ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಾತಿ ರಾಜಕಾರಣ: ರಾಜ್ಯಾಂಗಕ್ಕೆ ದ್ರೋಹ'

ಪ್ರವಾಸದಲ್ಲಿ ಕಂಡಿದ್ದು, ಕೇಳಿದ್ದು...
Last Updated 25 ಏಪ್ರಿಲ್ 2013, 15:33 IST
ಅಕ್ಷರ ಗಾತ್ರ

ಮಂಡ್ಯ: `ಜಾತಿ ಮೇಲೆ ವೋಟ್ ಕೇಳ್ತಾ ಇರೋದು ರಾಜ್ಯಾಂಗಕ್ಕೆ ಮಾಡುವ ದ್ರೋಹ'. ಇದು ಹಿರಿಯ ರಾಜಕಾರಣಿ ಮಾದೇಗೌಡರ ಸ್ಪಷ್ಟ ಅಭಿಪ್ರಾಯ.

ಕೆ. ಎಂ. ದೊಡ್ಡಿಯಲ್ಲಿ ಭಾರತೀನಗರ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಮೊದಲ ಬಾರಿಗೆ ಮತದಾರರಾಗಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿ ಕುತೂಹಲಕ್ಕೆಂದು ಸಂಸ್ಥೆಯ ಆವರಣವನ್ನು ಒಂದು ಸುತ್ತು ಹಾಕಿ ಬರಲು ಹೋದಾಗ, ಅಲ್ಲೊಂದು ಕಡೆ ಹಿರಿಯ ರಾಜಕಾರಣಿಗಳೆಲ್ಲ ಗುಂಪಾಗಿ ಕೂತಿದ್ದರು. ಹತ್ತಿರ ಸಾಗಿದಾಗ ಮುಂಚೂಣಿಯಲ್ಲಿ  ಜಿ. ಮಾದೇಗೌಡರು ಕಂಡರು. ಪರಿಚಯ ಹೇಳಿಕೊಂಡಾಗ, ಜಾತಿ ರಾಜಕಾರಣ ಮಾಡುತ್ತಿರುವವರ ವಿರುದ್ಧ ಹರಿಹಾಯುತ್ತಲೇ ಗೋಲ್ಡ್ ಫ್ಲೇಕ್‌ಗೆ ಕಡ್ಡಿ ಗೀರಿ ದಂ ಎಳೆಯುತ್ತ ಮಾತು ಶುರು ಮಾಡಿದರು.

 `ಇ

ತ್ತೀಚಿನ ರಾಜಕಾರಣಿಗಳು ಈ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿದ ಮಾದೇಗೌಡರಿಗೆ, `ಯಾರು ಈ ಜಾತಿ ಬೀಜ ಬಿತ್ತಿದ ಮಹಾನುಭಾವರು' ಎಂದು ಪ್ರಶ್ನಿಸಿದೆ.

`ಇತ್ತೀಚೆಗೆ ಅಂದ್ರೆ, 15- 20 ವರ್ಷದಿಂದ ಬಂದವರೆಲ್ಲ ಇದೇ ಜಾಯಮಾನದವರು' ಎಂದರು. `ಅಂದ್ರೆ ದೇವೇಗೌಡ್ರಾ' ಎಂದೆ.

`ಸುಮ್ಮ ಸುಮ್ಮನೇ ಏನೇನೋ ಬರೆಯಬೇಡಿ. ನೀವೇ (ಮಾಧ್ಯಮದವರು) ರಾಜಕಾರಣಿಗಳ ಮಧ್ಯೆ ವಿರಸ ತಂದು ಇಡುವವರು. ಈಗ ನಾನೇನೋ ಹೇಳಬೇಕು. ಆ ದೇವೇಗೌಡ ಅದಕ್ಕೆ ಇನ್ನೇನೋ ಉತ್ತರ ಕೊಡಬೇಕು. ಯಾಕ್ ಬೇಕ್ರಿ ಇಂತಾ ಉಸಾಬರಿ'  ಎಂದು  ಸಿಟ್ಟು ಮಾಡಿಕೊಂಡರು.

`ನಿಮ್ಮ ಕಾಳಜಿ, ಮತ - ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿರುವವರ ವಿರುದ್ಧ ಇದೇ ಅಲ್ವಾ. ಅದಕ್ಕೆ ಸ್ವಲ್ಪ ವಿವರಣೆ ಕೇಳಿದೆ ಬಿಡಿ' ಎಂದೆ.

`ನೋಡಿ ಈಗ ದಲಿತರು, ಒಕ್ಕಲಿಗರು, ಲಿಂಗಾಯತರು ಮುಖ್ಯಮಂತ್ರಿ ಆಗಬೇಕು, ಅದಕ್ಕೆ ನಮಗೆ ವೋಟ್ ಕೊಡಿ  ಎಂದು ಓಡಾಡ್ತಾ ಇದಾರಲ್ಲ. ಇವರೆಲ್ಲ ರಾಜ್ಯಾಂಗಕ್ಕೆ ತೀವ್ರ ಅಪಚಾರ ಎಸಗ್ತಾ ಇದಾರೆ. ಇದು ಒಳ್ಳೆಯದಲ್ಲ.                      ಕಾಂಗ್ರೆಸ್ ಸಂಸ್ಕೃತಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯುತ್ತದೆ. ಅದೇ ಅಂತಿಮ ನಿರ್ಧಾರವಾಗಿರುತ್ತದೆ' ಎಂದರು.

`ರಾಜ್ಯದ ಮೊದಲ ಮುಖ್ಯಮಂತ್ರಿ ಕೆ. ಸಿ. ರೆಡ್ಡಿ ಸಂಪುಟದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ ಸಿದ್ಲಿಂಗಯ್ಯನೋರು, ವಿದ್ಯುತ್ ತಂತಿ ಹಗರಣ ನಡೆದಿದೆ ಎಂದು ಬರೀ ಇಲಾಖೆ ಹೆಸರು ಉಲ್ಲೇಖಿಸಿ ಬಂದ ಪತ್ರಿಕಾ ವರದಿ ಆಧರಿಸಿ ರಾಜೀನಾಮೆ ಸಲ್ಲಿಸಿದರು. ನಿಜಲಿಂಗಪ್ಪ ಸಂಪುಟದಲ್ಲಿ ಯಶೋದರಮ್ಮ ದಾಸಪ್ಪ, ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ  ಪಾನ ನಿಷೇಧ ಜಾರಿಗೆ ತರುವ ಭರವಸೆಗೆ ಪಟ್ಟು ಹಿಡಿದರು. 

ನಿಜಲಿಂಗಪ್ಪ ಅದನ್ನು ಕಿವಿಗೆ ಹಾಕಿಕೊಳ್ಳದೇ ತೇಲಿಸಿದಾಗ ಪ್ರತಿಭಟಿಸಿ ರಾಜೀನಾಮೆ ಸಲ್ಲಿಸಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು  ರೈಲ್ವೆ ದುರಂತದ ಹೊಣೆ ಹೊತ್ತು  ಪದತ್ಯಾಗ ಮಾಡಿದರು. ನಾನು ಕಾವೇರಿ ವಿವಾದದಲ್ಲಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದೆ. ಈಗಿನ ರಾಜಕಾರಣಿಗಳಲ್ಲಿ ಅಂತಹ ಪ್ರವೃತ್ತಿಯೇ ಕಾಣುತ್ತಿಲ್ಲ' ಎಂದು ವಿಷಾದಿಸಿದರು.

`ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸೇರಿದಂತೆ ಲಂಚ ಹೊಡೆದ ಕೆಲವರು ಜೈಲಿಗೆ ಹೋಗ ಬಂದವ್ರೆ. ಜೈಲಿಗೆ ಹೋಗಿ ಬಂದ ಯಾರೇ ಆಗಲಿ ಮರ್ಯಾದೆಗೆ ಅಂಜಿ ಮನೆಯಲ್ಲಿ ಇರ್ತಾರೆ. ಆದರೆ ನಮ್ಮಲ್ಲಿ ನೋಡಿ! ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ'.

*ಜನ ಕಾಂಗ್ರೆಸ್‌ಗೆ ಯಾಕೆ ವೋಟ್ ಮಾಡಬೇಕು.
-ಕಾಂಗ್ರೆಸ್ ಜನರನ್ನು ಒಂದುಗೂಡಿಸಿದೆ. ಎಲ್ಲೆಡೆ ಅಭಿವೃದ್ಧಿ ತಂದಿದೆ.

*ನೀವು ಇಂತಹ ಮಾತುಗಳ ಮೂಲಕ ಹಳಬರನ್ನು  ಓಲೈಸಬಹುದು. ಹೊಸ ಪೀಳಿಗೆಗೆ ಏನೆಂದು ಮನವರಿಕೆ ಮಾಡಿಕೊಡುವಿರಿ?
- ಯುವ ಪೀಳಿಗೆಗೂ ಕಾಂಗ್ರೆಸ್ ಸಾಧನೆ ತಿಳಿ ಹೇಳುವ ಕೆಲಸ ತುರ್ತಾಗಿ ಆಗಬೇಕಾಗಿದೆ.

*ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಖಂಡಿತವಾಗಿಯೂ ಬರುತ್ತಾ?
-ಕಾಂಗ್ರೆಸ್ ಅನಿವಾರ್ಯ. ಅದಕ್ಕೆ ದಯವಿಟ್ಟು ಪಕ್ಷಕ್ಕೆ ವೋಟ್ ಮಾಡಿ ಎಂದು ಮನವಿ ಮಾಡಿ ಕೊಳ್ತೇನೆ.

*ಅಂಬರೀಷ್ ಬಂಡಾಯದ ಬಗ್ಗೆ ಏನು ಹೇಳುವಿರಿ?
-ಯಾವಾಗ ಬಂಡಾಯ (ಎಂದು ಮರು ಪ್ರಶ್ನಿಸುತ್ತಲೇ ವಿಷಯ ತೇಲಿಸಿದರು) ಮಂಡ್ಯ ಜನ ಬಹಳ ಬುದ್ಧಿವಂತರು. ನನ್ನ, ಕೃಷ್ಣ ಅಥವಾ  ಅಂಬರೀಷ್ ಮಾತನ್ನ ಕೇಳ್ಕೊಂಡು ವೋಟ್ ಹಾಕಲ್ಲ.

*ಒಕ್ಕಲಿಗರ ಮತ ಹಂಚಿ ಹೋದ್ರೆ. ಯಾರನ್ನು ನೆಚ್ಚಿಕೊಳ್ತೀರಿ?
- ಜಾತಿ - ಮತದಲ್ಲಿ ನನಗೆ ನಂಬಿಕೆ ಇಲ್ಲ.  ಸಮಾಜದ ಎಲ್ಲ ವರ್ಗದವರೂ ನಮ್ಮ ಕೈ ಹಿಡಿಯುವ ವಿಶ್ವಾಸ ಇದೆ.

*ಎಸ್.ಎಂ. ಕೃಷ್ಣ ಮೂಲೆಗುಂಪು ಆಗಿದ್ದಾರೆಯೇ?
ಯಾರು ಹೇಳಿದ್ರು. ಪ್ರಚಾರಕ್ಕೆ ಬರ್ತಾರೆ. ಮಂಡ್ಯಕ್ಕೂ ಬರ್ತೀನಿ ಎಂದು ಒಪ್ಪಿಕೊಂಡಿದ್ದಾರೆ.

*ಅವರ ವರ್ಚಸ್ಸು ಕಡಿಮೆಯಾಗಲು ಕಾರಣ?
-ಅವರನ್ನೇ ಕೇಳಿ.

- `ನನ್ನ ಮಗನಿಗೆ ವೋಟ್ ಕೊಡಿ. 1 ವರ್ಷದೊಳಗೆ ಕೆಲ್ಸ ಮಾಡದಿದ್ರೆ  ಅವನಿಗೆ ಚಪ್ಪಲಿ ತಗೊಂಡು ಹೊಡೆದು ಕೆಳಗಿಳಿಸೆಂದು ಎಂದು ಮತದಾರರಿಗೆ ಹೇಳ್ತಾ ಇದ್ದೇನೆ. ನಾನು ಎಷ್ಟು ಹೇಳಿದ್ದೀನಿ ಅಷ್ಟೇ ಬರೆಯಿರಿ' ಎಂದು ತಾಕೀತು ಮಾಡಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT