ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಮರುಳೋ ‘ಜೆಎಲ್‌ಎಫ್’ ಮರುಳೋ...

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಜೈಪುರ: ವಿಶ್ವದ ಬಹುದೊಡ್ಡ ಸಾಹಿತ್ಯ ಪ್ರದರ್ಶನ ! ಇದು ‘ಜೈಪುರ ಸಾಹಿತ್ಯ ಸಮ್ಮೇಳನ’ದ (ಜೆಎಲ್‌ಎಫ್‌) ಬಗ್ಗೆ ಸಂಘ­ಟಕರ ಬಣ್ಣನೆ. ಈ ಮಾತನ್ನು ನಿಜ­ಗೊ­ಳಿಸುವ ದೃಶ್ಯಗಳು ಉತ್ಸವದ ಕೊನೆಯ ಎರಡು ದಿನಗಳಲ್ಲಿ ಕಾಣಿಸಿದವು.

‘ಜೆಎಲ್‌ಎಫ್‌’ನ ಕೊನೆಯ ದಿನ­ವಾದ ಭಾನುವಾರ ಬೆಳಗ್ಗಿನಿಂದಲೇ ಡಿಗ್ಗಿ ಪ್ಯಾಲೆಸ್‌ ಆವರಣದಲ್ಲಿ ಜನ ಜಮಾ­ಯಿಸಿ­ದ್ದರು. ಗೋಷ್ಠಿಗಳು ನಡೆಯುವ ಎಲ್ಲ ಆರು ವೇದಿಕೆಗಳೂ ತುಂಬಿ ತುಳು­ಕು­ವಷ್ಟು ಭರ್ತಿ. ಸಭಾಂಗಣ­ದಿಂದ ಹೊರಗೆ ಬಂದು ನೋಡಿದರೆ ಎತ್ತ ಹೋಗಬೇಕು ಎಂದು ತೋಚದಷ್ಟು ಜನರ ಗುಂಪು. ಹುಲ್ಲು­ಹಾಸು, ಮಳಿಗೆಗಳ ತುಂಬ ಸಾಹಿತ್ಯ­ಪ್ರಿಯರ ಗುಂಪು. ಸಾಹಿತ್ಯ­ಪ್ರಿಯರ ಜೊತೆಗೆ ಶಾಲಾ-–ಕಾಲೇಜು ವಿದ್ಯಾರ್ಥಿಗಳು ಹಾಗೂ ವಾರಾಂತ್ಯದ ರಜೆಯ ತರುಣ ತರುಣಿಯರು ಸಾಹಿತ್ಯ ಉತ್ಸವದತ್ತ ಆಕರ್ಷಿತರಾದುದು ‘ಜೆಎಲ್‌ಎಫ್‌’ಗೆ ಜಾತ್ರೆಯ ಕಳೆ ತಂದು­ಕೊಟ್ಟಿತ್ತು. ಕೊರಳು, ಮುಂಗೈಗೆ ಹೂವಿನ ದಂಡೆಗಳನ್ನು ಸುತ್ತಿಕೊಂಡು ಸಂಭ್ರಮಿಸುತ್ತಿದ್ದವರೂ ಅಲ್ಲಿದ್ದರು.

ಇದು ಭಾನುವಾರದ ವಿಶೇಷವೇನೂ ಅಲ್ಲ. ಶನಿವಾರವೂ ಜನಸಾಗರ ನೆರೆ­ದಿತ್ತು. ಡಿಗ್ಗಿ ಪ್ಯಾಲೆಸ್‌ಗೆ ಪ್ರವೇಶ ಕಲ್ಪಿ­ಸುವ ಮುಖ್ಯರಸ್ತೆಯಲ್ಲೇ ಜನರ ಗುಂಪು ಸಂಜೆಯವರೆಗೂ ಕರಗಿರಲಿಲ್ಲ. ಗೋಷ್ಠಿ ಯಾವುದೇ ಇರಲಿ, ‘ಹೌಸ್‌ಫುಲ್‌’ ಖಚಿತ ಎನ್ನುವ ಪರಿಸ್ಥಿತಿ. ನಿರೀಕ್ಷೆಗೂ ಮೀರಿದ ಜನರ ಆಗಮನದಿಂದಾಗಿ, ಪ್ರವೇಶ­ದ್ವಾರಗಳನ್ನು ಸ್ವಲ್ಪಕಾಲ ಮುಚ್ಚುವ ಪರಿಸ್ಥಿತಿಯೂ ತಲೆದೋರಿತು.
ಡಿಗ್ಗಿ ಪ್ಯಾಲೆಸ್‌ ಪ್ರವೇಶಿಸಿದ ಎಲ್ಲ­ರಿಗೂ ಗೋಷ್ಠಿಗಳನ್ನು ಆಸ್ವಾದಿಸುವ ಅವ­ಕಾಶ ದೊರೆಯಲಿಲ್ಲ. ಅವರಲ್ಲಿ ಬಹುತೇಕರು ಪುಸ್ತಕಗಳು, ರಾಜಸ್ತಾನದ ವಿಶೇಷ ವಸ್ತು–ವಸ್ತ್ರಗಳ ಖರೀದಿಯಲ್ಲಿ ತೊಡಗಿದರು.

‘ಗ್ರಾಂಟಾ’ದಲ್ಲಿ ‘ಘಾಚರ್‌ ಘೋಚರ್‌’
‘ಜೆಎಲ್‌ಎಫ್‌’ನ ಕೊನೆಯ ದಿನ ಲಂಡನ್‌­ನಿಂದ ಪ್ರಕಟಗೊಳ್ಳುವ ಅಂತರರಾಷ್ಟ್ರೀಯ ಖ್ಯಾತಿಯ ಸಾಹಿತ್ಯ ನಿಯತಕಾಲಿಕೆ ‘ಗ್ರಾಂಟಾ’ದ ವಿಶೇಷ ಸಂಚಿಕೆ ಬಿಡುಗಡೆಯಾಯಿತು. ‘ಭಾರತೀಯ ವಿಶೇಷ’ ಸಂಚಿಕೆಯಾಗಿ ರೂಪು­ಗೊಂಡಿ­ರುವ ಇದರಲ್ಲಿ ಕನ್ನಡದ ಕಥೆಗಾರ ವಿವೇಕ ಶಾನಭಾಗ ಅವರ ‘ಘಾಚರ್‌ ಘೋಚರ್‌’ನ ಒಂದು ಅಧ್ಯಾಯ ಸೇರ್ಪಡೆಯಾಗಿರುವುದು (ಇಂಗ್ಲಿಷ್‌ ಅನುವಾದ: ಶ್ರೀನಾಥ್‌ ಪೆರೂರು) ವಿಶೇಷ.

‘ಘಾಚರ್‌ ಘೋಚರ್‌’ ಮೂಲಕ ಕನ್ನಡದ ಬರವಣಿಗೆಯೊಂದು ಮೊದಲ ಬಾರಿಗೆ ‘ಗ್ರಾಂಟಾ’ದಲ್ಲಿ ಸ್ಥಾನ ಪಡೆದಿದೆ. ಸಂಚಿಕೆಯಲ್ಲಿನ ಬರಹಗಳಲ್ಲಿ ವಿವೇಕರ ಕಥೆ ಹಾಗೂ ಹಿಂದಿಯ ವಿನೋದ ಕುಮಾರ ಶುಕ್ಲಾ ಅವರ ಕವಿತೆಯೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಬರಹಗಳು ಇಂಗ್ಲಿಷ್‌ ಲೇಖಕರವೇ ಆಗಿವೆ. ಇದೇ ಸಂಚಿಕೆಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ರಘು ಕಾರ್ನಾಡರ ಬರಹವೂ ಸೇರ್ಪಡೆಯಾಗಿದೆ.

ನೈಪಾಲ್‌–ಕಲಾಂ ಮೋಡಿ: ವಿ.ಎಸ್‌. ನೈಪಾಲ್‌ ಅವರು ತಮ್ಮ ಬರವಣಿಗೆಯ ನೆನಪು­ಗಳನ್ನು ಮೆಲುಕು ಹಾಕಿದ ಕಾರ್ಯ­ಕ್ರಮದಲ್ಲಂತೂ ಕುಳಿತವರಿಗಿಂತ ನಿಂತ­ವರೇ ಹೆಚ್ಚಾಗಿದ್ದರು. ನೈಪಾಲ್‌­ರನ್ನು ಕಣ್ತುಂಬಿಕೊಳ್ಳಲಿಕ್ಕಾಗಿ ಬೆಳಗಿನ ಗೋಷ್ಠಿಗೆ ಬಂದು ಕುರ್ಚಿ ಹಿಡಿದವರು ಮಧ್ಯಾಹ್ನ­ವಾದರೂ ಅಲ್ಲಿಂದ ಎದ್ದಿರಲಿಲ್ಲ. 

ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಎರಡು ಗೋಷ್ಠಿ­ಗಳಿಗೂ ದೊಡ್ಡವರು ಹಾಗೂ ಶಾಲಾ­ಮಕ್ಕಳ ನೂಕುನುಗ್ಗಲು. ಕಲಾಂ ಮಾಸ್ತರ ಪಾಠಕ್ಕೆ ಚಪ್ಪಾಳೆಗಳ ಸುರಿ­ಮಳೆ. ‘ಭಾರತೀಯ ಕ್ರಿಕೆಟ್‌’ ಕುರಿತ ಗೋಷ್ಠಿ­ಯಲ್ಲಿ ತರುಣ ತರುಣಿಯರದೇ ಮೇಲುಗೈ. ಈ ಗೋಷ್ಠಿಯನ್ನು ಕಳೆಗಟ್ಟಿಸಿ­ದ­ವ­ರಲ್ಲಿ ಶಶಿ ತರೂರ್‌ ಅವರು ಸೇರಿದ್ದರು.

ಲೇಖಕರೊಂದಿಗೆ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುವ ಹಾಗೂ ಪುಸ್ತಕಗಳಿಗೆ ಬರಹಗಾರರ ಹಸ್ತಾಕ್ಷರಗಳನ್ನು ತೆಗೆದುಕೊಳ್ಳುವವರ ಸಂಖ್ಯೆಯೂ ದೊಡ್ಡ­ದಿತ್ತು. ನೈಪಾಲ್‌ ಅವರು ಕೂಡ ಹಸ್ತಾ­ಕ್ಷರ ಹಾಕುವ ಸಂಭ್ರಮದಲ್ಲಿ ಕೆಲಕಾಲ ಪಾಲ್ಗೊಂಡಿದ್ದರು. ಕಾವ್ಯವಾಚನದ ‘ಪೊಯೆಟ್ರಿ ಅವರ್‌’ ಗೋಷ್ಠಿಗೂ ಜನ ಮುಗಿಬಿದ್ದುದು ವಿಶೇಷ. ಸಹೃದಯರ ಚಪ್ಪಾಳೆಗಳ ಸದ್ದು ಕವಿಗಳನ್ನು ಉತ್ತೇಜಿಸುವಂತಿತ್ತು.

ಚುಂಬಕ ‘ಜೆಎಲ್‌ಎಫ್‌’: ‘ಶಿವ’ನ ಕುರಿತ ಕೃತಿಗಳ ಖ್ಯಾತಿಯ ಅಮಿಶ್‌ ತ್ರಿಪಾಠಿ ಅವರಿಗೆ ಉತ್ಸವ ಸಾಕಷ್ಟು ಖುಷಿ ಕೊಟ್ಟಿದೆ. ‘ಇದು ಸಾಹಿತ್ಯದ ನಿಜವಾದ ಉತ್ಸವ. ಇದನ್ನು ನಾನು ತುಂಬಾ ಪ್ರೀತಿಸುತ್ತೇನೆ’ ಎನ್ನುವ ಉದ್ಗಾರ ಅವರದು.

ಲಂಡನ್‌ನ ಸಾರಾ ಅವರಿಗೆ ‘ಜೆಎಲ್‌ಎಫ್‌’ ಒಂದು ಅವಿಸ್ಮರಣೀಯ ಅನುಭವದಂತೆ ಕಾಣಿಸಿದೆ. ‘ವಿಶ್ವದ ಎಲ್ಲ ಭಾಗಗಳ ಜನ ಇಲ್ಲಿದ್ದಾರೆ. ಬೇರೆ ಬೇರೆ ದೇಶಗಳ ಸಾಹಿತ್ಯಪ್ರಿಯರು ಒಂದೆಡೆ ಸೇರುವ ವಿಶಿಷ್ಟ ವೇದಿಕೆ ಇದು’ ಎನ್ನುವ ಬೆರಗು ಅವರದು. ಮಹಾಭಾರತ ಓದಿ­ಕೊಂಡಿರುವ ಅವರಿಗೆ, ‘ಮಹಾ­ಭಾರತ­ದಲ್ಲಿನ ಧರ್ಮ­ಸೂಕ್ಷ್ಮಗಳು’ ಗೋಷ್ಠಿ ತನ್ನ ತಿಳಿವಳಿಕೆಯನ್ನು ವಿಸ್ತರಿಸಿದೆ ಅನ್ನಿಸಿದೆ. ಚರ್ಚೆಗಳನ್ನು ಕೇಳುವುದಷ್ಟೇ ಅಲ್ಲ, ತಮಗಿಷ್ಟ­ವಾದ ಲೇಖಕರ ರೇಖಾಚಿತ್ರ­ಗಳನ್ನು ಅವರು ತಮ್ಮ ಡೈರಿಯಲ್ಲಿ ಬಿಡಿಸಿಕೊಂಡಿದ್ದಾರೆ.

ಜೈಪುರದ ನಿವಾಸಿ ಮಧುಕರ್‌ ಗುಪ್ತ ಅವರಿಗೆ ‘ಜೆಎಲ್‌ಎಫ್‌’ ಯುವಜನ­ರನ್ನು ಸೆಳೆಯುತ್ತಿರುವ ಬಗ್ಗೆ ಖುಷಿಯಿದೆ. ಇದೇ ವೇಳೆಗೆ ಕೆಲವು ಜನರ ಹಿತಾಸಕ್ತಿಗೆ ವೇದಿಕೆಯಾಗಿ ಈ ಸಾಹಿತ್ಯ ಉತ್ಸವ ಬಳಕೆಯಾಗುತ್ತಿದೆ ಎನ್ನುವ ಅನುಮಾನ ಅವರಿಗಿದೆ.

ಕ್ಷೀಣಿಸುತ್ತಿರುವ ಸಂವಾದ: ‘ಜೆಎಲ್‌ಎಫ್‌’ ಜನಜಂಗುಳಿ ಬಗ್ಗೆಯೂ ಕೆಲವರಿಗೆ ಅಸಮಾಧಾ­ನವಿದೆ. 2006­ರಿಂ­ದಲೂ ತಪ್ಪದೆ ಉತ್ಸವಗಳಲ್ಲಿ ಭಾಗ­ವಹಿಸಿರುವ ಸ್ಥಳೀಯ ನಿವಾಸಿ ಅನುಪಮಾ ಗೋಖಲೆ ಅವರಿಗೆ– ‘ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದಾಗ ಲೇಖಕ­ರೊಂದಿಗೆ ನೇರ ಸಂವಾದ ಸಾಧ್ಯ­ವಾಗುತ್ತಿತ್ತು. ಈಗದು ಸಾಧ್ಯವಾಗುತ್ತಿಲ್ಲ. ಅನೇಕ ಸಂದರ್ಭ­ಗಳಲ್ಲಿ ಪ್ರೇಕ್ಷಕರ ಪಾತ್ರವೇ ಗೌಣವಾಗಿಬಿಡುತ್ತಿದೆ’ ಎನ್ನುವ ಅಸಮಾಧಾನ ಇದೆ.

ಉತ್ಸವವೊಂದು ಜನಪ್ರಿಯತೆ ಗಳಿಸಿದ ನಂತರ ಇಂತಹ ತೊಡಕುಗಳನ್ನು ಎದುರಿಸಬೇಕಾದುದು ಅನಿವಾರ್ಯ. ಜನಪ್ರಿಯತೆ ಉಳಿಸಿಕೊಂಡೂ ಗುಣ­ಮಟ್ಟವನ್ನು ಕಾಪಾಡಿಕೊಳ್ಳುವ ಸವಾಲನ್ನು ಮುಂದಿನ ವರ್ಷಗಳಲ್ಲಿ ‘ಜೆಎಲ್‌ಎಫ್‌’ ಎದುರಿಸಬೇಕಾಗಿದೆ ಎಂದು ಅನುಪಮಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT