ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಫ್ ಆಗುವತ್ತ ಅಕುಲ್

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಕುಣಿಯೋಣು ಬಾರಾ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೆಗ್ ಬಂದ, ತಕಧಿಮಿತಾ ಡಾನ್ಸಿಂಗ್ ಸ್ಟಾರ್‌, ಡಾನ್ಸಿಂಗ್‌ ಸ್ಟಾರ್‌ ಹೀಗೆ ಸಾಲು ಸಾಲು ರಿಯಾಲಿಟಿ ಷೋಗಳನ್ನು ನಡೆಸಿಕೊಟ್ಟಿರುವ ಅಕುಲ್ ಬಾಲಾಜಿ ನಿರೂಪಣೆಯಿಂದಲೇ ಮನೆ ಮಾತಾದವರು. ಸದ್ಯಕ್ಕೆ ಅವರ ಮೂರು ಚಿತ್ರಗಳೂ ಸಾಲಿನಲ್ಲಿವೆ. ಜನರಿಗೆ ಮನರಂಜನೆ ನೀಡಬೇಕು ಎಂಬುದಷ್ಟೇ ನನ್ನ ಉದ್ದೇಶ ಎನ್ನುವ ಅಕುಲ್, ಮಾತಿಗೆ ಸಿಕ್ಕಾಗ...

*ಡಾನ್ಸ್ ಎಂದರೆ ಎಷ್ಟಿಷ್ಟ?
ಸಿಕ್ಕಾಪಟ್ಟೆ ಇಷ್ಟ. ಚಿಕ್ಕ ವಯಸ್ಸಿಂದಲೇ ಡಾನ್ಸ್‌ ಮಾಡಲು ಆರಂಭಿಸಿದ್ದು, ಅದು ನಿಲ್ಲಲೇ ಇಲ್ಲ. ಹಲವು ನೃತ್ಯ ಪ್ರಕಾರವನ್ನು  ಕಲಿತಿದ್ದೇನೆ. ಡಾನ್ಸ್‌ ನನ್ನ ಜೀವನದೊಟ್ಟಿಗೇ ಸಾಗಿ ಬಂದಿದೆ. ಅದು ಯಾವಾಗಲೂ ನನ್ನೊಂದಿಗೆ ಇದ್ದೇ ಇರುತ್ತದೆ.

*ಡಾನ್ಸಿಂಗ್‌ ಸ್ಟಾರ್‌ನಲ್ಲಿ ದಕ್ಕಿಸಿಕೊಂಡ ಅನುಭವಗಳು...
ಸಾಮಾನ್ಯವಾಗಿ ಕಾರ್ಯಕ್ರಮಗಳು ತುಂಬಾ ಕಟ್ಟುಪಾಡುಗಳಿಂದ ನಡೆಯುತ್ತವೆ. ಆದರೆ ಇಲ್ಲಿ ಎಲ್ಲರೂ ಖುಷಿಯಿಂದ ಇರುತ್ತಿದ್ದೆವು. ತರಲೆ, ತಮಾಷೆ ಮಾಡಿಕೊಂಡು ಮನರಂಜನೆಯ ಕಾರ್ಯಕ್ರಮ ಕೊಟ್ಟೆವು. ಒಂಬತ್ತು ತಿಂಗಳ ಆ ಅನುಬಂಧ ಮಾತಿನಲ್ಲಿ ಹೇಳಲು ಸಾಧ್ಯವೇ...

*ಕನ್ನಡ ಕಲಿಯಲು ಕಷ್ಟಪಟ್ಟಿರಂತೆ...
ಹಾಗೇನಿಲ್ಲ. ಇಷ್ಟಪಟ್ಟು ಕಲಿತೆ. ಪ್ರತಿ ಕಾರ್ಯಕ್ರಮವೂ ನನಗೆ ಕನ್ನಡವನ್ನು ಹೇಗೆ ತಿದ್ದಿಕೊಳ್ಳಬೇಕೆಂದು ಕಲಿಸಿದೆ. ಅದರಲ್ಲೂ ನಿರ್ದೇಶಕ ಫಣಿರಾಮಚಂದ್ರ ಅವರ ‘ಜಗಳ ಗಂಟಿಯರು’ ಧಾರಾವಾಹಿಯಲ್ಲಿ ಅಭಿನಯಿಸುವಾಗ ಕನ್ನಡ ಕಲಿತದ್ದು ಹೆಚ್ಚು. ಮೊದಲು ಕಷ್ಟ ಎನ್ನಿಸಿದರೂ ಸವಾಲಾಗಿ ತೆಗೆದುಕೊಂಡು ಕಲಿತೆ. ಭೇಷ್ ಅನ್ನಿಸಿಕೊಂಡೆ. ಕೆಲವು ರಿಯಾಲಿಟಿ ಷೋಗಳಲ್ಲಿ ಉತ್ತರ ಕರ್ನಾಟಕ, ಮಲೆನಾಡು ಶೈಲಿಯಲ್ಲಿ ಕನ್ನಡ ಮಾತಾಡಬೇಕಿತ್ತು. ಅದನ್ನೂ ಸ್ವಲ್ಪ ಕಲಿತೆ. ಎಲ್ಲರೂ ಕನ್ನಡ ಕಲಿಯಲು ಪ್ರೋತ್ಸಾಹ ಕೊಟ್ಟರು.

*ಸಿನಿಮಾಗಿಂತ ನಿರೂಪಣೆಯಿಂದಲೇ ಮಿಂಚಿದ್ದಲ್ಲವೇ?
ಆ್ಯಂಕರಿಂಗ್ ಎಂದರೆ ಮೊದಲೆಲ್ಲಾ ಯಾರೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಏನೋ ಮಾಡಿಬಿಡಬಹುದು ಎಂದುಕೊಳ್ಳುತ್ತಿದ್ದರು. ಆದರೆ ಈಗ ಬದಲಾಗಿದೆ. ಆ್ಯಂಕರ್‌ಗಳು ಕೂಡ ಸ್ಟಾರ್ ಆಗಬಹುದು. ಕಾರ್ಯಕ್ರಮ ನಡೆಸಿಕೊಡುವುದಷ್ಟೇ ಮುಖ್ಯವಲ್ಲ, ಅದನ್ನು ಹೇಗೆ, ಜನರಿಗೆ ಎಷ್ಟು ಹತ್ತಿರವಾಗುವಂತೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಮುಖ್ಯ. ಆ ವಿಷಯದಲ್ಲಿ ನಾನು ಜನರ ಮನಸ್ಸು ಗೆದ್ದಿದ್ದೇನೆ ಎಂದುಕೊಳ್ಳುತ್ತೇನೆ.

*ಷೋಗಳಲ್ಲಿ ತುಂಬಾ ತರಲೆ ಮಾಡ್ತೀರಲ್ಲಾ...
ತುಂಬಾ ಗಂಭೀರವಾಗಿದ್ದರೆ ಅಷ್ಟು ಚೆನ್ನಾಗಿರಲ್ಲ. ಈಗ ರಿಯಾಲಿಟಿ ಷೋಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ, ಅದಕ್ಕೆ ತಕ್ಕಂತೆ ನಾವೂ ಅಪ್‌ಡೇಟ್ ಆಗಲೇಬೇಕಲ್ಲ, ಅದೃಷ್ಟ ಎಂದರೆ, ಹೊಸ ಹೊಸ ಪ್ರಯೋಗಗಳಿಗೆ ನಾನೇ ನಿರೂಪಣೆ ಮಾಡಿದ್ದು. ಅದು ಯಶಸ್ವಿಯಾಗಿದ್ದು.

*ನೀವು ತುಂಬಾ ಫ್ಲರ್ಟ್ ಮಾಡ್ತೀರಂತೆ? ತೆರೆ ಮುಂದೆ ಮಾತ್ರಾನಾ? ತೆರೆ ಹಿಂದೆನೂ ಹೀಗೇನಾ?
ಹ್ಹ ಹ್ಹ ಹ್ಹ ಹಾಗೇನಿಲ್ಲ. ಪ್ರಿಯಾಮಣಿಯವರನ್ನು ಸುಮ್ಮನೆ ಕಾಲೆಳೆಯುತ್ತಿದ್ದೆ. ಜನರನ್ನು ನಗಿಸಲು ಅಷ್ಟೆ. ಆಫ್‌ಸ್ಕ್ರೀನ್‌ನಲ್ಲಿ ನಾವೆಲ್ಲಾ ತುಂಬಾ ಒಳ್ಳೆ ಸ್ನೇಹಿತರು.

*ಈ ನಡುವೆ ನಿಮ್ಮ ಮಾತು ಜಾಸ್ತಿ ಆಗಿದೆಯಂತೆ?
ನನಗೆ ಮಾತಾಡುವುದೆಂದರೆ ತುಂಬಾ ಖುಷಿ. ಯಾವಾಗಲೂ ಸಂತೋಷವಾಗಿರುವುದಕ್ಕೆ  ಬಯಸುವವನು ನಾನು. ಅದಕ್ಕೆ ಯಾವಾಗಲೂ ಕಾಲೆಳೆಯುತ್ತಾ ಇರ್ತೀನಿ. ನಾನಿರುವ ಜಾಗ ಖುಷಿಯಾಗಿರಬೇಕು ಅನ್ನೋದಷ್ಟೇ ನನಗೆ ಮುಖ್ಯ. ಗಂಭೀರವಾಗಿರೋ ವಾತಾವರಣದಲ್ಲಿ ಇರಲು ನನಗೆ ಸಾಧ್ಯವೇ ಇಲ್ಲ. ಮೊದಲೆಲ್ಲಾ ಇಷ್ಟೊಂದು ಹಾಸ್ಯ ಮಾಡುತ್ತಿರಲಿಲ್ಲ. ಅದು ಹೇಗೋ ಗೊತ್ತಿಲ್ಲ ಮೊದಲೆಲ್ಲಾ ಚಕ್ ಅಂತ ಹೇಳೋಕೆ ಬರ್ತಿರಲಿಲ್ಲ. ಇತ್ತೀಚೆಗೆ ಮಾತು ಹೆಚ್ಚು ಕಲಿತೆ.

*ಅಕುಲ್ ಆಫ್‌ಸ್ಕ್ರೀನ್‌ನಲ್ಲಿ ಹೇಗಿರ್ತಾರೆ?
ನೀವು ನನ್ನನ್ನು ತೆರೆ ಮೇಲೆ ಹೇಗೆ ನೋಡ್ತೀರೋ ಹಾಗೇ ಇರ್ತೀನಿ. ಆದರೆ ಒಮ್ಮೊಮ್ಮೆ ಒಂಟಿಯಾಗಿದ್ದಾಗ ನೆಮ್ಮದಿಯಿಂದ ಇರಲು ಅಧ್ಯಾತ್ಮಕ್ಕೆ ಮೊರೆ ಹೋಗುತ್ತೇನೆ.

*ಜೀವನದಲ್ಲಿ ಸರ್ಕಸ್ ಮಾಡಿದ್ದು ಇದೆಯಾ?
ಎಷ್ಟೊಂದು ಘಟನೆಗಳಿವೆ. ಮನೆ ಮನೆಗೂ ಹೋಗಿ ಸೀರೆ ಮಾರಿದ ಸಂದರ್ಭವೂ ಇದೆ. ಜೀವನ ಕೆಲವೊಮ್ಮೆ ಇದ್ದಕ್ಕಿದ್ದಂತೆ ಎಲ್ಲೋ ನೂಕಿ ಬಿಟ್ಟಿರುತ್ತೆ. ತುಂಬಾ ಗೊಂದಲದಲ್ಲಿರುತ್ತೇವೆ. ಆದರೆ ಛಲ ಇದ್ದರೆ ಎಂಥ ಕಷ್ಟವೂ ನಿಲ್ಲುವುದಿಲ್ಲ.  ಆದ್ದರಿಂದ ಯಾವಾಗಲೂ ನಗು ನಗುತ್ತಾ ಇರುತ್ತೀನಿ.

*ಬಿಗ್‌ ಬಾಸ್‌ ಸೀಸನ್ 3 ಬರ್ತಿದೆ. ಮತ್ತೆ ಹೋಗೋ ಯೋಚನೆ ಇದೆಯಾ?
ಹ್ಹ ಹ್ಹ ಇಲ್ಲಪ್ಪ. ಒಂದು ಅನುಭವ ಒಂದು ಬಾರಿ ಆದರೆ ಚೆನ್ನ. ನಾನೇನು ಅನ್ನುವುದು ಎಲ್ಲರಿಗೂ ತಿಳಿದಿದೆ. ಅದೊಂದು ಒಳ್ಳೆ ಅನುಭವ.

*ನಿಮ್ಮ ಕೈಯಲ್ಲಿ ತುಂಬಾ ಸಿನಿಮಾಗಳು ಇವೆಯಂತೆ...
ಸದ್ಯಕ್ಕೆ ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ‘ಗಗನಚುಕ್ಕಿ’, ‘ದೇವರೌನೆ ಬುಡು ಗುರು’, ‘ಲವ್‌ ಆನ್ ಎನ್‌ಎಚ್‌4’ ಸಿನಿಮಾಗಳು.

*ನಿರೂಪಣೆ ಬಿಟ್ಟು ಏನೇನ್ ಆಟ ಆಡ್ತೀರಿ?
ನಟನೆ, ನಿರೂಪಣೆ ಬಿಟ್ಟರೆ ಟೆನ್ನಿಸ್, ಸ್ಕ್ವಾಷ್, ಗಾಲ್ಫ್‌ ಆಟ ತುಂಬಾ ಇಷ್ಟ.

*ಚೇಂಜ್ ಕೇಳ್ತಿದ್ದೀರಂತೆ...
ತುಂಬಾ ತುಂಟಾಟ ಮಾಡಿ ಆಗಿದೆ. ಸ್ವಲ್ಪ ಟಫ್ ಅಕುಲ್‌ನ ತೋರಿಸಬೇಕು ಎಂದುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT