ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ರಂಗಿನಲ್ಲಿ ‘ನೀರು ರಾಜಕೀಯ’

Last Updated 10 ಫೆಬ್ರುವರಿ 2016, 11:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಂಚಾಯ್ತಿ ಚುನಾವಣೆಯ ರಂಗಿನಲ್ಲಿ ಈಗ ಚನ್ನಪಟ್ಟಣದಲ್ಲಿ ನಡೆಯುತ್ತಿರುವುದು ಅಕ್ಷರಶಃ ನೀರು ರಾಜಕಾರಣ. ತಾಲ್ಲೂಕಿನಲ್ಲಿ ನಡೆದಿರುವ ಕಣ್ವ ಏತ ನೀರಾವರಿ ಯೋಜನೆಯ ಫಲವನ್ನು ಪ್ರಸಕ್ತ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಳಸಿಕೊಳ್ಳಲು ಪ್ರಮುಖ ಮೂರು ಪಕ್ಷಗಳು ಹವಣಿಸುತ್ತಾ ತಾಲ್ಲೂಕಿನಲ್ಲಿ ಪ್ರಚಾರದಲ್ಲಿ ಪ್ರಮುಖವಾಗಿ ‘ನೀರು ರಾಜಕಾರಣ’ ಮಾಡುತ್ತಾ ಮತದಾರರ ಮನಸ್ಸನ್ನು ಗೆಲ್ಲಲು ಹೊರಟಿದ್ದಾರೆ.

ಕಣ್ವ ಏತ ನೀರಾವರಿಯಿಂದ ತಾಲ್ಲೂಕಿನ ಹಲವಾರು ಕೆರೆಗಳು ತುಂಬಿ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ರೈತರು ಸಂತಸದಿಂದಿರುವಂತೆ ರಾಜಕೀಯ ಪಕ್ಷಗಳು ಈ ಯೋಜನೆ ನಮ್ಮದು, ನಮ್ಮಿಂದಲೇ ತಾಲ್ಲೂಕು ನೀರಾವರಿಯಾಗಿದೆ. ಹಾಗಾಗಿ ತಾಲ್ಲೂಕಿನ ಜನತೆ ನಮ್ಮ ಪಕ್ಷವನ್ನೆ ಬೆಂಬಲಿಸಬೇಕು ಎಂದು ಮತದಾರರ ಬೆನ್ನು ಬಿದ್ದಿದ್ದಾರೆ.

ತಾಲ್ಲೂಕಿನ ಇಗ್ಗಲೂರಿನಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದ್ದು, ಇದು ನಿರ್ಮಾಣವಾಗಿದ್ದೆ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದ 1996 ರಲ್ಲಿ. ಸ್ವತಃ ದೇವೇಗೌಡರೇ ಈ ಜಲಾಶಯದ ನಿರ್ಮಾಣದಲ್ಲಿ ಮುತುವರ್ಜಿ ವಹಿಸಿದ್ದರು. ಹಾಗಾಗಿ ಈ ಜಲಾಶಯಕ್ಕೆ ಎಚ್.ಡಿ.ದೇವೇಗೌಡ ಬ್ಯಾರೇಜ್ ಎಂದೇ ಹೆಸರಿಡಲಾಗಿದೆ.

ಆನಂತರ ಈ ಜಲಾಶಯದ ನೀರನ್ನು ಬಳಸಿಕೊಂಡು ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅನುದಾನ ತಂದು ಶಾಸಕ ಸಿ.ಪಿ. ಯೋಗೇಶ್ವರ್ ತಾಲ್ಲೂಕಿನಲ್ಲಿ ಗರಕಹಳ್ಳಿ ಏತ ನೀರಾವರಿ ಕಾಮಗಾರಿಗೆ ಚುರುಕು ಮಟ್ಟಿಸಿದ್ದೇ ಅಲ್ಲದೆ ಕಣ್ವ ಏತ ನೀರಾವರಿ ಯೋಜನೆ ಜಾರಿಗೆ ತಂದು ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ಹರಿಸಿದ್ದಾರೆ. ಇದರಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಪಾತ್ರ ಸಹ ಬಹಳ ಮುಖ್ಯವಾಗಿತ್ತು.

ಆದರೆ ಇದನ್ನು ಚುನಾವಣೆ ಸಂದರ್ಭದಲ್ಲಿ ಪ್ರಮುಖ ಮೂರು ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮುಖಂಡರು ತಮ್ಮ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಕಳೆದ 2014 ರ ವಿಧಾನಸಭಾ ಚುನಾವಣೆಯಲ್ಲಿ ನೀರಿನ ವಿಷಯ ಬಳಸಿಕೊಂಡಿದ್ದ ರಾಜಕೀಯ ಮುಖಂಡರು ಈಗ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಇದೇ ವಿಷಯವನ್ನು ಮತ್ತೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಜಲಾಶಯವನ್ನು ನಿರ್ಮಾಣ ಮಾಡಿಸಿದ್ದರಿಂದ ತಾಲ್ಲೂಕಿನ ನೀರಾವರಿ ದೇವೇಗೌಡರಿಂದ ಆಗಿದ್ದು ಎಂದು ಜೆಡಿಎಸ್ ಮುಖಂಡರು ವಾದ ಮಾಡಿದರೆ, ಸದಾನಂದಗೌಡರು ರೂ. 220 ಕೋಟಿ ಅನುದಾನ ಬಿಡುಗಡೆ ಮಾಡಿದ್ದರಿಂದಲೇ ತಾಲ್ಲೂಕಿನಲ್ಲಿ ನೀರಾವರಿ ಆಯಿತು ಎಂದು ಬಿಜೆಪಿ ಮುಖಂಡರು ವಾದಿಸುತ್ತಾರೆ. ಶಾಸಕ ಸಿ.ಪಿ.ಯೋಗೇಶ್ವರ್ ಮನಸ್ಸು ಮಾಡಿದ್ದರಿಂದಲೇ ನೀರಾವರಿ ಯೋಜನೆಗಳು ಜಾರಿಗೆ ಬಂದಿದ್ದು ಎಂದು ಕಾಂಗ್ರೆಸ್ ಮುಖಂಡರು ವಾದ ಮಾಡುತ್ತಾರೆ. ಹಾಗಾಗಿ ತಾಲ್ಲೂಕಿನಲ್ಲಿ ಈಗ ಅಕ್ಷರಶ: ‘ನೀರು ರಾಜಕಾರಣ’ ನಡೆಯುತ್ತಿದೆ.

ಪ್ರಮುಖ ಮೂರು ಪಕ್ಷದವರು ನೀರಾವರಿ ನಮ್ಮದು ಎಂದೇಳುವಾಗ ಗೊಂದಲಕ್ಕೆ ಬೀಳುವ ಸರದಿ ತಾಲ್ಲೂಕಿನ ಮತದಾರರದ್ದಾಗಿದೆ. ನೀರಾವರಿಯಲ್ಲಿ ಯಾರ ಪಾತ್ರವಿದೆಯೋ ಅದು ಸಾಮಾನ್ಯ ಜನತೆಗೆ ಬೇಕಿಲ್ಲ. ಒಟ್ಟಿನಲ್ಲಿ ತಾಲ್ಲೂಕು ನೀರಾವರಿಯಾಯಿತು ಎಂಬುದಷ್ಟೆ ಸಾಮಾನ್ಯ ಜನರ ಅಭಿಪ್ರಾಯ. ಆದರೆ ಇದು ನಮ್ಮದು ನಮ್ಮದು ಎಂದು ರಾಜಕೀಯದವರೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂಬುದು ಸಾಮಾನ್ಯರ ವಾದ.

ಯಾವುದೇ ಕ್ಷೇತ್ರದ ಜನಪ್ರತಿನಿಧಿಯಾಗಲಿ ಆ ಕ್ಷೇತ್ರದ ಅಭಿವೃದ್ಧಿ ಮಾಡುವುದು ಆತನ ಆದ್ಯ ಕರ್ತವ್ಯ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಒಂದು ತಾಲ್ಲೂಕಿಗೆ ಅನುದಾನ ಬಿಡುಗಡೆ ಮಾಡಿರುವುದನ್ನೆ ನೆಪ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂಬುದು ತಾಲ್ಲೂಕಿನ ಪ್ರಜ್ಞಾವಂತ ಮತದಾರರಾದ ಜಯರಾಮೇಗೌಡ, ಪುಟ್ಟಸ್ವಾಮಿ, ಆನಂದರಾಜು ಅವರ ಅಭಿಪ್ರಾಯ.ಚುನಾವಣೆಯಲ್ಲಿ ತಾವು ಮಾಡಿರುವ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುವುದು ನ್ಯಾಯ. ಆದರೆ ಒಂದೇ ಕೆಲಸವನ್ನು ತಮ್ಮದು ತಮ್ಮದು ಎಂದು ಬಿಂಬಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂಬುದು ಕೆಂಚೇಗೌಡ, ಗಂಗಾಧರ್, ಅನಿಲ್, ರಾಘವೇಂದ್ರ ಅವರ ಅಭಿಪ್ರಾಯ.

ಜಲಾಶಯ ನಿರ್ಮಿಸುವುದು ಮುಖ್ಯವಲ್ಲ. ಅದರ ಸದ್ಬಳಕೆ ಹೇಗೆ ಮಾಡಿಕೊಳ್ಳಬೇಕು ಎಂಬುದು ಮುಖ್ಯ. ಕೇವಲ ಜಲಾಶಯ ಇದ್ದರೂ ಪ್ರಯೋಜನವಿಲ್ಲ ಎಂಬುದು ಶಾಸಕಸಿ.ಪಿ. ಯೋಗೇಶ್ವರ್ ಅವರ ಮಾತು.

ಸದಾನಂದಗೌಡ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿರದಿದ್ದರೆ ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗಳೇ ಚಾಲ್ತಿಗೆ ಬರುತ್ತಿರಲಿಲ್ಲ ಎಂಬುದು ಬಿಜೆಪಿ ಮುಖಂಡ, ರವಿಕುಮಾರ್ ಗೌಡ ಅವರ ಅಭಿಪ್ರಾಯ.

ಒಂದು ಸರ್ಕಾರ ಮಾಡಿದ ಕಾರ್ಯವನ್ನು ಮುಂದೆ ಬರುವ ಸರ್ಕಾರ ನಡೆಸಿಕೊಂಡು ಹೋಗುವುದು ಸಾಮಾನ್ಯ ವಿಷಯ. ಇದನ್ನೆ ನಮ್ಮ ಸಾಧನೆ ನಮ್ಮ ಸಾಧನೆ ಎಂದು ಬಿಂಬಿಸಿಕೊಂಡರೆ ಅದಕ್ಕೆ ಯಾವುದೇ ಅರ್ಥ ಬರುವುದಿಲ್ಲ ಎಂದು   ರೈತ ಸಂಘದ ಹಿರಿಯ ಮುಖಂಡ ಕೆ.ಎಸ್. ಲಕ್ಷ್ಮಣಸ್ವಾಮಿ ಅವರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT