಗೆ ನಿರಾಶೆ ತಂದಿದೆ ಎಂಬುದು ನಿಜ. ಆದರೆ ಈ ತನಕವೂ ಸಾಧ್ಯವಾಗದೇ ಇದ್ದ ಚರ್ಚೆಯೊಂದನ್ನು ಇದು ವಿಶ್ವವ್ಯಾಪಿಯಾಗಿ ಆರಂಭಿಸಿರುವುದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT