ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದ ಕಿಚಡಿ, ಮಜ್ಜಿಗೆ ಸಾರಿನ ವಿಶೇಷತೆ ಹಬ್ಬ

ಭಕ್ತಿ-ಭಾವದ ಪ್ರತೀಕ ಆಷಾಢ ಪರ್ವ
Last Updated 21 ಜುಲೈ 2014, 10:01 IST
ಅಕ್ಷರ ಗಾತ್ರ

ಬೆನಕಟ್ಟಿ (ಅಮೀನಗಡ): ಗ್ರಾಮದ ಪ್ರತಿಯೊಂದು ಮನೆಯಿಂದ ಕಂಬಳಿಯನ್ನು ತಲೆಗೆ ಹಾಕಿಕೊಂಡು ಅದರ ಮೇಲೆ ಮಣ್ಣಿನ ಮಡಕೆ (ಗಡಿಗೆ)ಯನ್ನು ಹೊತ್ತು ಹೊರ ಬರುತ್ತಿದ್ದರು. ಗ್ರಾಮದ ಹೃದಯ ಭಾಗದಲ್ಲಿರುವ ಹನಮಂತ ದೇವರ ದೇವಸ್ಥಾನದ ಬಳಿ ಸೇರಿ ಅಲ್ಲಿಂದ ಪ್ರತಿ­ಯೊ­ಬ್ಬರು ಸಾಲಾಗಿ ಬಾಜಾ ಭಜಂತ್ರಿ, ಹಲಗೆ, ಡೊಳ್ಳು ಮೇಳದೊಂದಿಗೆ ಊರು ಹೊರಗೆ ಹೆಜ್ಜೆ ಹಾಕುತ್ತಿದ್ದರು.... ಮೆರವಣಿಗೆ ಹೊರಟಿದ್ದವರ ಮುಂದೆ ಮುಂದೆ ಹೆಂಗಳೆಯರು ನೀರೆರೆದು ಸ್ವಾಗತಿಸುತ್ತಿದ್ದರು.

ಇದು ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ­ಯಲ್ಲಿ ನಡೆದ ‘ಆಷಾಢ ಪರ್ವದ’ ವಿಶೇಷ. ಆಷಾಢ ಮಾಸದ ಹುಣ್ಣಿಮೆ ನಂತರದ ಮೊದಲ ಶುಕ್ರವಾರದಂದು ಪ್ರತಿ ವರ್ಷ ಗ್ರಾಮದ ಹೊರ­ವಲ­ಯದಲ್ಲಿರುವ ‘ಕಂಚಿ ವೆಂಕಟೇಶ್ವರ’ ದೇವ­ಸ್ಥಾನದಲ್ಲಿ ‘ಆಷಾಢಪರ್ವ’ (ಎಂಕಂಚೆಪ್ಪನ ಪರು) ಕಾರ್ಯಕ್ರಮ ಆಚರಿಸಲಾಗುತ್ತದೆ. ಗ್ರಾಮದ ಜನರು ಶ್ರದ್ಧಾ-ಭಕ್ತಿ , ಸಡಗರ ಸಂಭ್ರಮದಿಂದ ನೆರವೇರಿಸಿದರು.

ಗ್ರಾಮದ ಪ್ರತಿ ಮನೆಯಲ್ಲಿ ತಯಾರಿಸಿದ ಜೋಳದ ಕಿಚಡಿಯ ಗಡಿಗೆಯನ್ನು ಬುಟ್ಟಿಯಲ್ಲಿ ಹೊತ್ತ ಪುರುಷರು ಹನಮಂತ ದೇವರ ದೇವಸ್ಥಾನದ ಬಳಿ ಸೇರಿ ಬಾಜಾ-ಭಜಂತ್ರಿ, ಹಲಗೆ, ಡೊಳ್ಳುಮೇಳದೊಂದಿಗೆ ಮೆರವಣಿಗೆಯಲ್ಲಿ ಊರ ಹೊರವಲಯದ ಕಂಚಿವೆಂಕಟೇಶ್ವರ (ಯಂಕಂಚೆಪ್ಪ)ದೇವಸ್ಥಾನಕ್ಕೆ ಸಾಗಿದರು.

ಮಾರ್ಗದುದ್ದಕ್ಕೂ ‘ವೆಂಕಟರಮಣ ಗೋವಿಂದಾ...ಗೋವಿಂದ...’ ಎಂಬ ನಾಮ­ಸ್ಮರಣೆ ಹೇಳುತ್ತಾ ಸಾಗಿ ಬಂದ ಗಡಿಗೆ ಹೊತ್ತ ಯುವಕರು, ರೈತರು, ದೇವಸ್ಥಾನದ ಕಟ್ಟೆಯ ಮೇಲೆ ತಾವು ತಂದಿದ್ದ ಜೋಳದ ಕಿಚಡಿಯನ್ನು ಒಂದೇ ರಾಶಿಯಲ್ಲಿ ಸುರಿದು ದೇವರಿಗೆ ನೈವೇದ್ಯ ಮಾಡಿ, ಗೋಪಾಳ ತುಂಬಿಸಿ ಈ ವರ್ಷ ಒಳ್ಳೆಯ ಮಳೆ, ಬೆಳೆ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಎಲ್ಲ ಪೂಜಾ ಕಾರ್ಯಕ್ರಮ­ಗಳನ್ನು ಪೂರೈಸಿದ ನಂತರ ಪಾಲ್ಗೊಂಡಿರುವ ಸಮಸ್ತ ಭಕ್ತರು  ಕಿಚಡಿ ಹಾಗೂ ಕಟ್ಟಿನ ಸಾರು ಮತ್ತು ಮಜ್ಜಿಗೆ ಸಾರಿನ ಸವಿಯನ್ನು ಸವಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಮೇಲಪ್ಪ ಬೆಣ್ಣೂರ, ಹನಮಪ್ಪ ಬೆಣ್ಣೂರ, ಡಾ.ಶಿವಣ್ಣ ಅಮಾತೆಪ್ಪನವರ, ರಾಮಚಂದ್ರ ದಾಸಪ್ಪನವರ, ಕೆ.ಸಿ. ಬೆಣ್ಣೂರ, ಗಿರೀಶ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು.

ಜೋಳದ ಕಿಚಡಿ ಹಾಗೂ ಮಜ್ಜಿಗೆ ಸಾರು ಈ ಕಾರ್ಯಕ್ರಮದ ವಿಶೇಷ ಅಡುಗೆಯಾಗಿರು­ವು­ದರಿಂದ ಈ ಊಟವನ್ನು ಸವಿಯುವುದೇ ಒಂದು ಸಡಗರ. ಊರಿನ ರೈತಾಪಿ ವರ್ಗಕ್ಕೆ ಇದು ವೈಭವ ಹಾಗೂ ಸಡಗರದ ಕಾರ್ಯಕ್ರಮವಾಗಿದ್ದು ಮಳೆ, ಬೆಳೆ ಉತ್ತಮವಾಗಿ ಬರಲಿ ಎಂದು ಪ್ರಾರ್ಥಿಸುವುದೇ ಈ ಪರ್ವದ ಉದ್ದೇಶ ಎಂದು ಪ್ರಕಾಶ ಬಾಳಕ್ಕನವರ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT