ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತೀಕರಣ, ಖಾಸಗೀಕರಣದಿಂದ ಸರ್ಕಾರ ನಿರ್ವೀರ್ಯ

ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಸಾಹಿತಿ ಬರಗೂರು ರಾಮಚಂದ್ರಪ್ಪ ಆಕ್ರೋಶ
Last Updated 4 ಅಕ್ಟೋಬರ್ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗತೀಕರಣ ಮತ್ತು ಖಾಸಗೀಕರಣ ಸರ್ಕಾರವನ್ನು ನಿರ್ವೀರ್ಯಗೊಳಿಸುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಭಾನುವಾರ ನಗರದಲ್ಲಿ ಆಯೋಜಿಸಿದ್ದ 515 ಭೂಸೇನಾ ಕಾರ್ಯಾಗಾರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ 22ನೇ ವಾರ್ಷಿಕೋತ್ಸವ, ಕನ್ನಡ ಕಲಿಕಾ ತರಗತಿ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹಿಂದೆ ಬಂಡವಾಳಶಾಹಿಗಳು ಸರ್ಕಾರದ ಮುಂದೆ ಮಂಡಿಯೂರುತ್ತಿದ್ದವು. ಆದರೆ ಇಂದು ಅದು ಬದಲಾಗಿದೆ. ಜಾಗತೀಕರಣ, ಖಾಸಗೀಕರಣದ ಈ ಸಂದರ್ಭದಲ್ಲಿ ಸರ್ಕಾರಗಳು ಬಂಡವಾಳಶಾಹಿಗಳ ಎದುರು ಕೈಮುಗಿದು ನೆಲ, ಜಲ ಕೊಡುತ್ತೇವೆ ಎಂದು ಅಂಗಲಾಚುತ್ತಿವೆ. ರಾಜಕೀಯ ನಾಯಕತ್ವವು ಆರ್ಥಿಕ ನಾಯಕತ್ವದ ಎದುರು ಮಂಡಿಯೂರಿ ಕುಳಿತು ಸಂಪೂರ್ಣವಾಗಿ ನಿಸ್ತೇಜವಾಗಿದೆ’ ಎಂದರು.

‘ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಬಂಡವಾಳಶಾಹಿಗಳಿಗೆ ಹೇಳುವ ಧೈರ್ಯ ಇಂದು ಯಾವ ಸರ್ಕಾರಗಳಿಗೂ ಇಲ್ಲ. ಎಲ್ಲವೂ ಬಂಡವಾಳಶಾಹಿಗಳ ನಿಯಂತ್ರಣದಲ್ಲಿದೆ’ ಎಂದು ವಿವರಿಸಿದರು. ‘ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಎನ್‌ಜಿಇಎಫ್‌, ಮೈಸೂರು ಲ್ಯಾಂಪ್ಸ್‌, ಎಚ್‌ಎಂಟಿ ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿ ಅನೇಕ ಕನ್ನಡಿಗರನ್ನು ಬೀದಿಗೆ ತಳ್ಳಲಾಗಿದೆ’ ಎಂದು ಆರೋಪಿಸಿದರು.

‘ರಾಜ್ಯದ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಶೇ 100ರಷ್ಟು ಮತ್ತು ಕೇಂದ್ರದ ಉದ್ದಿಮೆಗಳಲ್ಲಿ ಶೇ 60ರಿಂದ 80ರಷ್ಟು ಉದ್ಯೋಗಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಮಹಿಷಿ ವರದಿ ಹೇಳಿತ್ತು. ಈ ಸಂಬಂಧ 1991ರಲ್ಲಿ ಸರ್ಕಾರ ಅಧಿಕೃತ ಆದೇಶ ಕೂಡ ಹೊರಡಿಸಿತ್ತು. ಆದರೆ ಕೈಗಾರೀಕರಣದ ಸಂದರ್ಭದಲ್ಲಿ ಆ ವರದಿ ನೀಡಲಾಗಿತ್ತು. ಇಂದು ನಾವು ಜಾಗತೀಕರಣದಲ್ಲಿ ಇದ್ದೇವೆ’ ಎಂದರು.

ಹೊಸ ರಾಷ್ಟ್ರೀಯ ಉದ್ಯೋಗ ನೀತಿ
‘ದೇಶದಲ್ಲಿ ಹೊಸ ರಾಷ್ಟ್ರೀಯ ಉದ್ಯೋಗ ನೀತಿ ಜಾರಿಗೆ ಬರಬೇಕು. ಸ್ಥಳೀಯರಿಗೆ ಉದ್ಯೋಗಗಳಲ್ಲಿ ಆದ್ಯತೆ ಕೊಡಲು ನೀತಿ ರೂಪಿಸಬೇಕು. ಬೇಕಾದರೆ ಅರ್ಹತೆಯ ಆಧಾರದ ಮೇಲೆಯೇ ಅವಕಾಶ ಕೊಡಲಿ’ ಎಂದು ಆಗ್ರಹಿಸಿದರು.

‘ದೇಶದ ಎಲ್ಲ ರಾಜ್ಯಗಳು, ಅಲ್ಲಿನ ಭಾಷಿಕ ಸಂಘಟನೆಗಳು ಸೇರಿ ಕೇಂದ್ರದ ಮೇಲೆ ಒತ್ತಡ ಹೇರಿದರೆ ಇದು ಸಾಧ್ಯವಾಗಬಹುದು. ಆದರೆ ನಮ್ಮಲ್ಲೆ ಪರಸ್ಪರ ಕಿತ್ತಾಡುತ್ತಿರುವುದರಿಂದ ಇದು ಅಷ್ಟು ಸುಲಭವಾಗಿ ಈಡೇರುವ ಕೆಲಸ ಅಲ್ಲ’ ಎಂದು ಹೇಳಿದರು.

‘ಕನ್ನಡಿಗರನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಭಾಷೆ, ಬದುಕನ್ನು ಒಟ್ಟಾಗಿ ನೋಡಬೇಕು. ಉದ್ಯೋಗದ ಸಾಕಷ್ಟು ಹೊಸ ಸಾಧ್ಯತೆಗಳು ನಮ್ಮೆದುರಿಗಿವೆ. ಅವುಗಳಿಗೆ ಕನ್ನಡಿಗರನ್ನು ಸಿದ್ಧ ಮಾಡಬೇಕಿದೆ. ಜೊತೆಗೇ ಕನ್ನಡೇತರರಿಗೆ ಕನ್ನಡ ಕಲಿಸಬೇಕು’ ಎಂದು ಹೇಳಿದರು.

‘ಸಮಯ ಪರಿಪಾಲನೆಗೆ ಒತ್ತು ಕೊಡಿ’: ‘ಯಾವುದೇ ಸಂಘಟನೆಗಳಿರಲಿ ಸಮಯ ಪರಿಪಾಲನೆಗೆ ಒತ್ತು ಕೊಡಬೇಕು. ಜನರನ್ನು ಕಾಯಿಸಿ, ಅಗೌರವ ತೋರಿಸಬಾರದು’ ಎಂದು ಬರಗೂರು ರಾಮಚಂದ್ರಪ್ಪ ಸಲಹೆ ಮಾಡಿದರು.

ಕಾರ್ಯಕ್ರಮವನ್ನು ತಡವಾಗಿ ಶುರು ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ‘ಸಂಚಾರ ದಟ್ಟಣೆ ಸೇರಿದಂತೆ ಯಾವುದೋ ಕಾರಣ ನೀಡಿ ನಿಗದಿತ ಸಮಯಕ್ಕೆ ನಡೆಯಬೇಕಾದ ಕಾರ್ಯಕ್ರಮವನ್ನು ತಡವಾಗಿ ಶುರು ಮಾಡುವ ಪರಂಪರೆ ಒಳ್ಳೆಯದಲ್ಲ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಮನೆಯಿಂದ ಅರ್ಧಗಂಟೆ ಬೇಗ ಹೊರಡಬೇಕು’ ಎಂದು ತಿಳಿಸಿದರು.

‘ಮಾಧ್ಯಮದವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳು ಇರುತ್ತವೆ. ಅವರು ಸಮಯಕ್ಕೆ ಸರಿಯಾಗಿ ಬರುತ್ತಾರೆ. ನಿಗದಿತ ಸಮಯಕ್ಕೆ ಕಾರ್ಯಕ್ರಮ ಶುರು ಮಾಡದ ಕಾರಣ ಸಮಾರಂಭದ ನಡುವೆ ನಡೆಯಬೇಕಿದ್ದ ಪ್ರತಿಭಾ ಪುರಸ್ಕಾರ ಮೊದಲೇ ನಡೆಸುವ ಅನಿವಾರ್ಯ ಸಂದರ್ಭ ಒದಗಿ  ಬರುತ್ತಿರಲಿಲ್ಲ. ಹಾಗಾಗಿ ಎಲ್ಲ ಸಂಘಟನೆಗಳು  ಸಮಯಕ್ಕೆ ಮಹತ್ವ ಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT