ದೇಶದಲ್ಲಿ ಯಾವ ಧರ್ಮದ ಜನರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ ಎನ್ನುವ ವಿವರಗಳನ್ನು ಒಳಗೊಂಡ ವರದಿಯೊಂದು ಮಾಧ್ಯಮಗಳಲ್ಲಿ ಹಠಾತ್ತಾಗಿ ಪ್ರಕಟವಾಗಿದೆ. 2011ರ ಜನಗಣತಿಯನ್ನು ಆಧರಿಸಿದ ಈ ವರದಿಯಲ್ಲಿ ಹೊಸತೇನೂ ಇಲ್ಲ. ಇಲ್ಲಿರುವ ವಿವರಗಳು ಹಿಂದೆಯೂ ಅಲ್ಲಲ್ಲಿ ಪ್ರಕಟವಾಗಿದ್ದವು.

ಆದರೆ ಈಗ ‘ಧರ್ಮಾಧಾರಿತ ಜನವಿಭಜನೆ’ಯ ಲೆಕ್ಕಾಚಾರ ಹೊಚ್ಚಹೊಸದು ಎನ್ನುವಂತೆ ಕೇಂದ್ರ ಸರ್ಕಾರ ಏಕೆ ಬಿಡುಗಡೆ ಮಾಡಿದೆ? ಇದರ ಉದ್ದೇಶ ಏನು? ಇದರಿಂದ ಏನು ಉಪಯೋಗ? ಏನಾದರೂ ಹೊಸ ನೀತಿಗಳನ್ನು ಸರ್ಕಾರ ಪ್ರಕಟಿಸಲಿದೆಯೇ ಎಂಬಂತಹ ಪ್ರಶ್ನೆಗಳು ಏಳುವುದು ಸಹಜ. ಹಾಗೆಯೇ ಬಿಹಾರದಲ್ಲಿ ಸನ್ನಿಹಿತವಾಗಿರುವ ವಿಧಾನಸಭಾ ಚುನಾವಣೆ ಇದಕ್ಕೆ ಕಾರಣವೆ? ಎಂಬ ಶಂಕೆ ಮೂಡುವುದೂ ಸಹಜ.

ಅಲ್ಲಿ ಜೆಡಿಯು ಮುಖಂಡರು, ಕೇಂದ್ರ ಸರ್ಕಾರ ನಡೆಸಿದ ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಜಾತಿ ಗಣತಿ ವಿವರಗಳನ್ನು ಪ್ರಕಟಿಸಲು ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಎನ್ನುವಂತೆ, ಧರ್ಮಾಧಾರಿತ ಜನಸಂಖ್ಯಾ ವಿವರಗಳನ್ನು ತೇಲಿಬಿಡಲಾಗಿದೆಯೆ? ದೇಶದಲ್ಲಿ ಯಾವ ಧರ್ಮದ ಜನಸಂಖ್ಯೆ ಎಷ್ಟಿದೆ ಎಂದು ಬಿಂಬಿಸುವುದರ ಮೂಲಕ, ತಮ್ಮ ‘ಧರ್ಮಪ್ರೇರಿತ ರಾಜಕೀಯ’ಕ್ಕೆ ಬಹುಸಂಖ್ಯಾತರ ಮಾನಸಿಕ ಬೆಂಬಲ ಪಡೆಯುವ ತಂತ್ರಗಾರಿಕೆಯನ್ನು ಆಡಳಿತಾರೂಢರು ನಡೆಸಿರುವುದು ಇಲ್ಲಿ ಎದ್ದು ಕಾಣುತ್ತಿದೆ. ಅದಕ್ಕೆ ತಕ್ಕಂತೆ ಈ ವರದಿ ಪ್ರಕಟವಾದ ಬಳಿಕ ಸಮೂಹ ಮಾಧ್ಯಮಗಳಲ್ಲಿ ಜನರ ದಿಕ್ಕು ತಪ್ಪಿಸುವ ಚರ್ಚೆಗಳೂ ಆರಂಭವಾಗಿವೆ.

ಜೀವನಾವಶ್ಯಕ ವಸ್ತುಗಳ ಬೆಲೆ ಒಂದೇ ಸಮನೆ ಏರುತ್ತಿರುವುದು, ಷೇರುಪೇಟೆಯಲ್ಲಿ ವಿಪರೀತ ಏರಿಳಿತ, ಮೀಸಲಾತಿಗಾಗಿ ಹೋರಾಟ ಆರಂಭವಾಗಿರುವುದು- ಹೀಗೆ ಜನಜೀವನಕ್ಕೆ ನೇರ ಸಂಬಂಧವಿರುವ ಸಂಗತಿಗಳನ್ನು ಚರ್ಚೆಯ ವ್ಯಾಪ್ತಿಯಿಂದ ಹೊರಗಿಡುವ ಪ್ರಯತ್ನ ಇಲ್ಲಿದೆಯೇ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. 2001ರಲ್ಲಿ 82.75 ಕೋಟಿ ಇದ್ದ ಹಿಂದೂ ಧರ್ಮೀಯರ ಜನಸಂಖ್ಯೆ, 2011ರಲ್ಲಿ 96.62 ಕೋಟಿಗೆ ಏರಿಕೆಯಾಗಿದೆ. 2001ರಲ್ಲಿ 13.81 ಕೋಟಿ ಇದ್ದ ಮುಸ್ಲಿಮರ ಜನಸಂಖ್ಯೆ 2011ರಲ್ಲಿ 17.22 ಕೋಟಿಗೆ ಏರಿಕೆಯಾಗಿದೆ. ಹಿಂದೂಗಳ ಜನಸಂಖ್ಯೆಯ ಏರಿಕೆಯ ಶೇಕಡಾವಾರು ಪ್ರಮಾಣದಲ್ಲಿ 0.66ರಷ್ಟು ಇಳಿಕೆ ಕಂಡಿದ್ದರೆ, ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇಕಡ 0.79ರಷ್ಟಿದೆ.

ಏರಿಕೆಯಲ್ಲಿನ ಈ ಅಲ್ಪವ್ಯತ್ಯಾಸವನ್ನೇ ದೊಡ್ಡದಾಗಿ ಬಿಂಬಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಕಳೆದ ಹತ್ತು ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆಯ ಪ್ರಮಾಣವೂ ಕಡಿಮೆಯಾಗಿದೆ. 2001ರ ಗಣತಿ ವೇಳೆ ಮುಸ್ಲಿಮರ ಜನಸಂಖ್ಯೆಯ ಏರಿಕೆ ಪ್ರಮಾಣ ಶೇ 29.52ರಷ್ಟು ಇದ್ದುದು, 2011ರಲ್ಲಿ ಶೇ 24.69ಕ್ಕೆ ಕುಸಿದಿದೆ. ‘ಮುಸ್ಲಿಮರ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದೆ’ ಎಂದು ಹಿಂದೂ ಕಟ್ಟಾವಾದಿಗಳು ನಡೆಸುವ ಪ್ರಚಾರಕ್ಕೆ ಈ ಅಂಕಿ ಅಂಶಗಳು ತದ್ವಿರುದ್ಧವಾಗಿವೆ. ಸರಿಯಾದ ಸಂದರ್ಭದಲ್ಲಿಟ್ಟು ನೋಡದಿದ್ದಲ್ಲಿ ತಪ್ಪು ವ್ಯಾಖ್ಯಾನಗಳಿಗೆ ಕಾರಣವಾಗಬಹುದಾದ ಈ ವಿಚಾರದ ಬಗ್ಗೆ ಎಚ್ಚರ ಅಗತ್ಯ.

ಹಾಗೆ ನೋಡಿದರೆ, ಈ ಜನಗಣತಿ ಪಟ್ಟಿಯಲ್ಲಿ ಹೆಚ್ಚು ಆತಂಕದಿಂದ ಚರ್ಚಿಸಬೇಕಾದ ವಿಷಯಗಳು ಬೇರೆಯೇ ಇವೆ. ಅದರಲ್ಲಿ ಮುಖ್ಯವಾದದ್ದು ಲಿಂಗಾನುಪಾತದ ವ್ಯತ್ಯಾಸ. 96.62 ಕೋಟಿ ಹಿಂದೂಗಳಲ್ಲಿ ಗಂಡಸರ ಸಂಖ್ಯೆ 49.83 ಕೋಟಿ ಇದ್ದರೆ, ಮಹಿಳೆಯರ ಸಂಖ್ಯೆ 46.79 ಕೋಟಿಯಷ್ಟೇ ಇದೆ. ಕಳೆದ ದಶಕಕ್ಕೆ ಹೋಲಿಸಿದರೆ ಈ ಲಿಂಗಾನುಪಾತದಲ್ಲಿ ತೀವ್ರ ಅಂತರ ಕಂಡುಬರುತ್ತಿದೆ.

ಮುಸ್ಲಿಮರಲ್ಲಿ ಗಂಡಸರ ಮತ್ತು ಹೆಂಗಸರ ಸಂಖ್ಯೆಯ ನಡುವಣ ಅಂತರ 43 ಲಕ್ಷದಷ್ಟು ಮಾತ್ರವಿದ್ದು, ಕಳೆದ ದಶಕದ ಅಂಕಿ ಅಂಶಗಳಿಗೆ ಹೋಲಿಸಿದರೆ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕ್ರೈಸ್ತರಲ್ಲಿ ಮಾತ್ರ ಮಹಿಳೆಯರ ಸಂಖ್ಯೆ (1.40 ಕೋಟಿ) ಪುರುಷರ ಸಂಖ್ಯೆಗಿಂತ (1.37 ಕೋಟಿ) ಹೆಚ್ಚಿದೆ. ಹಿಂದೂಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಇಷ್ಟೊಂದು ತೀವ್ರವಾಗಿ ಕುಸಿಯುವುದಕ್ಕೆ ಕಾರಣಗಳೇನಿರಬಹುದು? ಹೆಚ್ಚುತ್ತಿರುವ ಭ್ರೂಣಹತ್ಯೆಯೆ? ಫಲವತ್ತತೆಯ ಪ್ರಮಾಣ ಕಡಿಮೆಯಾಗುತ್ತಿದೆಯೆ? ಕುಟುಂಬಜೀವನದ ಸ್ವರೂಪದಲ್ಲಿ ವಿಪರೀತ ವ್ಯತ್ಯಾಸಗಳು ಉಂಟಾಗುತ್ತಿವೆಯೆ? ಈ ನಿಟ್ಟಿನಲ್ಲಿ ಹೆಚ್ಚಿನ ಬೆಳಕು ಚೆಲ್ಲಬೇಕಾದ ಅಗತ್ಯವಿದೆ.

ಆಧುನಿಕ ಬದುಕಿನ ಒತ್ತಡಗಳನ್ನು ಗಮನಿಸಿದರೆ, ಈ ಸಮಸ್ಯೆಗಳು ಎಲ್ಲ ಧರ್ಮಗಳಲ್ಲೂ ಇವೆ. ನಗರ ಪ್ರದೇಶದಲ್ಲಿ ಮನುಷ್ಯರ ದೈಹಿಕ ಫಲವತ್ತತೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂಬ ಕಳವಳಕಾರಿ ವರದಿಗಳು ಹಿಂದೆಯೂ ಪ್ರಕಟವಾಗಿದ್ದವು. ಜನಸಂಖ್ಯೆಯ ವಿವರಗಳನ್ನು ಧರ್ಮಗಳ ಬಣ್ಣದ ಕನ್ನಡಕದಲ್ಲಿ ನೋಡಿ ವಿಶ್ಲೇಷಿಸುವುದಕ್ಕಿಂತ, ಮನುಷ್ಯಸಹಜ ಪಾರದರ್ಶಕ ನೋಟದ ಮೂಲಕ ಗಮನಿಸಬೇಕಾದ ಅಗತ್ಯವಿದೆ. ಎಲ್ಲವನ್ನೂ ರಾಜಕೀಕರಣಗೊಳಿಸುವ ಪ್ರವೃತ್ತಿ, ದೇಶದ ಯಾವ ಸಮಸ್ಯೆಗಳನ್ನೂ ಬಗೆಹರಿಸುವುದಿಲ್ಲ. ಬದಲಾಗಿ ಆರೋಗ್ಯಕರ ಸಮಾಜಸೃಷ್ಟಿಗೆ ಇನ್ನಷ್ಟು ಅಡ್ಡಿ, ಆತಂಕಗಳನ್ನು ಒಡ್ಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.