ಕರೀಂನಗರ (ಆಂಧ್ರಪ್ರದೇಶ): ತಮ್ಮ ಅಸ್ಮಿತೆ ಸಾಬೀತುಪಡಿಸಿಕೊಳ್ಳಲು ತೆಲಂಗಾಣ ಜನ ನಡೆಸಿದ ಹೋರಾಟ ಸುದೀರ್ಘವಾದುದು, ನೀಡಿದ ಬಲಿದಾನಗಳು ಲೆಕ್ಕವಿಲ್ಲದಷ್ಟು. ಹೀಗಾಗಿ ‘ನವತೆಲಂಗಾಣ’ಕ್ಕೆ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆಗೆ ರಾಜಕೀಯವಾಗಿ, ಸಾಮಾಜಿಕವಾಗಿ ವಿಶೇಷ ಮಹತ್ವ ಇದೆ.

ಈ ಚುನಾವಣೆ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ತೆಲಂಗಾಣದ ಭವಿಷ್ಯದ ದಿಕ್ಸೂಚಿ ಆಗಲಿದೆ. ರಾಜ್ಯವನ್ನು ಮುನ್ನಡೆಸುವ ಮುಂದಿನ ರಾಜಕೀಯ ಹಾದಿಗೂ ದಾರಿದೀಪ ಆಗಲಿದೆ. ಆದರೆ ಪಕ್ಷಗಳ ಹೊಂದಾಣಿಕೆ, ನಾಯಕರ ನೀತಿ–ನಿಲುವುಗಳು ಪ್ರಜ್ಞಾವಂತರನ್ನು ಕಂಗೆಡಿಸಿವೆ. ರೂಢಿಗತ ವರಸೆಗಳನ್ನು, ಅನುಕೂಲಸಿಂಧು ರಾಜಕಾರಣವನ್ನು ಗಟ್ಟಿಗೊಳಿಸುವ ಪ್ರಯತ್ನಗಳಿಗೆ ಎಲ್ಲ ಪಕ್ಷಗಳೂ ನೀರೆರೆಯುತ್ತಿವೆ.

‘ಜಾತಿ ಭೂತದ ಪ್ರಭಾವ ಸೀಮಾಂಧ್ರಕ್ಕೆ ಹೋಲಿಸಿದರೆ ತೆಲಂಗಾಣ ಪ್ರದೇಶದಲ್ಲಿ ತೀರಾ ಕಡಿಮೆ’ ಎಂದು ಹೈದರಾಬಾದ್‌ನಲ್ಲಿ ಉಪನ್ಯಾಸಕ ರಾಗಿರುವ ಮೇಕಲ ಜಯದೇವ್ ಹೇಳಿದರು. ಮೆದಕ್, ಕರೀಂನಗರ ಭಾಗದಲ್ಲಿ ಸುತ್ತಾಡಿದಾಗ ಅವರು ಪ್ರಸ್ತಾಪಿಸಿದ ಈ ಅಂಶ ಮತ್ತಷ್ಟು ದೃಢವಾಯಿತು. ಅಲ್ಲಿನ ಕುರಿಗಾಹಿಗಳು ಮತ್ತು ರೈತರಲ್ಲಿ ಚುನಾವಣಾ ಬಗ್ಗೆ ಪ್ರಸ್ತಾಪಿಸಿದಾಗ ಪಕ್ಷದ ‘ಚಿಹ್ನೆ’ಯನ್ನಷ್ಟೇ ಉಲ್ಲೇಖಿಸುತ್ತಾರೆ. ಅನೇಕರಿಗೆ ಅಭ್ಯರ್ಥಿಗಳ ಹೆಸರೇ ಗೊತ್ತಿಲ್ಲ. ಜಾತಿವಾದದ ಸೋಂಕು ಮನಸ್ಸನ್ನು ಮಲಿನಗೊಳಿಸುವ ಮಾತಂತೂ ದೂರವೇ.

ಆದರೆ ಜಾತಿ ಭೂತವನ್ನು ಹೇಗಾದರೂ ‘ಬಡಿದೆಬ್ಬಿಸಲೇಬೇಕು’ ಎಂದು ಪಣ ತೊಟ್ಟವರಂತೆ ನೇತಾರರು ಮಾತನಾಡುತ್ತಿದ್ದಾರೆ. ತೆಲಂಗಾಣ ಹೋರಾಟದಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ತಂತ್ರವಾಗಿ ಟಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ ರಾವ್, ‘ತೆಲಂಗಾಣ ರಾಜ್ಯಕ್ಕೆ ದಲಿತರನ್ನು ಮುಖ್ಯಮಂತ್ರಿ, ಮುಸ್ಲಿಮರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ’ ಎಂದು ಸಾರಿದ್ದರು.

ಬದಲಾದ ಮಾತು: ಆದರೆ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದ ಸಾಂವಿಧಾನಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಅವರ ಮಾತಿನ ಧಾಟಿ ಬದಲಾಯಿತು. ವಿರೋಧ ಪಕ್ಷಗಳು ಈಗ ಅವರಿಗೆ ‘ದಲಿತ ದ್ರೋಹಿ’ ಹಣೆಪಟ್ಟಿ ಅಂಟಿಸಿವೆ. ಮಗ ಕೆ. ತಾರಕರಾಮ ರಾವ್ (ಸಿರಿಸಿಲ್ಲ ವಿಧಾನಸಭಾ ಕ್ಷೇತ್ರ), ಮಗಳು ಕೆ.ಕವಿತಾ (ನಿಜಾಮಾಬಾದ್ ಲೋಕಸಭಾ ಕ್ಷೇತ್ರ), ಅಳಿಯ ಟಿ.ಹರೀಶ್ ರಾವ್ (ಸಿದ್ಧಿಪೇಟ ವಿಧಾನಸಭಾ ಕ್ಷೇತ್ರ) ಅವರಿಗೆ ಟಿಕೆಟ್ ನೀಡಿ ಪಕ್ಷವನ್ನು ಕುಟುಂಬ ರಾಜಕಾರಣದ ಪದತಲಕ್ಕೆ ನೂಕಿದ್ದಾರೆ. ‘ಬಂಧು ಮೋಹ ಇಲ್ಲದೇ ಇದ್ದಿದ್ದರೆ ಕೆಸಿಆರ್ ವ್ಯಕ್ತಿತ್ವ ಟೀಕೆಗಳಿಗೆ ನಿಲುಕದಷ್ಟು ಎತ್ತರದಲ್ಲಿ ಇರುತ್ತಿತ್ತು’ ಎನ್ನುತ್ತಾರೆ ಅವರದೇ ಪಕ್ಷದ ನಾಯಕರು.

ಕುಟುಂಬ ರಾಜಕಾರಣ ಸೀಮಾಂಧ್ರದಲ್ಲಿ ‘ಪೀಡೆ’ಯಾಗಿ ಪರಿಣಮಿಸಿದೆ. ತೆಲಂಗಾಣದಲ್ಲಿ ಇದು ಆ ಮಟ್ಟಕ್ಕೆ ಹೋಗಿರಲಿಲ್ಲ. ಕೆಸಿಆರ್ ಈ ಚುನಾವಣೆಯಲ್ಲಿ ಆ ಹಂತಕ್ಕೆ ಒಯ್ದಿದ್ದಾರೆ. ಮಕ್ಕಳು, ಬಂಧುಗಳು ಮಾತ್ರವಲ್ಲದೆ ಸ್ವತಃ ಅವರೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.
ತೆಲಂಗಾಣ ಭಾಗದಲ್ಲಿ ಭದ್ರ ನೆಲೆ ಹೊಂದಿದ್ದ, ಬದಲಾದ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ತೆಲುಗುದೇಶಂ ಪಕ್ಷ (ಟಿಡಿಪಿ) ತೆಲಂಗಾಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೈದರಾಬಾದ್ನ ಎಲ್.ಬಿ.ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್.ಕೃಷ್ಣಯ್ಯ ಅವರ ಹೆಸರನ್ನು ಪ್ರಕಟಿಸುವ ಮೂಲಕ ಜಾತಿ ದಾಳ ಉರುಳಿಸಿದೆ. ಹಿಂದುಳಿದ ವರ್ಗಗಳ ಹಿತರಕ್ಷಣಾ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಯ್ಯ, ಚುನಾವಣಾ ಘೋಷಣೆ ಹೊರಬಿದ್ದ ಬಳಿಕ ಟಿಡಿಪಿ ಸೇರಿದವರು.

ಇದರಿಂದ ಪುಳಕಿತರಾದ ಜನಸೇನಾ ಪಕ್ಷದ ನೇತಾರ, ನಟ ಪವನ್ ಕಲ್ಯಾಣ್ ಹೋದ ಕಡೆಯಲ್ಲೆಲ್ಲ ಟಿಡಿಪಿಯ ಈ ‘ಬದ್ಧತೆ’ಯನ್ನು ಕೊಂಡಾಡುತ್ತಿದ್ದಾರೆ. ‘ನರೇಂದ್ರ ಮೋದಿ ತೆಲಂಗಾಣದ ದುಷ್ಮನ್’ ಎಂದು ಕೆಸಿಆರ್ ತಮ್ಮ ಭಾಷಣದಲ್ಲಿ ಟೀಕಿಸಿದ್ದರು. ಈ ಟೀಕೆಗೆ ಕೆಂಡಾಮಂಡಲ ಆಗಿರುವ ಪವನ್, ‘ಬಿ.ಸಿ. ಪ್ರಧಾನಿ ಅಭ್ಯರ್ಥಿನಿ ತಿಡಿತೇ ತಾಟ ತೀಸ್ತಾ...’ (ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ ಅಭ್ಯರ್ಥಿಯನ್ನು ಬೈದರೆ ಚರ್ಮ ಸುಲಿಯುವೆ) ಎಂದು ಗುಡುಗಿದ್ದಾರೆ. ಇಲ್ಲಿ ಪ್ರಧಾನಿ ಅಭ್ಯರ್ಥಿ ಎಂಬುದಕ್ಕಿಂತ ‘ಬಿ.ಸಿ’ ಎನ್ನುವುದಕ್ಕೇ ಒತ್ತು!

ಕಳೆದ ಚುನಾವಣೆ ವೇಳೆ ಇವರ ಅಣ್ಣ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿ, ಮದರ್ ತೆರೇಸಾ ಭಾವಚಿತ್ರ ಮುಂದಿಟ್ಟುಕೊಂಡು ಗಾಂಧಿ ತತ್ವ, ತೆರೇಸಾ ಸೇವಾ ಭಾವವೇ ತಮಗೆ ಆದರ್ಶ ಎಂದು ಮತ ಯಾಚಿಸಿದ್ದರು. ಕೊನೆಗೆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಕೇಂದ್ರದಲ್ಲಿ ಸಚಿವ ಸ್ಥಾನ ದಕ್ಕಿಸಿಕೊಂಡು ಧನ್ಯತೆ ಪಡೆದರು. ಈ ಚುನಾವಣೆಯಲ್ಲಿ ಸೋದರ ಪವನ್ ಬಿಜೆಪಿ–ಟಿಡಿಪಿ ಮೈತ್ರಿಕೂಟ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ ತೆಲಂಗಾಣ ಭಾಗದಲ್ಲಿ ಜಾತಿ ಪ್ರಭಾವದಂತೆ, ಸಿನಿಮಾ ಪ್ರಭಾವವೂ ಕಡಿಮೆ.

ಕಾಂಗ್ರೆಸ್ ಮುಂದು: ಜಾತಿ ದಾಳ ಉರುಳಿಸುವಲ್ಲಿ ಕಾಂಗ್ರೆಸ್ ತನ್ನ ಎದುರಾಳಿಗಳಿಗಿಂತ ಒಂದು ಹೆಜ್ಜೆ ಮುಂದಿದೆ. ತೆಲಂಗಾಣದಲ್ಲಿ ಆಧಿಪತ್ಯ ಸಾಧಿಸುವ ಮುಂದಾಲೋಚನೆ ಯಿಂದಲೇ ಈ ಭಾಗದ ದಲಿತ ರಾಜಕಾರಣಿ ದಾಮೋದರ ರಾಜನರಸಿಂಹ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಿ, ಪಕ್ಷದ ತೆಲಂಗಾಣ ಘಟಕದ ಸಾರಥ್ಯವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಪೊನ್ನಾಲ ಲಕ್ಷ್ಮಯ್ಯ ಅವರಿಗೆ ವಹಿಸಿದೆ. ಆದರೆ ಇವರು ತೆಲಂಗಾಣ ಭಾಗದ ಉದ್ದಕ್ಕೂ ಸುತ್ತಾಡಿ ಉಳಿದ ಅಭ್ಯರ್ಥಿಗಳಿಗೆ ನೆರವಾಗುವುದಿರಲಿ, ತಮ್ಮ ಸ್ವಕ್ಷೇತ್ರದಲ್ಲಿ ದಡ ಸೇರುವುದೇ ಕಡುಕಷ್ಟವಾಗಿ ಪರಿಣಮಿಸಿದೆ. ಆಂದೋಲು ಕ್ಷೇತ್ರದಲ್ಲಿ ದಾಮೋದರ ಅವರಿಗೆ ಟಿಆರ್‌ಎಸ್ ಅಭ್ಯರ್ಥಿ, ಹಾಸ್ಯನಟ ಬಾಬು ಮೋಹನ್ ಗಟ್ಟಿ ಪೋಟಿ ನೀಡಿದ್ದಾರೆ. ಜನಗಾಂನಿಂದ ಸ್ಪರ್ಧಿಸಿರುವ ಲಕ್ಷ್ಮಯ್ಯ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.

ಇಷ್ಟಾಗಿಯೂ ಪಕ್ಷಕ್ಕೆ ಬಹುಮತ ಸಿಗುವ ಖಾತರಿ ದೊರೆಯದ ಕಾರಣಕ್ಕೋ ಏನೋ ರಾಹುಲ್ ಗಾಂಧಿ ಅವರು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ‘ತೆಲಂಗಾಣ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಮಹಿಳೆ ಆಗಬೇಕು ಎಂಬುದು ನನ್ನ ಆಕಾಂಕ್ಷೆ’ ಎಂದು ಹೇಳಿ, ಮಹಿಳಾ ಮತಬುಟ್ಟಿಗೆ ಕೈಹಾಕಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧಿಸಲು ಮಾತ್ರ ಅವರ ಪಕ್ಷಕ್ಕೆ ಮಹಿಳೆಯರ ಅಗತ್ಯ ಇಲ್ಲ! ಈ ಮಾತು ಉಳಿದ ಪಕ್ಷಗಳಿಗೂ ಅನ್ವಯಿಸುತ್ತದೆ.

ಜಾತಿ, ಮತ, ಪಂಥಗಳನ್ನು ಪಕ್ಕಕ್ಕಿಟ್ಟು ಹೋರಾಟ ನಡೆಸಿದ ನೆಲ ತೆಲಂಗಾಣ. ವಿಧ್ಯುಕ್ತವಾಗಿ ಇನ್ನೂ ಉದಯಿಸದ ರಾಜ್ಯಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಜಾತಿ ನಂಜನ್ನು ಮೆದುಳಿಗೆ ಹತ್ತಿಸಲು ಸರ್ವಪ್ರಯತ್ನಗಳೂ ನಡೆದಿವೆ. ಆದರೆ ಈ ನೆಲದ ಹೋರಾಟದ ಕಾವು ಇನ್ನೂ ಆರಿಲ್ಲ. ಈ ಸಲದ ಚುನಾವಣೆಯಲ್ಲಿ ಅದು ಪ್ರೇರಕ ಸೆಲೆಯಾಗಿ, ಗುಪ್ತಗಾಮಿನಿಯಂತೆ ಕೆಲಸ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಹೋರಾಟದ ಕಿಚ್ಚು ರಾಜ್ಯದ ಉದ್ದಕ್ಕೂ ಒಂದೇ ರೀತಿ ಕಾವು ಉಳಿಸಿಕೊಂಡಿದೆ ಎಂದು ಹೇಳಲಾಗದಿದ್ದರೂ ಅರ್ಧದಷ್ಟು ಪ್ರದೇಶದಲ್ಲಿ ಅದರ ಬಿಸಿ ಇದೆ. ಕಟ್ಟುವ ಕೆಲಸಕ್ಕೆ ಅದನ್ನು ಸದ್ಬಳಕೆ ಮಾಡಬೇಕಾಗಿದ್ದ ರಾಜಕಾರಣಿಗಳು, ಅಧಿಕಾರ ಲಾಲಸೆಗೆ ದುರ್ಬಳಕೆ ಮಾಡಲು ಮುಂದಾಗಿರುವುದು ವಿಪರ್ಯಾಸ.

ವಿವಿಧ ಪಕ್ಷಗಳ ನಡುವಣ ಹೊಂದಾಣಿಕೆಯಲ್ಲೂ ವಿರೋಧಾಭಾಸಗಳೇ ರಾಚುತ್ತವೆ. ಒಮ್ಮೆ ಬಲಪಂಥೀಯರ ಜತೆ ಮತ್ತೊಮ್ಮೆ ಎಡಪಂಥೀಯರ ಜತೆ ಹೆಜ್ಜೆ ಹಾಕುವ ತತ್ವಗೇಡಿ ನಡೆಗಳೇ ಕಾಣಸಿಗುತ್ತವೆ. ಒಮ್ಮೆ ಕಾಂಗ್ರೆಸ್ ಜತೆ ಕೈಜೋಡಿಸಿದ್ದ ಟಿಆರ್‌ಎಸ್ ನಂತರ ಟಿಡಿಪಿ ಜತೆಗೂಡಿತು. ಯಾವ ಪ್ರಧಾನ ಪಕ್ಷದೊಂದಿಗೂ ಮೈತ್ರಿ ಇಲ್ಲದೇ ಮೊದಲ ಬಾರಿಗೆ ಸಾಮರ್ಥ್ಯ ಪಣಕ್ಕೆ ಒಡ್ಡಿದೆ. ಕಾಂಗ್ರೆಸ್ ಜತೆ ‘ವಿಲೀನ’ದ ನಾಟಕವಾಡುತ್ತಲೇ ಬಿಜೆಪಿ ಜತೆ ಹೊಂದಾಣಿಕೆಗೂ ಪ್ರಯತ್ನಿಸಿತ್ತು. ಬಿಜೆಪಿ ವರಿಷ್ಠರಿಗೆ ಟಿಡಿಪಿ ಸಖ್ಯವೇ ಹಿತವಾಗಿ ಕಂಡಿದ್ದರಿಂದ, ಅದು ಕುದುರಲಿಲ್ಲ ಎಂಬ ಮಾತಿದೆ.

ಅನುಕೂಲಸಿಂಧು ಹೊಂದಾಣಿಕೆಯಲ್ಲಿ ಟಿಡಿಪಿ ಒಂದು ಕೈ ಮೇಲೆ ಎಂದೇ ಹೇಳಬಹುದು. ‘ತೃತೀಯ ರಂಗಕ್ಕೂ ಸೈ. ಎನ್‌ಡಿಎಗೂ ಜೈ’ ಎಂಬುದು ಅದರ ಎಡಬಿಡಂಗಿ ನಿಲುವು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಸಿಪಿಐ ನಡುವೆ ಸೀಟು ಹೊಂದಾಣಿಕೆ ಆಗಿದೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಸಿಪಿಎಂ ನಡುವೆಯೂ ಮೈತ್ರಿ ಮೂಡಿದೆ.

ಈ ಹೊಸ ಹೊಂದಾಣಿಕೆಗಳಿಂದ ಬೇರು ಮಟ್ಟದ ಕಾರ್ಯಕರ್ತರು ದಿಕ್ಕೆಟ್ಟು, ಚೆಲ್ಲಾಪಿಲ್ಲಿಯಾಗಿದ್ದಾರೆ. ತೆಲಂಗಾಣ ‘ಸೆಂಟಿಮೆಂಟ್’, ಹೊಸ ಸಮೀಕರಣಗಳು, ನಾಲ್ಕಾರು ಪಕ್ಷಗಳು, ಅವುಗಳ ನಡುವೆ ಮತಗಳ ಹಂಚಿ ಹೋಗುವಿಕೆ, ಹೊಸಬರ ಸ್ಪರ್ಧೆ ಮೊದಲಾದ ಅಂಶಗಳು ಈ ಚುನಾವಣೆಯನ್ನು ಗೋಜಲುಗೊಳಿಸಿವೆ. ಹೆಚ್ಚಿನ ಕ್ಷೇತ್ರಗಳಲ್ಲಿ ಟಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಇದೆ ಎಂಬುದಷ್ಟೇ ಈ ಕ್ಷಣಕ್ಕೆ ದಿಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.