ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗೋರರ `ಚಿರಕುಮಾರ ಸಭಾ'

Last Updated 27 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸಮಷ್ಟಿ ರಂಗತಂಡದವರು ಇತ್ತೀಚೆಗೆ ರಂಗಶಂಕರದಲ್ಲಿ ತಮ್ಮ ಹೊಸ ಪ್ರಯೋಗ `ಚಿರಕುಮಾರ ಸಭಾ'ದ ಮೂರನೇ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿದರು. ರವೀಂದ್ರನಾಥ ಟ್ಯಾಗೋರರು ಬರೆದ ಇಂತಹ ಅಪರೂಪದ ನಾಟಕವನ್ನು ಬಿ. ಪುಟ್ಟಸ್ವಾಮಯ್ಯನವರು ಹಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ವಿನ್ಯಾಸ ಮಾಡಿ ನಿರ್ದೇಶಿಸಿದವರು ಮಂಜುನಾಥ ಎಲ್. ಬಡಿಗೇರ್. ಸಂಗೀತ ಗಜಾನನ ಹೆಗಡೆ, ಬೆಳಕು ರವೀಂದ್ರ ಪೂಜಾರಿ.

ಮದುವೆಯಾಗದ ಬ್ರಹ್ಮಚಾರಿಗಳ ಸಂಘವೇ `ಚಿರಕುಮಾರ ಸಭಾ'. ಅಕ್ಷಯ ಕುಮಾರ `ಚಿರಕುಮಾರ ಸಭಾ'ದ ಮಾಜಿ ಅಧ್ಯಕ್ಷ. ಮದುವೆಯಾಗುವ ಮೂಲಕ ಅವನು ಚಿರಕುಮಾರ ಸಭೆಯಿಂದ ಹೊರನಡೆದವನು. ಅವನ ಹೆಂಡತಿ ಪುರಬಾಲ. ಅವಳಿಗೆ ಮೂರು ಜನ ತಂಗಿಯರು. ಅದರಲ್ಲಿ ಒಬ್ಬಳು ಬಾಲವಿಧವೆ ಶೈಲ್ಬಾಲ. ಇನ್ನಿಬ್ಬರು ಮದುವೆಯ ವಯಸ್ಸಿನ ನಿರಬಾಲ ಮತ್ತು ನಪಬಾಲ. ಮನೆಯಲ್ಲಿ ಅಕ್ಷಯಕುಮಾರನಿಗೆ ತನ್ನ ನಾದಿನಿಯರ ಮದುವೆಯ ಕಾರ‌್ಯದ ಸಲುವಾಗಿ ತನ್ನ ಹೆಂಡತಿಯಿಂದ, ಅತ್ತೆ ಜಗತ್ತಾರಿಣಿಯಿಂದ ಒತ್ತಡ ಬರುತ್ತಲೇ ಇದೆ.

ಇತ್ತ ಚಿರಕುಮಾರ ಸಭಾದ ಹಾಲಿ ಅಧ್ಯಕ್ಷರಾದ ಚಂದ್ರಬಾಬು ಅವರ ನೇತತ್ವದಲ್ಲಿ ಸಭೆ ನಡೆಯುತ್ತಿದೆ. ಅಲ್ಲಿ ಶ್ರೀಷಾ ಮತ್ತು ಬಿಪಿನ್ ಎಂಬ ತರುಣರು ಬಹಳ ಸಕ್ರಿಯರಾಗಿದ್ದಾರೆ. ಪೂರ್ಣಬಾಬು ಎಂಬ ಹೊಸ ತರುಣನೂ ಸೇರಿಕೊಂಡಿದ್ದಾನೆ. ಅದೇ ಮನೆಯಲ್ಲಿ ಚಂದ್ರಬಾಬುವಿನ ತಂಗಿಯ ಮಗಳು ನಿರ್ಮಲೆಯೂ ಇದ್ದಾಳೆ. ಪೂರ್ಣನಿಗೆ ಅವಳ ಮೇಲೆ ಎಲ್ಲಿಲ್ಲದ ಪ್ರೀತಿ ಶುರುವಾಗಿದೆ; ಆದಾಗ್ಯೂ ಚಿರಕುಮಾರ ಸಭಾದ ಸದಸ್ಯ.

ಹೀಗಿರುತ್ತ ತಾಯಿ ಜಗತ್ತಾರಿಣಿದೇವಿ ಮತ್ತು ಅಕ್ಕ ಪುರಬಾಲ ಬನಾರಸಿಗೆ ಯಾತ್ರೆ ಹೋಗುವ ಸಮಯವನ್ನೇ ಸಾಧಿಸಿ ಬಾಲವಿಧವೆ ಶೈಲ್ಬಾಲ ತನ್ನ ತಂಗಿಯರಿಗೆ ಮದುವೆ ಮಾಡಿಸುವ ಸಲುವಾಗಿ ಭಾವ ಅಕ್ಷಯ ಮತ್ತು ರಸಿಕದಾದಾ ಎಂಬ ಮದುವೆ ದಲ್ಲಾಳಿಯೊಂದಿಗೆ ಸೇರಿ ಒಂದು ಉಪಾಯ ಹೆಣೆಯುತ್ತಾಳೆ. ಅದರಂತೆ ರಸಿಕದಾದಾನ ಜೊತೆ ತಾನು ಪುರುಷವೇಷವನ್ನು ಧರಿಸಿಕೊಂಡು ಚಿರಕುಮಾರ ಸಭೆಯ ಸದಸ್ಯಳಾಗುತ್ತಾಳೆ.

ಸದಸ್ಯೆಯಾದ ಮೇಲೆ ಅವಳು ಮಾಡುವ ಮೊದಲ ಕೆಲಸವೆಂದರೆ ಸಭಾದ ಕಾರ‌್ಯಕ್ಷೇತ್ರವನ್ನು ಚಂದ್ರಬಾಬುವಿನ ಮನೆಯಿಂದ ತನ್ನ ಮನೆಗೆ ಸ್ಥಳಾಂತರಿಸುತ್ತಾಳೆ. ಅಲ್ಲಿ ಶ್ರೀಷಾ ಮತ್ತು ಬಿಪಿನ್ ಎಂಬ ಬ್ರಹ್ಮಚಾರಿಗಳು ತನ್ನ ತಂಗಿಯರಾದ ನಿರಬಾಲ ಮತ್ತು ನಪಬಾಲರ ಮೇಲೆ ಅನುರಾಗ ಮೂಡುವಂತೆ ವ್ಯವಸ್ಥೆ ಮಾಡಿ, ಕಡೆಗೂ ಅವರನ್ನು ಚಿರಕುಮಾರ ಸಭೆಯಿಂದ ಮುಕ್ತರನ್ನಾಗಿ ಮಾಡಿ ಸಂಸಾರಸಭೆಗೆ ಸೇರಿಸುತ್ತಾಳೆ. ಇದಿಷ್ಟು ನಾಟಕ ಹೂರಣ.

ಕನ್ನಡದ ಬಹುತೇಕ ರಂಗಾಸಕ್ತರಿಗೆ ಟ್ಯಾಗೂರರ ಇಂತಹ ಒಂದು ನಾಟಕ ಕನ್ನಡಕ್ಕೆ ಅನುವಾದವಾಗಿದೆ ಎಂದೇ ಗೊತ್ತಿಲ್ಲ. ಇಂತಹ ಅಪರೂಪದ ನಾಟಕವನ್ನು ಸಮಷ್ಟಿ ತಂಡದವರು ಕೈಗೆತ್ತಿಕೊಂಡು ಬಹಳ ಶಿಸ್ತಿನ, ಸೃಜನಾತ್ಮಕ ರಂಗಭಾಷೆಯಿಂದ ಪ್ರಯೋಗಿಸಿದ್ದಾರೆ. ಕನಿಷ್ಟ ರಂಗಸಜ್ಜಿಕೆ, ಪರಿಕರ ಮತ್ತು ವಸ್ತ್ರವಿನ್ಯಾಸಗಳೊಂದಿಗೆ ಬಂಗಾಳೀ ಸಮಾಜದ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಂಗೀತ ಸಂಯೋಜನೆಯನ್ನು ಇನ್ನಷ್ಟು ತಾಳ್ಮೆಯಿಂದ ಮಾಡಿಸಿದ್ದರೆ ಚೆನ್ನಿತ್ತು. ಹಾಡುಗಳ ಸಂಯೋಜನೆ ತನ್ನಷ್ಟಕ್ಕೆ ತಾನೇ ಚೆನ್ನಾಗಿದೆ.

ಆದರೆ ಇಡೀ ನಾಟಕದ ಓಘಕ್ಕೆ, ಕಥೆಯ ಭಾವಚಲನೆಗಳೊಂದಿಗೆ ಅದು ಏಕತ್ರಗೊಂಡಿಲ್ಲ. ಎಲ್ಲವೂ ಬಿಡಿಬಿಡಿಯಾಗಿದೆ. ಒಮ್ಮೆ ಜನಪದಶೈಲಿ ಬಂದರೆ, ಮತ್ತೊಮ್ಮೆ ಪಾಶ್ಚಿಮಾತ್ಯಶೈಲಿಯ ಸಂಯೋಜನೆ. ಪ್ರತಿಪಾತ್ರಕ್ಕೆ ಒಂದೊಂದು ಸ್ಥಾಯಿ ಹೇಗೋ ಹಾಗೆ ಇಡೀ ನಾಟಕಕ್ಕೆ ಒಂದಿಲ್ಲೊಂದು ಸ್ಥಾಯಿ ಇರುತ್ತದೆ. ಅದನ್ನು ಶೋಧಿಸಿ, ಪ್ರಯೋಗದ ಎಲ್ಲ ವಿಭಾಗಗಳಲ್ಲೂ ತರುವುದೇ ನಿಜಕ್ಕೂ ದೊಡ್ಡ ಸವಾಲಿನ ಕೆಲಸ. ಆ ಸ್ಥಾಯಿಯ ಹೊಳಹು ನಾಟಕ ಕಟ್ಟುವ ಸಂದರ್ಭದಲ್ಲಿ ಎಲ್ಲಿಂದಲೋ ಮೂಡಬಹುದು. ಬರೀ ಒಂದು ಬ್ರಾಕೆಟ್ಟಿನಲ್ಲಿ ನಾಟಕಕಾರ ಸೂಚಿಸಿದ ಯಾವುದೋ ರಂಗಸೂಚಿಯಿಂದಲೇ ಇಡೀ ನಾಟಕದ ವಿಶಿಷ್ಟ ಸ್ಥಾಯಿಗುಣ ಹೊಳೆದುಬಿಡಬಹುದು.

ಇದಲ್ಲದೇ ಸುಮಾರು ದಶಕಗಳ ಹಿಂದೆ ಠಾಕೂರರು ಬರೆದ ನಾಟಕವನ್ನು ಇಂದು ಆಡಿಸುವಾಗ ಅದನ್ನು ಸಮಕಾಲೀನಗೊಳಿಸುವುದೂ ನಿರ್ದೇಶಕನ ಜವಾಬ್ದಾರಿ. ಕೆಲವು ವಿಶೇಷ ಸಂದರ್ಭಗಳಲ್ಲಿ ಮೂಲಕೃತಿಯನ್ನು ಚೂರೂ ಬದಲಾಯಿಸದೆ ಇಂದಿನ ಕಾಲಕ್ಕೆ ಯಥಾವತ್ ಇಡುವುದೇ ಒಂದು ಸಮಕಾಲೀನ ಅಭಿವ್ಯಕ್ತಿಯಾಗುವುದು; ಅದುಬಿಟ್ಟರೆ ಉಳಿದಂತೆ ಎಲ್ಲ ನಾಟಕಗಳಿಗೂ ಆ ಗುಣ ಇರುವುದಿಲ್ಲವಲ್ಲ? ಹಾಗಾಗಿ ಇದನ್ನು ಸಮಕಾಲೀನಗೊಳಿಸುವ ಪ್ರಯತ್ನ ಮಾಡಿದ್ದರೆ ಇನ್ನೂ ಚೆನ್ನಿತ್ತು. ಯಾರೂ ಮಾಡದ ನಾಟಕ ಮಾಡುವುದು ಎಷ್ಟು ಮುಖ್ಯವೋ ಅದನ್ನು ಸಮಕಾಲೀನಗೊಳಿಸುವುದೂ ಅಷ್ಟೇ ಮುಖ್ಯ.

ಹಾಗಿದ್ದೂ ನಾಟಕವು ಹಲವು ವಿಚಾರಗಳ ಎಡೆಗೆ ಆಲೋಚನೆಗೆ ಹಚ್ಚುತ್ತದೆ: ಬ್ರಹ್ಮಚರ್ಯೆಯೆಂಬುದು ಆತ್ಮಬಲದಿಂದ ಉದ್ದೀಪನವಾಗುವುದೇ ಹೊರತು ಯಾವದೋ ಸಭಾ, ಸಂಘ, ಪರಿವಾರಗಳನ್ನು ಸೇರಿದ ಮಾತ್ರಕ್ಕೆ ಬ್ರಹ್ಮಚರ್ಯರಾಗುವುದು ಸಾಧ್ಯವೇ? ರಾಮಕೃಷ್ಣ ಪರಮಹಂಸರು, ಗಾಂಧೀಜಿ ಗೃಹಸ್ಥರಾಗಿದ್ದರೂ ಬ್ರಹ್ಮಚಾರಿಗಳೇ ಆಗಿ ಬದುಕಿದವರಲ್ಲವೇ?

ಬ್ರಹ್ಮಚರ್ಯೆ ಎಂಬುದು ಒಳಗಿನದ್ದೇ ಹೊರತು ಹೊರಗಿನ ತೋರಿಕೆಯದ್ದಲ್ಲ ಎಂಬುದನ್ನು ಸೂಕ್ಷ್ಮವಾಗಿ ಈ ನಾಟಕ ಎತ್ತಿತೋರುತ್ತಿದೆಯೇ? ಅಥವಾ ಇದೇ ನಾಟಕದಲ್ಲಿ ಬರುವ ಬಾಲವಿಧವೆ ಶೈಲ್ಬಾಲ ಬಾಲ್ಯದಲ್ಲೇ ವ್ಯವಸ್ಥೆಯ ಕ್ರೂರತೆಗೆ ಸಿಲುಕಿ ಬ್ರಹ್ಮಚಾರಿಣಿಯಾದವಳು; ಹಾಗೆಂದು ಅವಳನ್ನು ಬ್ರಹ್ಮಚಾರಿಣಿ ಎಂದು ಕರೆಯಬಹುದೇ? ಅವಳಿಗೂ ತಾರುಣ್ಯ ಸಹಜ ಕಾಮನೆಗಳಿಲ್ಲವೇ? ನಿಜಕ್ಕೂ ಬ್ರಹ್ಮಚರ್ಯೆ ಅಥವಾ ಚಿರಕೌಮಾರ‌್ಯವೆಂಬುದು ದೇಹಕ್ಕೆ ಸಂಬಂಧಿಸಿದ್ದೋ ಅಥವಾ ಮನಸ್ಸಿಗೋ?

ಇನ್ನು ರಂಗದ ಮೇಲೆ ನಟರ ಅಭಿನಯದ ಪ್ರಾಮಾಣಿಕತೆ, ಮುಗ್ಧತೆಯಿಂದ ಪ್ರೇಕ್ಷಕರಿಗೆ ನಟರ ಬಗೆಗೆ ಒಂದು ನಮೂನೆಯ ಆಪ್ಯಾಯಮಾನತೆ ಮೂಡುತ್ತದೆ. ಅಕ್ಷಯ ಕುಮಾರನಾಗಿ ಪರಮೇಶ್ವರ ಕೆ, ಅವನ ಹೆಂಡತಿ ಪುರಬಾಲಳಾಗಿ ತನುಜಾ ರುದ್ರಯ್ಯ, ತಾಯಿ ಜಗತ್ತಾರಿಣಿಯಾಗಿ ಸುಮಾ ಜಿ.ಎ, ಬಾಲವಿಧವೆ ಶೈಲ್ಬಾಲಳಾಗಿ ಧನ್ಯ ಬಡಿಗೇರ್, ಸಭಾದ ಅಧ್ಯಕ್ಷ ಚಂದ್ರಬಾಬುವಾಗಿ ರೇಣುಕಾಪ್ರಸಾದ್, ಸಭಾದ ಸದಸ್ಯ ಶ್ರೀಷಬಾಬು ಆಗಿ ಪದ್ಮಪ್ರಸಾದ್ ಜೈನ್, ವಿಪಿನ್‌ಬಾಬು ಆಗಿ ಹರಿಹರ ಕುಮಾರ್, ಪೂರ್ಣಬಾಬು ಆಗಿ ಹರೀಶ್ ರುದ್ರಯ್ಯ, ನಿರ್ಮಲೆಯಾಗಿ ಸವಿತಾ, ವನಮಾಲಿಯಾಗಿ ರಾಘವೇಂದ್ರ ಪ್ರಸಾದ್ ಮತ್ತು ನಾಟಕದ ಪೂರ ಜೀವಂತಿಕೆ ತುಂಬುತ್ತ ವಯೋಸಹಜ ಮುಗ್ಧತೆಯಿಂದ ಅಭಿನಯಿಸಿದ ನಿರಬಾಲ ಮತ್ತು ನಪಬಾಲ ಸೋದರಿಯರಾಗಿ ಸೌಮ್ಯಶ್ರೀ ಜೈನ್, ಪಲ್ಲವಿ ಪಿ. ಜಾದವ್ ಮತ್ತು ರಸಿಕದಾದಾ ಆಗಿ ತಮ್ಮ ನ್ಯೂನತೆಗಳನ್ನೇ ಅಭಿನಯದ ಸಫಲತೆಯನ್ನಾಗಿ ಮಾಡಿಕೊಂಡ ಗಂಗಾಧರ ಕರಿಕೆರೆ ಪ್ರೇಕ್ಷಕರ ಮನಸೂರೆಗೊಂಡರು.

ಬಂಗಾಳಿಯಲ್ಲಿ ಜನಪ್ರಿಯವಾದ ಈ ನಾಟಕವು ಕನ್ನಡದಲ್ಲಿ ಪ್ರಯೋಗಗೊಂಡಿದ್ದು ವಿರಳವೇ. ಅಪರೂಪದ ಈ ಪ್ರಯೋಗವನ್ನು ಎಲ್ಲ ರಂಗಾಸಕ್ತರೂ ಒಮ್ಮೆ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT