ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ನಿರ್ಣಯಗಳ ಸೂಕ್ತ ಅನುಷ್ಠಾನದ ವಿಳಂಬಕ್ಕೆ ಆಕ್ರೋಶ

ಕುಂದಾಪುರ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 20 ಸೆಪ್ಟೆಂಬರ್ 2014, 5:11 IST
ಅಕ್ಷರ ಗಾತ್ರ

ಕುಂದಾಪುರ:  ತಾ.ಪಂ ನಿರ್ಣಯಗಳ ಅನುಷ್ಠಾನದ ವಿಳಂಬಕ್ಕೆ ಆಕ್ರೋಶ. ಅಧಿಕಾರಿಯ ಗೈರು ಹಾಜರಿಯ ಕುರಿತು ಅಸಮಾಧಾನ. ಪಡಿತರ ಚೀಟಿ ವಿತರಣೆಯ ಲೋಪಗಳ ಕುರಿತು ಕಳವಳ. ಬಸವ ವಸತಿ ಯೋಜನೆಯ ಸರಳೀಕರಣಕ್ಕೆ ಆಗ್ರಹ ಹಾಗೂ ಕೊಳೆ ರೋಗದ ಪರಿಹಾರ ವಿತರಣೆಗೆ ಒತ್ತಾಯ ಸೇರಿದಂತೆ ತಾಲ್ಲೂಕಿನ ಹಲವು ಸಮಸ್ಯೆಗಳ ಕುರಿತು ಚರ್ಚೆಗೆ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ವೇದಿಕೆಯಿತು.

ಸಭೆಯ ಪ್ರಾರಂಭದಲ್ಲಿ ವಿಷಯ ಪ್ರಾಸ್ತಾಪಿಸಿದ ಎಸ್‌.ರಾಜು ಪೂಜಾರಿ ಅವರು, ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರ ನಡವಳಿಕೆಗಳ ಕುರಿತು ಈ ಹಿಂದಿನ ಸಭೆಯಲ್ಲಿ ಚರ್ಚೆ ನಡೆದು ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ನಿರ್ಣಯ ಕೈಗೊಂಡಿದ್ದರೂ, ಅದು ಇನ್ನೂ ಜಾರಿಗೆ ಬಂದಿಲ್ಲ. ತಾ.ಪಂ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಅನುಷ್ಠಾನವಾಗದೆ ಕೇವಲ ಚರ್ಚೆಗೆ ಮಾತ್ರ ಸೀಮಿತವಾದರೆ, ಯಾವ ಉದ್ದೇಶಕ್ಕಾಗಿ ಈ ಸಭೆಗೆ ಬರಬೇಕು ಎಂದು ಖಾರವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸ ಸಭೆಯಿಂದ ಹೊರ ನಡೆದರು.

ಸಭೆಯ ಪ್ರಾರಂಭದಲ್ಲಿಯೆ ಈ ಬೆಳವಣಿಗೆ ನಡೆದುದರಿಂದ ವಾತಾವರಣ ಗಲಿಬಿಲಿಗೊಂಡು ಸ್ವಲ್ಪ ಕಾಲ ಸಭೆ ಸ್ಥಗಿತಗೊಂಡ ಬೆಳವಣಿಗೆಗಳು ನಡೆದವು. ಈ ವೇಳೆ ಹೊರ ನಡೆದ ಅವರನ್ನು ಸಮಾಧಾನ ಪಡಿಸಿ ಒಳ ಕರೆತರಲು ಸಹ ಸದಸ್ಯರು ಪ್ರಯತ್ನ ನಡೆಸಿದರಾದರೂ, ಪ್ರಯೋಜನ­ವಾಗಲಿಲ್ಲ. ಬಳಿಕ ಮುಂದುವರೆದ ಸಭೆಯಲ್ಲಿ ಇದೆ ವಿಚಾರದ ಕುರಿತಂತೆ ಮಾತನಾಡಿದ ಹಿರಿಯ ಸದಸ್ಯ ಕೆದೂರು ಸದಾನಂದ ಶೆಟ್ಟಿಯವರು, ಯಡ್ತರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಹಲವು ದೂರಗಳು ಕೇಳಿ ಬಂದಿರುವುದರಿಂದ ಅವರನ್ನು ಈ ಜಿಲ್ಲೆಯಿಂದಲೆ ಹೊರ ಹಾಕುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಬೆಳ್ಳಾಡಿ ಶಂಕರ ಶೆಟ್ಟಿ ಹಾಗೂ ಪ್ರದೀಪ್‌ ಶೆಟ್ಟಿ ಧ್ವನಿಗೂಡಿಸಿದರು.

ವಾರಾಹಿ ಯೋಜನೆಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಲು ವರಾಹಿಯ ಅಧೀಕ್ಷಕ ಎಂಜಿನಿಯರ್‌ ಅವರನ್ನು ತಾ.ಪಂ ಸಾಮಾನ್ಯ ಸಭೆಗೆ ಹಾಜರಾಗುವಂತೆ ಕಳೆದ ಒಂದೂವರೆ ವರ್ಷದಿಂದ ಬರಲು ಕರೆ ಕಳುಹಿಸುತ್ತಿದ್ದರೂ, ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಈ ರೀತಿ ನಿರಂತರವಾಗಿ ಗೈರು ಹಾಜರಾಗುವ ಮೂಲಕ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನೆ ಧಿಕ್ಕರಿಸುತ್ತಿರುವವರ ವಿರುದ್ಧ, ಸೂಕ್ತ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಬೇಕು ಹಾಗೂ ಮುಂದಿನ ತಾ.ಪಂ ಸಭೆಯನ್ನು ವರಾಹಿ ಯೋಜನಾ ಪ್ರದೇಶದಲ್ಲಿ ನಡೆಸುವ ಮೂಲಕ ರಾಜ್ಯದ ಗಮನವನ್ನು ಸೆಳೆಯಬೇಕು ಎಂದು ಸದಸ್ಯರಾದ ಪ್ರದೀಪ್‌ಚಂದ್ರ ಶೆಟ್ಟಿ ಆಗ್ರಹಿಸಿದರು. ಇದಕ್ಕೆ ಸದಾನಂದ ಶೆಟ್ಟಿ ಹಾಗೂ ಇತರರು ಸಹಮತ ವ್ಯಕ್ತಪಡಿಸಿದರು.

ಪಡಿತರ ಚೀಟಿ ವಿತರಣೆ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್‌.ಮಂಜಯ್ಯ ಶೆಟ್ಟಿ, ಮಹೇಂದ್ರ ಪೂಜಾರಿ, ಪ್ರದೀಪ್‌ ಶೆಟ್ಟಿ, ಹೇಮಾವತಿ ಪೂಜಾರಿ, ಸದಾನಂದ ಶೆಟ್ಟಿ, ಪೂರ್ಣಿಮಾ ಪೂಜಾರಿ, ಬೆಳ್ಳಾಡಿ ಶಂಕರ ಶೆಟ್ಟಿ, ಹಾಲಾಡಿ ರಮೇಶ್‌ ಶೆಟ್ಟಿ ಮೊದಲಾದವರು, ‘ಪಡಿತರ ಚೀಟಿಯ ರದ್ದು ಹಾಗೂ ವಿತರಣೆಯ ಕುರಿತು ತಾಲ್ಲೂಕಿನ ಜನರಿಗೆ ಅಸಮರ್ಪಕ ಮಾಹಿತಿ ಇದೆ. ಮೊಬೈಲ್‌ ಇಲ್ಲದ ಕುಟುಂಬಗಳು ಏನು ಮಾಡಬೇಕು? ಮಹಿಳೆಯರು ಪಡಿತರ ಚೀಟಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕಂದಾಯ ಕಚೇರಿಗಳಲ್ಲಿಯೇ ಈ ಕುರಿತು ಗೊಂದಲಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಅವರು ಹೊಸ ಕಾರ್ಡುಗಳ ಪ್ರಿಂಟ್‌ ನೀಡಲು ಸಾಫ್ಟ್‌ವೇರ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ಹೊಸ ಕಾರ್ಡ್‌ಗಳ ನೊಂದಾವಣೆಗೆ ಎಪಿಕ್‌ ಹಾಗೂ ಆಧಾರ್‌ ಕಾರ್ಡ್‌ಗಳು ಬೇಕಿದ್ದು, ನವೀಕರಣಕ್ಕೆ ಎಪಿಕ್‌ ಕಾರ್ಡ್‌ಗಳು ಮಾತ್ರ ಸಾಕಾಗುತ್ತದೆ’ ಎಂದು ಸ್ವಷ್ಟನೆ ನೀಡಿದರಲ್ಲದೆ, 15ನೇ ತಾರೀಕಿನೊಳಗೆ ಎಸ್‌ಎಂಎಸ್‌ ಮೂಲಕ ನೊಂದಾವಣೆ ಮಾಡುವುದರಿಂದ ಆಹಾರ ಹಂಚಿಕೆಗೆ ಅನೂಕೂಲವಾಗುತ್ತದೆ ಎಂದು ತಿಳಿಸಿದರು.

ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ 1200 ಚ.ಅ.ವಿಸ್ತಿರ್ಣದ ಮನೆ ನಿರ್ಮಾಣಕ್ಕೆ ಅವಕಾಶ ನೀಡಿ, ಅದರ ವೆಚ್ಚವನ್ನು 3 ಲಕ್ಷ ಮಿತಿಗೆ ನಿಗದಿ ಪಡಿಸಿರುವುದನ್ನು ಸರಳೀಕೃತಗೊಳಿಸಿ ಯೋಜನೆಯ ಫಲಾನುಭವಿಗಳಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ನವೀನ್ಚಂದ್ರ ಶೆಟ್ಟಿ  ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಕೊಳೆ ರೋಗದ ಕುರಿತು ಪ್ರಾಸ್ತಾಪಿಸಿದ ಹೇಮಾವತಿ ಪೂಜಾರಿ ಅವರು, ಕೃಷಿಕರು ಈ ಕುರಿತು ಯಾರಿಗೆ ದೂರು ನೀಡಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ಬಾರಿ ಕೊಳೆ ರೋಗಕ್ಕಾಗಿ ಅನುದಾನ ಬಂದಿಲ್ಲ. ಕಳೆದ ಬಾರಿ ಬಂದಿದ್ದ 17 ಅರ್ಜಿದಾರರಿಗೆ ಪರಿಹಾರ ನೀಡಲು ಬಾಕಿ ಇದ್ದು, ಅನುದಾನ ನೀಡಲು ಜಿಲ್ಲಾಧಿಕಾರಿಯವರಿಗೆ ಕೋರಿಕೆ ಸಲ್ಲಿಸಲಾಗಿದೆ. ಕೊಳೆ ರೋಗದ ಕುರಿತು ತೋಟಗಾರಿಕಾ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದಾಗ, ಅದಕ್ಕೆ ಪ್ರತಿಸ್ಪಂದಿಸಿದ ಪ್ರದೀಪ್‌ಚಂದ್ರ ಶೆಟ್ಟಿಯವರು ತೋಟಗಾರಿಕಾ ಇಲಾಖೆಯ ಯಾವುದೆ ಅಧಿಕಾರಿಗಳು ಸಭೆಗೆ ಬಾರದೆ ಇದ್ದಲ್ಲಿ ಅವರಿಗೆ ಈ ಸಮಸ್ಯೆಗಳ ಅರಿವಾಗುವುದು ಹೇಗೆ? ಎಂದು ಪ್ರಶ್ನಿಸಿದರು.

ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ನಾಗೇಶ ಬೇಳೂರು, ಸಾಮಾಜಿ ನ್ಯಾಯ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ತಾ.ಪಂ.­ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ತಹಶೀಲ್ದಾರ್‌ ಗಾಯತ್ರಿ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT