ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಶಕ್ತಿಗಳು ಮುಗಿಸಿಹಾಕಿದ ಲೇಖಕ

ಅಕ್ಷರ ಗಾತ್ರ

ಬರಹಗಾರರ ಮೇಲೆ ಸಂಸ್ಕೃತಿ ರಕ್ಷಕರು ಮುಗಿಬೀಳುವುದು ಹಾಗೂ ಆ ದಾಳಿಯಿಂದ ಬರಹಗಾರ ನೈತಿಕವಾಗಿ ಮತ್ತಷ್ಟು ದೃಢಗೊಳ್ಳುವ ಉದಾಹರಣೆಗಳು ಇತಿಹಾಸದಲ್ಲಿ ಸಾಕಷ್ಟಿವೆ. ಆದರೆ, ಜಾತೀಯ ಶಕ್ತಿಗಳು ಅತ್ಯಂತ ಪ್ರಬಲವಾದಾಗ ಸಾಹಿತಿ ಮೌನವಾಗುವ ಅಥವಾ ಕಣ್ಮರೆಯಾಗುವ ಉದಾಹರಣೆಗಳೂ ಇಲ್ಲದಿಲ್ಲ. ಈ ಸಾಲಿಗೆ ಹೊಸ ಸೇರ್ಪಡೆ ತಮಿಳು ಲೇಖಕ ಪೆರುಮಾಳ್‌ ಮುರುಗನ್‌. ಅವರು ‘ಪೆರುಮಾಳ್ ಹೆಸರಿನ ಬರಹಗಾರ ತೀರಿಹೋದ’ ಎಂದು ಪ್ರಕಟಿಸಿದ್ದಾರೆ. ಆದರೆ, ಅದು ಲೇಖಕನೊಬ್ಬನ ಸಾವಷ್ಟೇ ಆಗಿರದೆ, ಈ ಹೊತ್ತಿನ ಸಾಂಸ್ಕೃತಿಕ ಹಾಗೂ ನೈತಿಕ ಸಂದರ್ಭದ ಅಧಃಪತನದ ರೂಪಕವಾಗಿದೆ.

‘‘ಪೆರುಮಾಳ್ ಮುರುಗನ್ ಎಂಬ ಹೆಸರಿನ ಬರಹಗಾರ ತೀರಿಹೋದ. ಅವನು ದೇವರಲ್ಲವಾದ್ದರಿಂದ ಮತ್ತೆ ಅವತರಿಸಿ ಬರಲಾರ. ಇಲ್ಲಿಂದಾಚೆಗೆ ಪಿ. ಮುರುಗನ್ ಎಂಬ ಹೆಸರಿನ ಶಿಕ್ಷಕ ಬದುಕುತ್ತಾನಷ್ಟೆ’’

ಕಳೆದ ವಾರ ಫೇಸ್‌ಬುಕ್‌ನಲ್ಲಿ ಈ ಅರ್ಥದ ಒಕ್ಕಣೆಯನ್ನು ತಮಿಳು ಲೇಖಕ ಪೆರುಮಾಳ್ ಮುರುಗನ್ ಬರೆದು, ತನ್ನೆಲ್ಲಾ ಸಾಹಿತ್ಯಿಕ ಚಟುವಟಿಕೆಗಳನ್ನು ನಿಲ್ಲಿಸಿಬಿಟ್ಟರು. ಸೇಲಂ ಬಳಿಯ ಸಣ್ಣ ಪಟ್ಟಣ ತಿರುಚಂಗೋಡಿನಲ್ಲಿ ಎರಡು ವಾರ ಹೊತ್ತಿ ಉರಿದ ವಿರೋಧದ ಕಿಚ್ಚು ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಸ್ಥಿರವಾದ ಕೊಡುಗೆಗಳನ್ನು ನೀಡಿದ ಬರಹಗಾರರನ್ನು ಮುಗಿಸಿಹಾಕಿತ್ತು.

ಪೆರುಮಾಳ್ ಮುರುಗನ್ ಗಂಭೀರವಾದ ಸಾಹಿತಿ. ಇಪ್ಪತ್ತೈದು ವರ್ಷಗಳ ಸಾಹಿತ್ಯಿಕ ಸೃಜನಶೀಲ ಕೆಲಸದಿಂದ ಉಪೇಕ್ಷಿಸಲಾಗದಷ್ಟು ಹೆಸರು ಮಾಡಿದ ವ್ಯಕ್ತಿತ್ವ ಅವರದ್ದು. ಸಣ್ಣಕಥೆ, ಕಾದಂಬರಿ ಹಾಗೂ ಸಂಶೋಧನಾ ಪ್ರಬಂಧಗಳ ಮೂಲಕ ಛಾಪು ಮೂಡಿಸಿದ ಅವರು ದೊಡ್ಡ ಹೆಸರು ಮಾಡಿದರು. ತಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಉತ್ತಮ ಮೇಷ್ಟರೆನಿಸಿದ್ದ ಅವರನ್ನು ಎಲ್ಲಾ ವಿದ್ಯಾರ್ಥಿಗಳು ಪ್ರೀತಿಸುತ್ತಿದ್ದರು. ಕಾಲೇಜು ಕ್ಯಾಂಪಸ್‌ನಲ್ಲಿ ಸದಾ ಅವರನ್ನು ಹತ್ತಿಪ್ಪತ್ತು ವಿದ್ಯಾರ್ಥಿಗಳು ಸುತ್ತುವರಿದು ನಿಲ್ಲುತ್ತಿದ್ದುದು ಸಾಮಾನ್ಯ ದೃಶ್ಯ.

ಪದವಿ ಮುಗಿಸಿ, ಕೆಲಸ ಗಿಟ್ಟಿಸಿ ಬೇರೆ ಬೇರೆ ಸ್ಥಳಗಳಿಗೆ ಹೋದ ಹಳೆಯ ವಿದ್ಯಾರ್ಥಿಗಳು ಈಗಲೂ ಅವರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ‘ಕೂಡು’ ಎಂಬ ಹೆಸರಿನಲ್ಲಿ ಸಾಹಿತ್ಯಿಕ ಸಂವಾದ ನಡೆಸಲು ನಿಯಮಿತವಾಗಿ ಸಭೆ ಸೇರಿಸುತ್ತಿರುವವರು ಇದೇ ಪೆರುಮಾಳ್. ಜಾತಿ ಹೇಗೆಲ್ಲಾ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ದಿನನಿತ್ಯದ ಅನುಭವ ಇಟ್ಟುಕೊಂಡೇ ಹಲವರು ಬರೆದ ಲೇಖನಗಳ ಸಂಗ್ರಹವನ್ನು ಅವರು ಇತ್ತೀಚೆಗೆ ಹೊರತಂದಿದ್ದರು. ರಾಜ್ಯ ಸರ್ಕಾರವು ವರ್ಗಾವಣೆ ಮಾಡಿದ್ದರಿಂದ ಸಗಾಯಮ್ ಎಂಬ ಜಿಲ್ಲಾಧಿಕಾರಿ ಮಾನಸಿಕವಾಗಿ ತೊಂದರೆ ಅನುಭವಿಸಿದಾಗ, ‘ಸಗಾಯಮ್ ಸೈದ ಸಗಾಯಮ್’ (ಸಗಾಯಮ್ ಮಾಡಿದ ಸಹಾಯ) ಎಂಬ ಕರಪತ್ರವನ್ನು ಪೆರುಮಾಳ್ ಮುರುಗನ್ ಸಿದ್ಧಪಡಿಸಿ, ಆ ಜಿಲ್ಲಾಧಿಕಾರಿ ಬಡವರು ಹಾಗೂ ರೈತರ ಅಭಿವೃದ್ಧಿಗಾಗಿ ಪಟ್ಟ ಶ್ರಮದ ಮೇಲೆ ಬೆಳಕು ಚೆಲ್ಲಿದ್ದರು.

ಸೇಲಂ ನಗರದ ಬಳಿಯ ತಿರುಚಂಗೋಡು ಪಟ್ಟಣದವರು ಪೆರುಮಾಳ್ ಮುರುಗನ್. ಈ ಪ್ರದೇಶದ ಭೌಗೋಳಿಕ ಮಾಹಿತಿ ಹಾಗೂ ಆಚರಣೆಗಳ ಕುರಿತು ಅವರಿಗೆ ಆಳವಾದ ಜ್ಞಾನವಿದೆ. ಸೇಲಂ, ಈರೋಡ್, ತಿರುಪೂರ್, ಕರೂರ್, ನಮಕ್ಕಾಲ್, ಕೊಯಮತ್ತೂರು, ಧರ್ಮಪುರಿ, ಕೃಷ್ಣಗಿರಿ ಹಾಗೂ ಪಳನಿ ಜನರ ಕೊಂಗು ಆಡುಮಾತಿನ ಅರ್ಥವಿವರ ನೀಡುವಂಥ ಬೃಹತ್ ಪದಕೋಶವನ್ನು ಅವರು ಹೊರತಂದಿದ್ದಾರೆ. ಇತರ ಭಾರತೀಯ ಭಾಷೆಗಳಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ಮಾಡುವ ಇಂಥ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಅಗ್ಗಳಿಕೆ ಅವರದು. ತಮ್ಮ ನೆಲದ ಬಗೆಗಿನ ಪ್ರೀತಿ, ಸಾಹಿತ್ಯದ ಅದಮ್ಯ ತುಡಿತದಿಂದಷ್ಟೇ ಅವರಿಗೆ ಇದು ಸಾಧ್ಯವಾದದ್ದು. ತನ್ನ ಸಣ್ಣಕಥೆಗಳು ಹಾಗೂ ‘ಏರುವೆಯಿಲ್’, ‘ಕೂಳಮಾದಾರಿ’, ‘ನಿಳಲ್‌ಮುಟ್ರಮ್’, ‘ಕಂಗಣಂ’, ‘ಮಾದೊರುಬಾಗನ್’, ‘ಪೂಕ್ಕುಳಿ’ ಇತ್ಯಾದಿ ಕಾದಂಬರಿಗಳಿಂದ ಅವರು ತಲುಪಿದ ಓದುಗರು ಅಸಂಖ್ಯ.

ತನ್ನೆಲ್ಲಾ ಕೃತಿಗಳಲ್ಲಿ ಅವರು ದಮನಿತ ವರ್ಗಗಳ ಬಗೆಬಗೆಯ ಸಮಸ್ಯೆಗಳು ಹಾಗೂ ಬದುಕನ್ನು ಬಿಂಬಿಸಿದ್ದಾರೆ. ಕುಸುರಿತನ, ಕಲಾತ್ಮಕತೆಯ ದೃಷ್ಟಿಯಿಂದಲೂ ಅವು ಗಮನಾರ್ಹ. ಕಳೆದ ವರ್ಷ ಬಿಡುಗಡೆಯಾದ ಅವರ ಕಾದಂಬರಿ ‘ಪೂಕ್ಕುಳಿ’ ಅಂತರ್ಜಾತೀಯ ವಿವಾಹದ ಸಮಸ್ಯೆಗಳನ್ನು ಒಳಗೊಂಡಿತ್ತು. ಬೇರೆ ಬೇರೆ ಜಾತಿಯ ಹುಡುಗ, ಹುಡುಗಿಯ ನಿಜವಾದ ಪ್ರೇಮವೇ ಕಾದಂಬರಿಯ ವಸ್ತು. ತಮ್ಮ ಜಾತೀಯತೆಯನ್ನು ಉಳಿಸಿಕೊಳ್ಳಲು ಹುಡುಗನ ತಾಯಿ ಹಾಗೂ ಹಳ್ಳಿಗರು ಹುಡುಗನಿಗೆ ಗೊತ್ತೇ ಆಗದಂತೆ ಹುಡುಗಿಯನ್ನು ಕೊಲ್ಲಲು ಮಾಡುವ ಕುತಂತ್ರಗಳನ್ನು ಕಾದಂಬರಿ ಮನೋಜ್ಞವಾಗಿ ಬಣ್ಣಿಸುತ್ತದೆ. ಕಲಾ ಸೌಂದರ್ಯವನ್ನು ಉಳಿಸಿಕೊಂಡೂ ಸಾಮಾಜಿಕ ಸಮಸ್ಯೆಗಳನ್ನು ಬರಹದ ಮೂಲಕ ಹೇಗೆ ಸಮರ್ಥವಾಗಿ ಚರ್ಚಿಸಬಹುದು ಎನ್ನುವುದಕ್ಕೂ ಪೆರುಮಾಳ್ ಅವರ ಕೃತಿಗಳು ಉದಾಹರಣೆಯಾಗಬಲ್ಲವು.

‘ಮಾದೊರುಬಾಗನ್’ ನಾಲ್ಕು ವರ್ಷಗಳ ಹಿಂದೆ ಪೆರುಮಾಳ್ ಮುರುಗನ್ ಅವರು ಪ್ರಕಟಿಸಿದ ಕಾದಂಬರಿ. ವೈವಾಹಿಕ ಬದುಕಿನಲ್ಲಿ ತಾಯಿಯಾಗಲಾರದವಳ ನೋವು, ತೊಳಲಾಟಗಳನ್ನು ಈ ಕಾದಂಬರಿ ಅನಾವರಣಗೊಳಿಸಿದೆ. ಮದುವೆಯಾಗಿ ತಿಂಗಳುಗಳಾದರೂ ತಾಯಿಯಾಗಲಾರದ ಕಾರಣಕ್ಕೆ ಗಂಡನ ಮನೆಯಲ್ಲಿ, ಹಳ್ಳಿಯಲ್ಲಿ ಕ್ಷಣ ಕ್ಷಣವೂ ಹೀಯಾಳಿಕೆಯ ಮಾತುಗಳನ್ನು ಅವಳು ಕೇಳಬೇಕಾಗುತ್ತದೆ. ಮನೆಯಲ್ಲಿನ ಎಲ್ಲರ ದೃಷ್ಟಿಯಲ್ಲಿಯೂ ಅವಳೇ ತಪ್ಪಿತಸ್ಥೆ. ಹೀಯಾಳಿಕೆಗೆ ಗುರಿಯಾದಾಗಲೆಲ್ಲಾ ಆದಷ್ಟು ಬೇಗ ತಾನು ತಾಯಿಯಾಗಬೇಕು ಎಂಬ ಹಟ ಅವಳಲ್ಲಿ ಮೂಡುತ್ತದೆ. ಹಳ್ಳಿಯ ದೇವಸ್ಥಾನದಲ್ಲಿ ಆಯೋಜಿಸುವ ವಾರ್ಷಿಕ ರಥೋತ್ಸವದ ಸಂದರ್ಭ ಅವಳಿಗೆ ತಾಯಿಯಾಗುವ ಅವಕಾಶ ಕಲ್ಪಿಸುತ್ತದೆ.

‘ತಾಯಿಯಾಗದವಳು’ ಆ ದಿನ ಊರಿನಲ್ಲಿ ಸೇರುವ ಜನರಲ್ಲಿ ತನಗಿಷ್ಟವಾದ ಪುರುಷನನ್ನು ಆರಿಸಿಕೊಂಡು, ಅದೇ ರಾತ್ರಿ ಅವನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಮಗುವನ್ನು ಪಡೆಯಬಹುದು ಎನ್ನುವುದು ನಂಬಿಕೆ. ಅವಳ ಗಂಡ ಈ ಆಯ್ಕೆಯನ್ನು ಅವಳಲ್ಲಿ ಪ್ರಸ್ತಾಪಿಸುತ್ತಾನೆ. ಮುಂದಿನ ಹಬ್ಬದಲ್ಲಿ ಆ ಆಯ್ಕೆಯಿಂದ ತಾಯಿಯಾದರೆ ಎಲ್ಲಾ ಸಮಸ್ಯೆಗಳೂ ಬಗೆಹರಿದು ಮನೆಯಲ್ಲಿ ಶಾಂತಿ ಮೂಡುತ್ತದೆ ಎಂದು ಹೆಂಡತಿಗೆ ಅವನೇ ಸಲಹೆ ನೀಡುತ್ತಾನೆ. ಅವಳ ಮನಸ್ಸು ಅದಕ್ಕೆ ಒಪ್ಪುವುದಿಲ್ಲ. ಅದನ್ನು ಅವಳು ಕಟುವಾಗಿ ವಿರೋಧಿಸುತ್ತಾಳೆ. ಆದರೆ, ಮನೆಯಲ್ಲಿ ಕೇಳಿಬರುವ ನಿರಂತರ ಚುಚ್ಚುಮಾತುಗಳಿಂದ ಅವಳಿಗೆ ಕ್ರಮೇಣ ಆ ಆಯ್ಕೆ ಆಶಾಕಿರಣದಂತೆ ಕಂಡು, ಆ ಮಾರ್ಗದಲ್ಲಿ ತಾಯಿಯಾಗುವ ಧೈರ್ಯ ಮೂಡುತ್ತದೆ. ಒಂದು ದಿನ ತನ್ನ ಗಂಡನಿಗೆ ಆ ಆಯ್ಕೆಯ ಬಗೆಗೆ ತನಗೆ ಒಪ್ಪಿಗೆ ಇದೆ ಎಂದು ಅವಳು ಹೇಳಿದಾಗ, ಅವನು ಕುಸಿದುಹೋಗುತ್ತಾನೆ.

ಆ ಆಯ್ಕೆಯನ್ನು ಅವಳಿಗೆ ಸೂಚಿಸಿದ್ದ ಆತ ದಿಢೀರನೆ ತನ್ನ ನಿಲುವನ್ನು ಬದಲಿಸಿ, ಅವಳ ಒಪ್ಪಿಗೆಯನ್ನು ವಿರೋಧಿಸತೊಡಗುತ್ತಾನೆ. ಅನ್ಯ ಮಾರ್ಗವಿಲ್ಲದ ಕಾರಣ ಅವಳು ಆ ಹಾದಿಯಲ್ಲಿ ಮಗುವನ್ನು ಪಡೆದೇ ತೀರಬೇಕು ಎಂದು ಹಟ ಮಾಡುತ್ತಾಳೆ. ರಥೋತ್ಸವದ ದಿನ ಸಂಜೆ ಅವಳ ಗಂಡ ಮದ್ಯದ ಕೂಟ ನಡೆಯುವ ಕಡೆಗೆ ಹೋಗಿ ಕಂಠಮಟ್ಟ ಕುಡಿದು, ನಿದ್ರೆಗೆ ಜಾರುತ್ತಾನೆ. ಅವಳು ತಾನೊಬ್ಬಳೇ ದೇವಸ್ಥಾನಕ್ಕೆ ಹೋಗಿ, ಒಂದು ಸುತ್ತು ಹಾಕುತ್ತಾಳೆ. ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅವಳು ಒಬ್ಬನನ್ನು ಆಯ್ಕೆ ಮಾಡಿಕೊಂಡು, ಆ ರಾತ್ರಿ ನಾಪತ್ತೆಯಾಗುತ್ತಾಳೆ.

ಕಾದಂಬರಿಯ ಶೀರ್ಷಿಕೆ ‘ಮಾದೊರುಬಾಗನ್’. ಅರ್ಧನಾರೀಶ್ವರನ ತಮಿಳು ಹೆಸರು ಇದು. ತಿರುಚಂಗೋಡಿನ ದೇವಾಲಯದ ದೇವ ಅರ್ಧನಾರೀಶ್ವರ. ಕೌಟುಂಬಿಕ ಬದುಕಿನಲ್ಲಿ ಹೆಂಡತಿಯು ತನ್ನ ದೇಹ, ಮನಸ್ಸಿನ ಅರ್ಧ ಭಾಗವಿದ್ದಂತೆ ಎಂದು ಭಾವಿಸುವವನೇ ಗಂಡ ಎನ್ನುವುದರ ಸಂಕೇತರೂಪ ಈ ದೇವರು. ಗಂಡನಾದವನು ಮೊದಲಿಗೆ ಹೆಂಡತಿಯ ಭಾವನೆಗಳನ್ನು, ಅವಳ ಬೇಕು–ಬೇಡಗಳನ್ನು ಅರ್ಥ ಮಾಡಿಕೊಳ್ಳಬೇಕು. ದುರದೃಷ್ಟವಶಾತ್ ಕಾದಂಬರಿಯ ನಾಯಕ ತನ್ನ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಇನ್ನೊಂದು ಕಡೆ, ಅವಳನ್ನು ತನ್ನ ಸ್ಥಿರಾಸ್ತಿ ಎಂದು ಭಾವಿಸುತ್ತಾನೆ. ಮಾದೊರುಬಾಗನ್ ಎಂಬ ಹಳ್ಳಿಯವನೇ ಆದ ಆ ಪುರುಷ ಮಾದೊರುಬಾಗನ್‌ನಂತೆ ಜವಾಬ್ದಾರಿಯಿಂದ ವರ್ತಿಸುವುದಿಲ್ಲ. ಅವನು ಅತಿ ಸಾಮಾನ್ಯ ಪುರುಷನಂತೆ ವರ್ತಿಸುತ್ತಾನೆ. ಕಾದಂಬರಿಯು ಈ ಅಂಶವನ್ನು ತಣ್ಣಗೆ ಹೇಳುತ್ತದೆ.

ದೇವಸ್ಥಾನದಲ್ಲಿ ನಡೆಯುವ ರಥೋತ್ಸವದ ಆ ಒಂದು ದಿನ ಹೆಣ್ಣಿಗೆ ಕೊಡುವ ವಿಶೇಷ ಅವಕಾಶ ಹಿಂದೆ ಆಚರಣೆಯಲ್ಲಿ ಇದ್ದ ನಂಬಿಕೆಯೇ ಹೌದು. ಹಾಗೆಂದ ಮಾತ್ರಕ್ಕೆ ಅದು ಕಾದಂಬರಿಯ ಕೇಂದ್ರವೇನೂ ಆಗಿಲ್ಲ. ಕಾದಂಬರಿಯ ಉತ್ತರಾರ್ಧದಲ್ಲಷ್ಟೇ ಆ ಆಯ್ಕೆಯ ಸಲಹೆ ಚರ್ಚೆಯ ರೂಪದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತದಷ್ಟೆ. ನೀರಿನಲ್ಲಿ ಮುಳುಗುತ್ತಿರುವ ಗಂಡನಿಗೆ ಹಿಡಿದುಕೊಂಡು ಮೇಲೆ ಬರುವ ಮರದ ತುಂಡಿನಂತೆ ಆ ಆಯ್ಕೆ ಕಾಣುತ್ತದೆ. ಅದನ್ನು ಕಾದಂಬರಿಯಲ್ಲಿ ಎಲ್ಲೂ ವೈಭವೀಕರಿಸಿಲ್ಲ, ಟೀಕಿಸಿಯೂ ಇಲ್ಲ. ಸಮುದಾಯದ ಮೂದಲಿಕೆಯಿಂದ ಹೊರಬರಲು ಹೆಣ್ಣಿಗೆ ಅದು ಕೊನೆಯ ಆಯ್ಕೆ ಎಂಬಂತೆ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

ಈ ತಮಿಳು ಕಾದಂಬರಿ ಪ್ರಕಟವಾಗಿ ನಾಲ್ಕು ವರ್ಷಗಳು ಉರುಳಿದವು. ಕಳೆದ ವರ್ಷ ಇದನ್ನು One Part Woman ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದ ಮಾಡಲಾಯಿತು ಹಾಗೂ ಇಂಗ್ಲಿಷ್ ಓದುಗರು ಮೆಚ್ಚಿಕೊಂಡರು. ಡಿಸೆಂಬರ್ 2014ರ ಕೊನೆಯಲ್ಲಿ ‘ಕೊಂಗು ವೇಲಾರ್ ಸಮುದಾಯ ಒಕ್ಕೂಟ’ದ ಕೆಲವರು ಪೆರುಮಾಳ್ ಮುರುಗನ್ ವಿರುದ್ಧ ಪ್ರತಿಭಟನೆ ಆಯೋಜಿಸಿದರು. ಕೊಂಗು ವೇಲಾರ್ ಸಮುದಾಯದ ಮಹಿಳೆಯನ್ನು ಹಾಗೂ ತಿರುಚಂಗೋಡು ದೇವರನ್ನು ಕಾದಂಬರಿಯಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದ್ದು, ಅದರಿಂದ ಆ ದೇವರಲ್ಲಿ ಬಲವಾದ ನಂಬಿಕೆ ಇಟ್ಟ ಜನರ ಭಾವನೆಗೆ ಧಕ್ಕೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬೀದಿ ಬೀದಿಗಳಲ್ಲಿ ಸಭೆ ನಡೆಸಿದ್ದೇ ಅಲ್ಲದೆ, ಕಾದಂಬರಿಕಾರರ ವಿರುದ್ಧ ಕರಪತ್ರಗಳನ್ನು ಹಂಚಿದರು. ಕೆಲವು ಗುಂಪುಗಳು ಪೆರುಮಾಳ್ ಮುರುಗನ್ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದವು.

ಜನರ ಹಾಗೂ ಸಮಾಜದ ಸೌಹಾರ್ದತೆಗೆ ಭಂಗ ಉಂಟುಮಾಡುವ ಬರಹ ಪೆರುಮಾಳ್ ಅವರದ್ದು ಎಂದು ಈ ಗುಂಪುಗಳು ವಾದ ಮುಂದಿಟ್ಟವು. ತಿರುಚಂಗೋಡಿನ ಪ್ರಸ್ತಾಪ ಇರುವ ಕೃತಿಗಳನ್ನೆಲ್ಲಾ ವಾಪಸ್ ಪಡೆಯುವಂತೆ ಪೆರುಮಾಳ್ ಮುರುಗನ್ ಅವರಿಗೆ ಒತ್ತಡ ಹೇರಿದವು. ಕಾದಂಬರಿಯಲ್ಲಿ ಇರುವ ಮಗುವನ್ನು ಪಡೆಯುವ ಮಾರ್ಗದ ಪ್ರಸ್ತಾಪದ ಕುರಿತು ಅಲ್ಲಲ್ಲಿ ಉದ್ದುದ್ದ ಚರ್ಚೆಗಳೂ ನಡೆದವು. ಕಾದಂಬರಿಯ ವಿವಿಧ ಪಾತ್ರಗಳ ಪೋಷಣೆ ಹೇಗಿದೆ ಎಂಬ ಸಂವಾದ ಕೂಡ ನಡೆಯಿತು. ಆ ಸಂಗತಿ ಇರುವ ಕಾದಂಬರಿಯ ಪುಟಗಳನ್ನಷ್ಟೇ ಜೆರಾಕ್ಸ್ ಮಾಡಿಸಿ, ಸಾವಿರಾರು ಪ್ರತಿಗಳನ್ನು ಜಾತಿ ಬೆಂಬಲಿಗರು ಹಂಚಿ, ಅದು ಪೆರುಮಾಳ್ ಮುರುಗನ್ ಅವರ ಚಿಂತನೆ ಎಂದು ಹುಯಿಲೆಬ್ಬಿಸಿದರು. ತೀವ್ರವಾದ ವಿರೋಧಿ ಚಟುವಟಿಕೆಗಳಿಂದ ಜನರನ್ನು ನಂಬಿಸಿ, ಕಾದಂಬರಿಕಾರರ ವಿರುದ್ಧ ಎತ್ತಿಕಟ್ಟುವಲ್ಲಿ ಈ ಜಾತಿಶಕ್ತಿಗಳು ಯಶಸ್ವಿಯಾದವಷ್ಟೇ ಅಲ್ಲದೆ ಜನರ ಭಾವನೆಗಳನ್ನೂ ಕೆರಳಿಸಿದವು. ಜನರ ಮನವೊಲಿಸಿ, ಪುಸ್ತಕವನ್ನು ನಿಷೇಧಿಸಬೇಕು ಎಂದು ಮನವಿಯನ್ನೂ ಸಲ್ಲಿಸಿದವು.

ವಿರೋಧಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದದ್ದೇ, ಪೆರುಮಾಳ್ ಮುರುಗನ್ ನಿತ್ಯವೂ ಸಮಸ್ಯೆಗಳನ್ನು ಎದುರಿಸುವಂತಾಯಿತು. ಪಟ್ಟಣಕ್ಕೆ ಅವರ ಪ್ರವೇಶವನ್ನೇ ನಿಷೇಧಿಸುವ ಮಟ್ಟಕ್ಕೂ ವಿರೋಧಿಗಳು ಯೋಚಿಸಿದರು. ಪೆರುಮಾಳ್ ಮುರುಗನ್ ಅವರಿಗೆ ಕೆಲವು ಬರಹಗಾರರು ಹಾಗೂ ಎಡಪಂಥೀಯರು ಬೆಂಬಲ ಸೂಚಿಸಿದರಾದರೂ, ತಿರುಚಂಗೋಡಿನಲ್ಲಿ ಅದಕ್ಕೆ ನಿಜವಾದ ಬೆಲೆ ಸಿಗಲಿಲ್ಲ.

ಭದ್ರತೆಯೇ ಸಿಗದ ಕಾರಣ ಪೆರುಮಾಳ್ ಮುರುಗನ್ ಬದುಕಿನ ಪ್ರತಿಕ್ಷಣವೂ ಆತಂಕದಲ್ಲಿ ಇರುವಂತಾಯಿತು. ಅಂತಿಮವಾಗಿ ಪೆರುಮಾಳ್ ಮುರುಗನ್ ಹಾಗೂ ಜಾತಿ ಗುಂಪುಗಳ ನಡುವೆ ಆರ್‌ಡಿಒ ಸಮ್ಮುಖದಲ್ಲಿ ಒಂದು ಸಂಧಾನ ಸಭೆಯನ್ನು ಆಯೋಜಿಸಲಾಯಿತು. ಮೂರು ಗಂಟೆಗಳಷ್ಟು ಸುದೀರ್ಘ ಅವಧಿ ಚರ್ಚೆಯ ನಂತರ ಪೆರುಮಾಳ್ ಮುರುಗನ್ ಆ ಕಾದಂಬರಿಯನ್ನು ವಾಪಸ್ ಪಡೆಯುವುದಾಗಿ ಹೇಳಿದರು. ಜಾತಿ ಗುಂಪುಗಳು ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದವು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೆರುಮಾಳ್ ಮುರುಗನ್ ತನ್ನೊಳಗಿನ ಬರಹಗಾರನ ಮರಣ ಘೋಷಣೆಯನ್ನು ದಿಢೀರನೆ ಮಾಡಿದ್ದೇ ಅಲ್ಲದೆ ಮೊಬೈಲ್ ಫೋನನ್ನು ಸ್ವಿಚ್‌ಆಫ್ ಮಾಡಿಬಿಟ್ಟರು. ತನ್ನೆಲ್ಲಾ ಸಂಪರ್ಕಗಳನ್ನೂ ಕಡಿದುಕೊಂಡರು. ಚರ್ಚೆಗೆ ಗ್ರಾಸವಾದ ಆ ಕಾದಂಬರಿಯನ್ನಷ್ಟೇ ಅಲ್ಲದೆ ತನ್ನೆಲ್ಲಾ ಕೃತಿಗಳನ್ನೂ ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದರು.

ಇದು ದುರಂತದ ಸಂಗತಿ. ಬರಹಗಾರರು ಬರೆದ ಸಹಸ್ರಾರು ಪತ್ರಗಳು, ಘೋಷಣೆಗಳು ಸರ್ಕಾರದ ಸಂಬಂಧಪಟ್ಟವರನ್ನು ತಲುಪಲೇ ಇಲ್ಲ. ಅದೇ ಜಾತಿಶಕ್ತಿಗಳ ಗುಂಪು ನಡೆಸಿದ ಮಾತುಕತೆ, ಮನವಿಗಳು ಅತಿ ವೇಗವಾಗಿ ತಲುಪಿದವು. ಸರ್ಕಾರವು ಲೇಖಕರಿಗೆ ಗೌರವ ಕೊಡುವುದಿಲ್ಲ, ಜಾತಿ ಗುಂಪುಗಳನ್ನು ಗೌರವಿಸುತ್ತದೆ ಎನ್ನುವುದು ಇದರಿಂದ ಸ್ಪಷ್ಟವಾಯಿತು. ತಮಿಳುನಾಡಿನ ಶ್ರೇಷ್ಠ ಕವಿ ಭಾರತಿಯಾರ್ ‘ಜಗತ್ತಿನಲ್ಲಿ ಜಾತಿ ಎನ್ನುವುದೇ ಇಲ್ಲ’ ಎಂಬ ಹಾಡನ್ನು ಹಾಡಿದ್ದಾರೆ. ಪ್ರಾಚೀನ ತಮಿಳಿನ ಪ್ರಮುಖ ಕವಯಿತ್ರಿ ಅವ್ವೈ, ‘ಯಾರು ದಾನ ಮಾಡುವರೋ ಅವರು ದೊಡ್ಡ ಮನುಷ್ಯರು. ದಾನ ಮಾಡದೇ ಇರುವವರು ಸಣ್ಣತನದವರು’ ಎಂದಿದ್ದಾರೆ. ‘ಭೂಮಿ ಮೇಲಿನ ಎಲ್ಲರಿಗೂ ಹುಟ್ಟು ಸಾಮಾನ್ಯ’ ಎಂದು ತಿರುವಳ್ಳುವಾರ್ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ.

ಸಾಹಿತ್ಯಿಕ ಪರಂಪರೆಯು ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ರಕ್ಷಿಸುತ್ತದೆ, ನಮ್ಮ ಹೃದಯವಂತಿಕೆಯನ್ನು ರೂಪಿಸುತ್ತದೆ ಎಂದು ನಂಬಿದ್ದೇವೆ. ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ರಕ್ಷಿಸುವ ಜವಾಬ್ದಾರಿ ಇವತ್ತು ಪ್ರಾಮಾಣಿಕ ಬರಹಗಾರರ ಮೇಲೆ ಇದೆ.

ಬರಹಗಾರರ ಜೊತೆ ಸತತವಾಗಿ ಅನುಸಂಧಾನ ನಡೆಸುವ ಸಮಾಜ ಆರೋಗ್ಯಕರ ಬೆಳವಣಿಗೆ ಕಾಣುತ್ತದೆ. ಅದೇ ಜಾತೀಯ ಪ್ರಜ್ಞೆಯು ಬೇರೆ ಜಾತಿಯವನನ್ನು ಅನ್ಯ ಎನ್ನುವಂತೆ ನೋಡುವಂತೆ ಮಾಡುತ್ತದೆ. ಇದು ಆರೋಗ್ಯಕರ ಧೋರಣೆಯಲ್ಲ. ನಿಧಾನವಾಗಿ ಬೇರೆ ಜಾತಿಯವನನ್ನು ಅನಗತ್ಯ ವಿರೋಧಿ ಎನ್ನುವಂತೆ ಭಾವಿಸಲು ಈ ಧೋರಣೆ ಕುಮ್ಮಕ್ಕು ಕೊಡುತ್ತದೆ. ಬಹುಸಂಖ್ಯಾತರು ಯಾವ ಚಿಂತನೆಗಳನ್ನು ಬೆಂಬಲಿಸುವರೋ ಅದೇ ಸರಿ ಎಂಬ ತೀರ್ಮಾನಕ್ಕೆ ಜಾತೀಯವಾದಿಗಳು ಬಂದು, ಕೊನೆಗೆ ಅದು ಅರಾಜಕತೆಗೆ ತಂದು ನಿಲ್ಲಿಸುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ, ಪ್ರತಿ ಜಾತಿ ಸಮುದಾಯವು ಸಮಾಜದಲ್ಲಿ ತಾನೇ ಶ್ರೇಷ್ಠ ಎಂಬ ಭಾವನೆ ಮೂಡಿಸಿಕೊಂಡಿದೆ. ತನ್ನ ಬಲವರ್ಧನೆಗಾಗಿ ಪದೇ ಪದೇ ಜೋರು ದನಿಯಲ್ಲಿ ಆಯಾ ಸಮುದಾಯ ಬೊಬ್ಬೆ ಹೊಡೆಯುತ್ತದೆ. ಜಾತಿಯ ಎಲ್ಲಾ ಗುಂಪುಗಳಿಗಿಂತ ತಾನೇ ಪರಮ ಸ್ವತಂತ್ರ, ಬಲಾಢ್ಯ ಎಂದು ಪ್ರದರ್ಶಿಸಲು ಅರಾಜಕತೆಯಿಂದ ವರ್ತಿಸುತ್ತದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು, ದೇವರು, ಧರ್ಮ ಕುರಿತಂತೆ ಯಾವುದಾದರೂ ಅವಹೇಳನಕಾರಿ ಅಭಿಪ್ರಾಯವನ್ನು ನಿರ್ದಿಷ್ಟ ಜಾತಿ ಸಮುದಾಯ ಮೂಡಿಸಿದರೆ, ಅದಕ್ಕೆ ಬರಹಗಾರನನ್ನೇ ಹೊಣೆಯಾಗಿಸಿ, ಅವನನ್ನು ಸಮಾಜ ವಿರೋಧಿ ಎನ್ನುವಂತೆ  ಬಿಂಬಿಸಿಬಿಡುತ್ತದೆ. ಬರಹಗಾರನ ಘನತೆಯನ್ನು ಗಣನೆಗೆ ತೆಗೆದುಕೊಳ್ಳದೆ ಜಾತಿ ಸಮುದಾಯಗಳು ಅವನು ಸಮಸ್ಯೆಗಳನ್ನು ಸೃಷ್ಟಿಸುವ ಆಸಾಮಿ ಎಂಬ ತಪ್ಪುಕಲ್ಪನೆಯನ್ನು ಜನರಲ್ಲಿ ಮೂಡಿಸುತ್ತವೆ. ಈ ಹುನ್ನಾರದಿಂದಲೇ ದೊಡ್ಡ ಬದ್ಧತೆ ಇರುವ ಬರಹಗಾರ ಪೆರುಮಾಳ್ ಮುರುಗನ್ ಜಾತಿ ಸಮುದಾಯಗಳ ಧೋರಣೆಗೆ ಬಲಿಪಶುವಾದರು.

ಜಾತೀಯತೆಯ ಪರವಾಗಿ ನಿಲ್ಲುವ ಸಮಾಜದ ಜೊತೆಗೆ ಯಾವುದೇ ಚರ್ಚೆ ನಡೆಸುವುದು ತುಂಬಾ ಕಷ್ಟಕರ. ಜಾತೀಯತೆ ಅಗತ್ಯವೋ, ಲೇಖಕನ ಸ್ವಾತಂತ್ರ್ಯ ಅಗತ್ಯವೋ ಎಂಬ ಪ್ರಶ್ನೆ ಮುಂದಿಟ್ಟರೆ ನಮ್ಮ ಸಮಾಜವು ಮೌನವಾಗಿ ಜಾತೀಯತೆಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇದು ಇಂದಿನ ಕಹಿ ಸತ್ಯವಾದರೂ, ಲೇಖಕನು ನಿರ್ಭಿಡೆಯಿಂದ ನಿರಂತರವಾಗಿ ಸಮಾಜದ ಜೊತೆ ಚರ್ಚೆ ನಡೆಸುವುದು ತುಂಬಾ ಮುಖ್ಯ. ಪೆರುಮಾಳ್ ಮುರುಗನ್ ಅವರ ಸ್ವಾತಂತ್ರ್ಯಕ್ಕಾಗಿಯಷ್ಟೆ ದನಿ ಎತ್ತುವುದಲ್ಲ, ನಮ್ಮ ಸ್ವಾತಂತ್ರ್ಯಕ್ಕೂ ದನಿ ಎತ್ತುವುದು ಸಾಧ್ಯವಿರುವುದು ಅಂಥ ಚರ್ಚೆಯ ಮೂಲಕವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT