ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌: ಹೊಸ ಷರತ್ತು ವಿಧಿಸಲು ನಿರ್ಧಾರ

ಸೈಕಲ್‌ಗೆ ದುಬಾರಿ ದರ ಪಾವತಿಸಿದ್ದ ಸರ್ಕಾರ
Last Updated 4 ಮೇ 2016, 20:17 IST
ಅಕ್ಷರ ಗಾತ್ರ

ಬೆಂಗಳೂರು: ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸುವ  ಸೈಕಲ್‌ಗೆ ರಾಜ್ಯ ಸರ್ಕಾರವು ಅನ್ಯ ರಾಜ್ಯಗಳಿಗಿಂತ  ₹ 1 ಸಾವಿರಕ್ಕೂ ಅಧಿಕ ಮೊತ್ತವನ್ನು ಪಾವತಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ 2016–17ನೇ ಸಾಲಿನಲ್ಲಿ ಸೈಕಲ್‌ ಖರೀದಿಯ ಟೆಂಡರ್‌ಗೆ ಹೊಸ ಷರತ್ತುಗಳನ್ನು  ವಿಧಿಸಲು ಮುಂದಾಗಿದೆ.

‘ಸೈಕಲ್‌ ಖರೀದಿ ಟೆಂಡರ್‌ನಲ್ಲಿ ಭಾಗವಹಿಸುತ್ತಿದ್ದ ಕಂಪೆನಿಗಳು  ಪರಸ್ಪರ ಷಾಮೀಲಾಗಿ ದುಬಾರಿ ದರವನ್ನು ಉಲ್ಲೇಖಿಸುತ್ತಿದ್ದವು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಈ ಬಾರಿ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಅದಿನ್ನೂ ಅಂತಿಮವಾಗಿಲ್ಲ. ಅನಗತ್ಯವಾಗಿ ಹೆಚ್ಚು ಮೊತ್ತ ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ಟೆಂಡರ್‌ಗೆ ಪೂರಕ ಷರತ್ತುಗಳನ್ನು ವಿಧಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಬುಧವಾರ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ‘ಸೈಕಲ್‌ ಪೂರೈಕೆಯ ಅರ್ಹತಾ ಮಾನದಂಡಗಳನ್ನು ಇನ್ನಷ್ಟು ಕಠಿಣಗೊಳಿಸುತ್ತೇವೆ. ಗುಣಮಟ್ಟದ ಬಗ್ಗೆ ಹೆಚ್ಚು ನಿಗಾ ವಹಿಸುತ್ತೇವೆ. ಅತ್ಯಂತ ಸ್ಪರ್ಧಾತ್ಮಕವನ್ನು ನಮೂದಿಸಬೇಕು, ಸೈಕಲ್‌ನ ದರವು ಇತರ ರಾಜ್ಯಗಳಲ್ಲಿ ವಿಧಿಸಿದ ದರಕ್ಕಿಂತ ಹೆಚ್ಚು ಇರಬಾರದು ಎಂಬ ಷರತ್ತನ್ನೂ ಸೇರಿಸಲಾಗುವುದು’ ಎಂದು ತಿಳಿಸಿದರು.

‘ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯ ಹೊಸ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಉಪಗ್ರಹ ಆಧಾರಿತ  ಶಿಕ್ಷಣ ಯೋಜನೆ ಅಂಗವಾದ ‘ಐಸಿಟಿ–3’ ಯೋಜನೆಯ ಅನುಷ್ಠಾನವನ್ನು ಕಿಯೋನಿಕ್ಸ್‌ ವಹಿಸಲಾಗಿತ್ತು. ಅದನ್ನು ರದ್ದುಪಡಿಸಲಾಗಿದೆ. ಇದರ ನಿರ್ವಹಣೆಗೆ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಇದಕ್ಕಾಗಿ ₹ 85 ಕೋಟಿ ಕಾಯ್ದಿರಿಸಲಾಗಿದೆ’ ಎಂದು ಅವರು ಹೇಳಿದರು.
 

ಸಂಪುಟದ ಇತರ ನಿರ್ಧಾರಗಳು
* ರಾಜ್ಯಪಾಲರ ಜಂಟಿ ಕಾರ್ಯದರ್ಶಿಯಾಗಿ ಅಹಮದಾಬಾದ್‌ನ ಆರ್‌.ಬಿ.ಸಾಗರ್‌ ಕಾಲೇಜ್‌ ಆಫ್‌ ಎಜುಕೇಷನ್‌ನ ಸಹಾಯಕ ಪ್ರಾಧ್ಯಾಪಕ ಡಾ.ಅಜಿತ್‌ಸಿನ್‌ ಪಿ.ರಾಣಾ ಗುತ್ತಿಗೆ ಆಧಾರದಲ್ಲಿ ನೇಮಕ

* ರಾಜ್ಯದ 12 ಸಿ ಗುಂಪಿನ  ಗಣಿಗುತ್ತಿಗೆಗಳಲ್ಲಿ 3ನೇ ಹಂತದ ಅದಿರು ನಿಕ್ಷೇಪ ಅಂದಾಜಿಸುವ ಕಾರ್ಯವನ್ನು ಎಂಇಸಿಎಲ್ ಸಂಸ್ಥೆಗೆ ( ₹ 42.90 ಕೋಟಿ) ವಹಿಸಲು ತೀರ್ಮಾನ.

* ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಬಂಡವಾಳ ಆಕರ್ಷಿಸಲು ಇನ್ವೆಸ್ಟ್‌ ಕರ್ನಾಟಕ ಕಂಪೆನಿ ಸ್ಥಾಪನೆಗೆ  ₹ 10 ಕೋಟಿ ಅನುದಾನ ನೀಡಲು ಸಮ್ಮತಿ. ಬೃಹತ್‌ ಕೈಗಾರಿಕಾ ಸಚಿವರು ಅಧ್ಯಕ್ಷರಾಗಿರುವ ಈ ಕಂಪೆನಿಯಲ್ಲಿ ಕೈಗಾರಿಕೋದ್ಯಮಿಗಳೂ ಸೇರಿದಂತೆ 9 ಸದಸ್ಯರು ಇರಲಿದ್ದಾರೆ.

* ವಿಧಾನ ಪರಿಷತ್ತಿನ ಸದಸ್ಯ ಲೆಹರ್‌ ಸಿಂಗ್‌ ಅವರ ಅವಧಿ ಈ ತಿಂಗಳು  ಪೂರ್ಣಗೊಳ್ಳಲಿದೆ. ಅವರ ಬದಲು ಇನ್ನೊಬ್ಬ ಸದಸ್ಯರನ್ನು ನಾಮನಿರ್ದೇಶನ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ

* ಬಿಬಿಎಂಪಿಯ ಆರ್ಥಿಕ ಅಧಿಕಾರ  ವ್ಯಾಪ್ತಿ ಮೀರಿದ ಎಲ್ಲ ಕಾಮಗಾರಿಗಳ ಅಂದಾಜುಪಟ್ಟಿಗಳಿಗೆ ಆಡಳಿತಾತ್ಮಕ ಹಾಗೂ ಟೆಂಡರ್‌ ಅನುಮೋದನೆ ನೀಡಲು  ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.

* ಬೆಂಗಳೂರು– ಮೈಸೂರು ರೈಲ್ವೆ ಮಾರ್ಗದಲ್ಲಿ ನಾಯಂಡಹಳ್ಳಿ ರೈಲ್ವೆ ನಿಲ್ದಾಣಗಳ ನಡುವೆ ರೈಲ್ವೆ ಕೆಳ ಸೇತುವೆ ಕಾಮಗಾರಿಗೆ ₹ 14.93 ಕೋಟಿ

* ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ಆನೆಕಲ್‌ ತಾಲ್ಲೂಕಿನ ಮುತ್ತಸಂದ್ರ ಬಳಿ ದಕ್ಷಿಣ ಪಿನಾಕಿನಿ ನದಿಯಿಂದ 60 ಕೆರೆಗಳಿಗೆ ಹಾಗೂ ಕನಕಪುರ ತಾಲ್ಲೂಕಿನ ರಾವತನಹಳ್ಳ, ಮಾವತ್ತೂರು ಕೆರೆಗಳಿಗೆ ತುಂಬಿಸುವ ಯೋಜನೆಗೆ ₹ 240 ಕೋಟಿ

* ಮಲಪ್ರಭಾ ನದಿಗೆ ಅಡ್ಡಲಾಗಿ ಕೂಡಲ ಸಂಗಮ–ಅಡವಿಹಾಳ ಸೇತುವೆಗೆ ₹ 59.80 ಕೋಟಿ

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕೇಂದ್ರದಿಂದ ಬಿಡುಗೆಯಾದ ₹ 495 .88 ಕೋಟಿ ಹಣವನ್ನು ಚಾಲ್ತಿಯಲ್ಲಿರುವ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಬಳಸಲು ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT