ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮುಲ ಬಚ್ಚಿಡಬೇಡಿ; ಬಿಚ್ಚಿಡಿ

ಖಿನ್ನತೆ ಯಾಕೆ?
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಮ್ಮ ಪ್ರಪಂಚದ ಆಗುಹೋಗುಗಳಿಗೆಲ್ಲ ನಮ್ಮನ್ನೇ ಹೊಣೆಯಾಗಿಸಿಕೊಳ್ಳುತ್ತಾ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ನಕಾರಾತ್ಮಕ ಸಂದೇಶಗಳನ್ನೆಲ್ಲ ತಲೆಯಲ್ಲಿ ತುಂಬಿಕೊಳ್ಳುತ್ತಾ, ಬುದ್ಧಿಯನ್ನು– ಭಾವವನ್ನು ಇನ್ನಿಲ್ಲದಂತೆ ಭಾವುಕತೆ ಆಕ್ರಮಿಸಿಕೊಂಡು ಒಂಟಿತನದಿಂದ ಕಂಗಾಲಾಗುವ ಮನಸ್ಸಿಗೆ ಕವಿಯುವ  ಕತ್ತಲೆಯಂಥ ಒಂದು ಮುಸುಕೇ ಖಿನ್ನತೆ.

ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಈ ಗುಹೆಯನ್ನು ಹೊಕ್ಕವರೇ.  ಮನಸ್ಸಿಗೆ ಒಂದು ನಿಯಮವಿದೆ. ಬಿಕ್ಕುವಾಗ, ದಿಕ್ಕೆಟ್ಟಾಗ, ಹತಾಶೆಯಾದಾಗ, ಕೋಪ ಬಂದಾಗ, ತಲ್ಲಣಿಸಿಹೋದಾಗ, ಜರ್ಝರಿತವಾದಾಗ ಅದು  ಮುದುಡಿ ಹೋಗುತ್ತದೆ. ಆದರೆ ಇದು ತಾತ್ಕಾಲಿಕ. ಆಗ ಮತ್ತಾವುದೋ ಅರಿಯದಂಥ ಹೊಸ ಕೋನದಿಂದ ಬೆಳಕಿನ ಆಗಮನವಾಗುತ್ತದೆ. ಮುದುಡಿದ ಮನಸ್ಸಿನ ತಾವರೆ ಅರಳುತ್ತದೆ. ಇದು ಬದುಕಿನ ನಿಯಮ ಸಹ.

ಯಾವುದೇ ನೋವು ಅದೆಷ್ಟೇ ದೀರ್ಘಕಾಲಿಕವಾಗಿದ್ದರೂ ಮಾಗಲೇಬೇಕು. ಹೊಸತನಕ್ಕೆ ತೆರೆದುಕೊಂಡ ಬದುಕಿನ ಪುಟಗಳಲ್ಲಿ ಯಾವ ನೋವೂ ಬಾರದಂತೆ ತಡೆಯವುದು ಹೇಗೆ ಅಸಾಧ್ಯವೋ, ಬರುವ ಖುಷಿಯನ್ನು ಅನುಭವಿಸದೆ ಉಳಿಯುವುದೂ ಅಸಹಜ! ಸರಿ, ಇವೆಲ್ಲ ನೋವನ್ನು ನುಂಗಿ ಅರಗಿಸಿಕೊಂಡು, ಮನಸ್ಸಿನ ಭಾವದುಬ್ಬರಗಳನ್ನು ದಾಟಿ ನಡೆವವರ ಸಕಾರಾತ್ಮಕ ಬದುಕಿನ ನಡೆಗಳಾಯಿತು.

ಹಾಗಿಲ್ಲದೇ ನೋವು, ಹತಾಶೆ, ಖಿನ್ನತೆ ಬದುಕನ್ನೇ ಆಪೋಶನ ತೆಗೆದುಕೊಳ್ಳುತ್ತಾ ಹೋದರೆ ಏನಾಗಬಹುದು? ಅಂತಹ ಕತ್ತಲಿನ ಗುಹೆಗೂ ಒಂದು ಬೆಳಕಿನ ಮಾರ್ಗವಿದೆ ಎಂಬ ಎಚ್ಚರವಿಲ್ಲದೆ, ಖಿನ್ನತೆಯ ಪ್ರಪಾತದಲ್ಲಿ ತಲೆಕೆಳಗಾಗಿ ಬೀಳುವವರು ಹಲವರು.
ಜನಜಂಗುಳಿಯ ಮಧ್ಯೆ ನಿರಂತರ ಒತ್ತಡಗಳಲ್ಲಿ ದುಡಿಯಬೇಕಾದ ಅನಿವಾರ್ಯ ಮನಸ್ಸಿಗೆ ಇರುತ್ತದೆ. ಹೀಗಿರುವಾಗ ತನ್ನದೆಂಬ ಕೆಲವು ನಿಮಿಷಗಳನ್ನೂ ದಿನದಲ್ಲಿ ಎತ್ತಿಟ್ಟುಕೊಳ್ಳಲಾರದ ಅಸಹಾಯಕತೆಯಿಂದ ಅದು ಚಡಪಡಿಸಲಾರಂಭಿಸುತ್ತದೆ.

ಲೋಕದ ಕಣ್ಣಿಗೆ ಇವರು ‘busy bee’ಗಳು. ಅವರನ್ನು ನೋಡಿ ‘ಓ, ಅವರಿಗೇನು ತುಂಬಾ ಚೆನ್ನಾಗಿದ್ದಾರೆ. ಮಂಕುತನ, ಬೇಜಾರು

ಅವರ ಹತ್ತಿರವೂ ಸುಳಿಯದು’ ಎಂದುಕೊಳ್ಳುವುದು ಶುದ್ಧ ತಪ್ಪು ಕಲ್ಪನೆ. ಎಷ್ಟೋ ಬಾರಿ ಇಂಥವರೇ ಖಿನ್ನತೆಯಂಥ ತೀವ್ರತರವಾದ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ. ಇಂಥವರ ಮನಸ್ಸು ಅಚ್ಚರಿಪಡುವಷ್ಟು ನಿಗೂಢವಾಗಿರುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಸಹೃದಯ ಇರಬೇಕಷ್ಟೆ.

ತಮ್ಮ ಸುತ್ತಲಿನ ಜನರಲ್ಲಿ ತಮ್ಮವರು ಯಾರು ಎಂದು ಗುರುತಿಸುವಲ್ಲಿ ಸೋತಾಗ ಮನಸ್ಸು ಕಂಗಾಲಾಗುತ್ತದೆ. ಅಂತಹವರು ನಂಬಿಕೆ ದ್ರೋಹ ಎಸಗಿದರಂತೂ  ಮುಗಿದೇ ಹೋಯಿತು. ‘ಇಷ್ಟೇನಾ ನನಗೆ ಸಿಕ್ಕಿದ್ದು’ ಎನ್ನುವ ಒಂದು ಪ್ರಶ್ನೆ ಮನದಲ್ಲಿ ಮೂಡಿದರೂ ಸಾಕು ನಿಂತ ನೆಲ ಕುಸಿದ ಅನುಭವವಾಗುವುದಕ್ಕೆ. ಮನಸ್ಸಿನೊಳಗೆ ಒಂದರ ಹಿಂದೊಂದು ಪ್ರಶ್ನೆಗಳ ಬಾಣ ಶುರು. ‘ನನಗೆ ಬುದ್ಧಿ ಇಲ್ವ?’ ‘ನನಗೆ ಶಕ್ತಿ ಇಲ್ವ?’ ‘ನಾನೇನು ಮಂಕಾಗಿದೀನ?’ ‘ಏನಾಯ್ತು ನನಗೆ’ ಹೀಗೆಲ್ಲಾ ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ ತಮಗೇ ಅರಿಯದಂತೆ ಸ್ವಯಂ ಮರುಕದ ಕಂದಕದೊಳಗೆ ಬೀಳುತ್ತಾ ಹೋಗುತ್ತಾರೆ.

ತಾವು ಹೀಗೆ ಆಳಕ್ಕೆ ಬೀಳುತ್ತಿರುವುದು ಅರಿವಾಗುತ್ತಿದ್ದರೂ ಕೈಗೆ ಸಿಗುವ ಆಸರೆಯ ಬಿಳಲುಗಳನ್ನು ಹಿಡಿದುಕೊಳ್ಳಲೂ ಆಗದಿರುವಂತಹ ನಿರಾಕರಣೆಯ ಮನೋಭಾವ ಕೆಲವೊಮ್ಮೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರ ಮಾಡಿಬಿಡುತ್ತದೆ. ಈ ಜಾಲ ಯಾರೆಂದರೆ ಯಾರನ್ನೂ ಬಿಟ್ಟಿಲ್ಲ. ಮೊದಲೆಲ್ಲ ಈ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶವೂ ಇರುತ್ತಿರಲಿಲ್ಲ. ‘ಯಾಕೋ ಬೇಸರ’ ಎಂದು ಯಾರಾದರೂ ಹೇಳಿದರೆ, ‘ಅದು ಹಾಗೇ ಸರಿಹೋಗುತ್ತೆ ಬಿಡು’ ಎನ್ನುತ್ತಿದ್ದರು.

ಸ್ವಲ್ಪ ಮಟ್ಟಿಗೆ ಈ ಮಾತು ನಿಜವೂ ಹೌದು. ಕಾಲನ ಓಟದಲ್ಲಿ ಕೆಲವು ಬೇಸರಗಳು ಹೇಳಹೆಸರಿಲ್ಲದಂತೆ ಓಡಿಹೋಗುತ್ತವೆ. ಆದರೆ ತೀವ್ರವಾದ ಮಾನಸಿಕ ಸಮಸ್ಯೆಗಳಿಗೆ ಮಾತ್ರ ಸಾಂತ್ವನದ ಹೆಗಲು, ಕೆಲವೊಮ್ಮೆ ಔಷಧಿಯ ನೆರವು ಬೇಕೇಬೇಕಾಗುತ್ತದೆ. ತಲೆನೋವಿಗೆ, ಮೈಕೈ ನೋವಿಗೆ ಗುಳಿಗೆ ನುಂಗುವಂತೆ ಇದೂ ಸಹ ಎಂಬ ಸಣ್ಣ ತಿಳಿವಳಿಕೆ ಇದ್ದರೂ ಸಾಕು ಮಾನಸಿಕ ಜಾಡ್ಯ ದೂರವಾಗಲು. ಇದು ಸಮಸ್ಯೆಗಳ ನಡುವೆ ನಲುಗಿಹೋದವರ ಕಥೆಯಾದರೆ, ಇನ್ನು ಅಂತರ್ಮುಖಿಗಳು, ಒಂಟಿತನ ಇಷ್ಟಪಡುವವರ ಪಾಡು ಬೇರೆ ರೀತಿಯದು.

ಸುತ್ತಲಿನ ಜಗತ್ತು ಏನೇ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೂ ಇವರ ಏಕಾಂತಕ್ಕೆ ಭಂಗ ಬರುವುದಿಲ್ಲ. ಯಾರ ಗೊಡವೆಯೂ ಇವರಿಗೆ ಬೇಕಿಲ್ಲ, ಇವರ ಬಗ್ಗೆ ಇತರರಿಗೂ ಆಸಕ್ತಿ ಇರುವುದಿಲ್ಲ. ಆದರೂ  ಇಂಥವರಿಗೂ ಕೆಲವೊಮ್ಮೆ ಖಿನ್ನತೆ ಕಾಡುತ್ತದೆ.‌ ಏಕೆಂದರೆ ಅಂತಹವರ ಮನಸ್ಸಿನ ಮತ್ತೊಂದು ನಿಗೂಢ ಪದರ ಅಲ್ಲಿ ಅನಾವರಣ ಆಗುತ್ತಿರುತ್ತದೆ.

ಯಾರನ್ನೂ ಸನಿಹ ಕರೆದುಕೊಳ್ಳದ ಅಂತರ್ಮುಖಿಗಳಿಗೂ ಹತ್ತಿರದ ಒಂದಷ್ಟು ಸಂಬಂಧಗಳು ಇದ್ದೇ ಇರುತ್ತವೆ. ಅಂತಹ ಸಂಬಂಧಗಳಲ್ಲಿ ಯಾವುದೋ ಒಂದು ಜೀವ ಬೆಚ್ಚನೆಯ ಆಪ್ತ ಭಾವವನ್ನು ಇವರಿಗೆ ಉಣಿಸಿರುತ್ತದೆ. ನಂಬಿಕೆಯ ಸಸಿ ಮೊಳೆತು ಅವರಿಗೇ ಅರಿವಿಲ್ಲದಂತೆ ಅದು ಹೆಮ್ಮರವೂ ಆಗಿರುತ್ತದೆ. ಅಷ್ಟರಲ್ಲೇ ಅಪನಂಬಿಕೆಯೋ, ಅಪಾರ್ಥವೋ ಅಥವಾ ಇನ್ಯಾವುದೋ ನಿರ್ದಿಷ್ಟ ಹೆಸರಿನಿಂದ ಕರೆಯಲಾಗದ ಕೀಟವೊಂದು ಮನಸ್ಸಿನ ಮರವನ್ನು ಹೊಕ್ಕು ಕೊರೆಯುವುದಕ್ಕೆ ಶುರು ಮಾಡಿಬಿಡುತ್ತದೆ. ಆಗ ಮನಸ್ಸು ಕುಸಿಯುತ್ತದೆ.

ಇದರಿಂದ ಹೊರಬರುವ ಬಗೆ ತಿಳಿಸುವವರು ಯಾರೂ ಹತ್ತಿರ ಇರುವುದಿಲ್ಲ. ಇನ್ನು ಅವರಂತೂ ತಾವಾಗಿಯೇ ಯಾರ ಹತ್ತಿರಕ್ಕೂ ಹೋಗುವ ಜಾಯಮಾನದವರಲ್ಲ. ಬಳಿಕ ಮನಸ್ಸು ನಿಧಾನವಾಗಿ ಖಿನ್ನತೆಯ ಕೌದಿಯನ್ನು ಹೊದ್ದುಕೊಳ್ಳತೊಡಗುತ್ತದೆ. ಕ್ರಮೇಣ ಅದರಿಂದಾಚೆ ಬರುವ ಇಚ್ಛೆಯನ್ನೂ ತೊರೆಯುತ್ತಾ ಹೋಗುತ್ತದೆ. ಇಲ್ಲಿ ಅತ್ಯಂತ ಅಪಾಯಕಾರಿಯಾದ ಘಟ್ಟವೆಂದರೆ, ಇಂತಹ  ಭಯಾನಕ ಪರಿಸ್ಥಿತಿಯನ್ನೇ ಮನಸ್ಸು ಇಷ್ಟಪಡಲು ಶುರು ಮಾಡಿಬಿಡುವುದು!

‘ಏನೀಗ, ನನಗಿದೇ ಇಷ್ಟ’ ಎನ್ನುವ ಇಂತಹ ಅನಾರೋಗ್ಯಕರ ಮನಃಸ್ಥಿತಿಗೆ ತುರ್ತಾಗಿ ಮದ್ದಿನ ಅವಶ್ಯಕತೆ ಇರುತ್ತದೆ. ಆಪ್ತರು ಯಾರಾದರೂ ಅತ್ಯಂತ ಮುತುವರ್ಜಿ ವಹಿಸಿ ಬಲವಂತವಾಗಿ ಅವರ ಮನಸ್ಸಿಗೆ ಹೊದ್ದ ಕತ್ತಲೆಯ ಕೌದಿಯನ್ನು ಕಿತ್ತೊಗೆದರೆ ಮಾತ್ರ  ಅವರಿಗೆ ತಾವು ಆವರೆಗೆ ಎಂಥ ಅಪಾಯಕಾರಿ ಮನಃಸ್ಥಿತಿಯಲ್ಲಿದ್ದೆವು ಎಂಬ ಅರಿವಾಗುತ್ತದೆ!

ಅದಕ್ಕಾಗಿಯೇ ಬದುಕಿನಲ್ಲಿ ನಮಗೆ ಆಪ್ತರ ಸಖ್ಯ  ಬೇಕು. ಹಾಗೆಂದರೆ, ನಾವು ಗೆದ್ದಾಗಷ್ಟೇ ನಮ್ಮೊಟ್ಟಿಗೆ ಸಂಭ್ರಮಿಸುವವರಲ್ಲ; ಅಕಸ್ಮಾತ್ ನಾವೇನಾದರೂ ಖಿನ್ನತೆಯ ಕಂದಕಕ್ಕೆ ಬಿದ್ದರೂ, ಬಿಳಲಾಗಿ ನಿಂತು ನಮ್ಮನ್ನು ಮೇಲೆತ್ತುವ ಬಾಂಧವ್ಯಗಳು ಬೇಕಾಗುತ್ತವೆ.
‘ಸಂಕಟವನರೆಗೈದು ಸಂತಸವನಿಮ್ಮಡಿಪ ಬಾಂಧವ್ಯ ದೈವಕೃಪೆ ಮಂಕುತಿಮ್ಮ’ ಎನ್ನುವ ಮಾತು ಇಲ್ಲಿ ನನಗೆ ನೆನಪಾಗುತ್ತದೆ.
ಬಿಚ್ಚು ಮನಸ್ಸಿನ, ನಿರಂತರ ವ್ಯಸ್ತವಾದ, ಅಂತರ್ಮುಖಿ  ಭಾವದ, ಕನಸುಗಣ್ಣಿನ, ನಿರ್ಭಾವುಕವಾದ, ಪ್ರಪಂಚದ ಸಮಸ್ಯೆಗಳನ್ನೆಲ್ಲ ಮೈಮೇಲೆ ಹೊದ್ದುಕೊಂಡು ಒದ್ದಾಡುವ... ಹೀಗೆ ನಾನಾ ಬಗೆಯ ಮನಸ್ಸುಗಳಿರುತ್ತವೆ.

ಪ್ರತಿ ಮನಸ್ಸೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ, ವಿಶೇಷ. ಇಂತಹ ಎಲ್ಲ ಮನಸ್ಸುಗಳನ್ನೂ ಖಿನ್ನತೆ, ಕೀಳರಿಮೆ, ಒತ್ತಡ, ಆತಂಕ ಒಂದೇ ರೀತಿ ತಾಕುವುದೇ ಅಥವಾ ಭಾವುಕ ಮನಸ್ಸುಗಳಿಗಷ್ಟೇ ಹೆಚ್ಚು ಸಮಸ್ಯೆ ಕಾಡುವುದೇ ಎಂಬ ಪ್ರಶ್ನೆ ಮೂಡುವುದು ಸಹಜ. ಕೆಲವು ಸಮಸ್ಯೆಗಳು ಕೆಲವರಲ್ಲಿ ಹೆಚ್ಚು ಸ್ಫುಟವಾಗಿ ಕಾಣುತ್ತಾ ಹೋಗುತ್ತವೆ. ಅಂದರೆ, ಭಾವುಕ ಮನಸ್ಸುಗಳು ಈ ಕಗ್ಗಂಟನ್ನು ವ್ಯಕ್ತಪಡಿಸುವಲ್ಲಿ ಗೆಲ್ಲುತ್ತವೆ. ಆದರೆ ಭಾವನೆಗಳು ಬಿಗುವಾಗಿರುವೆಡೆ ಇಂತಹ ಕಗ್ಗಂಟನ್ನು ಗುರುತಿಸುವುದು ಕಷ್ಟ. ಇಷ್ಟೇ ಇವುಗಳ ನಡುವಿನ ವ್ಯತ್ಯಾಸ.

ಹೀಗೆ ಕತ್ತಲ ಗುಹೆಯಲ್ಲಿ ಬೆಳಕಿಗಾಗಿ ತಡಕಾಡುವ ಪ್ರತಿ   ಮನಸ್ಸಿನ ಕಥೆಯೂ ನಿಗೂಢ. ಸಮಸ್ಯೆಯ ಸ್ವರೂಪ, ಭಿನ್ನತೆ, ಆಳ, ವ್ಯಾಪ್ತಿ ನಮ್ಮ ಊಹೆಗೂ ನಿಲುಕದ್ದು. ಆ ಸಮಸ್ಯೆಯನ್ನು ಹತ್ತಿರದಿಂದ ಕಂಡಾಗಷ್ಟೇ ಅದೆಷ್ಟು ಗಾಢವಾಗಿದೆ ಎಂಬುದರ ಅರಿವಾಗುವುದು.
ಇಂತಹ ಸ್ಥಿತಿಯ ನಡುವೆಯೂ ಸಂತಸದ ವಿಷಯವೆಂದರೆ, ಎಲ್ಲ ಸಮಸ್ಯೆಗಳಿಗೂ ಒಂದು ಬೆಳಕಿನ ಕಿಂಡಿ ಇದ್ದೇ ಇರುತ್ತದೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಜೀವಗಳು ಸಮಾಜದ ಎಲ್ಲ ಸ್ತರಗಳಲ್ಲೂ ಇವೆ. ಆದರೆ ಇಲ್ಲಿ ಬೇಕಿರುವುದು ಪ್ರೀತಿಯ ಒಳನೋಟ, ಸಾಂತ್ವನದ ಅಂತಃಸ್ಪರ್ಶ. ಇಷ್ಟು ಸಿಕ್ಕಿದರೆ ಸಾಕು, ಕತ್ತಲ ಗೂಡಿನಲ್ಲಿ ಹಣತೆ ಹತ್ತುತ್ತದೆ.

ನಾಲ್ಕು ಜನ ಮುಕ್ತವಾಗಿ ಈ ಸಮಸ್ಯೆಗಳ ಬಗ್ಗೆ ಚರ್ಚಿಸಿದರೂ ಸಾಕು ಹೊಸತನದ ಗಾಳಿ ಬೀಸತೊಡಗುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳು ‘ನಾನೂ ಈ ಖಿನ್ನತೆಯೆಂಬ ಕತ್ತಲಗುಹೆಯನ್ನು ಹೊಕ್ಕಿ ಬಂದಿದ್ದೇನೆ. ಅಲ್ಲಿಂದ ಹೊರ ಬರಲು ಸಾಧ್ಯ’ ಎನ್ನುವಂತಹ ಭರವಸೆಯ ಮಾತುಗಳನ್ನು ಆಡಿದಾಗ ಅವರ ಕಣ್ಣುಗಳಲ್ಲಿ ಕಾಣುವ ಕತ್ತಲನ್ನು ಗೆದ್ದ ಆತ್ಮವಿಶ್ವಾಸದ ಬೆಳಕು ಸುತ್ತಲಿನ ಕೆಲವರಲ್ಲಾದರೂ ಪ್ರತಿಫಲಿಸಬಹುದು.

ನಾವೂ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಳ್ಳಬೇಕೆಂಬ ಧೈರ್ಯ ಹುಟ್ಟುಹಾಕಬಹುದು. ಇಂತಹ ಸೂಕ್ಷ್ಮ ಸಂವೇದನೆಯನ್ನು ಅರಿತು ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುವವರ ಸಂಖ್ಯೆ ಹೆಚ್ಚುತ್ತಾ ಹೋದರೆ, ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ಅದು ಬಹು ಮುಖ್ಯ ಪಾತ್ರ ವಹಿಸಬಲ್ಲದು.

'ನೋವಿಗೆ ಸಕಾರಾತ್ಮಕ ಚಿಂತನೆಗಳಿಂದ ಶಕ್ತಿ ತುಂಬಿ. ನಮಗಷ್ಟೇ ಅಲ್ಲ, ಹತ್ತಿರದವರು ಯಾರಿಗೇ ಆಗಲಿ ಮಾನಸಿಕ ಸಮಸ್ಯೆಗಳಿದ್ದರೂ ಕೇಳಿಸಿಕೊಳ್ಳುವ ಸಹೃದಯ ನಿಮ್ಮದಾಗಿರಲಿ.

ಮಾನಸಿಕ ಏರುಪೇರು ಪದೇ ಪದೇ ಕಾಡುತ್ತಿದ್ದರೆ, ಅದು ದೀರ್ಘಕಾಲಿಕವಾಗಿದ್ದರೆ ತಕ್ಷಣ ಆತ್ಮೀಯರ ಬಳಿ ಹಂಚಿಕೊಳ್ಳಿ. ಸಾಂತ್ವನದ ಹೆಗಲಿಗೊರಗಿ ಹಗುರಾಗಿ.

ಯಾರನ್ನಾದರೂ ನೋಡಿ ‘ಓ, ಅವರಿಗೇನು ತುಂಬಾ ಚೆನ್ನಾಗಿದ್ದಾರೆ. ಖಿನ್ನತೆ ಅವರ ಹತ್ತಿರವೂ ಸುಳಿಯದು’ ಎಂದುಕೊಳ್ಳುವುದು ಶುದ್ಧ ತಪ್ಪು ಕಲ್ಪನೆ.'

(ಲೇಖಕರು ಮಾನಸಿಕ ಸಲಹಾ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT