ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿ ತಪ್ಪು ನಡೆ: ಮನ ಬಿಚ್ಚಿದ ಪ್ರಣಬ್‌

Last Updated 11 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಹುಶಃ 1975ರ ತುರ್ತುಪರಿಸ್ಥಿತಿ ‘ತಪ್ಪಿಸ­ಬಹು­ದಾಗಿದ್ದ ಘಟನೆ’ ಆಗಿತ್ತು. ಇದಕ್ಕೆ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷ ದೊಡ್ಡ ಬೆಲೆ ತೆರಬೇಕಾಯಿತು ಎಂದು ಪ್ರಣಬ್‌ ಮುಖರ್ಜಿ ನೆನಪು ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯಾನಂತರದ ಭಾರತದ ಇತಿ­ಹಾಸ­ದಲ್ಲಿ ಅತ್ಯಂತ ಪ್ರಕ್ಷುಬ್ಧ ಕಾಲ­ಘಟ್ಟದ ತಮ್ಮ ಚಿಂತನೆಗಳನ್ನು ಮುಖರ್ಜಿ ಅವರು ಪುಸ್ತಕ ರೂಪಕ್ಕಿಳಿಸಿ­ದ್ದಾರೆ. ‘ದ ಡ್ರಮ್ಯಾಟಿಕ್‌ ಡಿಕೇಡ್‌: ದ ಇಂದಿರಾ ಗಾಂಧಿ ಇಯರ್ಸ್‌’ ಎಂಬುದು ಕೃತಿಯ ಹೆಸರು.

ಅಂದು ಇಂದಿರಾ ಗಾಂಧಿ ಸರ್ಕಾರ­ದಲ್ಲಿ ಕಿರಿಯ ಸಚಿವರಾಗಿದ್ದ ಮುಖರ್ಜಿ, ವಿರೋಧ ಪಕ್ಷದತ್ತಲೂ ಚಾಟಿ ಬೀಸಿ­ದ್ದಾರೆ. ಆಗ ಜಯಪ್ರಕಾಶ್‌ ನಾರಾ­ಯಣ್‌ ನೇತೃತ್ವದ ಪ್ರತಿಪಕ್ಷ ‘ಗುರಿ­ರಹಿತ’­ವಾಗಿತ್ತು ಎಂದು ಹೇಳಿದ್ದಾರೆ. 1975ರಲ್ಲಿ ತುರ್ತು ಪರಿಸ್ಥಿತಿ ಹೇರುವುದಕ್ಕೆ ಮೊದಲು, ತುರ್ತು ಪರಿಸ್ಥಿತಿ ಹೇರುವುದಕ್ಕೆ ಸಂವಿಧಾನದಲ್ಲಿ ಇರುವ ಅವಕಾಶಗಳ ಬಗ್ಗೆ ಇಂದಿರಾ ಅವರಿಗೆ ಅರಿವೇ ಇರಲಿಲ್ಲ. ಕಾಂಗ್ರೆಸ್‌ ಮುಖಂಡ, ಆಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ ಶಂಕರ್‌ ರೇ ಅವರೇ ತುರ್ತು ಪರಿಸ್ಥಿತಿ ಹೇರುವ ನಿರ್ಧಾರಕ್ಕೆ ಕಾರಣ ಎಂದು ಮುಖರ್ಜಿ ಹೇಳಿದ್ದಾರೆ.

ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ‘ಅನಾಚಾರ’ಗಳ ಬಗ್ಗೆ ತನಿಖೆ ನಡೆಸಿದ ಶಾ ಆಯೋಗದ ಎದುರು ರೇ ಅವರು ತುರ್ತುಪರಿಸ್ಥಿತಿ ಘೋಷಣೆ­ಯಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಹೇಳಿ ಕೈತೊಳೆದು­ಕೊಂ­ಡರು ಎಂದು ಮುಖರ್ಜಿ ಹೇಳಿದ್ದಾರೆ.
ಗುರುವಾರ 79ನೇ ಹುಟ್ಟುಹಬ್ಬ ಆಚರಿಸಿಕೊಂಡ ಮುಖರ್ಜಿ ಅವರು, ‘ಈ ಪುಸ್ತಕವು ಮೂರು ಕೃತಿಗಳಲ್ಲಿ ಮೊದಲ ಕೃತಿ. ಈ ಪುಸ್ತಕವು 1969­ರಿಂದ 1980ರ ಅವಧಿಯ ಬಗ್ಗೆ ಇದೆ.

1980ರಿಂದ 1998ರ ವರೆಗಿನ ಅವಧಿಯ ಬಗ್ಗೆ ಎರಡನೇ ಪುಸ್ತಕ ಬರೆಯು­ತ್ತೇನೆ. 1998ರಿಂದ ನನ್ನ ಸಕ್ರಿಯ ರಾಜಕೀಯ ಜೀವನ ಕೊನೆ­ಗೊಂಡ 2012ರ ವರೆಗಿನ ಅವಧಿ ಚಿತ್ರಣ­ವನ್ನು ಮೂರನೇ ಪುಸ್ತಕ­ದಲ್ಲಿ ನೀಡುತ್ತೇನೆ’ ಎಂದು ಹೇಳಿದ್ದಾರೆ. ‘ನಾನೂ ಸೇರಿ ಕೇಂದ್ರ ಸಂಪುಟ­ದಲ್ಲಿದ್ದ ಹಲವರಿಗೆ (ನಾನು ಆಗ ಕಿರಿಯ ಸಚಿವ­ನಾಗಿದ್ದೆ) ತುರ್ತು ಪರಿಸ್ಥಿತಿಯ ಗಾಢ ಮತ್ತು ದೂರಗಾಮಿ ಪರಿಣಾಮ­ಗಳ ಬಗ್ಗೆ ಆಗ ಅರಿವು ಇರಲಿಲ್ಲ ಎಂದು ಹೇಳುವುದೇ ಹೆಚ್ಚು ಸೂಕ್ತ’ ಎಂದು ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪುಸ್ತಕದ 321 ಪುಟಗಳಲ್ಲಿ ಬಾಂಗ್ಲಾ­ದೇಶ ವಿಮೋಚನೆ, ಜಯ­ಪ್ರಕಾಶ್‌ ನಾರಾ­ಯಣ ಅವರ ಪ್ರತಿ­ರೋಧ, 1977ರ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಸೋಲು, ಕಾಂಗ್ರೆಸ್‌ ವಿಭ­ಜನೆ, 1980ರಲ್ಲಿ ಅಧಿಕಾರಕ್ಕೆ ಮರ­ಳಿಕೆ ಮುಂತಾದ ಹಲವು ಅಧ್ಯಾಯಗಳಿವೆ. ತುರ್ತು ಪರಿಸ್ಥಿತಿ ಸಾರ್ವ­ಜ­ನಿಕ ಜೀವನ­ದಲ್ಲಿ ಶಿಸ್ತು ತಂದಿತು.

ಅರ್ಥ ವ್ಯವಸ್ಥೆ ಬೆಳವಣಿಗೆ, ಹಣದುಬ್ಬರ ನಿಯಂತ್ರಣ, ಅಭಿವೃದ್ಧಿ ವೆಚ್ಚ ಏರಿಕೆ, ತೆರಿಗೆ ತಪ್ಪಿಸು­ವವರು ಮತ್ತು ಕಳ್ಳ ಸಾಗಣೆ­ದಾರರ ಮೇಲೆ ಕಠಿಣ ಕ್ರಮ ಮುಂತಾದವು ಕೂಡ ತುರ್ತು ಪರಿಸ್ಥಿತಿ­ಯಿಂದ ಸಾಧ್ಯವಾ­ಯಿತು. ಹೀಗಿದ್ದರೂ ತುರ್ತು ಪರಿಸ್ಥಿತಿ ‘ತಡೆಯಬಹುದಾಗಿದ್ದ ಘಟನೆಯೇ ಆಗಿದೆ’ ಎಂದು ಮುಖರ್ಜಿ ಹೇಳಿದ್ದಾರೆ. 1975ರ ಜೂನ್‌ 25ರ ಮಧ್ಯರಾತ್ರಿ ತುರ್ತು ಪರಿಸ್ಥಿತಿ ಘೋಷಣೆಗೂ ಮೊದ­ಲಿನ ಕ್ಷಣಗಳನ್ನು ನೆನಪಿಸಿ­ಕೊಂಡಿ­ರುವ ಮುಖರ್ಜಿ, ರೇ ಅವರ ಸಲಹೆಯ ಆಧಾ­ರ­ದಲ್ಲಿ ಇಂದಿರಾ ಗಾಂಧಿ  ತುರ್ತು ಪರಿ­ಸ್ಥಿತಿ ಘೋಷಿಸಿದರು ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳು ಗುರಿರಹಿತ ಎಂದು ನನಗೆ ಅನಿಸಿದೆ. ಭ್ರಷ್ಟಾಚಾರದ ವಿರುದ್ಧ ನಡೆದ ಚಳವಳಿಯೇ ವಿರೋಧ ಪಕ್ಷವಾಗಿ ರೂಪುಗೊಂಡಿತ್ತು. ಆದರೆ ಈ ಗುಂಪಿನಲ್ಲಿಯೇ ಪ್ರಶ್ನಾರ್ಹ ಪ್ರಾಮಾ­ಣಿಕತೆಯ ಜನರು ಮತ್ತು ಪಕ್ಷಗಳು ಇದ್ದವು
ಪ್ರಣಬ್‌ ಮುಖರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT