ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿಸುವುದು ಹೇಗೆ?

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಆದಾಯ ತೆರಿಗೆ ಪಾವತಿದಾರರು, 2015 –16ರ ಹಣಕಾಸು ವರ್ಷದಲ್ಲಿ ತೆರಿಗೆ ಉಳಿಸಲು ಇನ್ನೂ ಕಾಲಾವಕಾಶ ಇದೆ. ಐ.ಟಿ ರಿಟನ್ಸ್‌ನಲ್ಲಿ ಹಲವಾರು ವಿನಾಯ್ತಿ ಮತ್ತು ಕಡಿತಗಳನ್ನು  ಮರಳಿ ಪಡೆಯಬಹುದಾಗಿದೆ.

ಇದುವರೆಗೆ ಉದ್ಯೋಗ ದಾತರಿಗೆ ಆದಾಯ ತೆರಿಗೆಗೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದ್ದರೂ ಅಥವಾ ಸಲ್ಲಿಸಿರದಿದ್ದರೂ ತೆರಿಗೆಯಲ್ಲಿ ಉಳಿ ತಾಯ ಮಾಡಲು ಸಾಧ್ಯವಿದೆ. ಪ್ರವಾಸ ಭತ್ಯೆ (ಎಲ್‌ಟಿಎ) ಮತ್ತು ವೈದ್ಯಕೀಯ ಬಿಲ್‌ಗಳ  ಮರುಪಾವತಿ ಹೊರತುಪಡಿಸಿ ವೇತನದಲ್ಲಿ ಕಡಿತವಾಗುವ ಮತ್ತು ವಿನಾಯಿತಿ  ವಾಪಸ್‌ ಪಡೆಯಬಹುದು. ಮಾರ್ಚ್‌ 31ರ ಒಳಗೆ ತೆರಿಗೆಯಲ್ಲಿ ಹೇಗೆ ಉಳಿಸಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಟಿಪ್ಪಣಿಗಳಿವೆ.

ಇಎಲ್‌ಎಸ್‌ಎಸ್‌ ನಿಧಿ ಖರೀದಿ : ಮ್ಯುಚುವಲ್‌ ಫಂಡ್‌ಗಳಲ್ಲಿನ ಷೇರುಗಳಿಗೆ ಸಂಬಂಧಿಸಿದ ಉಳಿತಾಯ ಯೋಜನೆಗಳಲ್ಲಿ (Equity Linked Saving Scheme– ELSS) ಮೂರು ವರ್ಷಗಳ ಅವಧಿಗೆ ಹಣ ಹೂಡಬಹುದಾಗಿದೆ. ಈ ಅವಧಿ ಒಳಗೆ ಹಣ ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ.
‘ಇಎಲ್‌ಎಸ್ಎಸ್‌’ನಿಂದ ದೊರೆಯುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಇದು ಒಂದು ಬಾರಿ ಹೂಡಿಕೆಗೆ ಅವಕಾಶ ನೀಡುತ್ತದೆ. ಮೂರು ವರ್ಷಗಳ ನಂತರವೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ವಾಪಸ್‌ ಹಣ ಗಳಿಕೆಗೆ ಅವಕಾಶವಿದೆ. 80ಸಿ ಸೆಕ್ಷನ್‌ ಅನ್ವಯ, ಉಳಿತಾಯವು ₹ 1.50 ಲಕ್ಷ ತಲುಪಿರದಿದ್ದರೆ ಉತ್ತಮ 

ಎನ್‌ಪಿಎಸ್‌ : ನಿಮ್ಮ ಆದಾಯವು ₹ 10ಲಕ್ಷಕ್ಕಿಂತ ಹೆಚ್ಚಿದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆನಲ್ಲಿ  (ಎನ್‌ಪಿಎಸ್‌) ಹೂಡಿಕೆ ಮಾಡುವ ಬಗ್ಗೆ ಯೋಚಿಸ ಬಹುದು. ಹೊಸ ಸೆಕ್ಷನ್‌ 80ಸಿಸಿಡಿ (1ಬಿ) ಅನ್ವಯ ₹ 50 ಸಾವಿರದವರೆಗೆ  ಹೆಚ್ಚುವರಿ ಕಡಿತ ಪಡೆಯಬಹುದು.
ಎನ್‌ಪಿಎಸ್‌ ಖಾತೆಯನ್ನು ಆರಂಭಿಸಿದರೆ ವಾರ್ಷಿಕ ಕನಿಷ್ಠ ₹ 6 ಸಾವಿರದವರೆಗೆ ಹೂಡಿಕೆ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಎನ್‌ಪಿಎಸ್‌ ಮೊತ್ತವನ್ನು ಷೇರುಗಳಲ್ಲಿ ಹೂಡಿಕೆ ಮಾಡುವು ದರಿಂದ ಹೆಚ್ಚಿನ ಹಣವನ್ನು ವಾಪಸ್‌ ನಿರೀಕ್ಷಿಸಬಹುದಾಗಿದೆ. ಖಾಸಗಿ ಕಂಪೆನಿಗಳಲ್ಲಿನ ಉದ್ಯೋಗಿಗಳು ಪಿಂಚಣಿ ಯೋಜನೆಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

ಐದು ವರ್ಷಗಳ ನಿಶ್ಚಿತ ಠೇವಣಿ :  ಈ ಯೋಜನೆ ಅಡಿಯಲ್ಲಿ ಹಣ ತೊಡಗಿಸುವ ಮೂಲಕ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಕಡಿತಗೊಳಿಸಲು ಅವಕಾಶವಿದೆ. ಕೊನೆ ಗಳಿಗೆಯಲ್ಲಿ ತೆರಿಗೆ ಉಳಿಸಲು ಇದು ಸುಲಭದ ಮಾರ್ಗವಾಗಿದೆ. ತೆರಿಗೆ ಪಾವತಿ ಮಾಡದವರೂ ಇಲ್ಲಿ ಹಣ ತೊಡಗಿಸಬಹುದು. ಆದರೆ, ಠೇವಣಿ ವಾಪಸ್‌ ಪಡೆಯುವಾಗ ಹೆಚ್ಚಿನ ಮೊತ್ತ ದೊರೆಯುವುದಿಲ್ಲ ಹಾಗೂ ತೆರಿಗೆ ಮುಕ್ತವಾಗಿಲ್ಲ. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಮತ್ತು ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಮಾಡಿರುವುದ ರಿಂದ ಅವರಿಗೆ ಇದು ಆಕರ್ಷಕ ಯೋಜನೆಯಾಗಿದೆ. ಈ ಠೇವಣಿ ಯೋಜನೆಗಳು ಸುರಕ್ಷಿತವಾಗಿದ್ದು, ತುರ್ತು ಸಂದರ್ಭದಲ್ಲಿ ಹಣ ಮರಳಿ ಪಡೆಯಬಹುದಾಗಿದೆ.

ಅಂಚೆ ಇಲಾಖೆ ಯೋಜನೆಗಳು :ಎನ್‌ಎಸ್‌ಸಿ ಸೇರಿದಂತೆ ಅಂಚೆ ಇಲಾಖೆಯ ಠೇವಣಿ ಯೋಜನೆಗಳಿಂದ (5 ವರ್ಷ) ಹೆಚ್ಚಿನ ಮೊತ್ತ ನಿರೀಕ್ಷಿಸಬಹುದು. ಶೇಕಡ 8.5ಬಡ್ಡಿ ದರ ದೊರೆಯುತ್ತದೆ ಆದರೆ, ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.  ಸೆಕ್ಷನ್‌ 80 ಸಿ ಅಡಿಯಲ್ಲಿ  ₹ 1.50 ಲಕ್ಷದ ಒಳಗಿನ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಕೊನೆಯ ವರ್ಷ ಹೊರತುಪಡಿಸಿ ಪ್ರತಿ ವರ್ಷ ಎನ್‌ಎಸ್‌ಸಿ ಬಡ್ಡಿಗೆ  ಸೆಕ್ಷನ್‌ ‘80 ಸಿ’ ಅಡಿ ರಿಯಾಯ್ತಿ ಪಡೆಯಬಹುದು.ಎನ್‌ಎಸ್‌ಸಿ ಯೋಜನೆ 5 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಇತ್ತೀಚೆಗೆ 10 ವರ್ಷದ ಯೋಜನೆಯನ್ನು ರದ್ದುಪಡಿಸಲಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ : ಸುರಕ್ಷಿತ ಹೂಡಿಕೆ ಮತ್ತು ಸುಸ್ಥಿರ ಲಾಭ ನಿರೀಕ್ಷಿಸುವವರಿಗೆ ಮತ್ತು  ಇತರ ಆಯ್ಕೆಗಳ ಬಗ್ಗೆ  ಯೋಚಿಸಲು ಸಮಯದ ಅಭಾವ ಇರುವವರಿಗೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಉತ್ತಮ ಆಯ್ಕೆಯಾಗಿದೆ.  ಶೇ 8.7ರಷ್ಟು ಬಡ್ಡಿಯು ತೆರಿಗೆ ಮುಕ್ತವಾಗಿದೆ.  15 ವರ್ಷಗಳವರೆಗೆ ಹಣ ವಾಪಸ್‌ ಪಡೆಯಲು ಈ ಯೋಜನೆಯಲ್ಲಿ ಅವಕಾಶ ಇಲ್ಲ. ಪ್ರತಿ ವರ್ಷ  ಕನಿಷ್ಠ ₹ 500ರಿಂದ ಗರಿಷ್ಠ ₹ 1.5 ಲಕ್ಷದವರೆಗೆ ಹಣ ಹೂಡಬಹುದು.
‘ಪಿಪಿಎಫ್‌’ಗೆ ವೇತನದಲ್ಲಿನ ಕಡಿತವು ಸೆಕ್ಷನ್‌ 80ಸಿ ವ್ಯಾಪ್ತಿಗೆ ಒಳಪಡಲಿದೆ. ಬ್ಯಾಂಕ್‌ ಖಾತೆಯಿಂದ ಭವಿಷ್ಯ ನಿಧಿ ಖಾತೆಗೂ ಹಣ ವರ್ಗಾಯಿಸುವ ಸೌಲಭ್ಯವೂ ಇದೆ.

ತೆರಿಗೆ ಪಾವತಿದಾರರು ಸಾಮಾಜಿಕ ಸೇವೆಗಳಿಗೆ ಹಣ ನೀಡಲು ಮತ್ತು ತೆರಿಗೆ ಉಳಿಸಲು ಬಯಸಿದ್ದರೆ ದೇಣಿಗೆಯನ್ನೂ ನೀಡಬಹುದು. ಇದು ಸೆಕ್ಷನ್‌ 80 ಜಿ ವ್ಯಾಪ್ತಿಗೆ ಒಳಪಡುತ್ತದೆ.  ಆದರೆ, ಎಲ್ಲ ದೇಣಿಗೆಗಳು ಸೆಕ್ಷನ್‌ 80 ಜಿ ವ್ಯಾಪ್ತಿಗೆ ಒಳಪಡು ವುದಿಲ್ಲ. ಇದಕ್ಕಾಗಿ ಪಟ್ಟಿಯೊಂದನ್ನು ನಿಗದಿಪಡಿಸಲಾಗಿದೆ. ದೇಣಿಗೆ ನೀಡುವ ಮುನ್ನ ಈ ಪಟ್ಟಿಯನ್ನು ಒಂದು ಬಾರಿ ಪರಿಶೀಲಿಸುವುದು ಉತ್ತಮ.  ಆದರೆ, ಎಲ್ಲ ದೇಣಿಗೆಗಳು ಸಂಪೂರ್ಣ ತೆರಿಗೆ ಮುಕ್ತವಾಗಿಲ್ಲ. ಕೆಲವು ದೇಣಿಗೆಗಳು ಶೇಕಡ 50ರಷ್ಟು ಮಾತ್ರ ತೆರಿಗೆ ವಿನಾಯಿತಿಗೆ ಒಳಪಡುತ್ತವೆ. ದೇಣಿಗೆಗಳನ್ನು ಚೆಕ್‌ ಅಥವಾ ಡಿ.ಡಿ. ಮೂಲಕ ಪಾವತಿಸಬೇಕು. ನಗದು ರೂಪದಲ್ಲಿ ಕೇವಲ ₹ 10 ಸಾವಿರವರೆಗೆ ಮಾತ್ರ ಅವಕಾಶ ಇದೆ. ದೇಣಿಗೆ ಸಂದರ್ಭದಲ್ಲಿ ಪಡೆಯುವವರ ಪಾನ್‌ ಕಾರ್ಡ್‌ ಸಂಖ್ಯೆ, ವಿಳಾಸ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಬೇಕು. ಈ ಮಾಹಿತಿ ಇಲ್ಲದೆ ತೆರಿಗೆಯಲ್ಲಿ ಕಡಿತಗೊಳಿಸಲು ಸಾಧ್ಯವಿಲ್ಲ.

ಆರೋಗ್ಯ ವಿಮೆ : ಈ ವರ್ಷ, ಸೆಕ್ಷನ್‌ 80 ‘ಡಿ ’ ಅಡಿಯಲ್ಲಿ ಆರೋಗ್ಯ ವಿಮೆ ಮೊತ್ತದಲ್ಲಿ ತೆರಿಗೆ ಕಡಿತ ಹೆಚ್ಚಿಸಲಾಗಿದೆ. ಗರಿಷ್ಠ ₹ 25 ಸಾವಿರ ಮೊತ್ತದವರೆಗೆ ಉಳಿತಾಯಕ್ಕೆ ಅವಕಾಶ ಇದೆ. ಪತಿ, ಪತ್ನಿ ಅಥವಾ ಮಕ್ಕಳ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ತೆರಿಗೆಯಲ್ಲಿ ಉಳಿತಾಯಕ್ಕೆ ಅವಕಾಶ ಇದೆ. ಪೋಷಕರನ್ನು ಸಹ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸಿ  ಹೆಚ್ಚುವರಿಯಾಗಿ ₹30 ಸಾವಿರದವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು.

ಪೋಷಕರು 80 ವರ್ಷದ ಮೇಲ್ಪಟ್ಟವ ರಾಗಿದ್ದು, ವಿಮೆ ಮಾಡಿಸದಿದ್ದರೆ ವೈದ್ಯಕೀಯ ವೆಚ್ಚಕ್ಕಾಗಿ ₹ 30 ಸಾವಿರದಷ್ಟು ರಿಯಾಯ್ತಿ ಪಡೆಯಬಹುದು. ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಟ್ಟಾರೆ ತೆರಿಗೆ ಕಡಿತ ಮೊತ್ತವು ₹ 30 ಸಾವಿರ ಮೀರಬಾರದು.  ಆಸ್ಪತ್ರೆಗೆ ಭೇಟಿ ನೀಡಿ ಪೋಷಕರ ಆರೋಗ್ಯ ತಪಾಸಣೆ ಮಾಡಿಸಿ ಕೆಲವು ಸಾವಿರ ರೂಪಾಯಿಗಳನ್ನು ತೆರಿಗೆಯಲ್ಲಿ ಉಳಿಸಬಹುದು.

(ಲೇಖಕರು ಚಾರ್ಟರ್ಡ್‌ ಅಕೌಂಟೆಂಟ್‌)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT