ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿಯಾಗದ ಹವ್ಯಾಸಿ ರಂಗಭೂಮಿ

ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯ
Last Updated 23 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಹವ್ಯಾಸಿ ರಂಗಭೂಮಿ ನವ್ಯ ಸಾಹಿತ್ಯದ ಚಳವಳಿಯಾಗಿ ಬೆಳೆಯಿತೆ ವಿನಾ, ರಂಗ ಚಳವಳಿಯಾಗಲಿಲ್ಲ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

ಅಂಬಾ ಪ್ರಕಾಶನ ನಗರದಲ್ಲಿ  ಭಾನುವಾರ ಆಯೋಜಿಸಿದ್ದ ರಂಗಕರ್ಮಿ ಗೋಪಾಲ ವಾಜಪೇಯಿ ಅವರ ‘ರಂಗದ ಒಳ- ಹೊರಗೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರೇಕ್ಷಕರ ಹಂಗಿಲ್ಲದ ಹವ್ಯಾಸಿ ರಂಗಭೂಮಿ ಇದೀಗ ಉಳಿದಿಲ್ಲ. ಅದು ಪ್ರವರ್ಧನಮಾನದಲ್ಲಿದ್ದ ಕಾಲಘಟ್ಟದಲ್ಲಿ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಚೈತನ್ಯ ಬಂತು. ತುಂಬಾ ಮೌಲಿಕ ಕಾರ್ಯಗಳು ನಡೆದವು ಮತ್ತು  ನೋಡುವ ದೃಷ್ಟಿಕೋನ ಕೂಡ ಬದಲಾಯಿತು’ ಎಂದು ಅವರು ಹೇಳಿದರು.

‘ರಂಗದ ಒಳಗೆ ಮತ್ತು ಹೊರಗೆ ಕೆಲಸ ಮಾಡುವ ಮೂಲಕ ಆಮೂಲಾಗ್ರವಾದ ಅನುಭವ ಶ್ರೀಮಂತಿಕೆ ಗಳಿಸಿರುವ ಗೋಪಾಲ ಅವರ ಈ ಕೃತಿ ಅಪೂರ್ವವಾದ ರಂಗಭೂಮಿಯ ಇತಿಹಾಸವನ್ನು ಕಟ್ಟಿಕೊಡುತ್ತದೆ’ ಎಂದು ತಿಳಿಸಿದರು.

ಪತ್ರಕರ್ತ ಜಿ.ಎನ್. ಮೋಹನ್  ಅವರು ಮಾತನಾಡಿ, ‘ರಂಗಭೂಮಿ, ಚಲನಚಿತ್ರ, ಪತ್ರಿಕೋದ್ಯಮ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗೋಪಾಲ ತಮ್ಮನ್ನು ತೊಡಗಿಸಿಕೊಂಡರೂ ರಂಗಭೂಮಿಯನ್ನು ಹೃದಯಕ್ಕೆ ಹತ್ತಿರವಾಗಿಟ್ಟುಕೊಂಡರು’ ಎಂದು ಹೇಳಿದರು.

ಲೇಖಕ ಗೋಪಾಲ ವಾಜಪೇಯಿ ಅವರು ಮಾತನಾಡಿ, ‘ನಾಲ್ಕು ವರ್ಷದವನಿದ್ದಾಗಲೇ ತಂದೆಯನ್ನು ಕಳೆದುಕೊಂಡ ನನಗೆ ಚಿಕ್ಕಂದಿನಿಂದ ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿತ್ತು. ಆದರೆ ಬೆಂಬಲವಿರಲಿಲ್ಲ. ಅನೇಕರ ಸಹಾಯ, ಸಹಕಾರದಿಂದ ನಾನು ಈ ಮಟ್ಟಕ್ಕೆ ತಲುಪಿರುವೆ’ ಎಂದು ಹಳೆಯ ದಿನಗಳ ಮೆಲುಕು ಹಾಕಿದರು.

‘ನನಗೆ ನಿರ್ದಿಷ್ಟ ಶೈಲಿಯ ಬರವಣಿಗೆ ಗೊತ್ತಿಲ್ಲ. ತಿಳಿದದ್ದನ್ನು ಬರೆಯುತ್ತ ಹೋದೆ. ಜನರಿಗೆ ಅದು ಇಷ್ಟವಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT