ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರ್ಣೋದ್ಧಾರಕ್ಕೆ ಕಾದಿರುವ ಸದಾಶಿವಗಡ ಕೋಟೆ

Last Updated 4 ಆಗಸ್ಟ್ 2014, 8:33 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಕಾಳಿಸೇತುವೆ ಬಳಿಯಲ್ಲಿರುವ ಪ್ರವಾಸಿ ತಾಣ ಹಾಗೂ ಐತಿಹಾಸಿಕವಾದ ಸದಾಶಿವಗಡ ಕೋಟೆಯು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಜೀರ್ಣೋದ್ಧಾರಕ್ಕಾಗಿ ಕಾದುನಿಂತಿದೆ. 

ಹಿಂದೆ ಸದೃಢವಾಗಿದ್ದ ಕೋಟೆಯ ಗೋಡೆಗಳು ಈಗ ಅಲ್ಲಲ್ಲಿ ಕುಸಿದಿವೆ. ಕೋಟೆಗೆ ಹೋಗುವ ಡಾಂಬರು ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಪೂರ್ಣ ಹಾಳಾಗಿವೆ. ಸುತ್ತಮುತ್ತ ಆಳೆತ್ತರದ ಗಿಡಗಂಟಿಗಳು ಬೆಳೆದು ಕೋಟೆ ಸೌಂದರ್ಯಕ್ಕೆ ಧಕ್ಕೆ ತಂದಿವೆ. ಇನ್ನು ಪ್ರವೇಶದ್ವಾರಗಳು, ಕಾವಲು ಗೋಪುರಗಳು, ಸುಪ್ತ ದ್ವಾರಗಳು, ಕಿಂಡಿ ತೋಪುಗಳು, ಶಿಲಾಬರಹಗಳು ಮುಂತಾದವು ಚರಿತ್ರೆಯ ಕುರುಹುಗಳಾಗಿ ನಿಂತಿವೆ.

ಕಾಳಿನದಿ ತೀರದ ಗುಡ್ಡದ ತುದಿಯಲ್ಲಿರುವ ಈ ಕೋಟೆ ಸುಮಾರು 200 ಅಡಿ ಎತ್ತರ ಇದೆ. ಇದನ್ನು ೧೬೯೮ರಲ್ಲಿ ಸೋಂದೆಯ ಒಂದನೇ ಸದಾಶಿವ ನಾಯಕ ನಿರ್ಮಿಸಿದ. ಇದೇ ಕೋಟೆಯಲ್ಲಿ ದುರ್ಗಾದೇವಿಯ ದೇವಸ್ಥಾನ ಇದೆ. ಸುಂದರವಾದ ‘ಪೀರ್‌ ಕರಿಮುದ್ದೀನ ಮಸೀದಿ’ ಕೂಡ ಇಲ್ಲಿದೆ. ಆಯಕಟ್ಟಿನ ಪ್ರದೇಶದಲ್ಲಿದ್ದ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಕದಂಬರು, ವಿಜಯನಗರದ ಅರಸರು, ಪೋರ್ಚುಗೀಸರು ಕಾತರರಾಗಿದ್ದರು. ಸೋಂದೆ ಅರಸನ ನಂತರ ಈ ಕೋಟೆ ಮರಾಠರ ಅಧೀನದಲ್ಲಿತ್ತು. ೧೬೬೫ರಲ್ಲಿ ಶಿವಾಜಿ ಇಲ್ಲೊಂದು ದುರ್ಗಾದೇವಿಯ ಗುಡಿ ಕಟ್ಟಿಸಿದ. ಮುಂದೆ ಹೈದರಾಲಿ, ಟಿಪ್ಪು ವಶಕ್ಕೆ ಬಂದು ಕೊನೆಗೆ ಬ್ರಿಟಿಷರ ವಶವಾಯಿತು ಎಂದು ಇತಿಹಾಸ ಸಾರುತ್ತದೆ. 

ಕಾರವಾರದಿಂದ ಗೋವಾಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯು ಈ ಕೋಟೆಯಿರುವ ಗುಡ್ಡವನ್ನು ಸೀಳಿಕೊಂಡು ಹೋಗಿದೆ. ಗುಡ್ಡದಲ್ಲಿ ಖಾಸಗಿ ರೆಸಾರ್ಟ್‌ ಕೂಡ ಇದೆ. ಈ ಗುಡ್ಡದ ತುದಿಯಿಂದ ನಿಂತು ನೋಡಿದರೆ ಕಾಣುವ ದೃಶ್ಯಗಳು ನಯನ ಮನೋಹರವಾಗಿದೆ. ಇಲ್ಲಿಂದ ಸೂರ್ಯೋದಯ, ಸೂರ್ಯಸ್ತದ ಕ್ಷಣಗಳನ್ನು ಕಣ್ತುಂಬ ಸವಿಯಬಹುದು. ಅಲ್ಲದೇ ಕಾಳಿ ನದಿಯ ಸಂಗಮ ಹಾಗೂ ಪಶ್ಚಿಮಘಟ್ಟದ ಸಾಲುಗಳ ಸೊಬಗು ಮನಸ್ಸಿಗೆ ಮುದ ನೀಡುತ್ತವೆ.

‘ಸದಾಶಿವಗಡ ಕೋಟೆಯ ಬಗ್ಗೆ ಎಷ್ಟೋ ಮಂದಿಗೆ ಪರಿಚಯವೇ ಇಲ್ಲ. ಕುಸಿದುಬಿದ್ದಿರುವ ಕೋಟೆಯನ್ನು ಮತ್ತು ಪಿರಂಗಿಗಳ ಪಳೆಯುಳಿಕೆಗಳನ್ನು ಸದಾಶಿವಗಡ ಗುಡ್ಡದ ಮೇಲೆ ಈಗಲೂ ಕಾಣಬಹುದು. ಐತಿಹಾಸಿಕವಾಗಿರುವ ಈ ಕೋಟೆಯನ್ನು ಪ್ರವಾಸೋದ್ಯಮ ಇಲಾಖೆಯವರು ಸಂರಕ್ಷಿಸಿ ಜೀರ್ಣೋದ್ದಾರ ಕಾರ್ಯ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಸ್ಥಳೀಯರಾದ ರಾಜೇಶ್‌ ಮಾಳ್ಸೇಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT