ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ

ಆರುಷಿ - ಹೇಮರಾಜ್ ಕೊಲೆ ಪ್ರಕರಣ
Last Updated 26 ನವೆಂಬರ್ 2013, 11:46 IST
ಅಕ್ಷರ ಗಾತ್ರ

ಗಾಜಿಯಾಬಾದ್ (ಐಎಎನ್‌ಎಸ್): ಆರುಷಿ - ಹೇಮರಾಜ್ ಅವಳಿ ಕೊಲೆ ಪ್ರಕರಣದಲ್ಲಿ ಆರುಷಿ ತಂದೆ-ತಾಯಿ ರಾಜೇಶ್ ಮತ್ತು ನೂಪುರ್ ತಲ್ವಾರ್ ತಪ್ಪಿತಸ್ಥರೆಂದು ಸೋಮವಾರ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿಕ್ಷೆಗೆ ಸಂಬಂಧಿಸಿದಂತೆ ವಾದ ಪ್ರತಿವಾದ ಪೂರ್ಣಗೊಂಡ ನಂತರ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು.

ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ತಲ್ವಾರ್ ದಂಪತಿ ಶಿಕ್ಷೆಯ ಪ್ರಮಾಣ ತಿಳಿಯುತ್ತಲೇ ತಲ್ಲಣಗೊಂಡಂತೆ ಕಂಡುಬಂದರು. ತಕ್ಷಣವೇ ಅವರನ್ನು ಮರಳಿ ದಸ್ನಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತಲ್ವಾರ್ ದಂಪತಿ ಪರ ವಕೀಲರು ನ್ಯಾಯಾಲಯದ ಈ ತೀರ್ಪನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

ಪ್ರಕರಣದ ವಿವರ: ನೊಯ್ಡಾದಲ್ಲಿರುವ ತಲ್ವಾರ್‌ ದಂಪತಿ ಮನೆಯಲ್ಲಿ 2008ರ ಮೇ 15ರ ಮಧ್ಯರಾತ್ರಿ  ಆರುಷಿ ಮತ್ತು ಹೇಮರಾಜ್‌ ಕೊಲೆಯಾಗಿದ್ದರು.

‘ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ತಲ್ವಾರ್‌ ದಂಪತಿ ತಪ್ಪಿತಸ್ಥರು’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಶ್ಯಾಮ್‌ ಲಾಲ್‌ ಹೇಳಿದರು.

ಘಟನೆ ಕುರಿತಂತೆ ನೊಯ್ಡಾ ಪೊಲೀಸ್‌ ಠಾಣೆಗೆ ಸುಳ್ಳು ಮಾಹಿತಿ ನೀಡಿದ ಆರುಷಿ ತಂದೆ ರಾಜೇಶ್‌ ತಲ್ವಾರ್‌ ಅವರನ್ನು ಐಪಿಸಿ ಸೆಕ್ಷನ್‌ 203ರ ಅಡಿ ತಪ್ಪಿ­ತಸ್ಥ­ರನ್ನಾಗಿ ಪರಿಗಣಿಸಲಾಗಿದೆ ಎಂದೂ ಹೇಳಿದರು.

ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ಆರುಷಿ, 45 ವರ್ಷದ ಹೇಮರಾಜ್‌ ಜೊತೆ ದೈಹಿಕ ಸಂಬಂಧ ಹೊಂದಿದ್ದ ಶಂಕೆಯ ಮೇಲೆ ಆಕೆಯ ಪೋಷಕರೇ ಕುಟುಂಬದ ಗೌರವ ಉಳಿಸಿಕೊಳ್ಳಲು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು.

ಪೋಷಕರೇ ಆರುಷಿಯನ್ನು ಹತ್ಯೆ ಮಾಡಿದ್ದಾರೆ ಎಂದು ಅಂದಿನ ನೊಯ್ಡಾ ಪೊಲೀಸ್‌ ಮಹಾನಿರೀಕ್ಷಕ (ಐಜಿಪಿ) ಗುರ್‌ದರ್ಶನ್‌ ಸಿಂಗ್‌ ಆರೋಪಿಸಿದ ಬೆನ್ನಲ್ಲೇ, ಪೊಲೀಸರು ರಾಜೇಶ್‌ ತಲ್ವಾರ್‌ ಅವರನ್ನು ವಶಕ್ಕೆ ತೆಗೆದು­ಕೊಂಡಿದ್ದರು.
ಬಳಿಕ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಯಿತು.

ರಾಜೇಶ್‌ ತಲ್ವಾರ್‌ ಜಾಮೀನಿನ ಮೇಲೆ ಹೊರಬಂದಿದ್ದರು ಪ್ರಕರಣದಲ್ಲಿ ತಲ್ವಾರ್‌ ದಂಪತಿ ನಿರ್ದೋಷಿ­ಯಾಗಿದ್ದು, ಮನೆಗೆಲಸದ ಸಹಾಯಕರಾಗಿದ್ದ ಕೃಷ್ಣ, ರಾಜಕುಮಾರ್‌ ಮತ್ತು ವಿಜಯ್‌ ಮೇಲೆ ಶಂಕೆಯಿದೆ ಎಂದು ಆರಂಭದಲ್ಲಿ ಸಿಬಿಐ  ತಿಳಿಸಿತ್ತು. ನಿಗದಿತ ಮೂರು ತಿಂಗಳಲ್ಲಿ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ, ಆರೋಪಿಗಳು ಜಾಮೀನಿನ ಮೇಲೆ ಹೊರಬರಲು ಸಾಧ್ಯವಾಯಿತು.

‘ಕೊಲೆಯಲ್ಲಿ ಮೂವರು ಮನೆಗೆಲಸ­ದವರ ಪಾತ್ರವಿಲ್ಲ. ಆರಂಭದಿಂದ ತನಿಖೆ ಪುನರಾರಂಭಿಸಲು ಹೊಸ ತಂಡ­ವೊಂದನ್ನು ರಚಿಸಲಾಗಿದೆ’ ಎಂದು ಅಂದಿನ ಸಿಬಿಐ ನಿರ್ದೇಶಕ ಎ.ಪಿ. ಸಿಂಗ್‌ ತಿಳಿಸಿದ್ದರು.

‘ಆರುಷಿ ಕೊಲೆ ಪ್ರಕರಣದಲ್ಲಿ ಪೋಷಕರ ಪಾತ್ರ ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಗಳಿಲ್ಲ’ ಎಂದು  ಸಿಬಿಐ ಪರಿಸಮಾಪ್ತಿ ವರದಿಯಲ್ಲಿ ತಿಳಿಸಿತ್ತು.

ಸಿಬಿಐ ನ್ಯಾಯಾಧೀಶರು ಪರಿಸ­ಮಾಪ್ತಿ ವರದಿ ದಾಖಲಿಸಿಕೊಂಡು, ದಂಪತಿ ವಿರುದ್ಧದ ಕೊಲೆ ಪ್ರಕರಣದ ತನಿಖೆ ಮುಂದುವರಿಸುವಂತೆ ಸೂಚಿಸಿದ್ದರು. ನಂತರ ಸುಮಾರು 15 ತಿಂಗಳ ಕಾಲ ಪ್ರಕರಣದ ವಿಚಾರಣೆ ನಡೆದು ಅಂತಿಮವಾಗಿ ಆದೇಶ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT