ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆರ್ರಿ ವಾಲ್ಶ್‌ ರಾಜೀನಾಮೆ

ಅನಿರೀಕ್ಷಿತ ನಿರ್ಧಾರ ಕೈಗೊಂಡ ಭಾರತ ಹಾಕಿ ತಂಡದ ಮುಖ್ಯ ಕೋಚ್‌
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಹಾಕಿ ತಂಡದ ಮುಖ್ಯ ಕೋಚ್ ಟೆರ್ರಿ ವಾಲ್ಶ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ನಡೆದ ಈ ಅನಿರೀಕ್ಷಿತ ಬೆಳವಣಿಗೆ ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸಂಭ್ರಮದಲ್ಲಿದ್ದ ಭಾರತ ಹಾಕಿ ತಂಡಕ್ಕೆ ಇದರಿಂದ ಆಘಾತ ಉಂಟಾಗಿದೆ. ಸಂಭಾವನೆಗೆ ಸಂಬಂಧಿಸಿದಂತೆ ಭಾರತ ಕ್ರೀಡಾ ಪ್ರಾಧಿಕಾರ ಜತೆಗಿನ ಭಿನ್ನಾಭಿಪ್ರಾಯ ವಾಲ್ಶ್‌ ಅವರ ಈ ಹಠಾತ್‌ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಆದರೆ ಎಸ್‌ಎಐನ ಕಾರ್ಯ ವೈಖರಿಯ ಜತೆ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಈ ಹೆಜ್ಜೆಯಿ ಟ್ಟಿರುವುದಾಗಿ ರಾಜೀನಾಮೆ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ವಾಲ್ಶ್‌ ಅವರ ಹಾಕಿ ಇಂಡಿಯಾ ಜತೆಗಿನ ಒಪ್ಪಂದದ ಅವಧಿ 2016ರ ರಿಯೊ ಡಿ ಜನೈರೊ ಒಲಿಂಪಿಕ್‌ ಕೂಟದ ತನಕ ಇತ್ತು. ಇದೀಗ ಅವಧಿಗೆ ಸಾಕಷ್ಟು ಮುನ್ನವೇ ರಾಜೀನಾಮೆ ನೀಡಿದ್ದಾರೆ.

‘ಭಾರತ ಹಾಕಿ ತಂಡದ ಮುಖ್ಯ ಕೋಚ್‌ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ವಾಲ್ಶ್‌ ಎಸ್‌ಎಐ ನಿರ್ದೇಶಕ ಜಿಜಿ ಥಾಮ್ಸನ್‌ಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರವನ್ನು ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು.‘ಇಲ್ಲಿನ ಅಧಿಕಾರಶಾಹಿಗಳು ತೀರ್ಮಾನ ಕೈಗೊಳ್ಳುವ ರೀತಿಗೆ ಹೊಂದಿ ಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಕೈಗೊಳ್ಳುವ ನಿರ್ಧಾರಗಳು ಭಾರತದಲ್ಲಿ ಹಾಕಿ ಕ್ರೀಡೆ ಹಾಗೂ ಆಟಗಾರರ ಹಿತಾಸಕ್ತಿಗೆ ಮಾರಕವಾಗಿದೆ’ ಎಂದು ಆಸ್ಟ್ರೇಲಿಯದ 60ರ ಹರೆಯದ ವಾಲ್ಶ್‌ ಹೇಳಿದ್ದಾರೆ.

‘ಈ ಅಧಿಕಾರಶಾಹಿಗಳ ನಡುವೆ ವೃತ್ತಿಪರ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಸಾಧ್ಯ. ಅದೇ ರೀತಿ ಈಗ ಇರುವ ಒಪ್ಪಂದದ ನಿಯಮದಂತೆ ಪ್ರಕಾರ ದೀರ್ಘ ಅವಧಿಯವರೆಗೆ ನಾನು ಕುಟುಂಬದಿಂದ ದೂರ ಇರಬೇಕಾಗುತ್ತದೆ. ಇದು ನನ್ನ ವೈಯಕ್ತಿಕ ಜೀವನದ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿದೆ’ ಎಂದಿದ್ದಾರೆ. ‘ಆದರೆ ನನ್ನ ಷರತ್ತುಗಳನ್ನು ಒಪ್ಪಿಕೊಂಡು ಹೊಸದಾಗಿ ಒಪ್ಪಂದಕ್ಕೆ ಮುಂದಾಗುವುದಾದರೆ ರಾಜೀನಾಮೆ ನಿರ್ಧಾರವನ್ನು ಮರು ಪರಿಶೀಲಿಸಲು ಸಿದ್ಧ’ ಎಂದು ತಿಳಿಸಿದ್ದಾರೆ.

ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಾಲ್ಶ್‌ ಹಾಗೂ ಭಾರತ ತಂಡದ ಕೆಲವು ಸಹಾಯಕ ಸಿಬ್ಬಂದಿಗೆ ಎಸ್‌ಎಐ ಜತೆ ಭಿನ್ನಾಭಿಪ್ರಾಯ ತಲೆದೋರಿತ್ತು ಎಂದು ಕೆಲವು ಮೂಲಗಳು ತಿಳಿಸಿವೆ. ವಾಲ್ಶ್‌ ಅವರ ನಿರ್ಧಾರದಿಂದ ಎಸ್‌ಎಐ ಮತ್ತು ಹಾಕಿ ಇಂಡಿಯಾದ ಅಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ವೇತನಕ್ಕೆ ಸಂಬಂಧಿಸಿದ ವಿವಾದ ಮತ್ತು ಎಸ್‌ಎಐನ ಕಾರ್ಯವೈಖರಿ ಯಿಂದ ಬೇಸತ್ತು ವಾಲ್ಶ್‌ ರಾಜೀನಾಮೆ ನೀಡಿದ್ದಾರೆ ಎಂದು ಹಾಕಿ ಇಂಡಿಯಾ ಹೇಳಿದೆ. ಆದರೆ ವಾಲ್ಶ್‌ ಅವರು ವೇತನ ಮತ್ತು ತೆರಿಗೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ನೀಡಿರಲಿಲ್ಲ ಎಂದು ಎಸ್‌ಎಐ ತಿಳಿಸಿದೆ.‘ವಾಲ್ಶ್‌ ಕೈಗೊಂಡ ಅನಿರೀಕ್ಷಿತ ನಿರ್ಧಾರದಿಂದ ಅಚ್ಚರಿ ಹಾಗೂ ಬೇಸರ ಉಂಟಾಗಿದೆ’ ಎಂದು ಥಾಮ್ಸನ್‌ ಪ್ರತಿಕ್ರಿಯಿಸಿದ್ದಾರೆ.

ವರದಿ ನೀಡಲು ಕ್ರೀಡಾ ಸಚಿವರ ಸೂಚನೆ
ವಾಲ್ಶ್‌ ಅವರ ಅನಿರೀಕ್ಷಿತ ನಿರ್ಧಾರದಿಂದ ಅಚ್ಚರಿಗೆ ಒಳಗಾಗಿರುವ ಕ್ರೀಡಾ ಸಚಿವ ಸರ್ವಾನಂದ ಸೋನೊವಾಲ್‌ ಈ ಕುರಿತು 24 ಗಂಟೆಗಳ ಒಳಗಾಗಿ ವರದಿ ನೀಡುವಂತೆ ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.

‘ಇದು ಗಂಭೀರ ವಿಷಯ. ರಾಜೀನಾಮೆಯ ಹಿಂದಿನ ಕಾರಣವನ್ನು ವಿವರಿಸಿ 24 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಎಸ್‌ಎಐ ನಿರ್ದೇಶಕರು ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ಸೋನೊವಾಲ್‌ ಹೇಳಿದ್ದಾರೆ.
ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಾಲ್ಶ್‌ ಮತ್ತು ಎಸ್‌ಎಐ ಜತೆ ಭಿನ್ನಾಭಿಪ್ರಾಯ ಇರುವುದು ನಿಮಗೆ ತಿಳಿದಿತ್ತೇ ಎಂಬ ಪ್ರಶ್ನೆಗೆ, ‘ಆ ವಿಷಯ ತಿಳಿದಿಲ್ಲ. ವರದಿ ಲಭಿಸಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳುವೆವು’ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT