ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿ ಸಾಧ್ಯವೆ?

Last Updated 11 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಮಾತು ನಿರಂತರವಾಗಿ ಕೇಳಿಬರುತ್ತಲೇ ಇದೆ. ಜನತಂತ್ರದ ಬೇರುಗಳನ್ನು ಗಟ್ಟಿಗೊಳಿಸಲು ಇದು ಅಗತ್ಯವೂ ಹೌದು. ಆದರೆ ಇದನ್ನು ಸಾಧಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ವಿಚಾರದಲ್ಲಿ ಭಿನ್ನ ಧ್ವನಿಗಳಿವೆ. ರಾಜಕೀಯ ಶುದ್ಧೀ ಕರಣ, ಜನ ಜಾಗೃತಿಯಂಥ ಉಪಕ್ರಮಗಳಿಂದ  ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಬೇಕು ಎಂದು ಹಲವರು ಹೇಳಿದರೆ, ಮತ್ತೆ ಕೆಲವರು  ಮತದಾನವನ್ನು ಕಡ್ಡಾಯ­ಗೊಳಿಸುವ ತೀವ್ರಗಾಮಿ ಪ್ರಯತ್ನದ ಅಗತ್ಯವನ್ನು ಪ್ರತಿಪಾದಿಸುತ್ತಾರೆ.

ಜನ ಜಾಗೃತಿ ಪ್ರಯತ್ನಗಳು ಪ್ರತೀ ಚುನಾವಣೆ ಸಂದರ್ಭದಲ್ಲೂ ಬೇರೆ ಬೇರೆ ನೆಲೆಗಳಲ್ಲಿ ನಡೆಯುತ್ತಿವೆ. ಸ್ವಲ್ಪಮಟ್ಟಿಗೆ ಪರಿಣಾಮವನ್ನೂ ಬೀರಿವೆ. ಆದರೆ ಕಡ್ಡಾಯ ಮತದಾನ ಇಲ್ಲಿಯವರೆಗೆ ದೇಶದಲ್ಲಿ ಎಲ್ಲೂ ಕ್ರಿಯೆಗೆ ಇಳಿದಿಲ್ಲ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗುಜರಾತ್‌ ಮುನ್ನುಡಿ ಬರೆಯಲು ಮುಂದಾಗಿರುವುದು ಕುತೂಹಲ ಮೂಡಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ‘ಗುಜರಾತ್‌ ಸ್ಥಳೀಯ ಸಂಸ್ಥೆಗಳ ಕಾನೂನು (ತಿದ್ದುಪಡಿ) ಮಸೂದೆ’ಗೆ ರಾಜ್ಯಪಾಲರ ಅಂಕಿತ ಬಿದ್ದಿದ್ದು, ಮತದಾನ ಮಾಡದೇ ಇದ್ದರೆ ಅಂಥವರಿಗೆ ಶಿಕ್ಷೆ ಇಲ್ಲವೇ ದಂಡ ವಿಧಿಸಲು ಇದು ಅವಕಾಶ ಕಲ್ಪಿಸುತ್ತದೆ ಎಂಬುದು ಗಮನಿಸಬೇಕಾದ ಅಂಶ. ಆಕ್ಷೇಪ ಮುಖ್ಯವಾಗಿ ಎದುರಾಗಿರು ವುದೇ ಈ ಅಂಶಕ್ಕೆ.

ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ ವಿಧಾನ­ಮಂಡಲವು  ಈ ಮಸೂದೆಗೆ ಎರಡು ಬಾರಿ ಅಂಗೀಕಾರದ ಮುದ್ರೆ ಒತ್ತಿ­ದರೂ ಅದಕ್ಕೆ ರಾಜ್ಯಪಾಲರ ಅನುಮೋದನೆ ದೊರೆತಿರಲಿಲ್ಲ.  ಸಂವಿಧಾನ, ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯಕ್ಕೆ ಈ ಮಸೂದೆ ಧಕ್ಕೆ ತರುತ್ತದೆ ಎಂದು ಹೇಳಿ ರಾಜ್ಯಪಾಲರಾಗಿದ್ದ ಕಮಲಾ ಬೇನಿವಾಲ್‌ ಅವರು  ಮಸೂದೆಯನ್ನು ಮರು ಪರಿಶೀಲನೆಗೆ ಒಳಪಡಿಸುವಂತೆ ಸೂಚಿಸಿ ಹಿಂದಕ್ಕೆ ಕಳುಹಿಸಿದ್ದರು. ಕಮಲಾ ಅವರ ಸ್ಥಾನಕ್ಕೆ ಈಗ ಒ.ಪಿ. ಕೊಹ್ಲಿ ಬಂದಿದ್ದಾರೆ.

ಅದರ ಬೆನ್ನಿಗೇ ಈ ಮಸೂದೆಗೆ ಒಪ್ಪಿಗೆಯೂ ದೊರೆತಿದೆ. ಆದರೆ ಕಮಲಾ ಅವರು ಎತ್ತಿದ್ದ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ. ಇದರ ಸಿಂಧುತ್ವ ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಕಟ್ಟೆ ಏರಿದರೆ ಅಲ್ಲಿ ಊರ್ಜಿತಗೊಳ್ಳುವುದೇ ಎಂಬ ಅನುಮಾನಗಳನ್ನೂ ಹುಟ್ಟು ಹಾಕಿದೆ. ಮಸೂದೆ ತಂದಿರುವುದರ ಹಿಂದಿನ ಉದ್ದೇಶ ಒಳ್ಳೆಯದಿರಬಹುದು. ಆದರೆ ಕಾನೂನಿನ ದಂಡ ಹಿಡಿದು ಕಡ್ಡಾಯವಾಗಿ ವೋಟು ಹಾಕಿಸುವುದು ಎಷ್ಟರಮಟ್ಟಿಗೆ ಸರಿ. ಇದರಿಂದ ವ್ಯಕ್ತಿಯ ಸ್ವಾತಂತ್ರ್ಯಹರಣ ಆಗುವುದಿಲ್ಲವೆ ಎಂಬ ಪ್ರಶ್ನೆಗಳಿಗೆ ಗುಜರಾತ್‌ ಸರ್ಕಾರ ಉತ್ತರಿಸಬೇಕಿದೆ. ಚುನಾವಣಾ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಜನರು ತಾವಾಗಿಯೇ ಪಾಲ್ಗೊಳ್ಳಬೇಕು.

ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿಸುವ ಕಡೆ ಚುನಾವಣಾ ಆಯೋಗ ಹಾಗೂ ರಾಜಕೀಯ ಪಕ್ಷಗಳು  ಗಮನ ಕೇಂದ್ರೀಕರಿಸಬೇಕು. ರಾಜಕೀಯ ಅಪರಾಧೀಕರಣ ತಗ್ಗಿಸಲು ಮತ್ತಷ್ಟು ಕಟಿಬದ್ಧವಾಗಿ ಕೆಲಸ ಮಾಡಬೇಕು.  ಅಭ್ಯರ್ಥಿಗಳ ಆಯ್ಕೆಯಿಂದ, ಸರ್ಕಾರದ ಆಡಳಿತದವರೆಗೆ ಸುಧಾರಣೆಗಳನ್ನು ತರುವ ಮೂಲಕ ವ್ಯವಸ್ಥೆ ಕುರಿತು ಜನರಲ್ಲಿ ವಿಶ್ವಾಸ ಕುದುರಿಸಿದರೆ ಅವರೇ ಸ್ವಇಚ್ಛೆಯಿಂದ ಮತಗಟ್ಟೆಗಳಿಗೆ ಧಾವಿಸಿ ವೋಟು ಹಾಕುತ್ತಾರೆ. ವಿಶ್ವಾಸದ ಮೂಲಕ ಜನರ ಮನಸ್ಸು ಗೆಲ್ಲಬೇಕೆ ಹೊರತು ದಂಡ ಪ್ರಯೋಗದಿಂದ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT