ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಬೆಳಕಿನ ಕವಿಗೆ 85 ವಸಂತ

Last Updated 29 ಜೂನ್ 2013, 6:30 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಕವಿ ಡಾ.ಚನ್ನವೀರ ಕಣವಿ ಅವರಿಗೆ ಶುಕ್ರವಾರಕ್ಕೆ 85 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಲ್ಲಿಯ ಕಲ್ಯಾಣನಗರದ `ಚೆಂಬೆಳಕು' ಹೆಸರಿನ ಅವರ ನಿವಾಸದಲ್ಲಿ ಇಡೀ ದಿನ ಸಂಭ್ರಮ ಮನೆ ಮಾಡಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವು ಮುಖಂಡರು ಬೆಳಿಗ್ಗೆಯೇ ಅವರ ಮನೆಗೆ ಭೇಟಿ ನೀಡಿ ಡಾ.ಚನ್ನವೀರ ಕಣವಿ ಹಾಗೂ ಶಾಂತಾದೇವಿ ಕಣವಿ ದಂಪತಿಗೆ ಶುಭ ಹಾರೈಸಿದರು.

`ನೀವು 100 ವರ್ಷ ಬಾಳಬೇಕು. 100ನೇ ವರ್ಷಕ್ಕೆ ಬೃಹತ್ ಕಾರ್ಯಕ್ರಮ ಏರ್ಪಡಿಸೋಣ ಎಂದು ಜೋಶಿ ಹೇಳಿದರೆ, ಬೇಡ, 90 ವರ್ಷಕ್ಕೇ ದೊಡ್ಡ ಕಾರ್ಯಕ್ರಮ ಮಾಡೋಣ' ಎಂದು ಜಗದೀಶ ಶೆಟ್ಟರ್ ಹೇಳಿದರು. ಕಣವಿ ಅವರನ್ನು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರೊಂದಿಗೆ ಹೋಲಿಕೆ ಮಾಡಿದ ಜೋಶಿ, `ಅಡ್ವಾಣಿ ತಮ್ಮ 86ರ ಇಳಿವಯಸ್ಸಿನಲ್ಲೂ ಸಂಸತ್ತಿನ ಮೊದಲ ಮಹಡಿಯನ್ನು ಲಿಫ್ಟ್‌ನ ಸಹಾಯವಿಲ್ಲದೇ ಏರುತ್ತಾರೆ' ಎಂದರು.

ಆಗ ಮಾತನಾಡಿದ ಶಾಂತಾದೇವಿ ಕಣವಿ, `ಎಲ್ಲ ಕಚೇರಿಗಳಲ್ಲೂ ಲಿಫ್ಟ್‌ಗಳನ್ನು ತೆಗೆಯಬೇಕು. ಅಂದಾಗಲೇ ಎಲ್ಲರ ಆರೋಗ್ಯ ಸುಧಾರಿಸುತ್ತದೆ' ಎಂದು ಸಲಹೆ ನೀಡಿದರು. ಇಡೀ ದಿನ ಕವಿಗಳು, ಸಾಹಿತಿಗಳು ಕಣವಿ ಅವರ ಮನೆಗೆ ತೆರಳಿ ಶುಭ ಹಾರೈಸಿದರು.
ಸಂಜೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಣವಿ ಅವರು ಬರೆದ ಕಾವ್ಯಗಳನ್ನು ವಾಚಿಸಲಾಯಿತು.

`ಅವಸರದ ನಿರ್ಣಯದಿಂದ ಆಪತ್ತು': `ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ, ಹಲವು ಘೋಷಣೆಗಳನ್ನು ಹೊರಡಿಸಿದೆ. ಇದರಿಂದ ಸರ್ಕಾರ ಸಂಕಷ್ಟಕ್ಕೆ ಗುರಿಯಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಎಚ್ಚರಿಕೆ ನೀಡಿದರು.

ಡಾ.ಚನ್ನವೀರ ಕಣವಿ ಅವರಿಗೆ 85ನೇ ಜನ್ಮದಿನದ ಶುಭಾಶಯ ಕೋರಿದ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪಿರಿಯಾಪಟ್ಟಣ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಪಿಎಲ್ ಕಾರ್ಡುದಾರರಿಗೆ ರೂಪಾಯಿಗೆ ಕೆ.ಜಿ. ಅಕ್ಕಿಯನ್ನು ರಾಜ್ಯ ಸರ್ಕಾರ ದಿಢೀರ್ ಘೋಷಣೆ ಮಾಡಿತು. ಆದರೆ, ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಬೇಕಾದ ಅಕ್ಕಿ ದಾಸ್ತಾನು ಇರಲಿಲ್ಲ. ಇದೀಗ ಯೋಜನೆ ಜಾರಿಯನ್ನು ಜುಲೈ 10ಕ್ಕೆ ಮುಂದೂಡಿದ್ದಾರೆ. ಇಂತಹ ಅವಸರದ ನಿರ್ಧಾರ ಏಕೆ ಬೇಕಿತ್ತು' ಎಂದು ಪ್ರಶ್ನಿಸಿದರು.

ಕುಲಸಚಿವರ ಬದಲಾವಣೆ ಸಲ್ಲದು: ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನೇಮಕವಾದ ವಿವಿಧ ವಿಶ್ವವಿದ್ಯಾಲಯಗಳ ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರನ್ನು ತೆಗೆದುಹಾಕುವ ಸರ್ಕಾರದ ನಿರ್ಧಾರ ಅತ್ಯಂತ ಖಂಡನೀಯ. ಶಿಕ್ಷಣ ಕ್ಷೇತ್ರದಲ್ಲಿಯೂ ರಾಜಕೀಯ ಮಾಡುವ ಕ್ರಮ ಸಲ್ಲದು. ನಮ್ಮ ಸರ್ಕಾರ ಕುಲಸಚಿವರು, ಸಿಂಡಿಕೇಟ್ ಸದಸ್ಯರನ್ನು ಅವರ ಅಧಿಕಾರವಧಿ ಮುಗಿಯುವ ಮೊದಲೇ ಬದಲಾಯಿಸಿರಲಿಲ್ಲ' ಎಂದರು.

ಅಧ್ಯಕ್ಷರಿಗೆ ವರದಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಸಂಬಂಧ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರಿಗೆ ಕಳಿಸಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT