ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ವಿವಿ: ಮತ್ತೊಂದು ಅಲಿಗಡ ವಿವಿ ಆಗಬಹುದೆ?

Last Updated 30 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಟಿಪ್ಪು ವಿಶ್ವವಿದ್ಯಾಲಯ ವಿವಾದದ ಮೂಲಕ ಕೇಂದ್ರ ಮಂತ್ರಿ ಕೆ.ರೆಹಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ.  ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕವಾಗಿ ೫ ವಿವಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಲಿದ್ದು ಅದರಲ್ಲಿ ಒಂದು ಶ್ರೀರಂಗಪಟ್ಟದಲ್ಲಿರುತ್ತದೆ ಎಂದು  ಅವರು ಹೇಳಿದ್ದರು.

ಈಗ ಕೋಲಾರ, ಮಂಗಳೂರನ್ನು ಪ್ರಸ್ತಾಪಿಸಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳುಗಳಿರುವ ಹಿನ್ನೆಲೆಯಲ್ಲಿ ಇದೊಂದು ರಾಜಕೀಯ ನಡೆ ಎಂಬುದು ಗೊತ್ತಾಗುತ್ತದೆ. ಸ್ಯಾಮ್ ಪಿತ್ರೋಡ ನೇತೃತ್ವದ ಕೇಂದ್ರ ಜ್ಞಾನ ಆಯೋಗದ ಶಿಫಾರಸಿನಂತೆ ೨೦೧೫ರ ವೇಳೆಗೆ ದೇಶದಲ್ಲಿ ೧೫೦೦೦ ವಿವಿ ಗಳಿರಬೇಕು, ಆದರೆ ಸಿಖ್, ಕ್ರೈಸ್ತ, ಮುಸ್ಲಿಂ ಹೀಗೆ ಧಾರ್ಮಿಕ (ಮತೀಯ) ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ ಸ್ಥಾಪನೆಯಾಗಬೇಕೆಂದು ಎಲ್ಲಿಯೂ ಹೇಳಿಲ್ಲ.

ರೆಹಮಾನ್‌ಖಾನ್ ಪ್ರಸ್ತಾ ವಕ್ಕೆ  ನ್ಯಾಯಮೂರ್ತಿ ರಾಜೇಂದ್ರ ಸಾಚಾರ್  ಸಮಿತಿ ವರದಿ ಆಧಾರ. ಸಾಕಷ್ಟು ದೀರ್ಘವಾ ಗಿರುವ ಈ ವರದಿಯನ್ನು ಹೆಚ್ಚಿನ ಬುದ್ಧಿ ಜೀವಿಗಳು,ರಾಜಕೀಯ ಮುಖಂಡರು ಅಧ್ಯಯನ ಮಾಡಿರುವ ಸಾಧ್ಯತೆ ಕಮ್ಮಿ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಮುಸ್ಲಿಮರಲ್ಲಿ ಶಿಕ್ಷಣದ ಕೊರತೆಯಿಂದಾಗಿ ಬಡತನವಿರುವುದನ್ನು ಈ ವರದಿ ಸೂಕ್ತ ವಾಗಿಯೇ ಗುರುತಿಸಿದೆ.  ಅವರಿಗೆ ಶಿಕ್ಷಣ ನೀಡ ಬೇಕಾದರೆ ಮುಸ್ಲಿಮರಿಗೇ ಏಕೆ ಪ್ರತ್ಯೇಕ ವಿವಿ ಗಳನ್ನು ಸ್ಥಾಪಿಸಬೇಕು. ಈಗಿರುವ ವಿವಿ ಗಳಲ್ಲಿ ಅವರಿಗೆ ಪ್ರವೇಶವನ್ನೇನೂ ನಿರಾಕರಿಸಲಾಗಿಲ್ಲವಲ್ಲ.

ಭಾರತದ ಶಿಕ್ಷಣದ ನೂರು ವರ್ಷಗಳ ಚರಿತ್ರೆ ನೋಡಿದರೆ ಈ ಸಮಸ್ಯೆಯ ಮರ್ಮ ತಿಳಿಯುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ– ಮುಸ್ಲಿಮರನ್ನು ಒಡೆದು ಆಳುವ ಕುಟಿಲ ನೀತಿಯನ್ನು ಜಾರಿಗೆ ತಂದಿದ್ದರು. ಹೇಗಾದರೂ ಮಾಡಿ ಮುಸ್ಲಿಮರ ಉನ್ನತ ವರ್ಗ ತಮಗೆ ಸಾಥ್ ನೀಡಬೇಕೆಂದು ಅವರ ಪ್ರಯತ್ನಿಸುತ್ತಿದ್ದರು. ಇದೇ ಸಮಯದಲ್ಲಿ ಬ್ರಿಟಿಷರ ಬೆಂಬಲದಿಂದಲೇ ಸರ್ ಸಯ್ಯದ್ ಅಹಮದ್‌ಖಾನ್ ಉತ್ತರಪ್ರದೇಶದ ಅಲಿಗಡ ದಲ್ಲಿ ಅಲಿಗಡ ಮುಸ್ಲಿಂ ವಿ.ವಿ.ಯನ್ನು ೧೮೭೭ ರಲ್ಲಿ ಸ್ಥಾಪಿಸಿದರು.

ಮುಸ್ಲಿಮರು ಮತ್ತು ಹಿಂದೂಗಳೂ ಅಂತಿಮವಾಗಿ ಒಂದಾಗಿ ಬಾಳಲು ಸಾಧ್ಯವಿಲ್ಲ, ಮುಸ್ಲಿಮರಿಗೆ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರ ಸಿಕ್ಕಬೇಕು ಎಂಬುದು ದ್ವಿರಾಷ್ಟ್ರ ಸಿದ್ಧಾಂತ. ಇದರ ಜನಕ ಸರ್ ಸಯ್ಯದ್ ಅಹಮದ್‌ಖಾನ್. ಅದೇ ಸುಮಾರಿಗೆ ಉತ್ತರ ಪ್ರದೇಶದಲ್ಲಿ ಮದನ ಮೋಹನ ಮಾಳವೀಯರ ಶ್ರಮದಿಂದ ತಲೆ ಯೆತ್ತಿದ್ದ ಬನಾರಸ್ ಹಿಂದು ವಿವಿಯ ಹೆಸರಿನಲ್ಲಿ ಹಿಂದೂ ಇದ್ದರೂ ಸಂಪೂರ್ಣ ಹಿಂದೂಕರಣ ವಾಗದೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿತ್ತು.

ಮೊದಲು ಮೊಹಮ್ಮದನ್ ಆಂಗ್ಲೋ ಓರಿಯೆಂಟಲ್ ಕಾಲೇಜು ಎಂದಿದ್ದು ನಂತರ ಅಲಿಗಡ ಮುಸ್ಲಿಂ ವಿ.ವಿಯಾಯಿತು. ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನಿಂದ ೨೦೦೨ರಲ್ಲಿ ಹೊರಬಂದ ‘ಎಥ್ನಿಕ್ ಕಾನ್‌ಫ್ಲಿಕ್ಟ್ ಅಂಡ್ ಸಿವಿಕ್ ಲೈಫ್’ ಎಂಬ ಗ್ರಂಥದಲ್ಲಿ (ಲೇಖಕರು ಅಶುತೋಷ್ ವಾರ್ಶ್ನೆ) ಸ್ವಾತಂತ್ರ್ಯ ಪೂರ್ವದ ಭಾರತದ ಜನಜೀವನದಲ್ಲಿ ಅಲಿಗಡ ಮುಸ್ಲಿಂ ವಿವಿ ವಹಿಸಿದ ಪಾತ್ರದ ಬಗ್ಗೆ ವಸ್ತುನಿಷ್ಠ ಚಿತ್ರಣ ಲಭ್ಯವಿದೆ.

೧. ಮೊದಲಿ ನಿಂದಲೂ ಅ.ಮು.ವಿ.ವಿ ಗಣನೀಯ ಸಂಖ್ಯೆಯ ಭಾರತದ ಮುಸಲ್ಮಾನರ ಶೈಕ್ಷಣಿಕ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಕೇತವಾಗಿದೆ (ಪು.೧೨೦) ೨. ಅ.ಮು.ವಿ.ವಿಯನ್ನು ಅರ್ಥ ಮಾಡಿಕೊಳ್ಳದೆ ಭಾರತದ ಮುಸ್ಲಿಂ ರಾಜಕಾ ರಣದ ಇತಿಹಾಸವನ್ನು ಅರ್ಥಮಾಡಿಕೊ ಳ್ಳುವುದು ಅಸಾಧ್ಯ (ಪು.೧೨೦) ೩. ಪಾಕಿಸ್ತಾನ ನಿರ್ಮಾಣ ಚಳವಳಿಯ ಬೌದ್ಧಿಕ ಕೇಂದ್ರವಾಗಿ ಅ.ಮು.ವಿ.ವಿ ಕೆಲಸ ಮಾಡಿದೆ (ಅದೇ ಪುಟ) ೪. ಹಿಂದೂ-ಮುಸ್ಲಿಂ ದಂಗೆಗಳಿಂದಾಗಿ ಅಲಿಗಡ ಕುಖ್ಯಾತವಾಗಿದೆ (ಪು.೧೨೧) ೫. ಆಗ ತಾನೆ ತಲೆ ಎತ್ತುತ್ತಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಯಾಗಿ ಬ್ರಿಟಿಷರು, ಶ್ರೀಮಂತ ವರ್ಗದ ಮುಸ್ಲಿಮರಿಂದ ಘೋಷಿತವಾದ ಅಲಿಗಡ ಮುಸ್ಲಿಂ ವಿವಿಯನ್ನು ಉಳಿಸಿಕೊಂಡರು. (ಪು. ೧೩೭) ೬.

ಬ್ರಿಟಿಷರು ಈ ವಿ.ವಿ.ಗೆ ಕಂದಾಯ ಮುಕ್ತ  ಭೂಮಿಯನ್ನು ನೀಡಿದ್ದರು ಎಂಬುದನ್ನು ಗುರುತಿಸುವ ಅಶುತೋಷ್ ವಾರ್ಶ್ನೆ (ಪು.೧೩೭) ಯವರು ೧೯೪೦ರ ವೇಳೆಗೆ ಈ ವಿ.ವಿಯು ಪಾಕಿಸ್ತಾನ ಚಳವಳಿಯಿಂದಾಗಿ ಗುರುತಿಸಿ ಕೊಂಡಿದ್ದನ್ನು ದಾಖಲಿಸಿದ್ದಾರೆ. ಈ ವಿ.ವಿ.ಯ ಪೋಷಕರಾದ ಮೂರನೆಯ ಆಗಾಖಾನ್ ಹೇಳಿರುವಂತೆ:

“often in a civilized history a University has supplied the spring board for nation’s intellectual and spiritual renaissance..The independent, Sovereign nation of Pakistan was born in the Muslim University of Aligarh”. (ಪು. ೧೩೭).

ಪಾಕಿಸ್ತಾನ ಚಳವಳಿಯನ್ನು ಎತ್ತಿಕೊಂಡು ಬೆಳೆದ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷವು ಆರಂಭವಾದದ್ದು ೧೯೦೬ರಲ್ಲಿ ಮತ್ತು ಅದು ಅಲಿಗಡ ಮುಸ್ಲಿಂ ವಿವಿಯ ಅತಿದೊಡ್ಡ ರಾಜಕೀಯ ಉತ್ಪನ್ನ ಎಂದು ಲೇಖಕರು ಗುರುತಿಸಿದ್ದಾರೆ (ಪು.೧೩೭). ಏಕೆಂದರೆ ಲೀಗ್‌ನ ಅನೇಕ ನಾಯಕರು ಅ.ಮು.ವಿ.ವಿಯಿಂದ ತೇರ್ಗಡೆ ಹೊಂದಿದ ಪದವೀಧರರಾಗಿದ್ದರು (ಪು.೧೩೭). ಮುಸ್ಲಿಂ ಲೀಗ್‌ನ ರಾಜಕೀಯ ಕಾರ್ಯಾಚರಣೆ ಮತ್ತು ಅ.ಮೂ.ವಿ.ವಿ ಯ ಬೌದ್ಧಿಕ ಬೆಂಬಲ ಇವೆರಡನ್ನೂ ಪ್ರತ್ಯೇಕಿಸಿ ನೋಡಲಾಗದು.

೧೯೦೯ರಲ್ಲಿ ಬಂದ ಮಿಂಟೊ ಮಾರ್ಲೆ ಸುಧಾರಣೆಯ ಮೂಲಕ ಮುಸ್ಲಿಂ ಲೀಗ್ ಪ್ರತ್ಯೇಕ ಮತ ಕ್ಷೇತ್ರವನ್ನು ಹೊಂದಿತು. ಮುಸ್ಲಿಮರಿಗೆ ಶಿಕ್ಷಣವನ್ನು ನೀಡಬೇಕೆ? ಬೇಡವೆ ಎಂಬುದು ಅಪ್ರಸ್ತುತ ಸಂಗತಿ. ಎಲ್ಲ ನಾಗರಿಕರಂತೆ ಮುಸ್ಲಿಮರು ಭಾರತೀಯ ಸಮಾಜದ ಅವಿಭಾಜ್ಯ ಅಂಗ ಎಂಬುದರಲ್ಲಿ ಎರಡು ಮಾತಿಲ್ಲ. ವಿವಿಧ ರಾಜ್ಯಗಳ ಮುಖ್ಯಮಂತ್ರಿ, ರಾಷ್ಟ್ರಪತಿ, ನ್ಯಾಯಮೂರ್ತಿಗಳಾಗಿ, ಬೋಧಕ, ವೈದ್ಯ, ಸಂಶೋಧಕ, ಪತ್ರಕರ್ತರಾಗಿ ಮುಸ್ಲಿಂ ಬುದ್ಧಿಜೀವಿಗಳು ಸಮಾಜದ ನಡುವೆ ಸಾಮರಸ್ಯ ಹರಡುವ ಕೆಲಸ ಮಾಡಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ, ಪತ್ರಕರ್ತ ಎಂ.ಜೆ. ಅಕ್ಬರ್, ನ್ಯಾಯವೇತ್ತ ಡಾ.ಎಂ.ಸಿ ಛಾಗ್ಲಾ, ಸಮಾಜವಾದಿ ಮುಖಂಡ ಮತ್ತು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ  ಹೋರಾಡಿದ ಹಮೀದ್ ದಲ್ವಾಯಿ ಇಂಥವರು ಈಗಲೂ ಉದಾರವಾದಿ ಮುಸ್ಲಿಮರಿಗೆ, ಮತ್ತು ಉಳಿದವರಿಗೆ ಮಾದರಿಯೇ ಆಗಿದ್ದಾರೆ. ಇಸ್ಲಾಂನ ತಾತ್ವಿಕತೆಯ ಜೊತೆ ನಿರಂತರ ಸಂವಾದ ನಡೆಸಬೇಕಾದ್ದು ಎಲ್ಲ ಪ್ರಜ್ಞಾವಂತರ ಕೆಲಸವಾಗಬೇಕೇ ಹೊರತು ಮುಸ್ಲಿಮರನ್ನು ದ್ವೇಷಿಸುವುದಲ್ಲ. ರೆಹಮಾನ್ ಖಾನ್ ಅವರ ಪ್ರಯತ್ನ ಮುಸ್ಲಿಂರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವುದೇ ಆಗಿದೆಯೆನಿಸುತ್ತದೆ.

ಗುಂಪು ಘರ್ಷಣೆ ಮತ್ತು ಕೋಮುವಾದದ ದಳ್ಳುರಿಯಿಂದ ಕರ್ನಾಟಕ ಹಿಂದಿನಿಂದಲೂ ಆದಷ್ಟೂ ದೂರವಿದೆ. ವೈರುಧ್ಯವೆಂದರೆ ಅಲಿ ಗಡ ಮೊದಲಿನಿಂದಲೂ ಸಂಘರ್ಷಕ್ಕೆ ಕುಪ್ರಸಿದ್ಧ ವಾಗಿದೆ. ಭಾರತದ ವಿಭಜನೆಗೆ ಮೊದಲು ೧೯೨೫, ೧೯೨೭, ೧೯೩೧, ೧೯೩೬, ೧೯೩೭–೩೮ ರಲ್ಲಿ ಅಲಿಗಡದಲ್ಲಿ ಹಲವು ದಂಗೆಗಳಾ ದವು. ೧೯೪೬ರಲ್ಲಿ ನಡೆದ ವಿಭಜನೆಯ ಹಿಂದಿನ ದಂಗೆಯಲ್ಲಿ ಅ.ಮು. ವಿ.ವಿಯ ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸಿದ್ದಲ್ಲದೆ ಈ ಊರಿನ ಹತ್ತಿ ಮತ್ತು ಬೆಲ್ಲ, ಸಕ್ಕರೆ ಕಾರ್ಖಾನೆಗಳನ್ನು ಸುಟ್ಟರು.

ಅಲಿಗಡದ ನಿವಾಸಿಗಳಾದ ಹಿಂದೂಗಳನ್ನು ಆತಂಕಕ್ಕೆ ಒಳಪಡಿಸುವುದು ಇದರ ಉದ್ದೇಶವಾಗಿತ್ತು. ಈ ಘಟನೆಗಳು ಒಂದು ವಿ.ವಿಯಾದ ಕಾರಣದಿಂದಲೇ ಅಲಿಗಡ ನಗರವನ್ನು ಸದಾ ಆತಂಕದಲ್ಲಿ ಇಟ್ಟವು. ಅಲಿಗಡ ವಿವಿಯು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ನಂತರ ನಡೆಸಿದ ವಿಧ್ವಂಸಕ ಕೃತ್ಯಗಳ ಕರಾಳ ನೆನಪು ಮರೆಯುವಂತದ್ದಲ್ಲ. ಮತ್ತೆ ಅಲಿಗಡ ಮುಸ್ಲಿಂ ವಿವಿಯ ನೆನಪು ಮರುಕಳಿಸದಂತೆ ಟಿಪ್ಪು ವಿವಿ ಇರುತ್ತದೆ ಎಂಬ ಭರವಸೆ ಏನಿದೆ? ಒಟ್ಟಾರೆಯಾಗಿ ನ್ಯಾಯಮೂರ್ತಿ ಸಾಚಾರ್ ವರದಿ ಮುಸ್ಲಿಂ ಶಿಕ್ಷಣ ಕುರಿತು ಹೇಳುವುದರ ಬಗ್ಗೆ ಮೊದಲು ಮುಕ್ತ ಚರ್ಚೆಯಂತೂ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT