ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ರೆಡ್ಡೀಸ್‌ ಲ್ಯಾಬ್‌......

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ನ ಡಾ. ಅಂಜಿ ರೆಡ್ಡಿ 1984ರಲ್ಲಿ ಹುಟ್ಟು ಹಾಕಿದ ಡಾ. ರೆಡ್ಡೀಸ್‌ ಲ್ಯಾಬ್‌ ದೇಶದ ಎರಡನೇ ದೊಡ್ಡ ಔಷಧ ಕಂಪೆನಿಯಾಗಿ ಬೆಳೆದಿದೆ. ಕಳೆದ ವರ್ಷ ₨15,360 ಕೋಟಿ ವರಮಾನ ಗಳಿಸಿದೆ. ಅಮೆರಿಕ, ರಷ್ಯಾ, ಬ್ರಿಟನ್‌ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಭೌಗೋಳಿಕವಾಗಿ ನೆಲೆ ಮತ್ತು ಸಾಮ್ರಾಜ್ಯ ವಿಸ್ತರಿಸಿದ ಮೊದಲ ಭಾರತದ ಕಂಪೆನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕ್ಯಾನ್ಸರ್‌, ಮಧುಮೇಹ, ಹೃದಯ ರಕ್ತನಾಳ ಸೋಂಕು ತಡೆ, ಚರ್ಮವ್ಯಾಧಿ, ನರಸಂಬಂಧಿ ಕಾಯಿಲೆಗೆ ಔಷಧ ತಯಾರಿಸುವ ಪ್ರಮುಖ ಕಂಪೆನಿಯಾಗಿ ಬೆಳದಿದೆ. ಇದರೊಂದಿಗೆ 2001ರಲ್ಲಿ ‘ಫ್ಲೂವೋಕ್ಸೇಟಿನ್’ ಎಂಬ ಜೆನರಿಕ್‌ ಔಷಧ ಬಿಡುಗಡೆ ಮೂಲಕ ಈ  ಔಷಧ ಕ್ಷೇತ್ರ ಪ್ರವೇಶಿಸಿದ ಭಾರತದ ಮೊದಲ ಕಂಪೆನಿ.

ನ್ಯೂಯಾರ್ಕ್‌ ಷೇರುಪೇಟೆ ಪ್ರವೇಶಿಸಿದ ಮೊದಲ ಏಷ್ಯಾ-ಪೆಸಿಫಿಕ್ ಔಷಧ ಕಂಪೆನಿ ಎಂಬ ದಾಖಲೆ ಬರೆದಿದೆ. ಸಂಸ್ಥೆಯ ಬೆಳವಣಿಗೆ ಜತೆ ದಶಕಗಳಿಂದ ಹೆಜ್ಜೆ ಹಾಕುತ್ತಿರುವ ಡಾ. ರೆಡ್ಡೀಸ್‌ ಲ್ಯಾಬ್ ಸಿಇಒ ಹಾಗೂ ಉಪಾಧ್ಯಕ್ಷ ಡಾ.  ಜಿ.ವಿ.ಪ್ರಸಾದ್‌ ‘ಪ್ರಜಾವಾಣಿ’ ಜತೆ ಮಾತಿಗೆ ಸಿಕ್ಕರು.

* ಡಾ. ರೆಡ್ಡೀಸ್ ಲ್ಯಾಬ್‌ ಸಂಸ್ಥೆಯ ಧ್ಯೇಯೋದ್ದೇಶಗಳೇನು?
ಪ್ರಸಾದ್‌:
ಉತ್ತಮ ಗುಣಮಟ್ಟದ ದುಬಾರಿ ಔಷಧಿಗಳನ್ನು ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ನೀಡಬೇಕು ಎನ್ನುವುದು ನಮ್ಮ ಕಂಪೆನಿಯ ಮುಖ್ಯಗುರಿ. ಆ ಧ್ಯೇಯೋದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ದಿಶೆಯಲ್ಲಿ ಅನುಸಂಧಾನ ಮಾಡಿ ನೂತನ ಮತ್ತು ಸಂಕೀರ್ಣ ಔಷಧಗಳನ್ನು ನೀಡಬೇಕು ಎನ್ನುವ ವಾಗ್ದಾನಕ್ಕೆ ನಾವು ಬದ್ಧರಾಗಿದ್ದೇವೆ.

* ಇತ್ತೀಚೆಗೆ ಜೆನರಿಕ್‌ ಔಷಧ ತಯಾರಿಕೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದೀರಾ?
ಹೌದು,  ಬ್ರಾಂಡೆಡ್‌ ಔಷಧಗಳಿಗಿಂತ ಜೆನರಿಕ್‌ ಔಷಧಗಳಿಗೆ ವಿಶ್ವದಾದ್ಯಂತ ಭಾರಿ ಬೇಡಿಕೆ ಮತ್ತು ಮಾರುಕಟ್ಟೆ ಇರುವ ಕಾರಣ ಈ ಔಷಧಗಳ ತಯಾರಿಕೆಯತ್ತ ಗಮನ ಕೇಂದ್ರೀಕರಿಸಿ ದ್ದೇವೆ. ಚರ್ಮರೋಗ, ನರರೋಗ, ಹೃದಯ, ರಕ್ತ ನಾಳ ಸೋಂಕು ಹಾಗೂ ಕ್ಯಾನ್ಸರ್‌ ರೋಗದ ಔಷಧ ಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಈ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ವೆಚ್ಚದಾಯಕ. ಹೊಸ ಔಷಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಅಪಾರ ಹಣ ವಿನಿಯೋಗಿಸುತ್ತಿದ್ದೇವೆ. ಭಾರತ ಮತ್ತು ಅಮೆರಿಕದಲ್ಲಿ ನಿರಂತರವಾಗಿ ಈ ಬಗೆಯ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಹೊಸ ತಲೆಮಾರಿನ ಔಷಧಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದ್ದು, ಪರವಾನಗಿಗಾಗಿ  ವಿವಿಧ ದೇಶಗಳಲ್ಲಿ ಕಾಯುತ್ತಿವೆ.

* ಮಧುಮೇಹದ ಔಷಧ ‘ಬಲಗ್ಲಿಟಜೋನ್’ ತಯಾರಿಕೆ ಎಲ್ಲಿಗೆ ಬಂತು?
2010ರಲ್ಲಿ ಮಧುಮೇಹ ಔಷದಿ ‘ಬಲಗ್ಲಿಟಜೋನ್’ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಆದರೆ, ಸದ್ಯ ನಾವು ಮಧುಮೇಹ ಔಷಧ ತಯಾರಿಕೆಯಿಂದ  ಹಿಂದೆ ಸರಿದಿದ್ದೇವೆ. ಚರ್ಮ ರೋಗಕ್ಕೆ ಔಷಧ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದೇವೆ.

* ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮಹತ್ವಾಕಾಂಕ್ಷೆಯ ‘ಒಬಾಮ ಕೇರ್‌’ ಯೋಜನೆಯಿಂದ ನಿಮ್ಮ ಮಾರುಕಟ್ಟೆ ಮೇಲೆ ಪರಿಣಾಮವಾಗಲಿದೆಯೇ? ಭಾರತದಲ್ಲಿ ನಿಮ್ಮ ವಹಿವಾಟು ಹೇಗಿದೆ?
- ಭಾರತದಲ್ಲಿ ನಮ್ಮದು ಎರಡನೇ ದೊಡ್ಡ ಕಂಪೆನಿ. ಇಲ್ಲಿನ ಮಾರುಕಟ್ಟೆಯೂ ಉತ್ತಮವಾ ಗಿದೆ. ಭಾರಿ ಪ್ರಮಾಣದ ಬೆಳವಣಿಗೆಯ ಯುಗ ಮುಕ್ತಾಯವಾಗಿದೆ. ನಿಧಾನಗತಿಯ ಸುಸ್ಥಿರ ಮಾರು ಕಟ್ಟೆಗೆ ತೊಂದರೆ ಇಲ್ಲ. ನಾವು ₨30 ಸಾವಿರ ಕೋಟಿಗಳಷ್ಟು ವಹಿವಾಟು ನಡೆಸುತ್ತಿದ್ದೇವೆ.
ವೈದ್ಯಕೀಯ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬದಲಾವಣೆ ಹೊಂದುತ್ತಿದ್ದು, ಅದಕ್ಕೆ ಅನುಗುಣವಾಗಿ ಔಷಧ ತಯಾರಿಕೆಯ ಮಾರುಕಟ್ಟೆ ಕೂಡಾ ವಿಸ್ತಾರವಾಗಿದೆ. ಪೈಪೋಟಿ, ಗುಣಮಟ್ಟ ಹೆಚ್ಚಿದೆ.

* ಅಮೆರಿಕದಲ್ಲಿಯ ವಾತಾವರಣ ಹೇಗಿದೆ?
ಅಮೆರಿಕದಲ್ಲಿ ತುಂಬಾ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದೆ. ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಯ  ಅಧಿಕಾರಿಗಳ ಹದ್ದಿನ ಕಣ್ಣು ಸದಾ ನಿಗಾ ಇಟ್ಟಿರುತ್ತದೆ. ಅವರು ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲಿಯ ಅಧಿಕಾರಿಗಳು ಕೆಲಸದ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಿನಿಂದ ನಡೆದುಕೊಳ್ಳುತ್ತಾರೆ.

* ಭಾರತದಲ್ಲಿ ಬೈಒಟೆಕ್‌ ಜೆನರಿಕ್‌ ಔಷಧಿಗಳ ಮಾರುಕಟ್ಟೆ ಭವಿಷ್ಯಹೇಗಿದೆ?
ಮುಂದಿನ ದಿನಗಳಲ್ಲಿ ಭಾರತದಲ್ಲಿ ಬೈಒಟೆಕ್‌ ಜೆನರಿಕ್‌ ಔಷಧಿಗಳಿಗೆ ಖಂಡಿತ ಒಳ್ಳೆಯ ಮಾರುಕಟ್ಟೆ ಇದೆ. ಆದರೆ, ಸಮಯ ಹಿಡಿಯುತ್ತದೆ. ಈ ಕ್ಷೇತ್ರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ.

ರೆಡ್ಡೀಸ್‌ ಲ್ಯಾಬ್ ಅಲ್ಲದೇ ವೋಕಾರ್ಟ್‌, ಬಯೋಕಾನ್‌ ಉತ್ತಮ ವಹಿವಾಟು ನಡೆಸುತ್ತಿವೆ. ಗುಣಮಟ್ಟದ ಹಾಗೂ ಹೊಸ ಔಷಧಗಳ ನೀಡಲು ಪೈಪೋಟಿ ತೀವ್ರವಾಗಿದೆ.  ‌

ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಪೈಪೋಟಿ ಹೆಚ್ಚಿದೆ. ಅದರಂತೆ ಸವಾಲುಗಳೂ ಕೂಡ. ಬದಲಾವಣೆಗೆ ಹೊಂದಿಕೊಂಡು ಹೆಜ್ಜೆ ಹಾಕಿದರೆ ಮಾತ್ರ ಭವಿಷ್ಯವಿದೆ. ಸವಾಲು, ಪೈಪೋಟಿ ಎದುರಿಸುವ ನಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಮ್ಮ ಅಸ್ತಿತ್ವ ನಿಂತಿದೆ.

ರಷ್ಯಾ, ಫ್ರಾನ್ಸ್‌ ಮಾರುಕಟ್ಟೆಗಳಲ್ಲಿ ನಾವು ಸಮಸ್ಯೆ ಎದುರಿಸಿದ್ದೇವೆ. ಅಮೆರಿಕ, ಚೀನಾ ಹಾಗೂ ಭಾರತದ ಮಾರುಕಟ್ಟೆಗಳಲ್ಲಿ ಆಶಾದಾಯಕ ಬೆಳವಣಿಗೆ ಕಂಡಿದ್ದೇವೆ.  

* ಭಾರತದಲ್ಲಿ ನಿಮ್ಮ ಉದ್ಯಮದಲ್ಲಿನ ಉದ್ಯೋಗಕ್ಕೆ ಅಗತ್ಯವಾದ ವೃತ್ತಿಪರ ಪದವೀಧರರ ಕೊರತೆ ಇದೆಯಾ?
ಅಮೆರಿಕ ಹಾಗೂ ಭಾರತದಲ್ಲಿ ಒಳ್ಳೆಯ ಅಭ್ಯರ್ಥಿಗಳು ಉದ್ಯಮವನ್ನು ಪ್ರವೇಶಿಸುತ್ತಿದ್ದಾರೆ. ವೃತ್ತಿಪರತೆಗೆ ಕೊರತೆ ಇಲ್ಲ.
ಬಿ.ಎಸ್‌ಸಿ, ಎಂ.ಎಸ್‌ಸಿ, ಬಿ ಫಾರ್ಮ್, ಎಂ ಫಾರ್ಮ್ ಮುಗಿಸಿದ ಸಾಕಷ್ಟು ಅಭ್ಯರ್ಥಿಗಳು ಭಾರತದಲ್ಲಿ ನಮಗೆ ದೊರೆಯುತ್ತಾರೆ. ಅವರಿಗೆ ನಮ್ಮಲ್ಲಿ ಒಳ್ಳೆಯ ಉದ್ಯೋಗಾವಕಾಶಗಳೂ ಕಾಯ್ದುಕೊಂಡಿರುತ್ತವೆ.

* ಪಾಕಿಸ್ತಾನದ ಔಷಧ ಮಾರುಕಟ್ಟೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಿಮಗೊಂದು ವಿಷಯ ಗೊತ್ತೆ? ಪಾಕಿಸ್ತಾನದಲ್ಲಿ ಭಾರತದ ಯಾವುದೇ ಉತ್ಪಾದನೆಯಾಗಲೀ ಅಲ್ಲಿಯ ಜನರು ಅದನ್ನು ಕೊಂಡುಕೊಳ್ಳುತ್ತಾರೆ. ಭಾರತದ ವಸ್ತುಗಳ ಬಗ್ಗೆ ಅವರಿಗೆ ಅಷ್ಟರಮಟ್ಟಿಗೆ  ವ್ಯಾಮೋಹ ಇದೆ.

ಭಾರತ ಹಾಗೂ ಇನ್ನಿತರ ರಾಷ್ಟ್ರಗಳಿಗೆ ಹೋಲಿಸಿದರೆ ಪಾಕಿಸ್ತಾನ ಅಂಥ ದೊಡ್ಡ ಮಾರುಕಟ್ಟೆ ಏನಲ್ಲ. ಅಲ್ಲಿ ಭಾರತದ ಶೇ 10ರಷ್ಟು ವಹಿವಾಟು ಮಾತ್ರ ನಡೆಯುತ್ತದೆ. ಆದರೂ, ಪರವಾಗಿಲ್ಲ. ನಮ್ಮ ಔಷಧ ಉತ್ಪನ್ನಗಳಿಗೆ ಅಲ್ಲಿ ಉತ್ತಮ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT