ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಸಸಿಗೆ ಕಾಮಧೇನು ಗೊಬ್ಬರ

ಪುಸ್ತಕ ಪ್ರೀತಿ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಶೇಷಾದ್ರಿಪುರದ ನಾಗಪ್ಪ ಸ್ಟ್ರೀಟ್‌ನಲ್ಲಿರುವ ಕಾಮಧೇನು ಪುಸ್ತಕ ಭವನ ಅದು. ‘ಪುಸ್ತಕ ಮಾತ್ರ ನಿಮಗೆ ನೆಮ್ಮದಿ ತರಬಲ್ಲದು’ ಎಂಬ ಅಲ್ಲಿನ ಬರಹ ಕಂಡು ಮನಸ್ಸು ತುಂಬಿ ಬಂತು. ಇದು ಪುಸ್ತಕ ಭವನದ ಧ್ಯೇಯವಾಕ್ಯವೂ ಆಗಿದೆ ಎಂಬುದು ತಿಳಿದದ್ದು ಅದರ ಮಾಲೀಕರನ್ನು ಮಾತನಾಡಿಸಿದಾಗ.

ಭವನದ ಮಾಲೀಕ ಡಿ.ಕೆ.ಶ್ಯಾಮಸುಂದರ ರಾವ್‌ ಅವರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪರಿಯಲ್ಲಿ ತಮ್ಮಲ್ಲಿ ಲಭ್ಯವಿರುವ ಕೃತಿಗಳ ಮಾಹಿತಿಯನ್ನು ಹೇಳುತ್ತಾ ಹೋದರು. ಅ.ರಾ.ಸೇತುರಾಮ ರಾವ್‌ ಸಂಪಾದಿಸಿರುವ ‘ಕುಮಾರವ್ಯಾಸ ಭಾರತ’, ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’, ಜಿ.ಎಸ್‌. ಶಿವರುದ್ರಪ್ಪನವರ ಪಿ.ಎಚ್‌ಡಿ ಪ್ರಬಂಧ ‘ಸೌಂದರ್ಯ ಸಮೀಕ್ಷೆ’ ಮತ್ತು ಅವರ  ‘ಸಮಗ್ರ ಕಾವ್ಯ’, ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡುವ ಸಾಹಿತ್ಯಾಸಕ್ತರಿಗೆ ಅವಲಂಬನ ಕೃತಿ ‘ಕಾವ್ಯಾರ್ಥ ಕೋಶ’, ಡಾ.ವಸುಂಧರಾ ಭೂಪತಿ ಅವರ ‘ಆರೋಗ್ಯ ಸಂಗಾತಿ’ಯ ವಿವಿಧ ಸಂಪುಟಗಳು, ನಮ್ಮ ಸಂವಿಧಾನವನ್ನು ಸರಳವಾಗಿ ಪರಿಚಯಿಸಿಕೊಡಲು ರಚಿತವಾದ ಗ್ರಂಥ ‘ಭಾರತ ಸಂವಿಧಾನದ ಪಕ್ಷಿ ನೋಟ’ ಇನ್ನೂ ಮುಂತಾದವುಗಳ ಬಗ್ಗೆ ವಿವರಣೆ ನೀಡಿದರು.

ಅವರು ಬೆಂಗಳೂರಿನ ರಾಮ್‌ನಾರಾಯಣ್‌ ಚೆಲ್ಲಾರಾಂ ವಾಣಿಜ್ಯ ಕಾಲೇಜು, ಮಹಾರಾಣಿ ಕಲಾ ಕಾಲೇಜು ಮುಂತಾದೆಡೆ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ  ಪಾಠ ಮಾಡಿದ 30 ವರ್ಷಗಳ ಅನುಭವ ಹೊಂದಿರುವ ಡಿ.ಕೆ.ಶ್ಯಾಮಸುಂದರ ರಾವ್‌ ಕನ್ನಡದಲ್ಲಿ ನೂರಾರು ಪ್ರಕಾಶನ ಸಂಸ್ಥೆಗಳಿದ್ದರೂ ಓದುಗರಿಗೆ ಉತ್ತಮವಾದ ಕೃತಿಗಳನ್ನು ತಲುಪಿಸಬೇಕು ಎಂಬ ಉದ್ದೇಶದೊಂದಿಗೆ 1990ರಲ್ಲಿ ಶಾಸಕರ ಭವನದ ಆವರಣದಲ್ಲಿ ‘ಕಾಮಧೇನು ಪುಸ್ತಕ ಭವನ’ ಪ್ರಾರಂಭಿಸಿದರು. ಬರಬರುತ್ತಾ ಅದು ಜನಪ್ರಿಯವಾಯಿತು. ಶೇಷಾದ್ರಿಪುರದ ನಾಗಪ್ಪ ಸ್ಟ್ರೀಟ್‌ನಲ್ಲಿ ಕಳೆದ ಆರು ವರ್ಷಗಳಿಂದ ಪ್ರಸ್ತುತ ಪುಸ್ತಕ ಭವನವನ್ನು ನಡೆಸಿಕೊಂಡು ಬರುತ್ತಿದ್ದಾರೆ.

‘ಸರ್ಕಾರದ ಕಾರ್ಯಕ್ರಮದ ಭಾಗವಾಗಿ ‘ಕುಮಾರವ್ಯಾಸ ಭಾರತ’ ಕೃತಿಯನ್ನು ಬಿಡಿ ಬಿಡಿಯಾಗಿ ಪ್ರಕಟಿಸಲಾಗಿದೆ. ಆದರೆ ನಾವು ಕುಮಾರವ್ಯಾಸ ಭಾರತದ ಎಂಟು ಸಾವಿರ ಪದ್ಯಗಳನ್ನು ಸಾರಾಂಶ ಸಹಿತವಾಗಿ ಪ್ರಕಟಿಸಿದ್ದೇವೆ. ಕಲಾವಿದ ಗಂಜೀಫಾ ರಘುಪತಿ ಭಟ್‌ ಇದಕ್ಕೆ 300 ರೇಖಾಚಿತ್ರಗಳನ್ನು ಬರೆದಿದ್ದಾರೆ. ಕಥಾ ಸಂದರ್ಭಕ್ಕೆ ಅನುಗುಣವಾಗಿ 10 ವರ್ಣಚಿತ್ರಗಳನ್ನು ರಚಿಸಲಾಗಿದೆ. 90 ಪುಟಗಳ ಪ್ರಸ್ತಾವನೆಯಿದೆ. ಮೊದಲನೇ ಆವೃತ್ತಿ ಖರ್ಚಾಗಿ ಈಗಾಗಲೇ ಎರಡನೇ ಆವೃತ್ತಿ ಮುದ್ರಣಗೊಂಡಿದೆ. ನಾಲ್ಕು ಸಂಪುಟಗಳನ್ನು ಸೇರಿಸಿ ಹೊರತರಲಾಗಿರುವ ಪತ್ರಿಕೋದ್ಯಮ ಸಮಗ್ರ ಸಂಪುಟ ಆ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಮಹತ್ವದ ಗ್ರಂಥ’ ಎಂದು ವಿವರಣೆ ನೀಡಿದರು.

ಸ್ವಾಮಿ ರಾಮ ಅವರ ‘Living with the Himalayan masters’ ಎಂಬ ಕೃತಿಯನ್ನು ಸ್ವತಃ ಡಿ.ಕೆ.ಶ್ಯಾಮಸುಂದರ ರಾವ್‌ ಕನ್ನಡಕ್ಕೆ ಅನುವಾದಿಸಿದ್ದು, ಆ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಸಂದಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರ ‘ಹೂವು ಮತ್ತು ಆರೋಗ್ಯ’, ‘ಆರೋಗ್ಯ ಸಂಗಾತಿ’ಯ ಮೂರು ಸಂಪುಟಗಳು, ಬೊಳುವಾರು ಮೊಹಮ್ಮದ್‌ ಕುಂಞಿ ಸಂಪಾದಿಸಿರುವ ಜನಪ್ರಿಯ ಮಕ್ಕಳ ಪ್ರಾತಿನಿಧಿಕ ಕವಿತೆಗಳ ಸಂಕಲನ ‘ತಟ್ಟು ಚಪ್ಪಾಳೆ ಪುಟ್ಟ ಮಗು’, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಅತ್ಯುತ್ತಮ ಸೃಜನಶೀಲ ಕೃತಿ’ ಪ್ರಶಸ್ತಿ ಗೆದ್ದುಕೊಂಡಿರುವ ಕಥಾಸಂಕಲನ ‘ಆಕಾಶಕ್ಕೆ ನೀಲಿ ಪರದೆ’, ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲ ಐತೆ’ ಇನ್ನೂ ಮುಂತಾದ ಕೃತಿಗಳಿವೆ. ಡಾ.ಶ್ರೀಕಂಠಶಾಸ್ತ್ರಿ ಅವರ 115 ಸಂಶೋಧನಾ ಲೇಖನಗಳನ್ನು ಒಳಗೊಂಡ ಬೃಹತ್‌ ಸಂಪುಟದ ಎರಡನೇ ಆವೃತ್ತಿ  ಇತ್ತೀಚಿನ ಪ್ರಕಟಣೆಯಾಗಿದ್ದು, 1975ರಲ್ಲಿ ಮೈಸೂರು ವಿಶ್ವವಿದ್ಯಾಲಯ ಮೊದಲ ಆವೃತ್ತಿಯನ್ನು ಪ್ರಕಟಿಸಿತ್ತು ಎಂದು ಅವರು ಇನ್ನೊಂದು ಮಾಹಿತಿ ಹಂಚಿಕೊಂಡರು.

ಎಲೆಕ್ಟ್ರಾನಿಕ್‌ ಮಾಧ್ಯಮಗಳ ಹಾವಳಿಯಿಂದಾಗಿ ಪ್ರಕಾಶನ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎಂಬುದನ್ನು ಅವರು ಒಪ್ಪುವುದಿಲ್ಲ.
‘ಪುಸ್ತಕ ಹಿಡಿದು ಓದಿದಾಗ ಸಿಗುವ ಅನುಭವ ರೋಮಾಂಚನಕಾರಿ. ಆ ಅನುಭವಕ್ಕೆ ಓದುಗರು ಬದ್ಧರಾಗಿರುವುದರಿಂದಲೇ ನಮ್ಮಲ್ಲಿ ಇನ್ನೂ ಪುಸ್ತಕ ಪ್ರೀತಿ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಅಧ್ಯಾತ್ಮ, ವ್ಯಕ್ತಿತ್ವ ವಿಕಸನದಂತಹ ಪುಸ್ತಕಗಳ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಪುಸ್ತಕಗಳ ಓದು ನಮಗೆ ಆರೋಗ್ಯಕರ ವಿಚಾರಗಳನ್ನು ಕಟ್ಟಿಕೊಡುತ್ತದೆ. ನಮ್ಮ ನಿತ್ಯದ ಒತ್ತಡಗಳಿಂದ ನಿರುಮ್ಮಳರಾಗಲು ಸಹಕಾರಿ ಯಾಗಲಿದೆ. ಆದ್ದರಿಂದಲೇ ನಮ್ಮ ಪುಸ್ತಕ ಭವನದ ನಾಮಫಲಕದಲ್ಲಿ ಪುಸ್ತಕ ಮಾತ್ರ ನಿಮಗೆ ನೆಮ್ಮದಿ ತರಬಲ್ಲದು ಘೋಷವಾಕ್ಯವನ್ನು ಮುದ್ರಿಸಿದ್ದೇವೆ’ ಎನ್ನುತ್ತಾರೆ ಡಿ.ಕೆ. ಶ್ಯಾಮಸುಂದರ ರಾವ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT