ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಟಾ ಎಂಟ್ರಿ ಆಪರೇಟರ್: ಆಟಕ್ಕುಂಟು ಲೆಕ್ಕಕ್ಕಿಲ್ಲ

Last Updated 22 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದಾಗಿನಿಂದ, ಅಂದರೆ 2005­ರಿಂದ ಗ್ರಾಮ ಪಂಚಾಯಿತಿ­ಗಳಲ್ಲಿ ಕಂಪ್ಯೂ­ಟರ್‌ ಯುಗ  ಆರಂಭವಾಯಿತು. ಮೊದಲು ಈ ಯೋಜನೆಗೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಬಳಕೆ­ಯಾಗುತ್ತಿದ್ದ ಕಂಪ್ಯೂಟರ್, ಸರ್ಕಾರದ ‘ಇ– ಆಡಳಿತ’ ಜಾರಿಯಾಗುವುದ­ರೊಂದಿಗೆ, ಅದರ ಭಾಗವಾಗಿ ಗ್ರಾಮ ಪಂಚಾ­ಯಿತಿ­ಗಳಲ್ಲಿ ‘ಪಂಚತಂತ್ರ’ ತಂತ್ರಾಂಶದ ಬಳಕೆ­ಯೊಂದಿಗೆ ಸರ್ವವ್ಯಾಪಿಯಾಗಿ ಬಿಟ್ಟಿತು.

‘ಇ– ಆಡಳಿತ’ದ ಮೂಲ ಉದ್ದೇಶವೇ ಆಡ­ಳಿ­ತದಲ್ಲಿ ಪಾರದರ್ಶಕತೆಯನ್ನು ತರುವು­ದಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದ ಆಡಳಿತ ಘಟಕವಾದ ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕತೆ ಅಗತ್ಯವಾಗಿ ಇರಬೇಕಾದದ್ದೇ. ಅದಕ್ಕನುಗುಣ­ವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಜಾರಿಯಾ­ಗುವ ಎಲ್ಲ ಯೋಜನೆ­ಗಳ ಖರ್ಚು ವೆಚ್ಚ ಆನ್‌ಲೈನ್‌ ಮುಖಾಂತರವೇ ಆಗಬೇಕೆಂದು ಸರ್ಕಾರ ನಿರ್ಧ­ರಿ­ಸಿತು. ತತ್ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಕಂಪ್ಯೂಟರ್‌ನಲ್ಲಿ ಕೆಲಸ ಹೆಚ್ಚುತ್ತಲೇ ಬಂದು, ಉದ್ಯೋಗ ಖಾತರಿ ಯೋಜನೆ­­ಯೊಂದಿಗೆ ನಿರ್ಮಲ ಭಾರತ ಯೋಜನೆ (ಎನ್‌ಬಿಎ, ಎಸ್‌ಬಿಎಮ್‌), ಆಶ್ರಯ ಯೋಜನೆ, ಬಸವ ವಸತಿ ಯೋಜನೆ, ಪಡಿತರ ಚೀಟಿ, ಇ– ಸ್ವತ್ತು ಮತ್ತಿತರ ಹಲವಾರು ಕೆಲಸಗಳು ಕಂಪ್ಯೂಟರ್ ಆಪರೇಟರ್‌ಗಳಿಗೆ ಬಿಡು­ವಿಲ್ಲದ ಕೆಲಸ ನೀಡಿವೆ.

ಉದ್ಯೋಗ ಖಾತರಿ ಯೋಜನೆಯಲ್ಲಿ ಕಂಪ್ಯೂ­ಟರ್ ಕೆಲಸವಲ್ಲದೆ ಹತ್ತಾರು ರಿಜಿಸ್ಟರ್‌­ಗಳನ್ನು ಬರೆದುಕೊಳ್ಳಬೇಕು, ಕೂಲಿಗಳಿಗೆ ಉದ್ಯೋಗ ಚೀಟಿ ವಿತರಣೆ­ಯಂತಹ ಕೆಲಸ­ಗಳನ್ನೂ ನಿರ್ವಹಿ­ಸಬೇಕು. ನಿರ್ಮಲ ಭಾರತ ಯೋಜನೆ ಈಗ ಸ್ವಚ್ಛ ಭಾರತ ಅಭಿಯಾನ­ವಾಗಿದೆ. ಈ ಯೋಜನೆ­ಯಲ್ಲಿ ಶೌಚಾಲಯ­ಗಳನ್ನು ಕಟ್ಟಿಕೊಳ್ಳುವ ಫಲಾ­ನು­ಭವಿಯ ವರ್ಕ್‌ ಆರ್ಡರ್ ಹಾಕು­ವುದು,  ಜಿಪಿಎಸ್ ಮಾಡು­ವುದು ಮುಂತಾದ ಕೆಲಸಗಳು ಕಂಪ್ಯೂಟರ್ ಆಪರೇಟರ್‌­ಗಳ ಜವಾಬ್ದಾರಿ. ಇನ್ನು ‘ಪಂಚ­ತಂತ್ರ’ದಲ್ಲಿ ನೂರೊಂದು ತಂತ್ರ­ಗಳು.

ಅಂದರೆ ತೆರಿಗೆ ವಸೂಲಿ ಮಾಡಿದ ಬಿಲ್ಲು­ಗಳನ್ನು ದಾಖಲಿಸುವುದು, ವಿವಿಧ ಯೋಜನೆಗಳ ಫಲಾನು­ಭವಿಗಳ ಬಿಲ್ಲುಗಳನ್ನು ದಾಖಲಿಸು­ವುದು, ಸ್ವಸ­ಹಾಯ ಗುಂಪುಗಳ ಮಾಹಿತಿಯನ್ನು ದಾಖಲಿ­ಸು­ವುದು, ಎಲ್ಲಕ್ಕಿಂತ ಮಿಗಿಲಾಗಿ ಎಲ್ಲ ಯೋಜನೆಗಳ ಕ್ಯಾಷ್‌ ಬುಕ್‌ಗಳ ವಿವರವನ್ನು ನಮೂದಿಸಿ, ವರ್ಷದ ಕೊನೆಗೆ ಬ್ಯಾಂಕಿನ ಮರು­ಹೊಂದಾಣಿಕೆ­ಯನ್ನು ಮಾಡಿ ಮುಗಿಸುವುದು. ಹೀಗೆ ಈ ಪಂಚತಂತ್ರದಲ್ಲಿನ ಕೆಲಸಗಳು ಒಂದೇ ಎರಡೇ? ಇದರ ಜೊತೆಗೆ ನಿರ್ಮಲ ಭಾರತ ಯೋಜನೆಯ ಕೆಲಸಗಳ ಉದ್ದ ಪಟ್ಟಿಯೇ ಇರುತ್ತದೆ.

ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇ­ಟರ್ ಸ್ಥಾನದ ಮಹತ್ವವನ್ನು ತಿಳಿಸಲು ಇಷ್ಟೆಲ್ಲ ದೊಡ್ಡ ಪೀಠಿಕೆ ನೀಡಬೇಕಾಯಿತು. ಇನ್ನೂ ಹಾಸ್ಯಾಸ್ಪದ ವಿಷಯವೆಂದರೆ ಗ್ರಾಮ ಪಂಚಾ­ಯಿತಿ­ಯಲ್ಲಿ ಕಂಪ್ಯೂಟರ್ ಆಪರೇಟರ್‌­ಗಳನ್ನು ಹೊರತುಪಡಿಸಿ ಉಳಿದೆಲ್ಲ ಹುದ್ದೆಗಳಿಗೂ  ನೇಮಕಾತಿ ನಡೆಯುತ್ತದೆ!

ಗ್ರಾಮ ಪಂಚಾಯಿತಿಯ ಶೇಕಡ 90ರಷ್ಟು ಕೆಲಸಗಳು ಕಂಪ್ಯೂಟರನ್ನು ಆಧರಿಸಿವೆ. ಹಾಗಾಗಿ ಕಂಪ್ಯೂಟರ್ ಆಪರೇ-­ಟರ್ ಸ್ಥಾನ ಕೆಲಸದ ದೃಷ್ಟಿಯಿಂದ ಪ್ರಮುಖ­ವಾಗಿರುತ್ತದೆ. ಎಲ್ಲ ಕೆಲಸಗಳೂ ಆನ್‌ಲೈನ್ ಆಧಾರಿತ. ಪ್ರತಿದಿನ ಗ್ರಾಮ ಪಂಚಾಯಿತಿಗೆ ಯಾವುದೇ ಸಂದೇಶ­ಗಳಾಗಲಿ, ಪತ್ರಗಳಾಗಲಿ, ಸೂಚನೆಗಳಾಗಲಿ ದೊರಕುವುದು ಆನ್‌ಲೈನ್‌ ಮುಖಾಂತರ. ಹೀಗಾಗಿ ಒಂದು ದಿನ ಪಂಚಾಯಿತಿಯ ಉಳಿದ ಯಾವುದೇ ನೌಕರರು ಇರದಿದ್ದರೆ ಕೆಲಸವನ್ನು ಹೇಗಾದರೂ ಸರಿದೂಗಿಸಿಕೊಂಡು ಹೋಗಬ­ಹುದು. ಆದರೆ, ಕಂಪ್ಯೂಟರ್ ಆಪರೇಟರ್ ಇರದಿದ್ದರೆ ಕೆಲಸ ಮುಂದೆ ಸಾಗುವುದೇ ಇಲ್ಲ.

ಇಷ್ಟೊಂದು ಅವಶ್ಯಕವಾದ ಮತ್ತು ಪ್ರಮುಖ­ವಾದ ಹುದ್ದೆಗೆ ಪಂಚಾಯತ್‌ ರಾಜ್ ಇಲಾಖೆ ಏಕೆ ನೇಮಕಾತಿ ಮಾಡುತ್ತಿಲ್ಲ? ಉಳಿ­ದೆಲ್ಲ ಹುದ್ದೆಗಳ ನೇಮಕಾತಿ ಮಾಡುವಾಗ ಈ ಒಂದೇ ­ಒಂದು ಹುದ್ದೆ ನೇಮಕಾತಿ ಮಾಡು­ವುದು ಇಲಾಖೆಗೆ ಹೊರೆಯೆ? ಹಾಗಾದರೆ ಈ ಆಪರೇಟರ್‌ಗಳಿಗೆ ಹೊರೆ­ಯಾಗು­ವಷ್ಟು ಕೆಲಸಗಳಾದರೂ ಏಕೆ?

ಇಷ್ಟೆಲ್ಲ ಕೆಲಸಗಳನ್ನು ನಿಭಾಯಿಸುವ ಆಪರೇಟರ್‌ಗಳ ಸಂಬಳದ್ದಂತೂ  ದೊಡ್ಡ  ಕಥೆಯೇ ­­ಆಗುತ್ತದೆ. ಕನಿಷ್ಠ ವೇತನ ಜಾರಿಗೆ ಬಂದ ನಂತ­ರವೂ ಇನ್ನೂ ಎಷ್ಟೋ ಪಂಚಾಯಿತಿ­ಗಳಲ್ಲಿ ತೀರಾ ಕಡಿಮೆ, ಅಂದರೆ ತಿಂಗಳಿಗೆ ರೂ 7000 ಕ್ಕಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಎಷ್ಟೋ  ಪಂಚಾಯಿತಿಗಳಲ್ಲಿ 5- 6 ತಿಂಗಳಿಗೊಮ್ಮೆ ವೇತನ ಪಡೆಯುವಂತಾಗಿದೆ. ಯಾವ ಪಂಚಾ­­ಯಿತಿಯೂ ಸರಿಯಾಗಿ ವೇತನ ನೀಡುತ್ತಿಲ್ಲ.

ಕಂಪ್ಯೂಟರ್ ಆಪರೇಟರ್‌ಗಳ ಹುದ್ದೆಯ ಅನಿಶ್ಚಿತತೆ, ಸಂಬಳದ ಸಂಕಷ್ಟಗಳಿಗೆ ಪ್ರಸಕ್ತ ಪಂಜಾಯತ್‌ ರಾಜ್ ನಿಯಮಗಳು ಹಾಗೂ  ಅವುಗಳಿಗೆ ಅನುಗುಣ­­ವಾಗಿ ಸರ್ಕಾರ ಹೊರಡಿಸಿ­ರುವ ಆದೇಶಗಳೇ ತೊಡಕಾಗಿರುವಂತಿವೆ. ಸರ್ಕಾರದ ಆದೇಶದ ಪ್ರಕಾರ ಗುಮಾಸ್ತ/ ಬೆರಳಚ್ಚುಗಾರ ಹುದ್ದೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆಯನ್ನು ಅವರು ಮುಂದಿನ ನೇಮಕಾತಿ/ ನಿವೃತ್ತಿ ಹಾಗೂ ಇತರ ಕಾರಣಗಳಿಂದ ಸೇವೆಯಿಂದ ಮುಕ್ತವಾಗು­ವ­­­ವರೆಗೂ ಮುಂದುವರಿಸಬೇಕು.

ನಂತರ ಈ ಹುದ್ದೆಗೆ ಪ್ರಸ್ತುತ ಗ್ರಾಮ ಪಂಚಾಯಿತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕನಿಷ್ಠ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವವರಿಗೆ ಮೊದಲ ಆದ್ಯತೆ ನೀಡಿ ಗ್ರಾಮ ಪಂಚಾಯಿತಿಯು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕು. ಈ ಬಗ್ಗೆ ತಾಲ್ಲೂಕು ಪಂಚಾ­ಯಿತಿ­ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾ­ರಿಗೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆದು­ಕೊಳ್ಳಬೇಕು. ಆ ನಂತರವೇ ಗ್ರಾಮ ಪಂಚಾ­ಯಿತಿಯು ಅವರು ಕರ್ತವ್ಯಕ್ಕೆ ಹಾಜರಾಗಲು ಆದೇಶ ಹೊರಡಿಸಬೇಕು.

ಕರ್ನಾಟಕ ಪಂಚಾಯತ್‌ ರಾಜ್‌ ಅಧಿ­ನಿಯಮ 1993ರ ಪ್ರಕರಣ 112ರ ಪ್ರಕಾರ, ಗ್ರಾಮ ಪಂಚಾಯಿತಿ ಸಿಬ್ಬಂದಿಯ ಮಾದರಿ ಮತ್ತು ನೇಮಕಾತಿ ವಿಧಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಟಿಯಾಗಿರುವುದಿಲ್ಲ. ಪ್ರಸ್ತುತ ಗ್ರಾಮ ಪಂಚಾಯಿತಿಗಳು ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕ ಮಾಡಿ­ಕೊಂಡಿ­ರುವಂಥ ಪ್ರಕರಣಗಳು ಅಸಿಂಧುವಾ­ಗುತ್ತವೆ. ಈ ರೀತಿ ನೇಮಕಗೊಂಡಿದ್ದವರ ಹಿಂದಿನ ಸೇವಾ ಅವಧಿಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸೇವಾ ಅವಧಿಯ ಜೇಷ್ಠತೆಗೆ ಪರಿಗಣಿಸಲು ಅವಕಾಶ ಇರುವುದಿಲ್ಲ.

ಸಾಮಾನ್ಯವಾಗಿ ಎಲ್ಲ ಪಂಚಾಯಿತಿಗಳಲ್ಲಿ ಈಗಾಗಲೇ ಗುಮಾಸ್ತರೂ ಇದ್ದು ಕಂಪ್ಯೂಟರ್ ಆಪರೇಟರ್‌ಗಳೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಹೇಳಿಕೆಯ ಪ್ರಕಾರ, ಗುಮಾಸ್ತ ಮುಂದಿನ ನೇಮಕಾತಿ/ ನಿವೃತ್ತಿಯಾಗದೇ ಹೋದರೆ ಡಾಟಾ ಎಂಟ್ರಿ ಆಪರೇಟರ್‌ಗಳ ನೇಮ­ಕಾತಿ ಆಗುವುದಿಲ್ಲ ಎಂದು ಅರ್ಥ. ಹಾಗಾದರೆ ಈ ಪಂಚಾಯಿತಿಯ ಕೆಲಸವನ್ನೇ ನಂಬಿಕೊಂಡು ಕಳೆದ 7- 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವ ಆಪರೇಟರ್‌ಗಳ ಗತಿ ಏನು?

ಈ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಡಾಟಾ ಎಂಟ್ರಿ ಆಪರೇಟರುಗಳು ಅನೇಕ ಸಲ ಧರಣಿ, ಸತ್ಯಾಗ್ರಹ ನಡೆಸಿದರೂ ಪ್ರಯೋಜನವಾಗಿಲ್ಲ.  ಇನ್ನಾದರೂ ಸರ್ಕಾರ ಎಚ್ಚೆತ್ತು ಅವರ ಸೇವೆಯ ಅಗತ್ಯವನ್ನು ಮನಗಂಡು, ನೇಮಕ ಮಾಡಿಕೊ­ಳ್ಳಬೇಕು. ಆ ಮೂಲಕ ಅವರಿಗೆ ವೃತ್ತಿಭದ್ರತೆ­ಯನ್ನು ಒದಗಿಸಬೇಕು. ಹಾಗಾದಲ್ಲಿ ಮಾತ್ರ ಈ ಆಪರೇಟರುಗಳು ಹೆಚ್ಚಿನ ಉತ್ಸಾಹ­ದಿಂದ, ಕರ್ತವ್ಯ ಪ್ರಜ್ಞೆಯಿಂದ ಸರ್ಕಾರದ ಯೋಜನೆ­ಗಳಲ್ಲಿ ತೊಡಗಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT