ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ ಶ್ಯೂರ್‌: ‘ಜನಸಾಮಾನ್ಯರ’ ಅಡ್ಡಿ

Last Updated 30 ಡಿಸೆಂಬರ್ 2015, 19:50 IST
ಅಕ್ಷರ ಗಾತ್ರ

ಬೆಂಗಳೂರು: ಟೆಂಡರ್‌ ಶ್ಯೂರ್‌ ಯೋಜನೆಯ ಮಾಹಿತಿ ನೀಡಲು ‘ಜನ ಅರ್ಬನ್‌ ಸ್ಪೇಸ್‌ ಫೌಂಡೇಷನ್‌’ನ ಮುಖ್ಯಸ್ಥೆ ಸ್ವಾತಿ ರಾಮನಾಥನ್‌ ನಗರದಲ್ಲಿ ಬುಧವಾರ ಕರೆದಿದ್ದ ಪತ್ರಿಕಾ ಸಂವಾದಕ್ಕೆ ‘ಫೋರಂ ಫಾರ್‌ ಅರ್ಬನ್‌ ಗವರ್ನೆನ್ಸ್‌ ಅಂಡ್‌ ಕಾಮನ್ಸ್‌’ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದರು.

ಮಧ್ಯಾಹ್ನ 2 ಗಂಟೆಗೆ ಜನ ಅರ್ಬನ್‌ ಸ್‍ಪೇಸ್‌ ಫೌಂಡೇಷನ್‌ನ ಕಚೇರಿಯಲ್ಲಿ ಪತ್ರಿಕಾ ಸಂವಾದ ಆಯೋಜಿಸಲಾಗಿತ್ತು. ಈ ವೇಳೆ ಕ್ಷಿತಿಜ್‌ ಅರಸ್‌, ವಿನಯ್‌ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಸಭಾಂಗಣಕ್ಕೆ ಬಂದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ‘ಸಾರ್ವಜನಿಕ ಯೋಜನೆಯ ಬಗ್ಗೆ ಖಾಸಗಿ ಸಂಸ್ಥೆ ಪತ್ರಿಕಾಗೋಷ್ಠಿ ನಡೆಸುವ ಅಗತ್ಯ ಏನಿದೆ’ ಎಂದು ಪ್ರಶ್ನಿಸಿದರು.

‘ಈ ಯೋಜನೆಗೆ ಜನರ ತೆರಿಗೆ ಹಣ  ಬಳಸಲಾಗುತ್ತಿದೆ. ಆದರೆ, ಸಾರ್ವಜನಿಕರೊಂದಿಗೆ ಸಭೆ ನಡೆಸದೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ. ಈ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ ಏರ್ಪಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಬಿಬಿಎಂಪಿ ಆಯುಕ್ತರು ಹಾಗೂ ಮೇಯರ್‌ ಅವರು ಬಿಬಿಎಂಪಿಯಲ್ಲಿ ಹಣಕಾಸಿನ ಕೊರತೆ ಇದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಟೆಂಡರ್‌ ಶ್ಯೂರ್‌ ಯೋಜನೆಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯ ಏನಿತ್ತು’ ಎಂದು ಕ್ಷಿತಿಜ್ ಅರಸ್‌ ಪ್ರಶ್ನಿಸಿದರು.

‘ಕೆರೆಗಳ ಅಭಿವೃದ್ಧಿಗೆ ಬಿಡಿಎ ಹಣಕಾಸಿನ ಕೊರತೆ ಇದೆ ಎಂಬ ಸಬೂಬು ಹೇಳುತ್ತಿದೆ. ಮೊದಲ ಹಂತದ ಆರು ರಸ್ತೆಗಳ ನಿರ್ಮಾಣಕ್ಕೆ ₹100 ಕೋಟಿ ವೆಚ್ಚ ಮಾಡಲಾಗಿದೆ. ಈ ಹಣದಲ್ಲಿ ನಗರದ 100 ಕೆರೆಗಳನ್ನು ಅಭಿವೃದ್ಧಿಪಡಿಸಬಹುದಿತ್ತು’ ಎಂದರು.

‘ಸೇಂಟ್ ಮಾರ್ಕ್ಸ್‌ ರಸ್ತೆ ಹಾಗೂ ಕನ್ನಿಂಗ್‌ ಹ್ಯಾಂ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಕಾನೂನುಬಾಹಿರವಾಗಿ ಎತ್ತಂಗಡಿ ಮಾಡಲಾಯಿತು. ಬೀದಿಬದಿ ವ್ಯಾಪಾರಿಗಳಿಗಾಗಿ ವ್ಯಾಪಾರಿ ವಲಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಲಾಯಿತು. ಆದರೆ, ಈಗ ಅದರ ಸುಳಿವೇ ಇಲ್ಲ’ ಎಂದು ಆಕ್ರೋಶ  ವ್ಯಕ್ತಪಡಿಸಿದರು.

‘ಸೇಂಟ್‌ ಮಾರ್ಕ್ಸ್‌ ರಸ್ತೆ ಹಾಗೂ ಕನ್ನಿಂಗ್‌ ಹ್ಯಾಂ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರವಾಹನಗಳು ಸಂಚಾರ ಮಾಡಬಾರದು ಎಂಬ ಕಾರಣಕ್ಕೆ ಕಲ್ಲಿನ ಚಿಕ್ಕ ಕಂಬಗಳನ್ನು ಹಾಕಲಾಗಿದೆ. ಇದರಿಂದಾಗಿ ಅಂಗವಿಕಲರ ಸಂಚಾರಕ್ಕೆ ಅಡ್ಡಿಯಾಗಿದೆ. ಆದರೆ, ದ್ವಿಚಕ್ರವಾಹನಗಳು ಹೋಗುವುದು ನಿಂತಿಲ್ಲ. ಇಂತಹ ಲೋಪದೋಷಗಳಿಗೆ ಯಾರು ಹೊಣೆ’ ಎಂದು ವಿನಯ್‌ ಶ್ರೀನಿವಾಸ್‌ ಪ್ರಶ್ನಿಸಿದರು.

‘ಟೆಂಡರ್‌ ಶ್ಯೂರ್‌ ಯೋಜನೆಗೆ ಟೆಂಡರ್‌ ಕರೆದಿಲ್ಲ. ಯೋಜನೆಯ ಗುತ್ತಿಗೆ ಯಾರಿಗೆ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯವರು ತೀರ್ಮಾನ ಮಾಡುತ್ತಾರೆ. ಈ ಯೋಜನೆಯಲ್ಲಿ ಹಿತಾಸಕ್ತಿ ನಡೆದಿದೆ. ಮೊದಲ ಹಂತದ ಯೋಜನೆಯ ಮೊತ್ತ ಹಿಗ್ಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಯೋಜನೆಯ ವಿರುದ್ಧ ಬಿಬಿಎಂಪಿ ಸ್ಥಾಯಿ ಸಮಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಮೇಯರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಅಂಶಗಳ ಬಗ್ಗೆ ಯಾಕೆ ಗಮನ ಹರಿಸಿಲ್ಲ’ ಎಂದು ಪ್ರಶ್ನಿಸಿದರು.

‘ಟೆಂಡರ್‌ ಶ್ಯೂರ್‌ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬಿಬಿಎಂಪಿ ಎಂಜಿನಿಯರ್‌ಗಳು ಪರಿಶೀಲನೆ ನಡೆಸಬಾರದು ಎಂದು ಮುಖ್ಯ ಕಾರ್ಯದರ್ಶಿ ಅವರು ನಿರ್ದೇಶನ ನೀಡಿದ್ದರು. ಈ ಆದೇಶ 50 ರಸ್ತೆಗಳಿಗೂ ಅನ್ವಯವಾಗುವುದೇ’ ಎಂದು ಅವರು ಪ್ರಶ್ನಿಸಿದರು.

‘ಇಲ್ಲಿ ಪತ್ರಿಕಾ ಸಂವಾದ ಆಯೋಜಿಸಲಾಗಿದೆ. ಇಲ್ಲಿ ಪ್ರತಿಭಟನೆ ನಡೆಸುವ ಹಾಗಿಲ್ಲ. ಪ್ರತಿಭಟನೆ ಕೈಬಿಡಿ’ ಎಂದು ಸಂಸ್ಥೆಯ ಸಿಬ್ಬಂದಿ ಮನವಿ ಮಾಡಿದರು. ಈ ವೇಳೆ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ‘ನಾವು ಕೇಳಿರುವ 12 ಪ್ರಶ್ನೆಗಳಿಗೆ ಉತ್ತರ ನೀಡಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದರು. ‘ನಮ್ಮ ಪ್ರತಿಭಟನೆಯನ್ನು ಇಲ್ಲಿ ದಾಖಲಿಸಿದ್ದೇವೆ. ಇನ್ನು ಮುಂದೆ ಬೇರೆ ವೇದಿಕೆಯಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಘೋಷಿಸಿ ನಿರ್ಗಮಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಾತಿ ರಾಮನಾಥನ್‌, ‘ಯೋಜನೆಯ ಬಗ್ಗೆ ಒಂದು ವರ್ಗದ  ಜನರಿಂದ ಆಕ್ಷೇಪ ವ್ಯಕ್ತವಾಗಿದೆ. ಸಾರ್ವಜನಿಕ ಸಂವಾದ ನಡೆಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಅಗತ್ಯವಿದ್ದರೆ ಅವರೇ ಸಂವಾದ ನಡೆಸಲಿ. ಇದಕ್ಕೆಲ್ಲ ಸಮಯ ವ್ಯರ್ಥ ಮಾಡಲು ಸಿದ್ಧಳಿಲ್ಲ. ನನಗೆ ಸಾಕಷ್ಟು ಕೆಲಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT