ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಮನೆಯಲ್ಲಿ ಜಾಗದ ಸದ್ಬಳಕೆ

Last Updated 17 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ದಿನೇ ದಿನೇ ಹೆಚ್ಚುತ್ತಲೇ ಇರುವ  ಜನಸಂಖ್ಯೆಯಿಂದಾಗಿ ಮಹಾನಗರಗಳಲ್ಲಿ ಸೂರಿನ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಎಲ್ಲರೂ ನಿವೇಶನ ಖರೀದಿಸಿ ಸ್ವಂತಕ್ಕೊಂದು ಮನೆ ಕಟ್ಟಿಸಿಕೊಳ್ಳುವುದು ಕನಸಿನ ಮಾತು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಭೂಮಿಯ ಬೆಲೆಯಂತೂ ಗಗನಕ್ಕೇರಿಬಿಟ್ಟಿದೆ. ಹಾಗಾಗಿ ಮಧ್ಯಮ ಆದಾಯ ವರ್ಗದ ಜನರೂ ಈಗ ಪ್ರತ್ಯೇಕ ಮನೆಗಳಿಗೆ ಬದಲಾಗಿ ವಸತಿ ಸಂಕೀರ್ಣಗಳ ಮೊರೆ ಹೋಗುತ್ತಿದ್ದಾರೆ.

ಐಶಾರಾಮಿ, ಮಧ್ಯಮ ಶ್ರೇಣಿ, ಸಾಧಾರಣ ಎಂಬ ಮಾರುಕಟ್ಟೆ ಧಾರಣೆ ಆಧರಿಸಿದ ವಸತಿ ಸಂಕೀರ್ಣಗಳ ಶ್ರೇಣಿಯಲ್ಲಿ ಮನೆಗಳು ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಸತಿ ಸಂಕೀರ್ಣಗಳಲ್ಲಿಯೂ ₹30 ಲಕ್ಷದಿಂದ ₹45 ಲಕ್ಷದೊಳಗಿನ ಬೆಲೆಯ ಮಧ್ಯಮ ಶ್ರೇಣಿ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಕೇಳಿಬರುತ್ತಿದೆ.

ತಕ್ಕಮಟ್ಟಿಗೆ ವಿಶಾಲವಾದ, ಅಂದರೆ 800 ಚದರಡಿ ವಿಸ್ತಾರದಿಂದ ಆರಂಭಿಸಿ 1100 ಚದರಡಿಗಳಷ್ಟು ವಿಸ್ತಾರದ 2 ಅಥವಾ 3 ಬಿಎಚ್‌ಕೆಗಳಿಗೆ (2 ಅಥವಾ 3 ಬೆಡ್‌ರೂಂ,  ಒಂದು ಹಾಲ್‌ ಮತ್ತು ಅಡುಗೆ ಕೋಣೆ) ಬೇಡಿಕೆ ಹೆಚ್ಚುತ್ತಿದೆ ಎಂಬುದನ್ನು ಖಚಿತಪಡಿಸುತ್ತವೆ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಕಂಪೆನಿಗಳ ಅಂಕಿ ಅಂಶ.

ಮಧ್ಯಮ ಶ್ರೇಣಿ ಅಪಾರ್ಟ್‌ಮೆಂಟ್‌ಗಳ ಜೊತೆಗೇ ಸ್ಟುಡಿಯೊ ಫ್ಲ್ಯಾಟ್‌ಗಳೂ ಇತ್ತೀಚೆಗೆ ಹೆಚ್ಚು ತಲೆ ಎತ್ತುತ್ತಿವೆ.  ಅಷ್ಟೇನೂ ವಿಶಾಲವಲ್ಲದ ಈ ಫ್ಲ್ಯಾಟ್‌ಗಳಲ್ಲಿಯೂ ಸಹ ಮನೆಯ ಸಾಮಾನುಗಳನ್ನು ಬುದ್ಧಿವಂತಿಕೆಯಿಂದ ಜೋಡಿಸಿ ಇಟ್ಟುಕೊಳ್ಳುವ ಮೂಲಕ ಒಂದೇ ಕೊಠಡಿಯ ಈ ಪುಟ್ಟ ಫ್ಲ್ಯಾಟ್‌ ಸಹ ವಿಶಾಲವಾಗಿ ಕಾಣುವಂತೆ ಮಾಡಬಹುದು.

ಜಾಗದ ಸದ್ಬಳಕೆ ಹೀಗೆ
ಮೊದಲನೆಯದಾಗಿ ಸಾಮಾನುಗಳನ್ನು ಜೋಡಿಸುವುದು ಅತ್ಯಂತ ಮುಖ್ಯವಾದ ಕೆಲಸ. ಇರುವ ಜಾಗದಲ್ಲಿಯೇ ಅತ್ಯಂತ ಜಾಣ್ಮೆಯಿಂದ ಮನೆಯ ಸಕಲೆಂಟು ಸಾಮಾನು ಸರಂಜಾಮುಗಳನ್ನೂ ಕ್ಯಾಸೆಟ್‌ಗಳಲ್ಲಿ (ಮರದ ಬೀರು) ಅಥವಾ ಸ್ಲೀಕ್ ಕ್ಯಾಬಿನೆಟ್‌ಗಳ ಹಿಂದೆ ಜೋಡಿಸಿ ಇಟ್ಟುಕೊಳ್ಳುವುದರಿಂದ ಫ್ಲ್ಯಾಟ್‌ನ ಒಳಭಾಗ ವಿಶಾಲವಾಗಿ ಕಾಣುತ್ತದೆ.

ತಕ್ಷಣಕ್ಕೆ ಬೇಕಾಗದ ಸಾಮಾನುಗಳನ್ನು ಸಜ್ಜಾದ ಮೇಲೆ ಅಥವಾ ಲಾಫ್ಟ್‌ಗಳಲ್ಲಿ (ಚಿಕ್ಕದಾಗಿ ಅಟ್ಟ ನಿರ್ಮಿಸಿಕೊಂಡು) ಜೋಡಿಸಿಡಬಹುದು. ಇದರಿಂದ ಇರುವುದೊಂದೆ ಚಿಕ್ಕ ಹಜಾರವೂ  ವಿಶಾಲವಾಗಿ ಕಾಣುವಂತೆ ಹಾಗೂ ಗಲೀಜು ಮುಕ್ತವಾಗಿರುವಂತೆ ಇಟ್ಟುಕೊಳ್ಳಬಹುದು. ಆ ಮೂಲಕ ಚಿಕ್ಕ ಜಾಗವನ್ನೂ ಸರಿಯಾದ ರೀತಿಯಲ್ಲಿ ಬಳಸಿಕೊಂಡಂತಾಗುತ್ತದೆ. ಹಾಲ್‌ಗೆ (ಹಜಾರಕ್ಕೆ) ಪಿಠೋಪರಣ ಖರೀದಿಸುವಾಗ ಜಾಗದ ಲಭ್ಯತೆಯನ್ನು ಮೊದಲು ಯೋಚಿಸಬೇಕು. ಆದಷ್ಟೂ ಬಹು ಬಗೆಯಲ್ಲಿ ಉಪಯೋಗಕ್ಕೆ ಬರುವಂತಹ ವಿಶೇಷ  ವಿನ್ಯಾಸದ ಪಿಠೋಪಕರಣಗಳನ್ನೇ ಖರೀದಿಸುವುದು ಜಾಣತನ.

ಮಡಿಚಿಡುವ ಪೀಠೋಪಕರಣ
ಇತ್ತೀಚಿನ ದಿನಗಳಲ್ಲಿ ಮಡಿಸಿಡಬಹುದಾದ ಪಿಠೋಪಕರಣಗಳು ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವಿವೆ. ಹಗಲಿನಲ್ಲಿ ಸೋಫಾ, ರಾತ್ರಿ ಹಾಸಿಗೆಯಾಗಿ ಬದಲಾಗುವ ಸಾಧನ ಪುಟ್ಟ ಮನೆಯಗೆ ಸೂಕ್ತ ಪೀಠೋಪಕರಣ. ಪೆಟ್ಟಿಗೆಯಾಕಾರದ ದಿವಾನ್ ಮಂಚಗಳನ್ನು ಉಪಯೋಗಿಸುವುದರಿಂದಲೂ ಜಾಗದ ಸದ್ಬಳಕೆ ಸಾಧ್ಯ. ದಿವಾನ್‌ಗಳ ಒಳಗೆ ಬಹಳಷ್ಟು ಸಾಮಾನುಗಳನ್ನು ಜೋಡಿಸಿಟ್ಟುಕೊಳ್ಳಬಹುದು.

ಹಜಾರಕ್ಕೆ ಕುರ್ಚಿಗಳು ಬೇಕು ಎಂದೆನಿಸಿದರೆ ಆದಷ್ಟೂ ಮಡಚುವ ಕುರ್ಚಿಗಳನ್ನೇ ಆಯ್ಕೆ ಮಾಡಿಕೊಳ್ಳಿ. ಅಗತ್ಯವಿಲ್ಲದೇ ಇದ್ದಾಗ ಕುರ್ಚಿಗಳನ್ನು ಮಡಿಚಿ ಅಟ್ಟಕ್ಕೆ ಸೇರಿಸಬಹುದು. ರೂಮಿನಲ್ಲಿಯೂ ಸಹ ಪೆಟ್ಟಿಗೆಯಾಕಾರದ ಮಂಚವನ್ನು ಉಪಯೋಗಿಸುವುದು ಒಳಿತು. ಈ ಮಂಚದಡಿಯ ಬಾಕ್ಸ್‌ನಲ್ಲಿ ಹೆಚ್ಚುವರಿಯಾಗಿ ಇರುವ ಹಾಸಿಗೆ, ದಿಂಬು, ಬೆಡ್‌ಶೀಟ್‌ಗಳನ್ನು ಒಪ್ಪವಾಗಿ ಜೋಡಿಸಿಡಬಹುದು. ಇದರಿಂದ ಬೆಡ್‌ರೂಮ್‌ನ ಜಾಗದ ಸದ್ಬಳಕೆಯಾಗುತ್ತದೆ. ಆದರೆ, ಮಂಚದಡಿಯ ಬಾಕ್ಸ್‌ನಲ್ಲಿ ವಸ್ತುಗಳನ್ನು ಜೋಡಿಸಿಡುವುದಕ್ಕೂ ಮುನ್ನ ನೆಫ್ತಲಿನ್ ಬಾಲ್ಸ್ (ನುಸಿಗುಳಿಗೆ) ಹಾಕುವುದನ್ನು ಮಾತ್ರ ಮರೆಯಬೇಡಿ.

ಬಾಲ್ಕನಿಯ ಸದುಪಯೋಗ
ಫ್ಲ್ಯಾಟ್‌ನ ಮೊಗಸಾಲೆಯನ್ನೂ  (ಬಾಲ್ಕನಿ) ಸಹ ಭಿನ್ನ ರೀತಿಯಲ್ಲಿ ಅಥವಾ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ಗಳ ಪ್ರತಿಯೊಂದು ಫ್ಲ್ಯಾಟ್‌ಗೂ 1 ಅಥವಾ 2 ಬಾಲ್ಕನಿಗಳು ಇರುತ್ತವೆ. ಒಂದು ಬಾಲ್ಕನಿಯಲ್ಲಿ ಸಣ್ಣ ಕುರ್ಚಿ ಟೀಪಾಯ್‌ ಇಟ್ಟು ಚಹಾ ಸೇವನೆಗೆ ಜಾಗ ಮಾಡಿಕೊಳ್ಳಬಹುದು. ಇಲ್ಲವೇ, ಪುಟ್ಟ ಹೂಕುಂಡಗಳನ್ನು ಇರಿಸಬಹುದು.

ಇನ್ನೊಂದು ಬಾಲ್ಕನಿಯಲ್ಲಿ ವಾಷಿಂಗ್ ಮಷೀನ್‌, ಗ್ಯಾಸ್ ಸಿಲಿಂಡರ್, ತಟ್ಟೆ ಸ್ಟ್ಯಾಂಡ್ ಮುಂತಾದವನ್ನು ಇರಿಸಿದರೆ ಅಡುಗೆ ಮನೆಯಲ್ಲಿ ಸ್ವಲ್ಪ ಹೆಚ್ಚಿನ ಜಾಗ ಸಿಕ್ಕಂತಾಗುತ್ತದೆ. ಫ್ಲಾಟ್‌ನ ಒಳಾಂಗಣ ಗೋಡೆಗೆ ಬಣ್ಣ ಹೊಡೆಸುವಾಗ ಆಯ್ಕೆ ಸೂಕ್ತವಾಗಿರಲಿ, ಸೂಕ್ತ ಬಣ್ಣದ ಆಯ್ಕೆಯಿಂದ ಒಳಾಂಗಣ ವಿಶಾಲವಾಗಿ ಕಾಣುವಂತೆ ಮಾಡಬಹುದು. ತೆಳು ಹಳದಿ ಅಥವಾ ತೆಳು ಬಾದಾಮಿ ಬಣ್ಣ ಹಾಲ್‌ಗೆ ಸೂಕ್ತ. ಇಂತಹ ಬಣ್ಣದ ಗೋಡೆಯ ಮೇಲೆ ಗಾಢ ಬಣ್ಣದ ಪ್ರಕೃತಿ ಚಿತ್ರವನ್ನು ಹಾಕುವುದರಿಂದ ರೂಂ ಆಕರ್ಷಿಣೀಯವಾಗಿ ಕಾಣುತ್ತದೆ.

ಸ್ಲೈಡಿಂಗ್‌ ಡೋರ್ಸ್‌
ಮನೆಯ ಮುಖ್ಯದ್ವಾರವನ್ನು ಬಿಟ್ಟು ರೂಮು, ಅಡುಗೆ ಕೋಣೆಗೆ ಸ್ಲೈಡಿಂಗ್‌ ಡೋರ್ಸ್‌ (ಪಕ್ಕಕ್ಕೆ ಸರಿಯುವ ಬಾಗಿಲು) ಅಳವಡಿಸಿಕೊಳ್ಳುವುದು ಒಳ್ಳೆಯದು. ಸಾಮಾನ್ಯವಾದ ಬಾಗಿಲುಗಳಾದರೆ ಅವನ್ನು ಹಾಕುವಾಗ ತೆಗೆಯುವಾಗ ಅವು ಹೆಚ್ಚು ಸ್ಥಳ ಆಕ್ರಮಿಸಿಕೊಳ್ಳುತ್ತವೆ. ಸ್ಲೈಡಿಂಗ್ ಬಾಗಿಲುಗಳಾದರೆ ಜಾಗದ ಉಳಿತಾಯವಾಗುತ್ತದೆ.

ಬಂಕರ್‌ ಬೆಡ್ಸ್‌
ಮಕ್ಕಳ ಕೋಣೆಯಲ್ಲಿ ಮಡಿಚಬಹುದಾದ ಮಂಚ ಅಥವಾ ಬಂಕ್‌ರಬೆಡ್‌ಗಳನ್ನು ಉಪಯೋಗಿಸಬಹುದು. (ಒಂದರ ಮೇಲೊಂದರಂತೆ ಇರುವ ಮಂಚ) ಇದರಿಂದ ಒಂದೇ ಜಾಗದಲ್ಲಿ 2 ಅಥವಾ 3 ಮಂಚಗಳನ್ನು ಅಳವಡಿಸಿ ಮಕ್ಕಳಿಗೆ, ಅತಿಥಿಗಳಿಗೆ ಮಲಗಲು ಸ್ಥಳಾವಕಾಶ ಮಾಡಿಕೊಡಬಹುದು. ಇತ್ತೀಚೆಗೆ ಈ ಮಂಚಕ್ಕೆ ಹೊಂದಿಕೊಂಡ ಮಡಿಚಬಹುದಾದ ಸ್ಟಡಿ ಟೇಬಲ್‌ಗಳು ಸಹ ಲಭ್ಯವಿವೆ. ಇದೂ ಸಹ ಪುಟ್ಟ ಮನೆಗಳಲ್ಲಿನ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಕಾರ್ನರ್‌ ಸ್ಯ್ಟಾಂಡ್ಸ್‌
ಅಡುಗೆ ಮನೆಯಲ್ಲೇ ಸಾಮಾನ್ಯವಾಗಿ ಅತಿ ಹೆಚ್ಚು ವಸ್ತುಗಳು ಇರುತ್ತವೆ. ಕಾರ್ನರ್ ಸ್ಟ್ಯಾಂಡ್‌ಗಳನ್ನು ಬಳಸುವುದರಿಂದ ಅಡುಗೆ ಮನೆಯ ಜಾಗವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು.  ಸಾಧಾರಣವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಅಡುಗೆ ಮನೆಗೆ ಹೊಂದಿಕೊಂಡಂತೆಯೇ ಬಾಲ್ಕನಿ ಇರುತ್ತದೆ. ಇಲ್ಲಿ ಗ್ಯಾಸ್‌ ಸಿಲಿಂಡರ್, ದಿನಸಿಯ ದೊಡ್ಡ ಡಬ್ಬಿಗಳು ಮೊದಲಾದ ದೊಡ್ಡ ಆಕಾರದ ವಸ್ತುಗಳನ್ನು ಇಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT